ಆಹಾರವನ್ನು ಡಬ್ಬಿಯಲ್ಲಿ ಸಂಸ್ಕರಿಸುವ ಉದ್ಯಮಗಳಲ್ಲಿ ತವರದ ಮತ್ತು ಗಾಜಿನ ಧಾರಕಗಳು ಹೆಚ್ಚಾಗಿ ಬಳಕೆಯಲ್ಲಿವೆ. ಇವುಗಳಲ್ಲೂ ತವರದ ಧಾರಕಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ : ತವರದವನ್ನು ಸುಲಭವಾಗಿ ಜೋಡಿಸಬಹುದು. ಇವು ಸಂಸ್ಕರಿಸುವಾಗ ದೃಢವಾಗಿ ನಿಲ್ಲುತ್ತವೆ. ತೂಕದ ದೃಷ್ಟಿಯಿಂದ ಹಗುರವಾಗಿದ್ದು, ಬಳಸಲೂ ಸುಲಭ. ಇವು ತಕ್ಕಮಟ್ಟಿಗೆ ಅಗ್ಗವಾಗಿರುವುದೇ ಅಲ್ಲದೆ ವೇಗದ ಯಂತ್ರಗಳಲ್ಲಿಯೂ ಇವುಗಳನ್ನು ಬಳಸಬಹುದು. ಗಾಜಿನ ಧಾರಕಗಳು ಅತಿ ನಾಜೂಕಿನವಾಗಿದ್ದು ಸುಲಭವಾಗಿ ಒಡೆಯುತ್ತವೆ.  ಇವುಗಳಲ್ಲಿ ಸಂಸ್ಕರಿಸುವಾಗ ಮತ್ತು ಬಳಸುವಾಗ ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಷ್ಟಾದರೂ ಗಾಜಿನ ಧಾರಕಗಳಿಗೆ ತವರದ ಧರಕಗಳಿಗಿಂತ ಎರಡೂ ಬಗೆಯ ಹೆಚ್ಚಿನ ಸೌಲಭ್ಯವಿದೆಯೆನ್ನಬಹುದು. ಗಾಜಿನ ಧಾರಕಗಳಲ್ಲಿ ತುಂಬಿದ ಪದಾರ್ಥ ಹೊರಗೆ ಚೆನ್ನಾಗಿ ಕಾಣಿಸುತ್ತದೆ. ಆದುದರಿಂದ ಸಹಜವಾಗಿ ಇವುಗಳನ್ನು ಪ್ರದರ್ಶಿಸಬಹುದು. ಇದಲ್ಲದೆ ಈ ಧಾರಕಗಳನ್ನು ಅನೇಕ ಬಾರಿ ಉಪಯೋಗಿಸಲೂಬಹುದು.

ತವರದ ಧಾರಕಗಳು :

ತವರದ ಡಬ್ಬಿಗಳನ್ನು ಕಡಿಮೆ ಪ್ರಮಾಣ ಇಂಗಾಲವುಳ್ಳ ತೆಳುವಾದ ಉಕ್ಕಿನ ತಗಡುಗಳಿಂದ ತಯಾರಿಸುತ್ತಾರೆ. ಈ ತಗಡಿನ ಎರಡೂ ಪಕ್ಕಕೆ ತೆಳುವಾದ ಅಂದರೆ ಸಾಧರಣ ೦.೦೦೦೧ ಅಂಗುಲ ದಪ್ಪಕ್ಕೆ ತವರದ ಲೇಪನ ಕೊಟ್ಟರೆ ಅದು ತವರದ ತಗಡೆನಿಸಿಕೊಳ್ಳುತ್ತದೆ. ತವರದ ತಗಡಿನಲ್ಲಿರುವ ಉಕ್ಕಿನ ಸಂಯೋಜನೆ ಈ ಕೆಳಗೆ ಕಾಣಿದಂತಿರುತ್ತದೆ :

ಇಂಗಾಲ ೦.೦೪ – ೦.೧೨
ಗಂಧಕ ೦.೦೧೫ – ೦.೦೫
ರಂಜಕ ೦.೦೧೫ – ೦.೦೬
ತಾಮ್ರ ೦.೦೨೦ – ೦.೨೦
ಮ್ಯಾಂಗನೀಸ್ ೦.೨೦ – ೦.೬೦
ಸಿಲಿಕಾನ್ ಅತ್ಯಲ್ಪ – ೦.೮೦

ತವರದ ತಗಡು ಸವೆಯುವಿಕೆ ಸಾಮರ್ಥ್ಯ ಮತ್ತು ಅದರ ಬಾಳಿಗೆ ಸ್ವಲ್ಪ ಮಟ್ಟಿಗೆ ಅದರಲ್ಲಿಯ ಉಕ್ಕಿನ ರಾಸಾಯನಿಕ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ಇದರಿಂದಾಗಿ ಅವುಗಳ ನಿರ್ದಿಷ್ಟ ಬಳಕೆಗೆ ಅನುಗುಣವಾಗಿ ಮೂಲ ತಗಡಿನ ನಮೂನೆ ಇರಬೇಕು. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಈ ಕೆಳಗೆ ನಮೂದಿಸಿದ ಮಾದರಿಯ ತಗಡುಗಳು ಬಳಕೆಯಲ್ಲಿವೆ:

ನಮೂನೆ L ತೀವ್ರತರದ ಹಾಗೂ ಚೆನ್ನಾಗಿ ಸವೆಯುವ ಪ್ಯಾಕ್‌ಗಳಿಗೆ ಕಡಿಮೆ ಲೋಹಕಲ್ಪದ (ಅಲೋಹಧಾತು) ಉಕ್ಕು.
ನಮೂನೆ MR ಲೋಹಕಲ್ಪದ ಅಂಶ ಮೇಲೆ ತಿಳಿಸಿದ  ನಮೂನೆಯಂತೆ, ಆದರೆ ಅವಶೇಷದ ಬಗೆಗೆ ಕಡಿಮೆ ನಿರ್ಬಂಧ.
ನಮೂನೆ MC ತೀಕ್ಷ್ಣತೆಯನ್ನು ಕಡಿಮೆ ಮಾಡಲು ಪುನಃ ರಂಜಕ ಸೇರಿಸಿದ ಅಥವಾ ಚಿಸಮರ್ ಉಕ್ಕು (ಮೇಲಿನವೆಲ್ಲಾ ತಣ್ಣಗೆ ರೋಲ್ ಮಾಡಿದವು)
ನಮೂನೆ M ಯಂತೆ, ಆದರೆ ಬಿಗಿಯಾಗಿ ರೋಲ್ ಮಾಡಿದವು.

ತವರದ ತಗಡುಗಳು : ತವರದ ತಗಡಿನಲ್ಲಿ ಹಲವು ದರ್ಜೆಯವುಗಳಿವೆ. ಪ್ರತಿ ಮೂಲಪೆಟ್ಟಿಗೆಯ ತಗಡಿಗೆ ಸಾಧಾರಣ ೧.೫ ಪೌಂಡಿನಷ್ಟು ತೂಕದ ತವರದ ಲೇಪವಿರುತ್ತದೆ.  ಎಂದರೆ ಉಕ್ಕಿನ ತಗಡಿಗೆ ಮೇಲೆ ಇದು ೦.೦೦೦೦೯ ಅಂಗುಲ ದಪ್ಪಕ್ಕಿರುತ್ತದೆ. ಪ್ರತಿ ಮೂಲ ಪೆಟ್ಟಿಗೆಯಲ್ಲಿರುವ ತಗಡಿನಲ್ಲಿ ಸಾಧಾರಣ ೧ ರಿಂದ ೫ ಪೌಂಡು ತವರವು ಇರುತ್ತದೆ. ಒಂದು ಮೂಲ ಪೆಟ್ಟಿಗೆಯಲ್ಲಿ ೨೦”l × ೧೪” ವಿಸ್ತೀರ್ಣವುಳ್ಳ ೧೧೨ ತಗಡುಗಳಿರುತ್ತವೆ. ಅಥವಾ ೧೦೮ ಪೌಂಡು ತೂಕವಿರುವ ೩೧,೩೬೦ ಚದರ ಅಂಗುಲ ತವರದ ತಗಡುಗಳಿರುತ್ತವೆ. ಇವುಗಳಲ್ಲಿ  I.C. ಪ್ಲೇಟಿಗಿಂತ ತೆಳ್ಳಗಿನವುಗಳಿಗೆ ‘ಹಗುರದವು’ಗಳೆಂದು ಹೆಸರು. I.C. ಗಿಂತ ದಪ್ಪದವನ್ನು ಕ್ರಾಸಸ್‌ ಎನ್ನುವರು. ಇವುಗಳ ಸರಿಸಮಾನ ತೂಕಗಳು ಈ ಕೆಳಗಿನಂತಿವೆ.

ನಮೂನೆ ತೂಕ (ಪೌಂಡ್)
IXL ೧೨೨
IX ೧೩೬
IXX ೧೫೬
IXXX ೧೭೬
IXXXX ೧೯೬

ತವರದ ತಗಡಿನಲ್ಲಿ ಕೋಕ್, ಅತ್ಯುತ್ತಮ ಕೋಕ್, ಚಾರ್ ಕೋಲ್ ಎಂದು ಹಲವು ಬಗೆಯವುಗಳಿವೆ. ‘ಕೋಕ್’ಗಳು ಸಾಮಾನ್ಯವಾದ ಲೇಪಿಸಲ್ಪಟ್ಟ ತಗಡುಗಳು. ಕೋಕ್ ಮತ್ತು ಚಾರ್ ಕೋಲಿನ ಮಧ್ಯ ದರ್ಜೆಯದು ಬೆಸ್ಟ್ ಕೋಕ್. ಸಾಧಾರಣವಾದ ಚಾರ್‌ಕೋಲ್ ತಗಡುಗಳಿಗಿಂತ ‘ಚಾರ್‌ಕೋಲ್ಸ್’ನಲ್ಲಿ ತವರದ ಲೇಪ ಸ್ವಲ್ಪ ದಪ್ಪಕ್ಕಿರುತ್ತದೆ.

ಅರಗಿನ ಲೇಪ ಕೊಡುವುದು : ಉಕ್ಕಿನ ತಗಡುಗಳಿಗೆ ಒಂದೇ ಸಮನಾಗಿ ತವರದ ಲೇಪ ಕೊಡಲು ಸಾಧ್ಯವಾಗುವುದಿಲ್ಲ. ಈ ತವರದ ಲೇಪ ಹೊರಗಿನಿಂದ ನೋಡುವಾಗ ಸಮನಾಗಿ ಕಾಣಬಹುದು. ಆದರೆ ಅದರಲ್ಲಿ ಲೇಪವಿಲ್ಲದ ಅತಿ ಸೂಕ್ಷ್ಮ ರಂಧ್ರಗಳು ಸದಾ ಇದ್ದೇ ಇರುತ್ತವೆ. ಇಂಥ ಡಬ್ಬಿಗಳಲ್ಲಿ ತುಂಬಿದ ಆಹಾರದ ಬಣ್ಣ ಬದಲಾಗುತ್ತದೆ. ಕೆಲವು ವೇಳೆ ತವರದ ತಗಡು ಸವೆದು ಹೋಗುವುದೂ ಉಂಟು. ತೀವ್ರತರದ ಸವೆತ ಉಕ್ಕಿನಮೇಲೂ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಕಪ್ಪು ಬಣ್ಣದ ಕಬ್ಬಿಣ ಸಲ್ಫೈಡಿನ ಕಲೆಗಳು ಉಂಟಾಗುತ್ತವೆ. ಡಬ್ಬಿಯಲ್ಲಿ ಸಂಸ್ಕರಿಸಿದ ಆಹಾರ ಬಣ್ಣ  ಕೆಡದಂತೆ ಮಾಡಲು ಡಬ್ಬಿಯ ಒಳಭಾಗಕ್ಕೆ ಸೂಕ್ತ ಲೇಪನ ಕೊಡುವುದು ಸಮಂಜಸ. ಆದರೆ ಈ ಲೇಪನಗಳ ವಾಸನೆಯು ಆಹಾರದಲ್ಲಿ ಸೇರಬಾರದು. ಮತ್ತು ಆಹಾರದ ಗುಣಲಕ್ಷಣಗಳಿಗೆ ಯಾವುದೇ ಕುಂದು ತರಬಾರದು. ಈ ದೃಷ್ಟಿಯಿಂದ ಅರಗಿನ ಲೇಪ ಕೊಡುವುದು ಬಹು ಅವಶ್ಯವಾಗಿದೆ. 

ಅರಗಿನಲ್ಲಿ ಎರಡು ಬಗೆಗಳಿವೆ : ೧) ಆಮ್ಲ ನಿರೋಧಕ ೨) ಗಂಧಕ ನಿರೋಧಕ. ಆಮ್ಲ ನಿರೋಧಕ ಅರಗು ಸಾಮಾನ್ಯವಾಗಿ ಬಂಗಾರದ ಬಣ್ಣದ ‘ಎನಾಮಲ್’ ಆಗಿರುತ್ತದೆ. ಇವುಗಳಿರುವ ಡಬ್ಬಿಗಳನ್ನು  R – ಎನಾಮಲ್ ಲೇಪದ ಡಬ್ಬಿಗಳೆನ್ನುವರು. ಕರಗುವ ಬಣ್ಣವನ್ನು ಪಡೆದಿರುವ ಆಮ್ಲಯುಕ್ತ ಹಣ್ಣುಗಳನ್ನು ಈ ಡಬ್ಬಿಗಳಲ್ಲಿ ತುಂಬಬಹುದು. ಆಮ್ಲೀಯ ಹಣ್ಣುಗಳಲ್ಲಿ ೧) ನೀರಿನಲ್ಲಿ ಕರಗದ ಬಣ್ಣವಿರುವುವು ಮತ್ತು ೨) ನೀರಿನಲ್ಲಿ ಕರಗುವ ಬಣ್ಣವನ್ನು ಹೊಂದಿರುವವು ಎಂಬ ಎರಡು ಬಗೆಯಿದೆ. ಮೊದಲನೆಯ ಗುಂಪಿನಲ್ಲಿ ಪೀಚ್, ಅನಾನಸ್, ಎಪ್ರಿಕಾಟ್, ಮತ್ತು ಗ್ರೇಪ್ ಫ್ರೂಟ್ ಹಣ್ಣುಗಳು ಸೇರುತ್ತವೆ. ಎರಡನೆಯದು ರಾಸ್‌ಬೆರ್ರ‍ರಿ, ಸ್ಟ್ರಾಬೆರಿ, ರೆಡ್‌ಫ್ಲಮ್ ಮತ್ತು ಬಣ್ಣದ ದ್ರಾಕ್ಷಿಗಳನ್ನೊಳಗೊಂಡಿದೆ. ಮೊದಲನೆಯ ವರ್ಗದ ಹಣ್ಣುಗಳನ್ನು ಸಾದಾ ಡಬ್ಬಿಗಳಲ್ಲೂ ಮತ್ತು ಎರಡನೆಯ ವರ್ಗದವುಗಳನ್ನು ಅರಗಿನ ಲೇಪದ ಡಬ್ಬಿಗಳಲ್ಲೂ ತುಂಬಬೇಕು.

ಗಂಧಕ ನಿರೋಧಕ ಅರಗಿಗೆ ಚಿನ್ನದ ಬಣ್ಣವಿರುತ್ತದೆ. ಇದರ ಲೇಪವಿರುವ ಡಬ್ಬಿಗಳನ್ನು  C – ಎನಾಮಲ್ ಡಬ್ಬಿಗಳೆನ್ನುತ್ತಾರೆ.  ಈ ಡಬ್ಬಿಗಳನ್ನು ಬಟಾಣಿ, ಮೆಕ್ಕೆಜೋಳ, ಲಿಮಾಬೀನ್ಸ್, ಕೆಂಪು ಕಿಡ್ನಿ ಬೀನ್ಸ್ ಇವೇ ಮೊದಲಾದ ಆಮ್ಲ ರಹಿತ ತರಕಾರಿಗಳನ್ನು ತುಂಬಲು ಉಪಯೋಗಿಸುತ್ತಾರೆ. ಈ ಡಬ್ಬಿಗಳಿಂದ ಆಹಾರದ ಬಣ್ಣ ಬದಲಾಗುವುದಿಲ್ಲ. ಅಲ್ಲದೆ ಧಾರಕದ ಒಳಗೆ ಕಲೆಗಳೂ ಆಗುವುದಿಲ್ಲ. ಈ ಡಬ್ಬಿಗಳು ಆಮ್ಲ ರಹಿತ ಆಹಾರಗಳನ್ನು ತುಂಬುವುದಕ್ಕಾಗಿಯೇ ಇವೆ. ಇವುಗಳಲ್ಲಿ ಹೆಚ್ಚು ಆಂಲ ರಹಿತ ಆಹಾರವನ್ನು ತುಂಬಿದರೆ ಅದರಲ್ಲಿರುವ ಆಮ್ಲ ಅರಗನ್ನು ನಾಶಪಡಿಸುತ್ತದೆ. 

ಡಬ್ಬಿಗಳ ತಯಾರಿಕೆ : ಡಬ್ಬಿಗಳನ್ನು ತಯಾರಿಸುವಾಗ ತವರದ ತಗಡನ್ನು ಸರಿಯಾದ ಗಾತ್ರಕ್ಕೆ ಕತ್ತರಿಸಿಕೊಳ್ಳಬೇಕು. ಇದಕ್ಕೆ ಕತ್ತರಿಸಿ ಸರಿ ಮಾಡುವ ಮತ್ತು ಸೀಳುವ ಯಂತ್ರಗಳಿರುತ್ತವೆ. ಕತ್ತರಿ ಆಕಾರದ ಕಚ್ಚು ಮಾಡಿದ ನಂತರ ಚಪ್ಪಟೆಯಾದ ಡಬ್ಬಿಯ ಮೈಯನ್ನು ಅಂಚನ್ನುಂಟು ಮಾಡುವ ಯಂತ್ರದಿಂದ ಬಾಗಿಸಿ ಕೊಕ್ಕೆಯಂತೆ ಮಾಡಬೇಕು. ಅನಂತರ ಈ ತಗಡನ್ನು ಕೊಳವೆಯಾಕಾರಕ್ಕೆ ಸುತ್ತಿ ಬೆಸುಗೆಯಿಂದ ಅಂಚು ಸೇರಿಸಬೇಕು. ಇದಾದ ಮೇಲೆ ಡಬ್ಬಿಯ ತುದಿಯ ಅಂಚನ್ನು ಹೊರಕ್ಕೆ ಬಾಗಿಸಬೇಕು. ಡಬ್ಬಿಯ ತುದಿಯ ಮುಚ್ಚುವ ಭಾಗಗಳನ್ನು ತಗಡಿನಿಂದ ಬೇರ್ಪಡಿಸಿ ಅಂಚನ್ನು ಬಾಗಿಸಿ ಸುರುಳಿಯಂತೆ ಮಾಡಬೇಕು. ಇದರ ತುದಿಗೆ ಒಂದು ರಬ್ಬರ್ ಗ್ಯಾಸ್ಕೆಟನ್ನು ಜೋಡಿಸಬೇಕು. ಇದಾದ ನಂತರ ರಬ್ಬರಿನ ಮತ್ತು ನೀರಿನ ಸಂಯೋಗ ಅಥವಾ ರಬ್ಬರ್ ಬೆನ್‌ಜಿನ್‌ ಇಲ್ಲವೇ ಟಾಲ್ವಿನ್‌ನ ಸಂಯೋಗದಿಂದ ಲೇಪದ ಪಟ್ಟಿಯನ್ನು ಕೊಡಬೇಕು. ಕೆಲವು ವೇಳೆ ಕಾಗದದ ಗ್ಯಾಸ್ಕೆಟ್‌  ಮತ್ತು ಪ್ಲಾಸ್ಟಿಕ್ ಅಂಟನ್ನು ಇದಕ್ಕಾಗಿ ಉಪಯೋಗಿಸುವುದುಂಟು. ದ್ವಿಅಂಚು ಸೇರಿಸುವ ಯಂತ್ರದಿಂದ ಒಂದು ತುದಿಯ ತುಂಡನ್ನು ಡಬ್ಬಿಯ ಮೈಯಬಾಗಿದ ಕೊಕ್ಕೆಯ ಅಂಚಿಗೆ ಸೇರಿಸಿ ಭದ್ರಪಡಿಸಬೇಕು. ದ್ವಿಅಂಚು ಸೇರಿಸುವ ಯಂತ್ರದ ಕೆಲಸವನ್ನು ಚಿತ್ರ ೮ರಲ್ಲಿ ತೋರಿಸಿದೆ. ಕೆಲವು ವೇಳೆ ಸಾಗಾಣಿಕೆಯ ವೆಚ್ಚವನ್ನು ಕಡಿಮೆ ಮಾಡಲು ಡಬ್ಬಿಯನ್ನು ಚಪ್ಪಟೆಯಾಗಿ ಅದರ ತುದಿಯ ತುಂಡುಗಳೊಂದಿಗೆ ರವಾನಿಸುವುದೂ ಇದೆ. ಡಬ್ಬಿಯನ್ನು ಸಂಸ್ಕರಿಸುವ ಕಾರ್ಖಾನೆಗಳಲ್ಲಿ ಇದಕ್ಕೆ ಬೇಕಾದ ಡಬ್ಬಿ ಮೈ ಸರಿ ಮಾಡುವ, ಡಬ್ಬಿ ಅಂಚನ್ನು ಬಾಗಿಸಿ ಕೊಕ್ಕೆಯಂತೆ ಮಾಡುವ ಮತ್ತು ದ್ವಿಅಂಚು ಸೇರಿಸುವ ಯಂತ್ರಗಳಿರುತ್ತವೆ. ಈ ಯಂತ್ರಗಳಿಂದ ಚಪ್ಪಟೆಯಾಗಿರುವ ಡಬ್ಬಿಗಳನ್ನು ಕೂಡಲೇ ಬಳಸಲು ಡಬ್ಬಿಗಳಾಗಿ ಪರಿವರ್ತಿಸಬಹುದು. (ಚಿತ್ರ ೮, ೧೧ ಮತ್ತು ೧೨). ಡಬ್ಬಿಗಳನ್ನು ಈ ರೀತಿ ಸರಿ ಮಾಡಿ ಸ್ವಚ್ಛವಾದ ಒಣ ಜಾಗದಲ್ಲಿ ದಾಸ್ತಾನಿಡಬೇಕು.

ಡಬ್ಬಿಗಳು ತಯಾರಾದ ಮೇಲೆ ಸೋರುತ್ತವೆಯೋ ಎಂಬುದನ್ನು ಪರೀಕ್ಷಿಸಬೇಕು. ಇದಕ್ಕೆ ನಿರ್ವಾತ ಅಥವಾ ಹವಾ ಒತ್ತಡದ ಪರೀಕ್ಷಕವನ್ನು ಉಪಯೋಗಿಸಬಹುದು. (ಚಿತ್ರ ೧೦). ಸಣ್ಣ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವಾಗ  ಕೈಯಿಂದ ಪರೀಕ್ಷಿಸುವ ಸಲಕರಣೆಗಳನ್ನು ಉಪಯೋಗಿಸಬಹುದು.

ಡಬ್ಬಿಗಳಲ್ಲಿ  ಅನೇಕ ರೀತಿಯ ಯಾಂತ್ರಿಕ ದೋಷಗಳು ಕಂಡು ಬರುತ್ತವೆ. ಇವುಗಳ ಸೂಕ್ಷ್ಮ ಪರಿಚಯವನ್ನು ಈ ಕೆಳಗೆ ಕೊಡಲಾಗಿದೆ.

ಯಾಂತ್ರಿಕ ದೋಷಗಳು :

) ಅಂಚು ಸೇರಿಸಿದುದು ಉದ್ದವಾಗಿದ್ದು ಕೌಂಟರ್ಸಿಂಕ್ ಸಾಮಾನ್ಯ ಸ್ಥಿತಿಯಲ್ಲಿರುವುದು : ಇದು i) ಮೊದಲನೆಯ ಕ್ರಿಯೆ ಕಡಿಮೆಯಾದುದರಿಂದ

(ii) ಬಾಗಿದ ಮುಚ್ಚುವ ಕೊಕ್ಕೆ. ಚಿಕ್ಕದಾಗಿರುವುದರಿಂದ ಸಂಭವಿಸಬಹುದು.

) ಎರಡನೆಯ ಅಂಚು ಸೇರಿಸುವಿಕೆ ದೀರ್ಘವಾಗಿರುವುದು : ಇದು (i) ಮೊದಲನೆಯ ಕ್ರಿಯೆ ಸಾಕಷ್ಟು ಆಗದೆ ಎರಡನೆಯ ಕ್ರಿಯೆಯ ಉರುಳೆ ಅಂಚನ್ನು ಅತ್ಯಧಿಕ ಚಪ್ಪಟೆ ಮಾಡಲು ಅವಕಾಶ ಕೊಡುವುದರಿಂದ, (ii) ಎರಡನೆಯ ಕ್ರಿಯೆಯ ಉರುಳೆ ಅತಿ ಬಿಗಿಯಾಗಿದ್ದು ಅಂಚು ಸೇರಿಸುವುದು ಅತಿ ಚಪ್ಪಟೆಯಾಗುವುದರಿಂದ, (iii) ಚಕ್ ಸವೆದು ಹೋಗಿರುವುದರಿಂದ, (iv) ತಳದ ಒತ್ತಡ ಅತಿಯಾಗಿರುವುದರಿಂದ, (v) ಎರಡನೆಯ ಕ್ರಿಯೆಯ ಉರುಳೆ ಸವೆದು ಹೋಗಿರುವುದರಿಂದ, (vi) ತಳದ ತಟ್ಟೆಯಲ್ಲಿ ಗ್ರೀಸ್ ಅಥವಾ ಕೊಳೆಯಿದ್ದು ಅಂಚು ಸೇರಿಸುವಾಗ ಡಬ್ಬಿ ಜಾರುವುದರಿಂದ, (vii) ಮುಚ್ಚಳಕ್ಕೆ ಪಟ್ಟಿಯಾಗಿ ಹಾಕಿದ ಸಂಯುಕ್ತ ವಸ್ತು ಒಂದೇ ಪ್ರಕಾರ ಹರಡದಿರುವುದರಿಂದ, (viii) ಯಂತ್ರದ ಹೊರಳು ಸವೆದು ಚಕ್ ಮಧ್ಯಭಾಗದಿಂದ ಸರಿದು ನಿಲ್ಲುವುದರಿಂದ ಸಂಭವಿಸಬಹುದು.

) ಅಂಚು ಸೇರಿಸುವುದು ಸಂಕುಚಿತವಾಗಿ ವೃತ್ತಾಕಾರವಾಗಿರುವುದು : ಇದು (i) ಮೊದಲನೆ ಕ್ರಿಯೆಯ ತೀವ್ರತೆಯು ಅಧಿಕವಾಗಿ ಬಾಗಿದ ಅಂಚಿನ ಸುರುಳಿ ಬಿಗಿಯಾಗಿ ಎರಡನೆಯ ಕ್ರಿಯೆಯ ಉರುಳೆಯ ಒತತಡವನ್ನು ತಡೆಯುವುದರಿಂದ, (ii) ಅಂಚು ಸೇರಿಸುವಾಗ ಅಂಚಿನ ಪೂರ್ತಿ ಉದ್ದಕ್ಕೂ ಒತ್ತಲು, ಎರಡನೆಯ ಕ್ರಿಯೆಯು ಸಾಕಷ್ಟು ಒತ್ತದಿರುವುದರಿಂದ, (iii) ಕೌಂಟರ್‌ಸಿಂಕ್ ಅತಿ ಆಳವಾಗಿರುವುದರಿಂದ ಉಂಟಾಗಬಹುದು,

) ಅಂಚು ಸೇರಿಸುವಿಕೆಯಲ್ಲಿ ಗೆರೆಯಿರುವುದು : ಎರಡನೆಯ ಕ್ರಿಯೆಯ ಉರುಳೆಯ ಸವೆತದಿಂದ ಅಥವಾ ಉಜ್ಜುವಿಕೆಯಿಂದ ಇದು ಸಂಭವಿಸಬಹುದು.

) ಅಂಚು ಸೇರಿಸುವಿಕೆಯಲ್ಲಿ ತುಂಡಾಗುವುದು : ಇದು (i) ಹೆಚ್ಚಾದ ತಳದ ಒತ್ತಡ, (ii) ಉರುಳೆಗಳ ಎತ್ತರವು ಚಕ್‌ಗೆ ಹೋಲಿಸಿದಾಗ ಹೆಚ್ಚಾಗಿದ್ದರೆ, (iii) ಬಿಗಿಯಾದ ಎರಡನೆಯ ಕ್ರಿಯೆಯ ಉರುಳೆ, (iv) ಬದಿಯ ಅಂಚು ಸೇರಿಸುವಾಗ ಹೆಚ್ಚು ಬೆಸುಗೆ ಇರುವುದು, (v) ಡಬ್ಬಿ ಜಾರಿದರೆ ಅಥವಾ ಚೆಕ್‌ನ ಮೇಲೆ ತಿರುಗಿದರೆ ಸಂಭವಿಸಬಹುದು.

) ಅಂಚು ಸೇರಿಸುವಿಕೆಯಲ್ಲಿ ಸೀಳಿರುವುದು ಅಥವಾ ಮೆರಗು ಕಾಣಿಸಿಕೊಳ್ಳುವುದು : ಇದು (i) ಉರುಳೆಗಳು ಜಾರುವುದು, (ii) ಉರುಳೆಗಳ ಮೇಲೆ ಸಮತಟ್ಟಾದ ಜಾಗವಿರುವುದು, (iii) ಉರುಳೆಗಳು ಬಹು ಬಿಗಿಯಾಗಿರುವುದು, (iv) ಘರ್ಷಣೆ ನಿವಾರಿಸುವ ಎಣ್ಣೆ ಹಾಕದಿರುವುದು ಇತ್ಯಾದಿಗಳಿಂದ ಸಂಭವಿಸಬಹುದು.

) ಭಾಗಶಃ ತಪ್ಪಾಗಿ ಅಂಚು ಸೇರಿಸುವುದು ಅಥವಾ ಕೆಳಗೆ ಸರಿದಿರುವುದು :  ಇದು (i) ಡಬ್ಬಿಯಲ್ಲಿರುವ ದೋಷ, (ii) ಮುಚ್ಚಳದ ದೋಷ ಅಥವಾ ಕಿಚ್ಚು, (iii) ಡಬ್ಬಿಯ ಅಂಚು ಅತಿಯಾಗಿ ಕೆಳಗೆ ಬಾಗಿರುವುದು, (iv) ಚಕ್‌ನ ಮಧ್ಯಭಾಗದಲ್ಲಿ ಡಬ್ಬಿ ನಿಲ್ಲದಿರುವುದು ಮುಂತಾದ ಕಾರಣಗಳಿಂದಾಗಬಹುದು.

) ಮೊದಲನೆಯ ಅಂಚು ಸೇರಿಸುವಿಕೆ ಸಡಿಲವಾಗಿರುವುದು :  ಇದು (i) ಮೊದಲನೆ ಕ್ರಿಯೆಯ ಉರುಳೆ ಸಡಿಲವಾಗಿರುವುದು, (ii) ಮೊದಲನೆ ಕ್ರಿಯೆಯ ಉರುಳೆ ಸವೆದಿರುವುದರಿಂದ ಆಗಿರಬಹುದು.

) ಎರಡನೆಯ ಅಂಚು ಸೇರಿಸುವಿಕೆ ಸಡಿಲವಾಗಿರುವುದು : ಇದು (i) ಎರಡನೆಯ ಕ್ರಿಯೆಯ ಉರುಳೆ ಸಡಿಲವಾಗಿರುವುದು, (ii) ಎರಡನೆಯ ಕ್ರಿಯೆಯ ಉರುಳೆ ಸವೆದಿರುವುದರಿಂದಾಗಿ ಆಗಿರಬಹುದು.

೧೦) ಅಂಚು ಸೇರಿಸುವುದರಲ್ಲಿ ಸಮಾನತೆಯಿಲ್ಲದಿರುವುದು : ಇದು (i) ಉರುಳೆ, ಉರುಳೆಗಳ ಮೊಳೆಗಳು ಅಥವಾ ಯಂತ್ರದ ಇನ್ನಾವುದೇ ಭಾಗದ ಸವೆತದಿಂದ, (ii) ಮೊದಲನೆಯ ಮತ್ತು ಎರಡನೆಯ ಕ್ರಿಯೆಯು ಮಿತಿಮೀರಿ ಆಗಿರುವುದರಿಂದಲೂ ಉಂಟಾಗಬಹುದು.

೧೧) ಮೊದಲನೆ ಅಂಚು ಸೇರಿಸುವಿಕೆಯಲ್ಲಿ ಸುಕ್ಕುಗಟ್ಟುವುದು : ಇದು (i) ಮೊದಲನೆ ಕ್ರಿಯೆಯ ಉರುಳೆ ಸಡಿಲವಾಗಿರುವುದು, (ii) ಮೊದಲನೆ ಕ್ರಿಯೆಯ ಉರುಳೆ ಸವೆದಿರುವುದರಿಂದಾಗಬಹುದು.

೧೨) ಎರಡನೆಯ ಅಂಚು ಸೇರಿಸುವಾಗ ಸುಕ್ಕುಗಟ್ಟುವುದು : (i) ಎರಡನೆಯ ಕ್ರಿಯೆಯ ಉರುಳೆ ಸಡಿಲವಾಗಿರುವುದರಿಂದ, (ii) ಎರಡನೆಯ ಕ್ರಿಯೆಯ ಉರುಳೆ ಸವೆದಿರುವುದರಿಂದಾಗಬಹುದು.

೧೩) ಡಬ್ಬಿಯ ಬಾಗಿದ ಅಂಚಿನ ಕೊಕ್ಕೆ ಗಿಡ್ಡವಾಗಿರುವುದು : ಇದಕ್ಕೆ ಕಾರಣಗಳೆಂದರೆ : (i) ಸಾಕಷ್ಟು ತಳದ ಒತ್ತಡ ಇಲ್ಲದಿರುವುದು, (ii) ಮೊದಲನೆ ಕ್ರಿಯೆಯ ಉರುಳೆ ಅತಿ ಬಿಗಿಯಾಗಿರುವುದು, (iii) ಎರಡನೆಯ ಕ್ರಿಯೆಯ ಉರುಳೆ ಅತಿಸಡಿಲವಾಗಿರುವುದು, (iv) ಉರುಳೆ ಮತ್ತು ಚಕ್‌ ಇವುಗಳ ಮಧ್ಯದ ಅಂತರ ಅತಿಯಾಗಿರುವುದು.

೧೪) ಡಬ್ಬಿಯ ಬಾಗಿದ ಅಂಚಿನ ಕೊಕ್ಕೆ ಉದ್ದವಾಗಿರುವುದು : ಇದು ತಳದ ಒತ್ತಡ ಹೆಚ್ಚಾದುದರಿಂದಾಗಿರಬಹುದು. ಇದಕ್ಕನುಗುಣವಾಗಿ ಯಾವಾಗಲೂ ಮುಚ್ಚುವ ಕೊಕ್ಕೆ ಕಡಿಮೆಯಾಗುತ್ತದೆ. ಮುಳ್ಳುಗಳುಂಟಾಗುವ ಸಾಧ್ಯತೆಯೂ ಇರುತ್ತದೆ.

೧೫) ಮುಚ್ಚಳದ ಬಾಗಿದ ಅಂಚಿನ ಕೊಕ್ಕೆ ಗಿಡ್ಡವಾಗಿರುವುದು :  ಇದು (i) ಅಂಚು ಸೇರಿಸುವಾಗಿನ ಮೊದಲನೆ ಕ್ರಿಯೆಯು ಸಾಕಷ್ಟು ಆಗದೆ ಮುಚ್ಚಳದ ಬಾಗಿದ ಅಂಚು ಸೇರಿಸುವಲ್ಲಿ ಅಗತ್ಯವಾದಷ್ಟು ತಿರುಗಿಸದೆ ಇರುವುದು, (ii) ಎರಡನೆ ಕ್ರಿಯೆಯು ಸಾಕಷ್ಟು ಆಗದೆ ಮುಚ್ಚಳದ ಬಾಗಿದ ಅಂಚನ್ನು ಅದರ ಪೂರ್ತಿ ಉದ್ದಕ್ಕೂ ಸರಿಯಾಗಿ ಚಪ್ಪಟೆ ಮಾಡದಿರುವುದು, (iii) ಮುಚ್ಚಳದ ಭಾಗ ಗಿಡ್ಡವಾಗಿರುವುದು, (iv) ಡಬ್ಬಿಯ ಮೈಯ ಬಾಗಿದ ಅಂಚು ಸರಿಯಾಗಿದ್ದರೂ ಮುಳ್ಳುಗಳು ಕಾನಿಸಿಕೊಳ್ಳುವುದರಿಂದ ಸಂಭವಿಸಬಹುದು.

೧೬) ಮುಚ್ಚಳದ ಬಾಗಿದ ಅಂಚಿನ ಕೊಕ್ಕೆ ಉದ್ದವಾಗಿರುವುದು : ಇದು (i) ಅತಿ ಹೆಚ್ಚಾದ ಮೊದಲನೆ ಕ್ರಿಯೆ, (ii) ಆಳವಿಲ್ಲದ ಕೌಂಟರ್ ಸಿಂಕ್, (iii) ತಳದ ಒತ್ತಡ ಸಾಕಷ್ಟು ಇಲ್ಲದಿರುವುದು, ಮೇಲ್ಭಾಗದ ಒಳಗಿನ ಅಂಚು ಸೇರಿಸುವುದರಲ್ಲಿ ಕಡಿತಗಳಿರುವುದು ಮುಂತಾದ ಕಾರಣಗಳಿಂದಾಗಬಹುದು.

೧೭) ಬಾಗಿದ ಮುಚ್ಚಳದ ಅಂಚು ಸುಕ್ಕುಗಟ್ಟಿರುವುದು : ಇದು ಎರಡನೆಯ ಕ್ರಿಯೆಯು ಸಾಕಷ್ಟು ಆಗದೆ ಇರಬಹುದು. ಅಥವಾ ಅಂಚುಗಳು ಸಡಿಲವಾಗಿ ಸೇರಿರುವುದರಿಂದ ಹಾಗೂ ಬಾಗಿದ ಅಂಚು ಬೆಂಡಾಗಿರುವುದರಿಂದ ಆಗಬಹುದು.

೧೮) ಕೌಂಟರ್ಸಿಂಕ್ಆಳವಾಗಿರುವುದು : ಇದು (i) ಮುಚ್ಚಳದ ಬಾಗಿದ ಅಂಚುಗಿಡ್ಡವಾಗಿರುವುದು, (ii) ಚಕ್ ಉರುಳೆಗಳಿಂದ ಬಹು ಕೆಳಮಟ್ಟದಲ್ಲಿರುವುದು, (iii) ತಳದ ಒತ್ತಡ ಹೆಚ್ಚಾಗುವುದು, (iv) ಉರುಳೆ ಮತ್ತು ಚಕ್‌ನ ಮಧ್ಯದ ಅಂತರ ಹೆಚ್ಚಾಗಿರುವುದು, (v) ಚಕ್‌ನ ಬಾಗಿದ ಅಂಚು ಬಹಳ ದಪ್ಪವಾಗಿರುವುದು, (vi) ಅಂಚು ಸೇರಿಸುವುದರ ಮೇಲ್ಭಾಗ ಲಂಬವಾಗಿ ಓಡಾಡುವುದರಿಂದ  ಉರುಳೆಗಳು ಚಕ್‌ನಿಂದ ಮೇಲೆ ಬರಲು ಅವಕಾಶ ಕಲ್ಪಿಸುವುದು, (vii) ತಳದ ತಟ್ಟೆಯನ್ನು ಚಕ್‌ಗೆ ಸಮಾನಾಂತರವಾಗಿ ಕೂರಿಸದಿರುವುದು, (viii) ತಳದ ತಟ್ಟೆಯ ಒಂದು ಪಕ್ಕ ಇನ್ನೊಂದು ಪಕ್ಕಕ್ಕಿಂತ ಹೆಚ್ಚು ಸವೆದು ಕೌಂಟರ್ ಸಿಂಕ್‌ ಸಮವಿಲ್ಲದಿರುವುದು (ಒಂದು ಭಾಗ ಆಳವಾಗಿರುವುದು) ಇವುಗಳಿಂದ ಉಂಟಾಗಬಹುದು.

೧೯) ಕೌಂಟರ್ ಸಿಂಕ್ ಆಳವಿಲ್ಲದಿರುವುದು : ಇದು (i) ಉರುಳೆಗಳಿಗೆ ಚಕ್‌ ಅತಿ ಎತ್ತರವಾಗಿದ್ದು ಉರುಳೆಗಳು ಚಕ್‌ನ ಮುಖವನ್ನು ಸವೆಯಿಸಿ ತೆಳ್ಳಗೆ ಮಾಡುವುದರಿಂದಾಗಿ ಕೌಂಟರ್ ಸಿಂಕ್ ಮೇಲೆ ಪರಿಣಾಮವುಂಟಾಗಬಹುದು, (ii) ಚಕ್‌ ನ ಹೊರ ಚಾಚಿರುವ ಬಾಗಿದ ಅಂಚು ಸವೆಯುವುದರಿಂದಾಗಿ ಸಂಭವಿಸಬಹುದು.

೨೦) ತುಟಿಗಳು ಅಥಾ ಮುಳ್ಳುಗಳು : ಇವು ಒಂದರ ಮೇಲೊಂದು ಮುಚ್ಚಿರುವಲ್ಲಿ ಆಗಾಗ್ಗೆ ಸಂಭವಿಸುತ್ತವೆ. ಕೊಕ್ಕೆಯಾಘಲು ಮುಚ್ಚುವ ಬಾಗಿದ ಅಂಚು ಸಾಕಷ್ಟು ಇರುವುದಿಲ್ಲ. (i) ಮೊದಲನೆಯ ಕ್ರಿಯೆ ಸಾಕಷ್ಟು ಆಗಿರುವುದರಿಂದ, (ii) ಎರಡನೆಯ ಕ್ರಿಯೆ ಅತಿಯಾಗಿರುವುದರಿಂದ, (iii) ತಳದ ಒತ್ತಡ ಅತಿಯಾಗಿರುವುದರಿಂದ, (iv) ಮೊದಲನೆಯ ಕ್ರಿಯೆಯ ಉರುಳೆ ಸವೆದಿರುವುದರಿಂದ, (v) ಒಂದರ ಮೇಲೊಂದು ಮುಚ್ಚಿರುವಲ್ಲಿ ಬೆಸುಗೆ ಹೆಚ್ಚಾಗಿರುವುದರಿಂದ, (vi) ತಗಡು ಬಿರುಸಾಗಿರುವುದರಿಂದಾಗಿ ಸಂಭವಿಸಬಹುದು. 

 ೨೧) ಜಾರುವುದು ಮತ್ತು ತಿರುವುಗಳುಂಟಾಗುವುದು : ಕೆಲವು ವೇಳೆ ಅಂಚು ಸೇರಿಸಿದ ಒಂದು ಭಾಗ ಬಹಳ ಅಗಲ ಮತ್ತು ಸಡಿಲವಾಗುತ್ತದೆ. ಇದು (i) ಚಕ್‌ನ ಸವೆತದಿಂದ, (ii) ತಳದ ಒತ್ತಡ ಸಾಕಷ್ಟು ಇಲ್ಲದಿರುವುದರಿಂದ, (iii) ತಳದ ತಟ್ಟೆ ಅಥವಾ ಚೆಕ್‌ನಲ್ಲಿರುವ ಗ್ರೀಸ್‌ನಿಂದ, (iv) ಮೊದಲನೆಯ ಮತ್ತು ಎರಡನೆಯ ಕ್ರಿಯೆಯು ಅಧಿಕವಾಗಿರುವುದರಿಂದ, (v) ತಳದ ತಟ್ಟೆಯ ಸವೆತದಿಂದುಂಟಾದ ಕಚ್ಚಿನಿಂದ ಸಂಬವಿಸಬಹುದು.

೨೨) ಕಡಿತಗಳು : ಇದು ಡಬ್ಬಿಯ ಮೇಲ್ಭಾಗದ ಅಂಚು ಸೇರಿಸಿದುದರಲ್ಲಿ ಒಳಗಿನ ಅಂಚು ಚೂಪಾಗಿರುವುದು ಅಥವಾ ಕಡಿತಗಳಿರುವುದಕ್ಕೆ ಅನ್ವಯಿಸುತ್ತದೆ. ಇವು ವಿಶೇಷವಾಗಿ ಒಂದರ ಮೇಲೊಂದು ಇರುವ ಜಾಗದಲ್ಲಿ ಕಂಡು ಬರುತ್ತವೆ. ಇದಕ್ಕೆ (i) ಸವೆದ ಚಕ್‌, (ii) ಉರುಳೆ ಸವೆದಿರುವುದು, (iii) ಮೊದಲನೆಯ ಕ್ರಿಯೆಯಲ್ಲಿ ಉರುಳೆ ಅಧಿಕವಾಗುವುದು, (iv) ತಳದ ಒತ್ತಡ ಅಧಿಕವಾಗುವುದು, (v) ಬದಿಯ ಅಂಚು ಸೇರಿಸುವಾಗ ಹೆಚ್ಚು ಬೆಸುಗೆ ಇರುವುದು, (vi) ಮುಚ್ಚಳ ಮತ್ತು ಚಕ್‌ನ  ಮಧ್ಯದಲ್ಲಿ ಡಬ್ಬಿಯು ಜಾರಿ ತಿರುವುಗಳಾಗುವುದು, (vii) ಎರಡನೆಯ ಕ್ರಿಯೆಯ ಉರುಳೆಯನ್ನ ಸರಿಯಾಗಿ ಜೋಡಿಸದೆ ಅದರಲ್ಲೂ ವಿಶೇಷವಾಗಿ ಉರುಳೆ ಜೊತೆ ಹೋಲಿಸಿದಾಗ ಚಕ್‌ ಅತಿ ಕೆಳಗಿರುವುದು ಕೆಲವು ಕಾರಣಗಳು. ಇಂಥ ಸಂದರ್ಭದಲ್ಲಿ ತಗಡು ಸಂಪೂರ್ಣವಾಗಿ ಕತ್ತರಿಸಲ್ಪಟ್ಟು ಸೋರುವ ಸಂಭವವೂ ಇರುತ್ತವೆ.

೨೩) ಡಬ್ಬಿಗಳಲ್ಲಿ ಘಂಟೆಯ ಬಾಯಿಯಾಕಾರ ಅಥವಾ ಅಂಡಾಕೃತಿಯಾಗುವುದು : ತಳದ ಒತ್ತಡ ಹೆಚ್ಚಾದರೆ ಇದು ಸಂಭವಿಸಬಹುದು. 

೨೪) ಮಿತಿಮೀರಿ ಉರುಳಿಸುವುದು : ಮೊದಲನೆಯ ಅಥವಾ ಎರಡನೆಯ ಕ್ರಿಯೆಯಲ್ಲಿ ಇಲ್ಲವೆ ಎರಡೂ ಕ್ರಿಯೆಗಳಲ್ಲಿ ಉರುಳೆಯ ಒತ್ತಡವು ಅಧಿಕವಾದರೆ ಯಂತ್ರದ ಮೇಲೆ ಭಾರ ಹೆಚ್ಚುತ್ತದೆ. ಇದರಿಂದ ಬುಶ್‌ಗಳು, ಚಕ್‌, ಉರುಳೆ ಮತ್ತು ಇತರ ಎಲ್ಲ ಭಾಗಗಳು ಹೆಚ್ಚಾಗಿ ಸವೆಯುತ್ತವೆ. ಕದಿರು ಉರುಳೆಯ ಬಾಳಕೆ ಶೇಕಡಾ ೫೦ರಷ್ಟು ಕಡಿಮೆಯಾಘುತ್ತದಲ್ಲದೆ ಅಂಚು ಸೇರಿಸುವುವಿಕೆಯಲ್ಲಿಯೂ ದೋಷ ಕಂಡು ಬರುವುದು. ಈ ಭಾಗಗಳನ್ನು ಆಗಾಗ್ಗೆ ಬದಲಾಯಿಸುತ್ತ ಇರಬೇಕಾಗುತ್ತದೆ. ಇಷ್ಟೇ ಅಲ್ಲದೆ, ಅತ್ಯಲ್ಪ ಅವಧಿಯಲ್ಲಿಯೇ ಯಂತ್ರಗಳನ್ನು ಸಂಪೂರ್ಣ ಬಿಚ್ಚಿ ಪರೀಕ್ಷಿಸಿ ಕ್ರಮಪಡಿಸಬೇಕಾಗುತ್ತದೆ.

ಡಬ್ಬಿಗಳ ಅಂಚನ್ನು ಸಂಪೂರ್ಣವಾಗಿ ಮತ್ತು ಸರಿಯಾಗಿ ಸೇರಿಸುವುದು ಅತಿ ಮುಖ್ಯವಾಗಿರುವುದರಿಂದ ಯಾವುದೇ ಡಬ್ಬಿ  ಸಂಸ್ಕರಣೆಯ ಸ್ಥಳದಲ್ಲಾಗಲೀ ಅಂಚು ಸೇರಿಸುವ ಉರುಳೆಗಳು ವ್ಯವಸ್ಥಿತವಾಗಿರಬೇಕು. ಅಂಚು ಸೇರಿಸುವುದರಲ್ಲಿ ದೋಷ ಕಂಡು ಬಂದರೆ ಈ ದೋಷಕ್ಕೆ ಕಾರಣವಾದ ಭಾಗವನ್ನು ಹುಡುಕಿ ಅದಕ್ಕೆ ತಕ್ಕ ಮಾರ್ಪಾಡನ್ನು ಮಾಡಬೇಕು. ಚಿತ್ರ ೧೧ ಮತ್ತು ೧೨ ಮತ್ತು ಈ ಮುಂದೆ ಕಾಣಿಸಿದ ಕೆಲವು ಸೂಚನೆಗಳು ಈ ದೃಷ್ಟಿಯಿಂದ ಉಪಯುಕ್ತವೆನಿಸಬಹುದು. 

 • ಡಬ್ಬಿಯ ಬಾಗಿದ ಅಂಚಿನ ಕೊಕ್ಕೆ  ಗಿಡ್ಡವಾಗಿದ್ದರೆ ತಳದ ಒತ್ತಡ ಹೆಚ್ಚು ಕೊಡಬೇಕು.
 • ಮುಚ್ಚಳದ ಬಾಗಿದ ಅಂಚಿನ ಕೊಕ್ಕೆ ಗಿಡ್ಡವಾಗಿದ್ದರೆ ಮೊದಲ ಕ್ರಿಯೆ ಹೆಚ್ಚು ನಡೆಸಬೇಕು.
 • ಬಾಗಿದ ಅಂಚಿನ ಕೊಕ್ಕೆ ಸುಕ್ಕಾಗಿದ್ದರೆ ಎರಡನೆ ಕ್ರಿಯೆ ಹೆಚ್ಚು ನಡೆಸಬೇಕು
 • ಕೌಂಟರ್ ಸಿಂಕ್ ಅತಿ ಆಳವಾಗಿದ್ದರೆ ತಳದ ಒತ್ತಡ ಕಡಿಮೆ ಕೊಡಬೇಕು.
 • ಅಗಲವಾಗಿ ಅಂಚು ಸೇರಿಸಿದ್ದರೆ ಅಥವಾ ಅಂಚು ಸೇರಿಸುವ ಮೈಯ ಬದಿಯ ಜಾಗ ಒಡೆದು ಹೋಗಿದ್ದರೆ ಎರಡನೆ ಕ್ರಿಯೆ ಅಥವಾ ತಳದ ಒತ್ತಡವನ್ನು ಪರಿಸ್ಥಿತಿಗನು ಗುಣವಾಗಿ ಕಡಿಮೆ ಮಾಡಬೇಕು

ನಿಷೇಧಿಸಿರುವ (ಮಾಡಬಾರದ) ಅಂಶಗಳು :

 • ಚಕ್ ಉರುಳೆ ಮತ್ತು ಮುಳ್ಳುಗಳು ಸವೆದಿದ್ದರೆ ಉಪಯೋಗಿಸಬಾರದು
 • ಅತ್ಯಂತ ಬಿಗಿಯಾಗಿ ಉರುಳೆ ಸುತ್ತಬಾರದು
 • ಗ್ರೀಸ್ ಕೆಳಮಟ್ಟದ್ದಾಗಿರಬಾರದು (ಉತ್ತಮ ದರ್ಜೆಯದಾಗಿರಬೇಕು)
 • ಅಂಚು ಸೇರಿಸುವುದರಲ್ಲಿ ಸಂಶಯವಿದ್ದರೆ ಉತ್ಪಾದನೆಯನ್ನು ಮುಂದುವರೆಸಬಾರದು
 • ಯಂತ್ರದ ಭಾಗಗಳನ್ನು ನಿರ್ಮಲವಾಗಿಡಬೇಕು
 • ಮಿತಿಗಿಂತ ಅಧಿಕ ತುಂಬಿದ ಡಬ್ಬಿಗಳ ಅಂಚನ್ನು ಸೇರಿಸುವ ಪ್ರಯತ್ನ ಮಾಡಬಾರದು 

ಮೇಲೆ ವಿವರಿಸಿದ ವಿಧಾನಗಳಲ್ಲಿ ಸ್ವಲ್ಪ ಅಲಕ್ಷ್ಯ ತೋರಿದರೂ ಅಂಚು ಸೇರಿಸುವುದು ಬಿಗಿಯಾಗುವುದಿಲ್ಲವೆಂಬುದು ಅನುಭವದಿಂದ ತಿಳಿದು ಬಂದ ವಿಷಯವಾಗಿದೆ. ಆದರೆ ಮೂಳ ನಿಯಮಾಕವನ್ನು ತಪ್ಪಿದರೆ ಅಪಾಯ ಹೆಚ್ಚುವುದಲ್ಲದೆ ಮುಂದಿನ ನ್ಯೂನತೆ ಲೋಪದೋಷಗಳಿಗೆ ದಾರಿಯಾಗುತ್ತದೆ.

ಡಬ್ಬಿಗಳ ಗಾತ್ರಗಳು : ವಾಣಿಜ್ಯ ಮಟ್ಟದಲ್ಲಿ, ಡಬ್ಬಿಗಳ ಗಾತ್ರಗಳನ್ನು ಅಮೆರಿಕದ ಪದ್ಧತಿಯಲ್ಲಿ ಸೂಚಿಸುತ್ತಾರೆ. ಇದರ ಪ್ರಕಾರ ಡಬ್ಬಿಗಳನ್ನು ಒಂದು ಅಕ್ಷರ ಮತ್ತು ಸಂಖ್ಯೆಯಿಂದ ಸಂಬೋಧಿಸಲಾಗುತ್ತದೆ. ಗಾತ್ರವನ್ನು ಒಂದು ದಶಾಂಶ ಅಂಕಿಗಳಿಗೆ ಸಂಬಂಧಿಸಿದ ಚಿನ್ಹೆಯಿಂದ ಸೂಚಿಸಲಾಗುತ್ತದೆ. ಈ ಚಿನ್ಹೆಯ  ಮೊದಲನೆ ಸಂಖ್ಯಾಂಶವು ಗಾತ್ರವನ್ನು ಪೂರ್ಣ ಅಂಗುಲದಲ್ಲಿ ಸೂಚಿಸುತ್ತದೆ. ಮುಂದಿನ ಎರಡು ಸಂಖ್ಯೆಗಳು ಅಳತೆಯನ್ನು ಒಂದು ಅಂಗುಲದ ೧೬ನೇ ಭಾಗ ಅಂಶವಾಗಿ ತೋರಿಸುತ್ತವೆ. ಈ ರೀತಿ A ೧  ಎತ್ತರ ಡಬ್ಬಿ, ೩ ಅಂಗುಲ ವ್ಯಾಸ ಮತ್ತು ೪ ಅಂಗುಲ ಎತ್ತರವಿದ್ದರೆ ಅದನ್ನು ೩೦೧ X ೪೧೧ ಎಂದು ಸೂಚಿಸಲಾಗುತ್ತದೆ.

ಗಾಜಿನ ಧಾರಕಗಳು :

ಅಮೆರಿಕದ ಮತ್ತು ಇಂಗ್ಲಂಡ್ ಗಳಲ್ಲಿ ಹಲವು ಬಗೆಯ ಗಾಜಿನ ಧಾರಕಗಳು ಬಳಕೆಯಲ್ಲಿವೆ. ಇವುಗಳಲ್ಲಿ ಗಾಜಿನ ಮುಚ್ಚಳವಿರುವ ಗಾಜಿನ ಜಾಡಿ, ಲೋಹದ ಮುಚ್ಚಳವಿರುವ ಮಿತವ್ಯಯದ ಮೇಸಸ್ ಜಾಡಿಗಳು, ಗೋಲ್ಡನ್ ಸ್ಟೇಟ್‌ನ ಅಗಲಬಾಯಿಯ ತವರದ ಮುಚ್ಚಳವುಳ್ಳ ಮೇಸನ್ ಜಾಡಿಗಳು, ಸೂಟಕ್ಸ್ ಜಾಡಿಗಳು, ಬಾಲ್ ಫರ್‌ಫೆಕ್ಟ್ ಮೇಸನ್ ಜಾಡಿಗಳು ಮುಂತಾದವು ಪ್ರಮುಖವಾದವುಗಳು. ಗಾಜಿನ ಸೀಸೆಗಳಿಗೆ ರಬ್ಬರಿನ ಬಳೆ (ರಿಂಗ್, ಉಂಗುರ) ಬೇಕಾಗುತ್ತದೆ.

ಕೋಷ್ಟಕ : ೧೦೦೦ ಡಬ್ಬಿಗಳನ್ನು ತಯಾರಿಸಲು ಬೇಕಾದ ತವರದ ತಗಡಿನ ತೂಕ : (ಇಂಡಿಯಾದ ಮೆಟಲ್ ಬಾಕ್ಸ್ ಕಂಪನಿಯ ಪ್ರಕಾರ – ೧೯೫೪)

ಡಬ್ಬಿಯ ಗಾತ್ರ

ತವರದ ತಗಡಿನ ತೂಕ

A ೨ ೧/೨ (೪೦ X ೧೧೪) ೦.೧೫೭೨ ಟನ್ನು
A ೨ (೩೦೭ X ೪೦೮) ೦.೧೧೭೨ ಟನ್ನು
೧ ಪೌಂಡ್ ಬೆಣ್ಣೆ (೪೦೧ X ೩೦೦) ೦.೧೧೬೨ ಟನ್ನು
೧೨ ಜೌನ್ಸ್ ಹಾಲು (೪೦೧ X ೨೦೭) ೦.೯೪೬ ಟನ್ನು
೧೬ ಜೌನ್ಸ್ ಹಾಲು (೩೦೧ X ೪೦೯) ೦.೦೯೪೬ ಟನ್ನು
೧ ಪೌಂಡ್ ಜಾಮ್ (೩೦೧X ೩೦೩.೫) ೦.೮೬೩ ಟನ್ನು
೧೧ ಜೌನ್ಸ್ ಜಾಮ್ (೩೦೧ X ೩೦೩.೫) ೦.೦೭೯೮ ಟನ್ನು
೮ ಜೌನ್ಸ್ ಚಪ್ಪಟೆ (೩೦೧ X ೨೦೬) ೦.೦೭೨೪ ಟನ್ನು
೫೦೯ X ೭೦೩ ೦.೩೧೫೪ಟನ್ನು
೭೦೦ X ೯೦೦ ೦.೧೫೩೯ ಟನ್ನು

ಈ ಬಳೆಗಳು ಸಾಕಷ್ಟು ದಪ್ಪವಿರಬೇಕು. ಸೀಸೆಗಳಲ್ಲಿ ಯಾವುದೇ ರೀತಿಯ ವಾಸನೆಯೂ ಇರಬಾರದು.  ಮತ್ತು ಸಂಸ್ಕರಣೆಯನ್ನು ತಡೆಯುವಷ್ಟು ಗಟ್ಟಿಯಾಘಿರಬೇಕು. ಪ್ರತಿಬಾರಿ ಸಂಸ್ಕರಿಸುವಾಗಲೂ ಹೊಸ ಬಳೆಗಳ ಅಗತ್ಯವಿರುತ್ತದೆ. ಹಳೆ ಬಳೆಗಿಂತ ಅಷ್ಟು ಉತ್ತಮ ಫಲಿತಾಂಶ ಒದಗುವುದಿಲ್ಲ. ಬಳೆಗಳನ್ನು ತಂಪಾದ ತೇವವಿಲ್ಲದ ಕತ್ತಲೆ ಜಾಗದಲ್ಲಿ ದಾಸ್ತಾನಿಡಬೇಕು. ಇವುಗಳನ್ನು ಉಪಯೋಗಿಸುವ ಮೊದಲು ಕುದಿಸಬಾರದು. ಇದಕ್ಕೆ ಬದಲಾಗಿ ಶೇಕಡಾ ೧.೦೦ ರ ಕುದಿಯುವ ಸೋಡಿಯಂ ಬೈ ಕಾರ್ಬೊನೈಟ್ ದ್ರಾವಣದಲ್ಲಿ ಒಂದು ಕ್ಷಣಕಾಲ ಮುಳುಗಿಸಬೇಕು.