ಸಸ್ಯಗಳ ಬೆಳವಣಿಗೆಗೆ ನೀರು ಅತ್ಯವಶ್ಯ. ಆದರೆ, ಅವುಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಮತ್ತು ಅವುಗಳನ್ನು ವರ್ಷದ ಎಲ್ಲ ಹಂಗಾಮುಗಳಲ್ಲಿ ಬೆಳೆದರೆ ಬೇಕಾಗುವಷ್ಟು ನೀರು ಕೇವಲ ಮಳೆಯಿಂದ ಪೂರೈಕೆಯಾಗಲಾರದು. ಅದಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ವಿವಿಧ ಜಲಮೂಲಗಳಿಂದ ನೀರನ್ನು ತಂದು, ಮಣ್ಣಿಗೆ ಪೂರೈಸಿ ಬೆಳೆಗಳಿಗೆ ನೀರು ದೊರೆಯುವಂತೆ ಮಾಡುವ ವಿಧಾನಕ್ಕೆ ನೀರಾವರಿ ಎಂಬ ಹೆಸರಿದೆ. ಇತರ ಕೃಷಿ ಕ್ರಮಗಳನ್ನು ಸೂಕ್ತ ರೀತಿಯಿಂದ ಕೈಕೊಂಡು, ನೀರಾವರಿಯ ಅನುಕೂಲತೆಯನ್ನೂ ಮಾಡಿಕೊಟ್ಟರೆ ಬೆಳೆಯ ಇಳುವರಿ ಅಧಿಕಗೊಳ್ಳುವುದಲ್ಲದೇ, ಉತ್ಪಾದನೆಯ ಅನಿಶ್ಚಿತತೆಯೂ ದೂರವಾಗುತ್ತದೆ. ಆದರೆ ಅಸಮರ್ಪಕ ನೀರಾವರಿಯಿಂದ, ಬೆಳೆಗಳಿಗೆ ಮತ್ತು ಮಣ್ಣಿಗೆ ಅಪಾಯವುಂಟಾಗುವುದೆಂಬುದನ್ನು ಮರೆಯುವಂತಿಲ್ಲ. ಹೆಚ್ಚು ಖರ್ಚಿನ ಈ ವಿಧಾನವನ್ನು ಸಮರ್ಪಕ ರೀತಿಯಿಂದ ಕೈಕೊಂಡು, ಅಧಿಕ ಉತ್ಪಾದನೆ ಮತ್ತು ಹೆಚ್ಚಿನ ಲಾಭಗಳನ್ನು ಪಡೆದು, ಭೂಮಿಯ ಉತ್ಪಾದಕತೆಯು ಕುಗ್ಗುವಂತೆ ಮಾಡಲು ಉಪಯೋಗವಾಗಬಲ್ಲ ಕೆಲವು ಪ್ರಮುಖ ವಿಚಾರಗಳು ಈ ಅಧ್ಯಾಯದಲ್ಲಿವೆ.

ನೀರಾವರಿಯ ಇತಿಹಾಸ

ನೀರಾವರಿಯು ಬಹು ಪುರಾತನವಾದ ಕೃಷಿ ಕಾರ್ಯವೆನ್ನಬಹುದು. ಈಜಿಪ್ಟ್ ಮತ್ತು ಚೀನಾದೇಶಗಳಲ್ಲಿ ೪೦೦೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೀರಾವರಿಯನ್ನೊದಗಿಸಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಭಾರತದ ಅತಿ ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ನೀರಾವರಿಯ ಬಗ್ಗೆ ಉಲ್ಲೇಖವಿದೆ. ನಂತರದ ಶತಮಾನಗಳಲ್ಲಿ ಈ ಪದ್ಧತಿಯು ವಿಕಸನಗೊಂಡಿತೆಂಬ ವಿಷಯವು ಪುರಾಣ, ಮಹಾಕಾವ್ಯಗಳು, ಅರ್ಥಶಾಸ್ತ್ರ, ನ್ಯಾಯಶಾಸ್ತ್ರ ಮುಂತಾದ ಪುರಾತನ ಗ್ರಂಥಗಳಿಂದ ಮತ್ತು ಶಾಸನಗಳಿಂದ ತಿಳಿದು ಬರುತ್ತದೆ. ಇವುಗಳಿಂದ ದೊರೆತ ಕೆಲವು ಪ್ರಮುಖ ಸಂಗತಿಗಳು ಕೆಳಗಿನಂತಿವೆ:

 • ಬಾವಿಯ ಬಗ್ಗೆ ಮತ್ತು ಬಾವಿಯಿಂದ ನೀರನ್ನು ಮೇಲೆತ್ತುವ ಹಲವು ಬಗೆಯ ಸಾಧನಗಳ ಬಗ್ಗೆ ಋಗ್ವೇದದಲ್ಲಿ ವಿವರಗಳಿವೆ.
 • ಅಥರ್ವಣ ವೇದದಲ್ಲಿಯೂ ನೀರಾವರಿಯ ಬಗ್ಗೆ ಹಲವು ಸಂಗತಿಗಳ ಉಲ್ಲೇಖವಿದೆ.
 • ಸಚ್ಛಿದ್ರವಾದ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣು, ನೀರಾವರಿಗೆ ಸೂಕ್ತವೆಂದೂ ನೀರಾವರಿ ಪದ್ಧತಿಯನ್ನು ಕೈಗೊಳ್ಳುವಾಗ ಭೂಮಿಗೆ ನೀರನ್ನು ಒದಗಿಸಲು ಒಂದು ಮತ್ತು ಹೆಚ್ಚಾದ ನೀರನ್ನು ಹೊರಹಾಕಲು ಇನ್ನೊಂದು ಹೀಗೆ ಎರಡು ಬಗೆಯ ಕಾಲುವೆಗಳು ಇರಬೇಕೆಂದು ನಾರದ ಸ್ಮೃತಿಯಲ್ಲಿ ಹೇಳಿದೆ.
 • ಸೂಕ್ತ ಅಂತರಗಳಲ್ಲಿ ಕೆರೆಗಳನ್ನು ಕಟ್ಟಿಸಿ, ಕೃಷಿ ಸುಧಾರಣೆಯತ್ತ ಗಮನವನ್ನು ಹರಿಸಬೇಕೆಂದು ಯುಧಿಷ್ಠಿರನಿಗೆ ನಾರದ ಮಹರ್ಷಿಗಳು ಆದೇಶಿಸಿದ ಪ್ರಸಂಗವು ಮಹಾಭಾರತದಲ್ಲಿ ಬಂದಿದೆ.
 • ವರ್ಷವಿಡೀ ನೀರಿರುವ ಇಲ್ಲವೇ ಇತರ ಮೂಲಗಳಿಂದ ನೀರನ್ನು ಸಂಗ್ರಹಿಸಲು ಸಾಧ್ಯವಾಗುವ ಜಲಾಶಯಗಳನ್ನು ನಿರ್ಮಿಸಬೇಕೆಂದೂ ತಮ್ಮದೇ ಆದ ಜಲಾಶಯಗಳನ್ನು ನಿರ್ಮಿಸಿಕೊಳ್ಳುವ ವ್ಯಕ್ತಿಗಳಿಗೆ ನಿವೇಶನ, ರಸ್ತೆಯ ಸೌಲಭ್ಯ ಮತ್ತು ಇತರ ಅವಶ್ಯಕ ಸಾಮಗ್ರಿಗಳನ್ನು ಒದಗಿಸಬೇಕೆಂದೂ ರಾಜನಿಗೆ ನಿರ್ದೇಶನವನ್ನು ನೀಡಿದ ಬಗ್ಗೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹೇಳಲಾಗಿದೆ.
 • ನೀರಾವರಿಗೆ ಜಲಾಶಯವನ್ನು ನಿರ್ಮಿಸಲು ರಚನೆಗೊಂಡ ಸಹಕಾರಿ ಸಂಸ್ಥೆಗಳಿದ್ದ ಬಗ್ಗೆ ಮತ್ತು ನೀರಾವರಿಯ ಪದ್ಧತಿಗನುಗುಣವಾಗಿ ಕಂದಾಯವನ್ನು ವಿಧಿಸಲು ಸರಕಾರದ ವಿಶೇಷ ಅಧಿಕಾರಿಯಿದ್ದ ಬಗ್ಗೆ ಸಹ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಗಳಿವೆ.
 • ಕಶ್ಯಪ ಮಹರ್ಷಿಗಳು ಜಲಾಶಯವನ್ನು ನಿರ್ಮಿಸಲು ಸೂಕ್ತ ನಿವೇಶನಗಳನ್ನು ಆರಿಸುವ ಬಗ್ಗೆ ಅವಶ್ಯವಿರುವ ವಿವರಗಳನ್ನು ಮತ್ತು ಜಲಾಶಯಗಳ ವಿವಿಧ ಪ್ರಯೋಜನಗಳನ್ನು ತಮ್ಮ ಕೃಷಿ ಗ್ರಂಥದಲ್ಲಿ ಚರ್ಚಿಸಿದ್ದಾರೆ. ಹೊರಗಿನಿಂದ ನೀರನ್ನು ತಂದು ಈ ಜಲಾಶಯಗಳಲ್ಲಿ ಅದನ್ನು ಸಂಗ್ರಹಿಸುವ ರೀತಿ, ಸಂಗ್ರಹಿಸಿದ ನೀರನ್ನು ವಿನಿಯೋಗಿಸಲು ಮಾಡಿಕೊಳ್ಳಬೇಕಾದ ವಿವಿಧ ರಚನೆಗಳು ಇತ್ಯಾದಿಗಳ ಬಗ್ಗೆ ಈ ಗ್ರಂಥದಲ್ಲಿ ವಿವರಗಳಿವೆ. ಅದರಂತೆಯೇ, ನದಿಗಳಿಂದ, ಸರೋವರಗಳಿಂದ, ಇತರ ಜಲಾಶಯಗಳಿಂದ ಮತ್ತು ಬೆಟ್ಟದ ಇಳಿಜಾರಿನಿಂದ ನೀರನ್ನು ಪೂರೈಸುವ ಕಾಲುವೆಗಳ ಬಗ್ಗೆಯೂ ವಿವರವಾದ ವರ್ಣನೆಯಿದೆ.
 • ವರಾಹ, ಸಾರಸ್ವತ, ಗಾರ್ಗ್ಯ, ಹೇಮಾದ್ರಿ ಮೊದಲಾದವರ ಕೃತಿಗಳ ಆಧಾರದ ಮೇಲೆ ಮತ್ತು ತಮ್ಮ ಅನುಭವದಿಂದ, ಮಥುರೆಯ ಚಕ್ರಪಾಣಿಯೆಂಬ ಪಂಡಿತನು, ರಾಜನ ಅಪೇಕ್ಷೆಯ ಮೇರೆಗೆ, “ವಿಶ್ವವಲ್ಲಭ” ಎಂಬ ಗ್ರಂಥವನ್ನು ರಚಿಸಿದ್ದಾನೆ. ಯಾವ ಪ್ರದೇಶದಲ್ಲಿ ನೀರು ಯಾವ ನಿರ್ದಿಷ್ಟ ಸ್ಥಳದಲ್ಲಿದೆ, ಎಷ್ಟು ಆಳದಲ್ಲಿದೆ ಮತ್ತು ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಎಂಬುದನ್ನು ಕಂಡು ಹಿಡಿಯುವ ಹಲವು ಕಾರ್ಯತಂತ್ರಗಳ ಬಗ್ಗೆ ಈ ಗ್ರಂಥದಲ್ಲಿ ವಿವರಗಳಿವೆ. ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ, ಶುಷ್ಕ ಪ್ರದೇಶಗಳಲ್ಲಿ ಮತ್ತು ಪರ್ವತಮಯ ಪ್ರದೇಶಗಳಲ್ಲಿ ಅಂತರ್ಜಲವನ್ನು ಕಂಡು ಹಿಡಿಯುವ ಬಗ್ಗೆ ಪ್ರತ್ಯೇಕ ತಂತ್ರಗಳನ್ನು ವಿವರಿಸಲಾಗಿದೆ. ಒಂದು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿರುವ ಗಿಡ ಮರಗಳ ಪ್ರಕಾರಗಳು, ಕಲ್ಲು ಮತ್ತು ಮಣ್ಣಿನ ಗುಣಧರ್ಮಗಳು, ಗೆದ್ದಲಿನ ಹುತ್ತಗಳು, ಹುತ್ತದ ಮಣ್ಣಿನ ಸ್ವಭಾವ ಇತ್ಯಾದಿಗಳ ಆಧಾರದ ಮೇಲಿಂದ ಅಂತರ್ಜಲದ ವಿವರಗಳನ್ನು ಅರಿಯುವ ರೀತಿಯನ್ನು ಈ ಗ್ರಂಥದಲ್ಲಿ ಬಣ್ಣಿಸಲಾಗಿದೆ. ಜಲಾಶಯಗಳ ನಿರ್ಮಾಣದ ವಿವರಗಳು ಹಾಗೂ ಅವುಗಳನ್ನು ನಿರ್ಮಿಸುವಾಗ ಎದುರಾಗುವ ಕಲ್ಲು ಬಂಡೆಗಳನ್ನು ಒಡೆದು ತೆಗೆಯುವ ರೀತಿ ಇತ್ಯಾದಿಗಳ ವಿವರಗಳೂ ಈ ಗ್ರಂಥದಲ್ಲಿವೆ.
 • ಚಂದ್ರಗುಪ್ತನ ರಾಜ ಪ್ರತಿನಿಧಿಯಾದ ಪುಷ್ಪಗುಪ್ತನು ತೋಡಿಸಿದ “ಸುದರ್ಶನ” ಕೆರೆಯ ನೀರಾವರಿ ಕಾಲುವೆಯನ್ನು, ಅಶೋಕ ಚಕ್ರವರ್ತಿಯ ಪೂರ್ಣಗೊಳಿಸಿದ ವಿಷಯವು ಒಂದು ಐತಿಹಾಸಿಕ ಸತ್ಯಾಂಶವಾಗಿದೆ. ನಂತರ ಆಳಿದ ರಾಜರೂ ಕೃಷಿ ಬಳಕೆಗಾಗಿ ಅನೇಕ ಕೊಳಗಳನ್ನು ನಿರ್ಮಿಸಿದರು. ಇವುಗಳ ಅವಶೇಷಗಳು ಪಶ್ಚಿಮ ಬಂಗಾಳದಲ್ಲಿ ಇಂದಿಗೂ ಕಂಡುಬರುತ್ತದೆ.
 • ಬುದ್ಧನ ಕಾಲದಲ್ಲಿಯೂ ನೀರಾವರಿಯ ವಿಸ್ತೃತ ಜಾಲವಿದ್ದ ಬಗ್ಗೆ ವಿವರಗಳಿವೆ.

ಈ ಸಂದರ್ಭದಲ್ಲಿ ಒಂದು ಮಹತ್ವದ ಸಂಗತಿಯನ್ನು ಗಮನಿಸಬೇಕಾದುದು ಅವಶ್ಯವೆನ್ನಬಹುದು. ಉತ್ಪಾದನೆಯು ಅಧಿಕಗೊಂಡು, ನಿಶ್ಚಿತವಾದ ಆದಾಯವು ದೊರೆತು, ಸಮಾಜಗಳು ಸಂಪದ್ಭರಿತವಾಗಿ ಬೆಳೆದು ಬರಲು ನೀರಾವರಿಯಿಂದ ಸಾಧ್ಯವೆಂಬುದರಲ್ಲಿ ಸಂದೇಹವಿಲ್ಲ. ಆದರೆ ನೀರಿನ ಅಸಮರ್ಪಕ ನಿರ್ವಹಣೆ, ಸಂಬಂಧಿಸಿದವರ ಅಲಕ್ಷ್ಯ ಮತ್ತು ರಾಜಕೀಯ ಅಸ್ಥಿರತೆ ಇವುಗಳಿಂದ ನೀರಾವರಿಯನ್ನು ಅವಲಂಬಿಸಿದ ಸಮಾಜವೇ ಅವನತಿಗಿಳಿದು ಇಡೀ ಪ್ರದೇಶವೇ ಜನರ ವಾಸಕ್ಕೆ ನಿಷ್ಪ್ರಯೋಜನವೆನಿಸಿದ ಉದಾಹರಣೆಗಳು ಇತಿಹಾಸದಲ್ಲಿ ಕಂಡು ಬರುತ್ತದೆ. ಇತ್ತೀಚಿನ ದಶಕಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನೀರನ್ನು ನಿರ್ವಹಿಸಿದ್ದರಿಂದ ಸಾವಿರಾರು ಹೆಕ್ಟೇರು ಭೂಮಿಯು ಲವಣ ಮತ್ತು ವಿನಿಯಮ ಸೋಡಿಯಂಗಳ ಬಾಹುಬಾಲ್ಯದಿಂದ ಮತ್ತು ಚೌಳಿನಿಂದ ಬೇಸಾಯಕ್ಕೆ ನಿರುಪಯೋಗವೆನಿಸುವ ಸ್ಥಿತಿಯನ್ನು ಮುಟ್ಟಿದೆ ಎಂಬುದನ್ನು ಮರೆಯುವಂತಿಲ್ಲ. ಈ ಘಟನೆಗಳಿಂದ ಸರಿಯಾದ ಪಾಠವನ್ನು ಕಲಿತು, ಪ್ರತಿ ಹನಿ ನೀರು ಸಮರ್ಥ ರೀತಿಯಲ್ಲಿ ಬಳಕೆಯಾಗುವಂತೆ ಲಕ್ಷ್ಯ ವಹಿಸಿ ಭೂಮಿಯ ಉತ್ಪಾದಕತೆಯು ಶಾಶ್ವತವಾಗಿ ಉನ್ನತ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕಾದುದು ಬೆಳೆಗಾರನ ಅನಿವಾರ್ಯ ಕರ್ತವ್ಯವೆಂಬುದನ್ನು ಮರೆಯಲಾಗದು.

ನೀರಾವರಿಗೆ ಸೂಕ್ತವಾದ ಭೂಮಿಯ ಆಯ್ಕೆ

ನೀರಾವರಿಯಿಂದ ಅಧಿಕ ಇಳುವರಿ, ಹೆಚ್ಚಿನ ಆದಾಯ ಮತ್ತು ಆಕರ್ಷಕ ಲಾಭ ದೊರೆಯುತ್ತವೆಯಾದರೂ ಹಲವು ಪ್ರಸಂಗಗಳಲ್ಲಿ ನೀರಾವರಿಯನ್ನು ಒದಗಿಸಲು ಅಪಾರ ಹಣವನ್ನು ವ್ಯಯಿಸಬೇಕಾಗುತ್ತದೆ. ಈಗಾಗಲೇ ತಿಳಿಸಿದಂತೆ ನೀರಿನ ಅಸಮರ್ಪಕ ಬಳಕೆಯಿಂದ ಭೂಮಿಯು, ಬೇಸಾಯಕ್ಕೆ, ಅಯೋಗ್ಯವೆನಿಸುವ ಅಪಾಯವು ಇವೆಯಾದ್ದರಿಂದ ನೀರಾವರಿಯ ನಿರ್ವಹಣೆಯಲ್ಲಿ ಪ್ರತಿ ಹೆಜ್ಜೆಯನ್ನು ಅತಿ ಎಚ್ಚರಿಕೆಯಿಂದ ಇಡಬೇಕಾದುದು ಅವಶ್ಯ.

ಮೇಲಿನ ವಿಚಾರಗಳನ್ನು ಮನದಲ್ಲಿಟ್ಟುಕೊಂಡು, ನೀರಾವರಿಗೆ ಸೂಕ್ತವಾದ ಭೂಮಿಯನ್ನು ಆರಿಸಿಕೊಳ್ಳುವಾಗ ಗಮನದಲ್ಲಿಡಬೇಕಾದ ಪ್ರಮುಖ ವಿಷಯಗಳು ಕೆಳಗಿನಂತಿವೆ:

ಮಣ್ಣಿನ ಗುಣಧರ್ಮಗಳು: ನಿರಂತರವಾಗಿ ನೀರನ್ನು ಪೂರೈಸಿದರೂ ಯಾವುದೇ ಸಮಸ್ಯೆಯು ಉಂಟಾಗದೆ, ಭೂಮಿಯು ಬೇಸಾಯಕ್ಕೆ ಉಪಯುಕ್ತವಾಗಿಯೇ ಉಳಿದು ಸತತವಾಗಿ ಅಧಿಕ ಉತ್ಪಾದನೆಯನ್ನು ಕೊಡುವ ಸಾಮರ್ಥ್ಯವನ್ನು ಮಣ್ಣು ಹೊಂದಿದೆಯೇ ಎಂಬುದನ್ನು ಪರಿಗಣಿಸಬೇಕು. ಇದಕ್ಕಾಗಿ ಮಣ್ಣಿನ ಹಲವು ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಮಣ್ಣಿನ ಕೆಳಗಿನ ಗುಣಧರ್ಮಗಳು ಈ ಸಂದರ್ಭದಲ್ಲಿ ಮಹತ್ವದ್ದೆನಿಸಿದೆ.

 • ಮಣ್ಣಿನೊಳಗೆ ನೀರು ಚಲಿಸಲು ಆಸ್ಪದಕೊಡುವ ಗುಣ (Permeability)
 • ಮಣ್ಣಿನ ಜಲಧಾರಣಾ ಶಕ್ತಿ
 • ಮಣ್ಣಿನಲ್ಲಿರುವ ಲವಣದ ಪ್ರಮಾಣ
 • ಮಣ್ಣಿನಲ್ಲಿರುವ ವಿನಿಮಯ ಸೋಡಿಯಂನ ಪ್ರಮಾಣ

ಮೇಲಿನವುಗಳಲ್ಲದೇ, ಮಣ್ಣಿನ ಕಣಗಳ ಗಾತ್ರ, ದೊಡ್ಡ ರಂಧ್ರಗಳ ಪ್ರಮಾಣ, ಮಣ್ಣಿನ ಆಳ, ಭೂಮಿಯ ಇಳಿಜಾರು ಮತ್ತು ರಸಸಾರ (pH) ಇವುಗಳನ್ನು ಪರಿಗಣಿಸಬೇಕು. ಇವು ಅಪ್ರತ್ಯಕ್ಷವಾಗಿ ಮೇಲಿನ ಐದು ಗುಣಧರ್ಮಗಳ ಮೇಲೆ ಪರಿಣಾಮವನ್ನು ಬೀರುತ್ತವೆಂಬುದನ್ನು ಗಮನಿಸಬೇಕು.

ನೀರಾವರಿಗೆ ಸೂಕ್ತವೆನಿಸುವ ಮಣ್ಣಿನಲ್ಲಿರಬೇಕಾದ ಕೆಲವು ಗುಣಧರ್ಮಗಳ ವಿವರಗಳು ಕೆಳಗಿನಂತಿವೆ:

i. ಮಧ್ಯಮ ಆಳದ ಮಣ್ಣು ನೀರಾವರಿಗೆ ಯೋಗ್ಯವೆನಿಸಿದೆ.

ii. ಮಣ್ಣಿನೊಳಗೆ ನೀರು ಶೀಘ್ರಗತಿಯಿಂದ ಪ್ರವೇಶಿಸುವಂತಿರಬೇಕು. ಮಣ್ಣನ್ನು ಪ್ರವೇಶಿಸುವ ನೀರಿನ ವೇಗವನ್ನು (Infiltration rate) ಕೆಳಗಿನ ವಿಧಾನದಿಂದ ಕಂಡುಕೊಳ್ಳಬಹುದು.

ಗ್ಯಾಲ್ವನೈಜ್ಡ್ ಕಬ್ಬಿಣದ ದಪ್ಪ ತಗಡಿನಿಂದ ನಿರ್ಮಿಸಿದ ೩೦ ಮತ್ತು ೪೦ ಸೆಂ.ಮೀ. ವ್ಯಾಸದ ಎರಡು ಕೊಳವೆಗಳನ್ನು ಉಪಯೋಗಿಸಬೇಕು. ಪರೀಕ್ಷಿಸಬೇಕೆಂದಿರುವ ಮಣ್ಣಿನಲ್ಲಿ ಈ ಕೊಳವೆಗಳನ್ನು ಒಂದರಲ್ಲಿ ಇನ್ನೊಂದನ್ನು ಇಟ್ಟು ಸುತ್ತಿಗೆಯಿಂದ ಸುಮಾರು ೨೦ ಸೆಂ.ಮೀ. ಆಳಕ್ಕೆ ಇಳಿಯುವಂತೆ ಮಾಡಬೇಕು. ಹೊರಗಿನ ಕೊಳವೆ ಮತ್ತು ಮಣ್ಣಿನ ಮಧ್ಯದಲ್ಲಿ ಪೊಳ್ಳು ಪ್ರದೇಶವು ಇರದಂತೆ ಎಚ್ಚರಿಕೆ ವಹಿಸಬೇಕು. ಈಗ ಕೊಳವೆಗಳನ್ನು ನೀರಿನಿಂದ ತುಂಬಬೇಕು. ನೀರು ಮಣ್ಣಿನೊಳಗೆ ಇಳಿಯುತ್ತಿದ್ದಂತೆ ಕೊಳವೆಯೊಳಗಿನ ಪಾತಳಿಯೂ ಕೆಳಗೆ ಇಳಿಯುತ್ತದೆ. ಒಳಗಿನ ಕೊಳವೆಯೊಳಗಿನ ನೀರಿನ ಪಾತಳಿಯನ್ನು ನಿರ್ದಿಷ್ಟ ಸಮಯಕ್ಕೆ (ಪ್ರತಿ ೫ ರಿಂದ ೧೦ ನಿಮಿಷಗಳಿಗೊಮ್ಮೆ) ಬರೆದುಕೊಳ್ಳಬೇಕು. ಈ ವಿವರಗಳ ಸಹಾಯದಿಂದ ನೀರು ಮಣ್ಣನ್ನು ಪ್ರವೇಶಿಸುವ ವೇಗವನ್ನು ಲೆಕ್ಕ ಮಾಡಬೇಕು.

iii. ಮೇಲೆ ಸೂಚಿಸಿದಂತೆ ಮಣ್ಣಿನೊಳಗೆ ಪ್ರವೇಶಿಸಿದ ನೀರು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಭೂಮಿಯ ಆಳಕ್ಕೆ ಬಸಿದು ಹೋಗುವಂತಿರಬೇಕು. ಮಣ್ಣಿನ ಈ ಸಾಮರ್ಥ್ಯವನ್ನು (Permeability) ಪ್ರಯೋಗಶಾಲೆಯಲ್ಲಾಗಲೀ, ಹೊಲಗದ್ದೆಗಳಲ್ಲಾಗಲೀ, ಪರ್ಮಿಯಾ ಮೀಟರ್ (Permeameter) ಎಂಬ ಉಪಕರಣದಿಂದಾಗಲೀ ಕಂಡು ಹಿಡಿಯಬಹುದು. ಮಣ್ಣಿನ ಪಾರ್ಶ್ವ ದೃಶ್ಯವನ್ನು ಸೂಕ್ಷ್ಮವಾಗಿ ವೀಕ್ಷಿಸಿ ನೀರಿನ ಚಲನೆಯನ್ನು ನಿರ್ಬಂಧಿಸುವ ಯಾವುದಾದರೂ ಕಠಿಣ ಪದರು ಇಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

iv. ಮಣ್ಣಿನ ಜಲಧಾರಣಾ ಶಕ್ತಿಯು ಅಧಿಕವಿರಬೇಕು. ಆದಾಗ್ಯೂ ಹವೆಯ ಚಲನೆಗೆ ಮತ್ತು ಬೇರುಗಳ ಅಭಿವೃದ್ಧಿಗೆ ಯಾವುದೇ ರೀತಿಯ ತಡೆಯುಂಟಾಗುವಂತಿರಬಾರದು.

v. ಭೂಮಿಯು ಬಹಳ ಇಳಿಜಾರಾಗಿರಬಾರದು. ಒಂದೊಮ್ಮೆ ಭೂಮಿಯನ್ನು ಮಟ್ಟಮಾಡುವ ಪ್ರಸಂಗ ಬಂದರೆ ಮೇಲ್ಮಣ್ಣು ಸಾಕಷ್ಟು ಆಳವಾಗಿರಬೇಕು. ಮಟ್ಟ ಮಾಡಿದರೆ ಕೆಳಮಣ್ಣು ಮೇಲೆ ಕಾಣಿಸಿಕೊಳ್ಳುವಷ್ಟು ಕಡಮೆ ಆಳದ ಮೇಲ್ಮಣ್ಣು ಇರಬಾರದು.

vi. ಮಣ್ಣಿನಲ್ಲಿಯ ಲವಣದ ಪ್ರಮಾಣವು ಅತಿ ಕಡಿಮೆ ಇರಬೇಕು.

ಪ್ರಯೋಗಾಲಯದಲ್ಲಿ ಎರಡು ರೀತಿಯಿಂದ ಮಣ್ಣಿನಲ್ಲಿರುವ ಲವಣದ ಪ್ರಮಾಣವನ್ನು ಕಂಡುಹಿಡಿಯಬಹುದು.

 • ನಿರ್ದಿಷ್ಟ ಪ್ರಮಾಣದ ಮಣ್ಣಿಗೆ, ಅಳತೆಯ ಪ್ರಕಾರ ಶುದ್ಧ ನೀರನ್ನು ಬೆರೆಸಿ ಚೆನ್ನಾಗಿ ಅಲುಗಾಡಿಸಿ ಸೋಸು ಕಾಗದದ ಮೂಲಕ ಸೋಸಬೇಕು. ಹೊರಬಂದ ದ್ರಾವಣದ ಸ್ವಲ್ಪ ಭಾಗವನ್ನು ಗಾಜಿನ ಅಥವಾ ಪಿಂಗಾಣಿಯ ಪಾತ್ರೆಯಲ್ಲಿಟ್ಟು ಒಣಗಿಸಿ ಲವಣದ ಪ್ರಮಾಣವನ್ನು ಲೆಕ್ಕ ಹಾಕಬೇಕು.
 • ತೂಕ ಮಾಡಿದ ಮಣ್ಣಿಗೆ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಸೇರಿಸಿ ಚೆನ್ನಾಗಿ ಕಲಸಿ ವಿಶಿಷ್ಟ ರೀತಿಯ ಉಪಕರಣದ ಸಹಾಯದಿಂದ ಮಣ್ಣು ನೀರಿನ ಮಿಶ್ರಣದಲ್ಲಿಯ ವಿದ್ಯುತ್ ವಹನವನ್ನು ಅಳೆಯಲಾಗುತ್ತದೆ. ಮಣ್ಣಿನಲ್ಲಿ ಲವಣದ ಪ್ರಮಾಣವು ಅಧಿಕಗೊಂಡಂತೆ ವಿದ್ಯುತ್ ವಹನವೂ (Electric Conductivity) ಅಧಿಕಗೊಳ್ಳುತ್ತದೆ. ವಹನವನ್ನು ಪ್ರತಿ ಸೆಂ.ಮೀ.ಗೆ ಮೋಹ್, ಮಿಲಿಮೋಹ್ ಅಥವಾ ಮೈಕ್ರೋಮೋಹ್‌ಗಳಲ್ಲಿ ವ್ಯಕ್ತಪಡಿಸಬಹುದು.

೧ ಮೋಹ್ = ೧೦೦೦ ಮಿಲಿ ಮೋಹ್‌ಗಳು

೧ ಮಿಲಿಮೋಹ್‌  = ೧೦೦೦ ಮೈಕ್ರೋಮೋಹ್‌ಗಳು

vii. ಉತ್ತಮ ಮಣ್ಣಿನಲ್ಲಿ ವಿನಿಮಯ ಸೋಡಿಯಂನ ಪ್ರಮಾಣವು ಕಡಿಮೆ ಇರಬೇಕು. ಈ ಗುಣಧರ್ಮವನ್ನು ಕಂಡುಹಿಡಿಯಲು ಮಣ್ಣಿನಲ್ಲಿರುವ ವಿನಿಮಯ ಕ್ಯಾಲ್ಸಿಯಂ, ಮೆಗ್ನಿಸಿಯಂ, ಸೋಡಿಯಂ, ಪೊಟ್ಯಾಸಿಯಂ ಮುಂತಾದ ಧನ ಅಯಾನುಗಳನ್ನು ಅರಿತುಕೊಂಡು ಕೆಳಗಿನ ಸಮೀಕರಣದ ಸಹಾಯದಿಂದ ಶೇಕಡಾ ವಿನಿಮಯ ಸೋಡಿಯಂ ಅನ್ನು ಲೆಕ್ಕಮಾಡಬಹುದು.

ಶೇಕಡಾ ವಿನಿಮಯ ಸೋಡಿಯಂ

=

ಪ್ರತಿ ೧೦೦ ಗ್ರಾಂ ಮಣ್ಣಿನಲ್ಲಿರುವ ವಿನಿಮಯ ಸೋಡಿಯಂ ಮಿಲಿಗ್ರಾಂ ಈಕ್ವಿವ್ಯಾಲಂಟಿ (m.e.)

ಪ್ರತಿ ೧೦೦ ಗ್ರಾಂ ಮಣ್ಣಿನಲ್ಲಿರುವ ಒಟ್ಟು ವಿನಿಮಯ ಧನ ಆಯಾನ್‌ಗಳು

ಗುಣಧರ್ಮಗಳ ಪರಿಮಾಣದ ಆಧಾರದ ಮೇಲೆ ಮಣ್ಣಿನ ಅರ್ಹತೆಯ ನಿರ್ಧಾರ: ಮಣ್ಣಿನ ಗುಣಧರ್ಮಗಳ ಆಧಾರದ ಮೇಲೆ ನೀರಾವರಿಗೆ ಮಣ್ಣು ಸೂಕ್ತವಿದೆಯೇ ಎಂಬುದನ್ನು ನಿರ್ಧರಿಸುವ ಕೆಲವು ವಿಧಾನಗಳ ವಿವರಗಳು ಕೆಳಗಿನಂತಿವೆ:

i. ನೀರಾವರಿಗೆ ಮಣ್ಣಿನ ಅರ್ಹತೆಯನ್ನು ನಿರ್ದಿಷ್ಟ ಪರಿಮಾಣದ ಆಧಾರದ ಮೇಲೆ ನಿರ್ಧರಿಸುವ ವಿಧಾನವನ್ನು ಸ್ಟೋರಿ (Storie) ಎಂಬುವರು ಸೂಚಿಸಿದರು. ಈ ಪದ್ಧತಿಯಲ್ಲಿ, ಮಣ್ಣಿನ ಗುಣಧರ್ಮಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿದರು. ಪ್ರತಿ ಗುಂಪಿನಲ್ಲಿರುವ ಗುಣಧರ್ಮಗಳ ಆಧಾರದಿಂದ ಆ ಗುಂಪಿಗೆ ಅಂಕಗಳನ್ನು (%) ನಿಗದಿಪಡಿಸಿದರು. ನಾಲ್ಕೂ ಗುಂಪುಗಳಿಗೆ ಈ ರೀತಿ ನಿಗದಿಪಡಿಸಿದ ಶೇಕಡಾವಾರು ಅಂಕಗಳನ್ನು ಒಂದಕ್ಕೊಂದು ಗುಣಿಸಿ ಬಂದ ಮೊತ್ತವನ್ನು (%) ಆ ಮಣ್ಣಿನ ಅರ್ಹತೆಯೆಂದು ಪರಿಗಣಿಸಿದರು. ಉದಾಹರಣೆಗೆ, ಒಂದು ಮಣ್ಣಿನ ನಾಲ್ಕು ಗುಂಪಿನ ಗುಣಧರ್ಮಗಳಿಗೆ ಕೆಳಗಿನ ಅಂಕಗಳು ದೊರೆತರೆ,

ಗುಣಧರ್ಮಗಳ ಗುಂಪು ದೊರೆತ ಅಂಕ (ಶೇ.)
೭೦
೯೦
೮೦
೬೦

ಆ ಮಣ್ಣಿಗೆ ದೊರೆತ ಶೇಕಡವಾರು ಅಂಕಗಳನ್ನು ಮುಂದಿನಂತೆ ಲೆಕ್ಕ ಮಾಡಿದರು.

ಮಣ್ಣಿನ ಸರಾಸರಿ ಅಂಕ (ಶೇಕಡಾ)

=

೭೦ x ೯೦ x ೮೦ x ೬೦

= ೩೦.೨೪

೧೦೦ x ೧೦೦ x ೧೦೦ x ೧೦೦

ಮೇಲಿನಂತೆ ಅಂದಾಜು ಮಾಡಿದ ಮಣ್ಣಿನ ಸರಾಸರಿ ಅಂಕಗಳ ಮೇಲಿಂದ ಮಣ್ಣುಗಳನ್ನು ೬ ವರ್ಗಗಳಲ್ಲಿ ವಿಂಗಡಿಸಿದರು.

ಸರಾಸರಿ ಅಂಕ

ವರ್ಗ

ನೀರಾವರಿಗೆ ಉಪಯುಕ್ತತೆ

೮೦ ರಿಂದ ೧೦೦ I ಅತ್ಯುತ್ತಮ
೬೦ ರಿಂದ ೭೯ II ಉತ್ತಮ
೪೦ ರಿಂದ ೫೯ III ಕೆಲವು ಮಿತಿಗಳಿವೆ
೨೦ ರಿಂದ ೩೯ IV ನೀರಾವರಿಗೆ ಉಪಯುಕ್ತವಲ್ಲ
೧೦ ರಿಂದ ೧೯ V ನೀರಾವರಿಗೆ ಸೂಕ್ತವಲ್ಲ
೧೦ಕ್ಕಿಂತ ಕಡಿಮೆ VI ಬೇಸಾಯಕ್ಕೆ ಸೂಕ್ತವಲ್ಲದ ಭೂಮಿ

ii. ದಾಸ್ತನೆ ಮತ್ತು ಸರಾಫ್ ಎಂಬುವರು ನೀರಾವರಿಗೆ ಮಣ್ಣಿನ ಅರ್ಹತೆಯನ್ನು ನಿರ್ಧರಿಸುವ ವಿಧಾನವನ್ನು ೧೯೬೬ರಲ್ಲಿ ಸೂಚಿಸಿದರು. ಈ ವಿಧಾನದ ವಿವರಗಳು ಕೋಷ್ಟಕ ೫ ರಲ್ಲಿವೆ. ಈ ವಿವರಗಳ ಮೇಲಿಂದ ಮಣ್ಣನ್ನು ೫ ಗುಂಪುಗಳಲ್ಲಿ ವಿಂಗಡಿಸಿ ನೀರಾವರಿಗೆ ಉಪಯುಕ್ತ ಮತ್ತು ನಿರುಪಯುಕ್ತ ಎಂಬುದಾಗಿ ವರ್ಗೀಕರಿಸಿದರು.

ಕೋಷ್ಟಕ . ನೀರಾವರಿಗೆ ಭೂಮಿಯ ಉಪಯುಕ್ತತೆಯನ್ನು ನಿರ್ಧರಿಸುವ ಪದ್ಧತಿ

 

ಕೋಷ್ಟಕ . ನೀರಾವರಿಗೆ ಮಣ್ಣಿನ ವರ್ಗೀಕರಣ

ವರ್ಗ ವರ್ಗದ ಹೆಸರು ದೊರೆತ ಗುಣಗಳು
I ಅತ್ಯುತ್ತಮ ೮೦ಕ್ಕಿಂತ ಅಧಿಕ
II ಉತ್ತಮ ೫೧ರಿಂದ ೮೦
III ಮಧ್ಯಮ ೧೬ರಿಂದ ೫೦
IV ಕನಿಷ್ಠ ೨ರಿಂದ ೧೫
V ಅನುಪಯುಕ್ತ ೦ಯಿಂದ ೧

ಕೆಳಗೆ ಕೊಟ್ಟ ವಿವರಣೆ ಮತ್ತು ಉದಾಹರಣೆಯಿಂದ ಮೇಲಿನ ೫ ಮತ್ತು ೬ ಕೋಷ್ಟಕಗಳ ಬಳಕೆಯು ಸ್ಪಷ್ಟವಾಗುತ್ತದೆ.

 • ಮಣ್ಣನ್ನು ಪರೀಕ್ಷಿಸಿ ಕೋಷ್ಟಕ ೫ರಲ್ಲಿ ಹೇಳಿದ ಐದು ಗುಣಧರ್ಮಗಳನ್ನು ಪರಿಶೀಲಿಸಿ ಪ್ರತಿ ಗುಣಧರ್ಮಕ್ಕೆ ದೊರೆಯುವ ಅಂಕವನ್ನು (೦ಯಿಂದ ೩) ಗುರುತು ಮಾಡಬೇಕು.
 • ಈ ಅಂಕಗಳನ್ನು, ಒಂದಕ್ಕೊಂದು ಗುಣಿಸಿ, ಬಂದ ಗುಣ ದೊರೆತ ಲಬ್ಧವನ್ನು ಕೋಷ್ಟಕ ೬ರಲ್ಲಿ ಕೊಟ್ಟ ವಿವರಗಳೊಡನೆ ತುಲನೆ ಮಾಡಿ, ಪರೀಕ್ಷಿಸುತ್ತಿರುವ ಮಣ್ಣು ಯಾವ ವರ್ಗಕ್ಕೆ ಸೇರಿದೆ ಎಂಬುದನ್ನು ನೋಡಿ ನೀರಾವರಿಗೆ ಉಪಯೋಗ ಮಾಡಲು ಮಣ್ಣಿನ ಗುಣವನ್ನು ನಿರ್ಧರಿಸಬೇಕು.
 • ಉದಾಹರಣೆ: ಒಂದು ಮಣ್ಣನ್ನು ಪರೀಕ್ಷಿಸಿದಾಗ, ಐದು ಗುಣಧರ್ಮಗಳಿಗೆ ಅನುಕ್ರಮವಾಗಿ ೩,೨,೨,೨ ಮತ್ತು ೩ ಅಂಕಗಳು ದೊರೆತಿವೆಯೆಂದು ತಿಳಿಯೋಣ. ಅವುಗಳನ್ನು ಒಂದಕ್ಕೊಂದು ಗುಣಿಸಿ, ಅದರ ಗುಣಲಬ್ಧವನ್ನು ಕಂಡು ಹಿಡಿಯಬೇಕು.

ಗುಣಲಬ್ಧ =  ೩ x ೨ x ೨ x ೨ x ೩ = ೭೨ ಎಂದಾಯಿತು.

ಕೋಷ್ಟಕ ೬ರ ಪ್ರಕಾರ ಈ ಮಣ್ಣು ವರ್ಗಕ್ಕೆ IIಕ್ಕೆ ಸೇರುತ್ತದೆ. ಅಂದರೆ ಇದು ನೀರಾವರಿಗೆ ಉತ್ತಮ ಎಂದಾಯಿತು.

ಕೋಷ್ಟಕ ೬ರಲ್ಲಿ ಕೊಟ್ಟ ವಿಷಯಗಳ ಬಗ್ಗೆ ಕೆಳಗಿನ ವಿವರಗಳನ್ನು ಗಮನಿಸಬಹುದು.

 • Vನೆಯ ವರ್ಗದ ಮಣ್ಣು ನೀರಾವರಿಗೆ ಸೂಕ್ತವಲ್ಲ ಎಂದು ಹೇಳಿದೆ. ಈ ಮಣ್ಣನ್ನು ನೀರಾವರಿಗೆ ಉಪಯೋಗಿಸಲೇಬಾರದು.
 • ಅದರಂತೆಯೇ ವರ್ಗ IVರ ಮಣ್ಣನ್ನು “ಕನಿಷ್ಠ” ಎಂದು ಹೆಸರಿಸಲಾಗಿದೆ. ಇಂತಹ ಮಣ್ಣನ್ನು ನೀರಾವರಿಗೆಂದು ಬಳಸದೇ ಇರುವುದು ಒಳ್ಳೆಯದು.
 • “ಮಧ್ಯಮ” ಎಂದು ಹೇಳಿದ, ವರ್ಗ IIIಕ್ಕೆ ಸೇರಿದ ಮಣ್ಣಿನಲ್ಲಿ ನೀರಾವರಿಯನ್ನು ಮಾಡುವಾಗ ಮಣ್ಣು ಹಾಳಾಗದಂತೆ ಅವಶ್ಯವಿರುವ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.
 • ವರ್ಗ I ಮತ್ತು IIಕ್ಕೆ ಸೇರಿದ ಮಣ್ಣನ್ನು ಬಳಸುವಾಗ ನೀರಾವರಿ ಬೇಸಾಯದಲ್ಲಿ ಅನುಸರಿಸಬೇಕಾದ ಸಾಮಾನ್ಯ ವಿಷಯಗಳತ್ತ ಲಕ್ಷ್ಯವಿತ್ತರೆ ಸಾಕಾಗುತ್ತದೆ.

iii. ನೀರಾವರಿಯನ್ನೊದಗಿಸಿ ಬತ್ತವನ್ನು ಬೆಳೆಯುವುದಾದಲ್ಲಿ, ಭೂಮಿಯು ನೀರಾವರಿಗೆ ಸೂಕ್ತವಿದೆಯೇ ಎಂದು ನಿರ್ಧರಿಸುವಾಗ ಬೇರೆ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಈ ಬೆಳೆಯನ್ನು ಯಶಸ್ವಿಯಾಗಿ ಬೆಳೆಯಬೇಕಾದರೆ ಗದ್ದೆಯಲ್ಲಿ ನೀರು ಸದಾ ನಿಂತಿರಬೇಕಾಗುತ್ತದೆ. ಆದ್ದರಿಂದ ನೀರು ಬಸಿದು ಹೋಗದೇ ಇರುವ ಗುಣಧರ್ಮವೇ ಇಲ್ಲಿ ಸರಿ ಎನ್ನಬಹುದು. ಇಲ್ಲವಾದರೆ ಬತ್ತದ ಬೆಳೆಗೆ ಪೂರೈಸಿದ ನೀರೆಲ್ಲ ಬಸಿದು ಹೋಗಿ ವ್ಯರ್ಥವಾಗುವುದಲ್ಲದೇ, ಮೇಲಿಂದ ಮೇಲೆ ನೀರನ್ನು ಪೂರೈಸುತ್ತಿರಬೇಕಾಗುತ್ತದೆ. ಈ ವಿಶಿಷ್ಠ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಾಮದೇವನ್ ಮತ್ತು ದಾಸ್ತಾನೆ ಇವರು ಕೆಸರು ಪದ್ಧತಿಯಿಂದ ಬತ್ತದ ಬೆಳೆಯನ್ನು ಬೆಳೆಯುವಾಗ ಭೂಮಿಯನ್ನು ಆರಿಸಲು ಉಪಯೋಗವಾಗಬಲ್ಲ ವರ್ಗೀಕರಣವನ್ನು ೧೯೬೭ರಲ್ಲಿ ಮಾಡಿದ್ದಾರೆ. ವಿವರಗಳು ಕೆಳಗಿನಂತಿವೆ.

ಮಣ್ಣಿನಿಂದ ಪ್ರತಿ ದಿನ ಬಸಿದು ಹೋಗುವ ನೀರಿನ ಪ್ರಮಾಣ (ಮಿ.ಮೀ.)

ಬತ್ತವನ್ನು ಬೆಳೆಯಲು ಮಣ್ಣಿನ ಅರ್ಹತೆ

೧.೦-೨.೫ ಅತ್ಯುತ್ತಮ ಮಣ್ಣು
೨.೬-೫.೦ ಉತ್ತಮ ಮಣ್ಣು
೫.೧-೭.೫ ಅಷ್ಟೇನು ಸೂಕ್ತವಲ್ಲದ ಮಣ್ಣು
> ೭.೫ ನಿರುಪಯೋಗಿ ಮಣ್ಣು

ಭೂಮಿಯನ್ನು ನೀರಾವರಿಗೆಂದು ಆರಿಸುವಾಗ ಮೇಲೆ ವಿಸ್ತರಿಸಿದ ಅಥವಾ ಇನ್ನಾವುದಾದರೂ ಸೂಕ್ತ ಪದ್ಧತಿಯನ್ನು ಅನುಸರಿಸಿ, ಮಣ್ಣು ನೀರಾವರಿಗೆ ಸೂಕ್ತವಿದೆ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ನೀರಾವರಿಯನ್ನು ಆರಂಭಿಸಬೇಕು. ಇದು ಮಣ್ಣಿನ ಆರೋಗ್ಯ, ರೈತನ ಹಿತ ಮತ್ತು ದೇಶದ ಅಮೂಲ್ಯ ಸಂಪನ್ಮೂಲದ ಸದ್ಭಳಕೆ ಈ ದೃಷ್ಟಿಯಿಂದ ಶ್ರೇಯಸ್ಕರವೆನ್ನಬಹುದು.