ಬೇಳೆಕಾಳು ಬೆಳೆಗಳು (Pulses)

 • ಮುಂಗಾರಿಯಲ್ಲಿ ಬೆಳೆದಾಗ, ಈ ಬೆಳೆಗಳಿಗೆ ಸಾಮಾನ್ಯವಾಗಿ ನೀರಾವರಿಯ ಅವಶ್ಯಕತೆಯುಂಟಾಗುವುದಿಲ್ಲ. ಆದರೆ ದೀರ್ಘ ಅವಧಿಯವರೆಗೆ ಮಳೆಯೇ ಬಾರದಿದ್ದಾಗ, ನೀರಾವರಿಯನ್ನು ಒದಗಿಸಬೇಕಾಗುತ್ತದೆ.
 • ಹಿಂಗಾರು ಇಲ್ಲವೇ ಬೇಸಿಗೆ, ಹಂಗಾಮುಗಳಲ್ಲಿ ಬೆಳೆಯುವುದಾದರೆ ನೀರಾವರಿಯ ವ್ಯವಸ್ಥೆ ಇದ್ದರೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ.
 • ಬೇಳೆ ಕಾಳು ವರ್ಗಕ್ಕೆ ಸೇರಿದ ಬೆಳೆಗಳ ಬೇರುಗಳು ಆಳವಾಗಿ ಹೋಗುತ್ತವೆ. ಬೆಳವಣಿಗೆಯ ಪ್ರಾರಂಭದ ಹಂತದಲ್ಲಿ ನೀರನ್ನು ಒದಗಿಸುವ ಅವಶ್ಯಕತೆಯಿಲ್ಲ. ಆ ಸಮಯದಲ್ಲಿ ನೀರನ್ನೊದಗಿಸಿದರೆ, ಬೇರುಗಳಿಗೆ ಮತ್ತು ರಾಯ್ಹೋಬಿಯಂ ಬ್ಯಾಕ್ಟೀರಿಯಾಗಳಿಗೆ ಆಮ್ಲಜನಕದ ಕೊರತೆಯಾಗಿ, ಬೆಳವಣಿಗೆಯು ಕುಂಠಿತಗೊಳ್ಳುವ ಸಾಧ್ಯತೆಯಿದೆ.

i. ತೊಗರಿ

 • ಹೂವು ಬಿಡಲು ಆರಂಭಿಸಿದೊಡನೆ (ಬಿತ್ತಿದ ಅಂದಾಜು ೭೫ ದಿನಗಳ ನಂತರ) ಮತ್ತು ಕಾಯಿಗಳಲ್ಲಿ ಕಾಳುಕಟ್ಟುವ ಸಮಯಕ್ಕೆ (ಬಿತ್ತಿದ ೧೦೦ ದಿನಗಳ ನಂತರ) ನೀರಾವರಿಯನ್ನು ಪೂರೈಸಬೇಕು.
 • ಸುಮಾರು ೮೦ ಮಿ.ಮೀ. ನೀರನ್ನು ಎರಡು ಕಂತುಗಳಲ್ಲಿ ಪೂರೈಸಿದರೆ ಸಾಕು.

i. ಹೆಸರು

 • ಮಣ್ಣಿನ ಲಭ್ಯ ನೀರು ಶೇಕಡಾ ಅರ್ಧದಷ್ಟು ಬಳಕೆಯಾದೊಡನೆ ನೀರನ್ನು ಪೂರೈಸಿದರೆ ಉತ್ತಮ ಇಳುವರಿಯನ್ನು ಪಡೆಯಬಹುದು.
 • ಹಿಂಗಾರು ಮತ್ತು ಬೇಸಿಗೆಯಲ್ಲಿ ಈ ಬೆಳೆಯನ್ನು ಬೆಳೆದಾಗ ೨ರಿಂದ ೩ ನೀರಾವರಿಗಳನ್ನು ಪೂರೈಸಬೇಕಾಗುತ್ತದೆ.

iii. ಕಡಲೆ

 • ಕಡಲೆಯು ಹಿಂಗಾರಿ ಬೆಳೆ. ಎರಡು ನೀರಾವರಿಯನ್ನು ಪೂರೈಸಿದರೆ ಸಾಕು.
 • ಹೂವುಗಳು ಬರುವ ಮೊದಲು (ಬಿತ್ತಿದ ೪೫ ದಿನಗಳ ಸಮಯದಲ್ಲಿ) ಮತ್ತು ಹೂವುಗಳು ಅರಳಿದ ನಂತರ (ಬಿತ್ತಿದ ೭೦ ದಿನಗಳಾದ ಮೇಲೆ) ಹೀಗೆ ಎರಡು ಬಾರಿ ನೀರಾವರಿಯನ್ನು ಪೂರೈಸಿದರೆ ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದು.

ಎಣ್ಣೆಕಾಳು ಬೆಳೆಗಳು

i. ಸೇಂಗಾ  ಮುಂಗಾರು ಮತ್ತು ಬೇಸಿಗೆಗಳಲ್ಲಿ ಸೇಂಗಾ ಬೆಳೆಯ ಬೇಸಾಯವನ್ನು ಮಾಡುವುದು ಸಾಮಾನ್ಯ. ಉಷ್ಣತಾಮಾನವು ಕಡಿಮೆ ಇರದ ಪ್ರದೇಶಗಳಲ್ಲಿ, ಚಳಿಗಾಲದಲ್ಲಿಯೂ ಈ ಬೆಳೆಯನ್ನು ಬೆಳೆಯಲು ಸಾಧ್ಯ.

 • ಮಣ್ಣಿನಲ್ಲಿ ಲಭ್ಯ ಹಸಿಯು ಶೇಕಡಾ ೫೦ ರಷ್ಟು ಉಳಿದಾಗ ನೀರನ್ನು ಪೂರೈಸಿದರೆ ಅಧಿಕ ಇಳುವರಿಯು ದೊರೆಯುತ್ತದೆ.
 • ನಾಲ್ಕರಿಂದ ಆರು ಬಾರಿ ನೀರಾವರಿಯನ್ನು ಪೂರೈಸಬೇಕಾಗುಬಹುದು.
 • ಹೂವು ಬರುವಾಗ ಮತ್ತು ಕಾಯಿ ಕಚ್ಚುವಾಗ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ii. ಸೂರ್ಯಕಾಂತಿ : ಸೂರ್ಯಕಾಂತಿಯನ್ನು ಮೂರು ಹಂಗಾಮುಗಳಲ್ಲಿ ಬೆಳೆಯಬಹುದು. ಮಣ್ಣಿನಲ್ಲಿ ಲಭ್ಯ ನೀರು ಶೇಕಡಾ ೫೦ರಷ್ಟು ಉಳಿದಾಗ, ನೀರನ್ನು ಪೂರೈಸಿದರೆ ಅಧಿಕ ಇಳುವರಿಯು ದೊರೆಯುತ್ತದೆ.

iii. ಕುಸುಬೆ: ಕುಸುಬೆಯು ಹಿಂಗಾರಿ ಹಂಗಾಮಿನ ಬೆಳೆ. ಮಣ್ಣಿನಲ್ಲಿ ಸಂಗ್ರಹಗೊಂಡ ಆರ್ದ್ರತಯ ಆಧಾರದ ಮೇಲೆ, ಈ ಬೆಳೆಯ ಬೇಸಾಯವನ್ನು ಮಾಡುವುದು ಸಾಮಾನ್ಯ. ಆದರೆ, ನೀರನ್ನು ಪೂರೈಸಿದರೆ ಕುಸುಬೆಯ ಅಧಿಕ ಇಳುವರಿಯನ್ನು ಪಡೆಯಬಹುದು.

ಕುಸುಬೆಗೆ ಎರಡು ಬಾರಿ ನೀರನ್ನು ಒದಗಿಸಿದರೆ ಸಾಕು. ಹೂವು ಬರುವ ಸಮಯವು (ಬಿತ್ತಿದ ೧೦೫ ದಿನಗಳ ಸಮಯವು) ಬೆಳವಣಿಗೆಯ ಅತಿ ಸೂಕ್ಷ್ಮ ಹಂತವೆಂದೂ, ಶಾಖೆಗಳು ನಿರ್ಮಾಣಗೊಳ್ಳುವ (ಬಿತ್ತಿದ ೬೫ ದಿನಗಳ) ಸಮಯವು ನಂತರದ ಸೂಕ್ಷ್ಮ ಹಂತವೆಂದೂ ಕಂಡು ಬಂದಿದೆ.

ಹತ್ತಿ : ಹತ್ತಿ ಬೆಳೆಯನ್ನು ವಿಭಿನ್ನ ವಾತಾವರಣ ಮತ್ತು ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಬಿತ್ತುವ ಸಮಯ ಮತ್ತು ಬಳಸುವ ತಳಿಗಳು ಬೇರೆ ಬೇರೆಯಾಗಿವೆ. ಆದ್ದರಿಂದ ನೀರಿನ ಅವಶ್ಯಕತೆಯಲ್ಲಿಯೂ ವಿಭಿನ್ನತೆ ಇರುವುದು ಸಹಜವೆನ್ನಬಹುದು.

 • ಹತ್ತಿಯನ್ನು ಮಳೆಗಾಲದಲ್ಲಿ ಬಿತ್ತುವುದು ವಾಡಿಕೆ. ಕೆಲವು ಪ್ರದೇಶಗಳಲ್ಲಿ ಜೂನ್‌ಜುಲೈ ತಿಂಗಳಲ್ಲಿ ಬಿತ್ತಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಬಿತ್ತಲಾಗುತ್ತದೆ. ಬಿತ್ತುವ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ಹಸಿಯು ಇರದಿದ್ದರೆ ನೀರನ್ನು ಪೂರೈಸಬೇಕು.
 • ನೀರಿನ ಅವಶ್ಯಕತೆಯ ದೃಷ್ಟಿಯಿಂದ ಹತ್ತಿಯ ಬೆಳವಣಿಗೆಯಲ್ಲಿ ನಾಲ್ಕು ಸೂಕ್ಷ್ಮ ಹಂತಗಳನ್ನು ಗುರುತಿಸಲಾಗಿದೆ.

ಅ) ಹೂವುಗಳನ್ನು ಧರಿಸುವ ಶಾಖೆಗಳು (Sympodial Branches) ಹೊರಬರುವ ಸಮಯ (ಬಿತ್ತಿದ ೯-೧೦ ವಾರಗಳು)

ಆ) ಹೂವುಗಳು ಅರಳುವ ಸಮಯ ೧೪ ರಿಂದ ೧೫ ವಾರಗಳು)

ಇ) ಕಾಯಿ ಕಚ್ಚುವ ಸಮಯ (೧೮ನೇ ವಾರ)

ಈ) ಕಾಯಿ ಒಡೆಯುವ ಸಮಯ (೨೧ರಿಂದ ೨೩ ವಾರಗಳು)

ಇವುಗಳಲ್ಲಿ, ಹೂವು ಅರಳುವ ಸಮಯ ಮತ್ತು ಕಾಯಿಗಳಾಗುವ ಸಮಯ ಇವೆರಡು ಹೆಚ್ಚು ಸೂಕ್ಷ್ಮ ಹಂತಗಳೆಂದು ಕಂಡುಬಂದಿದೆ. ಆ ಸಮಯಗಳಲ್ಲಿ ಬೆಳೆಗೆ ನೀರಿನ ಕೊರತೆಯಾದರೆ ಹೂವು ಮತ್ತು ಕಾಯಿಗಳು ಉದುರುತ್ತವೆ. ಕಾಯಿಗಳು ಸರಿಯಾಗಿ ಬೆಳೆಯುವುದಿಲ್ಲ. ಅರಳೆಯ ಪ್ರಮಾಣವು ಕಡಿಮೆಯಾಗಿ ಇಳುವರಿಯು ತಗ್ಗುತ್ತದೆ.

 • ಹಲವು ದಶಕಗಳು ಹಿಂದೆ ಪ್ರಚಲಿತವಿದ್ದ ೧೭೦ – ಕೊ ೨ ಎಂಬ ತಳಿಯ ಹತ್ತಿಗೆ ಬೆಳೆಗೆ ೮ ಬಾರಿ ನೀರು ಹಾಯಿಸಬೇಕೆಂದೂ ಮತ್ತು ಪ್ರತಿ ಬಾರಿ ೭೫ ಮಿ.ಮೀ. ನೀರನ್ನು ಪೂರೈಸಬೇಕೆಂದೂ ಬೆಳಗಾವಿ ಜಿಲ್ಲೆಯ ಅರಭಾವಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಸಂಶೋಧನೆಗಳಿಂದ ಕಂಡು ಬಂದಿತು.
 • ಹೂವು ಬಿಡುವುದಕ್ಕಿಂತ ಮೊದಲು ಎರಡು ಬಾರಿ ಮತ್ತು ಹೂವು ಬಿಡಲು ಆರಂಭವಾದಂದಿನಿಂದ ೪ ಬಾರಿ ನೀರನ್ನು ಪೂರೈಸಿದರೆ, ಹತ್ತಿಯು ಅಧಿಕ ಇಳುವರಿಯು ದೊರೆಯುತ್ತದೆಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಸಂಶೋಧನೆಗಳಿಂದ ತಿಳಿದು ಬಂದಿದೆ.
 • ನೀರಾವರಿ ಪದ್ದತಿಯು, ಹತ್ತಿಯ ಬೆಳವಣಿಗೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಬೇರುಗಳಿಗೆ, ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗುವಂತಾಗಬೇಕು. ಆದ್ದರಿಂದ ಬೋದು ಕಾಲುವೆ ಪದ್ಧತಿಯಿಂದ ಭೂಮಿಯನ್ನು ವಿನ್ಯಾಸಗೊಳಿಸಿ, ಹತ್ತಿಯ ಬೀಜಗಳನ್ನು ಬೋದುಗಳ ಪಾರ್ಶ್ವದಲ್ಲಿ ಬಿತ್ತುವುದು ಉತ್ತಮ.
 • ಪ್ರತಿ ಕಾಲುವೆಯಲ್ಲಿ ನೀರನ್ನು ಪೂರೈಸುವುದು ಸಾಮಾನ್ಯ. ಆದರೆ, ಇದರ ಬದಲು ಒಂದು ಕಾಲುವೆಯನ್ನು ಬಿಟ್ಟು ಇನ್ನೊಂದರಲ್ಲಿ ನೀರನ್ನು ಪೂರೈಸಿದರೆ, ಹತ್ತಿಯ ಇಳುವರಿಯಲ್ಲಿ ವಿಶೇಷ ಅಂತರವನ್ನುಂಟು ಮಾಡದೇ ನೀರಾವರಿ ಜಲದಲ್ಲಿ ಸುಮಾರು ಶೇಕಡಾ ೨೫ರಷ್ಟು ಉಳಿತಾಯವನ್ನು ಸಾಧಿಸಬಹುದು.

ಕಬ್ಬು: ದೇಶದಲ್ಲಿ ಬೆಳೆಯುವ ಕಬ್ಬಿನ ಪ್ರದೇಶದ ಶೇಕಡಾ ೭೦ರಷ್ಟು ನೀರಾವರಿಯಲ್ಲಿದೆ. ಉತ್ತರ ಭಾಗದಲ್ಲಿ ಕಬ್ಬನ್ನು ಫೆಬ್ರವರಿ-ಮಾರ್ಚ್‌ತಿಂಗಳುಗಳಲ್ಲಿ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನವರೆಗೆ ನೆಡುವ ರೂಢಿ ಇದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ, ಕಬ್ಬನ್ನು ಮೂರು ಹಂಗಾಮುಗಳಲ್ಲಿ ಅಂದರೆ ಡಿಸೆಂಬರ್‌ದಿಂದ ಫೆಬ್ರವರೆಗೆ (೧೨ ತಿಂಗಳು ಅವಧಿಯ ಕಬ್ಬು), ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ (೧೫ ತಿಂಗಳೂ ಅವಧಿಯ ಕಬ್ಬು) ಮತ್ತು ಜುಲೈ-ಆಗಸ್ಟ್ ತಿಂಗಳುಗಳಲ್ಲಿ (೧೮ ತಿಂಗಳು ಅವಧಿಯ ಕಬ್ಬು) ನೆಡುವ ರೂಢಿ ಇದೆ.

ಮಣ್ಣಿನ ಗುಣಧರ್ಮ, ಹವಾಮಾನ, ಬೇಸಾಯದ ಪದ್ದತಿ ಇತ್ಯಾದಿಗಳ ಮೇಲಿಂದ ನೀರಾವರಿ ಜಲದ ಪೂರೈಕೆಯಲ್ಲಿ ವಿಭಿನ್ನತೆಯಿದೆ. ಕೆಳಗಿನ ಸಂಗತಿಗಳನ್ನು ಗಮನಿಸಬಹುದು.

ದೆಹಲಿ : ಮಳೆಗಾಲವು ಆರಂಭವಾಗುವ ಮೊದಲು ೫ ಬಾರಿ ನೀರನ್ನು ಮತ್ತು ಮಳೆಗಾಲದ ನಂತರ ಒಂದೆರಡು ಬಾರಿ ನೀರನ್ನು ಒದಗಿಸಬೇಕು.

ಪಂಜಾಬ್‌: ಹತ್ತು ದಿನಗಳ ಅಂತರದಲ್ಲಿ ೮ ಬಾರಿ ನೀರನ್ನು ಮತ್ತು ನೀರಿನ ಒಟ್ಟು ಪ್ರಮಾಣ ೧೭೦೦ ರಿಂದ ೧೮೦೦ ಮಿ.ಮೀ.

ಬಿಹಾರ: ಹದಿನೆಂಟು ದಿನಗಳ ಅಂತರದಲ್ಲಿ ೬ ರಿಂದ ೭ ಬಾರಿ ನೀರನ್ನು ಕೊಡಬೇಕು. ನೀರಿನ ಒಟ್ಟು ಪ್ರಮಾಣ ೧೪೦೦ ರಿಂದ ೧೫೦೦ ಮಿ.ಮೀ.

ಮಹಾರಾಷ್ಟ್ರ : ಮಳೆಗಾಲವು ಆರಂಭವಾಗುವವರೆಗೆ ೧೦ ದಿನಗಳ ಅಂತರದಲ್ಲಿ, ಬೇಸಿಗೆ ಕಾಲದಲ್ಲಿ ೮ ದಿನಗಳ ಅಂತರದಲ್ಲಿ ಮತ್ತು ಇತರ ಸಮಯದಲ್ಲಿ ೧೨ ದಿನಗಳ ಅಂತರದಲ್ಲಿ ನೀರನ್ನು ಪೂರೈಸಬೇಕು. ಬೇಕಾಗುವ ನೀರಿನ ಒಟ್ಟು ಪ್ರಮಾಣ ೨೮೦೦ ರಿಂದ ೩೦೦೦ ಮಿ.ಮೀ. ಅಡಸಾಲಿ ಬೆಳೆಗೆ (೧೮ ತಿಂಗಳ ಬೆಳೆಗೆ) ೩೨೦೦ ರಿಂದ ೩೫೦೦ ಮಿ.ಮೀ. ನೀರು ಬೇಕಾಗುತ್ತದೆ.

ಕರ್ನಾಟಕ: ಒಂದು ವರ್ಷದಲ್ಲಿ ೨೮ ಬಾರಿ ನೀರನ್ನೊದಗಿಬೇಕಾಗುತ್ತದೆ ಎಂದೂ, ೨೪೦೦ ಮಿ.ಮೀ. ನೀರು ಬೇಕೆಂದೂ ಅರಭಾವಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಸಂಶೋಧನೆಗಳಿಂದ ತಿಳಿದು ಬಂದಿದೆ.

ಆಂಧ್ರಪ್ರದೇಶ : ರಾಜ್ಯದ ಉತ್ತರ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಕೇವಲ ೨ ಬಾರಿ ಪೂರೈಸಿದ ನೀರು ಸಾಕಾದರೆ, ದಕ್ಷಿಣದ ಜಿಲ್ಲೆಗಳಲ್ಲಿ ೨೨ ರಿಂದ ೨೫ ಬಾರಿ ನೀರನ್ನು ಪೂರೈಸಬೇಕಾಗುತ್ತದೆ. ವರ್ಷದಲ್ಲಿ ಬೇಕಾಗುವ ಒಟ್ಟು ನೀರಿನ ಪ್ರಮಾಣವು ೧೬೦೦ ರಿಂದ ೧೭೦೦ ಮಿ.ಮೀ.

ತಮಿಳುನಾಡು: ಕಬ್ಬಿಗೆ ಪ್ರತಿ ೬,೧೨ ಮತ್ತು ೧೮ ದಿನಗಳಿಗೊಮ್ಮೆ ನೀರನ್ನು ಪೂರೈಸಿದಾಗ ಕಬ್ಬಿನ ಇಳುವರಿಯಲ್ಲಿ ಗಣನೀಯ ಅಂತರವಾಗುವುದಿಲ್ಲವೆಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಆದರೆ, ಪ್ರತಿ ೬ ದಿನಗಳಿಗೊಮ್ಮೆ ನೀರನ್ನು ಪೂರೈಸಿದಾಗ ಕಬ್ಬಿನ ರಸದ ಗುಣಮಟ್ಟವು ಉತ್ತಮಗೊಳ್ಳುವುದೆಂದು ಕಂಡು ಬಂದಿದೆ.

ತಂಬಾಕು : ಸಿಗರೇಟ್, ಬೀಡಿ, ಹುಕ್ಕಾ ಮುಂತಾದವುಗಳಲ್ಲಿ ಬಳಸಲು ಮತ್ತು ಜಗಿ (ಅಗಿ)ಯಲು ತಂಬಾಕನ್ನು ಬೆಳೆಯಲಾಗುತ್ತದೆ.

 • ಕಪ್ಪು ಎರೆ ಮಣ್ಣಿನಲ್ಲಿ ತಂಬಾಕನ್ನು ಬೆಳೆಯುವಾಗ, ಬೆಳೆಗೆ ನೀರಾವರಿಯು ಅವಶ್ಯಕತೆ ಇಲ್ಲ.
 • ಮಣ್ಣಿನಲ್ಲಿ ಲಭ್ಯ ನೀರು ಶೇಕಡಾ ೫೦ ರಿಂದ ೬೦ ರಷ್ಟು ಸದಾ ಇರುವಂತೆ ನೀರಿನ ನಿರ್ವಹಣೆಯನ್ನು ಮಾಡಬೇಕು.
 • ಕ್ಲೋರೈಡ್ ಇರುವ ನೀರನ್ನು ತಂಬಾಕು ಬೆಳೆಗೆ ಪೂರೈಸಬಾರದು. ತಂಬಾಕಿನ ಗುಣಮಟ್ಟದ ಮೇಲೆ, ಕ್ಲೋರೈಡ್ ದುಷ್ಪರಿಣಾಮವನ್ನುಂಟು ಮಾಡುತ್ತದೆ.

ನೀರಾವರಿ ಜಲದ ಸಂಯುಕ್ತ ಬಳಕೆ (Conjunctive use of Irrigatin water): ದೇಶದಲ್ಲಿರುವ ಹಲವು ನಾಲೆಗಳಿಂದ ಪೂರೈಕೆಯಾಗುತ್ತಿರುವ ನೀರಾವರಿಗೆ ಒಂದಲ್ಲ ಒಂದು ಮಿತಿಯಿರುವುದೇ ಸಾಮಾನ್ಯ. ಉದಾಹರಣೆಗೆ ಕೆಳಗಿನ ಸಂಗತಿಗಳನ್ನು ಗಮನಿಸಬಹುದು.

 • ತನ್ನ ವಲಯದಲ್ಲಿರುವ ಎಲ್ಲ ಭೂ ಪ್ರದೇಶಕ್ಕೂ ನೀರಾವರಿ ಜಲವನ್ನು ಪೂರೈಸುವ ಸಾಮರ್ಥ್ಯವಿಲ್ಲದಿರಬಹುದು.
 • ವರ್ಷವಿಡೀ ನೀರನ್ನು ಪೂರೈಸಲು ಅಸಾಧ್ಯವಾಗಬಹುದು.
 • ಕೆಲ ಸಮಯ, ಬೆಳೆಗೆ ನೀರು ಅತ್ಯವಶ್ಯವಿದ್ದಾಗಲೇ ನಾಲೆಯಲ್ಲಿ ನೀರು ಇಲ್ಲದಿರಬಹುದು.
 • ನಾಲೆಯ ಕೊನೆಯಲ್ಲಿ ಇರುವ ಭೂ ಕ್ಷೇತ್ರಕ್ಕೆ, ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯದೇ ಇರಬಹುದು.

ಮೇಲೆ ಸೂಚಿಸಿದ ಸಂದರ್ಭಗಳಲ್ಲಿ, ಬೆಳೆಯು ನಷ್ಟವಾಗದಂತೆ ಮಾಡಲು ಇಲ್ಲವೇ ಬೆಳೆಯಿಂದ ಅಧಿಕ ಇಳುವರಿಯನ್ನು ಪಡೆಯಲು, ಅಂತರ್ಜಲದ ಬಳಕೆಯನ್ನು ಸಾಧ್ಯವಿರುವಲ್ಲೆಲ್ಲ ಮಾಡಿಕೊಳ್ಳುವುದು ಜಾಣತನವೆನಿಸೀತು. ಒದಕ್ಕಿಂತ ಅಧಿಕ ಜಲ ಮೂಲಗಳಿಂದ ದೊರೆಯುವ ನೀರನ್ನು ಒಂದಕ್ಕೊಂದು ಪೂರಕವಾಗುವಂತೆ ಕೃಷಿಯಲ್ಲಿ ಬಳಸಿಕೊಳ್ಳುವ ಕಾರ್ಯ ವಿಧಾನಕ್ಕೆ ಜಲದ ಸಂಯುಕ್ತ ಬಳಕೆ ಎನ್ನಬಹುದು.

ನೀರಿನ ಸಂಯುಕ್ತ ಬಳಕೆಯು, ಭಾರತದ ಕೆಲವೆಡೆ ಕಾರ್ಯರೂಪದಲ್ಲಿದೆ. ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದಲ್ಲಿ, ಮಹಾರಾಷ್ಟ್ರದ ಗೋದಾವರಿ ಮತ್ತು ಪ್ರವರಾ ನದಿಗಳ ನಾಲೆ ಪ್ರದೇಶದಲ್ಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ನಾಲೆಯ ಹಾಗೂ ಬಾವಿಯ ನೀರಿನ ಸಂಯುಕ್ತ ಬಳಕೆಯಾಗುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಇದಲ್ಲದೇ, ಹರಿಯಾಣ ರಾಜ್ಯದಲ್ಲಿ ಯಮುನಾ ನದಿಯ ಪಶ್ಚಿಮ ನಾಲೆವರೆಗೆ, ಹಲವಾರು ಕೊಳವೆ ಬಾವಿಗಳನ್ನು ನಿರ್ಮಿಸಿ, ಅವುಗಳಿಂದ ದೊರೆತ ನೀರನ್ನು ನಾಲೆಯಲ್ಲಿ ನೀರು ಇಲ್ಲದಿರುವಾಗ ಉಪಯೋಗಿಸಿ, ಬೆಳೆಯ ಉತ್ಪಾದನೆಯು ಆಗುತ್ತಿರುವ ಸಂಗತಿ ಗಮನಾರ್ಹ. ಈ ಕ್ರಮದಿಂದ ಭೂಮಿಯು ಜೌಗಾಗುವುದೂ ತಪ್ಪುತ್ತದೆಂಬುದು ಮಹತ್ವದ ವಿಷಯ.

ಮೇಲೆ ವಿವರಿಸಿದ ಸಂದರ್ಭಗಳಲ್ಲೇ ಅಲ್ಲದೇ ಇನ್ನೂ ಕೆಲವು ಪ್ರಸಂಗಗಳಲ್ಲಿ, ಜಲದ ಸಂಯುಕ್ತ ಬಳಕೆಯು ಪ್ರಯೋಜನಕಾರಿ ಎನ್ನಬಹುದು. ಉದಾಹರಣೆಗೆ

 • ಕೆಲವು ಬಾವಿಗಳ ನೀರು ಲವಣಯುತವಾಗಿರುತ್ತದೆ. ಲವಣಗಳು ಮಧ್ಯಮ ಪ್ರಮಾಣದಲ್ಲಿದ್ದಾಗ, ನೀರನ್ನು ಬೆಳೆಗೆ ಪೂರೈಸಬಹುದಾದರೂ, ನೀರನ್ನು ಸತತವಾಗಿ ಬಳಸಿದರೆ, ಕೆಲವು ವರ್ಷಗಳಲ್ಲಿ ಲವಣದ ಅಧಿಕ್ಯದಿಂದ ಭೂಮಿಯು ಬೇಸಾಯಕ್ಕೆ ನಿರುಪಯೋಗವಾಗಬಹುದು. ಇಂತಹ ಲವಣಯುಕ್ತ ನೀರನ್ನು ನಾಲೆಯ ನೀರಿನೊಂದಿಗೆ ಸೂಕ್ತ ಪ್ರಮಾಣದಲ್ಲಿ ಮಿಶ್ರ ಮಾಡಿ, ಬೆಳೆಗೆ ಸುರಕ್ಷಿತವಾಗಿ ಪೂರೈಸಬಹುದು. ಇದರ ಬದಲು, ಒಂದೆರಡು ಬಾರಿ ಬಾವಿಯ ಜಲದಿಂದ ನೀರಾವರಿಯನ್ನು ಕೈಕೊಂಡು, ನಂತರ ನಾಲೆಯ ನೀರನ್ನು ಬಳಸಲೂಬಹುದು.
 • ಕೆಲವು ಪ್ರದೇಶಗಳಲ್ಲಿ ನಿರ್ಮಿಸಿದ ಬಸಿಗಾಲುವೆಗಳಿಂದ ಹೊರಬಂದ ನೀರಿನಲ್ಲಿ ಲವಣಗಳು ಅತಿ ಕಡಿಮೆ ಪ್ರಮಾಣದಲ್ಲಿರುತ್ತವೆ. ಆ ನೀರನ್ನು ನೇರವಾಗಿ ಬೆಳೆಗಳಿಗೆ ಪೂರೈಸಬಹುದು. ಆದರೆ, ಹಲವು ಪ್ರದೇಶಗಳಲ್ಲಿ ಬಸಿಗಾಲುವೆಯ ನೀರು ಲವಣಯುತವಾಗಿರುವುದೇ ಸಾಮಾನ್ಯ. ಮಧ್ಯಮ ಪ್ರಮಾಣದಲ್ಲಿ ಲವಣಗಳಿರುವ ನೀರನ್ನು ನಾಲೆಯ ಅಥವಾ ಬಾವಿಯ ನೀರಿನೊಡನೆ, ಮೇಲೆ ವಿವರಿಸಿದಂತೆ ಸಂಯುಕ್ತವಾಗಿ ಬಳಸಬಹುದು. ಇಸ್ರೇಲ್ ದೇಶದಲ್ಲಿ ಮತ್ತು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಕೆಲವೆಡೆ, ಲವಣಯುಕ್ತ ನೀರಿನೊಡನೆ, ನಾಲೆಯ ನೀರನ್ನು ಮಿಶ್ರ ಮಾಡಿ, ಬೆಳೆಗೆ ಪೂರೈಸಲಾಗುತ್ತದೆ. ಭಾರತದಲ್ಲಿಯೂ, ಕೆಲವು ರಾಜ್ಯಗಳಲ್ಲಿ ಈ ರೀತಿಯ ಸಂಯುಕ್ತ ಬಳಕೆಗೆ ಸಾಕಷ್ಟು ಆಸ್ಪದವಿದೆ.

ನಿರ್ದಿಷ್ಟ ಭೂ ಪ್ರದೇಶಕ್ಕೆ ನೀರನ್ನು ಪೂರೈಸಲು ಬೇಕಾಗುವ ಸಮಯ

ಒಂದು ಭೂ ಪ್ರದೇಶಕ್ಕೆ ನೀರಾವರಿಯ ಜಲವನ್ನು ಪೂರೈಸಲು ಬೇಕಾಗುವ ಸಮಯವು ಕೆಳಗಿನ ಸಂಗತಿಗಳನ್ನು ಅವಲಂಭಿಸಿದೆ.

i. ಪ್ರತಿ ಸೆಕೆಂಡಿಗೆ ಹರಿದು ಬರುವ ನೀರಿನ ಪ್ರಮಾಣ: ನೀರು ಹರಿದು ಬರುವ ವೇಗವು ಕಡಿಮೆ ಇದ್ದರೆ ನೀರಾವರಿಯನ್ನು ಮುಗಿಸಲು ಅಧಿಕ ಸಮಯವು ಬೇಕಾಗುತ್ತದೆ.

ii. ಪೂರೈಸಬೇಕೆಂದಿರುವ ನೀರಿನ ಪ್ರಮಾಣ: ಹೆಚ್ಚು ಆಳದವರೆಗೆ ನೀರನ್ನು ಪೂರೈಸಲು ಹೆಚ್ಚು ಸಮಯವು ಬೇಕು.

iii. ಬಳಕೆಯಾಗುವ ಶೇಕಡಾ ನೀರಿನ ಪ್ರಮಾಣ : ಸಮರ್ಥ ಬಳಕೆಯಾಗುವಲ್ಲಿ ನೀರಾವರಿಯನ್ನು ಪೂರೈಸಲು ಹೆಚ್ಚು ಸಮಯವು ಬೇಕಾಗುವುದು ಸಹಜ.

iv. ನೀರನ್ನು ಪೂರೈಸಬೇಕೆಂದಿರುವ ಭೂ ಪ್ರದೇಶ : ಭೂ ಪ್ರದೇಶವು ದೊಡ್ಡದಿದ್ದಷ್ಟು ನೀರನ್ನು ಪೂರೈಸಲು ಹೆಚ್ಚು ಸಮಯವು ಬೇಕಾಗುವುದು ಸಹಜ.

ನಿರ್ದಿಷ್ಟ ಪ್ರದೇಶಕ್ಕೆ ನೀರನ್ನು ಪೂರೈಸಲು ಬೇಕಾಗುವ ಸಮಯವನ್ನು ಲೆಕ್ಕ ಮಾಡುವ ವಿಧಾನವನ್ನು ಕೆಳಗಿನ ಉದಾಹರಣೆಯಿಂದ ತಿಳಿಯಬಹುದು.

ತಿಳಿದಿರುವ ವಿವರಗಳು

 • ನೀರನ್ನು ಪೂರೈಸಬೇಕೆಂದಿರುವ ಭೂ ಪ್ರದೇಶ      ೩ ಹೆಕ್ಟೇರುಗಳು
 • ಮಣ್ಣಿನಲ್ಲಿರುವ ನೀರಿನ ಕೊರತೆ  ೫ ಸೆಂ.ಮೀ
 • ಹರಿದು ಬರುತ್ತಿರುವ ನೀರಿನ ಪ್ರಮಾಣ    ೩ ಘನ ಸೆಂ.ಮೀ/ಸೆಕೆಂಡಿಗೆ
 • ಭೂ ಪ್ರದೇಶದವರೆಗೆ ಬಂದು ಮುಟ್ಟುವ ನೀರಿನ ಪ್ರಮಾಣ    ೦.೮

ಕಂಡು ಹಿಡಿಯಬೇಕಾದದ್ದು

ನೀರಿನ ಕೊರತೆಯನ್ನು ನಿವಾರಿಸಿ ಮಣ್ಣನ್ನು ಜಲಧಾರಣಾ ಶಕ್ತಿಗೆ ತರಲು ಬೇಕಾಗುವ ಸಮಯವನ್ನು (ದಿನಗಳನ್ನು ಲೆಕ್ಕ ಮಾಡಲು), ಕೆಳಗಿನ ಸಮೀಕರಣವನ್ನು ಉಪಯೋಗಿಸಬೇಕು.

ಭೂ ಪ್ರದೇಶದವರೆಗೆ ಬಂದು ಮುಟ್ಟುವ ನೀರಿನ ಪ್ರಮಾಣ

x

ಹರಿದು ಬರು ತ್ತಿರುವ ನೀರಿನ ಪ್ರಮಾಣ (ಘನ ಸೆಂ.ಮೀ ಸೆಕೆಂಡಿಗೆ)

x

ಬೇಕಾಗುವ ಸಮಯ (ದಿನಗಳಲ್ಲಿ)

=

ನೀರನ್ನು ಪೂರೈಸ ಬೇಕೆಂದಿರುವ ಪ್ರದೇಶ (ಹೆಕ್ಟೇರುಗಳಲ್ಲಿ)

x

ಮಣ್ಣಿನಲ್ಲಿ ಇರುವ ನೀರಿನ ಕೊರತೆ (ಸೆಂ.ಮೀ.)

ಮೇಲೆ ಕೊಟ್ಟಿರುವ ಅಂಕೆಗಳನ್ನು ಈ ಸಮೀಕರಣದಲ್ಲಿ ಅಳವಡಿಸಿದಾಗ

೦.೮ x ೨ x ಸಮಯ = ೩ x ೫

ಸಮಯ = ೩ x ೫ / ೦.೮ x ೨

೧೫ / ೧.೬ = ೯.೪ ದಿನಗಳು

ನೀರಾವರಿ ಯೋಜನೆಯನ್ನು ಸಿದ್ದಪಡಿಸಲು ಇಂಥ ಮಾಹಿತಿಯು ಪ್ರಯೋಜನಕಾರಿ ಎನ್ನಬಹುದು.