ನೀರಾವರಿ ಜಲದ ಪೂರೈಕೆ: ಬೋದು ಕಾಲುವೆಗಳ ಪ್ರತಿ ಕಾಲುವೆಯ ಮುಖದಲ್ಲಿರುವ ಮಣ್ಣನ್ನು, ಸನಿಕೆಯಿಂದ ಅಗೆದು, ಮೇಲ್ಭಾಗದಲ್ಲಿರುವ ಮುಖ್ಯಕಾಲುವೆಯಿಂದ ನೀರು ಒಳಗೆ ಬರಲು ಬಿಡುವ ಪದ್ಧತಿಯು ಈಗ ರೂಢಿಯಲ್ಲಿದೆ. ಕಾಲುವೆಯ ಕೊನೆಯವರೆಗೆ ನೀರು ಹರಿಯಿತೆಂದರೆ, ಸಂಬಂಧಿಸಿದ ಕಾಲುವೆಯ ಮುಖದಲ್ಲಿರುವ ಸ್ಥಳವನ್ನು ಮುಚ್ಚಿ, ಮುಂದಿನ ಕಾಲುವೆಗೆ ನೀರನ್ನು ಬಿಡಲಾಗುತ್ತದೆ.

ಮೇಲಿನ ಕ್ರಮದ ಬದಲು, ಮುಖ್ಯ ಕಾಲುವೆಯಿಂದ (ತಲೆಗಾಲುವೆಯಿಂದ) ಕೊಳವೆಯ ಮೂಲಕ ನೀರನ್ನು ನೇರವಾಗಿ ಕಾಲುವೆಗೆ ಬಿಡಬಹುದು. ಇದಕ್ಕಾಗಿ, ಹಗುರ ಪ್ಲಾಸ್ಟಿಕ್ಕಿನ, ಅಲ್ಯೂಮಿನಿಯಂನ, ಗ್ಯಾಲ್ವನಾಯ್‌ಜ್ಡ್‌ಕಬ್ಬಿಣದ ಅಥವಾ ರಬ್ಬರಿನಿಂದ ನಿರ್ಮಿಸಿದ ಸುಮಾರು ೧.೨೫ ಮೀಟರು ಉದ್ದವಿರುವ ಮತ್ತು ೪-೫ ಸೆಂ.ಮೀ. ವ್ಯಾಸದ ಕೊಳವೆಗಳನ್ನು ಬಳಸಬಹುದು. ಕೊಳವೆಯಲ್ಲಿ ನೀರನ್ನು ತುಂಬಿ, ಒಂದು ತುದಿಯನ್ನು ತಲೆಗಾಲುವೆಯ ನೀರಿನಲ್ಲೂ, ಇನ್ನೊಂದು ತುದಿಯನ್ನು ನೀರಿನ ಪೂರೈಕೆಯಾಗಬೇಕಾದ ಕಾಲುವೆಯಲ್ಲಿಯೂ ಇಡಬೇಕು. ಸೈಫನ್ (Syphon) ತತ್ವದ ಆಧಾರದ ಮೇಲೆ, ತಲೆಗಾಲುವೆಯಲ್ಲಿದ್ದ ನೀರು, ಕಾಲುವೆಗೆ ಬಂದು ಹರಿಯತೊಡಗುತ್ತದೆ. ತಲೆಗಾಲುವೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಮೇಲಿಂದ, ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕಾಲುವೆಗಳಿಗೆ ನೀರು ಪ್ರವೇಶಿಸುವಂತೆ ಮಾಡಲು ಸಾಧ್ಯವಿದೆ. ಹೀಗೆ ಮಾಡುವುದರಿಂದ, ತಲೆಗಾಲುವೆಯ ಬದುವನ್ನು ಮೇಲಿಂದ ಮೇಲೆ ಕತ್ತರಿಸುವ ಅವಶ್ಯಕತೆ ಬರುವುದಿಲ್ಲ.

ತಲೆಗಾಲುವೆಯಲ್ಲಿ ಹರಿಯುವ ನೀರನ್ನು, ಭೂಮಿಯೊಳಗೆ ಬಿಡಲು ಇನ್ನೊಂದು ಪದ್ಧತಿಯನ್ನು ಅನುಸರಿಸಬಹುದು. ಗ್ಯಾಲ್ವನಾಯ್‌ಜ್ಡ್‌ಕಬ್ಬಿಣದಿಂದ ಇಲ್ಲವೇ ಅಲ್ಯೂಮಿನಿಯಂನಿಂದ ನಿರ್ಮಿಸಿದ ಕೊಳವೆಗಳನ್ನು ಇದಕ್ಕೆ ಬಳಸಲಾಗುತ್ತದೆ. ಈ ಕೊಳವೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಕೊಳವೆಗಳನ್ನು, ತಲೆಗಾಲುವೆವರೆಗೆ ಇಟ್ಟು, ಇವುಗಳಲ್ಲಿ ನೀರು ಹರಿಯುವಂತೆ ಮಾಡಲಾಗುತ್ತದೆ. ಆಗ ನೀರು, ಕೊಳವೆಯಲ್ಲಿರುವ ರಂಧ್ರಗಳ ಮೂಲಕ ಹೊರ ಹರಿದು ಕಾಲುವೆಯನ್ನು ಪ್ರವೇಶಿಸುತ್ತದೆ. ರಂಧ್ರಗಳನ್ನು ಇಚ್ಛಾನುಸಾರ ಸಣ್ಣ ಇಲ್ಲವೇ ದೊಡ್ಡದಾಗಿಸುವ ವ್ಯವಸ್ಥೆ ಇರುವುದರಿಂದ, ನೀರಿನ ಪ್ರವಾಹವನ್ನು ನಿಯಂತ್ರಿಸಬಹುದು.

ಕಾಲುವೆಯ (ಬದು) ಅಗಲ ಮತ್ತು ಆಳ: ಕೆಲವು ತರಕಾರಿ ಬೆಳೆಗಳಿಗೆ , ೧೫ರಿಂದ ೨೦ ಸೆಂ.ಮೀ. ಆಳದ ಕಾಲುವೆಗಳು ಸಾಕು. ಕಬ್ಬಿಗೆ ೨೫ ರಿಂದ ೩೦ ಸೆಂ.ಮೀ. ಆಳದ ಕಾಲುವೆಗಳು ಬೇಕಾಗುತ್ತವೆ. ನೀರಿನ ಹರಿವು ನಿಧಾನವಾಗಿರುವ ಮಣ್ಣಿನಲ್ಲಿ, ಹೆಚ್ಚು ಅಗಲವಾಗಿರುವ ಕಡಿಮೆ ಆಳದ ಕಾಲುವೆಗಳು ಪ್ರಶಸ್ತ. ಈ ಬಗೆಯ ಕಾಲುವೆಗಳಲ್ಲಿ ನೀರು ಕೆಳಗೆ ಇಂಗಿ ಹೋಗಲು ಹೆಚ್ಚು ಸ್ಥಳವು ದೊರೆತಂತಾಗುತ್ತದೆ. ನೀರು ವೇಗದಿಂದ ಒಳ ಪ್ರವೇಶಿಸಬಲ್ಲ ಮಣ್ಣಿನಲ್ಲಿ, ಕಾಲುವೆಗಳು ಉದ್ದವಾಗಿರುವಲ್ಲಿ, ಅವು ಕಿರಿದಾಗಿ ಮತ್ತು ಆಳವಾಗಿ ಇರಬೇಕು. ಇದರಿಂದ, ಬೋದುಗಳ ಮೇಲ್ಭಾಗದಲ್ಲಿ ಅವಶ್ಯಕತೆಗಿಂತ ಅಧಿಕ ನೀರು ಇಂಗುವುದನ್ನು ತಪ್ಪಿಸಬಹುದು.

ಗುಣಗಳು

 • ಭೂಮಿಯು, ಭಾಗಶಃ ಒದ್ದೆಯಾಗುತ್ತದೆಯಾದ್ದರಿಂದ ಸಸ್ಯಗಳ ಬೇರುಗಳಿಗೆ, ಆಮ್ಲಜನಕದ ಕೊರತೆಯಾಗುವುದಿಲ್ಲ. ಮಣ್ಣಿನ ಕಣಗಳ ರಚನೆಗೂ ಹಾನಿಯುಂಟಾಗುವುದಿಲ್ಲ.
 • ನೀರಿನ ನಿಯಂತ್ರಣವನ್ನು ಸಮರ್ಥವಾಗಿ ಮಾಡಲು ಸಾಧ್ಯವಿದೆ.
 • ಎತ್ತುಗಳನ್ನು ಎಳೆಯುವ ಅಥವಾ ಯಂತ್ರ ಚಾಲಿತ ಉಪಕರಣಗಳಿಂದ ಮಧ್ಯಂತರ ಬೇಸಾಯವನ್ನು ಮಾಡಬಹುದು.
 • ಬೀಜ ಬಿತ್ತುವ ಅಥವಾ ಸಸಿ ನೆಡುವ ಸ್ಥಳದ ಸೂಕ್ತ ಹೊಂದಾಣಿಕೆಯಿಂದ, ಬೇರುಗಳ ಸಮೀಪದಲ್ಲಿ ಲವಣಗಳು ಸಂಗ್ರಹವಾಗುವುದನ್ನು ತಡೆಯಬಹುದು.

ಅವಗುಣಗಳು

 • ಮಳೆಗಾಲದಲ್ಲಿ, ಮಳೆಯ ನೀರು ಕಾಲುವೆಗಳಲ್ಲಿ ಸಂಗ್ರಹವಾಗಬಹುದು. ಮತ್ತು ಬದುಗಳು ಒಡೆಯಬಹುದು.
 • ಭೂ ಸವಕಳಿಯಾಗುವ ಸಾಧ್ಯತೆಯೂ ಇದೆ.

ಕಿರು ಅಂತರದ ಬೋದು ಕಾಲುವೆಗಳು (Corrugations): ಈ ಪದ್ಧತಿಗಳು ಬೋದು ಕಾಲುವೆ ಪದ್ಧತಿಯಂತೆಯೇ ಇವೆಯಾದರೂ ಅವುಗಳಲ್ಲಿ ಕೆಳಗಿನ ಭಿನ್ನತೆಗಳಿವೆ:

 • ಇವು ಆಕಾರದಲ್ಲಿ ಚಿಕ್ಕವು
 • ಬೆಳೆಗಳ ಸಾಲುಗಳಿಗೂ ಬೋದು ಕಾಲುವೆಗಳಿಗೂ ನೇರವಾದ ಸಂಬಂಧವಿರುವುದಿಲ್ಲ.

ಮುಖ್ಯ ಕಾಲುವೆಯಿಂದ ಹರಿದು ಬರುವ ನೀರಿನ ಪ್ರಮಾಣವು ಕಡಿಮೆ ಇದ್ದಾಗ ಮತ್ತು ನೀರು ಸುಲಭವಾಗಿ ಹರಿಯಲು ಭೂಮಿಯ ರಚನೆಯು ಅಷ್ಟು ಸಮಂಜಸವಿಲ್ಲದಿರುವಾಗ, ಕಿರು ಅಂತರದ ಬೋದು ಕಾಲುವೆಗಳು ಪ್ರಯೋಜನಕಾರಿ. ಕಡಮೆ ಅಂತರದ ಸಾಲುಗಳಿರುವ ಬೆಳೆಗಳಲ್ಲಿ ಈ ಪದ್ಧತಿಯನ್ನು ಅನುಕೂಲಕರವಾಗಿ ಬಳಸಬಹುದು.

ಬಿದಿರಿನ ತುಂಡಿನಿಂದ ಸಿದ್ಧಪಡಿಸಿದ ವಿಶಿಷ್ಟ ಉಪಕರಣದಿಂದ ಅಥವಾ ಬೇಸಾಯದ ಇತರ ಉಪಕರಣಗಳಿಂದ, ಕಿರು ಅಂತರದ ಬೋದು ಕಾಲುವೆಗಳನ್ನು ನಿರ್ಮಿಸಬಹುದು. ಕಾಲುವೆಗಳು V ಅಥವಾ U ಆಕಾರದಲ್ಲಿರಬಹುದು. ಕಾಲುವೆಗಳು ೬ರಿಂದ ೧೦ ಸೆಂ.ಮೀ. ಆಳವಿದ್ದರೆ ಸಾಕು. ಮಣ್ಣಿನ ಗುಣ ಧರ್ಮ ಮತ್ತು ಭೂಮಿಯ ರಚನೆ ಇವುಗಳ ಮೇಲಿಂದ ಎರಡು ಕಾಲುವೆಗಳ (ಬೋದುಗಳ) ಮಧ್ಯದ ಅಂತರವನ್ನು ನಿರ್ಧರಿಸಬಹುದು.

ಎರೆ ಮತ್ತು ಮರಳು ಮಣ್ಣುಗಳಿಗಿಂತ, ಗೋಡು ಮಣ್ಣಿನಲ್ಲಿ ಈ ಪದ್ಧತಿಯು ಹೆಚ್ಚು ಸೂಕ್ತವಾಗಿದೆ. ಲವಣಗಳಿರುವ ಮಣ್ಣಿನಲ್ಲಿ ಅಥವಾ ಲವಣಯುತ ಜಲವನ್ನು ನೀರಾವರಿಗೆ ಉಪಯೋಗಿಸಬೇಕಾದ ಪ್ರಸಂಗವಿದ್ದಾಗ ಈ ಪದ್ಧತಿಯನ್ನು ಅನುಸರಿಸಬಾರದು.

ವಿಶಾಲ ಬೋದು ಪದ್ಧತಿ (Broad Ridge Method): ಒಂದರಿಂದ ಎರಡು ಮೀ.ಗಳ ಅಂತರದ ಕಾಲುವೆಯನ್ನು ನಿರ್ಮಿಸಿ, ಹೊರ ಬಂದ ಮಣ್ಣನ್ನು ಎರಡು ಕಾಲುವೆಗಳ ಮಧ್ಯದಲ್ಲಿರುವ ಸ್ಥಳದಲ್ಲಿ ಮಣ್ಣನ್ನು ಸಮನಾಗಿ ಹಾಕಿ, ವಿಶಾಲವಾದ ಬೋದುಗಳನ್ನು ಸಿದ್ಧಪಡಿಸಬೇಕು. ಬೆಳೆಯಲಿರುವ ಬೆಳೆಯ ಸ್ವಭಾವದ ಮೇಲಿಂದ ಎರಡು ಬೋದುಗಳ ಮಧ್ಯದ ಅಂತರವನ್ನು ನಿರ್ಧರಿಸಬೇಕು.

ಈ ಪದ್ಧತಿಯಲ್ಲಿ ಬೋದಿನ ಮೇಲೆ ನೇರವಾಗಿ ನೀರಿನ ಪೂರೈಕೆಯನ್ನು ಮಾಡುವುದಿಲ್ಲ. ಬೋದುಗಳ ಪಕ್ಕದಲ್ಲಿರುವ ಕಾಲುವೆಗಳಲ್ಲಿ ನೀರಿನ ಪೂರೈಕೆಯಾಗುತ್ತದೆ. ನೀರು ಒಳಗಿನಿಂದಲೇ ಬೋದಿನೊಳಗೆ ಹರಿದು ಹೋಗಿ, ಬೋದಿನಲ್ಲಿ ಬೆಳೆಯುತ್ತಿರುವ ಬೆಳೆಗೆ ದೊರೆಯುತ್ತದೆ.

ಸೂಕ್ತ ಬೆಳೆಗಳು

 • ಅರಿಶಿನ, ಶುಂಠಿ, ಸುವರ್ಣಗಡ್ಡೆ ಮುಂತಾದ ಬೆಳೆಗಳಿಗೂ ಮೆಣಸು, ಭತ್ತ, ಇತ್ಯಾದಿ ಬೆಳೆಗಳ ಸಸಿಗಳನ್ನು ಬೆಳೆಯಲು ಈ ಪದ್ಧತಿಯು ಪ್ರಯೋಜನಕಾರಿಯೆನಿಸಿದೆ.
 • ಬೋದಿನ ಅಗಲದಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಸೇಂಗಾದಂತಹ ಬೆಳೆಯನ್ನೂ ಬೆಳೆಸಬಹುದು.

ಗುಣಗಳು

 • ಬೋದಿನ ಮೇಲೆ ನೀರನ್ನು ಪೂರೈಸುವುದಿಲ್ಲವಾದ್ದರಿಂದ, ಮಣ್ಣಿನ ರಚನೆಯು ನಷ್ಟವಾಗುವುದಿಲ್ಲ. ಆದ್ದರಿಂದ, ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವುಂಟಾಗುವುದಿಲ್ಲ.
 • ಮೇಲೆ ಹೇಳಿದ ಬೆಳೆಗಳನ್ನು ಜಿಗುಟು ಮಣ್ಣಿನಲ್ಲಿ ಬೆಳೆಯಬೇಕಾದ ಸಂದರ್ಭವಿದ್ದಾಗ ಈ ಪದ್ಧತಿಯು ಪ್ರಶಸ್ತವೆನ್ನಬಹುದು.

ಅವಗುಣಗಳು

 • ಬೋದುಗಳನ್ನು ನಿರ್ಮಿಸಲು ಹೆಚ್ಚಿನ ಸಂಖ್ಯೆಯ ಆಳುಗಳು ಬೇಕು. ಇದರಿಂದ ಬೇಸಾಯದ ಖರ್ಚು ಹೆಚ್ಚಾಗುತ್ತದೆ.
 • ನೀರು, ಬೋದಿನ ಒಳಗಿನಿಂದ ಹರಿಯಬೇಕಾಗುತ್ತದೆ. ಆದ್ದರಿಂದ, ಕೆಲವು ಸಂದರ್ಭಗಳಲ್ಲಿ ಬೋದಿನ ಪೂರ್ತಿ ಅಗಲವನ್ನು ತಲುಪದೇ ಇರಬಹುದು. ಹೀಗಾದರೆ, ಬೋದಿನ ಮಧ್ಯಭಾಗದಲ್ಲಿರುವ ಸಸ್ಯಗಳಿಗೆ ನೀರಿನ ಕೊರತೆಯಾಗಬಹುದು.
 • ಎತ್ತುಗಳಿಂದ ಎಳೆಯುವ ಮತ್ತು ಯಂತ್ರಚಾಲಿತ ಉಪಕರಣಗಳನ್ನು ಮಧ್ಯಂತರ ಬೇಸಾಯಕ್ಕೆ ಉಪಯೋಗಿಸಲು ಸಾಧ್ಯವಾಗುವುದಿಲ್ಲ.

ಪದ್ಧತಿಗಳ ಸಮ್ಮಿಳಿತ ಬಳಕೆ: ಕೆಲವು ಪ್ರಸಂಗಗಳಲ್ಲಿ, ಎರಡು ಪದ್ಧತಿಗಳನ್ನು ಸಂಯೋಜಿಸಿದರೆ ನೀರಾವರಿಯು ಹೆಚ್ಚುಫಲಕಾರಿಯೆನಿಸುತ್ತದೆ. ಕೆಳಗಿನ ಉದಾಹರಣೆಗಳನ್ನು ಗಮನಿಸಬಹುದು.

i. ಬದು ಪಟ್ಟಿಗಳಲ್ಲಿ ಕಿರು ಅಂತರದ ಬೋದು ಕಾಲುವೆಗಳು: ಬದು ಪಟ್ಟಿಯಲ್ಲಿ, ಇಳಿಜಾರಿನ ಪ್ರಮಾಣವು ಕಡಿಮೆ ಇದ್ದಾಗ, ನೀರಾವರಿಯ ಜಲವು ಇಚ್ಛಿತ ವೇಗದಿಂದ ಮುಂದೆ ಚಲಿಸದೆ ಇರಬಹುದು. ಇಂತಹ ಸಂದರ್ಭಗಳಲ್ಲಿ, ಕಿರು ಅಂತರದ ಬೋದು ಕಾಲುವೆಗಳನ್ನು ಬದು ಪಟ್ಟಿಯಲ್ಲಿ ನಿರ್ಮಿಸುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.

ii. ಬದು ಪಟ್ಟಿಗಳಲ್ಲಿ ಬೋದು ಕಾಲುವೆಗಳು: ಎರೆ ಪ್ರಮಾಣವು ಅಧಿಕವಿರುವ ಕಪ್ಪು ಮಣ್ಣಿನಲ್ಲಿ ತಯಾರಿಸಿದ ಬದು ಪಟ್ಟಿಗೆಗಳಲ್ಲಿ, ಬೋದು ಕಾಲುವೆಗಳನ್ನು ನಿರ್ಮಿಸುವುದು ಸೂಕ್ತ. ಇದರಿಂದ ಮಳೆಗಾಲದಲ್ಲಿ ಹೆಚ್ಚಾದ ನೀರನ್ನು, ಹೊರ ಹಾಕಲು ಈ ಕಾಲುವೆಗಳು ಸಹಾಯಕವಾಗುತ್ತದೆ.

iii. ಸಪಾಟು ಮಡಿಗಳಲ್ಲಿ ಏರು ಮಡಿಗಳು ಅಥವಾ ಬೋದು ಕಾಲುವೆಗಳುಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿ ಎನಿಸುತ್ತವೆ.

ಭೂಮಿಯ ಮೇಲ್ಭಾಗದಲ್ಲಿ ನೀರನ್ನು ಪೂರೈಸುವ ವಿಧಾನದ ವಿವಿಧ ಪದ್ಧತಿಗಳನ್ನು ನಿರ್ಮಿಸುವಾಗ ಲಕ್ಷ್ಯದಲ್ಲಿಡಬೇಕಾದ ಸಂಗತಿಗಳು: ನೀರಾವರಿಯ ಪದ್ಧತಿಗಳು, ಕೆಳಗೆ ಕೊಟ್ಟ ಸಂಗತಿಗಳಿಂದ ಎಷ್ಟು ಸನಿಹದಲ್ಲಿರುತ್ತವೆಯೋ ಅಷ್ಟು ಉತ್ತಮ ಪದ್ಧತಿಗಳು ಎಂದು ತಿಳಿಯಬೇಕು.

 • ಅವಶ್ಯವಿರುವಷ್ಟು ನೀರು ಸಸ್ಯಗಳ ಬೇರುಗಳು ಇರುವ ವಲಯದಲ್ಲಿ ಸಂಗ್ರಹಗೊಳ್ಳುವಂತಿರಬೇಕು.
 • ಪೂರೈಕೆಯಾದ ನೀರಾವರಿ ಜಲವು, ಎಲ್ಲೆಡೆ ಸರಿಯಾಗಿ ಪಸರಿಸುವಂತಿರಬೇಕು.
 • ಭೂ ಪ್ರದೇಶಕ್ಕೆಂದು ಪೂರೈಸಿದ ನೀರು, ಹೊರಗೆ ಹರಿದು ಹೋಗಿ ವ್ಯರ್ಥವಾಗುವಂತಿರಬಾರದು. ಒಂದೊಮ್ಮೆ ನೀರು ಹೊರ ಹೋದರೆ, ಆ ನೀರಿನ ಮರು ಬಳಕೆಯು ಸಾಧ್ಯವಾಗುವಂತಿರಬೇಕು.
 • ಮಣ್ಣು ಕೊಚ್ಚಿಕೊಂಡು ಹೋಗುವಂತಿರಬಾರದು.
 • ಭೂಮಿಯನ್ನು ನೀರಾವರಿಗೆಂದು ಸಿದ್ಧಪಡಿಸುವಾಗ ಕೂಲಿ ಆಳುಗಳು ಸಂಖ್ಯೆಯು ಆದಷ್ಟು ಕಡಿಮೆ ಇರಬೇಕು.
 • ಭೂಮಿಯನ್ನು ನೀರಾವರಿಗೆ ಅಣಿ ಮಾಡುತ್ತಿರುವಾಗ ಬದುಗಳು, ಕಾಲುವೆಗಳು ಇತ್ಯಾದಿಗಳಿಗೆ, ಅತಿ ಕಡಿಮೆ ಭೂಮಿಯು ವ್ಯಯವಾಗುವಂತಿರಬೇಕು.
 • ಭೂ ರಚನೆ ಮತ್ತು ಮಣ್ಣಿನ ಗುಣಧರ್ಮ ಇವುಗಳಿಗೆ ಹೊಂದಿಕೆಯಾಗುವಂಥ ಪದ್ಧತಿಗಳನ್ನೇ ಆರಿಸಿಕೊಳ್ಳಬೇಕು.
 • ಭೂಮಿಯನ್ನು ಉಳುಮೆ ಮಾಡಿ ಸಿದ್ಧಗೊಳಿಸಲು, ಭೂಮಿಯನ್ನು ನೀರಾವರಿಗೆ ಯೋಗ್ಯವೆನ್ನುವ ರೀತಿಯಲ್ಲಿ ನಿರ್ಮಿಸಲು ಮತ್ತು ಮಧ್ಯಂತರ ಬೇಸಾಯವನ್ನು ಮಾಡಲು ಎತ್ತುಗಳಿಂದ ಎಳೆಯುವ ಅಥವಾ ಯಂತ್ರಚಾಲಿತ ಉಪಕರಣಗಳನ್ನು ಬಳಸಲು ಸಾಧ್ಯವಾಗುವಂತಿರಬೇಕು.

ಸೂಕ್ಷ್ಮ ನೀರಾವರಿ ಪದ್ಧತಿಗಳು (Mircro-irrigation) : ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ಹಲವು ವಿಧಾನಗಳಿವೆಯಾದರೂ ಕೆಳಗಿನ ವಿಧಾನಗಳು ಪ್ರಮುಖವಾದವೆನ್ನಬಹುದು.

 • ಹನಿ ನೀರಾವರಿ ಪದ್ಧತಿ: ನೀರನ್ನು ಕೊಳವೆಯ ಮೂಲಕ ಸಾಗಿಸಿ, ವಿಶಿಷ್ಟ ಸಾಧನಗಳ ಮುಖಾಂತರ ಈ ನೀರು ಸಸ್ಯದ ಬುಡಕ್ಕೆ ಹನಿ ಹನಿಯಾಗಿ ಬೀಳುವ        ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ, ಪ್ರತಿ ತಾಸಿಗೆ ೨ರಿಂದ ೧೬ ಲೀಟರು ನೀರನ್ನು ಈ ಪದ್ಧತಿಯಿಂದ ಪೂರೈಸಬಹುದು.
 • ಬುಗ್ಗೆ ನೀರಾವರಿ ಪದ್ಧತಿ (Bubblers) : ಈ ಪದ್ಧತಿಯಲ್ಲಿಯೂ ನೀರನ್ನು ಕೊಳವೆಯ ಮುಖಾಂತರ ಸಾಗಿಸಿ, ವಿಶಿಷ್ಟ ಸಾಧನಗಳ ಮೂಲಕ, ನೀರನ್ನು ಹೊರ ಬಿಡಲಾಗುತ್ತದೆ. ಆದರೆ, ಈ ಪದ್ಧತಿಯಲ್ಲಿ ನೀರು ಬುಗ್ಗೆಯಂತೆ ಹೊರಬರುವುದರಿಂದ, ನಿರ್ದಿಷ್ಟ ಸಮಯದಲ್ಲಿ ಅಧಿಕ ನೀರು ಸಸ್ಯಗಳಿಗೆ ದೊರೆಯುತ್ತದೆ. ಗಿಡ ಮರಗಳ ಸುತ್ತಲೂ ನೀರು ನಿಲ್ಲುವಂತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ.

ಪ್ರತಿ ತಾಸಿಗೆ ಸಾಮಾನ್ಯವಾಗಿ ೨೬೦ ಲೀ. ಮೀರದಷ್ಟು ನೀರು ಹೊರ ಬರುವ ವ್ಯವಸ್ಥೆಯಿರುತ್ತದೆ. ನೀರು ಹೊರ ಬರುವ ಸಾಧನದ ರಂಧ್ರವು ದೊಡ್ಡದಾಗಿರುರುವುದರಿಂದ, ಕಸ ಕಡ್ಡಿಗಳಿಂದ ರಂಧ್ರವು ಕಟ್ಟಿಕೊಳ್ಳುವ ಸಾಧ್ಯತೆಯು ಕಡಿಮೆ.

 • ಸೂಕ್ಷ ಸೇಚನ (Mircro-Sprinkler) ಪದ್ಧತಿ: ಕೊಳವೆಗಳ ಮೂಲಕ ಹರಿದ ನೀರನ್ನು, ಸಣ್ಣ ಸೇಚನಗಳ ಮೂಲಕ ಮಣ್ಣಿನ ಮೇಲೆ ಬೀಳಿಸುವ ವ್ಯವಸ್ಥೆ ಇರುತ್ತದೆ. ಅವಶ್ಯವಿರುವಷ್ಟೇ ಪ್ರದೇಶವು, ನೀರಿನಿಂದ ಒದ್ದೆಯಾಗುವಂತೆ ಮಾಡಲು ಸಾಧ್ಯವಿದೆ. ಪ್ರತಿ ತಾಸಿಗೆ ಸುಮಾರು ೧೩೦ ಲೀ. ನೀರು ಹೊರಬರುತ್ತದೆ.

ಮೇಲಿನ ಪದ್ಧತಿಗಳಲ್ಲದೇ ಸಂಚಾರಿ ಜಿನುಗು ನೀರಾವರಿ, ಕೊಳವೆಯ ಛಿದ್ರಗಳಿಂದ ಹೊರ ಚಿಮ್ಮುವ ನೀರಾವರಿ (Perforation) ಮುಂತಾದ ಇತರರ ಪದ್ಧತಿಗಳೂ ಅಲ್ಲಲ್ಲಿ ಕಂಡುಬರುತ್ತವೆ. ಇವೆಲ್ಲವುಗಳಲ್ಲಿ, ಹನಿ ನೀರಾವರಿ ಪದ್ಧತಿಯೇ ಹಲವೆಡೆ ಬಳಕೆಯಲ್ಲಿರುವುದರಿಂದ, ಈ ಪದ್ಧತಿಯ ಬಗ್ಗೆ ಹೆಚ್ಚಿನ ವಿವರಗಳು ಕೆಳಗಿನಂತಿವೆ.

) ಹನಿ ನೀರಾವರಿ ಪದ್ಧತಿಯ ಇತಿಹಾಸ

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಹಸಿರು ಮನೆಯ ಸಸ್ಯಗಳಿಗೆ ಕೊಳವೆಯ ಮೂಲಕ ಸಣ್ಣ ಪ್ರಮಾಣದಲ್ಲಿ ನೀರನ್ನು ಪೂರೈಸಲು ಪ್ರಾರಂಭ ಮಾಡಿದಾಗಲೇ ಹನಿ ನೀರಾವರಿ ಪದ್ಧತಿಗೆ ಅಡಿಗಲ್ಲು ಇಟ್ಟಂತಾಯಿತೆನ್ನಬಹುದು. ಸಣ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುವ ಕೊಳೆವೆಯ ಪಕ್ಕದಲ್ಲಿರುವ ಸಸ್ಯದ ಬೆಳವಣಿಗೆಯು ಇತರ ಸಸ್ಯದ ಬೆಳವಣಿಗೆಗಳಿಗಿಂತ ಉತ್ತಮವಾಗಿರುವುದನ್ನು ಕಳೆದ ಶತಮಾನದ ೪೦ರ ದಶಕದಲ್ಲಿ ಕಂಡ ಇಸ್ರೇಲಿನ ಸಿಂಚಾಬ್ಲಾಸ್ ಎಂಬ ವಿಜ್ಞಾನಿ, ಪ್ರತಿ ಸಸ್ಯದ ಬುಡಕ್ಕೂ ನೀರು ಸಣ್ಣ ಪ್ರಮಾಣದಲ್ಲಿ ಬೀಳುವಂತೆ, ಕೊಳವೆಗಳ ಜಾಲವನ್ನೇ ನಿರ್ಮಿಸಿ ಹನಿ ನೀರಾವರಿ ಪದ್ಧತಿಯ ಜನಕವೆನಿಸಿಕೊಂಡನು.

ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುವುದರಿಂದ ಆಗುವ ನೀರಿನ ಗಣನೀಯ ಉಳಿತಾಯ ಮತ್ತು ಈ ಪದ್ಧತಿಯ ಇತರ ಹಲವು ಅನುಕೂಲತೆಗಳ ಕಾರಣ ಇದು ಜನಪ್ರಿಯವಾಗತೊಡಗಿತು. ವಿಶ್ವದ ಹಲವು ದೇಶಗಳಲ್ಲಿ ಹನಿ ನೀರಾವರಿಯು ಭರದಿಂದ ಪಸರಿಸಿತು. ಸುಮಾರು ಹತ್ತು ದಶಲಕ್ಷ ಹೆಕ್ಟೇರು ಪ್ರದೇಶದಲಲಿ ಹನಿ ನೀರಾವರಿ ಪದ್ಧತಿಯನ್ನು ೧೯೯೦ರ ವೇಳೆಗೆ ಅಳವಡಿಸಲಾಯಿತು.

ಭಾರತದಲ್ಲಿ ೧೯೭೦ರ ದಶಕದಲ್ಲಿ ಹನಿ ನೀರಾವರಿ ಪದ್ಧತಿಯು ಆರಂಭಗೊಂಡಿತಾದರೂ ಹಲವು ಕಾರಣಗಳಿಂದ ಇದು ಹೆಚ್ಚು ಪ್ರಗತಿಯನ್ನು ಕಾಣಲಿಲ್ಲ. ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳ ಪ್ರಯತ್ನದ ಫಲವಾಗಿ, ಈ ಪದ್ಧತಿಗೆ ಬೇಕಾಗುವ ಸಲಕರಣೆಗಳನ್ನು ಹಲವು ಕಂಪನಿಗಳು ತಯಾರು ಮಾಡಿ ಒದಗಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟ ಸಹಾಯ ಧನ ಮತ್ತು ಬ್ಯಾಂಕುಗಳು ಈ ಕಾರ್ಯಕ್ಕೆ ಆದ್ಯತೆಯ ಮೇಲೆ ಸಾಲವನ್ನು ನೀಡಿದ್ದರಿಂದ ೧೯೯೦ರ ನಂತರ ಹನಿ ನೀರಾವರಿಯು ನಮ್ಮ ದೇಶದಲ್ಲಿ ಜನಪ್ರಿಯಗೊಂಡಿತು.

) ಹನಿ ನೀರಾವರಿ ಪದ್ಧತಿಯಿಂದಾಗುವ ಪ್ರಯೋಜನಗಳು

i. ನೀರಿನ ಉಳಿತಾಯ : ಹನಿ ನೀರಾವರಿ ಪದ್ಧತಿಯಿಂದ ಬೆಳೆಗೆ ಪೂರೈಸುವ ನೀರಿನಲ್ಲಿ, ಬಹಳಷ್ಟು ಉಳಿತಾಯವಾಗುತ್ತದೆಂಬುದು ಪ್ರಪ್ರಥಮ ಪ್ರಯೋಜನವೆನ್ನಬಹುದು. ಸಾಂಪ್ರದಾಯಕ ನೀರಾವರಿ ಪದ್ಧತಿಗೆ ಹೋಲಿಸಿದರೆ, ಈ ಪದ್ಧತಿಯಲ್ಲಿ ಶೇಕಡ ೪೦-೮೦ ರಷ್ಟು ನೀರಿನ ಉಳಿತಾಯವಾಗುತ್ತದೆ. ನೀರಿನ ಮಿತವ್ಯಯಕ್ಕೆ ಕಾರಣಗಳು ಕೆಳಗಿನಂತಿವೆ:

 • ಹನಿ ನೀರಾವರಿಯನ್ನು ಅನುಸರಿಸಿದಾಗ, ಭೂ ಪ್ರದೇಶದ ಕೆಲವು ಭಾಗ ಮಾತ್ರ ನೀರಿನಿಂದ ಒದ್ದೆಯಾಗುತ್ತದೆ. ಉದಾಹರಣೆಗೆ, ಕಬ್ಬು, ಹತ್ತಿ ಮೊದಲಾದ ಬೆಳೆಗಳಲ್ಲಿ ಈ ಪದ್ಧತಿಯಿಂದ ಸುಮಾರು ಅರ್ಧದಷ್ಟು ಭೂಮಿಯು ಹಸಿಯಾಗುತ್ತದೆ.
 • ಹಸಿಗೊಳ್ಳುವ ಮಣ್ಣಿನ ಪ್ರದೇಶ, ಈ ಪದ್ಧತಿಯಲ್ಲಿ ಕಡಮೆ ಇರುವುದರಿಂದ ಮಣ್ಣಿನ ಮೇಲ್ಭಾಗದಿಂದ ಆವಿಯಾಗಿ ನಷ್ಟ ಹೊಂದುವ ನೀರಿನ ಪ್ರಮಾಣವೂ      ಕಡಮೆ.
 • ಭೂ ಪ್ರದೇಶದ ಬಹು ಭಾಗದ ಮೇಲ್ಮಣ್ಣು ಒಣಗಿಯೇ ಇರುವುದರಿಂದ ಕಳೆಗಳ ಹಾವಳಿಯು ಕಡಮೆ. ಇದರಿಂದ ಕಳೆ ನಿಯಂತ್ರಣಕ್ಕೆ ಬೇಕಾಗುವ ಖರ್ಚಿನಲ್ಲಿ ಉಳಿತಾಯವಾಗುತ್ತದಲ್ಲದೇ ಕಳೆಗಳಿಂದಾಗುವ ನೀರಿನ ನಷ್ಟವೂ ಕಡಮೆ.
 • ಈ ಪದ್ಧತಿಯಲ್ಲಿ ನೀರಿನ ಪೂರೈಕೆಯನ್ನು ಸುಲಭ ಮತ್ತು ಸಮರ್ಥ ರೀತಿಯಿಂದ ನಿಯಂತ್ರಿಸಲು ಸಾಧ್ಯವಿರುವುದರಿಂದ, ಭೂಮಿಯ ಮೇಲ್ಭಾಗದಲ್ಲಿ ನೀರು ಹರಿದು ಹೋಗಿ ಮತ್ತು ಭೂಮಿಯಾಳಕ್ಕೆ ಬಸಿದು ಹೋಗಿ ಆಗಬಹುದಾದ ನಷ್ಟವನ್ನು ತಪ್ಪಿಸಿ ನೀರಿನ ಉಳಿತಾಯವನ್ನೂ ಮಾಡಲು ಸಾಧ್ಯ.
 • ಸಾಂಪ್ರದಾಯಕ ನೀರಾವರಿ ಪದ್ಧತಿಗಳಲ್ಲಿ, ಎಲ್ಲೆಡೆ ಸಾಕಷ್ಟು ನೀರನ್ನು ಪೂರೈಸುವ ಪ್ರಯತ್ನದಲ್ಲಿ, ಕೆಲವೆಡೆ ಹೆಚ್ಚು ನೀರು ಸಂಗ್ರಹವಾಗಬಹುದು. ಇದರಿಂದ ಭೂಮಿಯು ಚೌಗು ಆಗಬಹುದು. ಇಲ್ಲವೇ ಈ ನೀರು ಹರಿದು ಹೋಗಿ ನಷ್ಟವಾಗಬಹುದು. ಆದರೆ, ಹನಿ ನೀರಾವರಿಯಲ್ಲಿ ಈ ರೀತಿಯ ನಷ್ಟದ ಸಾಧ್ಯತೆ ಇಲ್ಲ.

ii. ಬೆಳೆಗಳ ಅಧಿಕ ಇಳುವರಿ ಮತ್ತು ಉತ್ಪತ್ತಿಯ ಉತ್ತಮ ಗುಣಮಟ್ಟ : ಹನಿ ನೀರಾವರಿ ಪದ್ಧತಿಯಲ್ಲಿ ಅಡಕವಾಗಿರುವ ಕೆಲವು ವೈಶಿಷ್ಟ್ಯಗಳ ಕಾರಣದಿಂದ ಬೆಳೆಗಳ ಇಳುವರಿಯು ಅಧಿಕಗೊಳ್ಳುತ್ತದೆ. ಈ ಸಂದರ್ಭದಲ್ಲಿ ಮುಂದೆ ತಿಳಿಸಿದ ಸಂಗತಿಗಳನ್ನು ಗಮನಿಸಬಹುದು.

 • ಸಾಂಪ್ರದಾಯಕ ನೀರಾವರಿ ಪದ್ಧತಿಯಲ್ಲಿ, ಬೆಳೆಗೆ ನೀರನ್ನು ಸಾಮಾನ್ಯವಾಗಿ ೭-೧೨ ದಿನಗಳಿಗೊಮ್ಮೆ ಪೂರೈಸಲಾಗುತ್ತದೆ. ನೀರನ್ನು ಒದಗಿಸಿದ ಮೊದಲ ೨-೩ ದಿನಗಳವರೆಗೆ, ಮಣ್ಣಿನಲ್ಲಿ ನೀರಿನ ಸಂಗ್ರಹವು ಅವಶ್ಯಕತೆಗಿಂತ ಅಧಿಕವಾಗಿರುವುದರಿಂದ, ಹವೆಯ ಸಂಚಾರಕ್ಕೆ ತೊಂದರೆಯಾಗುತ್ತದೆ. ತದ್ವಿರುದ್ಧವಾಗಿ, ಮರು ಬಾರಿ ನೀರನ್ನು ಪೂರೈಸುವುದಕ್ಕಿಂತ ೨-೩ ದಿನಗಳ ಮೊದಲೇ ಮಣ್ಣಿನಲ್ಲಿರುವ ನೀರಿನ ಪ್ರಮಾಣವು ಕಡಮೆಯಾಗಿರುತ್ತದೆ. ಆಗ, ಮಣ್ಣಿನಿಂದ ನೀರನ್ನು ಹೀರಿಕೊಳ್ಳುವ ಸಸ್ಯವು ಹೆಚ್ಚು ಪರಿಶ್ರಮಪಡಬೇಕಾಗುತ್ತದೆ. ಕೆಲವೊಮ್ಮೆ ಅವಶ್ಯವಿರುವಷ್ಟು ನೀರು ಸಸ್ಯಕ್ಕೆ ಸಿಗದಿರಬಹುದು. ಹೀಗಾಗಿ, ನೀರಿನ ಲಭ್ಯತೆಯ ದೃಷ್ಟಿಯಿಂದ ಸಸ್ಯಗಳಿಗೆ ಕೆಲಮಟ್ಟಿನ ಅನಾನುಕೂಲವುಂಟಾಗುವ ಸಾಧ್ಯತೆ ಇದೆ.
 • ಸಾಂಪ್ರದಾಯಕ ನೀರಾವರಿಯಿಂದ, ಮಣ್ಣಿನ ಮೇಲಿರುವ ಸ್ತರವು ಹೆಪ್ಪುಗಟ್ಟಿದಂತಾಗಬಹುದು. ಇದರಿಂದ, ಹವೆಯ ಚಲನೆಗೆ ಆತಂಕವುಂಟಾಗಿ, ಬೇರುಗಳು ಆಮ್ಲಜನಕದ ಕೊರತೆಯನ್ನು ಎದುರಿಸಬೇಕಾಗಬಹುದಲ್ಲದೇ, ಮಣ್ಣಿನೊಳಗೆ ಸಂಗ್ರಹಗೊಂಡ ಇಂಗಾಲದ ಡೈ ಆಕ್ಸೈಡ್ ಹೊರಬರಲು ತಡೆಯುಂಟಾಗಬಹುದು.
 • ಹನಿ ನೀರಾವರಿ ಪದ್ದತಿಯಲ್ಲಿ, ನೀರಿನ ಪೂರೈಕೆಯನ್ನು ನಿಯಂತ್ರಿಸಲು ಸಾಧ್ಯವಿರುವುದರಿಂದ, ಬೆಳೆಗೆ ಪ್ರತಿದಿನ ಬೇಕಾಗುವಷ್ಟು ನೀರನ್ನು ಪೂರೈಸಬಹುದು. ಇದರಿಂದ ನೀರಿನ ಅಧಿಕ್ಯವೂ ಆಗದೇ, ಕೊರತೆಯೂ ಉಂಟಾಗದೆ, ಹವೆಯ ಸೂಕ್ತ ಚಲನೆಗೂ ಅನುಕೂಲವುಂಟಾಗಿ, ಸಸ್ಯಗಳು ಸರಿಯಾಗಿ ಬೆಳೆದು, ಇಳುವರಿಯು ಅಧಿಕಗೊಳ್ಳುತ್ತದೆ.
 • ಬೆಳೆಗೆ ಬೇಕಾಗುವಷ್ಟು ನೀರು ನಿರಂತರವಾಗಿ ದೊರೆಯುವುದರಿಂದ, ಆ ನೀರಿನ ಸಂಗಡ ಮಣ್ಣಿನಲ್ಲಿರುವ ಪೋಷಕಗಳನ್ನೂ ಹೀರಿಕೊಳ್ಳಲು ಸಾಧ್ಯವಾಗುತ್ತದೆಯಲ್ಲದೇ, ಈ ಪದ್ಧತಿಯಲ್ಲಿ ಅಧಿಕ ನೀರಿನ ಪೂರೈಕೆಯಾಗದಂತೆ ನೋಡಿಕೊಳ್ಳಲು ಸಾಧ್ಯವಿರುವುದರಿಂದ, ನೀರು ಭೂಮಿಯಾಳಕ್ಕೆ ಬಸಿದು ಹೋಗದಂತೆ ನೋಡಿಕೊಳ್ಳಬಹುದು. ಆದ್ದರಿಂದ ಪೋಷಕಗಳು ಬಸಿದು ಹೋಗಿ ನಷ್ಟವಾಗುವ ಸಾಧ್ಯತೆಗಳಿಲ್ಲ.
 • ಹನಿ ನೀರಾವರಿ ಪದ್ಧತಿಯಲ್ಲಿ, ನೀರಿನೊಡನೆ ರಾಸಾಯನಿಕ ಗೊಬ್ಬರಗಳನ್ನು ಹಲವು ಕಂತುಗಳಲ್ಲಿ ಸುಲಭವಾಗಿ ಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ರಾಸಾಯನಿಕ ಗೊಬ್ಬರಗಳ ಸಮರ್ಥ ಬಳಕೆಯು ಆಗುತ್ತದೆ. ಸೇಚನ ನೀರಾವರಿ ಪದ್ಧತಿಯಲ್ಲಿಯೂ ನೀರಿನೊಡನೆ ರಾಸಾಯನಿಕ ಗೊಬ್ಬರಗಳನ್ನು ಕೊಡಲು ಸಾಧ್ಯವಿದೆಯಾದರೂ, ಸಸ್ಯದ ಎಲೆಗಳ ಮೇಲೆ ನೀರು ಬೀಳುವ ಪ್ರಸಂಗವಿರುವಲ್ಲಿ ಉಪಯೋಗಿಸಬಹುದಾದ ಗೊಬ್ಬರಗಳ ಪ್ರಕಾರ ಮತ್ತು ಪ್ರಮಾಣದ ಮೇಲೆ ನಿರ್ಬಂಧಗಳಿರಬೇಕಾಗುತ್ತದೆ. ಅಂತಹ ಯಾವುದೇ ನಿರ್ಬಂಧವನ್ನು ಹನಿ ನೀರಾವರಿಯ ಮುಖಾಂತರ ರಾಸಾಯನಿಕ ಗೊಬ್ಬರಗಳನ್ನು ಕೊಡುವಾಗ ಅನುಸರಿಸುವ ಅವಶ್ಯಕತೆ ಇಲ್ಲ.
 • ಸೇಚನ ನೀರಾವರಿಯಲ್ಲಿ, ಬೆಳೆಯ ಎಲೆಗಳ ಮೇಲೆ ನೀರು ಬೀಳುವ ಪ್ರಸಂಗವಿದ್ದರೆ, ಬೆಳೆಯಲ್ಲಿ ಕೆಲವು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಬೆಳೆಗೆ ಸಿಂಪಡಿಸಿದ ರೋಗ ಅಥವಾ ಕೀಟನಾಶಕಗಳು ಬಾಗಶಃ ತೊಳೆದು ಹೋಗಬಹುದು. ಹನಿ ನೀರಾವರಿ ಪದ್ಧತಿಯಲ್ಲಿ ಇಂತಹ ತೊಂದರೆಗಳು ಎದುರಾಗುವುದಿಲ್ಲ.
 • ಅವಶ್ಯವಿರುವಷ್ಟೇ ನೀರು ಮತ್ತು ಬೇಕಾಗುವಷ್ಟು ಪೋಷಕಗಳು ಸಮಯಕ್ಕೆ ಸರಿಯಾಗಿ ಬೆಳೆಗೆ ದೊರೆಯುವುದರಿಂದ, ಹನಿ ನೀರಾವರಿಯಲ್ಲಿ ಬೆಳೆದ ಉತ್ಪತ್ತಿಯ ಗುಣಮಟ್ಟವು ಉತ್ತಮವಾಗಿರುತ್ತದೆಯೆಂದು ಹಲವು ಬೆಳೆಗಳಲ್ಲಿ ಕಂಡು ಬಂದಿದೆ.

iii. ನೀರಿನ ಸಮರ್ಥ ಬಳಕೆ: ಮೇಲೆ ವಿವರಿಸಿದಂತೆ, ಕಡಿಮೆ ಪ್ರಮಾಣದ ನೀರನ್ನು ಬಳಸಿ, ಅಧಿಕ ಉತ್ಪಾದನೆಯನ್ನು ಪಡೆಯಲು ಈ ಪದ್ಧತಿಯಿಂದ ಸಾಧ್ಯವಾಗುವುದರಿಂದ ಪ್ರತಿ ಲೀ. ನೀರಿಗೆ ಹೆಚ್ಚಿನ ಉತ್ಪಾದನೆಯು ದೊರೆತಂತಾಗುತ್ತದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಹನಿ ನೀರಾವರಿಯಿಂದ, ನೀರಿನ ಬಳಕೆಯ ಸಾಮರ್ಥ್ಯವು ಅಧಿಕಗೊಳ್ಳುತ್ತದೆ.

iv. ಕಳೆಯ ಉಪದ್ರವ ಕಡಮೆ: ಹನಿ ನೀರಾವರಿ ಪದ್ಧತಿಯಲ್ಲಿ, ನೀರನ್ನು ಸೋಸಬೇಕಾಗುತ್ತದೆ. ಆದ್ದರಿಂದ, ಕಳೆಗಳ ಬೀಜಗಳು, ನೀರಿನ ಮುಖಾಂತರ, ಬೆಳೆಯ ಪ್ರದೇಶವನ್ನು ಪ್ರವೇಶಿಸಲು ತಡೆಯುಂಟಾಗುತ್ತದೆ. ಅಲ್ಲದೇ, ಸೋಸಿದ ನೀರನ್ನು ಕೊಳವೆಯ ಮೂಲಕ ಒಯ್ದು, ಬೆಳೆಗಳಿಗೆ ಪೂರೈಸಲಾಗುತ್ತದೆಯಾದ್ದರಿಂದ, ನೀರಿನೊಡನೆ ಕಳೆಗಳ ಬೀಜಗಳು ಹರಡುವ ಸಾಧ್ಯತೆ ಇಲ್ಲ.

ಹನಿ ನೀರಾವರಿಯಿಂದ, ಭೂಮಿಯ ಸ್ವಲ್ಪ ಭಾಗ ಮಾತ್ರ ತೇವವಾಗುವುದರಿಂದ, ಮಳೆಗಾಲವನ್ನು ಬಿಟ್ಟು ಇತರ ಹಂಗಾಮುಗಳಲ್ಲಿ ಕಳೆಗಳ ತೊಂದರೆಯೂ ಅತಿ ಕಡಿಮೆ ಎನ್ನಬಹುದು. ಹನಿ ನೀರಾವರಿಯಿಂದ ನೆನೆಯುವ ಅಲ್ಪ ಪ್ರದೇಶವೂ ಹೆಚ್ಚಾಗಿ ಗಿಡ ಮರಗಳ ನೆರಳಿನಲ್ಲಿ ಇರುವುದರಿಂದ, ಈ ಪ್ರದೇಶವು ಕಳೆಗಳ ಬೆಳವಣಿಗೆಗೆ ಅಷ್ಟು ಅನುಕೂಲಕರವಿಲ್ಲ. ಹೀಗಾಗಿ, ಕಳೆಗಳು ಬೆಳೆಯಬಹುದಾದ ಪ್ರದೇಶವು ಅತಿ ಕಡಮೆ ಉಳಿಯುವುದರಿಂದ ಸ್ವಲ್ಪ ಖರ್ಚಿನಲ್ಲಿ ಕಳೆಗಳನ್ನು ಕಿತ್ತಾಗಲಿ, ಕಳೆ ನಾಶಕಗಳ ಬಳಕೆಯಿಂದಾಗಲಿ ಕಳೆಗಳನ್ನು ನಿಯಂತ್ರಣದಲ್ಲಿಡಬಹುದು.

v. ಶ್ರಮದ ಮತ್ತು ಖರ್ಚಿನ ಉಳಿತಾಯ

 • ಹನಿ ನೀರಾವರಿಯ ವ್ಯವಸ್ಥೆಯನ್ನು ಒಮ್ಮೆ ಮಾಡಿಕೊಂಡಾದನಂತರ, ಪ್ರತಿಬಾರಿ ನೀರನ್ನು ಪೂರೈಸುವಾಗ ಹೆಚ್ಚು ಸಂಖ್ಯೆಯಲ್ಲಿ ಆಳುಗಳ ಅವಶ್ಯಕತೆ ಇಲ್ಲ ಮತ್ತು ಶ್ರಮವೂ ಕಡಿಮೆ. ಇತ್ತೀಚೆಗೆ, ನಿತ್ಯವೂ ನಿರ್ದಿಷ್ಟ ಸಮಯಕ್ಕೆ ನೀರಾವರಿಯನ್ನು ಆರಂಭಿಸುವ ಮತ್ತು ನಿಲ್ಲಿಸುವ ಸ್ವಯಂ ಚಾಲಿತ ವ್ಯವಸ್ಥೆಯು ಲಭ್ಯವಿದೆ. ಇದನ್ನು ಬಳಸಿ ಆಳಿನ ಸಂಖ್ಯೆಯನ್ನು ಇನ್ನಷ್ಟು ಕಡಮೆ ಮಾಡಲು ಸಾಧ್ಯವಿದೆ.
 • ನೀರಿನೊಡನೆ ರಾಸಾಯನಿಕ ಗೊಬ್ಬರಗಳನ್ನು ಮಿಶ್ರ ಮಾಡಿ ಬೆಳೆಗೆ ಪೂರೈಸಲು ಸಾಧ್ಯವಿರುವುದರಿಂದ, ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸೇರಿಸಲು ಬೇಕಾಗುವ ಆಳುಗಳ ಖರ್ಚು ಮತ್ತು ಶ್ರಮ ಇವುಗಳಲ್ಲಿ ಉಳಿತಾಯ ಸಾಧ್ಯ.
 • ನೀರಿನ ಪೂರೈಕೆಯ ನಂತರ, ಮಣ್ಣಿನ ಮೇಲ್ಭಾಗವು ಹೆಪ್ಪುಗಟ್ಟುವ ಸಾಧ್ಯತೆಯಿಲ್ಲದಿರುವುದರಿಂದ, ಮೇಲ್ಮಣ್ಣನ್ನು ಸಡಿಲಿಸಲು ಆಳುಗಳನ್ನು ನಿಯೋಜಿಸಬೇಕಾಗಿಲ್ಲ.
 • ಪ್ರತಿ ಹೆಕ್ಟೇರಿಗೆ ಪೂರೈಕೆಯಾಗುವ ನೀರಿನ ಒಟ್ಟು ಪ್ರಮಾಣವು ಅತಿ ಕಡಿಮೆ ಇರುವುದರಿಂದ, ನೀರನ್ನು ಮೇಲೆತ್ತಲು ಬೇಕಾಗುವ ಶಕ್ತಿ (ವಿದ್ಯುತ್, ಡೀಸೆಲ್ ಇತ್ಯಾದಿ)ಯಲ್ಲಿ ಉಳಿತಾಯವಾಗುತ್ತದೆ.
 • ಸಾಂಪ್ರದಾಯಕ ಪದ್ಧತಿಯಲ್ಲಿ, ಭೂಮಿಯನ್ನು ಪ್ರತಿಬಾರಿ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಬೇಕಾಉಗತ್ತದೆ. ಹನಿ ನೀರಾವರಿಯಲ್ಲಿ ಇಂತಹ ಕೆಲಸದ ಅವಶ್ಯಕತೆ ಇಲ್ಲವಾದ್ದರಿಂದ ಶ್ರಮ ಮತ್ತು ಆಳಿನ ಖರ್ಚಿನಲ್ಲಿ ಉಳಿತಾಯ ಸಾಧ್ಯ.
 • ಬದು ಮತ್ತು ಕಾಲುವೆಗಳ ಅವಶ್ಯಕತೆ ಇರುವುದಿಲ್ಲವಾದ್ದರಿಂದ, ಶೇಕಡಾ ೫-೧೦ ಪ್ರದೇಶದ ಅಧಿಕ ಭೂಮಿಯ ಬೆಳೆಯ ಬೇಸಾಯಕ್ಕೆ ದೊರೆಯುತ್ತದೆ.

vi. ಎಲ್ಲ ಬಗೆಯ ಭೂಮಿಗೂ ಸೂಕ್ತ

 • ಸಾಂಪ್ರದಾಯಕ ನೀರಾವರಿ ಪದ್ಧತಿಗೆ ಅಷ್ಟು ಸೂಕ್ತವೆನಿಸದ, ಕಡಮೆ ಆಳದ, ಅಧಿಕ ಮರಳಿನಿಂದ ಕೂಡಿದ ಅಥವಾ ಮಣ್ಣು ಅತಿಯಾಗಿ ಕೊಚ್ಚಿ ಹೋದ ಭೂಮಿಯಲ್ಲಿಯೂ, ಹನಿ ನೀರಾವರಿ ಪದ್ಧತಿಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದು.
 • ಅಧಿಕ ಇಳಿಜಾರಿರುವ ಅಥವಾ ತಗ್ಗು ದಿಣ್ಣೆಗಳ ಭೂಮಿಯನ್ನು, ಸಮಪಾತಳಿಯಾಗುವಂತೆ ಮಟ್ಟ ಮಾಡದೆಯೇ, ಹನಿ ನೀರಾವರಿ ಪದ್ದತಿಯನ್ನು ಅನುಸರಿಸಲು ಸಾಧ್ಯವಿದೆ. ಇದರಿಂದ ಶ್ರಮ, ಸಮಯ ಮತ್ತು ಹಣದ ಉಳಿತಾಯವಾಗುತ್ತದೆ.

vii. ಸಮಯದ ಬಂಧನವಿಲ್ಲ : ಸಾಂಪ್ರದಾಯಕ ಪದ್ಧತಿಯಲ್ಲಿ, ನೀರನ್ನು ನಿಯಂತ್ರಿಸಲು, ಆಳುಗಳು ಸದಾ ಕಾರ್ಯನಿರತರಾಗಿರಬೇಕಾಗುತ್ತದೆ. ಗಾಳಿಯು ವೇಗದಿಂದ ಬೀಸುತ್ತಿರುವಾಗ ಸೇಚನ ನೀರಾವರಿಯನ್ನು ಕಾರ್ಯಗತ ಮಾಡಿದರೆ, ನೀರಿನ ಪೂರೈಕೆಯು ಸಮಾಧಾನಕರವಾಗಿ ಆಗುವುದಿಲ್ಲ. ಆದರೆ, ಹನಿ ನೀರಾವರಿಗೆ ಈ ಬಗೆಯ ಇತಿ ಮಿತಿಗಳು ಇರುವುದಿಲ್ಲವಾದ್ದರಿಂದ, ಯಾವ ಸಮಯದಲ್ಲಾದರೂ (ರಾತ್ರಿಯ ಸಮಯದಲ್ಲಿ ಸಹ) ಸಮರ್ಥವಾಗಿ ನೀರನ್ನು ಬೆಳೆಗೆ ಪೂರೈಸಬಹುದು.

viii. ಲವಣಯುಕ್ತ ನೀರಿನ ಬಳಕೆ : ನೀರಾವರಿಗೆ ಲವಣಯುಕ್ತ ನೀರನ್ನು ಬಳಸಲೇಬೇಕಾದ ಪ್ರಸಂಗವು ಬಂದಾಗ, ಉಳಿದ ಪದ್ಧತಿಗಳಿಗಿಂತ, ಹನಿ ನೀರಾವರಿ ಪದ್ಧತಿಯೇ ಹೆಚ್ಚು ಸೂಕ್ತ. ಮಣ್ಣಿನ ಒಂದು ಬಿಂದುವಿನಿಂದ ಬೀಳುತ್ತಿರುವ ನೀರಿನ ಹನಿಗಳು, ಮಣ್ಣನ್ನು ಒದ್ದೆ ಮಾಡುತ್ತಾ ವರ್ತುಲಾಕಾರದಲ್ಲಿ ಆರ್ದ್ರತೆಯು ಹೊರಭಾಗಕ್ಕೆ ಸಾಗುತ್ತದೆ. ಆ ನೀರಿನೊಡನೆ ಇರುವ ಲವಣಗಳೂ ಹೊರ ವಲಯಗಳಿಗೆ ಸಾಗುತ್ತವೆ. ನೀರಿನ ಪೂರೈಕೆ ಸ್ಥಗಿತಗೊಂಡ ನಂತರ, ಬಹು ಪಾಲು ಲವಣಗಳು ಹೊರ ಪರಧಿಯಲ್ಲಿಯೇ ಉಳಿದುಕೊಳ್ಳುತ್ತವೆ. ಹೀಗಾಗಿ ಒಳಸುತ್ತಿನಲ್ಲಿರುವ ಆರ್ದ್ರತೆಯಲ್ಲಿ ಲವಣಗಳ ಅಂಶವು ಅತಿ ಕಡಿಮೆ. ನೀರನ್ನು ಹೊರಬಿಡುವ ಸಾಮರ್ಥ್ಯವನ್ನು ಮತ್ತು ಹೊರ ಹೊಮ್ಮುವ ನೀರಿನ ಪ್ರಮಾಣವನ್ನು ಎಚ್ಚರಿಕೆಯಿಂದ ಹೊಂದಾಣಿಕೆ ಮಾಡಿಕೊಂಡರೆ, ಬೆಳೆಗೆ ಆಗಬಹುದಾದ ಲವಣದ ದುಷ್ಪರಿಣಾಮವನ್ನು ಬಹುಮಟ್ಟಿಗೆ ಕಡಮೆ ಮಾಡಬಹುದು.

) ಹನಿ ನೀರಾವರಿಯ ಅವಗುಣಗಳು

i. ಪ್ರಾರಂಭಿಕ ಖರ್ಚು: ನೀರಾವರಿಯ ಇತರ ಪದ್ಧತಿಗಳಿಗೆ ಹೋಲಿಸಿದರೆ, ಹನಿ ನೀರಾವರಿಯನ್ನು ಆರಂಭಿಸಲು ಅಧಿಕ ಹಣವು ಬೇಕಾಗುತ್ತದೆ. ಆದರೆ, ಈ ಪದ್ಧತಿಯಿಂದ ದೊರೆಯುವ ಲಾಭ, ಅನುಕೂಲತೆಗಳು, ಸರಕಾರದಿಂದ ದೊರೆಯುವ ಅನುದಾನದ ಹಣ, ಬ್ಯಾಂಕುಗಳಿಂದ ಆಧ್ಯತೆಯ ಮೇಲೆ ಸುಲಭ ಕಂತುಗಳಲ್ಲಿ ಸಿಗುವ ಸಾಲದ ಹಣ ಇತ್ಯಾದಿಗಳನ್ನು ಪರಿಗಣಿಸಿದಾಗ ಈ ಪದ್ಧತಿಯು ಸೂಕ್ತ ಎನ್ನಬಹುದು.

ii. ಕಲ್ಮಷದಿಂದಾಗುವ ತೊಂದರೆಗಳು : ನೀರಾವರಿಯ ಜಲದಲ್ಲಿರುವ ಕಸ ಕಡ್ಡಿ, ರೇವೆ ಇತ್ಯಾದಿ ವಸ್ತುಗಳು ಮತ್ತು ನೀರಿನಲ್ಲಿ ಬೆಳೆಯುವ ಪಾಚಿಗಳು ಕೊಳವೆಗಳಲ್ಲಿ ನೀರು ಹೊರ ಬರುವ ಸಾಧನಗಳಲ್ಲಿ ಸಂಗ್ರಹಗೊಂಡು, ಹೊರ ಬರುವ ನೀರಿಗೆ ತಡೆಯನ್ನುಂಟು ಮಾಡುತ್ತವೆ. ಹನಿ ನೀರಾವರಿ ವ್ಯವಸ್ಥೆಯ ವಿವಿಧ ಭಾಗಗಳನ್ನು ಆಗಾಗ ಸ್ವಚ್ಛಗೊಳಿಸಿ ತೊಂದರೆಯನ್ನು ನಿವಾರಿಸಬಹುದು.

iii. ನೀರಿನ ಕೊಳವೆಗಳಿಗೆ ಆಗಬಹುದಾದ ಹಾನಿ : ನೀರನ್ನು ಹರಿಸುವ ಕೊಳವೆಗಳನ್ನು ಇಲಿ, ಹೆಗ್ಗಣಗಳು ಕಡಿದು ಹಾನಿಯನ್ನುಂಟು ಮಾಡಬಹುದು. ಬೇಸಾಯದ ಉಪಕರಣಗಳಿಂದ ಮತ್ತು ಆಳುಗಳಿಂದ ಕೊಳವೆಗಳಿಗೆ ಹಾನಿಯು ತಟ್ಟಬಹುದು. ಸಾಧ್ಯವಿದ್ದಲ್ಲಿ ಕೊಳವೆಗಳನ್ನು, ಭೂಮಿಯೊಳಗೆ ಅವಶ್ಯವಿರುವಷ್ಟು ಆಳದಲ್ಲಿ ಹೂತು ಮತ್ತು ಕೆಲವು ಮುನ್ನೆಚ್ಚರಿಕೆಗಳಿಂದ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

iv. ಅಧಿಕ ಆಳಕ್ಕೆ ಹೋಗದ ಬೇರುಗಳು : ಬೆಳೆಗೆ ಪೂರೈಕೆಯಾಗುವ ನೀರಿನ ಪ್ರಮಾಣವು ತುಲನಾತ್ಮಕವಾಗಿ ಕಡಿಮೆ ಇರುತ್ತದೆಯಾದ್ದರಿಂದ, ನೀರು ಹೆಚ್ಚು ಆಳಕ್ಕೆ ಇಳಿದು ಹೋಗುವುದಿಲ್ಲ. ಮತ್ತು ಹೆಚ್ಚು ಸ್ಥಳಕ್ಕೆ ಪಸರಿಸುವುದಿಲ್ಲ. ಆರ್ದ್ರತೆಯಿರುವಲ್ಲಿಯೇ ಬೇರುಗಳು ಪಸರಿಸುತ್ತವೆಯಾದ್ದರಿಂದ ಗಿಡದ ಬೇರುಗಳು ಹೆಚ್ಚು ಆಳಕ್ಕೆ ಹೋಗಿರುವುದಿಲ್ಲ. ಇದರಿಂದ, ಕೆಳಗಿನ ಅನಾನುಕೂಲಗಳಿವೆ.

 • ಹನಿ ನೀರಾವರಿಯ ವ್ಯವಸ್ಥೆಯಲ್ಲಾದ ವೈಫಲ್ಯದಿಂದಲೋ ಅಥವಾ ಇನ್ನಾವುದಾದರೂ ಕಾರಣದಿಂದಲೋ ನೀರಾವರಿಯನ್ನು ಹಲವು ದಿನಗಳವರೆಗೆ ಸ್ಥಗಿತಗೊಳಿಸುವ ಅನಿವಾರ್ಯತೆಯು ನಿರ್ಮಾಣಗೊಂಡರೆ, ಬೇರುಗಳು ಮಣ್ಣಿನ ಕೆಳವಲಯದಲ್ಲಿರುವ ಹಸಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗದೇ ಸಸ್ಯದ ಬೆಳವಣಿಗೆಯು ಕುಂಠಿತಗೊಳ್ಳಬಹುದು.
 • ಸಸ್ಯದ ಬೇರುಗಳು ಆಳಕ್ಕೆ ಹೋಗಿ ಬೆಳವಣಿಗೆಯನ್ನು ಹೊಂದಿರುವುದಿಲ್ಲವಾದ್ದರಿಂದ ಮತ್ತು ನೀರಿನ ಪೂರೈಕೆಯಾಗುತ್ತಿರುವ ಮೇಲಿನ ಸ್ತರದಲ್ಲಿಯೇ ದಟ್ಟವಾಗಿ ಬೆಳೆಯುವುದರಿಂದ, ಅತಿ ವೇಗದಿಂದ ಗಾಳಿಯು ಬೀಸುವ ಪ್ರದೇಶಗಳಲ್ಲಿ ಗಿಡ ಮರಗಳು ವಾಲುವ ಅಥವಾ ಬೀಳುವ ಸಾಧ್ಯತೆಯಿದೆ. ಈ ತೊಂದರೆಯನ್ನು ನಿವಾರಿಸಲು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.
  • ಮರದ ಸುತ್ತ, ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ, ನೀರನ್ನು ಹೊರಬಿಡುವ ಸಾಧನವನ್ನು ಅಳವಡಿಸಬೇಕು. ಇಲ್ಲದಿದ್ದರೆ, ನೀರನ್ನು ಹೊರಬಿಡುವ ಸಾಧನವನ್ನು ಆಗಾಗ ಮರದ ಸುತ್ತ ಸ್ಥಾನ ಪಲ್ಲಟ ಮಾಡುತ್ತಿರಬೇಕು.
  • ಕೆಲವು ದಿನಗಳವರೆಗೆ, ನೀರನ್ನು ತಡೆ ಹಿಡಿದು ಬೇರುಗಳು ಆಳಕ್ಕೆ ಹೋಗಿ ಅಲ್ಲಿ ಅಭಿವೃದ್ಧಿ ಹೊಂದುವಂತೆ ಕ್ರಮ ಕೈಗೊಳ್ಳಬೇಕು.
  • ಪ್ರದೇಶದ ಸುತ್ತಲೂ ಗಾಳಿಯನ್ನು ತಡೆಯಬಲ್ಲ. ವೇಗದಿಂದ ಬೆಳೆಯುವ, ಮರಗಳನ್ನು ಬೆಳೆಸಬೇಕು.