ಗಂಡು ದೈವಗಳು ಹೆಣ್ಣು ದೈವಗಳಷ್ಟು ಜನ ಪ್ರಿಯವಾಗಿರದಿದ್ದರೂ ಅವುಗಳಲ್ಲಿ ಮೈಲಾರಲಿಂಗ, ಮಂಟೇಸ್ವಾಮಿ, ಮಲೆಮಾದೇಶ್ವರ, ಹನುಮಂತ ಈ ದೈವಗಳು ಜನಮನದಲ್ಲಿ ನೆಲೆ ನಿಂತಿವೆ. ಭಾರತ ದೇಶದ ಯಾವುದೇ ಹಳ್ಳಿಗೆ ಹೋದರೂ ಹನುಮಂತ ಊರ ಹೊರಗೆ ನಿಂತಿರುತ್ತಾನೆ. ಈ ದೈವಗಳಾದರೂ ಕೂಡ ತಮ್ಮ ವಾಸಸ್ಥಾನ, ಆಹಾರ-ಪಾನೀಯಗಳ ಬಗೆಗೆ ಅಷ್ಟೊಂದು ಗಮನಹರಿಸಿಲ್ಲ. ತಿರುಪತಿ ತಿಮ್ಮಪ್ಪ ಮೊದಲು ಜನಪದ ದೈವವಾಗಿದ್ದು, ಶ್ರೀಮಂತನಾದಂತೆಲ್ಲಾ ವೆಂಕಟರಮಣನೆಂಬ ಹೆಸರನ್ನಿಟ್ಟುಕೊಂಡು ಶಿಷ್ಟದೇವತೆಯಾಗಿ ಈಗ ಏರಕಂಡೀಷನ್ ಕಟ್ಟಡದಲ್ಲಿ ವಾಸವಾಗಿದ್ದಾನೆ. ಹೀಗೆ ಕೆಲವು ಗಂಡು ದೈವಗಳು ಗ್ರಾಮಗಳನ್ನು ಬಿಟ್ಟು ಈಗ ಪಟ್ಟಣ ಸೇರಿವೆ. ಐಷಾರಾಮ ಜೀವನ ಸಾಗಿಸುತ್ತವೆ. ಬಹುತೇಕ ಗಂಡುದೈವಗಳು, ಕುಲದೈವಗಳಾಗಿ – ಪ್ರಾಂತ ದೈವಗಳಾಗಿ ಹಾಗೇ ಉಳಿದುಕೊಂಡಿವೆ.

ವಾಸಸ್ಥಾನಕ್ಕೆ ಸಂಬಂಧಿಸಿದಂತೆ ಹೆಣ್ಣು ದೈವ-ಗಂಡು ದೈವಗಳಲ್ಲಿ ಅಂತಹ ವ್ಯತ್ಯಾಸವಿಲ್ಲ. ಗಂಡು ದೈವಗಳೂ ಕೂಡ ಸಾಮಾನ್ಯವಾಗಿ ಗುಡ್ಡ-ಪರ್ವತ-ಮರಗಳ ಗುಂಪುಗಳಲ್ಲಿ, ಹಾಳುಬಿದ್ದ ಗುಡಿಗಳಲ್ಲಿ ವಾಸ ಮಾಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ದೈವಗಳು ಗಚ್ಚಿನ ಗುಡಿಯಲ್ಲಿ ವಾಸಿಸುತ್ತವೆ. ಜನಪದ ತ್ರಿಪದಿಗಳಲ್ಲಿ ಇವುಗಳ ವಾಸಸ್ಥಾನದ ಬಗೆಗೆ ಕಾವ್ಯಮಯವಾಗಿ ಹೇಳಲಾಗಿದೆ.

“ಆಂಜನಯ್ಯ ಇರವೂದು ಹದಿನಾರಂಕಣಗುಡಿ
ಚಿನ್ನದ ಮಾಳೀಗೆ ಕಲುಕಂಬ | ಹನುಮಂತ
ನಿನ್ನ ಕರ್ತವ್ಯ ಇರೋದು ಕೈಲಾಸ”

“ಮುತ್ತಪ್ಪನ ಗುಡಿ ಮುಂದೆ ಹಿಪ್ಪೆಯ ಮರ ಹುಟ್ಟಿ
ಎಪ್ಪತ್ತು ರೆಂಭ ಕವಲೊಡೆದು | ಮುತ್ತಪ್ಪ
ತುಪ್ಪ ಮಾರೋಳಿಗೆ ನೆರಳಾಯ್ತು”

“ಅಪ್ಪ ಕೋರಿಯ ಸಿದ್ಧ ಕಪ್ಪೀಲಿ ಕರಿಚೆಲುವ
ಇಟ್ಟ ಬಂಗಾರಕ ಹೊಳದಾನ | ನಾಲ್ವಾರ
ಗಚ್ಚೀನ ಪೌಳ್ಯಾಗ ನೆನದಾನ”

“ಮದರಸಾಬನ ಮಾಲಗಂಬದ ಮ್ಯಾಲ
ವಾಲ್ಯಾಡಿ ದೀಪ ಉರಿತಾವ | ನನ ಮನಿsಯ
ಬಾಲ ಹಚ್ಚ್ಯಾನ ಸರದೀಪ”

“ಶರಣಬಸವ ನಿನ್ನ ಶಿಖರದ ಮ್ಯಾಲಿರುವ
ಚುಕ್ಕಿ ಮೂಡ್ಯಾವ ಅಪರೂಪ | ಶರಣಬಸವ
ರೈತರ್ಹಚ್ಚ್ಯಾರ ಸರದೀಪ”

ಈ ತ್ರಿಪದಿಗಳಲ್ಲಿ ಹನುಮಂತ, ಮುತ್ತಪ್ಪ, ಕೋರಿಸಿದ್ಧ, ಮದರಸಾಬ, ಶರಣಬಸವ ಈ ದೈವಗಳ ವಾಸಸ್ಥಾನಗಳ ಬಗೆಗೆ ವಿವರಿಸಲಾಗಿದೆ. ಈ ತ್ರಿಪದಿಗಳಲ್ಲಿ ಬರುವ ‘ಚಿನ್ನದ ಮಾಳೀಗೆ ಕಲುಕಂಬ’, ‘ಎಪ್ಪತ್ತುರೆಂಭೆ ಕವಲೊಡೆದು’, ‘ಇಟ್ಟ ಬಂಗಾರಕ ಹೊಳದಾನ’, ‘ವಾಲ್ಯಾಡಿ ದೀಪ ಉರಿತಾವ’, ‘ಚುಕ್ಕಿ ಮೂಡ್ಯೂವ ಅಪರೂಪ’ ಇಂತಹ ನುಡಿಗಳಲ್ಲಿ ಬರುವ ಕಾವ್ಯಸತ್ವ ಗಮನಿಸುವಂತಹದ್ದಾಗಿದೆ. ಮಲೆ, ಗುಡ್ಡ, ಬೆಟ್ಟಗಳಲ್ಲಿ ವಾಸವಾಗಿರುವ ಮೈಲಾರಲಿಂಗ, ಮಲೆಮಾದೇಶ್ವರ, ಭೈರವ, ಬೀರಪ್ಪ ದೈವಗಳ ಬಗೆಗೆ ಜನಪದರು ಹೀಗೆ ಹಾಡುಕಟ್ಟಿದ್ದಾರೆ.

“ಅವತಾರ ಪುರುಷಾಗಿ ಬಂದಾನು ಸ್ವಾಮಿ
ಏಳುಗುಡ್ಡದ ಕಣಿವೆಯಲಿ
ಭಕ್ತರು ಕರೆದಾರು ಮೈಲಾರಗುಡ್ಡ”

ಆನೆಮಲೆ ಜೇನುಮಲೆ
ಕಾನಮಲೆ ಗುತ್ತಮಲೆ ಗುಂಜಿಮಲೆ ಗುಲಗಂಜಿಮಲೆ
ಏಳುಮಲೆ ಎಪ್ಪತ್ತೇಳು ಮಲೆಯಲ್ಲಿ
ನಾಟ್ಯವಾಡುತಾನ ಮಾದಪ್ಪ”

“ನಿಂಬೆ ಹಣ್ಣಿಗೆ ಬಂದ ತುಂಬೆ ಹುವ್ವಿಗೆ ಬಂದ
ಇಂಬು ನೋಡಲು ಬಂದ ಭೈರವ | ಚುಂಚನಗಿರಿಯ
ಇಂಬೊಳ್ಳೆದೆಂದು ನೆಲೆಗೊಂಡ”

ಅಂದನ ಗಿರಿಯಾಗ ಹುಟ್ಟೀದ ಬೀರಯ್ಯ
ಮಂದನ ಗಿರಿಯಾಗ ಬೆಳೆದಾನ ಬೀರಯ್ಯ

ಹೆಣ್ಣು ದೈವಗಳಾಗಲಿ, ಗಂಡು ದೈವಗಳಾಗಲಿ ಸಾಮಾನ್ಯವಾಗಿ ಮರದಡಿಯಲ್ಲಿ, ತೋಪಿ ನಲ್ಲಿ, ಬಂಡೆಯಲ್ಲಿ, ಬಯಲಿನಲ್ಲಿ ನೆಲೆಸಿರುವುದನ್ನು ಈ ಹಾಡುಗಳು ವಿಶ್ಲೇಷಿಸುತ್ತವೆ. ಮೈಲಾರಲಿಂಗನು ಹುತ್ತ, ಆಲದಮರ, ಎಕ್ಕೆಯ ಗಿಡಗಳಲ್ಲಿ ನೆಲೆಸಿರುವುದನ್ನು ವಿಶೇಷವಾಗಿ ಗಮನಿಸಬಹುದಾಗಿದೆ.

ಬಹಳಷ್ಟು ಗಂಡು ದೈವಗಳ ರೂಪ ಹೆಣ್ಣು ದೈವಗಳಂತೆ ಉಗ್ರವಾಗಿರದೆ ಸೌಮ್ಯ ವಾಗಿರುತ್ತದೆ. ಆದರೆ ಭೈರವ – ಈರಭದ್ರ ದೈವಗಳ ರೂಪಗಳು ಉಗ್ರವಾಗಿರುತ್ತವೆ. ಬೋರೆ ದೇವರ ವಿಗ್ರಹ ಮೂರಡಿ ಎತ್ತರವಿರುತ್ತದೆ. ನಾಲ್ಕು ಕೈಗಳನ್ನು ಹೊಂದಿದ್ದು ಅವುಗಳಲ್ಲಿ ತ್ರಿಶೂಲ, ಡಮರುಗ, ಕತ್ತಿಗಳನ್ನು ಹಿಡಿದುಕೊಂಡಿರುತ್ತದೆ. ಜಡೆಯಲ್ಲಿ ಚಂದ್ರ, ಗಂಗೆ, ಎದೆಯ ಮೇಲೆ ಲಿಂಗ ಇರುತ್ತವೆ. ಅನೇಕ ಗಂಡು ದೈವಗಳು ಸೊಂಟದ ಮೇಲೆ ಕೈಯಿಟ್ಟು ನಿಂತಿರುತ್ತವೆ. ಕೆಲವು ದೈವಗಳ ಪಾದದ ಹತ್ತಿರ ಸೇವಕರ ವಿಗ್ರಹಗಳೂ ಇರುತ್ತವೆ. ಕೆಲವು ದೈವಗಳು ಬಹಳ ಸಾದಾ ರೀತಿಯಲ್ಲಿದ್ದು ಗಂಡಸಿನ ಮುಖವೊಂದಿದ್ದರೆ ಅದು ಗಂಡು ದೈವವೆಂದು ತಿಳಿಯಬಹುದಾಗಿದೆ. ಉಗ್ರವಾದ ದೈವಗಳು ತೆರೆದ ಕಣ್ಣು, ಕೋರೆಹಲ್ಲು, ಚಾಚಿದ ನಾಲಿಗೆಗಳಿಂದ ಭಯಂಕರವಾಗಿರುತ್ತವೆ. ಕೇವಲ ರುಂಡ ಮಾತ್ರ ಇರುವ ಗಂಡು ದೈವಗಳೂ ಇವೆ.

“ಕೋರ್ವಾದ ವೀರಪ್ಪ ಕಣ್ಣೀಗಿ ತಾರೀಫ
ಸಾಲಪತ್ರಿಯ ಸಾಲ್ಹಿಡಿದು | ನಡದಾರ
ಕೆಂಧೂಳ್ಹಾರ್ಯಾವ ಗಗನಕ್ಕ”

“ಕರಿ ಹನುಮ ನಿನ ರೂಪ ಬರದೇವು ಬಂಡಿಮ್ಯಾಲ
ಸಗರ ಶಾಪುರದ ಕರಿ ಹನುಮ ನಿನ ನಾಮ
ಬರದೇವು ನಮ್ಮ ಕಣದಾಗ”

“ಚುಂಚನ ಗಿರಿಯಪ್ಪ ಸೂಜಿಗಲ್ಲಿನ ಮೇಲೆ
ನಿಂತು ಕಿನ್ನುರಿಯ ನುಡಿಸೋನೆ | ಭೈರುವ
ನಿನ್ನ ಸೊಲ್ಲಾದವೆಲ್ಲ ಅಪರಂಜಿ”

“ಕುಂತಾಡೊ ಜೋಕುಮಾರಗ ಕುಂಚಿಗೆ ಕುಲಾಯಿ
ಜೋಡಿ ಮುತ್ತವನ ಕಿವಿಯಾಗ | ಗೌರವ್ವ
ಓಡ್ಯಾಡಿ ಮಗನ ಹೆಸರ್ಹೇಳ”

ಇಂತಹ ಅನೇಕ ತ್ರಿಪದಿಗಳಲ್ಲಿ ಗಂಡು ದೈವಗಳ ರೂಪ, ಸ್ವರೂಪವನ್ನು ಕುರಿತಂತೆ ಹಾಡಲಾಗಿದೆ. ಈರಣ್ಣ, ಕರಿಹನುಮ, ಭೈರವ, ಜೋಕುಮಾರ ಈ ದೈವಗಳ ರೂಪವನ್ನು ಕುರಿತಂತೆ ಇಲ್ಲಿ ವರ್ಣಿಸಲಾಗಿದೆ. ಮಾದೇಶ್ವರ, ಮಂಟೇಸ್ವಾಮಿಯಂತಹ ರೂಪವನ್ನು ಕುರಿತಾದ ಹಾಡುಗಳು ದೀರ್ಘವಾಗಿವೆ. ಜಾನಪದ ಸಂಸ್ಕೃತಿಯಲ್ಲಿ ಹೆಣ್ಣು ದೈವಗಳೇ ಪ್ರಧಾನವಾಗಿರುವುದರಿಂದ ಅನೇಕ ಗಂಡು ದೈವಗಳು ನಿರ್ಲಕ್ಷಿಸಲ್ಪಟ್ಟಿವೆ.

ಗಂಡು ದೈವಗಳು ಕೆಲವು ಬೆಲೆಯುಳ್ಳ ಆಭರಣಗಳನ್ನು ಹಾಕಿಕೊಂಡು ಉಡುಪು ಧರಿಸಿರುತ್ತವೆ. ಇನ್ನು ಕೆಲವು ದೈವಗಳು ಸಾದಾ ರೂಪದಲ್ಲಿರುತ್ತವೆ. ಹನುಮಂತ ಚಡ್ಡಿ ಹಾಕಿಕೊಂಡರೆ, ಬೊಮ್ಮಯ್ಯ ಧೋತರ ಉಟ್ಟುಕೊಂಡಿರುತ್ತಾನೆ. ಗಂಡು ದೈವಗಳ ವೇಷಭೂಷಣಗಳನ್ನು ಕುರಿತಂತೆ ಜನಪದ ಕಾವ್ಯದಲ್ಲಿ ಹೀಗೆ ಹೇಳಲಾಗಿದೆ.

“ಊರಿನ ಹಣುಮsನ ಚೆಡ್ಡ್ಯಾರು ಹೊಲಸ್ಯಾರ
ಗೆಜ್ಜೇದ ಪಟ್ಟ್ಯಾರ ಬಿಗಿಸ್ಯಾರ | ನಾಲ್ವಾರ
ಮಾನ್ಯವುಳ್ಳಂಥ ಗೌಡಾರ”

“ಅಡಗಿನ ಬೇಲೂರ ಬೆಡಗಿನ ಏರಿಮ್ಯಾಲೆ
ಒಗೆದು ದೋತುರವ ಉಡುವವನೆ | ಬೊಮ್ಮಯ್ಯ
ನಿನ್ನ ಉಡುದಾರವೆಲ್ಲ ಅಪರಂಜಿ”

ಈ ತ್ರಿಪದಿಗಳಲ್ಲಿ ಗಂಡು ದೈವಗಳ ಉಡುಪಗಳ ಬಗೆಗೆ ವರ್ಣನಾತ್ಮಕ ಶೈಲಿಯಲ್ಲಿ ಹೇಳಲಾಗಿದೆ. ಭಂಡಾರ, ಕವಡೆ, ಕೋರಿ ಅಂಗಿ ಇವು ಮೈಲಾರಲಿಂಗನು ಧರಿಸುವ ಸಂಕೇತ ಗಳಾಗಿವೆ.

ಹುಲಿ, ಹಾವುಗಳನ್ನು ತಮ್ಮ ವಾಹನಗಳನ್ನಾಗಿ ಮಾಡಿಕೊಂಡಿರುವ ದೈವಗಳು, ನಾಯಿ, ಕುದುರೆ, ಕರಡಿಗಳನ್ನೂ ವಾಹನಗಳನ್ನಾಗಿ ಮಾಡಿಕೊಂಡಿವೆ. ನಂದಿ ಪ್ರಮುಖ ವಾಹನವಾಗಿದೆ.

“ಎಂಟು ಹುಲಿ ಹೊಡ್ಕಂಡು ಕುಂಟ್ಹುಲಿ ಮೇಲೆ ಕೂತ್ಕೊಂಡು
ಕುಂಟನಪುರದಾಗೆ ಬರುವವನೆ | ಮಾದಯ್ಯ
ಎಂಟರ ಬಿಸಾಲೆ ಎದುರಾದೊ”

“ಮಾದೇವ ಅನ್ನೋನು ಲೋಕಕ್ಕೆ ದೊಡ್ಡೋನು
ನಾಗರದ ತೆಕ್ಕೆ ತೊಡೆ ಮೇಲೆ | ಮಕ್ಕೊಂಡು
ನಾಡಿಂಗೆ ಉತ್ತರ ಬರದಾನೊ”

ಈ ತ್ರಿಪದಿಗಳಲ್ಲಿ ಹುಲಿ ಮತ್ತು ನಾಗರದಂತಹ ಪ್ರಾಣಿಗಳ ಪ್ರಸ್ತಾಪವಿದೆ. ಹೀಗೆ ವಿವಿಧ ಪ್ರಾಣಿಗಳನ್ನು ವಾಹನಗಳನ್ನಾಗಿ ಮಾಡಿಕೊಂಡಿರುವ ಗಂಡು ದೈವಗಳು ಖಡ್ಗ-ತ್ರಿಶೂಲ-ಡಮರು-ಬಟ್ಟಲು-ಬಿಲ್ಲುಬಾಣಗಳನ್ನು ಲಾಂಛನಗಳನ್ನಾಗಿ ಪಡೆದಿರುತ್ತವೆ. ಕೊಳಲು, ಪಾರಿ, ಕಿನ್ನರಿ, ತುಂತುಣಿ, ತಾಳ, ಗಂಟೆ, ಜಾಗಟೆ, ಡೊಳ್ಳು ಈ ಮೊದಲಾದ ವಾದ್ಯಗಳನ್ನು ಹೊಂದಿರುತ್ತವೆ.

ಗಂಡು ದೈವಗಳಲ್ಲಿ ಜೋಕುಮಾರ ಮಳೆ ದೈವವಾಗಿ, ಹನುಮಂತ ಫಲದೈವವಾಗಿ ಕಾಣಿಸಿಕೊಂಡಿವೆ. ಮದುವೆ ಕಾಣದ ಯುವತಿಯರು, ಮಕ್ಕಳಾಗದ ಮಹಿಳೆಯರು ಹನುಮಂತನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹನುಮಂತ ಅನಿಷ್ಟಗಳನ್ನು ಹೊಡೆದೋಡಿ ಸುವ ದೈವವೂ ಆಗಿದ್ದಾನೆ.

“ಕಟ್ಟೆಯ ಹತ್ಯಾನೆ ಹೊತ್ತುಗಳ ನೋಡ್ಯಾನೆ
ಹತ್ಯಾನೆ ನೀಲ ಕುದುರೆಯ | ಜೋಕುಮಾರ
ಕೈಬೀಸಿ ಮಳೆಯ ಕರೆದಾನೆ”

ಎಂಬಂತಹ ತ್ರಿಪದಿಗಳಲ್ಲಿ ಜೋಕುಮಾರ ಮಳೆಯ ದೈವವಾಗಿ ಪೂಜಿಸಲ್ಪಡುವುದನ್ನು ನೋಡಬಹುದಾಗಿದೆ. ಆದಿಚುಂಚನಗಿರಿಯ ಭೈರವ ಪಾಪ ಪರಿಹರಿಸುವ ದೈವವಾಗಿದ್ದಾನೆ. ಜುಂಜಪ್ಪನು ಮಕ್ಕಳನ್ನು ಕೊಡುವ ಫಲದೈವವಾಗಿದ್ದಾನೆ. ಜಟ್ಟಿಗ ಪಶುರಕ್ಷಣೆಯ ದೈವ ವಾಗಿದ್ದಾನೆ.

ಸೋಮವಾರ, ಶನಿವಾರ ಗಂಡು ದೈವಗಳನ್ನು ಪೂಜಿಸುವ ಪ್ರಮುಖ ವಾರಗಳಾಗಿವೆ. ಗಂಡು ದೈವಗಳ ಜಾತ್ರೆಗಳಲ್ಲಿ ತೇರು ಪ್ರಧಾನ ಪಾತ್ರವಹಿಸುತ್ತದೆ. ತೇರಿನ ವರ್ಣನೆಯನ್ನು, ಉತ್ಸವದ ಸಡಗರವನ್ನು ಅನೇಕ ತ್ರಿಪದಿಗಳು ಹಿಡಿದಿಟ್ಟಿವೆ.

“ನಾಕೂ ಮೂಲಿಗೆ ನಾಕೂ ಬೆಳ್ಳಿಯ ಗಂಟೆ
ನಾಕೂ ಬೇಕೆಂದೋ ಸರಪಾಣೀ | ಭೈರವನ್ತೇರು
ಲೋಕಾ ತಲ್ಲಣಿಸೇ ಹರಿದಾವೊ”

“ಎಲ್ಲಾರ ತೇರು ಮೆಲ್ಲಾನೆ ಹರಿದಾರೆ
ವಲ್ಲಣಗಾರ ಮಾದಪ್ಪ | ನಿನ ತೇರು
ಧರೆಯ ದಲ್ಲಣಿಸಿ ಹರದಾವೆ”

ಅನೇಕ ಹಾಡುಗಳಲ್ಲಿ ವಿವಿಧ ಗಂಡು ದೈವಗಳ ಜಾತ್ರೆ-ಉತ್ಸವಗಳ ಸಂಭ್ರಮಗಳು ಕಾಣಿಸಿಕೊಂಡಿವೆ. ಜುಂಜಪ್ಪನ ಜಾತ್ರೆಯಲ್ಲಿ ವಿವಿಧ ರೀತಿಯ ಕಾಣಿಕೆಗಳನ್ನು ಭಕ್ತರು ಅರ್ಪಿಸುತ್ತಾರೆ. ಮೈಲಾರಲಿಂಗನ ಜಾತ್ರೆಯಲ್ಲಿ ಲಕ್ಷಗಟ್ಟಲೆ ಭಕ್ತರು ಸೇರಿ ಕಾರಣಿಕ ಕೇಳಲು ಕಾತುರರಾಗಿರುತ್ತಾರೆ. ಅಸಂಖ್ಯಾತ ಜನ ಭಕ್ತರು ತದೇಕಚಿತ್ತದಿಂದ ಈ ಕಾರಣಿಕ ಕೇಳುವ ರೀತಿ ವಿಶಿಷ್ಟವಾಗಿದೆ. ಕುಕನೂರಿನ  ಸಮೀಪದ ಗುದ್ನೆಪ್ಪನ ಮಠದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಗುದ್ನೆಪ್ಪನ ಪಂಚ ಕಳಶದ ತೇರು ಗಮನ ಸೆಳೆಯುತ್ತದೆ. ಇದೇ ರೀತಿ ಕೂಲಳ್ಳಿ ಗೋಣಿಬಸಪ್ಪ, ಕೊಟ್ಟೂರ ಕೊಟ್ಟೂರಬಸಪ್ಪ, ಕಲಬುರ್ಗಿಯ ಶರಣಬಸಪ್ಪ, ವದ್ನಾಳ ಹಮಿಗಿ ಅಜ್ಜ ಈ ದೈವಗಳ ಜಾತ್ರೆಗಳು ವಿಶಿಷ್ಟ  ರೀತಿಯಿಂದ ನಡೆಯುತ್ತವೆ.

ಗಂಡು ದೈವಗಳಿಗೆ ಸಂಬಂಧಿಸಿದಂತೆ ಅನೇಕ ಆಚರಣೆಗಳಿವೆ. ಹರಕೆ ಹೊರುವುದು, ನೆಲಮುಡಿ ಹಾಸುವುದು, ಶಸ್ತ್ರ ಹಾಕಿಕೊಳ್ಳುವುದು, ಕೊಂಡ ಹಾಯುವುದು, ಗೊಂದಲ ಹಾಕುವುದು, ಇಂತಹ ಅನೇಕ ಆಚರಣೆಗಳನ್ನು ಕಾಣಬಹುದಾಗಿದೆ. ಈ ದೈವಗಳನ್ನು ಕುರಿತಂತೆ ಅನೇಕ ನಂಬಿಕೆಗಳಿವೆ.

ಜಟ್ಟಿಗ ದೈವಕ್ಕೆ ಪ್ರತಿ ವರ್ಷವೂ ಕುರಿ, ಕೋಳಿಗಳ ಬಲಿ ಕೊಡುತ್ತಾರೆ. ತೋಟಗಾರರು ತಾವು ಬೆಳೆದ ಮೊದಲ ಫಸಲನ್ನು ಹಣ್ಣು-ಕಾಯಿಗಳನ್ನು ಜಟಿಗನಿಗೆ ತಂದು ಅರ್ಪಿಸುತ್ತಾರೆ. ಜುಂಜಪ್ಪನ ಹೆಸರಿನಲ್ಲಿ ಭಕ್ತರು ಬಸವನನ್ನು ಬಿಡುತ್ತಾರೆ. ಚುಂಚನಗಿರಿಯ ಭೈರವನಿಗೆ ಸಂಬಂಧಿಸಿದಂತೆ ವಿಶಿಷ್ಟ ಆಚರಣೆಯಿದೆ. ಇದನ್ನು ‘ಭುಕ್ತಿ’ ಎಂದು ಕರೆಯುತ್ತಾರೆ. ಭುಕ್ತಿಯ ಬೆಳಿಗ್ಗೆ ದೇವರಿಗೆ ಮೊಸರು ಅನ್ನದ ತಳಿಗೆಯನ್ನು ಅರ್ಪಿಸುತ್ತಾರೆ. ಸೋದರಳಿಯ ಅಥವಾ ಸೋದರ ಸೊಸೆಗೆ ಮೇಲಿನ ಹಲ್ಲು ಬಂದರೆ, ಸೋದರ-ಮಾವನಾದವನು ಬೆಳ್ಳಿಬಟ್ಟಲ-ಬಟ್ಟೆ ತರಬೇಕು. ಆ ಬೆಳ್ಳಿ ಬಟ್ಟಲಿನಿಂದ ಮಗುವಿನ ಹಲ್ಲಿಗೆ ಗೀರಿ ಬಂದ ರಕ್ತವನ್ನು ಹನುಮಂತ ದೇವರ ಪೂಜಾರಿ ಹನುಮಂದೇವರ ಗುಡಿಯಲ್ಲಿ ಸೋದರಮಾವನ ಹಣೆಗೆ ಹಚ್ಚುತ್ತಾನೆ. ಮಾಳಿಂಗರಾಯನ ಜಾತ್ರೆಯಲ್ಲಿ ಮುಂಡಾಸ ಸುತ್ತುವ ರಾತ್ರಿ ಗುಡಿಯ ಸಮೀಪ ಯಾರೂ ಉಳಿಯುವುದಿಲ್ಲ. ರಾತ್ರಿ ದೂರದ ಹೊಲಗಳಲ್ಲಿ ತಂಗಿದ್ದು ಬೆಳಗಿನ ಜಾವ ಹೊರಟು ಬರುತ್ತಾರೆ. ಈ ಆಚರಣೆಯಲ್ಲಿ ಹೆಜ್ಜೆ ನಮಸ್ಕಾರ, ಪಂಜಿನ ಸೇವೆ, ಉರುಳು ಸೇವೆ, ಬಾಯಿ ಬೀಗ ಈ ಮುಂತಾದ ಹರಕೆಗಳನ್ನು ಹೊತ್ತು ಆಚರಿಸುತ್ತಾರೆ.

ದೇವರಗುಡ್ಡದ ಮೈಲಾರಲಿಂಗನ ಉತ್ಸವದ ಆಚರಣೆಗಳು ಭಯ ಹುಟ್ಟಿಸುತ್ತವೆ. ವಿಜಯದಶಮಿಯಂದು ಮೈಲಾರಲಿಂಗನ ಗುಡಿಯಲ್ಲಿ ಪುರವಂತರು, ವೇಷ ಹಾಕಿದ ವೀರರು ಕೊರಳಲ್ಲಿ ರುಂಡಮಾಲೆಗಳನ್ನು ಹಾಕಿಕೊಂಡು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕುಣಿಯುತ್ತಾರೆ. ಅದರಲ್ಲೊಬ್ಬ ವೀರ ಬಗನಿಗೂಟವನ್ನು ಎಡಗಾಲ ಮೊಳಕಾಲು ಹಾಗೂ ಹಿಮ್ಮಡದ ಮೇಲಿನ ಅಂತರದಲ್ಲಿಟ್ಟು ಬಲವಾದ ತುಂಡಿನಿಂದ ತಾನೇ ಬಡಿದುಕೊಳ್ಳುತ್ತಾನೆ. ಆ ಗೂಟ ಹಿಮ್ಮಟದಿಂದ ಹೊರಗೆ ಬಂದು ಮತ್ತೊಂದು ಬದಿಯನ್ನು ಸೀಳಿಕೊಂಡು ಹಾಯುತ್ತದೆ. ಅದೇ ತೂತಿನಲ್ಲಿ ಕಾರಿಮುಳ್ಳಿನ ಕಂಟಿಯನ್ನು ಹಾಯಿಸಿ ಎದುರುಬದುರು ಎಳೆದುಕೊಳ್ಳುವ ದೃಶ್ಯ ಭಯಂಕರವಾಗಿ ಕಾಣಿಸುತ್ತದೆ. ಇಂತಹ ಅನೇಕ ಉಗ್ರ ಆಚರಣೆಗಳು ಗಂಡು ದೈವಗಳ ಜಾತ್ರೆ-ಉತ್ಸವಗಳಲ್ಲಿ ಆಚರಿಸಲ್ಪಡುತ್ತವೆ.

ಗಂಡು ದೈವವಾದ ಮೈಲಾರಲಿಂಗ ಹಾಗೂ ಹೆಣ್ಣು ದೈವವಾದ ಎಲ್ಲಮ್ಮ ಈ ಎರಡೂ ದೈವಗಳ ಅನೇಕ ಆಚರಣೆಗಳಲ್ಲಿ ಹೋಲಿಕೆಯಿರುವುದನ್ನು ಕಾಣಬಹುದಾಗಿದೆ. ಕರ್ನಾಟಕ- ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಈ ಮೂರೂ ರಾಜ್ಯಗಳಲ್ಲಿ ಮೈಲಾರಲಿಂಗ ಮತ್ತು ಎಲ್ಲಮ್ಮ ಈ ದೈವಗಳ ಸಂಪ್ರದಾಯಗಳು ಆಚರಣೆಯಲ್ಲಿರುವುದನ್ನು ಕಾಣಬಹುದಾಗಿದೆ. ಎಲ್ಲಮ್ಮ ಮೈಲಾರಲಿಂಗನ ತಂಗಿಯೆಂದು ಈ ಭಾಗದಲ್ಲಿ ಪ್ರಚಲಿತವಿದೆ. ಗೊಂದಲಿಗರು ಹಾಡುವ ಎಲ್ಲಮ್ಮನ ಹಾಡುಗಳಲ್ಲಿ ಮೈಲಾರನ ಪ್ರಸ್ತಾಪ ಬರುತ್ತದೆ.

ಇವೆರಡೂ ಸಂಪ್ರದಾಯಗಳಲ್ಲಿ ಎದ್ದು ಕಾಣುವ ಆಚರಣೆಗಳ ಹೋಲಿಕೆಗಳನ್ನು ‘ಮೈಲಾರಲಿಂಗ – ಖಂಡೋಬಾ’ ಎಂಬ ತಮ್ಮ ಕೃತಿಯಲ್ಲಿ ಡಾ. ಎಂ.ಬಿ. ನೇಗಿನಹಾಳವರು ಗುರುತಿಸಿದ್ದಾರೆ. ಭಂಡಾರ-ಕವಡೇಸರ ಎಲ್ಲಮ್ಮನ ಜೋಗತಿಯರಲ್ಲಿ – ಮೈಲಾರಲಿಂಗನ ಗೊರವರಲ್ಲಿ; ಇಬ್ಬರಲ್ಲೂ ಕಾಣಬಹುದಾಗಿದೆ. ಎಲ್ಲಮ್ಮನ ಭಕ್ತರು ಲಗ್ನಪೂರ್ವದಲ್ಲಿ ಬೆಳತನಕ ಗೊಂದಲದ ವಿಧಿ ವಿಧಾನಗಳನ್ನಾಚರಿಸುತ್ತಾರೆ. ಅದೇ ರೀತಿ ಮೈಲಾರದೇವರ ಸಂಬಂಧಿಯಾದ ಚಿಕ್ಕಯ್ಯ – ಜುಂಜಯ್ಯರ ಆರಾಧನೆ ನಡೆಯುತ್ತದೆ. ಗೊರವರು ಬ್ರಹ್ಮಚಾರಿ ಗಳಾಗಿರುವಂತೆ, ಜೋಗತಿಯರೂ ಬ್ರಹ್ಮಚಾರಿಗೆಯರಾಗಿ ದೇವಿಗೆ ಅರ್ಪಿಸಿಕೊಂಡವರಾಗಿ ರುತ್ತಾರೆ. ಜನಿಗೆಯ ಆಕಳು ಮತ್ತು ಎಮ್ಮೆಯ ಸಂಪ್ರದಾಯಗಳನ್ನು ಎರಡೂ ಆಚರಣೆಗಳಲ್ಲಿ ಕಾಣಬಹುದಾಗಿದೆ. ಹೀಗೆ ಅನೇಕ ಆಚರಣೆಗಳಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ.

ಮೈಲಾರಲಿಂಗನ ಆಚರಣೆಗಳಂತೂ ತುಂಬಾ ವಿಶಿಷ್ಟವಾಗಿವೆ. ಚೌರೀ ಬೀಸುವವರು, ದೀವಟಿಗೆ ಸೇವೆಯವರು, ಎಲೆಚಂಚಿಯವರು, ಬಿಚ್ಚುಗತ್ತಿಯವರು ಇವರ ಆಚರಣೆಗಳು ಕುತೂಹಲಕಾರಿಯಾಗಿವೆ. ಮೈಲಾರಲಿಂಗನಿಗೆ ಗಾಂಜಾ ಸೇವೆಯನ್ನು ಸಲ್ಲಿಸುವವರು, ನಾಯಿ ಯಂತೆ ಬೊಗಳುವವರು, ಕುದುರೆಯಂತೆ ಕುಣಿಯುತ್ತ ಚಾವಟಿಯಿಂದ ಹೊಡೆದುಕೊಳ್ಳುವ ಕುದುರೆಕಾರರು ವಿವಿಧ ಬಗೆಯ ಆಚರಣೆಗಳನ್ನು ಆಚರಿಸುತ್ತ ಮೈಲಾರನ ಮಹಾತ್ಮೆಯನ್ನು ತಿಳಿಸುತ್ತಾರೆ. ಹೀಗೆ ಈ ಉತ್ಸವ-ಜಾತ್ರೆಗಳಲ್ಲಿ ನಡೆಯುವ ಈ ಆಚರಣೆಗಳನ್ನು ಇಂದು ಮನೋವಿಜ್ಞಾನ ಹಾಗೂ ಸಮಾಜವಿಜ್ಞಾನ ನೆಲೆಯಲ್ಲಿ ನೋಡಿ ಅಧ್ಯಯನ ಮಾಡಬೇಕಾಗಿದೆ.

ಗಂಡು ದೇವತೆಗಳನ್ನು ಕುರಿತಂತೆ ಭಕ್ತರಲ್ಲಿ ಅನೇಕ ನಂಬಿಕೆಗಳಿವೆ. ಈ ನಂಬಿಕೆಗಳು ಪ್ರದೇಶದಿಂದ ಪ್ರದೇಶಕ್ಕೆ ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನವಾಗಿರುತ್ತವೆ. ಪ್ರತಿ ಶನಿವಾರ ತಪ್ಪದೇ ಹನುಮಂತನಿಗೆ ನಡೆದುಕೊಂಡರೆ ಅನಿಷ್ಟಗಳು ದೂರವಾಗುತ್ತವೆ ಯೆಂಬ ನಂಬಿಕೆ ಎಲ್ಲ ಕಡೆಯೂ ಇದೆ. ಮದುವೆಯಾಗದ ಯುವತಿಯರು ಹನುಮಂತನನ್ನು ಪೂಜಿಸಿದರೆ ಬೇಗ ಮದುವೆಯಾಗುವುದೆಂಬ ನಂಬಿಕೆ ಕೂಡಾ ಬಲವಾಗಿದೆ. ಮಾದೇಶ್ವರ ಬೆಟ್ಟದಲ್ಲಿ ಗಂಡ-ಹೆಂಡಿರ ನಡುವೆ ಸಂಭೋಗವು ನಿಷಿದ್ಧವೆಂಬ ನಂಬಿಕೆಯಿದೆ. ಮಾದೇಶ್ವರನ ಗುಡ್ಡರು ಕಂಚಿನ ವಾದ್ಯವನ್ನು ಬಳಸುವುದರಿಂದ ಊಟಕ್ಕೆ ಕಂಚಿನ ತಣಗೆಯನ್ನು ಬಳಸುವುದಿಲ್ಲ ಮತ್ತು ಪಾದರಕ್ಷೆ ತೊಡುವುದಿಲ್ಲ. ಶಿವನು ದೈತ್ಯರ ಸಂಹಾರ ಕಾಲದಲ್ಲಿ ಡೋಣಿಗೆ ಬಾಯಿ ಹಚ್ಚಿಯೇ ಹಸಿವು ಹಿಂಗಿಸಿಕೊಂಡುದರ ಸಂಕೇತವಾಗಿ ಗೊರವರು ದೋಣೆಯಲ್ಲಿಯೇ ಊಟ ಮಾಡುತ್ತಾರೆ. ಬಂಜೆಯರು ಮಾಳಪ್ಪನಿಗೆ ನಡೆದುಕೊಂಡು ಮಕ್ಕಳನ್ನು ಹೆತ್ತರೆ ಹಾಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬನನ್ನು ಮಾಳಿಂಗರಾಯನ ಮಠಕ್ಕೆ ಸೇವೆಗೆ ಅರ್ಪಿಸಬೇಕೆಂಬ ನಿಯಮವನ್ನು ನಂಬಲಾಗುತ್ತದೆ. ಜುಂಜಪ್ಪನನ್ನು ನೆನೆದರೆ ಹಾವು-ಚೇಳು ಕಚ್ಚುವುದಿಲ್ಲವೆಂಬ ನಂಬಿಕೆಯಿದೆ. ಹಬ್ಬದಲ್ಲಿ ಡೊಳ್ಳು ಬಾರಿಸುವುದು ಬೀರಪ್ಪ ದೇವರಿಗೆ ಪ್ರಿಯವಾದ ಪೂಜೆಯೆಂದು ನಂಬಿದ ಕುರುಬರು ಬೀರಪ್ಪನ ಹೆಸರಿನಲ್ಲಿ ಡೊಳ್ಳು ಬಾರಿಸುತ್ತಾರೆ.

ಜೋಕುಮಾರನಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳನ್ನು ಕಾಣಬಹುದಾಗಿದೆ. ಜೋಕುಮಾರನ ಬಾಯಲ್ಲಿಟ್ಟಿರುವ ಬೆಣ್ಣೆಯನ್ನು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುಬೇನೆ ಬರುವುದಿಲ್ಲವೆಂಬ ನಂಬಿಕೆಯಿದೆ. ಜೋಕುಮಾರ ಸತ್ತಾಗ ಅಗಸರು ಮೂರು ದಿವಸ ಬಟ್ಟೆ ಒಗೆಯುವುದಿಲ್ಲ. ಜೋಕ್ಯಾನ ಹುಣ್ಣಿಮೆಯ ದಿನ ಸರಿ ರಾತ್ರಿಯಲ್ಲಿ ಇವನನ್ನು ತಳವಾರರು ತಮ್ಮ ಮನೆಯಿಂದ ಹೊಲಗೇರಿಗೆ ಒಯ್ಯುವಾಗ ಯಾರೂ ಅವನನ್ನು ನೋಡಬಾರದೆಂದೂ, ನೋಡಿದವರಿಗೆ ವರ್ಷವಿಡೀ ತೊಂದರೆ ತಪ್ಪಿದ್ದಲ್ಲವೆಂದೂ ನಂಬುತ್ತಾರೆ. ಜೋಕುಮಾರ-ಗಣಪ್ಪ ಇಬ್ಬರೂ ಭಾದ್ರಪದ ಅಷ್ಟಮಿಯೆಂದು ಹುಟ್ಟಿದ್ದರೂ ಇಬ್ಬರೂ ಪರಸ್ಪರ ಭೇಟಿಯಾ ಗುವುದಿಲ್ಲ. ಒಂದು ವೇಳೆ ಇಬ್ಬರನ್ನೂ ದರ್ಶನ ಮಾಡಿಸಿದರೆ ಕೇಡಾಗುವುದೆಂಬ ನಂಬಿಕೆಯಿದೆ. ಇಂತಹ ಅನೇಕ ನಂಬಿಕೆ – ಆಚರಣೆಗಳಲ್ಲಿ ಕೆಲವು ಆಚರಣೆಗಳು ವಿಶಿಷ್ಟವಾಗಿ ಕೆಲವು ನಂಬಿಕೆಗಳು ವೈಜ್ಞಾನಿಕವಾಗಿ ಗಮನ ಸೆಳೆಯುತ್ತವೆ.