ಅನಂತ ಆನಂದವನ್ನು ನೀಡುವ ಗಿರಿಧಾಮಗಳಿಗೆ ಈ ಜಿಲ್ಲೆಯಲ್ಲಿ ಕೊರತೆಯಿಲ್ಲ. ಇಲ್ಲಿಯ ಸಹ್ಯಾದ್ರಿಸಾಲುಗಳ ಸರಾಸರಿ ಎತ್ತರ ೭೦೦ ಮೀಟರುಗಳು. ೯೦೦ ಮೀಟರ ಎತ್ತರದ ಪರ್ವತಗಳೂ ಇಲ್ಲಿವೆ. ಸಾಮಾನ್ಯವಾಗಿ ೬೦ ರಿಂದ ೯೦ ಮೀಟರ ಎತ್ತರದಗುಡ್ಡಗಳು ಅಲ್ಲಲ್ಲಿ ಇವೆ.

ಗುಡ್ಡೆಹಳ್ಳಿ : ಕಾರವಾರದಿಂದ ೧೦ ಕಿ.ಮೀ. ದೂರದಲ್ಲಿ ೫೫೦ ಮೀಟರ ಎತ್ತರದಲ್ಲಿ ಗುಡ್ಡೆಹಳ್ಳಿಯಿದೆ ಹಾಲಕ್ಕಿ ಒಕ್ಕಲ ವಸತಿ ಇದೆ. ಹವೆ ತಂಪಾಗಿದೆ. ಪುಣೆ-ಮುಂಬೈ ನಡುವಿನ ಲೋಣಾವಳದಷ್ಟೆ ಎತ್ತರದಲ್ಲಿದ್ದ ಈ ಹಳ್ಳಿಯಿಂದ ಸಮುದ್ರದ ದೃಶ್ಯ ಸೊಗಸಾಗಿ ಕಾಣುವದು. ಭಾರತದಲ್ಲಿಯೇ ಸಮುದ್ರದಿಂದ ಇಷ್ಟು ಸಮೀಪವಿದ್ದು ಇಷ್ಟು ಎತ್ತರದಲ್ಲಿದ್ದ ಸ್ಥಾನ ಇನ್ನೊಂದಿಲ್ಲ. ಅತ್ಯುತ್ತಮ ಗಿರಿನಿವಾಸವಿದೆಂದು ಮನಗಂಡು ಏ.ಎಂ. ಸ್ಚೇನ್ಶ (ಮಿ ಬಿಲ್?) ಎಂಬ ಬ್ರಿಟೀಶ ಅಧಿಕಾರಿ ಇಲ್ಲಿ ಬಂಗ್ಲೆ ಕಟ್ಟಿಸಿದ್ದನು. ಅದನ್ನು ಇಂದಿಗೂ ಗುರುತಿಸಬಹುದು. ಇಷ್ಟು ಎತ್ತರದಲ್ಲಿಯೂ ನೀರಿನ ಒರತೆ ಸಾಕಷ್ಟಿದೆ. ಇಂತಹ ಪ್ರದೇಶದ ಹವೆ ಇಂದು ಬಿಣಗಾ ಕಾಸ್ಚಿಕ್ ಸೋಡಾ ಫ್ಯಾಕ್ಟರಿಯ ವಿಷಾನಿಲ ವಾತಾವರಣದಿಂದಾಗಿ ಕೆಡುತ್ತಲಿದೆ. ಯೋಗ್ಯ ಲಕ್ಷವಹಿಸಿ ಸರಿಯಾದ ರಸ್ತೆ ಹಾಗು ವಸತಿ ವ್ಯವಸ್ಥೆ ಮಾಡಿದಲ್ಲಿ ಇದನ್ನು ಉತ್ಕೃಷ್ಟ ಗಿರಿಧಾಮನ್ನಾಗಿಸಬಹುದು.

ಮೋತಿಗುಡ್ಡ : ೪೫೮ ಮೀಟರ ಎತ್ತರವಿರುವ ಮೋತಿಗುಡ್ಡವು ಅಂಕೋಲೆ ತಾಲೂಕಿನಲ್ಲಿದೆ. ಇಲ್ಲಿಯೂ ಹವೆತಂಪಾಗಿದ್ದು ನೀರಿದ್ದು ಶಾಲೆಯಿದೆ. ಇದರಂತೆ ಅಂಕೋಲೆ ಕಾರವಾರ ರಸ್ತೆಯಲ್ಲಿರುವ ಅವರ್ಸೆ ಬಳಿ ಕೆಳಗಿನಬೆಣ ಮತ್ತು ಮೇಲಿನ ಬೆಣ ಎಂಬ ಎತ್ತರದ ನೆಲೆಗಳಿದ್ದು ಕಡಿದಾದ ದಾರಿಯಲ್ಲಿ ಬೆಟ್ಟವೇರಿದಾಗ ಶಿಖರದಮೇಲೆ ಸಮತಟ್ಟಾದ ಪ್ರದೇಶವಿದ್ದು ದೇವಾಲಯ, ಬಾವಿ, ಹಾಗು ಒಕ್ಕಲ ಕೇರಿಯಿದೆ. ಚಿಕ್ಕದಾದರೂ ಚೊಕ್ಕ ಗಿರಿನಿವಾಸವಿದು. ಅಂತೆಯೇ ಅಂಕೋಲೆಯ ಬಳಿ ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿ ತುಳಸಿಗುಡ್ಡವು ಸಹ ಗಿರಿಧಾಮವಾಗಿಸಲು ತಕ್ಕಸ್ಥಳ.

ಮೇದಿನಿ ಕೋಟೆ : ಕುಮಟೆ ತಾಲೂಕಿನ ಸಾಂತಗಳ್ಲಿನ ಆಗ್ನೇಯಕ್ಕೆ ೨೦ ಕಿ.ಮೀ. ದೂರದಲ್ಲಿರುವ ಈ ಗಿರಿ-ನಿವಾಸದ ಸುತ್ತಲೂ ಸಿಗುವ ಸಸ್ಯರಾಶಿಯಿಂದ ಗಿಡಮೂಲಿಕೆಗಳಿಂದ ಹಿಂದೆ ಬಹು ಪ್ರಸಿದ್ಧಿ ಪಡೆದಿತ್ತು. ಔಷಧಿಯ ಪರಿಶೋಧನಾ ಕೇಂದ್ರವನ್ನಾಗಿಸಬಹುದು. ಹಾಲಕ್ಕಿ ಒಕ್ಕಲು ಪರ್ವತದ ತಳಭಾಗದಲ್ಲಿ ಮನೆ ಮಾಡಿಕೊಂಡಿರುವರು. ಹಲವಾರು ಶಿಲಾಶಾಸನಗಳು ಗತಕಾಲದ ಕುರುಹುಗಳು ಅರಣ್ಯದಲ್ಲಿ ಹಾಳುಸುರಿಯುತ್ತಲಿವೆ.

ಕಳ್ತಿಗುಡ್ಡ : ಮಾಥೇರಾನಿನ ಎತ್ತರಕ್ಕೆ ಹೋಲುವ ಈ ವಿರಾಮ ಸ್ಥಳವು ಕುಮಟೆಯಿಂದ ೧೭ ಕಿ.ಮೀ. ದೂರದಲ್ಲಿದ್ದು ೭೬೦ ಮೀಟರ ಎತ್ತರದಲ್ಲಿದ್ದು, ಹಿಂದೆ ಹೊನ್ನಾವರದಲ್ಲಿರುತ್ತಿದ್ದ ಆಂಗ್ಲ ಅಧಿಕಾರಿಗಳು ಬೇಸಿಗೆಯಲ್ಲಿ ಈ ಗಿರಿನಿವಾಸಕ್ಕೆ ಹೋಗಿರುತ್ತಿದ್ದರು. ಇಂದು ರಸ್ತೆ ಕೂಡ ಹಾಳಾಗಿದೆ.

ದರ್ಶನಗುಡ್ಡೆ : ಜಿಲ್ಲೆಯ ಉತ್ತರ ಭಾಗದಲ್ಲಿ ಸುಪಾ ತಾಲೂಕಿನಲ್ಲಿ ತಿನಾಯಿ (ತಿನ್ನೆ) ಘಟ್ಟದ ಉತ್ತರದಲ್ಲಿ ೭ ಕಿ.ಮೀ. ದೂರದಲ್ಲಿ ಈ ಪರ್ವತಪ್ರದೇಶವಿದೆ. ಈ ಜಿಲ್ಲೆಯಲ್ಲಿಯೇ ಅತಿ ಎತ್ತರದ ಈ ಗಿರಿ ಪ್ರದೇಶ ೯೧೫ ಮೀಟರ ಎತ್ತರವಾಗಿದ್ದು ಕಡಿದಾದ ಕಲ್ಲು ಬಂಡೆಗಳಿಂದ ಕೂಡಿದ್ದು ಪರ್ವತಾರೋಹಣ ಪ್ರಿಯರಿಗೆ ಸೂಕ್ತವಾದ ನೆಲೆಯಾಗಿದೆ. ಪರ್ವತಾರೋಹಣ ತರಬೇತಿ ಕೇಂದ್ರವನ್ನು ಇಲ್ಲಿ ಸ್ಥಾಪಿಸಬಹುದು.

ನಿಶಾನೆಗುಡ್ಡ : ಶಿರಸಿಯ ಹೆಗ್ಗರಣಿ ರಸ್ತೆಯಲ್ಲಿ ಬಾಳೆಗದ್ದೆಯ ಬಳಿಯಲ್ಲಿಯಲ್ಲಾಪುರ ತಾಲೂಕಿನ ಈ ಎತ್ತರ ಗುಡ್ಡದ ಎರಡು ಹಿರಿದಾದ ಬಂಡೆಗಳ ಮಧ್ಯದಿಂದ ದೂರದ ಸಮುದ್ರವನ್ನು ಕಾಣಬಹುದಂತೆ. ವಿಹಾರಕ್ಕೆ ಯೋಗ್ಯ ಸ್ಥಳ.

ಕ್ಯಾಸಲ್ರಾಕ್ : ಗೋವೆಯ ಸರಿಹದ್ದಿನ ಮಾರ್ಗದಲ್ಲಿ ಲೋಂಡಾದಿಂದ ಗೋವಾಕ್ಕೆ ಹೋಗುವಾಗ ರೇಲ್ವೆನಿಲ್ದಾಣವುಳ್ಳ ಊರು ಕಲ್ಲು ಬಂಡೆಗಳಿಂದ ಬೃಹದಾಕಾರದ ಕೋಟೆಯಂತೆ ಕಂಗೊಳಿಸುತ್ತದೆ. ಸುಮಾರು ೫೭೫ ಮೀಟರ ಎತ್ತರದಲ್ಲಿದ್ದ ಈ ಊರಿನ ಹವೆ ತಂಪಾಗಿ ಆರೋಗ್ಯಕರವಾಗಿದೆ. ಬೇಸಿಗೆಯ ವಿರಾಮ ಸ್ಥಳವಾಗಿಸಲು ಯೋಗ್ಯ ಸ್ಥಳವಾಗಿದ್ದು ಹತ್ತಿರವೆ ಗೋವೆಗೆ ಹೋಗುವ ದಾರಿಯಲ್ಲಿ ದೂದಸಾಗರ ಜಲಪಾತ ರಮ್ಯವಾಗಿದೆ.

ಶಿರ್ವೆ : ಕಾರವಾರದ ಈಶಾನ್ಯಕ್ಕೆ ೧೬ ಕಿ.ಮೀ. ದೂರಕ್ಕೆ ಶಿರ್ವೆಹಳ್ಳಿ ಎಂಬ ಹಳ್ಳಿಯು ಉತ್ತಮ ಗಿರಿಧಾಮವಾಗಿದೆ. ಗುಡ್ಡದ ಮೇಲೆ ಬಸವನಮಂದಿರ ಹಾಗು ಬಾವಿಯಿದ್ದು ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಹೋಗುವವರು ಏಣಿಯ ಇಲ್ಲವೆ ಹಗ್ಗದ ಸಹಾಯದಿಂದ ಮೇಲೇರಿ ಹೋಗಬೇಕಾಗುತ್ತದೆ. ಇಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ಅನೇಕ ದಂತೆ ಕತೆಗಳನ್ನು ಹೇಳುತ್ತಾರೆ.

ಬೆಡಸಗಾಂವ ಗುಡ್ಡ : ಮುಂಡಗೋಡ ತಾಲೂಕಿನಲ್ಲಿ ೭೬೫ ಮೀಟರ ಎತ್ತರ ಪ್ರದೇಶವಾದ ಬೆಡಸಗಾಂವ ಗುಡ್ಡದ ತುದಿಯಲ್ಲಿ ವಿಶಾಲವಾದ ಸಮತಟ್ಟಾದ ನೆಲ ಹರಡಿಕೊಂಡಿದ್ದು ವಿರಾಮಧಾಮವಾಗಿಸಲು ಸೂಕ್ತಸ್ಥಳವಾಗಿದೆ.

ಈ ಮೇಲೆ ಹೇಳಿದ ಸ್ಥಳಗಳಲ್ಲದೆ ಶಿರಸಿ ತಾಲೂಕಿನಲ್ಲಿ ಕಳಾಸಗುಡ್ಡ, ಮೆಣಸಿಗುಡ್ಡ, ಸಿದ್ದಾಪುರ ತಾಲೂಕಿನಲ್ಲಿ ರಾಕ್ಷಸಗುಡ್ಡ, ಹಕಲಿಗುಡ್ಡ, ಮಾವಿನಗುಡ್ಡ, ಹಾಗು ಇನ್ನಿತರ ತಾಲೂಕುಗಳಲ್ಲಿ ಇನ್ನೂ ಕೆಲವು ಎತ್ತರದ ಪ್ರದೇಶದಲ್ಲಿ ಗಿರಿಧಾಮಗಳನ್ನು ನಿರ್ಮಿಸಬಹುದು.