ನೀರಾವರಿಯನ್ನು ಪ್ರಾರಂಭಿಸಲು ಭೂಮಿಯ ಅಭಿವೃದ್ಧಿ

ಮೊದಲ ಬಾರಿಗೆ ನೀರಾವರಿಯನ್ನು ಆರಂಭಿಸಬೇಕೆಂದಾಗ ಬಹುತೇಕ ಪ್ರಸಂಗಗಳಲ್ಲಿ ಭೂಮಿಯನ್ನು ಒಂದಲ್ಲ ಒಂದು ರೀತಿಯಿಂದ ಅಭಿವೃದ್ಧಿಪಡಿಸಿ, ನೀರಾವರಿಗೆ ಸರಿ ಎನಿಸುವಂತೆ ಬದಲಿಸಬೇಕಾಗುತ್ತದೆ. ಎಲ್ಲ ಬಗೆಯ ನೀರಾವರಿ ಪದ್ಧತಿಗಳಿಗೆ ಭೂಮಿಯನ್ನು ಒಂದೇ ವಿಧವಾಗಿ ಸಿದ್ದಗೊಳಿಸುವ ಅವಶ್ಯಕತೆಯೂ ಇಲ್ಲ. ಅದರಂತೆಯೇ ಸ್ವಲ್ಪವೂ ಇಳಿಜಾರು ಇರದಂತೆ ಭೂಮಿಯನ್ನು ಮಟ್ಟ ಮಾಡುವ ಕಾರ್ಯವು ಅನವಶ್ಯಕವಷ್ಟೇ ಅಲ್ಲ, ಹಲವು ಪ್ರಸಂಗಗಳಲ್ಲಿ ಅಪಾಯಕಾರಿಯೂ ಎನಿಸಬಹುದು. ಭೂಮಿಯನ್ನು ನೀರಾವರಿಗೆಂದು ಅಭಿವೃದ್ಧಿಪಡಿಸುವಾಗ ಕೆಳಗಿನ ಸಂಗತಿಗಳನ್ನು ಪರಿಗಣಿಸಬೇಕು.

ಮಣ್ಣಿನ ಗುಣಧರ್ಮಗಳು: ಮೇಲ್ಮಣ್ಣನ್ನಲ್ಲದೇ ಕೆಳಗಿನ ಪದರಗಳಲ್ಲಿರುವ ಮಣ್ಣನ್ನೂ ಪರೀಕ್ಷಿಸಬೇಕು. ಮಣ್ಣಿನ ಆಳ, ಕಣಗಳ ಗಾತ್ರ, ಇತರ ವೈಶಿಷ್ಟ್ಯಗಳು ಮೊದಲಾದ ಗುಣಧರ್ಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಭೂಮಿಯನ್ನು ಎಷ್ಟರಮಟ್ಟಿಗೆ ಮಟ್ಟ ಮಾಡಲು ಸಾಧ್ಯವೆಂಬುದನ್ನು ನಿರ್ಧರಿಸಬಹುದು. ಅನಿವಾರ್ಯ ಪ್ರಸಂಗಗಳಲ್ಲಿ ಬಿಟ್ಟರೆ ಮಣ್ಣನ್ನು ೧೫ ಸೆಂ.ಮೀ.ಗಿಂತ ಆಳವಾಗಿ ಅಗೆದು ಮಟ್ಟ ಮಾಡುವುದು ಸರಿಯಲ್ಲ.

ಭೂಮಿಯ ಇಳುಕಲ್ಲು (ಇಳಿಜಾರು): ಭೂಮಿಯು ಅತಿ ಇಳಿಜಾರಾಗಿದ್ದು, ಮಣ್ಣಿನ ಆಳವು ಕಡಿಮೆ ಇದ್ದರೆ ಭೂಮಿಯನ್ನು ಮಟ್ಟ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಬಾರದು. ಅಂತಹ ಭೂಮಿಯನ್ನು ನೀರಾವರಿಗೆ ಬಳಸದಿರವುದೇ ಉತ್ತಮ. ಒಂದೊಮ್ಮೆ, ಈ ಬಗೆಯ ಭೂಮಿಯನ್ನು ನೀರಾವರಿಗೆ ಉಪಯೋಗಿಸಲೇಬೇಕಾದರೆ ಅನಿವಾರ್ಯತೆಯು ಇದ್ದರೆ ಆ ಭೂ ರಚನೆಗೆ ಹೊಂದಾಣಿಕೆಯಾಗಬಲ್ಲ ನೀರಾವರಿ ಪದ್ಧತಿಯನ್ನು (ಉದಾಹರಣೆಗೆ ಸಿಂಚನ ಪದ್ಧತಿಯನ್ನು) ಅಳವಡಿಸಿಕೊಳ್ಳಬೇಕು.

ಕೆಳಗೆ ತಿಳಿಯಪಡಿಸಿದಂತೆ ಭೂಮಿ ಇಳುಕಲು ನಿರ್ದಿಷ್ಟ ಪ್ರಮಾಣದಲ್ಲಿ ಉಳಿಯುವಂತೆ ಮಟ್ಟ ಮಾಡುವುದು ಸೂಕ್ತವೆಂದು ಕಂಡು ಬಂದಿದೆ.

ಮಣ್ಣಿನ ಪ್ರಕಾರ

ಇಡಬಹುದಾದ ಇಳಿಜಾರಿನ ಪ್ರಮಾಣ (ಶೇಕಡಾ)

ಎರೆಕಣಗಳ ಪ್ರಾಬಲ್ಯವಿರುವ ಮಣ್ಣು ೦.೦೫-೦.೨೫
ಗೋಡು ಮಣ್ಣು   ೦.೦೨-೦.೪೦
ಮರಳು ಮಣ್ಣು   ೦.೨೫-೦.೬೫

ಭೂಮಿಯನ್ನು ಉದ್ದದ ದಿಕ್ಕಿಗೆ ಲಂಬವಾಗಿ ಮಟ್ಟ ಮಾಡಬೇಕು. ಇಳಿಜಾರಿನ ಪ್ರಮಾಣವು ಅಧಿಕವಿದ್ದಾಗ, ಭೂಮಿಯನ್ನು ಸರಿಯಾದ ಆಕಾರದಲ್ಲಿ ಸಣ್ಣಪಟ್ಟಿಗಳಾಗಿ, ವಿಂಗಡಿಸಿ, ಪ್ರತಿ ಪಟ್ಟಿಯನ್ನು ಅದರ ಅಗಲದ ದಿಕ್ಕಿನಲ್ಲಿ ಮಟ್ಟ ಮಾಡಬಾರದು. ಇಳಿಜಾರಿನ ಪ್ರಮಾಣವು ಹೆಚ್ಚಾಗಿದ್ದರೆ ಭೂಮಿಯನ್ನು ಮೆಟ್ಟಿಲಿನ ಆಕಾರಕ್ಕೆ ಪರಿವರ್ತಿಸಿ, ಪ್ರತಿ ಮೆಟ್ಟಿಲಿನಲ್ಲಿರುವ ಭೂಮಿಯನ್ನು ಮಟ್ಟ ಮಾಡಬೇಕು.

ಮಳೆಯ ಸ್ವಭಾವ: ಸಂಬಂಧಿಸಿದ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣ, ಅದರ ತೀವ್ರತೆ, ಮಳೆ ಬರುವ ಒಟ್ಟು ದಿನಗಳು, ಮಳೆಗಳ ಮಧ್ಯಂತರ ಇತ್ಯಾದಿ ಸಂಗತಿಗಳನ್ನು ಅನುಲಕ್ಷಿಸಿ ಇಡಬೇಕಾದ ಇಳಿಜಾರಿನ ಪ್ರಮಾಣವನ್ನು ನಿರ್ಧರಿಸಬೇಕು. ಮಳೆಯ ನೀರು ಅತಿ ವೇಗವಾಗಿ ಹರಿದು, ಮಣ್ಣು ಕೊಚ್ಚಿ ಹೋಗದಂತೆ ಮತ್ತೆ ಅತಿ ಹೆಚ್ಚು ನೀರು ಭೂಮಿಯೊಳಗೆ ಇಂಗಲು ಆಸ್ಪದವು ದೊರೆಯುವಂತಾಗುವಷ್ಟು ಪ್ರಮಾಣದಲ್ಲಿ ಇಳಿಜಾರು ಉಳಿಯುವಂತೆ ನೋಡಿಕೊಳ್ಳಬೇಕು.

ಬೆಳೆಯ ಬೇಕೆಂದಿರುವ ಬೆಳೆಗಳು: ಅಧಿಕ ಆದಾಯ ಮತ್ತು ಆಕರ್ಷಕ ಲಾಭ ಬರುವ ಬೆಳೆಗಳಿಗೆ ಹೆಚ್ಚು ಪರಿಶ್ರಮವನ್ನು ಮಾಡಿ ಭೂಮಿಯನ್ನು ಅಭಿವೃದ್ಧಿಪಡಿಸುವುದು ಅರ್ಥಪೂರ್ಣವೆನಿಸೀತು. ಆದರೆ, ಕಡಿಮೆ ಆದಾಯ ಮತ್ತು ಅಲ್ಪ ಲಾಭವನ್ನು ತರುವ ಬೆಳೆಯನ್ನು ಬೆಳೆಯುವುದಾದರೆ, ಭೂಮಿಯನ್ನು ಮಟ್ಟ ಮಾಡಿ ಅಭಿವೃದ್ಧಿ ಪಡಿಸಲು ಹೆಚ್ಚು ಖರ್ಚು ಮಾಡುವುದು ಜಾಣತನವೆನಿಸಲಾರದು.

ನೀರಾವರಿಯ ಪ್ರಕಾರ: ಪ್ರತಿಯೊಂದು ಬಗೆಯ ನೀರಾವರಿ ಪದ್ಧತಿಗೂ ತನ್ನದೇ ಆದ ಅವಶ್ಯಕತೆಗಳಿವೆ. ಉದಾಹರಣೆಗೆ, ಸೇಚನ ನೀರಾವರಿ ಪದ್ಧತಿಗೆ ಅಥವ ಅನಿಯಂತ್ರಿತ ನೀರಾವರಿಯನ್ನು ಮಾಡುವುದಾದರೆ ಭೂಮಿಯನ್ನು ಮಟ್ಟ ಮಾಡುವ ಅವಶ್ಯಕತೆ ಇಲ್ಲ. ಆದರೆ ಮಡಿ ಪದ್ಧತಿಯ ನೀರಾವರಿಯನ್ನು ಅನುಸರಿಸುವುದಾದರೆ, ಭೂಮಿಯು ಮಟ್ಟವಾಗಿರಬೇಕಾಗಿರುತ್ತದೆ. ಆದ್ದರಿಂದ, ಅನುಸರಿಸಬೇಕೆಂದಿರುವ ನೀರಾವರಿಯ ಪದ್ಧತಿಯನ್ನು ಬದಲಿಸುವ ಪ್ರಸಂಗವಿದ್ದರೆ ಯಾವ ನೀರಾವರಿಯ ಪದ್ಧತಿಗೆ ಅತಿ ಹೆಚ್ಚು ಮಟ್ಟವಾದ ಭೂಮಿಯು ಬೇಕಾಗುತ್ತದೆಯೋ ಆ ಪದ್ಧತಿಗೆ ಅನುಕೂಲವಾಗುವ ರೀತಿಯಲ್ಲಿ ಭೂಮಿಯನ್ನು ಅಭಿವೃದ್ದಿಪಡಿಸುವುದು ಉತ್ತಮವೆನ್ನಬಹುದು.

ನೀರಾವರಿಯ ವಿಧಾನಗಳು: ನೀರಾವರಿಯ ಹಲವು ವಿಧಾನಗಳನ್ನು ಕೆಳಗೆ ತೋರಿಸಿದ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು.

೧. ಭೂಮಿಯ ಮೇಲ್ಭಾಗದಲ್ಲಿ ನೀರನ್ನು ಪೂರೈಸುವ ವಿಧಾನ.

೨. ನೀರು ಮೇಲಿನಿಂದ ಬಂದು ಭೂಮಿಯ ಮೇಲೆ ಬೀಳುವ ವಿಧಾನ.

೩. ಭೂಮಿಯೊಳಗಿನಿಂದ ನೀರನ್ನು ಪೂರೈಸುವ ವಿಧಾನ.

ಮೇಲಿನ ಪ್ರತಿ ವಿಧಾನದಲ್ಲಿಯೂ ಹಲವು ಪದ್ಧತಿಗಳಿವೆ. ಇವುಗಳಲ್ಲಿ ಯಾವ ಪದ್ಧತಿಯನ್ನು ಅನುಸರಿಸಬೇಕೆಂದು ನಿರ್ಧರಿಸುವಾಗ ಹಲವು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತಿವೆ.

ಅ. ಭೂಮಿಯ ಮತ್ತು ಮಣ್ಣಿನ ಗುಣಧರ್ಮಗಳು

i. ಭೂಮಿಯ ಬಾಹ್ಯ ರಚನೆ: ಇಳಿಜಾರಿನ ದಿಕ್ಕು, ಶೇಕಡಾವಾರು ಪ್ರಮಾಣ ಮತ್ತು ಭೂ ರಚನೆ ಇವುಗಳನ್ನು ಪರಿಗಣಿಸಿ ಅನುಸರಿಸಬೇಕಾದ ನೀರಾವರಿ ಪದ್ದತಿಯನ್ನು ನಿರ್ಧರಿಸಬೇಕಾಗುತ್ತದೆ. ಉದಾಹರಣೆಗೆ, ತಗ್ಗು ದಿನ್ನೆಗಳಿರುವ ಭೂಮಿಯಲ್ಲಿ ಸೇಚನ ನೀರಾವರಿ ಇಲ್ಲವೇ ಅನಿಯಂತ್ರಿತ ನೀರು ಪೂರೈಕೆಯ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಒಂದೇ ರೀತಿಯ ಇಳಿಜಾರಿದ್ದು, ಉದ್ದವಾಗಿರುವ ಭೂಮಿಗೆ ಕಾಲುವೆ ಬೋದು ಪದ್ಧತಿ ಇಲ್ಲವೇ ಬದು ಪಟ್ಟಿ ಪದ್ಧತಿಯು ಸೂಕ್ತವೆನಿಸುತ್ತದೆ. ಸಪಾಟು ಮಡಿಪದ್ಧತಿಯ ನೀರಾವರಿಯನ್ನು ಸಮಪಾತಳಿಯಿರುವ ಭೂಮಿಯಲ್ಲಿ ಅನುಸರಿಸಬಹುದು.

ii. ನೀರು, ಮಣ್ಣನ್ನು ಪ್ರವೇಶಿಸುವ ಮತ್ತು ಮಣ್ಣಿನೊಳಗಿಂದ ಬಸಿದು ಹೋಗುವ ವೇಗ: ನಿಧಾನವಾಗಿ ನೀರು ಮಣ್ಣನ್ನು ಪ್ರವೇಶಿಸುವ ಮತ್ತು ವೇಗವಾಗಿ ಬಸಿದು ಕೆಳಗೆ ಇಳಿಯುವ ಮಣ್ಣಿನಲ್ಲಿ ನೀರು ಹೆಚ್ಚು ಸಮಯದವರೆಗೆ ಮಣ್ಣಿನಲ್ಲಿಯೇ ನಿಂತಿರುತ್ತದೆ. ಇಂತಹ ಭೂಮಿಯಲ್ಲಿ ಮಡಿ ಪದ್ಧತಿಯ ನೀರಾವರಿಯು ಸೂಕ್ತವೆನಿಸುತ್ತದೆ.

iii. ಕೆಳಸ್ತರದಲ್ಲಿರಬಹುದಾದ ಗಟ್ಟಿಪದರು, ನೀರಿನ ಪಾತಳಿ ಮತ್ತು ನೀರಿನಲ್ಲಿರುವ ಲವಣದ ಪ್ರಮಾಣ: ನೀರಾವರಿಯ ಜಲದಲ್ಲಿ ಅಧಿಕ ಪ್ರಮಾಣದಲ್ಲಿ ಲವಣಗಳಿದ್ದರೆ ಅಥವಾ ನೀರಿನ ಪಾತಳಿಯು ಆಳವಾಗಿದಿದ್ದರೆ ಇಲ್ಲವೇ ನೀರನ್ನು ಬಸಿಯಲು ಬಿಡದಂತಹ ಗಟ್ಟಿ ಪದರು ಸನಿಹದಲ್ಲಿಯೇ ಇದ್ದರೆ ತೆಳುವಾಗಿ ನೀರನ್ನು ಒದಗಿಸಲು ಸಾಧ್ಯವಾಗುವಂತಹ ಪದ್ಧತಿಯನ್ನು ಅನುಸರಿಸಬೇಕು.

iv. ಮಣ್ಣಿನಲ್ಲಿರುವ ಲವಣಾಂಶಗಳು: ಮಣ್ಣಿನಲ್ಲಿರುವ ಲವಣದ ಪ್ರಮಾಣವು ಅಧಿಕವಾಗಿದ್ದರೆ ಪ್ರತಿ ಕಂತಿಗೂ ಹೆಚ್ಚು ಪ್ರಮಾಣದ ನೀರನ್ನುಪೂರೈಸಲು ಅನುಕೂಲವುಳ್ಳ ಪದ್ಧತಿಯನ್ನು ಅನುಸರಿಸಬೇಕು. ಇದರಿಂದ, ಲವಣಗಳು ಭೂಮಿಯ ಆಳಕ್ಕೆ ಬಸಿದು ಹೋಗಲು ಆಸ್ಪದವುಂಟಾಗುತ್ತದೆ.

v. ಕಣಗಳ ರಚನೆ: ಮಣ್ಣಿನ ಕಣಗಳ ರಚನೆಯು ಸ್ಥಿರವಾಗಿರದ ಮಣ್ಣಿನಲ್ಲಿ ರಚನೆಯನ್ನು ಆದಷ್ಟು ಕಾಪಾಡಬಲ್ಲ ನೀರಾವರಿ ಪದ್ದತಿಯನ್ನು ಅನುಸರಿಸಬೇಕು. ಬೋದು ಕಾಲುವೆ ಪದ್ಧತಿ ಇಲ್ಲವೇ ಏರು ಮಡಿ ಪದ್ಧತಿಗಳು ಪ್ರಶಸ್ತವೆನ್ನಬಹುದು.

. ಬೆಳೆಗಳಿಗೆ ಸಂಬಂಧಿಸಿದ ಸಂಗತಿಗಳು: ಕೆಳಗಿನ ವಿಷಯಗಳನ್ನು ಪರಿಗಣಿಸಿ ಸೂಕ್ತ ಪದ್ಧತಿಯನ್ನು ಆರಿಸಿಕೊಳ್ಳಬೇಕು.

i. ಬೆಳೆಯನ್ನು ನೆಡುವ ಪದ್ಧತಿ: ಬೀಜಗಳನ್ನು ಚೆಲ್ಲುವ ಅಥವಾ ಸಾಲುಗಳಲ್ಲಿ ಬಿತ್ತುವ ಇಲ್ಲವೇ ಸಸಿಗಳನ್ನು ನಾಟಿ ಮಾಡುವ ಪದ್ಧತಿ.

ii. ಬೇರುಗಳ ಬೆಳವಣಿಗೆಯ ರೀತಿ: ಸಸ್ಯದ ಬೇರುಗಳ ಆಳ, ಪಸರಿಸುವ ರೀತಿ ಇತ್ಯಾದಿ.

iii. ಬೆಳವಣಿಗೆಯ ರೀತಿ: ಸಸ್ಯಗಳು ಭೂಮಿಗೆ ಲಂಬವಾಗಿ ಬೆಳೆಯುತ್ತವೆಯೇ ಅಥವಾ ಸಮಾನಾಂತರವಾಗಿ ಬೆಳೆಯುತ್ತವೆಯೇ ಇತ್ಯಾದಿ.

iv. ಆರ್ಥಿಕ ಮಹತ್ವದ ಸಸ್ಯ ಭಾಗ: ಭೂಮಿಯೊಳಗೆ ಅಭಿವೃದ್ಧಿಗೊಳ್ಳುವ ಬೇರುಗಳು ಇಲ್ಲವೇ ಗಡ್ಡೆಗಳು, ಭೂಮಿಯ ಮೇಲ್ಭಾಗದಲ್ಲಿ ಬೆಳೆಯುವ ಎಲೆಗಳು, ಹೂವುಗಳು ಹಣ್ಣುಗಳು, ಕಾಂಡಗಳು ಇತ್ಯಾದಿಗಳು.

v. ಬೆಳೆಗೆ ಕೊಡಬೇಕಾದ ಒಟ್ಟು ನೀರಿನ ಪ್ರಮಾಣ: ಕಡಿಮೆ, ಮಧ್ಯಮ, ಅಧಿಕ ಇತ್ಯಾದಿ.

vi. ನಿಂತ ನೀರನ್ನು ಮತ್ತು ಆಮ್ಲಜನಕದ ಕೊರತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ.

. ನೀರಾವರಿಗೆ ಲಭ್ಯವಿರುವ ನೀರಿನ ಸಂಗ್ರಹ ಮತ್ತು ಜಲದ ಪ್ರವಾಹ: ನೀರಾವರಿ ಜಲದ ಸಮಗ್ರ ಮತ್ತು ನೀರಿನ ಪ್ರವಾಹದ ಪ್ರಮಾಣ ಇವುಗಳನ್ನು ಪರಿಗಣಿಸಿ ನೀರಾವರಿ ಪದ್ಧತಿಯನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ, ನೀರಿನ ಪ್ರವಾಹವು ಕಡಿಮೆ ಇರುವಾಗ ಬದು ಕಾಲುವೆ ಪದ್ಧತಿಯನ್ನು ಅನುಸರಿಸುವುದು ಉತ್ತಮ. ಅದರ ಬದಲು ಸಪಾಟು ಮಡಿ ಇಲ್ಲವೇ ಬದು ಪಟ್ಟಿ ಪದ್ಧತಿಯನ್ನು ಅನುಸರಿಸಿದರೆ ನೀರಾವರಿ ಜಲವು ಮುಂದೆ ಸಾಗದೇ ಮಡಿಯ ಅಥವಾ ಬದು ಪಟ್ಟಿಯ ಆರಂಭದಲ್ಲೇ ಬಹುಪಾಲು ನೀರು ಇಂಗಿ ಮುಂದಿನ ಭಾಗಕ್ಕೆ ಕಡಿಮೆ ನೀರು ದೊರೆಯಬಹುದು.

ನೀರಿನಲ್ಲಿ ಲವಣಗಳಿದ್ದರೆ ಅಧಿಕ ಪ್ರಮಾಣದಲ್ಲಿ ನೀರನ್ನು ಪೂರೈಸಬೇಕಾದ ನೀರಾವರಿ ಪದ್ಧತಿಯನ್ನು ಆರಿಸಿಕೊಳ್ಳುವುದು ಉತ್ತಮ. ಇದರಿಂದ ಲವಣಗಳು ಮಣ್ಣಿನಾಳಕ್ಕೆ ಬಸಿದು ಹೋಗಲು ಸಾಧ್ಯವಾಗಿ, ಮಣ್ಣಿನ ಮೇಲ್ಭಾಗದಲ್ಲಿ ಲವಣಗಳು ಸಂಗ್ರಹವಾಗುವುದನ್ನು ಬಹುಮಟ್ಟಿಗೆ ತಪ್ಪಿಸಬಹುದು.

ಭೂಮಿಯ ಮೇಲ್ಭಾಗದಲ್ಲಿ ನೀರನ್ನು ಪೂರೈಸುವ ವಿಧಾನಗಳು: ಈ ವಿಧಾನದಡಿ ಬರುವ ಹಲವು ಬಗೆಯ ನೀರಾವರಿ ಪದ್ಧತಿಗಳ ವಿವರಗಳು ಕೆಳಗಿನಂತಿವೆ.

ಅನಿಯಂತ್ರಿತ ನೀರು ಪೂರೈಕೆ ಪದ್ಧತಿ (Flooding): ಯಾವುದೇ ವ್ಯವಸ್ಥಿತ ರೀತಿಯಿಂದ ಭೂಮಿಯನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಎತ್ತರ ಪ್ರದೇಶದಲ್ಲಿರುವ ಕಾಲುವೆಯಿಂದ ನೀರನ್ನು ಹೊರಬಿಡಲಾಗುತ್ತದೆ. ಭೂಮಿಯ ಇಳಿಜಾರಿನೊಡನೆ ಎಲ್ಲೆಡೆ ನೀರು ಪಸರಿಸುತ್ತದೆ. (ಚಿತ್ರ ೧೭). ಈ ಪದ್ಧತಿಯನ್ನು ಮುಂದಿನ ಪರಿಸ್ಥಿತಿಗಳಲ್ಲಿ ಬಳಸಬಹುದು.

 • ಭೂಮಿಯು ಸಮ ಪಾತಳಿಯಲ್ಲಿರದೇ, ತಗ್ಗು ದಿಣ್ಣೆಗಳಿಂದ ಕೂಡಿದ್ದು, ಬೇರೆ ರೀತಿಯ ನೀರಾವರಿ ಪದ್ಧತಿಯನ್ನು ಅನುಸರಿಸಲು ಸುಲಭ ಸಾಧ್ಯವೆನಿಸಿದಾಗ
 • ಬೆಳೆಗೆ ಒಂದೆರಡು ಬಾರಿ ಮಾತ್ರ ನೀರನ್ನೊದಗಿಸುವ ಪ್ರಸಂಗವಿದ್ದಾಗ,
 • ಹವಾಮಾನ ವೈಪರೀತ್ಯಗಳಿಂದ ಬೆಳೆಗೆ ಅನಿರೀಕ್ಷಿತವಾಗಿ ನೀರನ್ನು ಪೂರೈಸಬೇಕಾದಾಗ,
 • ನೀರಾವರಿ ಜಲವು ದೊಡ್ಡ ಪ್ರಮಾಣದಲ್ಲಿ ಲಭ್ಯವಿದ್ದಾಗ ಮತ್ತು
 • ಸುಲಭವಾಗಿ ನೀರು ದೊರೆಯುವಂತಿರುವಾಗ

ಗುಣಗಳು:

 • ನೀರಾವರಿಗಾಗಿ ಭೂಮಿಯನ್ನು ಯಾವುದೇ ರೀತಿಯಿಂದ ಸಿದ್ಧಪಡಿಸುವುದಿಲ್ಲವಾದ್ದರಿಂದ, ಆ ಭೂಮಿಯಲ್ಲಿ ಬದುಗಳಾಗಲೀ, ಕಾಲುವೆಗಳಾಗಲೀ ನಿರ್ಮಾಣಗೊಳ್ಳುವುದಿಲ್ಲ. ಆದ್ದರಿಂದ, ಬಿತ್ತಲು ಮತ್ತು ಮಧ್ಯಂತರ ಬೇಸಾಯವನ್ನು ಮಾಡಲು ಎತ್ತುಗಳಿಂದ ಎಳೆಯುವ ಇಲ್ಲವೇ ಯಂತ್ರಚಾಲಿತ ಉಪಕರಣಗಳನ್ನು ನಿರಾತಂಕವಾಗಿ ಉಪಯೋಗಿಸಬಹುದು.
 • ನೀರಾವರಿಗೆಂದು ಭೂಮಿಯನ್ನು ಸಿದ್ಧಪಡಿಸಲು ಇತರ ಪದ್ಧತಿಗಳಲ್ಲಿ ಇರುವಂತೆ ಇಲ್ಲಿ ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ.

ಅವಗುಣಗಳು

 • ನೀರು ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ.
 • ಭೂಮಿಯ ಎಲ್ಲಡೆ ನೀರು ಸಮನಾಗಿ ಪಸರಿಸುವುದಿಲ್ಲ. ತಗ್ಗುಗಳಿರುವಲ್ಲಿ ಹೆಚ್ಚು ನೀರು ನಿಂತರೆ ದಿಣ್ಣೆಗಳಿರುವಲ್ಲಿ ನೀರು ತಲುಪುವುದೇ ಇಲ್ಲ.
 • ನೀರಿನ ನಿಯಂತ್ರಣವು ದುಃಸಾಧ್ಯವೆನಿಸುತ್ತದೆ. ದಿಣ್ಣೆಯ ಪ್ರದೇಶಕ್ಕೆ ನೀರು ಸಿಗುವಂತೆ ಮಾಡಲು ಮತ್ತು ತಗ್ಗುಗಳಿರುವಲ್ಲಿ ಹೆಚ್ಚು ನೀರು ನಿಲ್ಲದಂತೆ ಮಾಡಲು, ಆಳುಗಳು ಬಹಳ ಪರಿಶ್ರಮ ಪಡಬೇಕಾಗುತ್ತದೆ. ಹೀಗಾಗಿ, ನೀರಾವರಿಯನ್ನು ಮಾಡಲು ಹೆಚ್ಚು ಸಂಖ್ಯೆಯಲ್ಲಿ ಆಳುಗಳು ಬೇಕು.
 • ಕೆಲಮಟ್ಟಿಗೆ ಭೂ ಸವಕಳಿಯು ಆಗುತ್ತದೆ.

ಸೂಕ್ತ ಬೆಳೆಗಳು: ಗೋಧಿ, ಸೇಂಗಾ ಮತ್ತು ಕಡಿಮೆ ಅಂತರದಲ್ಲಿ ಬಿತ್ತುವ ಬೆಳೆಗಳು.

ಬದುಪಟ್ಟಿ ಪದ್ಧತಿ (Border strip): ಬದು ಪಟ್ಟಿ ಪದ್ಧತಿಯ ನೀರಾವರಿಯಲ್ಲಿ, ಭೂಮಿಯನ್ನು ಕಡಿಮೆ ಅಗಲದ, ಉದ್ದವಾಗಿರುವ ಪಟ್ಟಿಗಳನ್ನಾಗಿ ವಿಭಾಗಿಸಿ, ಪ್ರತಿ ಪಟ್ಟಿಯ ಸುತ್ತಲೂ ೧೫ ರಿಂದ ೩೦ ಸೆಂ.ಮೀ. ಎತ್ತರದ ಸಣ್ಣ ಬದುಗಳನ್ನು ನಿರ್ಮಿಸಬೇಕು. ಪಟ್ಟಿಯ ಉದ್ದದ ದಿಕ್ಕಿನಲ್ಲಿ ನಿರ್ದಿಷ್ಟ ಪ್ರಮಾಣದ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು. ಆದರೆ, ಪಟ್ಟಿಯ ಅಗಲದಲ್ಲಿ ಸಮಪಾತಳಿಯಾಗುವಂತೆ ಮಟ್ಟ ಮಾಡಬೇಕು. ಈ ಬಗೆಯ ಭೂ ರಚನೆಯಿಂದ, ಬದು ಪಟ್ಟಿಯ ಮೇಲ್ಭಾಗವನ್ನು ಪ್ರವೇಶಿಸಿದ ನೀರು ತೆಳುವಾದ ಹಾಳೆಯಂತೆ ಸಾಗುತ್ತ ಕೊನೆಯನ್ನು ತಲುಪುತ್ತದೆ.

i. ಬದು ಪಟ್ಟಿಯ ಅಗಲ: ಪಟ್ಟಿಯ ಇಳಿಜಾರು ಮತ್ತು ಹರಿದು ಬರುವ ನೀರಿನ ಪ್ರಮಾಣ (ಪ್ರತಿ ಸೆಕೆಂಡಿಗೆ ಲೀಟರುಗಳಲ್ಲಿ) ಗುರುತಿಸಿ ಪಟ್ಟಿಯ ಅಗಲವನ್ನು ನಿರ್ಧರಿಸಬೇಕು. ನೀರಿನ ಪ್ರಮಾಣವು ಅಧಿಕಗೊಂಡಂತೆ, ಪಟ್ಟಿಯ ಅಗಲವನ್ನು ಹೆಚ್ಚಿಸಬೇಕು. ಅದರಂತೆಯೇ, ಪಟ್ಟಿಯ ಇಳಿಜಾರು ಅಧಿಕವಾದಂತೆ, ಅಗಲವನ್ನು ಕಡಿಮೆ ಮಾಡಬೇಕು. ಸಾಮಾನ್ಯವಾಗಿ, ಅಗಲವನ್ನು ೩ ಸೆಂ.ಮೀ.ಗಳಿಂದ ೧೫ ಮೀ. ಇಡುವ ರೂಢಿ ಇದೆ. ಅಗಲವನ್ನು ಕಡಿಮೆ ಮಾಡಿದರೆ, ಬದುಗಳಿಗಾಗಿ ಹೆಚ್ಚು ಪ್ರದೇಶವು ವ್ಯರ್ಥವಾಗಿ ವ್ಯಯವಾಗುತ್ತದೆ. ಅಲ್ಲದೆ ಭೂಮಿಯನ್ನು ನೀರಾವರಿಗೆ ಸಿದ್ಧಪಡಿಸುವ ಖರ್ಚು ಅಧಿಕಗೊಳ್ಳುತ್ತದೆ.

ii. ಬದುಪಟ್ಟಿಯ ಉದ್ದ ಮತ್ತು ಇಳಿಜಾರು : ಪಟ್ಟಿಯ ಅಗಲವು ಒಂದೇ ಪಾತಳಿಯಲ್ಲಿರಬೇಕೆಂದು ಈಗಾಗಲೇ ಸೂಚಿಸಿದೆ. ಅತಿ ಕಡಿಮೆ ಪ್ರಮಾಣದ ಇಳಿಜಾರು ಇದ್ದರೂ ನಡೆದೀತು. ಆದರೆ, ಉದ್ದದಲ್ಲಿ ಸೂಕ್ತವಾದ ಮತ್ತು ಒಂದೇ ಪ್ರಮಾಣದ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು. ಇಳಿಜಾರಿನ ಪ್ರಮಾಣವು ಮಿತಿಯನ್ನು ಮೀರಿದರೆ, ಪಟ್ಟಿಯನ್ನು ಪ್ರವೇಶಿಸಿದ ನೀರು ವೇಗದಿಂದ ಹರಿದು ಹೋಗಿ ಕೊನೆಯನ್ನು ಬೇಗನೆ ತಲುಪುತ್ತದೆ. ಹೀಗಾದರೆ, ಪಟ್ಟಿಯ ಮೇಲ್ಭಾಗದಲ್ಲಿರುವ ಬೆಳೆಗೆ ಅತಿ ಕಡಿಮೆ ನೀರು ದೊರೆತು, ಪಟ್ಟಿಯ ಕೆಳಭಾಗದಲ್ಲಿರುವ ಬೆಳೆಗೆ ಅವಶ್ಯಕತೆಗಿಂತ ಅಧಿಕ ನೀರು ಪೂರೈಕೆಯಾಗುತ್ತದೆ. ಈ ರೀತಿಯ ಅಸಮಾನ ನೀರಿನ ಪೂರೈಕೆಯು ಬೆಳೆಯ ಅಭಿವೃದ್ಧಿ ಮತ್ತು ಇಳುವರಿಯ ದೃಷ್ಟಿಯಿಂದ ಅನಪೇಕ್ಷಿತ ಎಂಬುದು ಸುಸ್ಪಷ್ಟ. ತದ್ವಿರುದ್ಧವಾಗಿ, ಅತಿ ಕಡಿಮೆ ಇಳಿಜಾರಿದ್ದರೆ ಅಥವಾ ಭೂಮಿಯು ಸಪಾಟಾಗಿದ್ದರೆ, ನೀರು ಬದುಪಟ್ಟಿಯಲ್ಲಿ ನಿಧಾನವಾಗಿ ಹರಿಯಬೇಕಾಗುತ್ತದೆಯಾದ್ದರಿಂದ, ಪಟ್ಟಿಯ ಮೇಲ್ಭಾಗದಲ್ಲಿ ಇರುವ ಬೆಳೆಗೆ ಅವಶ್ಯಕತೆಗಿಂತ ಹೆಚ್ಚು ನೀರು ದೊರೆತು, ಕೆಳಭಾಗದಲ್ಲಿರುವ ಬೆಳೆಗೆ ನೀರಿನ ಕೊರತೆಯುಂಟಾಗಬಹುದು. ಈ ಪರಿಸ್ಥಿತಿಯೂ ಅನಪೇಕ್ಷಿತವಾದದ್ದೇ.

ಮೇಲಿನ ಸಂಗತಿಗಳನ್ನು ಅನುಲಕ್ಷಿಸಿ, ವಿವಿಧ ಪ್ರಕಾರದ ಮಣ್ಣಿನಲ್ಲಿ, ಕೆಳಗೆ ಸೂಚಿಸಿದ ಬದು ಪಟ್ಟಿಯ ಉದ್ದ ಮತ್ತು ಇಳಿಜಾರನ್ನಿಡುವುದು ಸೂಕ್ತವೆನಿಸಿದೆ.

ಅ.ಸಂ.

ಮಣ್ಣಿನ ಪ್ರಕಾರ

ಶೇಕಡಾವಾರು

ಉದ್ದ(ಮೀ.ಗಳು)

೧. ಮರಳು ಮತ್ತು ಮರಳು ಗೋಡು ೦.೨೫ – ೦.೬೦ ೬೦ ರಿಂದ ೧೨೦
೨. ಗೋಡು ೦.೨ – ೦.೪೦ ೧೦೦ ರಿಂದ ೧೮೦
೩. ಎರೆಗೋಡು ಮತ್ತು ಎರೆ ೦.೦೫-೦.೨೦ ೧೫೦ ರಿಂದ ೩೦೦

iii. ನೀರಿನ ಪ್ರಮಾಣ: ನೀರಾವರಿ ಜಲವು ಮಣ್ಣನ್ನು ಪ್ರವೇಶಿಸುವ ವೇಗ ಮತ್ತು ಬದು ಪಟ್ಟಿಯ ಅಗಲ ಇವುಗಳಿಗೂ ಪ್ರತಿ ಸೆಕೆಂಡಿಗೆ ಹರಿದು ಬರುವ ನೀರಾವರಿ ಜಲದ ಪ್ರಮಾಣಕ್ಕೂ ನಿಕಟವಾದ ಸಂಬಂಧವಿದೆ. ಮರಳು ಮಣ್ಣಿನಲ್ಲಿ ಒಳಬಂದ ನೀರು ಮುಂದೆ ಹರಿಯುವುದಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯೇ ಹೆಚ್ಚು. ಇಂತಹ ಮಣ್ಣಿಗೆ ನೀರನ್ನು ಪೂರೈಸುವಾಗ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಬರಬೇಕು. ಇಲ್ಲವಾದರೆ ಪಟ್ಟಿಯ ಮೇಲ್ಭಾಗದಲ್ಲಿಯೇ ಹೆಚ್ಚು ನೀರು ಕೆಳಗೆ ಬಸಿದು ಅಲ್ಲಿರುವ ಬೆಳೆಗೆ ಅವಶ್ಯಕತೆಗಿಂತ ಅಧಿಕ ನೀರು ದೊರೆತು, ಕೆಳಭಾಗದಲ್ಲಿರುವ ಬೆಳೆಗೆ ನೀರಿನ ಕೊರತೆಯಾಗುವ ಸಾಧ್ಯತೆ ಇದೆ.

ಇದಕ್ಕೆ ವಿರುದ್ಧವಾಗಿ ಎರೆಮಣ್ಣಿನಲ್ಲಿ ನೀರು ದೊಡ್ಡ ಪ್ರಮಾಣದಲ್ಲಿ ಹರಿದು, ಒಳಬಂದರೆ, ಕೆಳ ಭಾಗದಲ್ಲಿರುವ ಬೆಳೆಗೆ ಅಧಿಕ ನೀರು ದೊರೆಯುತ್ತದೆಯಲ್ಲದೇ, ನೀರು ಬದು ಪಟ್ಟಿ ಗುಂಟ ವೇಗವಾಗಿ ಹರಿಯುವಾಗ ಮಣ್ಣು ಕೊಚ್ಚಿ ಹೋಗಿ ಕೆಳಭಾಗದಲ್ಲಿ ಸಂಗ್ರಹವಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಕೋಷ್ಟಕ ೧೧ರಲ್ಲಿ ಕೊಟ್ಟ ವಿವರಗಳು ಪ್ರಯೋಜನಕಾರಿ ಎನಿಸುವುದು.

ಕೋಷ್ಟಕ ೧೧: ನೀರಾವರಿ ಜಲವು ಮಣ್ಣನ್ನು ಪ್ರವೇಶಿಸುವ ವೇಗಕ್ಕನುಗುಣವಾಗಿ ಇಡಬೇಕಾದ ಸೂಚಿತ ಬದುಪಟ್ಟಿಯ ಇಳಿಜಾರು ಮತ್ತು ಇರಬೇಕಾದ ನೀರಿನ ಪ್ರವಾಹ.

ಅ. ಸಂ.

ಮಣ್ಣಿನ ಮಾದರಿ ಜಲವು ಮಣ್ಣನ್ನು ಪ್ರವೇಶಿಸುವ ವೇಗ ಪ್ರತಿ ಗಂಟೆಗೆ ಸೆಂ.ಮೀ.ಗಳಲ್ಲಿ)

ನೀರಾವರಿ ಇಳಿಜಾರು (ಶೇಕಡಾ)

ಬದುಪಟ್ಟಿಯ ವೇಗ

ಸೂಚಿತ ಪ್ರವಾಹ (ಪ್ರತಿ ಮೀ. ಅಗಲಕ್ಕೆ) ಪ್ರತಿ ಸೆಕೆಂಡಿಗೆ ಲೀಟರುಗಳು)

೧. ಮರಳು ೨.೫ ೦.೨-೦.೬ ೭-೧೫
ಗೋಡು ಮರಳು ೧.೮-೨.೫ ೦.೨-೦.೬ ೫-೧೦
ಮರಳುಗೋಡು ೧.೨-೧.೮ ೧.೨-೦.೬ ೪-೭
ಎರೆ ಗೋಡು ೧.೬-೦.೮ ೦.೧೫-೦.೪ ೨-೪
ಎರೆ ೦.೨-೦.೬ ೧.೧-೦.೨ ೨-೪

ಬದು ಪಟ್ಟಿಗಳನ್ನು ಭೂಮಿಯ ಇಳಿಜಾರಿನೊಂದಿಗೆ ನಿರ್ಮಿಸಬಹುದು. ಆದರೆ, ಪಟ್ಟಿಗಳನ್ನು ನಿರ್ಮಿಸಲು ಭೂಮಿಯನ್ನುದೊಡ್ಡ ಪ್ರಮಾಣದಲ್ಲಿ ಮಟ್ಟ ಮಾಡುವ ಅವಶ್ಯಕತೆ ಇದ್ದರೆ ಈ ಕಾರ್ಯಕ್ಕೆ ಹೆಚ್ಚಿನ ಹಣವು ಖರ್ಚಾಗುವುದಲ್ಲದೇ, ಮಣ್ಣಿನ ಫಲವತ್ತತೆಯ ಮೇಲೂ ದುಷ್ಪರಿಣಾಮಗಳುಂಟಾಗಬಹುದು. ಇಂತಹ ಸಂದರ್ಭವಿದ್ದಾಗ, ಮುಖ್ಯ ಇಳಿಜಾರಿಗೆ ಅಡ್ಡಲಾಗಿ, ಸಮ ಪಾತಳಿಯೊಂದಿಗೆ ಬದು ಪಟ್ಟಿಗಳನ್ನು ನಿರ್ಮಿಸುವುದು ಸೂಕ್ತ. ಸಮ ಪಾತಳಿಯ ಒಡ್ಡುಗಳನ್ನು ನಿರ್ಮಿಸುವಾಗಲೂ ಮೇಲೆ ವಿವರಿಸಿದ ನಿಯಮಗಳನ್ನೇ ಅನುಸರಿಸಬೇಕು.

ಬದು ಪಟ್ಟಿಗಳನ್ನು ನಿರ್ಮಿಸುವಾಗ, ಬದುಗಳನ್ನು ಹಾಕಲು ಬದು ನಿರ್ಮಾಪಕ (Bundformer) ಉಪಕರಣಗಳನ್ನು ಬಳಸಬಹುದು. ಇದರ ಬದಲು, ಕುಳ ಮತ್ತು ಅದರ ಆಧಾರದ ಕೋಲುಗಳನ್ನು, ತೆಗೆದ, ಕುಂಟೆಯ ಮರದ ದಿಮ್ಮಿಯನ್ನೂ ಈ ಕೆಲಸಕ್ಕೆ ಉಪಯೋಗಿಸಬಹುದು. ದಿಮ್ಮಿಯ ಭಾರವನ್ನು ಹೆಚ್ಚಿಸಲು, ಅದರ ಮೇಲೆ ಚಾಲಕನು ನಿಂತುಕೊಂಡಿರಬೇಕಾಗುತ್ತದೆ.

ಗುಣಗಳು

 • ಎತ್ತುಗಳು ಎಳೆಯಬಲ್ಲ, ಸರಳ ಉಪಕರಣಗಳ ಸಹಾಯದಿಂದ ಬದು ಪಟ್ಟಿಗಳನ್ನು ನಿರ್ಮಿಸಬಹುದು. ಆದ್ದರಿಂದ, ಇತರ ಕೆಲವು ಪದ್ಧತಿಗಳಿಗಿಂತ ಇದಕ್ಕೆ ಬೇಕಾಗುವ ಆಳಿನ ಖರ್ಚು ಕಡಿಮೆ.
 • ಬೆಳೆಗೆ ಕೆಲವೇ ನೀರಾವರಿಗಳನ್ನು ಮಾತ್ರ ಪೂರೈಸುವ ಸಂದರ್ಭವಿದ್ದಾಗ, ಈ ಪದ್ಧತಿಯು ಹೆಚ್ಚು ಪ್ರಯೋಜನಕಾರಿ ಎನ್ನಬಹುದು.
 • ನಿಯಮಾನುಸಾರ ಬದು ಪಟ್ಟಿಗಳನ್ನು ನಿರ್ಮಿಸಿದರೆ, ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೂ ನೀರನ್ನು ಸಮರ್ಥವಾಗಿ ನಿಯಂತ್ರಿಸಬಹುದು.

ಅವಗುಣಗಳು

 • ಏರು ತಗ್ಗುಗಳ ಪ್ರಮಾಣವು ಅಧಿಕವಾಗಿದ್ದಲ್ಲಿ, ಭೂಮಿಯನ್ನು ಮಟ್ಟ ಮಾಡುವ ಕಾರ್ಯವು ಶ್ರಮದಾಯಕ ಮತ್ತು ದುಬಾರಿ. ಇಷ್ಟಾಗಿಯೂ ಮಟ್ಟ ಮಾಡಿದರೆ, ಮಣ್ಣಿನ ಫಲವತ್ತತೆಯು ತಗ್ಗುವ ಭೀತಿಯಿದೆ.

ಸೂಕ್ತ ಬೆಳೆಗಳು: ಸಾಲುಗಳ ಅಂತರವು ಕಡಿಮೆ ಇರುವ ಬೆಳೆಗಳಾದ ಗೋಧಿ, ಜೋಳ, ಸಜ್ಜೆ, ರಾಗಿ, ಸೇಂಗಾ, ಬೇಳೆಕಾಳು ವರ್ಗಕ್ಕೆ ಸೇರಿದ ಹೆಸರು, ಉದ್ದು, ಅಲಸಂದೆ, ಇತ್ಯಾದಿ ಬೆಳೆಗಳಿಗೆ ಬದು ಪಟ್ಟಿ ಪದ್ಧತಿಯು ಸೂಕ್ತವೆನಿಸಿದೆ.

ಮಡಿ ಪದ್ಧತಿ ಅಥವಾ ಸಪಾಟು ಮಡಿ ಪದ್ಧತಿ (Check basins or Flat beds) ಮಡಿ ಪದ್ಧತಿಯ ನೀರಾವರಿಯು, ಭಾರತದ ಎಲ್ಲೆಡೆ ಪ್ರಚಲಿತದಲ್ಲಿದೆ. ಭೂ ಪ್ರದೇಶದಲ್ಲಿ ಸಣ್ಣ ಆಕಾರದ ಮಡಿಗಳನ್ನು ಗುರುತು ಮಾಡಿ, ಪ್ರತಿ ಮಡಿಯ ಸುತ್ತಲೂ ಸಣ್ಣ ಬದುಗಳನ್ನು ನಿರ್ಮಿಸಬೇಕು. ಮಡಿಯೊಳಗಿನ ನೆಲವನ್ನು ಸರಿಯಾಗಿ ಮಟ್ಟ ಮಾಡಬೇಕು. ಈ ಮಡಿಗಳಿಗೆ ನೀರನ್ನು ಪೂರೈಸಲು ಎರಡು ಸಾಲು ಮಡಿಗಳಿಗೆ ಒಂದರಂತೆ ಕಾಲುವೆಗಳನ್ನು ನಿರ್ಮಿಸಬೇಕು (ಚಿತ್ರ : ೧೯)

ಕಡಿಮೆ ಇಳಿಜಾರಿನ ಭೂಮಿಗೆ ಮತ್ತು ಮಧ್ಯಮ ವೇಗದಿಂದ ಇಲ್ಲವೇ ನಿಧಾನವಾಗಿ, ನೀರನ್ನು ಒಳ ಪ್ರವೇಶಿಸಲು ಬಿಡುವ ಮಣ್ಣಿಗೆ ಈ ಪದ್ಧತಿಯು ಅನುಕೂಲ. ಮಣ್ಣಿನಲ್ಲಿರುವ ಲವಣಗಳನ್ನು ಬಸಿದು ಹೋಗುವಂತೆ ಮಾಡಲು, ಬಿತ್ತುವ ಸಮಯಕ್ಕಿಂತ ಮೊದಲು ಬೀಳುವ ಮಳೆಯ ನೀರು ಮಣ್ಣಿನೊಳಗೆ ಹೆಚ್ಚು ಪ್ರಮಾಣದಲ್ಲಿ ಇಂಗುವಂತೆ ಮಾಡಲು, ತಾತ್ಪೂರ್ತಿಕವಾಗಿ

ಮಡಿಗಳನ್ನು ನಿರ್ಮಿಸುವ ರೂಢಿಯು ಒಣಭೂಮಿ ಬೇಸಾಯದಲ್ಲಿದೆ. ನೀರಾವರಿಯ ಜಲವು ದೊಡ್ಡ ಪ್ರಮಾಣದಲ್ಲಿ ಒಳ ಬಂದರೂ, ಭೂ ಸವಕಳಿಯಾಗದಂತೆ, ಸಮರ್ಥವಾಗಿ ನೀರನ್ನು ನಿಯಂತ್ರಿಸಬಹುದು.

ಪ್ರತಿ ಮಡಿಯ ಕ್ಷೇತ್ರವನ್ನು ನಿರ್ಧರಿಸುವಾಗ ಹಲವು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಪ್ರಮುಖವಾಗಿ, ಕೆಳಗಿನವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

 • ಹರಿದು ಬರುತ್ತಿರುವ ನೀರಾವರಿ ಜಲದ ವೇಗ
 • ನೀರಾವರಿಗೆ ಲಭ್ಯವಿರುವ ಭೂ ಪ್ರದೇಶ
 • ನೀರಾವರಿ ಜಲವು ಮಣ್ಣನ್ನು ಪ್ರವೇಶಿಸುವ ವೇಗ
 • ಬೆಳೆಯಬೇಕೆಂದಿರುವ ಬೆಳೆಯ ಸ್ವಭಾವ

ವಿಶಾಲವಾದ ಪ್ರದೇಶವು ಲಭ್ಯವಿರುವಾಗ ಮತ್ತು ಹರಿದು ಬರುವ ನೀರಿನ ಪ್ರಮಾಣವು ಅಧಿಕವಾಗಿದ್ದಾಗ ದೊಡ್ಡ ಮಡಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಒಂದು ಚ.ಮೀ. ಆಕಾರದ ಮಡಿಯಿಂದ ಆರಂಭವಾಗಿ ಒಂದು ಹೆಕ್ಟೇರು ಅಥವಾ ಅದಕ್ಕೂ ದೊಡ್ಡ ಮಡಿಗಳನ್ನು ಕಾಣಬಹುದು.

ಗುಣಗಳು

 • ಹರಿದು ಒಳಬರುವ ನೀರನ್ನು ಸುಲಭವಾಗಿ ಮತ್ತು ಸಮರ್ಥವಾಗಿ ನಿಯಂತ್ರಿಸಬಹುದು.
 • ಮಡಿಯೊಳಗಿರುವ ಕ್ಷೇತ್ರವು ಒಂದೇ ಪಾತಳಿಯಲ್ಲಿ ಇರುವುದರಿಂದ, ನೀರಾವರಿಯ ಜಲವು ಎಲ್ಲೆಡೆ ಸಮನಾಗಿ ಪಸರಿಸುತ್ತದೆ.
 • ಮಣ್ಣು ಕೊಚ್ಚಿಕೊಂಡು ಹೋಗುವ ಸಂಭವವಿಲ್ಲ.

ಅವಗುಣಗಳು

 • ಮಡಿಗಳನ್ನು ನಿರ್ಮಿಸಲು, ಆಳುಗಳು ಅಧಿಕ ಸಂಖ್ಯೆಯಲ್ಲಿ ಬೇಕಾಗುತ್ತಾರೆ.
 • ನೀರನ್ನು ನಿಯಂತ್ರಿಸಲು ಹೆಚ್ಚು ಆಳುಗಳು ಬೇಕು.
 • ಪ್ರತಿ ಮಡಿಯ ಸುತ್ತಲೂ ಇರುವ ಬದುಗಳು ಮತ್ತು ಪ್ರತಿ ಎರಡು ಸಾಲು ಮಡಿಗಳಿಗೆ ಒಂದರಂತೆ ನಿರ್ಮಿಸಬೇಕಾಗುವ ಕಾಲುವೆಗಳಿಗೆ ಬಹಳಷ್ಟು ಭೂ ಪ್ರದೇಶವು ಬೇಕಾಗುತ್ತದೆ. ಇದರಿಂದ, ಒಟ್ಟು ಉತ್ಪಾದನೆಯ ಕಡಿಮೆಯಾಗುತ್ತದೆ.
 • ಮಡಿಗಳ ಬದು ಮತ್ತು ನೀರನ್ನು ಪೂರೈಸುವ ಕಾಲುವೆಗಳು ಬಹು ಸಂಖ್ಯೆಯಲ್ಲಿ ಇರುವುದರಿಂದ, ಎತ್ತು ಇಲ್ಲವೇ ಯಂತ್ರಗಳಿಂದ ಎಳೆಯುವ ಉಪಕರಣಗಳನ್ನು ಅಂತರ ಬೇಸಾಯವನ್ನು ಮಾಡಲು ಉಪಯೋಗಿಸಲಾಗುವುದಿಲ್ಲ.

ಸೂಕ್ತ ಬೆಳೆಗಳು

ಈರುಳ್ಳಿ, ಬೆಳ್ಳುಳ್ಳಿ, ತರಕಾರಿ ಸೊಪ್ಪುಗಳು, ಕ್ಯಾಬೇಜ್, ಕಾಲೀಫ್ಲವರ್, ಭತ್ತ ಇತ್ಯಾದಿ ಬೆಳೆಗಳಿಗೆ ಈ ಪದ್ಧತಿಯು ಪ್ರಯೋಜನಕಾರಿ ಎನ್ನಬಹುದು.

ಉಂಗುರಾಕಾರದ (ಗೋಲಾಕಾರದ) ಮಡಿಗಳು (Ring basins): ಮೇಲೆ ವಿವರಿಸಿದ ಸಪಾಟು ಮಡಿಯ ಇನ್ನೊಂದು ಪ್ರಕಾರವೇ ಗೋಲಾಕಾರದ ಮಡಿ ಎನ್ನಬಹುದು.

ಎರಡು ಸಸ್ಯಗಳ ಮಧ್ಯದಲ್ಲಿ ಅಂತರವು ಹೆಚ್ಚಾಗಿರುವಾಗ, ಸಸ್ಯಗಳ ಸಮೀಪದಲ್ಲಿರುವ ಸ್ಥಳದಲ್ಲಿ ಮಾತ್ರ ನೀರನ್ನು ಪೂರೈಸಿದರೆ ಸಾಕಾಗುತ್ತದೆ.ಇಡೀ ಪ್ರದೇಶಕ್ಕೆ ನೀರನ್ನು ಒದಗಿಸಿದರೆ ಬಹಳಷ್ಟು ನೀರು ವ್ಯರ್ಥವಾಗುವುದಲ್ಲದೇ, ಕಳೆಗಳಿಗೆ ಹುಲುಸಾಗಿ ಬೆಳೆಯಲು ಆಸ್ಪದವನ್ನು ಮಾಡಿಕೊಟ್ಟಂತಾಗುತ್ತದೆ. ಇಂತಹ ಸಂದರ್ಭದಲ್ಲಿ, ಸಸ್ಯಗಳ ಹತ್ತಿರದ ಪ್ರದೇಶಕ್ಕೆ ಮಾತ್ರ ನೀರನ್ನು ಪೂರೈಸಬಲ್ಲ ಗೋಲಾಕಾರದ ಮಡಿಗಳು ಹೆಚ್ಚು ಪ್ರಯೋಜನಕಾರಿ ಎನ್ನಬಹುದು.

ಸಸ್ಯಗಳ ಪ್ರತಿ ಎರಡು ಸಾಲುಗಳ ಮಧ್ಯದಲ್ಲಿ ಒಂದೊಂದು ಕಾಲುವೆಯನ್ನು ತೋಡಿ, ಈ ಕಾಲುವೆಯನ್ನು ಸಣ್ಣ ಉಪಕಾಲುವೆಗಳ ಮೂಲಕ ಪ್ರತಿ ಸದ್ಯಕ್ಕೆ ಜೋಡಿಸಬೇಕು. ಸಸ್ಯವನ್ನು ನೆಡುವ ಸ್ಥಳದಲ್ಲಿರುವ ಮಣ್ಣು ಸ್ವಲ್ಪ ಎತ್ತರವಾಗುವಂತೆ ಮಾಡಿ ಅದರ ಸುತ್ತಲೂ ನೀರು ನಿಲ್ಲಲ್ಲು ಅನುಕೂಲವಾಗುವ, ವರ್ತುಲಾಕಾರದ ಕಾಲುವೆಯನ್ನು ನಿರ್ಮಿಸಬೇಕು. (ಚಿತ್ರ ೨೦) ಈ ಬಗೆಯ, ಉಂಗುರದಾಕಾರದ ಮಡಿಗಳ ಮಧ್ಯದ ಅಂತರವು ಬೆಳೆಯ ಸ್ವಭಾವದ ಮೇಲಿಂದ ಹೆಚ್ಚು ಇಲ್ಲವೇ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.

ಉದಾಹರಣೆಗೆ

ಸೌತೆ ಅಥವಾ ಹೀರೆ ಬಳ್ಳಿಗಳಿಗೆ ೧.೨ ಮೀ. x ೧.೨ ಮೀ. ಅಥವಾ
೧.೨ ಮೀ. x ೧.೮ ಮೀ. ಇಲ್ಲವೇ
೧.೮ ಮೀ. x ೧.೮ ಮೀ. ಅಂತರ
ಹೀರೇ ಮತ್ತು ಕುಂಬಳದ ಮಿಶ್ರಣಕ್ಕೆ ೩.೦ ಮೀ. x ೧.೮ ಮೀ. ಅಂತರ
ಕುಂಬಳ ಅಥವಾ ಹಾಲು ಗುಂಬಳ ಬಳ್ಳಿಗಳಿಗೆ ೩.೦ ಮೀ. x ೩.೦ ಮೀ. ಅಥವಾ
೩.೦ ಮೀ x ೩.೬ ಮೀ. ಅಂತರ

ಸಸ್ಯಗಳಿಗೆ ಇರುವ ಎತ್ತರದ ಭಾಗದ ವ್ಯಾಸವು ಬೆಳೆಯ ಸ್ವಭಾವದ ಮೇಲೆ ಅವಲಂಭಿಸಿದೆ. ಮೇಲೆ ಹೇಳಿದ ಬೆಳೆಗಳಾದರೆ, ಈ ಸ್ಥಳದ ವ್ಯಾಸವನ್ನು ೦.೫ ಮೀ.ನಿಂದ ೦.೭೫ ಮೀ.ನಷ್ಟು ಇಡಬಹುದು. ಹಣ್ಣಿನ ಗಿಡಗಳು ಸಣ್ಣವಿರುವಾಗ, ಈ ಸ್ಥಳದ ವ್ಯಾಸವನ್ನು ಕಡಿಮೆ ಇಟ್ಟು, ಗಿಡಗಳು ಬೆಳೆದು ಮರವಾಗುತ್ತ ಸಾಗಿದಂತೆ, ಈ ಜಾಗದ ವ್ಯಾಸವನ್ನು ಹೆಚ್ಚಿಸುತ್ತಿರಬೇಕು.

ಕೆಲವು ಸಲ, ಒಂದಕ್ಕಿಂತ ಹೆಚ್ಚು ಗಿಡಗಳಿಗೆ ಒಂದೇ ಮಡಿಯಲ್ಲಿ ಸ್ಥಾನವನ್ನು ಕಲ್ಪಿಸುವ ರೂಢಿಯೂ ಇದೆ. ಅದರಂತೆಯೇ, ವರ್ತುಲಾಕಾರದ ಮಡಿಯ ಬದಲು, ಚೌಕೋನಾಕಾರದ ಮಡಿಯನ್ನು ನಿರ್ಮಿಸಬಹುದು.

ಗುಣಗಳು

 • ಮಡಿಯು ಎತ್ತರದ ಭಾಗದಲ್ಲಿ ಬೀಜವನ್ನು ಬಿತ್ತಲಾಗುವುದರಿಂದ ಅಥವಾ ಸಸಿಗಳನ್ನು ನೆಡಲಾಗುವುದರಿಂದ, ಅಲ್ಲಿ ಆಮ್ಲಜನಕದ ಕೊರತೆಯಾಗದೆ ಬೀಜಗಳು ಸರಿಯಾಗಿ ಹುಟ್ಟುತ್ತವೆ ಮತ್ತು ಬೆಳೆಯ ಬೇರುಗಳು ಸರಿಯಾಗಿ ಅಭಿವೃದ್ಧಿ ಹೊಂದುತ್ತವೆ.
 • ಸಸ್ಯಗಳ ಹತ್ತಿರದಲ್ಲಿ ಮಾತ್ರ ನೀರನ್ನು ಪೂರೈಸಿ, ಉಳಿದ ಸ್ಥಳಕ್ಕೆ ನೀರನ್ನು ಒದಗಿಸಬೇಕಾಗಿಲ್ಲವಾದ್ದರಿಂದ ನೀರಿನ ಸಮರ್ಥ ಬಳಕೆಯಾಗುತ್ತದೆ.
 • ಕಳೆಯು ಪ್ರಾಬಲ್ಯವಾಗುವುದಿಲ್ಲ.

ಅವಗುಣಗಳು

 • ಮಡಿಗಳನ್ನು ಸಿದ್ಧಪಡಿಸಲು ಅಧಿಕ ಸಂಖ್ಯೆಯಲ್ಲಿ ಆಳುಗಳು ಬೇಕು. ಇದರಿಂದ ನಿರ್ಮಾಣದ ಖರ್ಚು ಅಧಿಕ.
 • ಅಂತರ ಬೇಸಾಯವನ್ನು ಮಾಡಲು ಎತ್ತಿನಿಂದ ಎಳೆಯುವ ಅಥವಾ ಯಂತ್ರಚಾಲಿತ ಉಪಕರಣಗಳನ್ನು ಬಳಸಲು ಬರುವುದಿಲ್ಲ.

ಸೂಕ್ತ ಬೆಳೆಗಳು: ಮೇಲೆ ವಿವರಿಸಿದಂತೆ, ಎರಡು ಸಸ್ಯಗಳ ಅಂತರವು ಅಧಿಕವಾಗಿರುವ ಸೌತೆ, ಹೀರೆ, ಕುಂಬಳ, ಹಾಲುಗುಂಬಳ ಮುಂತಾದ ಬಳ್ಳಿಗಳಿಗೆ ಮತ್ತು ಹಣ್ಣಿನ ಗಿಡಗಳಿಗೆ ಈ ಪದ್ಧತಿಯು ಪ್ರಯೋಜನಕಾರಿಯಾಗಿದೆ.

ಬೋದು ಕಾಲುವೆ ಪದ್ಧತಿ ಅಥವಾ ಬೋದು ಸಾಲು ಪದ್ಧತಿ (Ridges and Furrows): ಸಾಲುಗಳಲ್ಲಿ ಬೆಳೆಯುವ ಬೆಳೆಗಳಿಗೆ ನೀರನ್ನು ಪೂರೈಸಲು ಬೋದು ಕಾಲುವೆ ಪದ್ಧತಿಯು ಪ್ರಯೋಜನಕಾರಿ ಎನಿಸಿದೆ. ಶೇಕಡಾ ಇಳಿಜಾರು ೦.೭೫ ಕ್ಕಿಂತ ಕಡಿಮೆ ಇರುವ ಭೂಮಿಯಲ್ಲಿ, ಮುಖ್ಯ ಇಳಿಜಾರಿನೊಡನೆ ಬೋದು ಕಾಲುವೆಗಳನ್ನು ನಿರ್ಮಿಸಬಹುದು. ಆದರೆ, ಅಧಿಕ ಮಳೆಯಾಗುವ ಪ್ರದೇಶದಲ್ಲಿ, ಕಾಲುವೆಯ ಇಳಿಜಾರು ಶೇಕಡಾ ೦.೫ಕ್ಕಿಂತ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ, ವೇಗದಿಂದ ಹರಿದು ಹೋಗುವ ಮಳೆಯ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆಯಲ್ಲದೇ, ಬದುಗಳನ್ನೂ ಒಡೆಯಬಹುದು. ಇಳಿಜಾರಿನ ಪ್ರಮಾಣವು ಅಧಿಕವಿರುವ ಭೂಮಿಯಲ್ಲಿ, ಬೋದು ಕಾಲುವೆಗಳನ್ನು ಮುಖ್ಯ ಇಳಿಜಾರಿಗೆ ಅಡ್ಡವಾಗಿ ಸಮಪಾತಳಿಯೊಂದಿಗೆ ನಿರ್ಮಿಸಬೇಕು.

ಸಾಮಾನ್ಯವಾಗಿ, ಬೆಳೆಯ ಎರಡು ಸಾಲುಗಳ ಮಧ್ಯದಲ್ಲಿ ಒಂದು ಕಾಲುವೆಯನ್ನು ನಿರ್ಮಿಸುವುದು ರೂಢಿ. ಕಾಲುವೆಯನ್ನು ನಿರ್ಮಿಸುವಾಗ, ಹೊರಬರುವ ಮಣ್ಣಿನ ಅರ್ಧದಷ್ಟನ್ನು ಒಂದು ಪಾರ್ಶ್ವಕ್ಕೂ, ಉಳಿದರ್ಧ ಮಣ್ಣನ್ನು ಇನ್ನೊಂದು ಪಾರ್ಶ್ವಕ್ಕೂ ಹಾಕಬೇಕು. ನಿರ್ಮಾಣ ಕಾರ್ಯವು ಮುಗಿದಾಗ ಬೋದುಗಳು ಮತ್ತು ಕಾಲುವೆಗಳು ಒಂದಾದ ನಂತರ ಇನ್ನೊಂದು ಸಿದ್ಧವಾಗಿರುತ್ತವೆ.

ಬೋದು ಕಾಲುವೆಗಳನ್ನು ನಿರ್ಮಿಸಲು ವಿಶಿಷ್ಟ ಉಪಕರಣವಾದ “ಬೋದು-ಸಾಲು ನೇಗಿಲನ್ನು”(Ridger) ಉಪಯೋಗಿಸಬಹುದು. ಭೂಮಿಯನ್ನು ಉಳುಮೆ ಮಾಡಿ, ಕುಂಟೆ, ಕೊರಡಗಳನ್ನು ಬಳಸಿ ನೆಲವನ್ನು ಸಿದ್ಧಪಡಿಸಿದ ನಂತರ, ಬೋದು-ಸಾಲು ನೇಗಿಲನ್ನು ಉಪಯೋಗಿಸಿದಾಗ ಕಾಲುವೆಗಳು ನಿರ್ಮಾಣವಾಗುತ್ತವೆಯಲ್ಲದೇ, ಕಾಲುವೆಗಳಿಂದ ಹೊರ ಬಂದ ಮಣ್ಣನ್ನು, ಉಪಕರಣದ ಎರಡು ರೆಕ್ಕೆಗಳು ಕಾಲುವೆಗಳ ಎರಡೂ ಪಾರ್ಶ್ವಕ್ಕೆ ತಳ್ಳುತ್ತವೆ. ಈ ಉಪಕರಣವು ಲಭ್ಯವಿಲ್ಲದಲ್ಲಿ, ನೇಗಿಲಿನ ಸಹಾಯದಿಂದ ಬೋದು ಸಾಲುಗಳನ್ನು ನಿರ್ಮಿಸಬಹುದು.

ಕೆಲವು ಸಂದರ್ಭಗಳಲ್ಲಿ, ಉದಾಹರಣೆಗೆ, ಗಜ್ಜರಿ, ಲೆಟ್ಯೂಸ್ ಮುಂತಾದ ಬೆಳೆಗಳನ್ನು, ಬೆಳೆಯುವಾಗ ಬೋದಿನ ಮೇಲೆ, ಬೆಳೆಯ ಎರಡು ಸಾಲುಗಳನ್ನು ನೆಡಲಾಗುತ್ತದೆ. ಅಂತಹ ಪ್ರಸಂಗಗಳಲ್ಲಿ, ಎರಡು ಸಾಲು ಬೆಳೆಗಳ ಮಧ್ಯದಲ್ಲಿ ಒಂದೇ ಕಾಲುವೆಯನ್ನು ನಿರ್ಮಿಸಿದಂತಾಗುತ್ತದೆ. ಅಧಿಕ ಅಂತರದಲ್ಲಿ ಸಾಲುಗಳು ಇರುವ ಬೆಳೆಯಲ್ಲಿ ಮತ್ತು ಕೆಲವು ವಿಶಿಷ್ಟ ಪ್ರಸಂಗಗಳಲ್ಲಿ, ಬೆಳೆಯ ಎರಡು ಸಾಲುಗಳ ಮಧ್ಯದಲ್ಲಿ ಎರಡು ಕಾಲುವೆಗಳನ್ನು ನಿರ್ಮಿಸುವುದು ರೂಢಿಯೂ ಇದೆ.

ಅ. ಬೆಳೆಯ ಪ್ರತಿ ಸಾಲಿಗೆ ಒಂದು ಕಾಲುವೆ

ಆ. ಬೆಳೆಯ ಪ್ರತಿ ಸಾಲಿಗೆ ಎರಡು ಕಾಲುವೆ

ಇ. ಬೆಳೆಯ ಜೋಡು ಸಾಲುಗಳಿಗೆ ಒಂದು ಕಾಲುವೆ

ಅಂತರ: ಎರಡು ಕಾಲುವೆಗಳ (ಅಥವಾ ಬೋದುಗಳು) ಮಧ್ಯದ ಅಂತರವು ಬೆಳೆಯಲಿರುವ ಬೆಳೆಯ ಸಾಲುಗಳ ಮಧ್ಯದ ಅಂತರಕ್ಕೆ ಅನುಗುಣವಾಗಿರುತ್ತವೆ. ಉದಾಹರಣೆಗೆ, ಮುಂದಿನ ವಿವರಗಳನ್ನು ಗಮನಿಸಬಹುದು.

ಅ.ಸಂ.

ಬೆಳೆಗಳ ಹೆಸರು

ಎರಡು ಕಾಲುವೆಗಳ (ಬದುಗಳ) ಮಧ್ಯದ ಅಂತರ (ಸೆಂ.ಮೀ)

೧. ತಿಂಗಳ ಅವರೆ ೩೦
೨. ಗುಜರಿ, ಆಲೂಗಡ್ಡೆ, ಈರುಳ್ಳಿ (ಗಡ್ಡೆಗಾಗಿ) ೪೫
೩. ಗೆಣಸು, ಈರುಳ್ಳಿ (ಬಿತ್ತನೆಗಾಗಿ) ೬೦-೭೫
ಟೊಮಾಟೋ, ಮೆಣಸಿನಕಾಯಿ  
  ಬದನೆ, ಹತ್ತಿ ೯೦
೫. ಕಬ್ಬು ೯೦-೧೨೦

ಉದ್ದಳತೆ:

i. ಬೋದು ಕಾಲುವೆಗಳು ಉದ್ದವಿದ್ದಷ್ಟೂ ಉತ್ತಮವೆನ್ನಬಹುದು. ಬೋದು ಕಾಲುವೆಗಳನ್ನು ಹೆಚ್ಚು ಉದ್ದವಿಡುವುದರಿಂದ ಮುಂದಿನ ಅನುಕೂಲತೆಗಳಿವೆ.

 • ಅಡ್ಡ ಕಾಲುವೆಗಳ ಸಂಖ್ಯೆಯು ಕಡಿಮೆಯಾಗಿ, ಬೆಳೆಯ ಉತ್ಪಾದನೆಗೆ ಹೆಚ್ಚು ಭೂಮಿಯು ದೊರೆಯುತ್ತದೆ.
 • ಬೋದು ಕಾಲುವೆಗಳ ನಿರ್ಮಾಣಕ್ಕೆ ಕಡಿಮೆ ಆಳುಗಳು ಸಾಕು. ಆಳುಗಳ ಖರ್ಚಿನಲ್ಲೂ ಉಳಿತಾಯವಾಗುತ್ತದೆ.
 • ಎತ್ತುಗಳಿಂದ ಎಳೆಯಬಲ್ಲ ಅಥವಾ ಯಂತ್ರಚಾಲಿತ ಉಪಕರಣಗಳನ್ನು ಮಧ್ಯಂತರ ಬೇಸಾಯಕ್ಕೆ ಬಳಸಬಹುದು.
 • ಬೋದು ಕಾಲುವೆಗಳನ್ನು ಒಂದು ಮಿತಿಯನ್ನು ಮೀರಿ ಉದ್ದವಿಟ್ಟರೆ, ಕಾಲುವೆಯ ಕೊನೆಯನ್ನು ತಲುಪಲು ನೀರಿಗೆ ಬಹಳ ಸಮಯವು ಬೇಕಾಗುತ್ತದೆ. ಇದರ ಪರಿಣಾಮವಾಗಿ, ಕಾಲುವೆಯು ಆರಂಭದಲ್ಲಿರುವ ಬೆಳೆಗೆ ಹೆಚ್ಚು ನೀರು ಪೂರೈಕೆಯಾಗಿ ಕೆಳಗಿನ ಭಾಗದಲ್ಲಿರುವ ಬೆಳೆಗೆ ನೀರಿನ ಕೊರತೆಯಾಗುವ ಸಾಧ್ಯತೆಗಳಿವೆ.

iii. ಮಣ್ಣಿನ ಜಲವಹನ ಸಾಮರ್ಥ್ಯದ (Hydraulic Conductivity) ಮೇಲೆಯೂ ಕಾಲುವೆಯ ಉದ್ದವು ಕಡಮೆ ಮಾಡಬೇಕು.

iv. ಭೂಮಿಯ ಇಳಿಜಾರಿನ ಪ್ರಮಾಣ ಮತ್ತು ನೀರಿನ ಪೂರೈಕೆ ಇವುಗಳ ಮೇಲಿಂದಲೂ ಬೋದು ಕಾಲುವೆಯ ಉದ್ದವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕು.