. ಪೂರೈಸಬೇಕಾದ ನೀರಿನ ಪ್ರಮಾಣ (ಆಳ)

ಆವಿಮಾಪಕದಿಂದ ಆವಿಯಾದ ಸಮುಚ್ಚಯ ಜಲ ಪದ್ಧತಿ (IW Ratio / CPE)

ಮೇಲೆ ತೋರಿಸಿದ ಭಾಜ್ಯ (IW)ವನ್ನು ಭಾಜಕ (CPE)ದಿಂದ ಭಾಗಿಸಿದಾಗ ದೊರೆಯುವ ಬಾಗಲಬ್ಧದ ಸಹಾಯದಿಂದ ಬೆಳೆಗೆ ನೀರನ್ನು ಪೂರೈಸುವ ಸಮಯವನ್ನು ನಿರ್ಧರಿಸಬಹುದು. ಈ ಭಾಗಲಬ್ಧವು ಎಷ್ಟಿದ್ದಾಗ ಬೆಳೆಗೆ ನೀರನ್ನು ಪೂರೈಸಿದರೆ ಅಧಿಕ ಇಳುವರಿಯು ದೊರೆಯುತ್ತದೆಂಬುದನ್ನು ಸಂಬಂಧಿಸಿದ ಪ್ರದೇಶದಲ್ಲಿ ನೇರ ಪ್ರಯೋಗಗಳನ್ನು ನಡೆಸಿ ಗೊತ್ತುಪಡಿಸಿಕೊಳ್ಳಬೇಕು. ಗೊತ್ತುಪಡಿಸಿದ ಈ ಭಾಗಲಬ್ಧದ ಸಹಾಯದಿಂದ, ನೀರಾವರಿಯ ಸಮಯವನ್ನು ತಿಳಿಯಬಹುದು. ಕೆಳಗಿನ ಉದಾಹರಣೆಯಿಂದ ಈ ಪದ್ಧತಿಯು ಸ್ಪಷ್ಟವಾಗುತ್ತದೆ.

ಒಂದು ಬೆಳೆಗೆ ಪ್ರತಿ ಬಾರಿ ೫ ಸೆಂ.ಮೀ. (೫೦ ಮೀ.ಮೀ.) ನೀರನ್ನು ಕೊಡಬೇಕಾಗಿದೆ. ಈ ನೀರನ್ನು ಯಾವ ಸಮಯಕ್ಕೆ ಕೊಡಬೇಕು ಎಂಬುದನ್ನು ತಿಳಿಯಬೇಕಾಗಿದೆ.

ಆ ಪ್ರದೇಶದಲ್ಲಿ ನಡೆಸಿದ ಪ್ರಯೋಗಗಳಿಂದ, IW / CPE = ೦೭ ಇದ್ದಾಗ ನೀರು ಪೂರೈಸಿದರೆ ಬೆಳೆಯು ಅಧಿಕ ಇಳುವರಿಯನ್ನು ಕೊಡುತ್ತದೆ ಎಂದು ಗೊತ್ತಾಗಿದೆ ಎಂದುಕೊಳ್ಳೋಣ. ಅಂದರೆ, ಉತ್ತಮ ಇಳುವರಿಯನ್ನು ಪಡೆಯಲು IW / CPE  = ೦.೭ ಇರಬೇಕು.

ಆದ್ದರಿಂದ ೫೦ / CPE= ೦.೭

CPE = ೫೦ / ೦.೭

CPE = ೭೧.೪

ಆವಿಮಾಪಕದಿಂದ, ಆವಿಯ ರೂಪದಲ್ಲಿ ಹೊರ ಹರಿಯುವ ನೀರಿನ ದೈನಂದಿನ ಲೆಕ್ಕವನ್ನಿಟ್ಟು, ಈ ಅಂಕೆಗಳ ಸಂಕಲನವು ೭೧.೪ ಮಿ.ಮೀ. ಆದ ದಿನ ಬೆಳೆಗೆ ನೀರನ್ನು ಪೂರೈಸಬೇಕು.

. ಮಣ್ಣಿನಲ್ಲಿ ಉಳಿದಿರುವ ಲಭ್ಯ ಜಲದ ಆಧಾರದ ಮೇಲೆ ನೀರಾವರಿಯ ಸಮಯವನ್ನು ನಿರ್ಧರಿಸುವ ವಿಧಾನ: ಈಗಾಗಲೇ ಸೂಚಿಸಿದಂತೆ, ಮಣ್ಣಿನಲ್ಲಿರುವ ಲಭ್ಯ ಜಲವು ಅರ್ಧದಷ್ಟು ಬಳಕೆಯಾದೊಡನೆ ನೀರನ್ನು ಪೂರೈಸಿದರೆ, ಕೆಲವು ಬೆಳೆಗಳು ಅಧಿಕ ಇಳುವರಿಯನ್ನು ಕೊಡುತ್ತವೆ (ಉದಾಹರಣೆಗೆ ಗೋಧಿ), ಇನ್ನು ಕೆಲವು ಬೆಳೆಗಳು ಲಭ್ಯ ಜಲವು ಶೇಕಡಾ ೭೫ ರಷ್ಟು ಕಡಿಮೆಯಾದಾಗ ನೀರಾವರಿಯನ್ನು ಒದಗಿಸಿದರೂ ಅವುಗಳ ಇಳುವರಿಯು ಕಡಿಮೆಯಾಗುವುದಿಲ್ಲ.

ಮಣ್ಣಿನಲ್ಲಿರುವ ಲಭ್ಯ ಜಲವು ಶೇಕಡಾ ಎಷ್ಟು ಬಳಕೆಯಾದ ನಂತರ ಸಂಬಂಧಿಸಿದ ಬೆಳೆಗೆ ನೀರನ್ನು ಪೂರೈಸಬೇಕು ಎಂಬುದರ ಮೇಲೆ ನೀರಾವರಿಯನ್ನು ಪೂರೈಸುವ ಸಮಯವನ್ನು ನಿರ್ಧರಿಸಬಹುದು. ಉದಾಹರಣೆಗೆ,

ಗೋಧಿಯನ್ನು ಬೆಳೆಯುತ್ತಿರುವ ಮಣ್ಣಿನಲ್ಲಿಯ ಲಭ್ಯ ಜಲವು ಮೊದಲಿನ ೭೫  ಸೆಂ.ಮೀ. ಆಳದಲ್ಲಿ ೧೦ ಸೆಂ.ಮೀ. ಇದೆ. ಲಭ್ಯ ಜಲವು ಶೇಕಡಾ ೫೦ರಷ್ಟು ಬಳಕೆಯಾದೊಡನೆ ಬೆಳೆಗೆ ನೀರನ್ನು ಮತ್ತೆ ಪೂರೈಸಬೇಕಾಗಿದೆ. ಆವಿ ಮಾಪಕದಿಂದ ಪ್ರತಿದಿನ ಸರಾಸರಿ ೪ ಸೆಂ.ಮೀ.ನಷ್ಟು ನೀರು ಆವಿಯ ರೂಪದಲ್ಲಿ ಹೊರಹೋಗುತ್ತದೆ. ಈ ವಿವರಗಳ ಮೇಲಿಂದ ಗೋಧಿಗೆ ಎಷ್ಟು ದಿನಗಳಿಗೊಮ್ಮೆ ನೀರನ್ನು ಪೂರೈಸಬೇಕೆಂಬುದನ್ನು ಕೆಳಗೆ ತೋರಿಸಿದಂತೆ ಅಂದಾಜು ಮಾಡಬಹುದು.

ಒಟ್ಟು ಲಭ್ಯ ಜಲ ೧೦ ಸೆಂ.ಮೀ. ಅಥವಾ ೧೦೦ ಮಿ.ಮೀ.

ಇದರ ಶೇಕಡಾ ೫೦ ರಷ್ಟು ಅಂದರೆ ೧೦೦ x ೫೦ / ೧೦೦ = ೫೦ ಮಿ.ಮೀ.

ವ್ಯಯದೊಡನೆ ನೀರಾವರಿಯನ್ನು ಪೂರೈಸಬೇಕು.

ಆವಿ ಮಾಪಕದ ಪ್ರಕಾರ ೪ ಮಿ.ಮೀ. ನೀರು ಬಳಕೆಯಾಗಲು ಒಂದು ದಿನ ಬೇಕು. ಆದ್ದರಿಂದ ೫೦ ಮಿ.ಮೀ. ನೀರು ಬಳಕೆಯಾಗಲು

೫೦ / ೪ = ೧೨.೫ ದಿನಗಳು ಬೇಕಾಗುತ್ತದೆ. ಅಂದರೆ, ಬೆಳೆಗೆ ೧೨ ರಿಂದ ೧೩ ದಿನಗಳಿಗೊಮ್ಮೆ ನೀರನ್ನು ಒದಗಿಸಬೇಕು ಎಂದು ನಿರ್ಧಾರವಾಯಿತು.

. ಸಸ್ಯದ ಬೆಳವಣಿಗೆಯ ಸೂಕ್ಷ್ಮ ಹಂತದ ಆಧಾರದ ಮೇಲೆ ನೀರಾವರಿಯ ಸಮಯದ ನಿರ್ಧಾರ: ಸಸ್ಯಗಳಲ್ಲಿ ಬೆಳವಣಿಗೆಯ ವಿವಿಧ ಹಂತಗಳನ್ನು ಗುರುತಿಸಬಹುದು. ಪ್ರತಿ ಹಂತದಲ್ಲಿಯೂ ಬೆಳೆಗೆ ನೀರಿನ ಅವಶ್ಯಕತೆಯು ಇರುವುದಾದರೂ ಕೆಲವು ಹಂತಗಳಲ್ಲಿ ನೀರಿನ ಕೊರತೆಯಾದರೆ ಇಳುವರಿಯು ತೀವ್ರವಾಗಿ ಕುಸಿಯುತ್ತದೆ. ಇಂತಹ ಹಂತಗಳಿಗೆ ಸಸ್ಯದ ಸೂಕ್ಷ್ಮ ಹಂತವೆನ್ನಬಹುದು.

ನೀರಿನ ಸಂಗ್ರಹವು ಹೆಚ್ಚಾಗಿರುವಾಗ ಬೆಳೆಯ ಎಲ್ಲ ಹಂತಗಳಲ್ಲಿಯೂ ನೀರನ್ನು ಒದಗಿಸಬಹುದು. ಆದಾಗ್ಯೂ ಬೆಳೆಯ ಸೂಕ್ಷ್ಮ ಹಂತಗಳಲ್ಲಿ ನೀರಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಆದರೆ ನೀರಾವರಿ ಜಲದ ಅಭಾವವಿದ್ದ ಸಂದರ್ಭದಲ್ಲಿ ಇರುವ ನೀರನ್ನು ಸೂಕ್ಷ್ಮ ಹಂತಗಳ ಸಮಯಕ್ಕೆ ಆದ್ಯತೆಯ ಮೇಲೆ ಪೂರೈಸಬೇಕು.

ಬೆಳವಣಿಗೆಯ ಸೂಕ್ಷ್ಮ ಹಂತಗಳು ಎಲ್ಲ ಬೆಳೆಗಳಲ್ಲಿಯೂ ಒಂದೇ ಬಗೆಯಾಗಿ ಇರುವುದಿಲ್ಲ. ಮುಂದಿನ ಉದಾಹರಣೆಯಿಂದ ಈ ಮಾತು ಸ್ಪಷ್ಟವಾಗುತ್ತದೆ.

ಬೆಳೆಯ        ಬೆಳವಣಿಗೆಯ ವಿವಿಧ    ಸೂಕ್ಷ್ಮ ಹಂತಗಳು

ಹೆಸರು ಹಂತಗಳು

ಬತ್ತ ಮರಿಗಳು ಬರುವ ಪ್ರಾರಂಭದ ಸಮಯ, ಹೊಡೆಹೊರಬಂದ ಹೂವಾಡುವ, ಕಾಳುಗಳು ಹಾಲುಗಟ್ಟುವ ಮತ್ತು ಕಾಳುಗಳು ಗಟ್ಟಿಯಾಗುವ ಸಮಯ ಮರಿಗಳು ಬರುವ ಪ್ರಾರಂಭದ ಮತ್ತು ಹೂವಾಡುವ ಹಾಗೂ ಹಾಲುಕಟ್ಟುವ ಹಂತಗಳು
ಗೋಧಿ ಮುಕುಟ ಬೇರುಗಳು ಹೊರೆ ಬರುವ, ಮರಿಯೊಡೆಯುವ ಉತ್ತರಾರ್ಧದ, ಕಾಂಡದ ಗೆಣ್ಣುಗಳು ನಿರ್ಮಾಣಗೊಳ್ಳುವ ಉತ್ತರಾರ್ಧದ, ಧ್ವಜ ಪತ್ರಗಳು ಹೊರ ಬರುವ, ಹೂವಾಡುವ, ಕಾಳುಗಳು ಹಾಲು ಗಟ್ಟುವ, ಕಾಳುಗಳು ಗಟ್ಟಿಯಾಗುವ ಹಂತಗಳು. ಮುಕುಟ ಬೇರುಗಳು ಹೊರಬರುವ ಮತ್ತು ಹೂವಾಡುವ ಹಂತಗಳು

ನೀರಾವರಿ ಜಲದ ಸಮರ್ಥ ಬಳಕೆ ಮತ್ತು ಅದನ್ನು ಅಳೆಯುವ ವಿಧಾನಗಳು: ಸಸ್ಯಗಳ ಬೆಳವಣಿಗೆಗೆ ನೀರು ಅನಿವಾರ್ಯ ಮತ್ತು ಅಮೂಲ್ಯ. ಆದರೆ, ನೀರಿನ ಅಸಮರ್ಪಕ ಬಳಕೆಯಿಂದ, ನೀರಿನ ಸಂಗ್ರಹವು ಕ್ಷೀಣಿಸುತ್ತದೆ. ಆದ್ದರಿಂದ ಲಭ್ಯವಿರುವ ನೀರನ್ನು ಬಹು ಎಚ್ಚರಿಕೆಯಿಂದ ಬಳಸಿ ಅದರಿಂದ ಗರಿಷ್ಠ ಪ್ರಯೋಜನವನ್ನು ಪಡೆಯಲು ಸಂಬಂಧಿಸಿದ ಎಲ್ಲರೂ ಶ್ರಮಿಸಬೇಕು.

ಜಲಸಂಗ್ರಹದಿಂದ ಹೊರಬಂದ ಶತ ಪ್ರತಿಶತ ನೀರು ಸಂಬಂಧಿಸಿದ ಸಸ್ಯಗಳ ಬೆಳವಣಿಗೆಗೆ ಉಪಯೋಗವಾಗುವುದಿಲ್ಲವೆಂಬ ಕಟು ಸತ್ಯವನ್ನು ಗಮನಿಸಬೇಕು. ನಾಲೆ, ಕೆರೆ, ಭಾವಿ ಇತ್ಯಾದಿ ಜಲ ಸಂಗ್ರಹಗಳಿಂದ ಬಿಡುಗಡೆಯಾದ ನೀರು, ಭೂ ಪ್ರದೇಶವನ್ನು ಮುಟ್ಟುವುದರೊಳಗೆ ನೀರಿನ ಸ್ವಲ್ಪ ಭಾಗವು ಬಸಿದು ಹೋಗುತ್ತದೆ. ಬೆಳೆಗೆ ನೀರನ್ನು ಪೂರೈಸುವಾಗ, ಹರಿದು ಹೊರಹೋಗಿ ಇಲ್ಲವೇ, ಭೂಮಿಯಾಳಕ್ಕೆ ಬಸಿದು ಹೋಗಿ ಸ್ವಲ್ಪ ನೀರು ವ್ಯರ್ಥವಾಗಿ ಹೋಗುತ್ತದೆ. ಉಳಿದ ನೀರು ಮಾತ್ರ ಬೆಳೆಯ ಉಪಯೋಗಕ್ಕೆ ದೊರೆಯುತ್ತದೆ. ಸೂಕ್ತ ವಿಧಾನಗಳನ್ನು ಅನುಸರಿಸಿದರೆ, ಮೇಲೆ ಸೂಚಿಸಿದಂತೆ ವ್ಯರ್ಥವಾಗಿ ಹೋಗುವ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ನೀರಿನ ನಷ್ಟವನ್ನು ಬಹುಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಿದೆ. ನೀರಿನ ಸಮರ್ಥ ಬಳಕೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಕೆಳಗಿನಂತಿವೆ.

ಜಲಸಂಗ್ರಹದಿಂದ ಹೊರಟ ನೀರಿನಲ್ಲಿ ಭೂ ಪ್ರದೇಶವನ್ನು ಮುಟ್ಟುವ ಶೇಕಡಾ ನೀರಿನ ಪ್ರಮಾಣ (Water Conveyance Efficiency) : ಜಲ ಸಂಗ್ರಹದಿಂದ ಹೊರಬಂದ ನೀರಿನ ಸ್ವಲ್ಪಭಾಗವು ಮಾರ್ಗದಲ್ಲಿ ಬಸಿದು ಹೋಗಿ, ಉಳಿದ ನೀರು ಭೂ ಪ್ರದೇಶಕ್ಕೆ ತಲುಪುತ್ತದೆ. ಈ ರೀತಿ ಭೂ ಪ್ರದೇಶವನ್ನು ಮುಟ್ಟಿದ ನೀರಿನ ಶೇಕಡಾ ಪ್ರಮಾಣವನ್ನು ಮುಂದಿನಂತೆ ಕಂಡುಕೊಳ್ಳಬಹುದು.

ನೀರಾವರಿಯನ್ನು ಮಾಡಬೇಕೆಂದಿರುವ ಭೂ ಪ್ರದೇಶವನ್ನು ಮುಟ್ಟಿದಾಗ  ಉಳಿದಿರುವ ಶೇ. ನೀರಿನ ಪ್ರಮಾಣ

=

ಭೂ ಪ್ರದೇಶವನ್ನು ತಲುಪಿದಾಗ ಉಳಿದಿರುವ ನೀರಿನ ಪ್ರಮಾಣ

x

೧೦೦

ಜಲಸಂಗ್ರಹದಿಂದ ಹೊರ ಬಂದ ನೀರಿನ ಪ್ರಮಾಣ

ಜಲಸಂಗ್ರಹದಿಂದ ಹರಿದ ಅತ್ಯಧಿಕ ನೀರು, ಭೂ ಪ್ರದೇಶವನ್ನು ತಲುಪುವಂತೆ ಮಾಡುವುದರಿಂದ ನೀರಿನ ಉಳಿತಾಯವಾಗುತ್ತದೆಯಲ್ಲದೇ, ನೀರಿನ ಮಾರ್ಗದಲ್ಲಿರುವ ಭೂಮಿಯ ಜೌಗು ಅಥವಾ ಲವಣಯುತವಾಗುವ ಸಂದರ್ಭವನ್ನು ತಪ್ಪಿಸಬಹುದು. ನೀರಿನ ನಷ್ಟವನ್ನು ತಪ್ಪಿಸಲು ಭೂಮಿಯಲ್ಲಿ ಅಗೆದು ನಿರ್ಮಿಸಿದ ಕಾಲುವೆಗಳ ಬದಲು ನೀರನ್ನು ಬಸಿಯಲು ಬಿಡದಂತಹ ಕಾಲುವೆಗಳನ್ನು ನಿರ್ಮಿಸಬೇಕು. ಹೀಗೆ ಮಾಡುವುದರಿಂದ, ಬೇಸಾಯದ ಖರ್ಚು ಕೆಲಮಟ್ಟಿಗೆ ಅಧಿಕಗೊಳ್ಳುತ್ತದೆಯಾದರೂ, ಇಂತಹ ಬದಲಾವಣೆಯಿಂದ ಕೆಳಗೆ ತಿಳಿಸಿದಂತೆ ಹಲವು ಲಾಭಗಳಿವೆ.

 • ಕಾಲುವೆಯಲ್ಲಿ ಹರಿಯುವ ನೀರಿನ ವೇಗವು ಅಧಿಕಗೊಳ್ಳುತ್ತದೆ.
 • ಬಸಿದು ಹೋದ ನೀರು ವ್ಯರ್ಥವಾಗಿ ವ್ಯಯವಾಗುವುದಿಲ್ಲ
 • ಸಂಬಂಧಿಸಿದ ಭೂಮಿಯ ಅಕ್ಕಪಕ್ಕದ ಭೂ ಪ್ರದೇಶವು ಜೌಗಾಗುವುದನ್ನು ಮತ್ತು ಲವಣಯುತವಾಗುವುದನ್ನು ತಪ್ಪಿಸಿದಂತಾಗುತ್ತದೆ.
 • ಬಸಿಗಾಲುವೆಗಳನ್ನು ನಿರ್ಮಿಸಬೇಕಾದ ಪ್ರಸಂಗಗಳು ಕಡಿಮೆಯಾಗುತ್ತವೆ.
 • ಕಾಲುವೆಗಳಲ್ಲಿ ಕಳೆಗಳ ಮತ್ತು ಪಾಚಿಯ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗುತ್ತದೆ.
 • ಕಾಲುವೆ ಒಡೆಯುವ ಪ್ರಸಂಗಗಳು ತಪ್ಪುತ್ತವೆ.
 • ಮೇಲಿಂದ ಮೇಲೆ ಕಾಲುವೆಯನ್ನು ಸರಿಪಡಿಸುವ ಶ್ರಮ ಮತ್ತು ಖರ್ಚಿನಲ್ಲಿ ಉಳಿತಾಯವಾಗುತ್ತದೆ.

ಬಹುಕಾಲ ಬಾಳಿಕೆ ಬರುವ ಕಾಲುವೆಗಳ ನಿರ್ಮಾಣ: ನೀರನ್ನು ಬಸಿಯಲು ಬಿಡದ ಮತ್ತು ಹಲವು ವರ್ಷಗಳವರೆಗೆ ಬಾಳಿಕೆ ಬರುವ ಕಾಲುವೆಗಳನ್ನು ನಿರ್ಮಿಸಲು ಹಲವು ಬಗೆಯ ವಸ್ತುಗಳು ಲಭ್ಯವಿವೆ. ಕೆಲವು ವಸ್ತುಗಳು ಅಧಿಕ ಖರ್ಚಿನವಾದರೂ ಅವುಗಳಿಂದ ಸಿದ್ಧಪಡಿಸಿದ ಕಾಲುವೆಗಳು, ಹೆಚ್ಚು ಕಾಲದವರೆಗೆ ಕಾರ್ಯಾಚರಣೆಯಲ್ಲಿರುತ್ತವೆ. ಅಗ್ಗವಾಗಿರುವ ವಸ್ತುಗಳನ್ನು ಬಳಸಿದರೆ, ನಿರ್ಮಾಣದ ಖರ್ಚು ಕಡಿಮೆಯಾಗುತ್ತದೆಯಾದರೂ ಕಾಲುವೆಗಳ ಆಯುಷ್ಯವೂ ಕಡಿಮೆಯಾಗುತ್ತದೆ. ಉಪಯೋಗಿಸಬಹುದಾದ ಕೆಲವು ಪ್ರಮುಖ ವಸ್ತುಗಳ ಹೆಸರುಗಳು ಕೆಳಗಿನಂತಿವೆ.

 • ಸಿಮೆಂಟ್ ಕಾಂಕ್ರೀಟಿನಿಂದ ನಿರ್ಮಿಸಿದ ಅಥವಾ ಮಣ್ಣಿನಿಂದ ಸಿದ್ಧಪಡಿಸಿ ಬಟ್ಟೆಯಲ್ಲಿ ಸುಟ್ಟ ಕೊಳವೆಗಳು ಇಲ್ಲವೇ, ಅರ್ಧಚಂದ್ರಾಕೃತಿಯ ಕೊಳವೆಗಳು.
 • ಕಲ್ಲು ಚಪ್ಪಡಿಗಳು ಇಲ್ಲವೇ ಸಿಮೆಂಟ್ ಕಾಂಕ್ರೀಟಿನಿಂದ ಸ್ಥಳದಲ್ಲಿಯೇ ನೇರವಾಗಿ ತಯಾರಿಸಿದ ಕಾಲುವೆಗಳು.
 • ಬೆಂಟೋನೈಟ್ (ಮೊಂಟ್ ಮೊರಿಲ್ಲೋನೈಟ್ ಗುಂಪಿನ ಖನಿಜ)
 • ಡಾಂಬರು, ಪ್ಲಾಸ್ಟಿಕ್ ಅಥವಾ ರಬ್ಬರಿನ ಸಂಯುಕ್ತಗಳು
 • ಪಾಲಿಥೀನ್ ದಪ್ಪ ಹಾಳೆಗಳು
 • ಮಣ್ಣು ಮತ್ತು ಸಿಮೆಂಟಿನ ಮಿಶ್ರಣ (೮:೧ ಪ್ರಮಾಣದಲ್ಲಿ)

ಪೂರೈಕೆಯಾದ ನೀರು ಭೂ ಪ್ರದೇಶವನ್ನು ಪ್ರವೇಶಿಸಿ ಮಣ್ಣಿನಲ್ಲಿ ಸಂಗ್ರಹಗೊಂಡ ಪ್ರಮಾಣ (Water-Application Efficiency): ಬೆಳೆಗೆಂದು ಭೂ ಪ್ರದೇಶಕ್ಕೆ ಪೂರೈಸಿದ ಎಲ್ಲ ನೀರೂ ಮಣ್ಣನ್ನು ಪ್ರವೇಶಿಸಿ ಅಲ್ಲಿಯೇ ಸಂಗ್ರಹವಾಗಿರುತ್ತದೆಂದು ಹೇಳಲಾಗದು. ನೀರಿನ ಸ್ವಲ್ಪ ಭಾಗವು ಭೂಮಿಯಿಂದ ಹೊರಗೆ ಹರಿದು ಹೋಗಬಹುದು. ಸ್ವಲ್ಪ ಭಾಗವು ಭೂಮಿಯಾಳಕ್ಕೆ ಬಸಿದು ಹೋಗಬಹುದು. ಉಳಿದ ನೀರು ಮಾತ್ರ ಮಣ್ಣಿನಲ್ಲಿ ಸಂಗ್ರಹವಾಗುತ್ತದೆ. ಕೆಳಗಿನ ಸಂದರ್ಭಗಳಲ್ಲಿ ಬಳಕೆಗೆ ಸಿಗುವ ನೀರಿನ ಪ್ರಮಾಣವು ಕಡಿಮೆಯಾಗಿ ವ್ಯರ್ಥವಾಗುವ ನೀರಿನ ಪ್ರಮಾಣವು ಅಧಿಕಗೊಳ್ಳುತ್ತದೆ.

 • ನೀರಾವರಿಗೆಂದು ಆರಿಸಿಕೊಂಡ ಭೂಮಿ ತಗ್ಗು ದಿಣ್ಣೆಗಳಿಂದ ಕೂಡಿದ್ದರೆ
 • ಮಣ್ಣಿನ ಆಳವು ಕಡಿಮೆ ಇದ್ದರೆ
 • ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಾಳಕ್ಕೆ ಬಸಿಯಲು ಆಸ್ಪದವನ್ನೀಯುವ ಮಣ್ಣಾದರೆ
 • ಭೂ ಪ್ರದೇಶವನ್ನು ಪ್ರವೇಶಿಸಿದ ನೀರಾವರಿ ಜಲವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ
 • ನೀರಾವರಿ ಜಲವು ಭೂಮಿಯ ಮೇಲೆ ಬಹುದೂರ ಹರಿಯಬೇಕಾದರೆ
 • ನೀರು ದೊಡ್ಡ ಪ್ರವಾಹದಲ್ಲಿ ಭೂ ಪ್ರದೇಶಕ್ಕೆ ಹರಿಯುವಂತಿದ್ದರೆ

ಮಣ್ಣಿನಲ್ಲಿ ಸಂಗ್ರಹವಾದ ನೀರಿನ ಪ್ರಮಾಣವನ್ನು ಮುಂದಿನಂತೆ ಅಂದಾಜು ಮಾಡಬಹುದು.

ಪೂರೈಕೆಯಾದ ನೀರು, ಭೂ ಪ್ರದೇಶವನ್ನು ಪ್ರವೇಶಿಸಿ ಸಂಗ್ರಹಗೊಂಡ ನೀರಿನ ಶೇಕಡಾ ಪ್ರಮಾಣ = ಪೂರೈಕೆಯಾದ ನೀರು ಭೂ ಪ್ರದೇಶವನ್ನು ಪ್ರವೇಶಿಸಿ ಸಸ್ಯದ ಬೇರಿನ ವಲಯದಲ್ಲಿ ಸಂಗ್ರಹಗೊಂಡ ನೀರಿನ ಪ್ರಮಾಣ x ೧೦೦
ಭೂ ಪ್ರದೇಶಕ್ಕೆ ಹರಿದು ಬರುವ ನೀರು

ಅಥವ

(ಮಣ್ಣಿಗೆ ಪೂರೈಕೆಯಾದ)  –  (ಹರಿದು ಹೋದ ನೀರು   ನೀರು +)

ಮಣ್ಣಿಗೆ ಪೂರೈಕೆಯಾದ ನೀರು, ಭೂ ಪ್ರದೇಶವನ್ನು ಪ್ರವೇಶಿಸಿ ಸಂಗ್ರಹಗೊಂಡ ನೀರಿನ ಶೇಕಡಾ ಪ್ರಮಾಣ

=

ಭೂಮಿಯೊಳಕ್ಕೆ ಬಸಿದು ಹೋದ ನೀರು

x

೧೦೦

ಭೂ ಪ್ರದೇಶಕ್ಕೆ ಹರಿದು ಬರುವ ನೀರು

ಮಣ್ಣಿನಲ್ಲಿ ಸಂಗ್ರಹಗೊಳ್ಳುವ ನೀರಿನ ಶೇಕಡಾ ಪ್ರಮಾಣವನ್ನು ಹೆಚ್ಚಿಸಲು ಕೆಳಗಿನ ಕ್ರಮಗಳು ಸಹಾಯಕವಾಗುತ್ತವೆ.

 • ಅವಶ್ಯಕತೆಗೆ ತಕ್ಕಂತೆ ಸೂಕ್ತ ರೀತಿಯಲ್ಲಿ ಭೂಮಿಯನ್ನು ಮಟ್ಟ ಮಾಡಬೇಕು. ಈ ಕಾರ್ಯದಿಂದ ಹರಿದು ಹೋಗಿ ನಷ್ಟಗೊಳ್ಳುವ ನೀರಿನ ಪ್ರಮಾಣವು ಕಡಿಮೆಯಾಗುತ್ತದೆ.
 • ಭೂಮಿಯನ್ನು ಸೂಕ್ತ ಪದ್ಧತಿಯಿಂದ ವಿನ್ಯಾಸಗೊಳಿಸಬೇಕು ಮತ್ತು ಸರಿಯಾದ ನೀರಾವರಿ ವಿಧಾನವನ್ನು ಅನುಸರಿಸಬೇಕು. ಉದಾಹರಣೆಗೆ, ಹರಿ ನೀರಿನ ಪದ್ಧತಿಯಿಂದ ಪೂರೈಕೆಯಾದ ನೀರಿನ ಶೇಕಡಾ ೫೦ ರಿಂದ ೬೦ ರಷ್ಟು ನೀರು ಮಣ್ಣಿನಲ್ಲಿ ಸಂಗ್ರಹವಾಗುತ್ತದೆಯಾದರೆ, ಸೇಚನ ನೀರಾವರಿಯಿಂದ ಸಂಗ್ರಹಗೊಳ್ಳುವ ನೀರಿನ ಪ್ರಮಾಣವು ಶೇಕಡಾ ೭೦ ರಷ್ಟು. ಆದರೆ ಹನಿ ನೀರಾವರಿ ಪದ್ದತಿಯನ್ನು ಅನುಸರಿಸಿದರೆ ಶೇಕಡಾ ೯೫ಕ್ಕಿಂತ ಅಧಿಕ ನೀರು ಮಣ್ಣಿನಲ್ಲಿ ಸಂಗ್ರಹಗೊಳ್ಳುತ್ತದೆನ್ನಬಹುದು.
 • ಹರಿದು ಬರುವ ನೀರಿನ ಪ್ರವಾಹವು ಅತಿ ನಿಧಾನವಾಗಿರಬಾರದು. ಅದರಂತೆಯೇ ನೀರು ತುಂಬಾ ವೇಗದಿಂದ ಹರಿಯಲೂಬಾರದು.
 • ಭೂ ಪ್ರದೇಶವನ್ನು ಪ್ರವೇಶಿಸಿದ ನೀರನ್ನು ಸಮರ್ಥ ರೀತಿಯಿಂದ ನಿರ್ವಹಿಸಬೇಕು
 • ಪ್ರತಿ ಸಾರೆ ಪೂರೈಸುವ ನೀರಿನ ಪ್ರಮಾಣವು ಮಿತಿಯನ್ನು ಮೀರಬಾರದು.

ಸಸ್ಯದ ಬೇರುಗಳ ವಲಯದಲ್ಲಿ ಸಂಗ್ರಹಗೊಂಡ ನೀರಿನ ಪ್ರಮಾಣ (Water Storage Efficiency): ಮೇಲೆ ಸೂಚಿಸಿದ ಕ್ರಮಗಳನ್ನುಕೈಗೊಂಡರೆ, ಭೂ ಪ್ರದೇಶವನ್ನು ಪ್ರವೇಶಿಸಿದ ನೀರಿನ ಬಹು ಭಾಗವು ಮಣ್ಣಿನಲ್ಲಿ ಸಂಗ್ರಹವಾಗುತ್ತದೆನ್ನಬಹುದು. ಆದರೆ, ಅವಶ್ಯವಿರುವ ಪ್ರಮಾಣದಲ್ಲಿ ನೀರಿನ ಪೂರೈಕೆಯು ಆಗದಿದ್ದರೆ, ಮತ್ತು ಬೇರುಗಳ ವಲಯದಲ್ಲಿ ಸಂಗ್ರಹವಾಗಬೇಕಾದಷ್ಟು ನೀರು ಶೇಖರಣೆಗೊಳ್ಳದಿದ್ದರೆ ಸಸ್ಯಗಳು ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಸಸ್ಯದ ಬೇರುಗಳ ವಲಯದಲ್ಲಿ ಸಂಗ್ರಹಗೊಳ್ಳಬಹುದಾದ ನೀರಿನ ಶೇಕಡಾ ಎಷ್ಟು ನೀರು ಸಂಗ್ರಹವಾಗಿದೆಂಬುದನ್ನು ಕೆಳಗಿನ ಸಮೀಕರಣದಿಂದ ಕಂಡುಕೊಳ್ಳಬಹುದು.

ಮಣ್ಣಿನಲ್ಲಿ ಸಂಗ್ರಹಗೊಂಡ ಶೇಕಡಾ ನೀರು

= ಬೇರುಗಳ ವಲಯದಲ್ಲಿ ಸಂಗ್ರಹಗೊಂಡ ನೀರಿನ ಪ್ರಮಾಣ x ೧೦೦
ಬೇರುಗಳ ವಲಯದಲ್ಲಿ ಸಂಗ್ರಹಗೊಳ್ಳಬಲ್ಲ ನೀರಿನ ಪ್ರಮಾಣ

ನೀರಾವರಿ ಜಲಯ ಬೆಲೆಯು ಅಧಿಕವಿದ್ದಾಗ, ನೀರಿನ ಕೊರತೆ ಇದ್ದಾಗ ಅಥವಾ ನೀರನ್ನು ಪೂರೈಸಲು ಬಹಳ ಸಮಯವು ಬೇಕೆನಿಸಿದಾಗ, ಮಣ್ಣಿನಲ್ಲಿ ಸಂಗ್ರಹಗೊಂಡ ನೀರಿನ ಪ್ರಮಾಣಕ್ಕೆ ಬಹಳ ಮಹತ್ವವಿದೆ. ಮಣ್ಣಿನಲ್ಲಿರುವ ಲವಣಗಳನ್ನು ಭೂಮಿಯಾಳಕ್ಕೆ ಬಸಿದು ಹೋಗುವಂತೆ ಮಾಡಲು ಮತ್ತು ಇಳುವರಿಯನ್ನು ಅಧಿಕಗೊಳಿಸಲು ಶೇಕಡಾ ಸಂಗ್ರಹಗೊಂಡ ನೀರನ್ನು ಸಾಧ್ಯವಿದ್ದಷ್ಟು ಹೆಚ್ಚಿಸಬೇಕು.

ಸಸ್ಯಗಳು ಬಳಸಿಕೊಂಡ ನೀರಿನ ಪ್ರಮಾಣ (Water use Efficiency): ಭೂಮಿಗೆ ಪೂರೈಕೆಯಾದ ನೀರಿನಲ್ಲಿ ಶೇಕಡಾ ಎಷ್ಟು ನೀರನ್ನು ಬೆಳೆಯು ಬಳಸಿಕೊಂಡಿತೆಂಬ ಸಂಗತಿಯು ವಾಸ್ತವಿಕದಲ್ಲಿ ಬಹಳ ಮಹತ್ವದೆನ್ನಬಹುದು. ಬಳಕೆಯ ಪ್ರಮಾಣವನ್ನು ಕೆಳಗೆ ತೋರಿಸಿದಂತೆ ಎರಡು ದೃಷ್ಟಿಕೋನಗಳಿಂದ ನೋಡಬಹುದು.

ಬೆಳೆಗೆ ನೇರವಾಗಿ ಪ್ರಯೋಜನವಾದ ನೀರಿನ ಶೇಕಡಾ ಪ್ರಮಾಣ

= ಇಳುವರಿ (ಅಥವಾ ಒಣ ವಸ್ತು (ಕಿ.ಗ್ರಾಂ) x ೧೦೦
ಆವಿ ಮತ್ತು ಬಾಷ್ಪ ರೂಪದಲ್ಲಿ ವ್ಯಯವಾದ ನೀರು (ಹೆಕ್ಟೇರು ಸೆಂ.ಮೀ.)

 

ಭೂಮಿಗೆ ಪೂರೈಸಿದ ನೀರಿನಿಂದ ಬೆಳೆಯು ಶೇಕಡಾ  ಉಪಯೋಗಿಸಿಕೊಂಡ ನೀರಿನ ಪ್ರಮಾಣ

=

ಇಳುವರಿ ಅಥವಾ ಒಣ ವಸ್ತು (ಕಿ.ಗ್ರಾಂ)

x

೧೦೦

ಭೂಮಿಗೆ ಪೂರೈಸಿದ ನೀರಿನ ಪ್ರಮಾಣ (ಹೆ.ಸೆಂ.ಮೀ.)

ಮೂಲಭೂತ ದೃಷ್ಟಿಯಿಂದ ವಿಚಾರ ಮಾಡಿದಾಗ ಮೊದಲನೆಯ ಸಮೀಕರಣವು ಮಹತ್ವದೆನಿಸುತ್ತದೆ. ನೀರಿನ ಬಳಕೆಯನ್ನು ಹೆಚ್ಚು ಸಮರ್ಥ ರೀತಿಯಿಂದ ನಿರ್ವಹಿಸಲು ಈ ಸಮೀಕರಣಗಳು ಪ್ರಯೋಜನಕಾರಿಯೆನ್ನಬಹುದು.

ನೀರಿನ ಬಳಕೆಯ ಪ್ರಮಾಣವನ್ನು ಎರಡು ರೀತಿಯಿಂದ ಅಧಿಕಗೊಳಿಸಬಹುದು.

i. ಉತ್ತಮ ತಳಿಯ ಬಳಕೆ, ಪೋಷಕಗಳ ಸಮರ್ಥ ನಿರ್ವಹಣೆ, ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳನ್ನು ಉನ್ನತ ಮಟ್ಟದಲ್ಲಿರುವಂತೆ ನೋಡಿಕೊಳ್ಳುವುದು, ಬೆಳೆಯ ಇತರ ಅವಶ್ಯಕತೆಗಳನ್ನು ಪೂರೈಸಿ ಪೀಡೆಗಳಿಂದ ಸಂರಕ್ಷಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಂಡು ಇಳುವರಿಯು ಅಧಿಕಗೊಳ್ಳುವಂತೆ ನೋಡಿಕೊಳ್ಳುವುದು ಒಂದು ಬಗೆಯಾದರೆ

ii. ಭೂಮಿಗೆ ಪೂರೈಸಿದ ನೀರು ವ್ಯರ್ಥವಾಗದಂತೆ ಸಮರ್ಥ ರೀತಿಯಿಂದ ಅದನ್ನು ನಿರ್ವಹಿಸಿ ಬಳಕೆಯ ಪ್ರಮಾಣವನ್ನು ಅಧಿಕಗೊಳಿಸುವುದು ಇನ್ನೊಂದು ಬಗೆ.

ಮೇಲಿನ ಸಮೀಕರಣದಿಂದ ದೊರೆಯುವ ಮಾಹಿತಿಯು ನೀರಾವರಿಯ ಸಮರ್ಥ ಬಳಕೆಯತ್ತ ಇಟ್ಟ ಹೆಜ್ಜೆಯು ಎಷ್ಟು ಪರಿಣಾಮಕಾರಿ ಎಂಬುದನ್ನು ಸೂಚಿಸುತ್ತಲ್ಲದೇ ಶೇಕಡಾ ಬಳಕೆಯ ಪ್ರಮಾಣವನ್ನು ಉತ್ತಮಗೊಳಿಸುವತ್ತ ಚಿಂತನೆಯನ್ನು ಮಾಡಲು ಪ್ರಚೋದನೆಯನ್ನು ನೀಡುತ್ತದೆ. ಕೆಳಗಿನ ಉದಾಹರಣೆಗಳನ್ನು ಗಮನಿಸಬಹುದು.

 • ಬೋದು ಸಾಲುಗಳನ್ನು ನಿರ್ಮಿಸಿ ಆಲೂಗಡ್ಡೆ, ಕಬ್ಬು ಇತ್ಯಾದಿ ಬೆಳೆಗಳನ್ನು ನೆಟ್ಟಾಗ, ಬೋದುಗಳ ಮೂಲಕ ಆವಿಯಾಗಿ ಹೋಗುವ ನೀರು ಸಪಾಟು ಭೂಮಿಯಿಂದಾಗುವ ನೀರಿನ ನಷ್ಟಕ್ಕಿಂತ ಅಧಿಕವಾಗಿರುತ್ತದೆ. ಅದರಂತೆಯೇ ಸಾಲುಗಳ ಮಧ್ಯದಲ್ಲಿರುವ ಅಂತರವು ತುಲನಾತ್ಮಕವಾಗಿ ಅಧಿಕವಾಗಿರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ ಹೊರಬೀಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಸಿದ ನೀರಿನ ಶೇಕಡಾ ೫೦ರಷ್ಟು ಬೆಳೆಗೆ ದೊರೆಯಬಹುದು.
 • ಬದುಗಳ ಮತ್ತು ನೀರಿನ ಕಾಲುವೆಗಳ ಪ್ರಮಾಣವು ಅಧಿಕವಿರುವ ನೀರಾವರಿ ಪದ್ಧತಿಗಳಲ್ಲಿ ಬಹಳಷ್ಟು ನೀರು ಬದು ಮತ್ತು ಕಾಲುವೆಗಳ ಮೂಲಕ ಆವಿಯಾಗಿ ನಷ್ಟವಾಗುವುದರಿಂದ ಬೆಳೆಗಳ ಬಳಕೆಗೆ ದೊರೆಯುವ ನೀರು ತುಲನಾತ್ಮಕವಾಗಿ ಕಡಿಮೆ.
 • ಕಡಿಮೆ ಅಂತರದ ಸಾಲುಗಳಲ್ಲಿ ಬೆಳೆಸುವ ಮತ್ತು ಸಪಾಟು ಭೂಮಿಯಲ್ಲಿರುವ ಬೆಳೆಗಳು ಅಧಿಕ ಪ್ರಮಾಣದಲ್ಲಿ ನೀರನ್ನು ಬಳಸಿಕೊಳ್ಳುತ್ತವೆ.
 • ಇತರ ಹಲವು ಬಗೆಯ ನೀರಾವರಿ ಪದ್ಧತಿಗಳಿಗಿಂತ ಸೇಚನ ಅಥವಾ ಹನಿ ನೀರಾವರಿ ಪದ್ಧತಿಯಿಂದ ಪೂರೈಕೆಯಾದ ನೀರಿನಿಂದ, ಬೆಳೆಗಳು ಅಧಿಕ ಪ್ರಮಾಣದಲ್ಲಿ ನೀರನ್ನು ಬಳಸಿಕೊಳ್ಳುತ್ತವೆ.

ಕೆಲವು ಪ್ರಮುಖ ಬೆಳೆಗಳಿಗೆ ಅವಶ್ಯವಿರುವ ನೀರಾವರಿಯ ಪ್ರಮಾಣ: ಕೆಲವು ಪ್ರಮುಖ ಬೆಳೆಗಳಲ್ಲಿ, ನೀರಾವರಿ ಜಲದ ಸಮರ್ಥ ನಿರ್ವಹಣೆಯನ್ನು ಮಾಡುವಾಗ ಪರಿಗಣಿಸಬೇಕಾದ, ಹಲವು ಮಹತ್ವಪೂರ್ಣ ವಿಷಯಗಳು ಈ ಕಾಲಂನಲ್ಲಿವೆ. ಪೂರೈಸಬೇಕಾದ ನೀರಿನ ಪ್ರಮಾಣ, ಸಮಯ ಮತ್ತು ಎರಡು ನೀರಾವರಿ ಸರದಿಗಳ ಮಧ್ಯದ ಅಂತರ ಇವುಗಳ ಸಂಕ್ಷಿಪ್ತ ವಿವರಣೆಗಳು ಕೆಳಗಿನಂತಿವೆ. ಬೆಳವಣಿಗೆಯ ವಿವಿಧ ಹಂತಗಳು ಮತ್ತು ನೀರಾವರಿಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ಹಂತಗಳ ಬಗ್ಗೆಯೂ ವಿವರಗಳಿವೆ. ಬೆಳವಣಿಗೆಯ ಯಾವ ಹಂತದಲ್ಲಿ ನೀರಿನ ಕೊರೆಯಾದರೆ, ಬೆಳೆಯ ಇಳುವರಿಯು ಎದ್ದು ಕಾಣುವಷ್ಟು ಕಡಿಮೆಯಾಗುತ್ತದೆಯೋ ಆ ಹಂತಕ್ಕೆ ಬೆಳವಣಿಗೆಯ ಸೂಕ್ಷ್ಮ ಹಂತವೆನ್ನುತ್ತಾರೆಂಬುದನ್ನು ಇಲ್ಲಿ ನೆನಪಿಸಬಹುದು.

ಬತ್ತ: ಅತಿ ಹೆಚ್ಚು ನೀರಾವರಿ ಜಲವು ಬೇಕಾಗುವ ಏಕೈಕ ಬೆಳೆ ಎಂದರೆ ಬತ್ತ. ದೇಶದ ಒಟ್ಟು ಜಲ ಸಂಗ್ರಹದ ಶೇಕಡಾ ೪೫ರಷ್ಟು ನೀರು ಬತ್ತದ ಬೆಳೆಗೆ ಉಪಯೋಗವಾಗುತ್ತಿರುವುದರಿಂದ, ಈ ನೀರನ್ನು ಸಮರ್ಥವಾಗಿ ಬಳಸಿದರೆ, ನೀರಿನ ಉಳಿತಾಯವು ಸಾಧ್ಯವಾಗುತ್ತದೆ. ಉಳಿತಾಯವಾದ ನೀರಿನಿಂದ ಹೆಚ್ಚಿನ ಪ್ರದೇಶದಲ್ಲಿ ಬತ್ತವನ್ನಾಗಲೀ ಅಥವಾ ಇತರ ಬೆಳೆಗಳನ್ನಾಗಲೀ ಬೆಳೆಯಬಹುದು. ಕೆಳಗಿನ ಸಂಗತಿಗಳು ಈ ದಿಶೆಯಲ್ಲಿ ಪ್ರಯೋಜನಕಾರಿ ಎನಿಸುತ್ತದೆ.

 • ಸಾಮಾನ್ಯವಾಗಿ ೫ ಸೆಂ.ಮೀ. ಆಳಕ್ಕಿಂತ ಹೆಚ್ಚು ನೀರನ್ನು ಭೂಮಿಯಲ್ಲಿ ನಿಲ್ಲಿಸುವ ಅವಶ್ಯಕತೆ ಇಲ್ಲ. ಇದಕ್ಕಿಂತ ಹೆಚ್ಚು ಆಳದ ನೀರನ್ನು ನಿಲ್ಲಿಸಿದರೆ, ಸಾಂಪ್ರದಾಯಕ ತಳಿಗಳಿಗೆ ಹೆಚ್ಚಿನ ಪ್ರಯೋಜನವಿಲ್ಲ. ಆದರೆ, ೧೯೬೫ರಿಂದೀಚೆಗೆ ಬಿಡುಗಡೆಗೊಂಡ ಹೊಸ ತಳಿಗಳಿಗೆ ಆಳವಾದ ನೀರಿನಿಂದ ಹಾನಿಯುಂಟಾಗುತ್ತದೆ.
 • ಭೂಮಿಯಾಳಕ್ಕೆ ಬಸಿದು ಹೋಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಸೂಕ್ತ ಭೂಮಿಯ ಆಯ್ಕೆ, ಭೂಮಿಯನ್ನು ಸರಿಯಾಗಿ ಮಟ್ಟ ಮಾಡುವುದು. ಉತ್ತಮ ರೀತಿಯಿಂದ ಕೆಸರು ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು.
 • ಮರಿಗಳು ಬರುವ ಪ್ರಾರಂಭದ ಸಮಯ, ಗರ್ಭತೆನೆ ಬರುವ ಪ್ರಾರಂಭದ ಸಮಯ, ಹೊಡೆಗಳು ಹೊರಬರುವ, ಹೂವಾಡುವ, ಕಾಳುಗಳು ಹಾಲುಗಟ್ಟುವ ಮತ್ತು ಕಾಳುಗಳು ಗಟ್ಟಿಯಾಗುವ ಹಂತಗಳನ್ನು ಬತ್ತದ ಬೆಳೆಯಲ್ಲಿ ಗುರುತಿಸಬಹುದು. ಇವುಗಳಲ್ಲಿ ಮರಿಗಳು ಬರುವ ಪ್ರಾರಂಭಿಕ ಹಂತ ಮತ್ತು ಹೂವಾಡುವ ಹಂತಗಳು ಸೂಕ್ಷ್ಮ ಹಂತಗಳು. ಆ ಸಮಯದಲ್ಲಿ ಬೆಳೆಗೆ ನೀರು ಕಡಿಮೆಯಾಗದಂತೆ ನೋಡಿಕೊಳ್ಳಬೇಕು.
 • ಮಣ್ಣು ಪೂರ್ತಿಯಾಗಿ ನೆನೆಯುವಷ್ಟು ನೀರನ್ನು ಪೂರೈಸಿ, ಮಣ್ಣಿನ ಮೇಲ್ಭಾಗದಲ್ಲಿ ಕೂದಲಿನೆಳೆಯಷ್ಟು ಸೂಕ್ಷ್ಮವಾದ ಬಿರುಕುಗಳು ಕಂಡುಬರುವವರೆಗೆ ತಡೆದು, ಪುನಃ ಮಣ್ಣು ಪೂರ್ತಿಯಾಗಿ ನೆನೆಯುಷ್ಟು ನೀರನ್ನು ಕೊಡಬೇಕು. ಈ ರೀತಿ ನೀರನ್ನು ನಿರ್ವಹಣೆ ಮಾಡಿ ಬತ್ತವನ್ನು ಬೆಳೆದರೆ, ಶೇಕಡಾ ೨೫ರಷ್ಟು ನೀರಿನ ಉಳಿತಾಯವಾಗುತ್ತದೆಂದೂ ಆದರೆ, ಬತ್ತದ ಇಳುವರಿ ಶೇಕಡಾ ೮ರಿಂದ ೧೦ರಷ್ಟು ಕಡಿಮೆಯಾಗುತ್ತದೆಂದೂ ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆಯಲ್ಲಿ ಇರುವ ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಕಪ್ಪು ಎರೆ ಮಣ್ಣಿನಲ್ಲಿ ನಡೆಸಿದ ಸಂಶೋಧನೆಗಳಿಂದ ಕಂಡು ಬಂದಿದೆ.
 • ತೈವಾನ್ ಪದ್ಧತಿಯಿಂದ ನೀರಿನ ನಿರ್ವಹಣೆಯನ್ನು ಮಾಡಿದರೆ, ಬತ್ತದ ಬೆಳೆಗೆ ಪೂರೈಸಬೇಕಾದ ನೀರಿನಲ್ಲಿ ಗಣನೀಯ ಉಳಿತಾಯವನ್ನು ಮಾಡಬಹುದು. ಆದಷ್ಟು ಕಡಮೆ ನೀರನ್ನು ಭೂಮಿಯಲ್ಲಿರಗೊಟ್ಟು ಬತ್ತದ ಪೈರು ನಾಟಿ ಮಾಡುವುದು. ೫ರಿಂದ ೮ ದಿನಗಳವರೆಗೆ ೩ರಿಂದ ೫ ಸೆಂ.ಮೀ. ನೀರನ್ನು ನಿಲ್ಲಿಸುವುದು. ೪೦ರಿಂದ ೪೫ ದಿನಗಳವರೆಗೆ ೨-೩ ಸೆಂ.ಮೀ. ಆಳಕ್ಕೆ ನೀರಿರುವಂತೆ ನೋಡಿಕೊಳ್ಳುವುದು, ೪೫ರಿಂದ ೫೦ ದಿನಗಳ ಅವಧಿಯಲ್ಲಿ ಗದ್ದೆಯಲ್ಲಿಯ ನೀರನ್ನು ಸಂಪೂರ್ಣವಾಗಿ ಹೊರತೆಗೆಯುವುದು, ೫೫ರಿಂದ ೭೦ ದಿನಗಳವರೆಗೆ (ಪುಷ್ಪಾಂಕುರದ ಆರಂಭದ ಸಮಯ) ಗದ್ದೆಯಲ್ಲಿ ೭ರಿಂದ ೧೦ ಸೆಂ.ಮೀ. ಆಳದವರೆಗೆ ನೀರನ್ನು ನಿಲ್ಲಿಸುವುದು, ೭೦ರಿಂದ ೮೦ ದಿನಗಳವರೆಗೆ (ಧ್ವಜ ಪತ್ರಗಳು ಹೊರ ಬರುವ ಸಮಯ) ನೀರಿನ ಆಳವನ್ನು ೩ ಸೆಂ.ಮೀ.ಗೆ ಇಳಿಸುವುದು, ೮೦ರಿಂದ ೯೦ ದಿನಗಳವರೆಗೆ (ಎಲ್ಲ ತೆನೆಗಳು ಹೊರಬಂದಿರುವ ಸಮಯ) ನೀರಿನ ಆಳವನ್ನು ೭ರಿಂದ ೧೦ ಸೆಂ.ಮೀ.ನಷ್ಟಿಡುವುದು, ಕೊಯ್ಲು ಮಾಡುವುದಕ್ಕಿಂತ ೭ ದಿನಗಳ ಮೊದಲು ಗದ್ದೆಯೊಳಗಿನ ನೀರನ್ನು ಸಂಪೂರ್ಣವಾಗಿ ಹೊರತೆಗೆಯುವುದು ಇವು ತೈವಾನ್ ಪದ್ದತಿಯಿಂದ ನೀರನ್ನು ನಿರ್ವಹಿಸುವ ಮುಖ್ಯ ಅಂಶಗಳು.

ಗೋಧಿ: ಮುಕುಟ ಬೇರುಗಳು ಹೊರಬರುವ (CRI), ಮರಿಗಳು ಕಾಣಿಸಿಕೊಳ್ಳುವ, ಗೆಣ್ಣುಗಳ ನಿರ್ಮಾಣದ, ಧ್ವಜಪತ್ರಗಳು ಅಭಿವೃದ್ಧಿಗೊಳ್ಳುವ, ಹೂವಾಡುವ, ಕಾಳುಗಳಲ್ಲಿ ಹಾಲು ತುಂಬುವ ಮತ್ತು ಕಾಳು ಗಟ್ಟಿಯಾಗುವ ಬೆಳವಣಿಗೆಯ ಹಂತಗಳನ್ನು ಗೋಧಿಯಲ್ಲಿ ಗುರುತಿಸಬಹುದು.

 • ಗೋಧಿಯನ್ನು ಬಿತ್ತಿದ ಸುಮಾರು ೨೦ ರಿಂದ ೨೫ ದಿನಗಳ ಅವಧಿಯಲ್ಲಿ ಮಣ್ಣಿನ ಮೇಲ್ಭಾಗದಿಂದ ಸುಮಾರು ೨ ಸೆಂ.ಮೀ. ಆಳದಲ್ಲಿ ಮುಕುಟ ಬೇರುಗಳು (Crownroots) ಹೊರಬರುತ್ತವೆ. ಸಸ್ಯದ ಬೆಳವಣಿಗೆಯ ಈ ಹಂತದಲ್ಲಿ ಸಾಕಷ್ಟು ಆರ್ದ್ರತೆಯ ಮಣ್ಣಿನಲ್ಲಿರಬೇಕಾಗುತ್ತದೆ. ನೀರಿನ ಕೊರತೆಯಾದರೆ, ಮುಕುಟ ಬೇರುಗಳು ಸರಿಯಾಗಿ ಅಭಿವೃದ್ಧಿಗೊಳ್ಳದೆ, ಮರಿಗಳ ಸಂಖ್ಯೆಯು ಕಡಿಮೆಯಾಗಿ, ಬೆಳೆಯ ಇಳುವರಿಯು ಗಣನೀಯವಾಗಿ ತಗ್ಗುತ್ತದೆ.
 • ಬೀಜ ಬಿತ್ತಿದ ೮೦ ರಿಂದ ೮೫ ದಿನಗಳ ನಂತರ, ಸಸ್ಯಗಳು ಹೂವು ಬಿಡುತ್ತದೆ. ಗೋಧಿಯ ಬೆಳವಣಿಗೆಯಲ್ಲಿ ಇದು ಎರಡನೆಯ ಸೂಕ್ಷ್ಮ ಹಂತವೆನ್ನಬಹುದು. ಸಮಯದಲ್ಲಿಯೂ ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ನೀರಿನ ಅವಶ್ಯಕತೆಯ ದೃಷ್ಟಿಯಿಂದ, ಗೋಧಿಯ ಬೆಳವಣಿಗೆಯ ಹಂತಗಳನ್ನು ಅತಿ ಸೂಕ್ಷ್ಮಹಂತದಿಂದ ಅತಿ ಕಡಿಮೆ ಸೂಕ್ಷ್ಮ ಹಂತವರೆಗೆ ಮುಂದಿನಂತೆ ಅನುಕ್ರಮವಾಗಿ ಹೊಂದಿಸಬಹುದು.

ಮುಕುಟ ಬೇರುಗಳು ಹೊರಬರುವ ಸಮಯ

>

ಹೂವಾಡುವ ಸಮಯ

>

ಗೆಣ್ಣುಗಳು ನಿರ್ಮಾಣ ಮತ್ತು ಕಾಳು ಹಾಲುಗಟ್ಟುವ ಸಮಯ

>

ಮರಿಯೊಡೆಯುವ ಸಮಯ

>

ಕಾಳುಗಳು ಗಟ್ಟಿಯಾಗುವ ಸಮಯ

 • ನೀರಿನ ಕೊರತೆಯಿರುವ ಪ್ರಸಂಗಗಳಲ್ಲಿ ಇರುವ ನೀರನ್ನು ಬೆಳೆಯ ಸೂಕ್ಷ್ಮ ಹಂತಗಳ ಸಮಯದಲ್ಲಿ ಬೆಳೆಗೆ ಪೂರೈಸಬೇಕು. ಉದಾಹರಣೆಗೆ, ಬೆಳೆಗೆ ಒಂದೇ ಬಾರಿ ನೀರನ್ನು ಪೂರೈಸಲು ಮಾತ್ರ ಸಾಧ್ಯವಿರುವಾಗ, ಮುಕುಟ ಬೇರುಗಳು ಹೊರಬರುವ ಸಮಯಕ್ಕೆ ಆದ್ಯತೆ ನೀಡಬೇಕು. ಎರಡು ಬಾರಿ ಪೂರೈಸುವಷ್ಟು ನೀರು ಲಭ್ಯವಿದ್ದಲ್ಲಿ, ಮುಕುಟ ಬೇರುಗಳು ಹೊರಬರುವಾಗ ಒಮ್ಮೆ ಮತ್ತು ಹೂವಾಡುವಾಗ ಇನ್ನೊಮ್ಮೆ ಹೀಗೆ ನೀರಿನ ಪೂರೈಕೆ ಮಾಡಬೇಕು.
 • ನೀರಾವರಿ ಜಲದ ಕೊರತೆ ಇಲ್ಲದಿರುವಾಗ ಬೆಳವಣಿಗೆಯ ಆರೂ ಹಂತಗಳಲ್ಲಿ ನೀರನ್ನು ಪೂರೈಸಬಹುದು.

ಜೋಳ: ಜೋಳವನ್ನು ಮುಂಗಾರಿನಲ್ಲಿ ಮಳೆಯಾಶ್ರಯದಲ್ಲಿ ಮತ್ತು ಹಿಂಗಾರಿನ ಮಣ್ಣಿನಲ್ಲಿ ಸಂಗ್ರಹಗೊಂಡ ಆರ್ದ್ರತೆಯ ಸಹಾಯದಿಂದ ಬೆಳೆಯುವುದು ಸಾಮಾನ್ಯವಾದರೂ ನೀರಾವರಿಯಲ್ಲಿಯೂ ಜೋಳವನ್ನು ಬೆಳೆಯಲಾಗುತ್ತದೆ. ಬೆಳವಣಿಗೆಯ ಕೆಳಗಿನ ಹಂತಗಳಲ್ಲಿ, ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡರೆ, ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದು.

 • ಸಸಿಯ ಹಂತ (ಬಿತ್ತಿದ ೨ರಿಂದ ೪ ವಾರಗಳ ಅವಧಿ)
 • ಹೂವು ಬರುವುದಕ್ಕಿಂತ ಸ್ವಲ್ಪ ಮೊದಲು (ಬಿತ್ತಿದ ೧೨ರಿಂದ ೧೪ ವಾರಗಳ ಅವಧಿ)
 • ಹೂವಾಡುವಾಗ (೧೪ರಿಂದ ೧೬ ವಾರಗಳ ಅವಧಿ)
 • ಕಾಳು ಕಟ್ಟುವಾಗ (ಬಿತ್ತಿದ ೧೭ನೇ ವಾರ)

ಮುಸುಕಿನ ಜೋಳ: ನಮ್ಮ ದೇಶದ ಉತ್ತರ ಭಾಗದಲ್ಲಿ, ಮುಸುಕಿನ ಜೋಳವನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತಿದ್ದರೆ, ದಕ್ಷಿಣದ ರಾಜ್ಯಗಳಲ್ಲಿ ಈ ಬೆಳೆಯನ್ನು ಮಳೆ, ಚಳಿ ಮತ್ತು ಬೇಸಿಗೆ ಹೀಗೆ ಮೂರು ಹಂಗಾಮುಗಳಲ್ಲಿ ಬೆಳೆಯಬಹುದು. ಈ ಬೆಳೆಯ ನೀರಿನ ನಿರ್ವಹಣೆಯಲ್ಲಿ ಕೆಳಗಿನ ಸಂಗತಿಗಳನ್ನು ಪರಿಗಣಿಸಬಹುದು.

 • ಮಣ್ಣಿನ ಗುಣಧರ್ಮ ಮತ್ತು ಬೆಳೆಯುವ ಹಂಗಾಮು ಇವುಗಳ ಮೇಲಿಂದ, ನೀರಿನ ನಿರ್ವಹಣೆಯಲ್ಲಿ ಅವಶ್ಯವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
 • ಮಳೆಗಾಲವು ತಡವಾಗಿ ಆರಂಭವಾದರೆ, ಬಿತ್ತುವ ಮೊದಲು ಒಮ್ಮೆ ಭೂಮಿಗೆ ನೀರನ್ನು ಪೂರೈಸಿ ಬಿತ್ತನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು.
 • ಬೆಳವಣಿಗೆಯ ಪ್ರಾರಂಭಿಕ ಹಂತಗಳಲ್ಲಿ, ನೀರಿನ ಕೊರತೆಯ ಬೆಳೆಗೆ ಆಗದಂತೆ ನೋಡಿಕೊಂಡರೆ ಅಧಿಕ ಇಳುವರಿಯನ್ನು ನಿರೀಕ್ಷಿಸಬಹುದು.
 • ಪ್ರಾರಂಭಿಕ ಬೆಳವಣಿಗೆ (ಬಿತ್ತಿದ ೨೦ರಿಂದ ೪೦ ದಿನಗಳ ಅವಧಿ), ಗಂಡು ಹೂವು ಬರುವ ಸಮಯ (Tasselling time), ಮತ್ತು ಕುಂಡಿಗೆಗಳು ಕಾಣಿಸಿಕೊಂಡೊಡನೆ (ಬಿತ್ತಿದ ೪೫ರಿಂದ ೬೦ ದಿನಗಳ ಅವಧಿ) ಈ ಹಂತಗಳಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.
 • ಮಣ್ಣಿನಲ್ಲಿರುವ ಲಭ್ಯ ನೀರು ಶೇಕಡಾ ೫೦ ರಷ್ಟು ಬಳಕೆಯಾದೊಡನೆ, ಬೆಳೆಗೆ ನೀರನ್ನು ಪೂರೈಸುವುದು ಉತ್ತಮ.
 • ಮುಂಗಾರಿನಲ್ಲಿ ಒಟ್ಟು ಮೂರು ನೀರುಗಳು ೧೫೦ ಮಿ.ಮೀ. ನೀರು) ಸಾಕಾಗುತ್ತವೆ ಎಂದೂ ಹಿಂಗಾರಿನಲ್ಲಿ ೫ ನೀರುಗಳು (೪೪೦ ಮಿ.ಮೀ.) ಬೇಕಾಗುತ್ತವೆ ಎಂದೂ ಕರ್ನಾಟಕ ರಾಜ್ಯದ ಅರಬಾವಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಸಂಶೋಧನೆಗಳಿಂದ ಗೊತ್ತಾಗಿದೆ.
 • ಅಧಿಕ ನೀರಿನ ಪೂರೈಕೆಯ, ಮುಸುಕಿನ ಜೋಳಕ್ಕೆ ಅಪಾಯಕಾರಿ ಎಂಬುದನ್ನು ತಿಳಿದಿರಬೇಕು. ಉದಾಹರಣೆಗೆ, ಸಸಿಯ ಹಂತದಲ್ಲಿ ಅಥವಾ ಹೂವಾಡುವಾಗ, ೩ ರಿಂದ ೫ ದಿನಗಳವರೆಗೆ, ಭೂ ಪ್ರದೇಶದಲ್ಲಿ ನೀರು ನಿಂತರೆ, ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ.

ಸಜ್ಜೆ

 • ಸಜ್ಜೆಯು ನೀರಿನ ಕೊರತೆಯನ್ನು ಸಮರ್ಥವಾಗಿ ಎದುರಿಸಬಲ್ಲ ಬೆಳೆ. ಮುಂಗಾರಿ ಹಂಗಾಮಿನಲ್ಲಿ ಈ ಬೆಳೆಯನ್ನು ಬೆಳೆದಾಗ ೧೫೦ ರಿಂದ ೨೦೦ ಮಿ.ಮೀ. ನೀರನ್ನು ಪೂರೈಸಿದರೆ ಸಾಕು.
 • ಎರೆ ಮಣ್ಣಿನಲ್ಲಿ ಈ ಬೆಳೆಯನ್ನು ಬೆಳೆದಾಗ ಮೇಲಿನ ೩೦ ಸೆಂ.ಮೀ. ಆಳದ ಮಣ್ಣಿನಲ್ಲಿರುವ ಲಭ್ಯ ನೀರು ಶೇಕಡಾ ೭೫ರಷ್ಟು ಬಳಕೆಯಾದ ಮೇಲೆ ನೀರನ್ನು ಪೂರೈಸಿದರೆ ಉತ್ತಮ ಇಳುವರಿಯನ್ನೇ ಕೊಡುತ್ತದೆಂದು ಕಂಡು ಬಂದಿದೆ. ಆದರೆ, ಮರಳುಗೋಡು ಮಣ್ಣಿನಲ್ಲಿ ಲಭ್ಯ ನೀರು, ಅರ್ಧದಷ್ಟು ಕಡಿಮೆಯಾದೊಡನೆ ನೀರನ್ನು ಪೂರೈಸಿದರೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ.
 • ಎರಡು ಕಂತುಗಳಲ್ಲಿ ೧೨೪ ಮಿ.ಮೀ. ನೀರನ್ನು ಪೂರೈಸಿದರೆ, ಸಜ್ಜೆಯ ಉತ್ತಮ ಇಳುವರಿಯನ್ನು ಪಡೆಯಬಹುದೆಂದು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ್ಲಲಿ ಕಪ್ಪು ಎರೆ ಮಣ್ಣಿನಲ್ಲಿ ನಡೆಸಿದ ಪ್ರಯೋಗಗಳಿಂದ ಕಂಡುಬಂದಿದೆ.

ರಾಗಿ

ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಕಪ್ಪು ಎರೆ ಮಣ್ಣಿನಲ್ಲಿ ನಡೆಸಿದ ಸಂಶೋಧನೆಗಳಿಂದ ಕೆಳಗಿನ ಪರಿಣಾಮಗಳು ದೊರೆತಿವೆ.

 • ರಾಗಿಯನ್ನು ಮಳೆಗಾಲದಲ್ಲಿ ಬೆಳೆದಾಗ, ನೀರಾವರಿಯ ಅವಶ್ಯಕತೆ ಇಲ್ಲ.
 • ಬೇಸಿಗೆಯಲ್ಲಿ ರಾಗಿಯನ್ನು ಬೆಳೆದರೆ, ಮಣ್ಣಿನಲ್ಲಿರುವ ಲಭ್ಯ ಜಲದ ಪ್ರಮಾಣವು, ಅರ್ಧದಷ್ಟು ಕಡಿಮೆಯಾದೊಡನೆ ನೀರನ್ನು ಪೂರೈಸಬೇಕಾಗುತ್ತದೆ.
 • ಬೇಸಿಗೆಯಲ್ಲಿ ಒಟ್ಟು ೪೫೦ ಮಿ.ಮೀ. ನೀರನ್ನು ೭ರಿಂದ ೯ ಕಂತುಗಳಲ್ಲಿ ಒದಗಿಸಬೇಕು.