ಬೆಳೆಗಳಿಗೆ ಅವಶ್ಯವಿರುವ ಒಟ್ಟು ನೀರು

ಸಸ್ಯಗಳಿಗೆ ದೊರೆಯುವ ನೀರು ಕೆಳಗಿನ ಕಾರ್ಯಗಳಿಗೆ ವಿನಿಯೋಗವಾಗುತ್ತದೆ.

i. ಆವಿಯಾಗಿ

 • ಆರ್ದ್ರವಾಗಿರುವ ಮಣ್ಣಿನಿಂದ ನೀರು, ಆವಿಯ ರೂಪದಲ್ಲಿ (Evaporation) ಹೊರಬಂದು ವಾಯು ಮಂಡಲವನ್ನು ಸೇರುತ್ತದೆ.
 • ಮಳೆಯಿಂದ ಇಲ್ಲವೇ ಸೇಚನ ನೀರಾವರಿಯಿಂದ ಸಸ್ಯದ ಎಲೆ ಮತ್ತು ಕಾಂಡದ ಮೇಲೆ ಬಿದ್ದ ನೀರು, ಸಸ್ಯಕ್ಕೆ ಬಳಕೆಯಾಗದೆ ಅಲ್ಲಿಯೇ ಆವಿರೂಪಕ್ಕೆ ಪರಿರ್ವನೆಗೊಂಡು ಹವೆಯಲ್ಲಿ ಲೀನವಾಗುತ್ತದೆ.

ii. ಸಸ್ಯಗಳೊಳಗಿನಿಂದ ಬಾಷ್ಪ ರೂಪದಲ್ಲಿ ಹೊರಬಂದು: ಸಸ್ಯಗಳು ತಮ್ಮ ಬೇರುಗಳ ಮೂಲಕ ಒಳಗೆ ತೆಗೆದುಕೊಂಡ ನೀರನ್ನು, ಭೂಮಿಯ ಮೇಲ್ಭಾಗದಲ್ಲಿರುವ ಭಾಗದಿಂದ ಅದರಲ್ಲಿಯೂ ಎಲೆಗಳ ಮೂಲಕ ಬಾಷ್ಪದ ರೂಪದಲ್ಲಿ ಹೊರಬಿಡುತ್ತವೆ.

iii. ಸಸ್ಯಗಳಿರುವ ಜೀವಕಣಗಳ ಕಾರ್ಯಚಟುವಟಿಕೆಗೆ: ಸಸ್ಯದ ಜೀವಿಕಣಗಳಲ್ಲಿ ಸಾಕಷ್ಟು ನೀರಿಲ್ಲದಿದ್ದರೆ ಸಸ್ಯದ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳುತ್ತವೆ.

ಮೇಲೆ ಹೇಳಿದ ವಿಷಯಗಳನ್ನು, ಸೂತ್ರ ರೂಪದಲ್ಲಿ ಮುಂದಿನಂತೆ ಬರೆಯಬಹುದು.

ಸಸ್ಯಗಳಿಗೆ ಬೇಕಾಗುವ ನೀರು

=

ಮಣ್ಣಿನಿಂದ

ಆವಿಯಾಗಿ ಹೋಗುವ ನೀರು

+

ಸಸ್ಯಗಳಿಂದ ಬಾಷ್ಪರೂಪದಲ್ಲಿ ಹೊರ ಬರುವ ನೀರು

+

ಸಸ್ಯಗಳ ಚಯಾಪಚಯ ಕಾರ್ಯಕ್ಕೆ ಬೇಕಾಗುವ ನೀರು

ಆವಿಯಾಗಿ ಹೋಗುವ (Evaporation) ಮತ್ತು ಬಾಷ್ಪ ರೂಪದಲ್ಲಿ ಹೊರ ಬರುವ (Transpiration) ನೀರಿನ ಒಟ್ಟು ಮೊತ್ತಕ್ಕೆ “ಇವ್ಯಾಪೋಟ್ರಾನ್ಸ್‌ಪಿರೇಷನ್‌(Evapotranspiration) ಎಂಬ ಪದವು ರೂಢಿಯಲ್ಲಿದೆ. ಅಮೆರಿಕಾದ ಸಂಯುಕ್ತ ಸಂಸ್ಥಾನಗಳ ಥೋರ್ನ್ಥ್‌‌ವೇಟ್ (Thornthwaite) ಎಂಬ ವಿಜ್ಞಾನಿ ಈ ಪದವನ್ನು ಮೊಟ್ಟ ಮೊದಲು ಬಳಸಿದರು.

ಮೇಲಿನ ಸಮೀಕರಣದಲ್ಲಿ ತೋರಿಸಿದ “ಸಸ್ಯಗಳ ಚಯಾಪಚಯ ಕಾರ್ಯಕ್ಕೆ” ಬೇಕಾಗುವ ನೀರಿನ ಪ್ರಮಾಣವು ಅಂದಾಜು ಶೇಕಡಾ ಒಂದು ಮಾತ್ರ. ಉಳಿದ ಶೇಕಡಾ ೯೯ರಷ್ಟು ನೀರು ಮಣ್ಣಿನಿಂದ ಆವಿಯಾಗಿ ಹೋಗಿ ಮತ್ತು ಸಸ್ಯಗಳಿಂದ ಬಾಷ್ಪ ರೂಪದಲ್ಲಿ ಹೊರಬಂದು ವಿನಿಯೋಗಗೊಳ್ಳುತ್ತದೆ. ಆದ್ದರಿಂದಲೇ, ಇವೆರಡರ ಮೊತ್ತವನ್ನೇ ಸಸ್ಯಗಳಿಗೆ ಬೇಕಾಗುವ ನೀರಿನ ಮೊತ್ತ ಎಂದು ಪರಿಗಣಿಸುವ ಪರಿಪಾಠವಿದೆಯಲ್ಲದೇ ಇವೆರಡರ ಸರಿಯಾದ ನಿರ್ವಹಣೆಗೆ ಬಹಳ ಮಹತ್ವವಿದೆ.

ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ನಿರ್ಧರಿಸುವ ವಿಧಾನಗಳು: ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ಪ್ರತ್ಯಕ್ಷ-ಅಥವಾ ಪರೋಕ್ಷ ಪದ್ಧತಿಗಳಿಂದ ಕಂಡು ಹಿಡಿಯಬಹುದು.

ಪ್ರತ್ಯಕ್ಷ (ನೇರ) ಪದ್ಧತಿಗಳು: ಈ ಗುಂಪಿನಲ್ಲಿ ಹಲವು ಬಗೆಗಳಿವೆ. ಪ್ರಮುಖವಾದವುಗಳ ಸಂಕ್ಷಿಪ್ತ ಪರಿಚಯವು ಕೆಳಗಿದೆ.

. ತೊಟ್ಟಿ, ಹೌದು (Tank) ಅಥವಾ ಲೈಸೀಮಿಟರು (Lysimeter) : ವಿಶಿಷ್ಟ ರೀತಿಯಲ್ಲಿ ನಿರ್ಮಿಸಿದ ಲೈಸೀಮೀಟರ್‌ಗಳನ್ನು ಈ ಕೆಲಸಕ್ಕೆ ಬಳಸಲಾಗುತ್ತದೆ. ಪ್ರತಿಯೊಂದು ಲೈಸೀ ಮೀಟರ‍್ನಲ್ಲಿಯೂ ಒಂದೇ ಪ್ರಕಾರದ ಮತ್ತು ಒಂದೇ ತೂಕದ ಮಣ್ಣನ್ನು ತುಂಬಬೇಕು ಮತ್ತು ಅವುಗಳನ್ನು ಪರೀಕ್ಷಿಸಬೇಕೆಂದಿರುವ ಬೆಳೆಯನ್ನು ಬಿತ್ತಬೇಕು. ಪ್ರತಿಯೊಂದಕ್ಕೂ ಬೇರೆ, ಬೇರೆ ಪ್ರಮಾಣದಲ್ಲಿ ನೀರನ್ನು ಪೂರೈಸಿ ಅತ್ಯಧಿಕ ಇಳುವರಿಯು ದೊರೆತ ಲೈಸಿ ಮೀಟರ್‌ನಲ್ಲಿ ಬೆಳೆಸಿದ ಬೆಳೆಗೆ ಪೂರೈಸಿದ ನೀರಿನ ಪ್ರಮಾಣವನ್ನು ಲೆಕ್ಕ ಮಾಡಬೇಕು. ಇದೇ ಬೆಳೆಯ ಉತ್ತಮ ಬೆಳವಣಿಗೆಗೆ ಬೇಕಾಗುವ ನೀರಿನ ಪ್ರಮಾಣ ಎಂದು ತಿಳಿಯಬೇಕು. ಬೆಳವಣಿಗೆಯ ಅವಧಿಯಲ್ಲಿದ್ದ ಬಿದ್ದ ಮಳೆಯ ನೀರನ್ನು ಲೆಕ್ಕ ಮಾಡುವಾಗ ಪರಿಗಣಿಸಬೇಕು.

ಮೇಲೆ ಸೂಚಿಸಿದಂತೆ ಲೈಸೀಮೀಟರ್‌ಗಳನ್ನು ಸಿದ್ದಪಡಿಸಿ, ಅವುಗಳನ್ನು ಹೊರಗಿನಿಂದ ತಂದ ಮಣ್ಣಿನಿಂದ ತುಂಬುವ ಬದಲು ಮಣ್ಣನ್ನು ಕದಲಿಸದೇ ಲೈಸೀ ಮೀಟರ್‌ಗಳನ್ನು ಕಟ್ಟುವುದು ಪ್ರಶಸ್ತವೆನ್ನಬಹುದು. ಯಾವುದೇ ರೀತಿಯಿಂದ ನಿರ್ಮಿಸಿದರೂ ಲೈಸೀಮೀಟರ್‌ಗಳಲ್ಲಿ ಬೆಳೆಸಿದ ಬೆಳೆಯನ್ನೇ ಇವುಗಳ ಸುತ್ತಲೂ ಬೆಳೆಸುವುದು ಅವಶ್ಯ.

. ಭೂ ಪ್ರದೇಶದಲ್ಲಿ ಪ್ರಯೋಗಗಳು: ಮೇಲೆ ವಿವರಿಸಿದ ರೀತಿಯಲ್ಲೇ ಲೈಸೀಮೀಟರ್‌ಗಳ ಬದಲು ಹೊಲ ಅಥವಾ ಗದ್ದೆಗಳಲ್ಲಿ ನೇರವಾಗಿ ಪ್ರಯೋಗಗಳನ್ನು ಕೈಕೊಳ್ಳಬಹುದು. ಇದಕ್ಕಾಗಿ ನೀರಿನ ಪಾತಳಿಯು ಆಳವಾಗಿರುವ ಮತ್ತು ಒಂದೇ ರೀತಿಯ ಮಣ್ಣಿರುವ ಭೂ ಪ್ರದೇಶವನ್ನು ಆರಿಸಿಕೊಂಡು, ಒಂದೇ ಆಕಾರದ ಹಲವು ಭಾಗಗಳನ್ನಾಗಿ ವಿಂಗಡಿಸಿ, ಪ್ರತಿ ಭಾಗದಲ್ಲಿಯೂ ಪರೀಕ್ಷಿಸಬೇಕೆಂದಿರುವ ಬೆಳೆಯನ್ನು ಬೆಳೆಯಬೇಕು. ಒಂದೊಂದು ಭಾಗದಲ್ಲಿ ಬೆಳೆಸಿದ ಬೆಳೆಗೂ ಬೇರೆ ಬೇರೆ ಪ್ರಮಾಣದಲ್ಲಿ ನೀರನ್ನು ಪೂರೈಸಬೇಕು. ಯಾವ ಭಾಗದಲ್ಲಿ ಬೆಳೆಸಿದ ಬೆಳೆಯ ಇಳುವರಿಯು ಅತ್ಯಧಿಕವಾಗಿರುತ್ತದೆಯೋ (ಅಥವಾ ಲಾಭವು ಅತ್ಯಧಿಕವಾಗಿ ದೊರೆಯುತ್ತದೆಯೋ) ಆ ಭಾಗಕ್ಕೆ ಪೂರೈಕೆಯಾದ (ಮಳೆಯ ನೀರನ್ನು ಪರಿಗಣಿಸಿ) ನೀರಿನ ಪ್ರಮಾಣವೇ ಸಂಬಂಧಿಸಿದ ಬೆಳೆಗೆ ಬೇಕಾಗುವ ನೀರಿನ ಪ್ರಮಾಣವೆಂದು ತಿಳಿಯಬೇಕು.

. ಮಣ್ಣಿನಲ್ಲಿರುವ ನೀರಿನ ಪ್ರಮಾಣದ ಪ್ರಯೋಗಗಳು: ಭೂ ಪ್ರದೇಶದಲ್ಲಿ ನಡೆಸಿದ ಪ್ರಯೋಗಗಳಲ್ಲಿ ವಿವರಿಸಿದಂತೆ, ಈ ಪದ್ಧತಿಯಲ್ಲಿಯೂ ಆರಿಸಿಕೊಂಡ ಪ್ರದೇಶದಲ್ಲಿ ಒಂದೇ ಆಕಾರದ ಹಲವು ವಿಭಾಗಗಳನ್ನು ಮಾಡಿ, ಅವುಗಳಲ್ಲಿ ಒಂದೇ ಬಗೆಯ ಬೆಳೆಯನ್ನು ಬಳೆಸಿ, ಪ್ರತಿ ವಿಭಾಗಕ್ಕೂ ವಿಭಿನ್ನ ಪ್ರಮಾಣದಲ್ಲಿ ನೀರು ಪೂರೈಸಬೇಕು. ಪ್ರತಿ ಬಾರಿ ನೀರನ್ನು ಪೂರೈಸುವ ಮೊದಲ ಪೂರೈಕೆಯಾದ ಮರುದಿನ ಮತ್ತು ಎರಡು ನೀರಾವರಿಗಳ ಮಧ್ಯದಲ್ಲಿ ಬೇರೆ ಬೇರೆ ಆಳದಲ್ಲಿ ಮಣ್ಣಿನ ನಮೂನೆಗಳನ್ನು ಸಂಗ್ರಹಿಸಿ, ಅವುಗಳಲ್ಲಿರುವ ಶೇಕಡಾ ನೀರನ್ನು ಕಂಡು ಹಿಡಿಯಬೇಕು. ಈ ರೀತಿ ಸಂಗ್ರಹಿಸಿದ ವಿವರಗಳಿಂದ ಬೆಳೆಯು ಉಪಯೋಗಿಸಿದ ನೀರಿನ ಪ್ರಮಾಣವನ್ನು ಲೆಕ್ಕ ಮಾಡಬಹುದು. ಆದರೆ ಈ ಪದ್ಧತಿಯು ಬಹಳ ಶ್ರಮದಾಯಕ.

ಪರೋಕ್ಷ ಪದ್ಧತಿಗಳು : ಬೆಳೆಗೆ ಬೇಕಾಗುವ ನೀರಿಗೂ ಸೂರ್ಯರಶ್ಮಿ, ಉಷ್ಣತಾಮಾನ, ಹವೆಯೊಳಗಿನ ಆರ್ದ್ರತೆ, ಗಾಳಿಯ ವೇಗ, ಹವೆಯಲ್ಲಿರುವ ಬಾಷ್ಪದ ಒತ್ತಡ ಇತ್ಯಾದಿಗಳಿಗೂ ಇರುವ ಸಂಬಂಧವನ್ನು ಹಲವು ವಿಜ್ಞಾನಿಗಳು ಆಳವಾಗಿ ಅಧ್ಯಯನ ಮಾಡಿದ್ದಾರೆ. ಇಂತಹ ಅಧ್ಯಯನದಿಂದ ಹೊರಬಂದ ಪರಿಣಾಮಗಳ ಆಧಾರದ ಮೇಲಿಂದ, ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ಅಂದಾಜು ಮಾಡುವ ಪ್ರಯತ್ನವನ್ನು ಈ ವಿಜ್ಞಾನಿಗಳು ಮಾಡಿದ್ದಾರೆ. ಪ್ರಮುಖವಾದವುಗಳ ಸಂಕ್ಷಿಪ್ತ ವಿವರಣೆಯು ಕಳಗಿನಂತಿದೆ.

i. ಪೆನ್‌ಮನ್‌ಪದ್ಧತಿ (Penman Method): ಮೇಲೆ ಸೂಚಿಸಿದ ಹವಾಮಾನದ ವಿವಿಧ ಘಟಕಗಳನ್ನು ಉಪಯೋಗಿಸಿಕೊಂಡು, ಯಾವುದೇ ಭಾಗದಲ್ಲಿ ಆಗಬಹುದಾದ “ಇವ್ಯಾಪೋಟ್ರಾನ್‌ಸ್ಪಿರೇಶನ್”ನ ಗರಿಷ್ಠ ಪ್ರಮಾಣವನ್ನು ಕಂಡು ಹಿಡಿಯಬಲ್ಲ ಹಾಗೂ ವೈಜ್ಞಾನಿಕ ತತ್ವದ ಮೇಲೆ ಆಧಾರಿತ ಸೂತ್ರವನ್ನು ಪೆನ್‌ಮನ್ ಎಂಬ ವಿಜ್ಞಾನಿಯು ವಿರಚಿಸಿದರು. ಈ ಸೂತ್ರದಿಂದ ದೊರೆತ ಅಂಕೆಯನ್ನು ಒಂದು ನಿರ್ದಿಷ್ಟ ಗುಣಕದಿಂದ ಗುಣಿಸಿದರೆ, ಸಂಬಂಧಿಸಿದ ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ಕಂಡು ಹಿಡಿಯಬಹುದೆಂದು ತೋರಿಸಿಕೊಟ್ಟರು. ಇಂಗ್ಲೆಂಡಿನ ಹುಲ್ಲುಗಾವಲುಗಳಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಪ್ರತ್ಯಕ್ಷ ಪದ್ಧತಿಯಿಂದ ಕಂಡುಹಿಡಿದು ಈ ಪ್ರಮಾಣವನ್ನು ಸೂತ್ರದ ಸಹಾಯದಿಂದ, ಅಂದಾಜು ಮಾಡಿದ ನೀರಿನ ಪ್ರಮಾಣದೊಡನೆ ತುಲನೆ ಮಾಡಿ ನೋಡಿದಾಗ, ಇವೆರಡರಲ್ಲಿ ಹೇಳಿಕೊಳ್ಳುವಷ್ಟು ಅಂತರವಿರಲಿಲ್ಲ. ಆದ್ದರಿಂದ ಪೆನ್‌ಮನ್ ಅವರು ವಿರಚಿಸಿದ ಸೂತ್ರದಿಂದ ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ಸಾಧ್ಯವಿದೆ ಎಂದಂತಾಯಿತು.

ಪದ್ದತಿಯ ಇತಿಮಿತಿಗಳು: ಪೆನ್‌ಮನ್‌ರವರ ಸೂತ್ರವು ಉತ್ತಮವಾಗಿದ್ದರೂ, ಕೆಳಗಿನ ಇತಿಮಿತಿಗಳಿರುವುದರಿಂದ, ಈ ಸೂತ್ರವನ್ನು ಎಲ್ಲೆಡೆ ಬಳಸಲು ಸಾಧ್ಯವಿಲ್ಲ.

 • ಪೆನ್‌ಮನ್‌ರ ಸೂತ್ರವನ್ನು ಬಳಸಲು ಬೇಕಾಗುವ ಹವಾಮಾನದ ಘಟಕಗಳು ಕೆಲವೇ ಕೇಂದ್ರಗಳಲ್ಲಿ ಸಿಗುವ ಸಾಧ್ಯವಿದೆ. ಆದ್ದರಿಂದ ಇತರ ಕಡೆಗಳಲ್ಲಿ ಈ ಸೂತ್ರವನ್ನು ಬಳಸಲು ಸಾಧ್ಯವಾಗುವುದಿಲ್ಲ.
 • ಬೆಳೆಗೆ ಬೇಕಾಗುವ ನೀರಿನ ಗರಿಷ್ಠ ಪ್ರಮಾಣದಿಂದ ಬೆಳೆಗೆ ಬೇಕಾಗುವ ನೀರಿನ ವಾಸ್ತವಿಕ ಪ್ರಮಾಣವನ್ನು ಕಂಡು ಹಿಡಿಯಲು ಬಳಸುವ ಗಣಕವು ಸುತ್ತಲೂ ಸಮುದ್ರವಿರುವ ಮತ್ತು ಸಸ್ಯ ಸಮೃದ್ಧವಾದ ಇಂಗ್ಲೆಂಡಿನ ಪರಿಸರಕ್ಕೆ ಪ್ರಯೋಜನಕಾರಿಯೇ ಹೊರತು, ಶುಷ್ಕ ವಾತಾವರಣಕ್ಕೆ ಅನ್ವಯವಾಗುವುದಿಲ್ಲ.

ಮೇಲಿನ ಮಿತಿಗಳನ್ನು ಅನುಲಕ್ಷಿಸಿ, ಡೋರೆನ್‌ಬಾಸ್ (Doorenbos) ಮತ್ತು ಪ್ರುಯಿಟ್ (Pruitt) ಎಂಬ ವಿಜ್ಞಾನಿಗಳು ಆಳವಾದ ಅಧ್ಯಯನವನ್ನು ಮಾಡಿ ಪೆನ್‌ಮನ್‌ರವರ ಸೂತ್ರವನ್ನು ೧೯೭೫ರಲ್ಲಿ ಪರಿಷ್ಕರಿಸಿದರು. ಈ ಸೂತ್ರವು ಹೆಚ್ಚು ಪ್ರಯೋಜನಕಾರಿಯೆಂದು ಕಂಡು ಬಂದಿದೆ.

ii. ಥೋರ್‌ನ್ಥವೇಟ್ ಪದ್ಧತಿ (Thornthwaite Method): ಎಲ್ಲೆಡೆ ಸಾಮಾನ್ಯವಾಗಿ ದೊರೆಯಬಲ್ಲ ಹವಾಮಾನ ಘಟಕಗಳ ಸಹಾಯದಿಂದ, ಪೆನ್‌ಮನ್ ಸೂತ್ರಕ್ಕಿಂತ ಸರಳವಾದ, ಸೂತ್ರವೊಂದನ್ನು ವಿರಚಿಸಬೇಕೆಂಬ ಉದ್ದೇಶದಿಂದ ಥೋರನ್ಥವೇಟ್ ಎಂಬುವರು ಕಾರ್ಯಪ್ರವೃತ್ತರಾದರು. ಯಾವುದೇ ಪ್ರದೇಶದಲ್ಲಿ ನೀರನ್ನು ಆವಿಯ ಅಥವಾ ಬಾಷ್ಪ ರೂಪಕ್ಕೆ ಪರಿವರ್ತಿಸಲು ಅವಶ್ಯವಿರುವ ಶಕ್ತಿಯನ್ನು ಆ ಪ್ರದೇಶದ ಉಷ್ಣತಾಮಾನವು ಸೂಚಿಸುತ್ತದೆ ಎಂಬ ಗ್ರಹಿಕೆಯನ್ನಾಧರಿಸಿ, ಒಂದು ಸರಳ ಸೂತ್ರವನ್ನು ೧೯೮೪ರಲ್ಲಿ ಇತರ ವಿಜ್ಞಾನಿಗಳ ಮುಂದಿಟ್ಟರು. ಈ ಸೂತ್ರವನ್ನು ವಿರಚಿಸುವಾಗ, ಆ ಪ್ರದೇಶದ ಅಕ್ಷಾಂಶವನ್ನೂ ಪರಿಗಣಿಸಬೇಕು. ತಿಂಗಳ ಉಷ್ಣತಾಮಾನದ ಮೇಲಿಂದ ಉಷ್ಣತಾ ಸೂಚಕವನ್ನು ಕಂಡು ಹಿಡಿದು, ಅದನ್ನು ಸೂತ್ರದಲ್ಲಿ ಬಳಸಿಕೊಂಡು, ಆವಿಯ ಮತ್ತು ಬಾಷ್ಪದ ರೂಪದಲ್ಲಿ ವ್ಯಯವಾಗುವ ನೀರಿನ ಗರಿಷ್ಠ ಪ್ರಮಾಣವನ್ನು ಈ ಪದ್ಧತಿಯಲ್ಲಿ ಲೆಕ್ಕ ಮಾಡಲಾಗುತ್ತದೆ. ಈ ರೀತಿ ದೊರೆತ ಅಂಕೆಯನ್ನು ನಿರ್ದಿಷ್ಟ ಗುಣಕದಿಂದ ಗುಣಿಸಿ, ಸಂಬಂಧಿಸಿದ ಪ್ರದೇಶದಲ್ಲಿ ಬೆಳೆಗೆ ಬೇಕಾಗುವ ನೀರಿನ ಅವಶ್ಯಕತೆಯನ್ನು ಕಂಡುಹಿಡಿಯಲಾಗುತ್ತದೆ.

ಮೇಲೆ ವಿವರಿಸಿದ ಪದ್ಧತಿಯು ಪೆನ್‌ಮನ್ ಪದ್ಧತಿಗಿಂತ ಸರಳವಾಗಿದೆಯಾದರೂ, ಉತ್ತರ ಅಮೆರಿಕೆಯಲ್ಲಿರುವ ಹವಾಮಾನಕ್ಕೆ ಇದು ಸೂಕ್ತವೆನಿಸಿದೆ. ಈ ಹವಾಮಾನದಿಂದ ಭಿನ್ನವಾಗಿರುವ ಪ್ರದೇಶಗಳಿಗೆ ಈ ಸೂತ್ರವು ಅನ್ವಯವಾಗುವುದಿಲ್ಲ. ಉದಾಹರಣೆಗೆ, ದೆಹಲಿಯಲ್ಲಿರುವ ಭಾರತ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ, ಈ ಸೂತ್ರವನ್ನು ಪರೀಕ್ಷಿಸಿ ನೋಡಿದಾಗ, ಚಲಿಗಾಲ ಮತ್ತು ವಸಂತಕಾಲಗಳಲ್ಲಿ ಈ ಸೂತ್ರವು ವಾಸ್ತವಕ್ಕಿಂತ ಕಡಿಮೆ ಅಂಕೆಯನ್ನು ತೋರಿಸಿತು.

iii. ಲೋವ್ರೀ ಮತ್ತು ಜಾನ್‌ಸನ್‌ಪದ್ಧತಿ (Lowry-Johnson Method): ಒಂದು ಪ್ರದೇಶದಲ್ಲಿಯ ಪರಿಣಾಮಕಾರಿಯಾದ ಉಷ್ಣತೆಗೂ ಆವಿ ಮತ್ತು ಬಾಷ್ಪ ರೂಪದಲ್ಲಿ ವ್ಯಯವಾಗುವ ನೀರಿನ ಪ್ರಮಾಣಕ್ಕೂ ಅತಿ ಸಮೀಪದ ಸಂಬಂಧವಿದೆ ಎಂಬ ಗ್ರಹಿಕೆಯ ಆಧಾರದ ಮೇಲೆ ಲೋವ್ರೀ ಮತ್ತು ಜಾನ್‌ಸನ್ ಎಂಬುವರು ತಮ್ಮದೇ ಆದ ಒಂದು ಸೂತ್ರವನ್ನು ರೂಪಿಸಿದರು. ಇಡೀ ಕಣಿವೆಯಂತಹ ವಿಶಾಲವಾದ ಪ್ರದೇಶಕ್ಕೆ ಈ ಸೂತ್ರವು ಅನ್ವಯಿಸುತ್ತದೆಯಾದರೂ ಸಣ್ಣ ಪ್ರದೇಶಕ್ಕೆ ಇದು ಪ್ರಯೋಜನಕಾರಿಯಲ್ಲ.

iv. ಬ್ಲಾನೇ ಕ್ರಿಡ್ಲ್ ಪದ್ಧತಿ (Blaney-Criddle Method): ಉಷ್ಣತಾಮಾನ ಮತ್ತು ದಿವಾಮಾನ ಇವುಗಳ ಆಧಾರದ ಮೇಲೆ, ಬ್ಲಾನೇ ಮತ್ತು ಕ್ರಿಡ್ಲ್ ಎಂಬ ವಿಜ್ಞಾನಿಗಳು ಅಮೆರಿಕೆಯ ಸಂಯುಕ್ತ ಸಂಸ್ಥಾನಗಳ ಪಶ್ಚಿಮದ ಶುಷ್ಕ ಪ್ರದೇಶಗಳಿಗೆ ಅನ್ವಯವಾಗುವಂತಹ ಒಂದು ಸರಳ ಸೂತ್ರವನ್ನು ೧೯೫೦ರಲ್ಲಿ ರಚಿಸಿದರು. ಈ ಸೂತ್ರವು ಅಲ್ಲಿಯ ಸ್ಥಾನಿಕ ಪರಿಸ್ಥಿತಿಗೆ ಅನ್ವಯವಾಗುತ್ತದೆಂದು ಕಂಡುಬಂದಿದೆ. ಸೂತ್ರವು ಸರಳವಾಗಿದೆಯಾದರೂ, ಉಷ್ಣತಾಮಾನ ಮತ್ತು ದಿವಾಮಾನ ಇವರೆಡನ್ನೇ ಪರಿಗಣಿಸಲಾಗಿದೆ. ಹವಾಮಾನದ ಇತರ ಘಟಕಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಸಂಗತಿಯು ಈ ಸೂತ್ರಕ್ಕಿರುವ ಒಂದು ಮಿತಿ ಎನ್ನಬಹುದು.

v. ಕ್ರಿಶ್ಚಿಯನ್‌ಸೆನ್ ಪದ್ದತಿ (Christiansen Method): ಆವಿ ಮಾಪಕ (Panevaporimeter)ದಿಂದ ಆವಿಯಾಗುವ ನೀರಿನ ‌ಪ್ರಮಾಣಕ್ಕೂ ಸಂಬಂಧಿವಿದೆ. (ಇದರ ಬಗ್ಗೆ ಹೆಚ್ಚಿನ ವಿವರಗಳು ಮುಂದಿನ ಪರಿಚ್ಛೇದಗಳಲ್ಲಿವೆ). ಆದರೆ, ಆವಿಮಾಪಕದ ಆಕಾರ, ರೂಪ, ಸ್ಥಾಪಿಸಿದ ವಿಧಾನ, ಸಾಧನದಲ್ಲಿರುವ ನೀರಿನೊಳಗೆ ಬೆಳೆಯುವ ಪಾಚಿ, ಆವಿಯಾಗಿ ವ್ಯಯವಾಗುವ ನೀರನ್ನು ಅಳೆಯುವ ವಿಧಾನ ಹಾಗೂ ಪಕ್ಷಿ ಮತ್ತು ಇತರ ಪ್ರಾಣಿಗಳಿಂದ ರಕ್ಷಣೆ ಇತ್ಯಾದಿಗಳು ಎಲ್ಲ ಕಡೆಗೂ ಒಂದೇ ಬಗೆಯಾಗಿ ಇಲ್ಲದೇ ಇರುವುದರಿಂದ, ಈ ಸಾಧನಗಳಿಂದ ದೊರೆತ ಅಂಕೆ ಸಂಖ್ಯೆಗಳು ಪ್ರಯೋಜನಕಾರಿಗಳೇ ಎಂಬ ಸಂದೇಹ ಬರುವುದು ಸಹಜ. ಈ ಸಮಸ್ಯೆಗೆ ಪರಿಹಾರವೆಂದು, ಆವಿ ಮಾಪಕದಿಂದ ವ್ಯಯವಾಗುವ (ವ್ಯಯವಾಗಬಹುದಾದ) ನೀರಿನ ಪ್ರಮಾಣವನ್ನು ಕಂಡುಕೊಳ್ಳಲು, ಕ್ರಿಶ್ಚಿಯನ್‌ಸೆನ್ ಎಂಬುವರು ೧೯೬೮ರಲ್ಲಿ ಒಂದು ಸೂತ್ರವನ್ನು ರಚಿಸಿದರು. ಉಷ್ಣತಾಮಾನ, ಗಾಳಿಯವೇಗ, ಸಾಪೇಕ್ಷ ಆರ್ದ್ರತೆ, ಸೂರ್ಯನ ಪ್ರಕಾಶ, ಸಮುದ್ರದಿಂದ ಎತ್ತರ ಇತ್ಯಾದಿಗಳ ಗುಣಕ ಸಂಖ್ಯೆಗಳನ್ನು ವಿವಿಧ ಉಪ ಸೂತ್ರಗಳಿಂದ ಲೆಕ್ಕಾಚಾರ ಮಾಡಿ, ಈ ಗುಣಕಗಳನ್ನು ಬಳಸಿ ಪ್ರಮುಖ ಸೂತ್ರದ ಸಹಾಯದಿಂದ ಆವಿ ಮಾಪಕದಿಂದ ದೊರೆಯಬಹುದಾದ ಅಂಕಿಗಳನ್ನು ಅಂದಾಜು ಮಾಡಿದರು.

vi. ಆವಿ ಮಾಪಕಗಳು (Evaporimeters): ಆವಿಯ ಮತ್ತು ಬಾಷ್ಪದ ರೂಪದಲ್ಲಿ ಹೊರ ಹೋಗುವ ನೀರಿಗೂ ಉಷ್ಣತಾಮಾನ, ಸೂರ್ಯಪ್ರಕಾಶ, ಗಾಳಿಯ ವೇಗ, ಸಾಪೇಕ್ಷ ಆರ್ದ್ರತೆ ಮುಂತಾದ ಹವಾಮಾನದ ಘಟಕಗಳಿಗೂ ಸಂಬಂಧವಿದೆ ಎಂಬ ವಿಷಯವನ್ನು ಈಗಾಗಲೇ ಸೂಚಿಸಿದೆ. ಪ್ರತಿಯೊಂದು ಘಕಟವನ್ನು ಅಳೆದು, ಅವುಗಳನ್ನು ಸಂಯೋಜಿಸಿ, ಅವುಗಳ ಪರಿಣಾಮವನ್ನು, ಸಮಗ್ರ ರೀತಿಯಿಂದ ಪ್ರತಿಫಲಿಸುವುದರಿಂದ, ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ತಿಳಿಯಲು ಆವಿಮಾಪಕಗಳು ಪ್ರಯೋಜನಕಾರಿ ಎನಿಸಿವೆ.

ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಹವಾಮಾನ ಇಲಾಖೆಯ ವರ್ಗ ೧ರ ಆವಿ ಮಾಪಕಗಳು ಭಾರತದಲ್ಲೆಲ್ಲ ಬಳಕೆಯಲ್ಲಿವೆ. ಗೋಲಾಕಾರದ ಈ ಮಾಪಕದ ವ್ಯಾಸವು ೧.೨ ಮೀ. ಮತ್ತು ಆಳವು ೩೦ ಸೆಂ.ಮೀ. ಇದೆ. ಮಾಪಕದಲ್ಲಿ ನೀರನ್ನು ತುಂಬಿ, ಮೇಲೆ ಜಾಳಿಗೆಯ ಮುಚ್ಚಳವನ್ನು ಇಡಲಾಗಿರುತ್ತದೆ. ನೀರಿನ ಆಳವನ್ನು ಅಳೆಯುವ ಸಾಧನವು ಒಳಗಿರುತ್ತದೆ. ಪ್ರತಿದಿನ ಒಂದು ನಿಶ್ಚಿತ ಸಮಯಕ್ಕೆ, ನೀರಿನ ಮಟ್ಟವನ್ನು ಅಳೆಯಬೇಕು. ಎರಡು ದಿನಗಳಲ್ಲಿ ಕಂಡು ಬಂದ ನೀರಿನ ಮಟ್ಟದ ಅಂತರವು, ಒಂದು ದಿನದಲ್ಲಿ ಆವಿಯಾಗಿ ಹೋದ ನೀರಿನ ಪ್ರಮಾಣವನ್ನು ಸೂಚಿಸುತ್ತದೆ. ಈ ರೀತಿ ಆವಿಯಾದ ನೀರಿನ ಪ್ರಮಾಣಕ್ಕೂ, ಬೆಳೆಗೆ ಬೇಕಾದ ನೀರಿನ ಪ್ರಮಾಣಕ್ಕೂ ಇರುವ ಸಂಬಂಧವನ್ನು ಕಂಡುಹಿಡಿದರೆ, ಆವಿಮಾಪಕದಿಂದ ಬೆಳೆಗೆ ಬೇಕಾಗುವ ನೀರಿನ ಪ್ರಮಾಣವನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗುತ್ತದೆ.

ಮೇಲೆ ವರ್ಣಿಸಿದ ಆವಿಮಾಪಕದಲ್ಲಿ, ಕೆಲವು ನ್ಯೂನತೆಗಳು ಮತ್ತು ಅನಾನುಕೂಲತೆಗಳಿವೆ ಉದಾಹರಣೆಗೆ,

 • ಆವಿ ಮಾಪಕವನ್ನು ನೆಲದ ಮೇಲೆ ಇಡಲಾಗುವುದರಿಂದ, ಪಾತ್ರೆಯ ಮೇಲೆ ಉಷ್ಣತೆಯು ತನ್ನ ಪರಿಣಾಮವನ್ನು ಬೀರುತ್ತದೆ.
 • ಪಾತ್ರೆಯಲ್ಲಿಯ ನೀರಿನ ಪಾತಳಿಯು ಭೂಮಿಯಿಂದ ೩೦ ಸೆಂ.ಮೀ. ಎತ್ತರದಲ್ಲಿರುತ್ತದೆ. ಇದು ಭೂಪಾತಳಿಗಿಂತ ಭಿನ್ನವಾದಂತಾಯಿತು.
 • ನೀರಿನ ಪಾತಳಿಯಲ್ಲಾಗುವ ದೈನಂದಿನ ಅಂತರವನ್ನು ಅಳೆಯುವ ಸಾಧನವು ಪಾತ್ರೆಯ ಒಳಭಾಗದಲ್ಲಿರುವುದರಿಂದ, ಪ್ರತಿ ದಿನ ಅಳತೆಯನ್ನು ಮಾಡಲು ಅಷ್ಟು ಅನುಕೂಲಕರವಾಗಿಲ್ಲ.
 • ಬೆಳೆಯಿಂದ ಆವಿ ಮತ್ತು ಬಾಷ್ಪದ ರೂಪದಲ್ಲಿ ಆಗುವ ನೀರಿನ ವ್ಯಯದ ಪ್ರಮಾಣಕ್ಕಿಂತ, ಮೇಲೆ ವರ್ಣಿಸಿದ ಆವಿ ಮಾಪಕದಿಂದ ಆಗುವ ನೀರಿನ ನಷ್ಟವು ೧.೨ರಿಂದ ೧.೫ರಷ್ಟು ಅಧಿಕವಾಗಿದೆ.

ಮೇಲಿನ ನ್ಯೂನತೆಗಳನ್ನು ನಿವಾರಿಸಲು, ಶರ್ಮಾ ಮತ್ತು ದಾಸ್ರನೆ ಎಂಬುವರು ಹೊಸದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ, ಸಂಶೋಧನೆಗಳನ್ನು ಕೈಕೊಂಡು ಸುಧಾರಿಸಿದ ಆವಿ ಮಾಪಕವನ್ನು ೧೯೬೬ರಲ್ಲಿ ವಿನ್ಯಾಸಗೊಳಿಸಿದರು. ಈ ಮಾಪಕದ ವಿವರಣೆಯು ಮುಂದಿನಂತಿದೆ.

 • ಪಾತ್ರೆಯ ವ್ಯಾಸವು ೬೦ ಸೆಂ.ಮೀ. ಮತ್ತು ಆಳವು ೪೫ ಸೆಂ.ಮೀ.
 • ಪಾತ್ರೆಯ ಮುಚ್ಚಳಕ್ಕಿರುವ ಜಾಳಿಗೆಯ ರಂಧ್ರಗಳು ಚಿಕ್ಕವು.
 • ಭೂಮಿಯಲ್ಲಿ ಗುಣಿಯನ್ನು ತೆಗೆದು, ಆವಿ ಮಾಪಕವನ್ನು ಅದರಲ್ಲಿಟ್ಟು, ಪಾತ್ರೆಯ ಸುತ್ತಲೂ ಪೊಳ್ಳಿರದಂತೆ ಮಣ್ಣನ್ನು ತುಂಬಲಾಗುತ್ತದೆ.
 • ಪಾತ್ರೆಯಲ್ಲಿರುವ ನೀರಿನ ಪಾತಳಿಯು ಮಣ್ಣಿನ ಪಾತಳಿಗೆ ಸಮನಾಗಿದೆ.
 • ನೀರಿನ ಪಾತಳಿಯನ್ನು ಅಳೆಯುವ ಸಾಧನವು ಆವಿ ಮಾಪಕದ ಹೊರಗೆ ಇದೆ.
 • ಆವಿ ಮಾಪಕದ ಬೆಲೆಯು ಕಡಿಮೆ.
 • ಈ ಆವಿ ಮಾಪಕದಿಂದ ಆಗುವ ಆವಿಯ ನಷ್ಟವು ಬೆಳೆಯಿರುವ ಭೂಮಿಯಿಂದ ಆಗುವ ಆವಿ ಮತ್ತು ಬಾಷ್ಪ ರೂಪದ ನೀರಿನ ನಷ್ಟಕ್ಕೆ ಅತಿ ಹತ್ತಿರದಲ್ಲಿದೆ. (೦.೯೫ ರಿಂದ ೧.೦೫) ಆದ್ದರಿಂದ ಈ ಆವಿ ಮಾಪಕದಿಂದ ದೊರೆತ ಮಾಹಿತಿಯನ್ನು ನೇರವಾಗಿ ಬಳಸಬಹುದು. (ಚಿತ್ರ ೨೬).

ಬೆಳೆಯ ಉತ್ಪಾದನೆಗೆ ಪೂರೈಸಬೇಕಾದ ನೀರಾವರಿ ಜಲದ ಪ್ರಮಾಣ: ಬೆಳೆಯ ಉತ್ಪಾದನೆಗೆ ಬೇಕಾಗುವ ಒಟ್ಟು ನೀರಿನ ಪ್ರಮಾಣ ಮತ್ತು ಅವಶ್ಯವಿರುವಲ್ಲಿ ಪೂರೈಸಬೇಕಾದ ನೀರಾವರಿ ಜಲದ ಪ್ರಮಾಣ ಇವುಗಳನ್ನು ಕೆಳಗಿನ ಎರಡು ಸಮೀಕರಣಗಳಿಂದ ತಿಳಿಯಬಹುದು.

 ಬೆಳೆಯಿರುವ ಮಣ್ಣಿನಿಂದ ಆವಿಯ ರೂಪದಲ್ಲಿ ಮತ್ತು ಸಸ್ಯಗಳ ಮುಖಾಂತರ ಬಾಷ್ಪದ ರೂಪದಲ್ಲಿ ಹೊರಹೋಗುವ ನೀರಿನ ಪ್ರಮಾಣದ ಬಗ್ಗೆ ಮತ್ತು ಆ ಪ್ರಮಾಣದಲ್ಲಿ ಕಂಡು ಹಿಡಿಯಲು ಬಳಕೆಯಲ್ಲಿರುವ ವಿವಿಧ ವಿಧಾನಗಳ ಬಗ್ಗೆ ಹಿಂದಿನ ಕಾಲಂನಲ್ಲಿ ಪ್ರಮುಖವಾದ ವಿವರಗಳಿವೆ. ಮೇಲಿನ ಸಮೀಕರಣಗಳಲ್ಲಿರುವ ಇತರ ಘಟಕಗಳ ವಿವರಣೆಯು ಕೆಳಗಿನಂತಿದೆ.

ನೀರನ್ನು ಪೂರೈಸುವಾಗ ಸಂಭವಿಸುವ ನಷ್ಟ: ನೀರಾವರಿ ಜಲದ ಮೂಲದಿಂದ (ನಾಲೆ, ನದಿ, ಕೆರೆ, ಬಾವಿ ಇತ್ಯಾದಿ) ಬೆಳೆಯಿರುವ ಭೂಮಿಯವರೆಗೆ ನೀರು ಹರಿದು ಬರುವ ಮಾರ್ಗದಲ್ಲಿ ಸ್ವಲ್ಪ ಭಾಗವು ಬಸಿದು ಹೋಗಬಹುದು. ನೀರಾವರಿ ಜಲದ ಮೂಲದಿಂದ ಹೊರಬಂದ ನೀರಿನ ಪ್ರಮಾಣವನ್ನು ಅಳೆದು, ಇದರೊಳಗಿನಿಂದ ಭೂಮಿಗೆ ಪೂರೈಕೆಯಾದ ನೀರಿನ ಪ್ರಮಾಣವನ್ನು ಕಳೆದರೆ, ಬರುವ ಅಂತರವೇ ಸಂಭವಿಸಿದ ನೀರಿನ ನಷ್ಟವೆಂದು ತಿಳಿಯಬೇಕು. ನೀರಾವರಿ ಜಲವನ್ನು ಬೆಳೆಗೆ ಪೂರೈಸುವುದಕ್ಕಿಂತ ಸ್ವಲ್ಪ ಮೊದಲು ಮತ್ತು ನೀರನ್ನು ಪೂರೈಸಿದ ನಂತರ, ಮಣ್ಣಿನಲ್ಲಿರುವ ಆರ್ದ್ರತೆಯನ್ನು ಅಂದಾಜು ಮಾಡಬೇಕು. ಇವೆರಡರ ಅಂತರವೇ ಬೆಳೆಗೆ ಪೂರೈಕೆಯಾದ ನೀರಿನ ಪ್ರಮಾಣ.

ಭೂಮಿಯನ್ನು ಸಿದ್ಧಪಡಿಸಲು ಬೇಕಾಗುವ ನೀರು: ಬತ್ತವನ್ನು ನಾಟಿ ಪದ್ಧತಿಯಿಂದ ಬೆಳೆಸುವಾಗ, ಭೂಮಿಯನ್ನು ಕೆಸರು ಮಾಡಲು ದೊಡ್ಡ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಕೆಲವು ಬೆಳೆಗಳನ್ನು ಬಿತ್ತಲು ಭೂಮಿಯನ್ನು ಸಿದ್ಧಪಡಿಸುವ ಮೊದಲು ನೀರನ್ನು ಪೂರೈಸಬೇಕಾಗುತ್ತದೆ. ಈ ಕಾರ್ಯಗಳಿಗೆ ಪೂರೈಸಿದ ನೀರಿನ ಪ್ರಮಾಣವನ್ನು ಅಳೆದು ತಿಳಿದುಕೊಳ್ಳಬೇಕು.

ಪರಿಣಾಮಕಾರಿ ಮಳೆಯ ಪ್ರಮಾಣ : ಬೆಳೆಯ ಉತ್ಪಾದನೆಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪ್ರಯೋಜನವಾಗುವ ವೇಳೆಗೆ ನೀರಿನ ಭಾಗಕ್ಕೆ, ಪರಿಣಾಮಕಾರಿ ಮಳೆ ಎನ್ನುತ್ತಾರೆ. ಉದಾಹರಣೆಗೆ,

 • ಭೂಮಿಯನ್ನು ಸಿದ್ದಪಡಿಸಲು ಪ್ರಯೋಜನಕಾರಿಯಾದ
 • ಮಣ್ಣಿನಲ್ಲಿ ಆರ್ದ್ರತೆಯು ಕಡಿಮೆ ಇದ್ದಾಗ ಮಣ್ಣನ್ನು ಜಲಧಾರಣ ಶಕ್ತಿಯಷ್ಟು ಹಸಿ ಮಾಡುವ ಅಥವಾ
 • ಮಣ್ಣಿನಲ್ಲಿಯ ಲವಣಗಳನ್ನು ಬಸಿದು ಕೆಳಗೆ ಒಯ್ಯುವ ಮಳೆಯ ನೀರು ಪರಿಣಾಮಕಾರಿ ಎನಿಸುತ್ತದೆ. ಆದರೆ, ಭೂಮಿಯ ಮೇಲಿಂದ ಹರಿದು ಹೊರ ಹೋಗುವ ಅಥವಾ ಬೆಳೆಗೆ ಸಿಗದಷ್ಟು ಆಳಕ್ಕೆ ಬಸಿದು ಹೋಗುವ ನೀರು ಪರಿಣಾಮಕಾರಿಯೆನಿಸದು. ಹರಿದು ಹೋಗುವ ನೀರನ್ನು ಒಂದೆಡೆ ಸಂಗ್ರಹಿಸಿ, ಆ ನೀರನ್ನು     ಬೆಳೆಗಳಿಗೆ ನೀರಾವರಿ ಜಲವೆಂದು ಪೂರೈಸಿದರೆ ಅದು ಪರಿಣಾಮಕಾರಿ ಮಳೆಯ ಭಾಗವೆನಿಸುತ್ತದೆ.

ಮಳೆ ಬರುವ ಮೊದಲು ನಂತರ ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ಕಂಡು ಹಿಡಿದು, ಪರಿಣಾಮಕಾರಿ ಮಳೆಯ ಪ್ರಮಾಣವನ್ನು ತಿಳಿಯಬಹುದು. ಆದರೆ ಇದು ಕಷ್ಟದಾಯಕ. ರಾಮದಾಸ ಎಂಬುವರು ವಿನ್ಯಾಸಗೊಳಿಸಿದ ಸಾಧನದಿಂದ ಪರಿಣಾಮಕಾರಿ ಮಳೆಯ ಪ್ರಮಾಣವನ್ನು ಅಳತೆ ಮಾಡಬಹುದು.

ನೀರಿನ ಪಾತಳಿಯಿಂದ ದೊರೆಯುವ ನೀರು: ಭೂಮಿಯಲ್ಲಿ ನೀರಿನ ಪಾತಳಿಯು, ಸಸ್ಯದ ಬೇರುಗಳಿಗೆ ಎಟುಕದಷ್ಟು ಆಳದಲ್ಲಿದ್ದರೆ ಇಂತಹ ಪಾತಳಿಯಿಂದ ಬೆಳೆಗೆ ನೀರು ದೊರೆಯಲಾರದು. ಆದರೆ ನೀರಿನ ಪಾತಳಿಯು ಹತ್ತಿರದಲ್ಲಿದ್ದರೆ, ಅದರಿಂದ ಬೆಳೆಗೆ ನೀರು ದೊರೆಯಬಲ್ಲದು. ಈ ಜಲಮೂಲದಿಂದ ಬೆಳೆಗೆ ದೊರೆಯಬಹುದಾದ ನೀರಿನ ಪ್ರಮಾಣವನ್ನು ಅಂದಾಜು ಮಾಡಲು ಅಲಿಸನ್ (Allison) ಎಂಬುವರು ಒಂದು ಸೂತ್ರವನ್ನು ರಚಿಸಿದ್ದಾರೆ. ಡೋಯೆರಿಂಗ್ (Doering) ಎಂಬುವರು ೧೯೬೦ರಲ್ಲಿ ಒಂದು ಪದ್ಧತಿಯನ್ನು ಸೂಚಿಸಿದ್ದಾರೆ. ಇವುಗಳ ವಿವರಗಳನ್ನು ಇಲ್ಲಿ ಕೊಟ್ಟಿಲ್ಲ.

ನೀರಾವರಿ ಜಲವನ್ನು ಬೆಳೆಗೆ ಪೂರೈಸುವ ಸಮಯ (Scheduling of lrrigation) ಮತ್ತು ಪೂರೈಸಬೇಕಾದ ನೀರಿನ ಪ್ರಮಾಣ: ಸಸ್ಯಗಳಿಗೆ ಲಭ್ಯವಾಗುವ ಜಲವು, ಮಣ್ಣಿನಲ್ಲಿ ಸಾಕಷ್ಟಿರುವಾಗಲೇ ನೀರಾವರಿಯನ್ನು ಕೈಗೊಂಡರೆ, ನೀರಿನ ಅಪವ್ಯಯವಾಗುವುದಲ್ಲದೇ, ಬೇಸಾಯದ ಖರ್ಚು ಹೆಚ್ಚುತ್ತದೆ. ಅದರಂತೆಯೇ, ಮಣ್ಣಿನ ಆರ್ದ್ರತೆಯು ಸಸ್ಯವನ್ನು ಬಾಡಿಸುವ ಬಿಂದುವನ್ನು ತಲುಪಿದರೂ ನೀರನ್ನು ಬೆಳೆಗೆ ಪೂರೈಸದಿದ್ದರೆ, ನೀರಿನ ಕೊರತೆಯಿಂದ ಸಸ್ಯದ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಮಣ್ಣಿನಲ್ಲಿಯ ಲಭ್ಯ ನೀರು ಪೂರ್ಣ ವ್ಯಯವಾಗುವವರೆಗೆ ದಾರಿಕಾಯದೇ, ಶೇಕಡಾ ೫೦ ರಿಂದ ೨೫ರಷ್ಟು ಲಭ್ಯ ನೀರು ಮಣ್ಣಿನಲ್ಲಿ ಉಳಿದಿರುವಾಗಲೇ ಬೆಳೆಗೆ ನೀರನ್ನು ಪೂರೈಸಿದರೆ, ಅಧಿಕ ಇಳುವರಿಯು ದೊರೆಯುತ್ತದೆಂದು ಕಂಡು ಬಂದಿದೆ. ಆದ್ದರಿಂದ, ನೀರನ್ನು ಪೂರೈಸಬೇಕಾದ ಸರಿಯಾದ ಸಮಯ ಮತ್ತು ಒದಗಿಸಬೇಕಾದ ನೀರಿನ ನಿರ್ದಿಷ್ಟ ಪ್ರಮಾಣ ಇವನ್ನು ನಿರ್ಧರಿಸುವ ವಿಧಾನಗಳ ಅರಿವು ಪ್ರಯೋಜನಕಾರಿ. ಪ್ರಮುಖ ವಿಧಾನಗಳ ವಿವರಗಳು ಮುಂದಿನಂತಿವೆ.

ಸಸ್ಯಗಳ ಬಾಹ್ಯ ಚಿಹ್ನೆಗಳ ಮೇಲಿಂದ: ಮಧ್ಯಾಹ್ನದ ಬಿಸಿಲಿಗೆ, ಸಸ್ಯದ ಎಲೆಗಳು ಬಾಡಿದಂತಾಗಿ (ಕೆಲವು ಸಸ್ಯಗಳಲ್ಲಿ ಎಲೆಗಳು ಕೆಳಭಾಗಕ್ಕೆ ಸುರಳಿಯನ್ನು ಸುತ್ತಿಕೊಂಡು ಮರುದಿನ ಬೆಳಗಾಗುವುದರೊಳಗೆ ಎಲೆಗಳು ಸಾಮಾನ್ಯ ಸ್ಥಿತಿಗೆ ಬಂದವೆಂದರೆ, ಮಣ್ಣಿನ ಆರ್ದ್ರತೆಯು ಸಸ್ಯಗಳು ಬಾಡುವ ಬಿಂದುವನ್ನು ತಲುಪುತ್ತಿವೆಯೆಂಬುದರ ಮುನ್ಸೂಚನೆಯೆಂದು ತಿಳಿದು, ಕೂಡಲೇ ನೀರನ್ನು ಪೂರೈಸಬೇಕು.

ಸಸ್ಯಗಳು, ಮೇಲೆ ಹೇಳಿದಂತೆ ತಾತ್ಪೂರ್ತಿಕವಾಗಿ ಬಾಡುವವರೆಗೆ ದಾರಿಕಾಯದೇ ಒಂದೆರಡು ದಿನಗಳ ಮೊದಲೇ ಬೆಳೆಗೆ ನೀರನ್ನು ಪೂರೈಸುವುದು ಉತ್ತಮ. ಈ ಸಮಯವನ್ನು ತಿಳಿಯಲು ಕೆಳಗೆ ವಿವರಿಸಿದ ವಿಧಾನಗಳಲ್ಲಿ ಒಂದನ್ನು ಅನುಸರಿಸಬಹುದು.

 • ಮುಖ್ಯ ಬೆಳೆಯೊಡನೆ, ಅಲ್ಲಲ್ಲಿ ಸೂರ್ಯಕಾಂತಿಯ ಕೆಲವು ಬೀಜಗಳನ್ನು ಬಿತ್ತಬೇಕು. ಸೂರ್ಯಕಾಂತಿಯ ಸಸ್ಯಗಳು, ಇತರ ಬೆಳೆಗಳಿಗಿಂತ ಒಂದೆರಡು ದಿನ ಮೊದಲೇ ಬಾಡುತ್ತವೆ. ಹೀಗಾಗಿ, ಸೂರ್ಯಕಾಂತಿಯ ಸಸ್ಯಗಳು ಬಾಡಿದವೆಂದರೆ, ಕೂಡಲೇ ನೀರನ್ನು ಬೆಳೆಗೆ ಪೂರೈಸಬೇಕು.
 • ಬೆಳೆಯನ್ನು ಬಿತ್ತಬೇಕೆಂದಿರುವ ಪ್ರದೇಶದಲ್ಲಿ, ಸಣ್ಣ ಗುಂಡಿಗಳನ್ನು (ಸುಮಾರು ೩೦ ಸೆಂ.ಮೀ. ಘನವಿರುವ ಗುಂಡಿಗಳನ್ನು) ಅಲ್ಲಲ್ಲಿ ಅಗೆದು, ಗುಂಡಿಯಿಂದ ಹೊರಬಂದ ಮಣ್ಣಿನೊಡನೆ ಶೇಕಡಾ ೧೫ರಿಂದ ೨೦ರಷ್ಟು ಮರಳನ್ನು ಮಿಶ್ರ ಮಾಡಿ, ಈ ಮಿಶ್ರಣದಿಂದ ಗುಂಡಿಯನ್ನು ತುಂಬಿ, ಅನಂತರ ಬಿತ್ತಬೇಕು. ಈ ಗುಂಡಿಗಳ ಸ್ಥಳದಲ್ಲಿ ಇರುವ ಸಸ್ಯಗಳು ಉಳಿದ ಸಸ್ಯಗಳಿಗಿಂತ ಮೊದಲೇ ಬಾಡಿ, ನೀರಿನ ಅಗತ್ಯತೆಯನ್ನು ಸೂಚಿಸುತ್ತದೆ.

ಮಣ್ಣಿನಲ್ಲಿರುವ ಆರ್ದ್ರತೆಯ ಮೇಲಿಂದ: ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವು ಗೊತ್ತಾದರೆ, ಬೆಳೆಗೆ ನೀರನ್ನು ಪೂರೈಸುವ ಸಮಯವು ಬಂದಿದೆಯೇ ಮತ್ತು ನೀರನ್ನು ಪೂರೈಸುವುದಾದರೆ, ಕೊಡಬೇಕಾದ ನೀರಿನ ಪ್ರಮಾಣವೆಷ್ಟು ಎಂಬ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ. ಮಣ್ಣಿನಲ್ಲಿರುವ ಆರ್ದ್ರತೆಯನ್ನು ಅಂದಾಜು ಮಾಡಲು ಎರಡು ವಿಧಾನಗಳಿವೆ.

. ಸ್ಪರ್ಶ ಪದ್ಧತಿ: ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ನಿಖರವಾಗಿ ತಿಳಿಯಲು ಈ ಪದ್ಧತಿಯಿಂದ ಸಾಧ್ಯವಿಲ್ಲವಾದರೂ, ಮಣ್ಣಿನಲ್ಲಾಗಿರುವ ನೀರಿನ ಕೊರತೆಯ ಅಂದಾಜನ್ನು ಮಾಡಬಹುದು. ಅನುಭವದಿಂದ, ಈ ಪದ್ಧತಿಯಲ್ಲಿನ ಹೆಚ್ಚಿನ ಪ್ರಾವೀಣ್ಯತೆಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ಸ್ಪರ್ಶ ಪದ್ಧತಿಯಿಂದ, ಮಣ್ಣಿನಲ್ಲಿರುವ ಆರ್ದ್ರತೆಯನ್ನು ತಿಳಿಯಲು ಅನುಸರಿಬೇಕಾದ ವಿವರಗಳು ಕೆಳಗಿನಂತಿವೆ.

 • ಸಂಬಂಧಿಸಿದ ಮಣ್ಣನ್ನು ಮುಷ್ಠಿಯಲ್ಲಿ ಹಿಡಿದುಕೊಂಡು ಎರಡು ಮೂರು ಬಾರಿ ಗಟ್ಟಿಯಾಗಿ ಹಿಂಡಬೇಕು.
 • ಮಣ್ಣು ಉದ್ದವಾದ ಒಂದು ಮುದ್ದೆಯ ಆಕಾರವನ್ನು ಪಡೆಯುತ್ತದೆಯೋ ಇಲ್ಲವೇ ಪುಡಿಯಾಗಿಯೇ ಉಳಿದುಕೊಳ್ಳುತ್ತದೆಯೋ ಎಂಬುದನ್ನು ವೀಕ್ಷಿಸಬೇಕು.
 • ಮಣ್ಣು ಮುದ್ದೆಯ ಆಕಾರವನ್ನು ಹೊಂದಿದರೆ, ಅದನ್ನು ಕೈಯಿಂದ ಸುಮಾರು ೩೦ ಸೆಂ.ಮೀ. ನಷ್ಟು ಎತ್ತರಕ್ಕೆ ಹಾರಿಸಿ ಹಿಡಿಯಬೇಕು. ಇದೇ ರೀತಿ ೫ ಬಾರಿ ಈ ರೀತಿ ಹಾರಿಸಿ ಹಿಡಿಯಬೇಕು. ಮಣ್ಣಿನ ಮುದ್ದೆಯು, ೫ ಬಾರಿ ಮೇಲೆ ಹಾರಿಸಿ ಹಿಡಿದಾಗ ಒಡೆಯದೇ ಹಾಗೆಯೇ ಉಳಿದಿದೆಯೇ ಅಥವಾ ಒಡೆದು ಪುಡಿಯಾಗಿದೆಯೇ ಎಂಬುದನ್ನು ಗಮನಿಸಬೇಕು.
 • ಹೆಬ್ಬೆರಳು ಮತ್ತು ತೋರು ಬೆರಳುಗಳ ಮಧ್ಯದಲ್ಲಿ, ಸ್ವಲ್ಪ ಮಣ್ಣನ್ನು ಹಿಡಿದುಕೊಂಡು, ಹೆಬ್ಬೆರಳನ್ನು ತೋರುಬೆರಳಿನ ಮೇಲೆ ಸರಿಸುತ್ತ ಸಾಗಬೇಕು. ಮಣ್ಣಿನ ತೆಳುವಾದ ರಿಬ್ಬನ್ ನಿರ್ಮಾಣಗೊಳ್ಳುತ್ತದೆಯೋ ಇಲ್ಲವೇ ಮಣ್ಣು ಪುಡಿಯಾಗಿ ಕೆಳಗೆ ಬೀಳುತ್ತದೆಯೋ ಎಂಬುದನ್ನು ನೋಡಬೇಕು.

ಕೋಷ್ಟಕ ೧೨ರಲ್ಲಿ ಇರುವ ವಿವರಗಳ ಸಹಾಯದಿಂದ ಮಣ್ಣಿನಲ್ಲಿರುವ ಲಭ್ಯ ಜಲ ಎಷ್ಟರಮಟ್ಟಿಗೆ ವ್ಯಯವಾಗಿದೆ ಎಂಬುದರ ಅಂದಾಜನ್ನು ಮಾಡಬಹುದು. ಬೈರಿಗೆಯನ್ನು ಬಳಸಿ, ವಿವಿಧ ಆಳಗಳಿಂದ ಮಣ್ಣಿನ ನಮೂನೆಯನ್ನು ಹೊರತೆಗೆದು, ಈಗಾಗಲೇ ವಿವರಿಸಿದಂತೆ ಅವುಗಳನ್ನು ಪರೀಕ್ಷಿಸಬೇಕು. ಮೇಲಿನ ಕೋಷ್ಟಕದ ಆಧಾರದಿಂದ ಮಣ್ಣಿನಲ್ಲಿರುವ ನೀರಿನ ಕೊರತೆಯ ಅಂದಾಜನ್ನು ಮಾಡಬೇಕು.

ಕೋಷ್ಟಕ ೧೨: ಮಣ್ಣಿನಲ್ಲಿರುವ ಲಭ್ಯ ನೀರು ವ್ಯಯವಾಗುವ ಪ್ರಮಾಣವನ್ನು ಸ್ಪರ್ಶ ಪದ್ಧತಿಯಿಂದ ತಿಳಿಯಲು ಉಪಯೋಗಿಸುವ ಮಾರ್ಗಸೂಚಿ. 

 ಮಣ್ಣಿನಲ್ಲಿ ಲಭ್ಯ ನೀರಿನ ಕೊರತೆಯಾಗಿರುವ ಸಂಗತಿಯು ಕಂಡು ಬಂದರೆ, ಕೋಷ್ಟಕದಲ್ಲಿ ತೋರಿಸಿದ ಮೂರು ಬಗೆಯ ಮಣ್ಣಿನಲ್ಲಿ ಪ್ರತಿ ಮೀಟರು ಆಳದ ಮಣ್ಣಿಗೆ ಎಷ್ಟು ನೀರನ್ನು ಪೂರೈಸಿದರೆ, ಆ ಮಣ್ಣು ತನ್ನ ಜಲಧಾರಣಾ ಶಕ್ತಿಯನ್ನು ತಲುಪುತ್ತದೆ ಎಂದು ತಿಳಿಯಬಹುದು. ನೀರಿನ ಕೊರತೆಯು ಶೇಕಡಾ ೫೦ರಿಂದ ೭೫ರಷ್ಟು ಉಂಟಾದೊಡನೆ ನೀರನ್ನು ಪೂರೈಸಿದರೆ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಾದೀತು.

ಸ್ಪರ್ಶ ಪದ್ದತಿಯಿಂದ ಮಣ್ಣಿನ ಆರ್ದ್ರತೆಯನ್ನು ಅಂದಾಜು ಮಾಡುವ ತಂತ್ರವನ್ನು ರೂಢಿ ಮಾಡಿಕೊಂಡರೆ ನೀರನ್ನು ಪೂರೈಸಬೇಕಾದ ಸಮಯವನ್ನು ನಿರ್ಧರಿಸಲು ಸುಲಭ ಸಾಧ್ಯವಾಗುತ್ತದೆನ್ನಬಹುದು.

. ನೇರ ಪದ್ಧತಿ: ಮೇಲೆ ಸೂಚಿಸಿದಂತೆ, ಮಣ್ಣಿನ ಬೇರೆ ಬೇರೆ ಸ್ತರಗಳಿಂದ ನಿರ್ದಿಷ್ಟ ಆಳದವರೆಗೆ ಮಣ್ಣನ್ನು ಬೈರಿಗೆಯ ಸಹಾಯದಿಂದ ಹೊರತೆಗೆದು, ಶಾಖ ಪೆಟ್ಟಿಗೆಯಲ್ಲಿ ಒಣಗಿಸಿ, ಮಣ್ಣಿನಲ್ಲಿರುವ ಶೇಕಡಾ ಆರ್ದ್ರತೆಯನ್ನು ಕಂಡು ಹಿಡಿಯಬಹುದು. ಈ ವಿವರಗಳ ಸಹಾಯದಿಂದ, ಬೆಳೆಗೆ ನೀರನ್ನು ಪೂರೈಸಬೇಕೆ, ಪೂರೈಸಬೇಕಾದರೆ ಎಷ್ಟು ನೀರನ್ನು ಒದಗಿಸಬೇಕು ಎಂಬುದನ್ನು ಲೆಕ್ಕ ಮಾಡಬಹುದು.

ನೇರ ಪದ್ಧತಿಯನ್ನು ಅನುಸರಿಸುವುದರಿಂದ ದೊರೆತ ಅಂಕೆಗಳು ಹೆಚ್ಚು ನಿಖರವಾಗಿರುತ್ತವೆ. ಆದ್ದರಿಂದ ಈ ಪದ್ಧತಿಯು ಸಂಶೋಧನೆಗೆ ಅವಶ್ಯವಾಗಬೇಕು. ನೇರ ಪದ್ಧತಿಯಿಂದ ಹೊರಬಂದ ವಿವರಗಳಿಂದ ಬೆಳೆಗೆ ಪೂರೈಸಬೇಕಾದ ನೀರಿನ ಪ್ರಮಾಣವನ್ನು ಲೆಕ್ಕ ಮಾಡುವ ವಿಧಾನವು ಕೆಳಗಿನ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

ಕೋಷ್ಟಕ ೧೩: ಮಣ್ಣಿನ ವಿವಿಧ ಸ್ತರಗಳಲ್ಲಿರುವ ನೀರಿನ ಪ್ರಮಾಣದ ಮೇಲಿಂದ ಬೆಳೆಗೆ ಪೂರೈಸಬೇಕಾದ ನೀರಿನ ಪ್ರಮಾಣವನ್ನು ಲೆಕ್ಕ ಮಾಡುವ ವಿಧಾನ

ಕೆಳಗಿನ ಸಂಗತಿಗಳನ್ನು ಗಮನಿಸಬೇಕು.

 • ಮಣ್ಣಿನ ನಾಲ್ಕು ವಲಯಗಳಲ್ಲಿ, ಆರ್ದ್ರತೆಯು ಜನಧಾರಣಾ ಶಕ್ತಿಗಿಂತ ಕಡಿಮೆ ಇದೆ. ಮಣ್ಣಿಗೆ ೧೩.೮೬ ಸೆಂ.ಮೀ.ನಷ್ಟು ನೀರಿನ ಪೂರೈಕೆಯಾದರೆ, ಮೇಲಿನಿಂದ ೧೨೦ ಸೆಂ.ಮೀ.ವರೆಗಿನ ಮಣ್ಣು ತನ್ನ ಜಲಧಾರಣಾ ಶಕ್ತಿಯಷ್ಟು ಆರ್ದ್ರಗೊಳ್ಳುತ್ತದೆ.
 • ಇದಕ್ಕಿಂತ ಕಡಿಮೆ ನೀರನ್ನು ಪೂರೈಸಿದರೆ, ೧೨೦ ಸೆಂ.ಮೀ. ಆಳದವರೆಗೆ ಮಣ್ಣು ಜಲಧಾರಣಾ ಶಕ್ತಿಯನ್ನು ತಲುಪುವುದಿಲ್ಲ.
 • ನೀರಿನ ಪ್ರಮಾಣವು ೧೩.೮೬ ಸೆಂ.ಮೀ. ಮೀರಿದರೆ, ೧೨೦ ಸೆಂ.ಮೀ.ಗಿಂತ ಹೆಚ್ಚು ಆಳಕ್ಕೆ ನೀರು ಬಸಿದು ಹೋಗಿ ಹೆಚ್ಚಾದ ಈ ನೀರು ಬೆಳೆಗೆ           ಸಿಗದಂತಾಗುತ್ತದೆ.