ನೀರಾವರಿಗೆ ಸೂಕ್ತವಿನಿಸು ನೀರಿನ ಗುಣಧರ್ಮಗಳು

ನೀರಾವರಿಗೆಂದು ಬಳಸುವ ನೀರು ಯಾವ ಮೂಲದಿಂದ ಬಂದರೂ ಅದರಲ್ಲಿ ಮಣ್ಣಿನ ಕಣಗಳು (ರೇವೆಯ ಕಣಗಳು) ಮತ್ತು ಲವಣಗಳು ಇರುವುದು ಸ್ವಾಭಾವಿಕ. ನೀರಿನ ಮೂಲ ಮತ್ತು ಅದು ಹರಿದು ಬರುವ ಮಾರ್ಗ ಇವುಗಳ ಮೇಲಿಂದ ನೀರಿನಲ್ಲಿರುವ ರೇವೆಯ ಮತ್ತು ಲವಣಗಳ ಪ್ರಮಾಣವು ಅವಲಂಬಿಸಿರುತ್ತದೆ.

ರೇವೆ: ನೀರಿನಲ್ಲಿರುವ ರೇವೆಯ ಗುಣಧರ್ಮಗಳು ಮತ್ತು ನೀರಿನ ಮೂಲಕ ಈ ರೇವೆಯು ಯಾವ ಭೂಮಿಗೆ ಹೋಗಿ ಸೇರುತ್ತದೆಯೋ ಅಲ್ಲಿನ ಮಣ್ಣಿನ ಸ್ವಭಾವಗಳಿಂದ ರೇವೆಯಿಂದಾಗುವ ಪರಿಣಾಮವನ್ನು ನಿರ್ಧರಿಸಬೇಕಾಗುತ್ತದೆ. ಉದಾಹರಣೆಗೆ:

 • ಮರಳು ಭೂಮಿಯಲ್ಲಿ ಜಿನುಗು ಕಣಗಳಿರುವ ರೇವೆಯು ಸಂಗ್ರಹವಾಗುತ್ತಾ ಸಾಗಿದರೆ ಮಣ್ಣು ಸುಧಾರಿಸುತ್ತದೆ.
 • ಅದರಂತೆಯೇ ಫಲವತ್ತಾದ ಪ್ರದೇಶದಿಂದ ನೀರು ಹರಿದು ಬರುವಾಗ ಸಂಗ್ರಹಗೊಂಡ ರೇವೆಯಾದರೆ ಇಂತಹ ನೀರಿನ ಪೂರೈಕೆಯಿಂದ ಮಣ್ಣಿನ ಫಲವತ್ತತೆಯು ಅಧಿಕಗೊಳ್ಳುತ್ತದೆ.
 • ಆದರೆ ಭೂ ಸವಕಳಿಗೊಳಗಾದ ಮಣ್ಣಿನಿಂದ ಬಂದ ರೇವೆಯು ಫಲವತ್ತಾದ ಮಣ್ಣಿನ ಮೇಲೆ ಸಂಗ್ರಹಗೊಂಡರೆ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಹಾಳಾಗುವ ಸಂಭವವೇ ಅಧಿಕವೆನ್ನಬಹುದು.
 • ಲವಣಗಳು: ಕ್ಯಾಲ್ಸಿಯಂ, ಮೆಗ್ನಿಸಿಯಂ, ಸೋಡಿಯಂ ಮತ್ತು ಕೆಲವೆಡೆ ಪೊಟ್ಯಾಸಿಯಂಗಳ ಕ್ಲೋರೈಡ್, ಸಲ್ಫೇಟ್, ಬೈಕಾರ್ಬೋನೇಟ್ ಮತ್ತು ಕೆಲವು ಬಾರಿ ಕಾರ್ಬೋನೇಟ್‌ಗಳು ನೀರಿನಲ್ಲಿ ಕರಗಿರುವುದು ಸಾಮಾನ್ಯ. ಕ್ವಚಿತ್ತಾಗಿ ನೈಟ್ರೇಟ್ ಸಹ ನೀರಿನಲ್ಲಿ ಇರಬಹುದಾದರೂ ಮಣ್ಣು ಮತ್ತು ಸಸ್ಯಗಳ ದೃಷ್ಟಿಯಿಂದ ಮಹತ್ವದ್ದೆನಿಸುವುದಿಲ್ಲ. ಆದರೆ, ನೀರಾವರಿ ಜಲದಲ್ಲಿ ಬೋರಾನ್ ಅಧಿಕ ಪ್ರಮಾಣದಲ್ಲಿದ್ದರೆ ಅದು ಸಸ್ಯಗಳಿಗೆ ಹಾನಿಯನ್ನುಂಟು ಮಾಡುವುದು. ಅದರಂತೆಯೇ ಸೆಲೇನಿಯಂ, ಮಾಲಿಬ್ಡಿನಂ ಮತ್ತು ಪ್ಲೋರಿನ್‌ಗಳು ದೊಡ್ಡ ಪ್ರಮಾಣದಲ್ಲಿದ್ದರೆ ಇಂತಹ ನೀರನ್ನಾಗಲೀ ಅಥವಾ ಇಂತಹ ನೀರಿನಿಂದ ಬೆಳೆದ ಸಸ್ಯಗಳನ್ನಾಗಲೀ ಸೇವಿಸುವ ಮನುಷ್ಯರಿಗೆ ಮತ್ತು ಸಾಕು ಪ್ರಾಣಿಗಳಿಗೆ ಅಪಾಯವಾಗಬಲ್ಲದು.
 • ಜಲವು ನೀರಾವರಿಗೆ ಸೂಕ್ತವಿದೆಯೇ ಎಂಬುದನ್ನು ತಿಳಿಯಲು ನೀರಿನ ಗುಣಧರ್ಮಗಳನ್ನಲ್ಲದೇ ಕೆಳಗೆ ಹೇಳಿದ ಸಂಗತಿಗಳನ್ನೂ ಪರಿಶೀಲಿಸಬೇಕು.
 • ನೀರಾವರಿಯನ್ನು ಮಾಡಬೇಕೆಂದಿರುವ ಮಣ್ಣಿನ ಗುಣಧರ್ಮಗಳನ್ನು, ಮುಖ್ಯವಾಗಿ ನೀರಿನ ಚಲನೆಯು ಮಣ್ಣಿನಲ್ಲಿ ಸರಾಗವಾಗಿ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು.
 • ಬೇಸಾಯವನ್ನು ಕೈಕೊಳ್ಳಬೇಕೆಂದಿರುವ ಬೆಳೆಯು ಲವಣದ ದುಷ್ಪರಿಣಾಮಗಳನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳಬಲ್ಲದೆಂಬುದರ ಅಂದಾಜನ್ನು ಮಾಡಬೇಕು.
 • ಹವಾಮಾನ.
 • ಇವುಗಳಲ್ಲದೇ, ನೀರಿನ ಪಾತಳಿ, ನೀರಿನ ಚಲನೆಗೆ ಆತಂಕವನ್ನೊಡ್ಡುವ ಗಟ್ಟಿ ಪದರಗಳು, ಕ್ಯಾಲ್ಸಿಯಂ ಕಾರ್ಬೋನೇಟ್, ಪೊಟ್ಯಾಸಿಯಂ ನೈಟ್ರೇಟ್ ಇವುಗಳ ಪ್ರಮಾಣ ಇತ್ಯಾದಿ ಸಂಗತಿಗಳೂ ಜಲವು ನೀರಾವರಿಗೆ ಯೋಗ್ಯವಾಗಿದೆಯೇ ಎಂಬುದನ್ನು ನಿರ್ಧರಿಸಲು ಸಹಕಾರಿಯೆನಿಸುತ್ತದೆ.

ನೀರಾವರಿ ಜಲದ ಗುಣಮಟ್ಟವನ್ನು ನಿರ್ಧರಿಸುವ ವಿಧಾನಗಳು: ನೀರಾವರಿಗೆಂದು ಬಳಸುವ ನೀರಿನ ಗುಣಮಟ್ಟವನ್ನು ನಿರ್ಧರಿಸಲು ಕೆಳಗಿನ ಸಂಗತಿಗಳನ್ನು ಮುಖ್ಯವಾಗಿ ಪರೀಕ್ಷಿಸಬಹುದು.

 • ನೀರಿನಲ್ಲಿರುವ ಒಟ್ಟು ಲವಣಗಳು.
 • ನೀರಿನಲ್ಲಿರುವ ಸೋಡಿಯಂ ಆಯಾನುಗಳಿಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಆಯಾನುಗಳಿಗೂ ಇರುವ ಪರಿಮಾಣ (Sodium Adsorption Ratio).
 • ಶೇಕಡಾ ಬೈಕಾರ್ಬೊನೇಟಿನ ಪ್ರಮಾಣ.
 • ಶೇಕಡಾ ಬೋರಾನ್‌ನ ಪ್ರಮಾಣ.

ನೀರಿನಲ್ಲಿರುವ ಒಟ್ಟು ಲವಣಗಳು: ನೀರಿನಲ್ಲಿರುವ ಲವಣಗಳು ಯಾವ ಪ್ರಕಾರದವುಗಳಾಗಿದ್ದರೂ ಲವಣಗಳ ಒಟ್ಟು ಪ್ರಮಾಣವು ಸಸ್ಯಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಲವಣದ ಪ್ರಮಾಣವನ್ನು ವಿದ್ಯುತ್ ವಹನ ವಿಧಾನದಿಂದ ಕಂಡುಕೊಳ್ಳುವ ರೂಢಿಯು ಎಲ್ಲೆಡೆ ಇದೆ. ನೀರಾವರಿಯ ದೃಷ್ಟಿಯಿಂದ ಲವಣಗಳ ಪ್ರಮಾಣದ ಆಧಾರದಿಂದ ನೀರನ್ನು ಕೆಳಗಿನಂತೆ ವಿಂಗಡಿಸಬಹುದು.

ಕೋಷ್ಟಕ : ಲವಣಗಳ ಪ್ರಮಾಣದ ಆಧಾರದಿಂದ ನೀರಾವರಿ ಜಲದ ವರ್ಗೀಕರಣ

ನೀರಿನ ಗುಂಪು

ವಿದ್ಯುತ್ ವಹನ ಪ್ರತಿ ಸೆಂ.ಮೀ.ಗೆ (ಮಾಯ್ಕ್ರೋ ಮೋಹ್‌)

ಇತರ ಆಯಾನ್‌ಗಳ ಪ್ರಾಬಲ್ಯ

ನೀರಾವರಿಗೆ

ಷರಾ

೨೫೦ಕ್ಕಿಂತ ಕಡಿಮೆ ಕ್ಯಾಲ್ಸಿಯಂ. ಮೆಗ್ನೀಸಿಯಂ ಮತ್ತು ಬಾಯ್ಕಾರ್ಬೊನೇಟ್ ಸೂಕ್ತ ನೀರು ಅಲ್ಪ ಲವಣದ ನೀರು
೨೫೦ರಿಂದ ೭೫೦ ಮೇಲಿನಂತೆ ಮಧ್ಯಮ ಸೂಕ್ತ ಮಧ್ಯಮ ಪ್ರಮಾಣದ ಲವಣವಿರುವ ನೀರು
೭೫೦ರಿಂದ ೨೨೫೦ ಸೋಡಿಯಂ ಮತ್ತು ಕ್ಲೋರೈಡ್‌ ಯೋಗ್ಯವಲ್ಲ. ಕೆಲವು ವಿಶಿಷ್ಟ ಪ್ರಸಂಗಗಳಲ್ಲಿ ಉಪಯೋಗಿಸ ಬಹುದು ಅಧಿಕ ಲವಣಗಳಿರುವ ನೀರು
೨೨೫೦ಕ್ಕಿಂತ ಅಧಿಕ ಸೋಡಿಯಂ ಮತ್ತು ಕ್ಲೋರೈಡ್‌ಅಲ್ಲದೇ ಕೆಲಸಾರೆ ಕಾರ್ಬೊನೇಟ್ ಇರಬಹುದು. ಸೂಕ್ತವಲ್ಲ ಅತ್ಯಧಿಕ ಲವಣಗಳು ಇರುವ ನೀರು

ಸೋಡಿಯಂ: ಕ್ಯಾಲ್ಸಿಯಂ+ಮೆಗ್ನೀಸಿಯಂ ಪರಿಮಾಣ (Sodium Adsorption Ratio) ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂಗಳು ಸಸ್ಯಗಳ ಪೋಷಕಗಳು. ಅವುಗಳಿಂದ ಅದರಲ್ಲಿಯೂ, ಕ್ಯಾಲ್ಸಿಯಂನಿಂದ, ಮಣ್ಣಿನ ಗುಣಧರ್ಮಗಳು ಉತ್ತಮಗೊಳ್ಳುತ್ತವೆ. ತದ್ವಿರುದ್ಧವಾಗಿ ಸೋಡಿಯಂನ ಪ್ರಮಾಣವು ಅಧಿಕಗೊಂಡಿತೆಂದರೆ ಮಣ್ಣಿನ ಗುಣಧರ್ಮಗಳ ಮೇಲೆ ಹಲವು ಬಗೆಯ ದುಷ್ಪರಿಣಾಮಗಳು ಉಂಟಾಗಿ, ಇಂತಹ ಮಣ್ಣಿನಲ್ಲಿ ಸಸ್ಯಗಳ ಬೆಳವಣಿಗೆಯು ಕುಂಠಿತಗೊಳ್ಳಬಹುದು. ಇಲ್ಲವೇ ಬೆಳವಣಿಗೆಯೇ ಅಸಾಧ್ಯವೆನಿಸಬಹುದು.

ಸೋಡಿಯಂ: ಕ್ಯಾಲ್ಸಿಯಂ +  ಮೆಗ್ನೀಸಿಯಂಗಳ ಪರಿಮಾಣವು(Ratio) ಅಧಿಕವಾಗಿರುವ ನೀರನ್ನು ಮಣ್ಣಿಗೆ ಪೂರೈಸಿದರೆ ಮಣ್ಣಿನಲ್ಲಿ ಸೋಡಿಯಂ ಸಂಗ್ರಹವಾಗುತ್ತಾ ಸಾಗಿ ಅಪಾಯಕಾರಿ ಮಟ್ಟವನ್ನು ಮುಟ್ಟುತ್ತದೆ. ಈ ಪರಿಮಾಣವನ್ನು ಮುಂದಿನಂತೆ ಕಂಡು ಹಿಡಿಯಬಹುದು.

 ಇಲ್ಲಿ ಸೋಡಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಆಯಾನ್‌ಗಳು ಮಿಲಿಗ್ರಾಂ ಈಕ್ವಿವಲೆಂಟ್ನಲ್ಲಿವೆ (m.e)

ಬೈಕಾರ್ಬೊನೇಟ್ : ನೀರಿನಲ್ಲಿ ಬೈಕಾರ್ಬೊನೇಟ್ ಆಯಾನ್‌ಗಳು ಅಧಿಕ ಪ್ರಮಾಣದಲ್ಲಿದ್ದರೆ ಅವು ಕ್ಯಾಲ್ಸಿಯಂ ಅಯಾನ್‌ಗಳೊಡನೆ ಸಂಯೋಜನೆಗೊಂಡು ಕ್ಯಾಲ್ಸಿಯಂ ಕಾರ್ಬೊನೇಟ್ ಆಗಿ ಪರಿವರ್ತನೆ ಹೊಂದುತ್ತವೆ.

ಈ ಕ್ರಿಯೆಯಿಂದ ಕ್ಯಾಲ್ಸಿಯಂ ಆಯಾನ್‌ಗಳ ಪ್ರಮಾಣವು ಕಡಿಮೆಯಾಗಿ ಆ ಸ್ಥಳದಲ್ಲಿ ಸೋಡಿಯಂ ಅಯಾನ್‌ಗಳು ಬಂದು ಕೂಡುತ್ತವೆ.

ಕಾರ್ಬೊನೇಟ್ ಮತ್ತು ಬೈಕಾರ್ಬೊನೇಟ್ ಆಯಾನ್‌ಗಳ ಸಂಕಲನದಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಅಯಾನ್‌ಗಳ ಸಂಕಲವನ್ನು ಕಳೆದರೆ ಉಳಿದ ಮೌಲ್ಯಕ್ಕೆ “ಅವಶಿಷ್ಟ ಸೋಡಿಯಂ ಕಾರ್ಬೊನೇಟ್” ಎಂಬ ಹೆಸರಿದೆ.

ಅಯಾನ್‌ಗಳು ಪ್ರತಿ ಲೀಟರು ನೀರಿನಲ್ಲಿ ಮಿ.ಗ್ರಾಂ. ಈಕ್ವಿವಲೆಂಟ್ (m.e) ರೂಪದಲ್ಲಿವೆ.

ಅವಶಿಷ್ಟ ಸೋಡಿಯಂ ಕಾರ್ಬೊನೇಟ್ ಇರುವ ನೀರು ನೀರಾವರಿಗೆ ಹಿತಕರವಲ್ಲ.

ಬೋರಾನ್: ಬೋರಾನ್ ಇದು ಸಸ್ಯ ಪೋಷಕಗಳಲ್ಲೊಂದಾಗಿದೆ. ಆದರೆ ಈ ಪೋಷಕದ ಪೂರೈಕೆ, ಮಿತಿಯನ್ನು ಮೀರಿದರೆ ಅದು ಬೆಳೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಬೋರಾನ್, ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳ ಮೇಲೆ ನೇರವಾದ ದುಷ್ಪರಿಣಾಮವನ್ನು ಬೀರುವುದಿಲ್ಲ. ಆದರೆ ಬೋರಾನ್, ಅವಶ್ಯಕತೆಗಿಂತ ಅಧಿಕ ಪ್ರಮಾಣದಲ್ಲಿದ್ದರೆ ಸಸ್ಯದ ಆಂತರಿಕ ಚಟುವಟಿಕೆಗಳಿಗೆ ಆತಂಕವನ್ನೊಡ್ಡಿ ಬೆಳೆಗೆ ಹಾನಿಯನ್ನುಂಟು ಮಾಡುತ್ತದೆ.

ಬೋರಾನ್‌ನಿಂದ ಆಗುವ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವು ಕೆಲವು ಬೆಳೆಗಳಿಗೆ ಇದೆ. ಆದರೆ ಇನ್ನಿತರ ಬೆಳೆಗಳಿಗೆ ಇಂತಹ ಸಹಿಷ್ಣುತೆಯಿಲ್ಲ. ಬೋರಾನಿನ ಅಪಾಯವನ್ನು ಸಹಿಸಿಕೊಳ್ಳುವ ಸಾಮರ್ಥ್ಯದ ಮೇಲಿಂದ, ಬೆಳೆಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಬಹುದು. ಪ್ರತಿ ಗುಂಪಿನ ಕೆಲವು ಪ್ರಮುಖ ಬೆಳೆಗಳ ಹೆಸರುಗಳು ಕೋಷ್ಟಕ ೮ ರಲ್ಲಿವೆ.

ಕೋಷ್ಟಕ : ಬೋರಾನ್‌ನಿಂದಾಗುವ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯದ ಮೇಲಿಂದ ಬೆಳೆಗಳ ವರ್ಗೀಕರಣ

ಕೆಲವು ಮೂಲದಿಂದ ಬಂದ ನೀರಿನಲ್ಲಿ ಪೊಟ್ಯಾಸಿಯಂ ಮತ್ತು ನೈಟ್ರೇಟ್ ಅಯಾನ್‌ಗಳಿರುತ್ತವೆ. ಇಂತಹ ನೀರುಗಳನ್ನು ಪೂರೈಸಿದಾಗ ಮಣ್ಣಿನ ಫಲವತ್ತತೆಯು ಹೆಚ್ಚಿ, ಬೆಳೆಯ ಇಳುವರಿಯು ಅಧಿಕಗೊಳ್ಳುತ್ತದೆ. ಈ ಅಯಾನ್‌ಗಳು, ಮಣ್ಣಿನ ಲವಣಾಂಶವನ್ನು ಕಡಿಮೆ ಮಾಡುವುದಿಲ್ಲ. ಆದರೆ, ಲವಣಯುತ ಮಣ್ಣಿನಲ್ಲಿ, ಸಾಮಾನ್ಯವಾಗಿ ಸಾರಜನಕದ ಕೊರತೆಯು ಕಂಡು ಬರುವುದರಿಂದ ಈ ಕೊರತೆಯನ್ನು ನೈಟ್ರೇಟ್ ಕೆಲಮಟ್ಟಿಗೆ ನೀಗಿಸುತ್ತದೆ. ಬಹಳಷ್ಟು ಮಣ್ಣಿನಲ್ಲಿ ಪೊಟ್ಯಾಸಿಯಂ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ, ಈ ಪೋಷಕದ ಪರಿಣಾಮವು ಎದ್ದು ಕಾಣುವುದಿಲ್ಲ. ಪೊಟ್ಯಾಸಿಯಂ ಕೊರತೆ ಇರುವಲ್ಲಿ ಈ ಪೋಷಕವು ಇಳುವರಿಯನ್ನು ಅಧಿಕಗೊಳಿಸಬಲ್ಲದು.

ನೀರಾವರಿಯ ಜಲದ ವರ್ಗೀಕರಣ

ಆಮೇರಿಕೆಯ ಸಂಯುಕ್ತ ಸಂಸ್ಥಾನಗಳ ಲವಣ ಪ್ರಯೋಗಾಲಯದ ವರ್ಗೀಕರಣ: ನೀರಾವರಿಗೆಂದು ಬಳಸುವ ನೀರನ್ನು ವಿವಿಧ ರೀತಿಗಳಿಂದ ವರ್ಗೀಕರಿಸಲಾಗುತ್ತದೆ. ಆದರೆ ಅಮೆರಿಕೆಯ ಸಂಯುಕ್ತ ಸಂಸ್ಥಾನಗಳು ತಮ್ಮ ಲವಣ ಪ್ರಯೋಗಾಲಯದಲ್ಲಿ ಸಂಶೋಧನೆಗಳನ್ನು ನಡೆಸಿದ ಪರಿಣಾಮವಾಗಿ ಸೂಚಿಸಿದ ವರ್ಗೀಕರಣವು ವ್ಯಾಪಕವಾಗಿ ಬಳಕೆಯಲ್ಲಿದೆ. ಲವಣಗಳ ಬಾಹುಲ್ಯ ಮತ್ತು ಸೋಡಿಯಂನ ಪ್ರಾಬಲ್ಯದಿಂದ ಆಗುವ ಎರಡೂ ಬಗೆಯ ದುಷ್ಪರಿಣಾಮಗಳನ್ನು ಸೂಕ್ತ ರೀತಿಯಿಂದ ಸಂಯೋಜಿಸಿರುವುದೇ ಈ ವರ್ಗೀಕರಣದ ವೈಶಿಷ್ಟ್ಯವೆನ್ನಬಹುದು.

ಈ ವರ್ಗೀಕರಣದಲ್ಲಿ ಬಳಸಲಾಗುವ ರೇಖಾಚಿತ್ರ ಚಿತ್ರ ೯ರಲ್ಲಿದೆ. ಅದಲ್ಲದೇ ಈ ವರ್ಗೀಕರಣದ ಪ್ರಮುಖ ವಿವರಗಳು ಕೆಳಗಿನಂತಿವೆ.

ಲವಣಗಳ ಪ್ರಮಾಣದ ಆಧಾರದ ಮೇಲೆ ನೀರಾವರಿ ಜಲದ ವರ್ಗಗಳು: ನೀರಾವರಿ ಜಲದಲ್ಲಿರುವ ಲವಣದ ಪ್ರಮಾಣದ ಆಧಾರದ ಮೇಲೆ ಅಲ್ಪ, ಮಧ್ಯಮ, ಅಧಿಕ ಮತ್ತು ಅತ್ಯಧಿಕ ಲವಣವಿರುವ ಜಲವೆಂದು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವರ್ಗದ ಪ್ರಮುಖ ಗುಣಧರ್ಮಗಳು ಕೆಳಗಿನಂತಿವೆ.

i. ಅಲ್ಪ ಲವಣವಿರುವ ಜಲ (): ನೀರಿನ ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೨೫೦ ಮೈಕ್ರೋಮೋಹ್‌ಗಳಿಗಿಂತ ಕಡಿಮೆಯಿರುತ್ತದೆ. ಬಹುತೇಕ ಎಲ್ಲ ಬಗೆಯ ಮಣ್ಣು ಮತ್ತು ಬೆಳೆಗಳಿಗೆ ಇಂತಹ ನೀರನ್ನು ಬಳಸಬಹುದು. ನೀರಿನಿಂದ ಮಣ್ಣು ಲವಣಯುತವಾಗುವ ಭಯವಿಲ್ಲ. ನೀರಾವರಿಯ ಸೂಕ್ತ ವಿಧಾನಗಳನ್ನು ಅನುಸರಿಸಿದರೆ ಈ ಗುಣಮಟ್ಟದ ನೀರಿನ ಬಳಕೆಯಲ್ಲಿ ವಿಶೇಷ ಎಚ್ಚರಿಕೆ ಅನವಶ್ಯ.

ii. ಮಧ್ಯಮ ಪ್ರಮಾಣದಲ್ಲಿ ಲವಣವಿರುವ ಜಲ (): ನೀರಿನ ವಿದ್ಯುತ್ ವಹನವು ೨೫೦ರಿಂದ ೭೫೦ ಮೈಕ್ರೋಮೋಹ್‌ಗಳು. ನೀರು ಮಧ್ಯಮ ಪ್ರಮಾಣದಲ್ಲಾದರೂ ಮಣ್ಣಿನೊಳಗೆ ಬಸಿದು ಹೋಗುವಲ್ಲಿ ಈ ನೀರನ್ನು ಬಳಸಬಹುದು. ಲವಣದ ದುಷ್ಪರಿಣಾಮವನ್ನು ತಕ್ಕ ಮಟ್ಟಿಗೆ ಎದುರಿಸಬಲ್ಲ ಬೆಳೆಗಳಿಗೆ ಈ ನೀರನ್ನು ಉಪಯೋಗಿಸಬೇಕು. ಮಣ್ಣಿನಿಂದ ಲವಣಗಳನ್ನು ನಿವಾರಿಸಲು ವಿಶೇಷ ಕ್ರಮದ ಅಗತ್ಯವಿಲ್ಲ.

iii. ಅಧಿಕ ಪ್ರಮಾಣದಲ್ಲಿ ಲವಣವಿರುವ ನೀರು (): ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೨೨೫೦ ಮೈಕ್ರೋಮೋಹ್‌ಗಳು. ಭೂಮಿಯಾಳಕ್ಕೆ ನೀರು ಸರಿಯಾಗಿ ಬಸಿದು ಹೋಗುವ ಮಣ್ಣಿಗೆ ಇಂತಹ ನೀರನ್ನು ಬಳಸಬಹುದಾದರೂ ಲವಣಗಳು ಮಣ್ಣಿನಲ್ಲಿ ಸಂಗ್ರಹವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಲವಣಗಳ ದುಷ್ಪರಿಣಾಮಗಳನ್ನು ತಡೆದುಕೊಳ್ಳಬಲ್ಲ ಬೆಳೆಗಳನ್ನು ಬೆಳೆಯಬೇಕು.

iv. ಅತ್ಯಧಿಕ ಪ್ರಮಾಣದಲ್ಲಿ ಲವಣವಿರುವ ನೀರು (): ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೨೨೫೦ ಮೈಕ್ರೋಮೋಹ್‌ಗಳಿಗಿಂತ ಅಧಿಕ. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಜಲವು ನೀರಾವರಿಗೆ ಸೂಕ್ತವಲ್ಲ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಈ ನೀರನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಉದಾಹರಣೆಗೆ, ನೀರು ಸುಲಭವಾಗಿ ಮಣ್ಣಿನಾಳಕ್ಕೆ ಬಸಿದು ಹೋಗುವಂತಿರಬೇಕು ಮತ್ತು ಬಸಿಗಾಲುವೆಗಳ ವ್ಯವಸ್ಥೆಯು ಉತ್ತಮವಿರಬೇಕು. ಲವಣಗಳಿಂದಾಗುವ ದುಷ್ಪರಿಣಾಮಗಳನ್ನು ಸಹಿಸಬಲ್ಲ ಬೆಳೆಗಳನ್ನು ಮಾತ್ರ ಬೆಳೆಯಬೇಕು.

ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೪೦೦೦ ದಿಂದ ೬೦೦೦ ಮೈಕ್ರೋಮೋಹ್‌ಗಳಿರುವ ನೀರು ಸಾಮಾನ್ಯವಾಗಿ ನೀರಾವರಿಗೆ ನಿರುಪಯೋಗವೆಂದೇ ಪರಿಗಣಿಸಲಾಗಿದೆ. ಆದರೆ ನೀರು ಅತಿ ಸುಲಭವಾಗಿ ಬಸಿದು ಹೋಗುವ ಮಣ್ಣಿನಲ್ಲಿ, ಸಂಗ್ರಹಗೊಳ್ಳುವ ಲವಣಗಳನ್ನು ಆಗಾಗ ನಿವಾರಿಸುವ ವ್ಯವಸ್ಥೆ ಇರುವಲ್ಲಿ ಮತ್ತು ಲವಣದ ದುಷ್ಪರಿಣಾಮಗಳನ್ನು ಹೋಗಲಾಡಿಸುವ ಅನುಕೂಲತೆಯು ಇರುವಲ್ಲಿ ಇಂತಹ ನೀರನ್ನು ಬಹು ಎಚ್ಚರಿಕೆಯಿಂದ ಉಪಯೋಗಿಸಬಹುದು. ಆದರೆ ನೀರಿನ ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೬೦೦೦ ಮೈಕ್ರೋಮೋಹ್‌ಗಳಿಗಿಂತ ಅಧಿಕವಿರುವ ಜಲವು ನೀರಾವರಿಗೆ ನಿರುಪಯೋಗಿ ಎನಿಸಿದೆ.

ಸೋಡಿಯಂ : ಕ್ಯಾಲ್ಸಿಯಂ+ಮೆಗ್ನೀಸಿಯಂ ಪರಿಮಾಣ (ಸೋ: ಕ್ಯಾ+ಮೆ.) : ಲವಣದ ಪ್ರಮಾಣವನ್ನಾಧರಿಸಿ ನೀರಾವರಿಯ ಜಲವನ್ನು ವರ್ಗೀಕರಿಸಿದಂತೆ ಸೋ:ಕ್ಯಾ+ಮ.ಪಗಳ ಆಧಾರದ ಮೇಲೆ ನೀರನ್ನು ಅಲ್ಪ, ಮಧ್ಯಮ, ಅಧಿಕ ಮತ್ತು ಅತ್ಯಧಿಕ ಸೋ: ಕ್ಯಾ+ಮೆ.ಪ.ವಿರುವ ಜಲವೆಂದು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವರ್ಗದ ಪ್ರಮುಖ ವಿವರಗಳು ಕೆಳಗಿನಂತಿವೆ:

i. ಅಲ್ಪ ಪ್ರಮಾಣದಲ್ಲಿ ಸೋ: ಕ್ಯಾ+ಮೆ.ಪ. ಇರುವ ಜಲ (ಸೋ-೧) ಪರಿಮಾಣವು ಶೂನ್ಯದಿಂದ ೧೦ರವರೆಗಿರಬಹುದು. ಈ ಬಗೆಯ ನೀರನ್ನು ಎಲ್ಲ ಬಗೆಯ ಮಣ್ಣು ಮತ್ತು ಬೆಳೆಗಳಿಗೆ ಉಪಯೋಗಿಸಬಹುದು. ಮಣ್ಣಿನಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಸೋಡಿಯಂ ಸಂಗ್ರಹವಾದೀತೆಂಬ ಭಯವಿಲ್ಲ.

ii. ಮಧ್ಯಮ ಪ್ರಮಾಣದಲ್ಲಿ ಸೋ: ಕ್ಯಾ+ಮೆ.. ಇರುವ ಜಲ (ಸೋ): ಪರಿಮಾಣವು ೧೦ರಿಂದ ೧೮ ನೀರು ಸುಲಭವಾಗಿ ಬಸಿದು ಹೋಗುವ ಸ್ವಭಾವವಿರುವ ಮರಳು ಮಣ್ಣಿನಲ್ಲಿ ಅಥವಾ ಸಾವಯವ ಮಣ್ಣಿನಲ್ಲಿ (Organic Soil) ಇಂತಹ ನೀರನ್ನು ನಿರ್ಭಯವಾಗಿ ಬಳಸಬಹುದು. ಆದರೆ ಮಣ್ಣಿನಲ್ಲಿ ಜಿಪ್ಸಂ ಇರದ, ಧನ ಅಯಾನ್ ವಿನಿಮಯ ಸಾಮರ್ಥ್ಯವು ಅಧಿಕವಿರುವ, ಸುಲಭವಾಗಿ ನೀರು ಬಸಿದು ಹೋಗದ ಎರೆಮಣ್ಣಿನಲ್ಲಿ ಈ ನೀರನ್ನು ಉಪಯೋಗಿಸಿದರೆ ಸೋಡಿಯಂ ಸಂಗ್ರಹಗೊಂಡು ಮಣ್ಣಿಗೆ ಮತ್ತು ಅಲ್ಲಿ ಬೆಳೆಯುವ ಬೆಳೆಗಳಿಗೆ ಅಪಾಯವುಂಟಾಗುವ ಸಂಭವವೇ ಹೆಚ್ಚು.

iii. ಅಧಿಕ ಪ್ರಮಾಣದಲ್ಲಿ ಸೋ: ಕ್ಯಾ+ಮೆ.. ಇರುವ ಜಲ (ಸೋ): ಪರಿಮಾಣವು ೧೮ ರಿಂದ ೨೬. ಬಹುತೇಕ ಎಲ್ಲ ಮಣ್ಣುಗಳಲ್ಲಿಯೂ ಈ ನೀರಿನ ಬಳಕೆಯಿಂದ ವಿನಿಮಯ ಸೋಡಿಯಂ ಸಂಗ್ರಹಗೊಳ್ಳುತ್ತದೆ. ಸೋಡಿಯಂನ ದುಷ್ಪರಿಣಾಮಗಳನ್ನು ನಿವಾರಿಸಲು, ಬಸಿಗಾಲುವೆಗಳನ್ನು ನಿರ್ಮಿಸಿ, ಲವಣಗಳು ಕೆಳಗೆ ಬಸಿದು ಭೂ ಪ್ರದೇಶದಿಂದ ಹೊರಗೆ ಹೋಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ಮಣ್ಣಿನ ಕಣಗಳ ಸುತ್ತ ಸಂಗ್ರಹಗೊಂಡ ವಿನಿಮಯ ಸೋಡಿಯಂ ಅನ್ನು ಸ್ಥಳಾಂತರಿಸಲು ಸಾವಯವ ಪದಾರ್ಥಗಳನ್ನು ಮತ್ತು ರಾಸಾಯನಿಕ ಸುಧಾರಕಗಳನ್ನು ಮಣ್ಣಿನೊಡನೆ ಮಿಶ್ರ ಮಾಡಬೇಕು. ಜಿಪ್ಸಂ ಇರುವ ಮಣ್ಣಿನಲ್ಲಿ ಸೋಡಿಯಂನ ದುಷ್ಪರಿಣಾಮಗಳು ಅಷ್ಟಾಗಿ ಕಂಡು ಬರುವುದಿಲ್ಲ.

iv. ಅತ್ಯಧಿಕ ಸೋ: ಕ್ಯಾ+ಮೆ.. ಇರುವ ಜಲ (ಸೋ): ಪರಿಮಾಣವು ೨೬ಕ್ಕಿಂತ ಹೆಚ್ಚು. ಈ ಜಲವು ನೀರಾವರಿಗೆ ನಿರುಪಯೋಗಿ ಎಂದು ಪರಿಗಣಿಸಬಹುದು. ಆದರೆ ಕೆಳಗಿನ ಪರಿಸ್ಥಿತಿಗಳಿದ್ದಾಗ ಈ ನೀರನ್ನು ಕ್ವಚಿತ್ತಾಗಿ ಬಳಸಬಹುದು.

 • ಮಣ್ಣಿನಲ್ಲಿ ಮೂಲತಃ ಅಲ್ಪ ಇಲ್ಲವೇ ಮಧ್ಯಮ ಪ್ರಮಾಣದಲ್ಲಿ ಲವಣಗಳಿರಬೇಕು. ಅಧಿಕ ಪ್ರಮಾಣದಲ್ಲಿ ಲವಣಗಳಿರಬಾರದು.
 • ಮಣ್ಣಿನಲ್ಲಿ ಕ್ಯಲ್ಸಿಯಂನ ಪ್ರಾಬಲ್ಯವಿರಬೇಕು.
 • ಜಿಪ್ಸಂ ಇಲ್ಲೇ ಇತರ ರಾಸಾಯನಿಕ ಸುಧಾರಕಗಳನ್ನು ಮಣ್ಣಿಗೆ ಸೇರಿಸಿ ಲವಣಗಳು ಬಸಿದು ಹೋಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು.

ಕನ್ವಾರ್ ಅವರು ಸೂಚಿಸಿದ ವರ್ಗೀಕರಣ: ಯಾವುದೇ ಒಂದು ಗಣಮಟ್ಟದ ನೀರನ್ನು ಮರಳು ಮಣ್ಣಿಗೆ ಸುರಕ್ಷಿತವಾಗಿ ಉಪಯೋಗಿಸಬಹುದಾದರೂ ಅದೇ ನೀರು ಎರೆ ಮಣ್ಣಿಗೆ ನಿರುಪಯೋಗವೆನಿಸಬಹುದು. ಅದರಂತೆಯೇ, ಒಂದು ಬೆಳೆಗೆ, ಸುರಕ್ಷಿತವೆನಿಸಿದ ನೀರು ಇನ್ನೊಂದು ಬೆಳೆಗೆ ಅಪಾಯಕಾರಿ ಎನಿಸಬಹುದು. ನೀರಿನಲ್ಲಿರುವ ಲವಣಗಳ ಪ್ರಮಾಣ ಸೋ: ಕ್ಯಾ+ಮೆ.ಗಳ ಪರಿಮಾಣ ಮತ್ತು ಬೆಳೆಗಳ ಸ್ವಭಾವ ಇವುಗಳನ್ನು ಸಂಯೋಜಿಸಿ ಜೆ.ಎಸ್.ಕನ್ವಾರ್ ಎಂಬುವರು ನೀರಾವರಿ ಜಲವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದಾರೆ. ಈ ಪದ್ಧತಿಯ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿವೆ.

ನೀರಿನಲ್ಲಿರುವ ಲವಣದ ಪ್ರಮಾಣ: ನೀರಾವರಿ ಜಲದಲ್ಲಿರುವ ಲವಣದ ಪ್ರಮಾಣವನ್ನಾಧರಿಸಿ ನೀರಿನ ೫ ಗುಂಪುಗಳನ್ನು ಗುರುತಿಸಲಾಗಿದೆ.

ಗುಂಪಿನ ಹೆಸರು

ವಿದ್ಯುತ್ ವಹನ (ಪ್ರತಿ ಸೆಂ.ಮೀ.ಗೆ ಮೈಕ್ರೋಮೋಹ್‌ಗಳು)

ಅಲ್ಪ ಪ್ರಮಾಣದ ಲವಣ ೦-೨೫೦
ಮಧ್ಯಮ ಪ್ರಮಾಣದ ಲವಣ ೨೫೦-೭೫೦
ಮಧ್ಯಮದಿಂದ ಅಧಿಕ ಪ್ರಮಾಣದ ಲವಣ ೭೫೦-೨೨೫೦
ಅಧಿಕ ಪ್ರಮಾಣದ ಲವಣ ೨೨೫೦-೫೦೦೦
ಅತ್ಯಧಿಕ ಪ್ರಮಾಣದ ಲವಣ ೫೦೦೦-೨೦,೦೦೦

ನೀರಿನಲ್ಲಿರುವ ಸೋಡಿಯಂನಿಂದಾಗುವ ಅಪಾಯ: ನೀರಿನ ಸೋಡಿಯಂ: ಕ್ಯಾಲ್ಸಿಯಂ+ಮೆಗ್ನೀಸಿಯಂ ಪರಿಮಾಣದ ಮೇಲೆ ನಾಲ್ಕು ಗುಂಪುಗಳನ್ನು ಮಾಡಲಾಗಿದೆ.

ಗುಂಪಿನ ಹೆಸರು

ಸೋ: ಕ್ಯಾ_ಮೆ.ಪ.

ಅಲ್ಪ ೦-೧೦
ಮಧ್ಯಮ ೧೦-೧೮
ಅಧಿಕ ೧೮-೨೬
ಅತ್ಯಧಿಕ ೨೬ಕ್ಕಿಂತ ಅಧಿಕ

ಈ ಬೆಳೆಗಳನ್ನು ಪರಿಗಣಿಸಿ ನೀರಾವರಿ ಜಲವನ್ನು ಮುಂದಿನ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.

ಲವಣಗಳ ಮತ್ತು ಸೋಡಿಯಂನ ಸಾನಿಧ್ಯವನ್ನು

 • ಸಹಿಸಕೊಳ್ಳಲಾಗದ ಬೆಳೆಗಳಿಗೆ ಸೂಕ್ತವೆನಿಸುವ ಜಲ ವರ್ಗ-I
 • ಸಹಿಸಿಕೊಳ್ಳಬಲ್ಲ ಬೆಳೆಗಳಿಗೆ ಸೂಕ್ತವೆನಿಸುವ ಜಲ ವರ್ಗ-II
 • ತಕ್ಕಮಟ್ಟಿಗೆ ಸಹಿಸಿಕೊಳ್ಳಬಲ್ಲ ಬೆಳೆಗಳಿಗೆ ಸೂಕ್ತವೆನಿಸುವ ಜಲ ವರ್ಗ-III ಇವುಗಳಲ್ಲದೇ
 • ನೀರಾವರಿಗೆ ನಿರುಪಯೋಗಿಯಾದ ಜಲ ವರ್ಗ-IV

ಮೇಲೆ ಹೇಳಿದ ಮೂರು ಸಂಗತಿಗಳನ್ನು ಮಣ್ಣಿನ ಗುಣಧರ್ಮಗಳೊಡನೆ ಸಂಯೋಜಿಸಿ ತ್ರಿಕೋನ ರೇಖಾ ಚಿತ್ರವನ್ನು ರಚಿಸಿದ್ದಾರೆ. ಈ ರೇಖಾ ಚಿತ್ರದ ಸಹಾಯದಿಂದ ಯಾವುದೇ ಗುಣಮಟ್ಟದ ನೀರು ಯಾವ ಪ್ರಕಾರದ ಮಣ್ಣಿನಲ್ಲಿ ಯಾವ ಗುಂಪಿನ ಬೆಳೆಗೆ ಸೂಕ್ತವಿದೆ ಎಂಬುದನ್ನು ಕಂಡು ಹಿಡಿಯಬಹುದು.

ಕೇಂದ್ರೀಯ ಮೃತ್ತಿಕಾ ಲವಣ ಸಂಶೋಧನಾ ಸಂಸ್ಥೆಯು ಸೂಚಿಸಿದ ಬದಲಾವಣೆಗಳು: ನೀರಾವರಿಯ ಜಲ ವರ್ಗೀಕರಣದಲ್ಲಿ ವಿವರಿಸಿದ ನೀರಿನ ವರ್ಗೀಕರಣವು ಭಾರತದ ಕೆಲವು ಪ್ರದೇಶಗಳಿಗೆ ಅನ್ವಯವಾಗುವುದಿಲ್ಲವೆಂದು ಕಂಡು ಬಂದಿದೆ. ಅದರಲ್ಲಿ ಸೂಚಿಸಿದ “ಅತ್ಯಧಿಕ ಲವಣದ ಮಟ್ಟ”ಕ್ಕಿಂತ ಅಧಿಕ ಲವಣವಿರುವ ನೀರು ಹರಿಯಾಣಾ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಯಶಸ್ವಿಯಾಗಿ ಬೆಳೆಗಳಿಗೆ ಬಳಸಲಾಗುತ್ತಿದೆ. ಇದನ್ನು ಅನುಲಕ್ಷಿಸಿ, ಕರ್ನಾಟಕದಲ್ಲಿರುವ ಕೇಂದ್ರಿಯ ಮೃತ್ತಿಕಾ ಲವಣ ಸಂಶೋಧನಾ ಸಂಸ್ಥೆಯು ೧೯೭೨ರಲ್ಲಿ ನಡೆಸಿದ ಸಭೆಯಲ್ಲಿ ನೀರಾವರಿ ಜಲದ ವರ್ಗೀಕರಣ ಕುರಿತು ಕೆಲವು ಬದಲಾವಣೆಗಳನ್ನು ಸೂಚಿಸಿತು. ಆ ಸೂಚನೆಯ ಪ್ರಮುಖ ಅಂಶಗಳನ್ನು ಕೋಷ್ಟಕ ೯ರಲ್ಲಿ ಕೊಡಲಾಗಿದೆ.

ಕೋಷ್ಟಕ : ನೀರಾವರಿ ಜಲದ ವರ್ಗೀಕರಣಕ್ಕೆ ಸೂಚಿತ ಬದಲಾವಣೆಗಳು

ಅ. ಸಂ.

ಮಣ್ಣಿನ ಗುಣಧರ್ಮಗಳು

ಲವಣಗಳ ಸಾನ್ನಿಧ್ಯಕ್ಕೆ ಬೆಳೆಯು ಸಹಿಷ್ಣುತೆ

ನೀರಾವರಿ ಜಲದಲ್ಲಿರಬಹುದಾದ ವಿದ್ಯುತ್ ವಹನ. ಪ್ರತಿ ಸೆಂ.ಮೀ.ಗೆ ಮಾಯ್ಕ್ರೋಮೋಹ್

೧. ಆಳವಾದ ಕಪ್ಪುಮಣ್ಣು ಮತ್ತು ರೇವೆ ಮಣ್ಣು. ಎರೆ ಕಣಗಳ ಪ್ರಮಾಣವು ಶೇಕಡಾ ೩೦ಕ್ಕಿಂತ ಅಧಿಕ: ನೀರು ಬಸಿದು ಹೋಗುವ ಸಾಮರ್ಥ್ಯವು ಮಧ್ಯಮ ಮಧ್ಯಮ ಸಹಿಷ್ಣು ಬೆಳೆಗಳು ೧೫೦೦
ಪೂರ್ಣ ಸಹಿಷ್ಣುತೆ ಇರುವ ಬೆಳೆಗಳು ೨೦೦೦
೨. ಜಿನುಗು ಕಣಗಳಿರುವ ಮಣ್ಣು ಎರೆ ಕಣಗಳ ಪ್ರಮಾಣವು ಶೇಕಡಾ ೨೦ರಿಂದ ೩೦. ಆಳದವರೆಗೆ ನೀರು ಸರಿಯಾಗಿ ಬಸಿದು ಹೋಗಬಲ್ಲದು. ನೀರಿನ ಚಲನೆಯು ಮೇಲ್ಭಾಗದಲ್ಲಿಯೂ ಉತ್ತಮವಾಗಿದೆ. ಮಧ್ಯಮ ಸಹಿಷ್ಣು ಬೆಳೆಗಳು ೨೦೦೦
ಸಹಿಷ್ಣುಗಳು ೪೦೦೦
೩. ಮಣ್ಣಿನ ಎರೆಕಣಗಳ ಪ್ರಮಾಣವು ಶೇಕಡಾ ೧೦ರಿಂದ ೨೦. ನೀರು. ಮೇಲಿನಿಂದ ಕೆಳವರೆಗೆ ನಿರಾತಂಕವಾಗಿ ಬಸಿದು ಹೋಗಬಲ್ಲದು. ಮಧ್ಯಮ ಸಹಿಷ್ಣು ಬೆಳೆಗಳು ೪೦೦೦
ಸಹಿಷ್ಣು ಬೆಳೆಗಳು ೬೦೦೦
೪. ಎರೆಕಣಗಳ ಪ್ರಮಾಣವು ಶೇಕಡಾ ೧೦ಕ್ಕಿಂತ ಕಡಿಮೆ ಇರುವ ಹಗುರ ಮಣ್ಣು. ನೀರು ಬಹು ಸುಲಭವಾಗಿ ಬಸಿಯುತ್ತದೆ. ಮಧ್ಯಮ ಸಹಿಷ್ಣು ಬೆಳೆಗಳು ೬೦೦೦
ಸಹಿಷ್ಣು ಬೆಳೆಗಳು ೮೦೦೦

 

ಎಲ್ಲ ಪರಿಸ್ಥಿತಿಗಳಿಗೆ ಒಂದೇ ವಿಧದ ವರ್ಗೀಕರಣವು ಅನ್ವಯವಾಗಲಾರದು ಎಂಬ ಮಾತು ಮೇಲಿನ ಮೂರು ಬಗೆಯ ವರ್ಗೀಕರಣದಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ, ನೀರಾವರಿ ಜಲದ ಬಳಕೆಯನ್ನು ಮಾಡುವಾಗ ಈ ಪದ್ಧತಿಗಳು ಉತ್ತಮ ಮಾರ್ಗದರ್ಶಿಗಳು ಎಂಬುದರಲ್ಲಿ ಸಂದೇಹವಿಲ್ಲ. ಪರಿಸ್ಥಿತಿಗನುಗುಣವಾಗಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬೆಳೆಗಳ ಲವಣ ಸಹಿಷ್ಣುತೆ: ಕೆಲವು ಬೆಳೆಗಳು, ಲವಣಗಳಿಂದಾಗುವ ದುಷ್ಪರಿಣಾಮಗಳನ್ನು ಸಹಿಸಿಕೊಂಡು, ಉತ್ತಮ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿವೆಯಾದರೆ, ಇನ್ನು ಕೆಲವು ಬೆಳೆಗಳು ಲವಣಗಳ ಉಪಸ್ಥಿತಿಯನ್ನು ತಡೆದುಕೊಳ್ಳಲಾರದೆ ಕುಂಠಿತಗೊಳ್ಳುತ್ತವೆ. ಲವಣಗಳ ಅಪಾಯವನ್ನು ಎದುರಿಸುವಲ್ಲಿ ಮಧ್ಯಮ ಸಾಮರ್ಥ್ಯವನ್ನು ಹೊಂದಿದ ಬೆಳೆಗಳೂ ಇವೆ. ಮೇಲಿನ ಮೂರು ವರ್ಗಗಳಿಗೆ ಸೇರಿದ ಪ್ರಮುಖ ಬೆಳೆಗಳ ಹೆಸರುಗಳನ್ನು ಕೋಷ್ಟಕ ೧೦ರಲ್ಲಿ ಕೊಡಲಾಗಿದೆ.

ಕೋಷ್ಟಕ ೧೦: ಲವಣಗಳ ದುಷ್ಪರಿಣಾಮವನ್ನು ಸಹಿಸಿಕೊಳ್ಳುವ ಸಾಮರ್ಥ್ಯದ ಮೇಲಿಂದ ಬೆಳೆಗಳ ವರ್ಗೀಕರಣ

ಲವಣ ಸಹಿಷ್ಣು ಬೆಳೆಗಳು

ಮಧ್ಯಮ ಸಹಿಷ್ಣು ಬೆಳೆಗಳು

ಲವಣಗಳ ಉಪಸ್ಥಿತಿಯನ್ನು ಸಹಿಸಿಕೊಳ್ಳಲಾರದ ಬೆಳೆಗಳು

ವಿದ್ಯುತ್ ವಹನ ಪ್ರತಿ ಸೆಂ.ಮೀ.ಗೆ ಮಿಲಿ ಮೋಹ್‌ಗಳಲ್ಲಿ

. ಹೊಲಗದ್ದೆಗಳ ಬೆಳೆಗಳು
೧೦ ರಿಂದ ೧೬ ೬ ರಿಂದ ೯ ೪ ಕ್ಕಿಂತ ಕಡಿಮೆ
ಬಾರ್‌ಲಿ (ಜವೆಗೋಧಿ) ಓಟ್ಸ್‌ ಅವರೆ
ಧೈಂಚಾ ಗೋಧಿ ಕಡಲೆ
ಸಕ್ಕರೆ ಬೀಟು ಜೋಳ  
ತಂಬಾಕು ಬತ್ತ ಬಟಾಣಿ
ಸಾಸಿವೆ ಮತ್ತು ರೇಪ್‌ಬೆಳೆ ಸಜ್ಜೆ  
ಹತ್ತಿ ಮುಸುಕಿನಜೋಳ  
ಕಬ್ಬು ತೊಗರಿ  
  ಹೆಸರು  
  ಸೂರ್ಯಕಾಂತಿ  
  ಔಡಲ (ಹರಳು)  
  ಎಳ್ಳು  
  ಅಗಸೆ  
. ಮೇವಿನ ಬೆಳೆಗಳು
೧೨ ರಿಂದ ೧೯ ೪ ರಿಂದ ೧೧ ೪ಕ್ಕಿಂತ ಕಡಿಮೆ
ಕರಿಕೆ ಸುಡಾನ್ ಹುಲ್ಲು ಚವಳಿ
ರೋಡ್ಸ್‌ಹುಲ್ಲು ಕುದುರೆ ಮೆಂತೆ ಕೆಂಪು ಕ್ಲೋವರ್
  ಜೋಳ ಲೆಡಿನೋ ಕ್ಲೋವರ್
  ಮುಸುಕಿನ ಜೋಳ  
  ಬರಸೀಮ್  
  ಅಲಸಂದೆ  
  ಓಟ್ಸ್‌  
. ತರಕಾರಿ ಬೆಳೆಗಳು
೧೦ ರಿಂದ ೧೨ ೪ ರಿಂದ ೯ ೪ಕ್ಕಿಂತ ಕಡಿಮೆ
ಬೀಟುಗಡ್ಡೆ ಟೋಮೆಟೊ ಸಿಲೆರಿ
ಅಸ್ಪೆರಾಗಸ್‌ ಕ್ಯಾಬೇಜ್‌ ಅವರೆ
ಪಾಲಕ ಕಾಲಿಪ್ಲವರ್  
  ಲೆಟ್ಯೂಸ್‌  
  ಬಟಾಟೆ (ಆಲೂಗಡ್ಡೆ)  
  ಗಜ್ಜರಿ  
  ಬಟಾಣಿ  
  ಸೌತೆ  
  ಕುಂಬಳ  
  ಹಾಗಲ  
. ಹಣ್ಣಿನ ಮರಗಳು
ಖರ್ಜೂರ ದಾಳಿಂಬೆ ಪಿಯರ್‌
ತೆಂಗು ದ್ರಾಕ್ಷಿ ಸೇಬು
  ಅಂಜೂರ ಕಿತ್ತಳೆ
    ಕಂಚಿ
    ಪ್ರೂನ್‌
    ಪ್ಲಮ್‌
    ಬಾದಾಮಿ
ಎಫ್ರಿಕಾಟ್   ಎಫ್ರಿಕಾಟ್
    ಪೀಚ್‌
    ಸ್ಟ್ರಾಬರಿ
    ಲಿಂಬೆ
ಅವಾಕಡೋ   ಅವಾಕಡೋ

ಈ ವಿಷಯಕ್ಕೆ ಸಂಬಂಧಿಸಿದ ಮುಂದಿನ ಸಂಗತಿಗಳನ್ನು ಗಮನಿಸಬೇಕು.

 • ಪ್ರತಿ ಗುಂಪಿನಲ್ಲಿ ಮೇಲಿನಿಂದ ಕೆಳಗೆ ಸರಿದಂತೆ ಬೆಳೆಗಳ ಲವಣ ಸಹಿಷ್ಣುತೆಯು ಕಡಿಮೆಯಾಗುತ್ತದೆ.
 • ಮಣ್ಣಿನ ಫಲವತ್ತತೆ ಹಾಗೂ ಇತರ ಗುಣಧರ್ಮಗಳು, ಪ್ರದೇಶದ ಹವಾಮಾನ, ತಳಿಗಳ ಸ್ವಭಾವ, ನೀರಿನ ನಿರ್ವಹಣೆ ಇತ್ಯಾದಿಗಳು ಬೆಳೆಗಳ ಲವಣ ಸಹಿಷ್ಣುತೆಯ ಮೇಲೆ ಪರಿಣಾಮಗಳನ್ನು ಬೀರುತ್ತವೆ.

ಲವಣದಿಂದ ಉಂಟಾಗುವ ಪರಿಣಾಮವು ಸಸ್ಯದ ಬೆಳವಣಿಗೆಯ ಹಂತವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಬತ್ತವು ಮೊಳಕೆಯೊಡೆಯುವ ಹಂತವನ್ನು ಲವಣದ ಸಾನ್ನಿಧ್ಯವನ್ನು ಸಹಿಸಿಕೊಳ್ಳಬಲ್ಲದು. ಆದರೆ ಬತ್ತದ ಎಳೆಸಸಿಗಳ ಮೇಲೆ ಲವಣದ ದುಷ್ಪರಿಣಾಮವುಂಟಾಗುತ್ತದೆ. ಅದರಂತೆಯೇ ಮುಸುಕಿನ ಜೋಳವು ಮೊಳಕೆಯೊಡೆಯುವಾಗ ಲವಣಗಳ ದುಷ್ಪರಿಣಾಮಗಳನ್ನು ತಡೆದುಕೊಳ್ಳಬಲ್ಲದಾದರೂ ಬೆಳವಣಿಗೆಯ ನಂತರದ ಹಂತಗಳಲ್ಲಿ ಲವಣಗಳ ಉಪಸ್ಥಿತಿಯನ್ನು ಸಹಿಸಿಕೊಳ್ಳಲಾರದು. ತದ್ವಿರುದ್ಧವಾಗಿ, ಸಕ್ಕರೆ ಬೀಟಿನ ಬೀಜಗಳು ಮಣ್ಣಿನ ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೪ ಮಿಲಿಮೋಹ್‌ಗಳಿಗಿಂತ ಕಡಿಮೆ ಇದ್ದಾಗ ಮಾತ್ರ ಮೊಳಕೆಯೊಡೆಯುತ್ತವೆ. ಆದರೆ ಸಸಿಗಳು ಒಮ್ಮೆ ಬೇರುಬಿಟ್ಟವೆಂದರೆ ಅಧಿಕ ಲವಣಗಳಿದ್ದರೂ ಅವುಗಳಿಂದಾಗುವ ದುಷ್ಪರಿಣಾಮಗಳನ್ನು ತಡೆದುಕೊಂಡು ಸಮಾಧಾನಕರವಾಗಿ ಬೆಳೆಯಬಲ್ಲವು.