ವಿವಿಧ ಜಲಮೂಲಗಳಿಂದ ದೊರೆಯುವ ನೀರಿನ ಗುಣಮಟ್ಟ

ಹಲವು ಜಲಮೂಲಗಳಿಂದ ದೊರೆಯುವ ನೀರನ್ನು ನೀರಾವರಿಗೆಂದು ಬಳಸಲಾಗುತ್ತದೆ. ಪ್ರಮುಖ ಜಲ ಮೂಲಗಳು ಕೆಳಗಿನಂತಿವೆ:

 • ಭೂಮಿಯ ಮೇಲ್ಮೈಯಲ್ಲಿರುವ ಜಲ ಮೂಲಗಳು: ಉದಾಹರಣೆ: ನದಿ, ಹಳ್ಳ, ಕಾಲುವೆ, ಸರೋವರ, ಕೆರೆ, ಹೊಂಡ ಇತ್ಯಾದಿ.
 • ಅಂತರ್ಜಲ ಮೂಲಗಳು: ಉದಾಹರಣೆ: ತೆರೆದ ಬಾವಿ, ಕೊಳವೆ ಬಾವಿ, ಚಿಮ್ಮುವ (Artisian) ಬಾವಿ ಇತ್ಯಾದಿ.
 • ವಿವಿಧ ಜಲ ಮೂಲಗಳಲ್ಲಿರುವ ನೀರಿನ ಗುಣಮಟ್ಟದ ಕೆಲವು ಪ್ರಮುಖ ವಿವರಗಳು ಕೆಳಗಿನಂತಿವೆ:

ನದಿಯ ನೀರಿನ ಗುಣಮಟ್ಟ : ಭಾರತದಲ್ಲಿ ಹರಿಯುವ ಹಲವು ಪ್ರಮುಖ ನದಿಗಳ ನೀರನ್ನು ತಿಂಗಳಿಗೊಮ್ಮೆ ಸಂಗ್ರಹಿಸಿ, ವಿಶ್ಲೇಷಣೆಯನ್ನು ಮಾಡಿದಾಗ ಕೆಳಗಿನ ಸಂಗತಿಗಳು ತಿಳಿದು ಬಂದಿವೆ.

 • ದೇಶದ ಉತ್ತರಕ್ಕಿರುವ ನದಿಗಳಲ್ಲಿ ಚಂಬಲ್, ತಾಪೀ ಮತ್ತು ಯಮುನಾ ನದಿಗಳ ನೀರಿನ ವಿದ್ಯುತ್ ವಹನವು ಪ್ರತಿ ಸೆಂ.ಮೀ.ಗೆ ೪೫೦ ರಿಂದ ೬೫೦ ಮೈಕ್ರೋಮೋಹ್‌ಗಳಷ್ಟಿವೆ. ಆದರೆ ಇತರ ನದಿಗಳ ನೀರಿನ ವಿದ್ಯುತ್ ವಹನವು ೩೪೦ ಮೈಕ್ರೋಮೋಹ್‌ಗಳಿಗಿಂತ ಕಡಿಮೆ ಇದೆ.
 • ಭಾರತದ ದಕ್ಷಿಣ ಭಾಗದಲ್ಲಿರುವ ಕಾವೇರಿ ನದಿಯ ಲವಣದ ಪ್ರಮಾಣವು ಕಡಿಮೆ ಎನ್ನಬಹುದು. (ಪ್ರತಿ ಸೆಂ.ಮೀ.ಗೆ ಸರಾಸರಿ ೨೭೦ ಮೈಕ್ರೋಮೋಹ್‌)
 • ಗೋದಾವರಿ (ಪ್ರತಿ ಸೆಂ.ಮೀ.ಗೆ ೭೨೫ ಮೈಕ್ರೋಮೋಹ್‌) ಮತ್ತು ಕಾಳೀ ನದಿಗಳ (ಪ್ರತಿ ಸೆಂ.ಮೀ.ಗೆ ೬೦೦ ಮೈಕ್ರೋಮೋಹ್‌) ನೀರಿನಲ್ಲಿ ಲವಣದ ಪ್ರಮಾಣವು ಮಧ್ಯಮ.
 • ಆದರೆ ಕೃಷ್ಣಾ (೧೩೯೦ ಮೈ.ಮೋಹ್‌/ಸೆಂ.ಮೀ), ಹಗರಿ (೧೬೪೦ ಮೈ.ಮೋಹ್‌/ಸೆಂ.ಮೀ. ಮತ್ತು ತುಂಗಭದ್ರಾ (೧೭೩೦ ಮೈ.ಮೋಹ್‌/ಸೆಂ.ಮೀ.) ನದಿಗಳ ನೀರು ಅಧಿಕ ಲವಣದ ವರ್ಗದಲ್ಲಿ ಬರುತ್ತದೆ.

ಕೆಲವು ನದಿಗಳನ್ನು ಬಿಟ್ಟರೆ ಉಳಿದ ನದಿಗಳ ನೀರಿನ ಸೋಡಿಯಂ: ಕ್ಯಾಲ್ಸಿಯಂ+ಮೆಗ್ನೀಸಿಯಂ ಪರಿಮಾಣವು ಒಂದಕ್ಕಿಂತ ಕಡಿಮೆ ಇದೆ ಎಂಬುದು ಸಮಾಧಾನಕರ ಸಂಗತಿಯೆನ್ನಬಹುದು. ಈ ಪರಿಮಾಣವು ಕೃಷ್ಣಾ ಮತ್ತು ತಾಪೀ ನದಿಗಳ ನೀರಿನಲ್ಲಿ ಎರಡರ ಸನಿಹದಲ್ಲಿಯೂ ಗೋದಾವರಿ ನದಿಯ ನೀರಿನಲ್ಲಿ ಮೂರರ ಸನಿಹದಲ್ಲಿಯೂ ಇದೆ. ಹಗರಿ ನದಿಯ ನೀರಿನಲ್ಲಿ ಈ ಪರಿಮಾಣವು ೭ ಸಮೀಪದಲ್ಲಿದೆಯಾದರೆ ತುಂಗಭದ್ರಾ ನದಿಯ ನೀರಿನಲ್ಲಿ ಈ ಪರಿಮಾಣವು ೧೩ನ್ನು ಮುಟ್ಟಿದೆ.

ದೇಶದ ನದಿಗಳಿಂದ ದೊರೆಯುವ ನೀರನ್ನು ನೀರಾವರಿಗೆ ಬಳಸಿದರೆ ಬೆಳೆಗಳಿಗೆ ಸೋಡಿಯಂನ ಅಪಾಯವುಂಟಾಗುವ ಭಯವಿಲ್ಲವೆಂದು ಮೇಲಿನ ವಿವರಗಳ ಆಧಾರದಿಂದ ಹೇಳಬಹುದು.

ಕಾಲುವೆ(ನಾಲೆ) ನೀರಿನ ಗುಣಮಟ್ಟ: ನದಿಯಿಂದಲೇ ನಾಲೆಗೆ ನೀರಿನ ಪೂರೈಕೆಯಾಗುತ್ತದೆಯಾದ್ದರಿಂದ ಕಾಲುವೆಯಲ್ಲಿರುವ ನೀರಿನ ಗುಣಮಟ್ಟವು ಸಂಬಂಧಿಸಿದ ನದಿಯ ನೀರಿನ ಗುಣಮಟ್ಟದಂತೆಯೇ ಇರುವುದು ಸಹಜ. ಆದರೆ ನೀರಾವರಿ ಬೆಳೆಯಿರುವ ಪ್ರದೇಶವನ್ನು ಮುಟ್ಟುವುದರೊಳಗೆ ಮಣ್ಣಿನ ಸಂಪರ್ಕವು ಬರುವ ಸಾಧ್ಯತೆ ಇರುವುದರಿಂದ ಆ ಮಣ್ಣಿನೊಳಗಿರುವ ಲವಣಗಳಿಂದ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ.

ಭೂಮಿಯ ಮೇಲ್ಭಾಗದಲ್ಲಿರುವ ಇತರ ಜಲಮೂಲಗಳು: ಹಳ್ಳ, ಸರೋವರ, ಕೆರೆ ಮುಂತಾದ ಮೂಲಗಳಿಂದಲೂ ನೀರನ್ನು ನೀರಾವರಿಗೆಂದು ಬಳಸುವ ಪದ್ದತಿಯು ಎಲ್ಲೆಡೆ ಇದೆ. ಅಧಿಕ ಲವಣಗಳಿರುವ ಭೂಮಿಯೊಳಗಿಂದ ಹರಿದು ಹೋಗುವ ಹಳ್ಳಗಳನ್ನು ಬಿಟ್ಟರೆ ಹಳ್ಳ, ಸರೋವರ, ಕೆರೆ ಇತ್ಯಾದಿಗಳಲ್ಲಿ ಸಂಗ್ರಹಗೊಂಡ ನೀರು ಸಾಮಾನ್ಯವಾಗಿ ನೀರಾವರಿಗೆ ಅನುಕೂಲವಾಗಿರುತ್ತದೆ.

ಬಾವಿಗಳ ನೀರಿನ ಗುಣಮಟ್ಟ

ಬಾವಿಗಳಿರುವ ಪ್ರದೇಶ: ಬಾವಿಯಿರುವ ಪ್ರದೇಶವು ಹವಾಮಾನದ ಮೇಲಿಂದ ಆ ಬಾವಿಯಲ್ಲಿರುವ ನೀರಿನ ಗುಣಮಟ್ಟವು ಅವಲಂಬಿಸುತ್ತದೆ. ಕಡಿಮೆ ಮಳೆ ಬರುವ ಪ್ರದೇಶದಲ್ಲಿರುವ ಬಾವಿಯ ನೀರು ಸಾಮಾನ್ಯವಾಗಿ ಲವಣಯುತವಾಗಿರುತ್ತದೆ. ಅದರಂತೆಯೇ, ಸಮುದ್ರದ ಸಮೀಪದಲ್ಲಿರುವ ಬಾವಿಯ ನೀರು ಸಹ ಲವಣಗಳಿಂದ ಕೂಡಿರುವ ಸಾಧ್ಯತೆಯು ಹೆಚ್ಚು. ಆದರೆ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿರುವ ಬಾವಿಗಳ ನೀರಿನಲ್ಲಿ ಲವಣದ ಪ್ರಮಾಣವು ಕಡಮೆ.

ವರ್ಷದ ಹಂಗಾಮು: ಬೇಸಿಗೆಯ ಸಮಯದಲ್ಲಿ ಬಾವಿಯ ನೀರಿನಲ್ಲಿರುವ ಲವಣಗಳ ಪ್ರಮಾಣವು ಅಧಿಕಗೊಂಡಿರುತ್ತದೆ. ಆದರೆ ಮಳೆಗಾಲದಲ್ಲಿ ಬಾವಿಯಲ್ಲಿ ನೀರು ಹೆಚ್ಚಾಗುವುದರಿಂದ ಲವಣದ ಅಂಶವು ತಗ್ಗುತ್ತದೆ.

ಬಾವಿಯ ಆಳ: ಬಾವಿಯ ಆಳಕ್ಕೂ ಅದರಲ್ಲಿರುವ ನೀರಿನ ಲವಣಾಂಶಕ್ಕೂ ನಿರ್ದಿಷ್ಟವಾದ ಸಂಬಂಧ ಜೋಡಿಸುವುದು ಕಷ್ಟ. ಕೆಲವು ಪ್ರದೇಶಗಳ ಕಡಿಮೆ ಆಳದ ಬಾವಿಯ ನೀರಿನಲ್ಲಿ ಅದೇ ಪ್ರದೇಶದ ಆಳವಾದ ಬಾವಿಯಲ್ಲಿಯ ನೀರಿಗಿಂತ ಕಡಿಮೆ ಲವಣಗಳಿರಬಹುದು. ಇಂತಹ ಪ್ರದೇಶದ ಕೊಳವೆ ಬಾವಿಗಳಿಗಿಂತ ತೆರೆದ ಬಾವಿಗಳೇ ಹೆಚ್ಚು ಪ್ರಯೋಜನಕಾರಿ. ಆದರೆ ಕೆಲವು ವಿಶಿಷ್ಟ ಪ್ರಸಂಗಗಳಲ್ಲಿ ಮೇಲಿನ ಲವಣಯುತ ನೀರು ಕಂಡುಬಂದರೆ ಆಳಕ್ಕೆ ಕೊಳವೆ ಬಾವಿಯನ್ನು ತೋಡಿದಾಗ ಲವಣರಹಿತ ನೀರು ದೊರೆಯಬಹುದು.

ನೀರಾವರಿ ಜಲದ ಗುಣಸುಧಾರಣೆಗಳು: ಉತ್ತಮ ನೀರು ದೊರೆಯದ ಸಂದರ್ಭಗಳಲ್ಲಿ ಮತ್ತು ಇನ್ನಿತರ ಕಾರಣಗಳಿಗಾಗಿ ಲವಣಯುತ ಮತ್ತು ಸೋಡಿಯಂನ ಪ್ರಾಬಲ್ಯವಿರುವ ಜಲವನ್ನೇ ನೀರಾವರಿಗೆ ಉಪಯೋಗಿಸುವ ಪ್ರಸಂಗಗಳು ಬರಬಹುದು. ಇಂತಹ ಸಂದರ್ಭಗಳಲ್ಲಿ ಲಭ್ಯವಿರುವ ನೀರಿನ ಗುಣಮಟ್ಟವನ್ನು ಉತ್ತಮಗೊಳಿಸಬೇಕಾದುದು ಅನಿವಾರ್ಯವಾಗುತ್ತದೆ. ಈ ಬಗ್ಗೆ ಕೆಳಗೆ ಹೇಳಿದ ಕೆಲವು ವಿಧಾನಗಳನ್ನು ಪರಿಗಣಿಸಬಹುದು.

 • ಸಮೀಪದಲ್ಲಿ ಲವಣರಹಿತ ಅಥವಾ ಕಡಿಮೆ ಲವಣವಿರುವ ನೀರು ಲಭ್ಯವಾಗುವಂತಿದ್ದರೆ, ಎರಡೂ ಬಗೆಯ ನೀರನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರ ಮಾಡಿ ಬಳಸಬಹುದು. ಲವಣಯುತ ನೀರಿರುವ ಪ್ರದೇಶದಲ್ಲಿ ನಾಲೆಯು ಹಾದುಹೋದರೆ ಇಂತಹ ಸಾಧ್ಯತೆಗಳು ನಿರ್ಮಾಣವಾಗುತ್ತವೆ.
 • ಪುಡಿ ಮಾಡಿದ ಜಿಪ್ಸಂನ್ನು ನೀರಿನೊಡನೆ ಮಿಶ್ರ ಮಾಡಬೇಕು. ಆದರೆ ಜಿಪ್ಸಂ ಅತಿ ಕಡಿಮೆ ಪ್ರಮಾಣದಲ್ಲಿ ನೀರಿನೊಡನೆ ಕರಗುತ್ತದೆ. ಆದ್ದರಿಂದ ಜಿಪ್ಸಂ ಅನ್ನು ಸಣ್ಣದಾಗಿ ಪುಡಿ (೦.೫ ಮಿ.ಮೀ. ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಪುಡಿ) ಮಾಡಬೇಕಲ್ಲದೇ, ಈ ದ್ರವ್ಯವನ್ನು ನಿರಂತರವಾಗಿ ನೀರಿನೊಡನೆ ಮಿಶ್ರ ಮಾಡಬಲ್ಲ ಯಾಂತ್ರಿಕ ಸಾಧನವನ್ನು ಬಳಸಿದರೆ ಮಿಶ್ರಣದ ಕಾರ್ಯವು ಹೆಚ್ಚು ಪರಿಣಾಮಕಾರಿಯಾಗಬಲ್ಲದು.

ರಾಜಸ್ಥಾನದಲ್ಲಿರುವ ಬಿಕಾನೇರ ಮತ್ತು ಉತ್ತರ ಪ್ರದೇಶದ ಋಷಿಕೇಶ ಪ್ರದೇಶಗಳ ಸುತ್ತಮುತ್ತ ಹಾಗೂ ಜಮ್ಮು ಕಾಶ್ಮೀರದಲ್ಲಿ ಜಿಪ್ಸಂ ನೈಸರ್ಗಿಕವಾಗಿ ದೊರೆಯುತ್ತದೆ. ಆದ್ದರಿಂದ ಅಲ್ಲಿ ಇದರ ಬೆಲೆಯು ಕಡಿಮೆ. ಅಂತಹ ಪ್ರದೇಶಗಳಲ್ಲಿ ಇದರ ಬಳಕೆಯೂ ಸುಲಭ.

ನೀರಾವರಿ ಜಲ ಮಾಪನ

ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವೆಷ್ಟು ಎಂದು ತಿಳಿದುಕೊಳ್ಳಲು ಭೂಮಿಗೆ ಎಷ್ಟು ನೀರನ್ನು ಕೊಡಬೇಕೆಂದು ಹೇಳಲು, ಬೆಳೆಗೆ ಎಷ್ಟು ನೀರು ದೊರೆಯಿತೆಂದು ತಿಳಿಯಲು ಮತ್ತು ಇಂತಹ ಹಲವು ಕಾರಣಗಳಿಗಾಗಿ ಜಲವನ್ನು ಅಳೆಯುವ ಕಾರ್ಯವು ಪ್ರಯೋಜನಕಾರಿ ಮತ್ತು ಅತ್ಯವಶ್ಯ.

ನಿಂತಿರುವ ನೀರಿನ ಅಳತೆ: ಸರೋವರ, ಕೆರೆ, ಹೊಂಡ, ತೊಟ್ಟಿ ಮುಂತಾದವುಗಳಲ್ಲಿ ಸಂಗ್ರಹವಾದ ನೀರಿನ ಪ್ರಮಾಣವನ್ನು ಘನಮಾಪನದಿಂದ ಕಂಡು ಹಿಡಿಯಬಹುದು.

ಘನಮಾನದ ಕೆಲವು ಅಳತೆಗಳು

i. ಒಂದು ಲೀಟರು  =  ೧ /  ೧೦೦ ಅಥವಾ ೦.೦೦೧ ಘನ ಮೀ.

ii. ಒಂದು ಮೀ. ಉದ್ದ, ಒಂದು ಮೀ. ಅಗಲ ಮತ್ತು ಒಂದು ಮೀ. ಆಳ ಇರುವ ಘನಮಾಪನವು ಒಂದು ಘನ ಮೀ. ಆಗುತ್ತದೆಯಾದ್ದರಿಂದ

೧ ಘನ ಮೀ.  –  ೧೦೦೦ ಲೀಟರುಗಳು

iii. ಒಂದು ಹೆಕ್ಟೇರು ಸೆಂ.ಮೀ. ಅಂದರೆ, ಒಂದು ಹೆಕ್ಟೇರು ಪ್ರದೇಶವನ್ನು (೧೦೦ ಮೀ x ೧೦೦ ಮೀ.  =  ೧೦,೧೦೦೦ ಚೌರಸು ಮೀ.) ಒಂದು ಸೆಂ.ಮೀ. ಎತ್ತರಕ್ಕೆ ಆವರಿಸುವ ಘನ ಪ್ರದೇಶ. ಆದ್ದರಿಂದ,

೧ ಹೆಕ್ಟೇರು ಸೆಂ.ಮೀ.  =  ೧೦೦ ಘನ ಮೀ.ಗಳು
ಘನ ಮೀ.  =  ೧೦೦೦೦ ಲೀಟರುಗಳು

iv. ಒಂದು ಹೆಕ್ಟೇರು ಮೀ. ಅಂದರೆ, ಒಂದು ಹೆಕ್ಟೇರು ಪ್ರದೇಶದಲ್ಲಿ ಒಂದು ಮೀ. ಎತ್ತರಕ್ಕೆ ಆವರಿಸುವ ಘನ ಪ್ರದೇಶ. ಆದ್ದರಿಂದ,

೧ ಹೆಕ್ಟೇರು ಮೀ  =  ೧೦,೦೦೦ ಘನ ಮೀ.ಗಳು =  ದಶಲಕ್ಷ ಲೀಟರುಗಳು

ನೀರನ್ನು ಅಳೆಯುವ ಸಾಧನಗಳು: ಹರಿದು ಹೊರಬರುವ ನೀರಿನ ಪ್ರಮಾಣವನ್ನು ಅಳೆಯಲು ಹಲವು ಸಾಧನಗಳಿವೆ. ಇವುಗಳ ಸಂಕ್ಷಿಪ್ತ ವರ್ಣನೆಯನ್ನು ಮಾಡುವ ಮೊದಲು ಹರಿದು ಬರುವ ನೀರಿನ ಪ್ರಮಾಣಕ್ಕೆ ಸಂಬಂಧಿಸಿದ ಮೂಲ ತತ್ವಗಳನ್ನು ಅರಿತುಕೊಳ್ಳುವುದು ಪ್ರಯೋಜನಕಾರಿ.

i. ಕಿಂಡಿಯಿಂದ (Orifices) ಹೊರಬರುವ ನೀರಿನ ಪ್ರಮಾಣ: ಕಿಂಡಿಯಿಂದ ಹರಿದು ಹೊರ ಬರುವ ನೀರಿನ ಪ್ರಮಾಣಕ್ಕೂ ಕಿಂಡಿಯ ಕ್ಷೇತ್ರ ಮತ್ತು ಹರಿಯುವ ನೀರಿನ ವೇಗಕ್ಕೂ ನೇರ ಸಂಬಂಧವಿದೆ. ಕಿಂಡಿಯಿಂದ ಹೊರ ಹರಿಯುವ ನೀರಿನ ದೃಶ್ಯವನ್ನು ಚಿತ್ರ ೧೦ರಲ್ಲಿ ತೋರಿಸಿದೆ.

ಕಿಂಡಿಯಿಂದ ಹೊರ ಬರುವ ನೀರಿನ ಪ್ರಮಾಣವನ್ನು ಕೆಳಗಿನ ಸಮೀಕರಣದ ಸಹಾಯದಿಂದ ಕಂಡುಕೊಳ್ಳಬಹುದು.


ನೀರಿನಲ್ಲಿ ಮುಳುಗಿರುವ ಕಿಂಡಿಗಳು (Submerged Orifices))

ನೀರಿನಲ್ಲಿ ಮುಳುಗಿರುವ ಕಿಂಡಿಯ ಸಮ್ಮುಖ ದೃಶ್ಯವನ್ನು ಚಿತ್ರ ೧೧ರಲ್ಲಿ ಮತ್ತು ಕಿಂಡಿಯ ಪಾರ್ಶ್ವ ದೃಶ್ಯವನ್ನು ಚಿತ್ರ ೧೨ರಲ್ಲಿ ತೋರಿಸಿದೆ.


ನೀರಿನಲ್ಲಿ ಮುಳುಗಿರುವ ಕಿಂಡಿಯಿಂದ ಹೊರಬರುವ ನೀರಿನ ಮುಖದ ಕ್ಷೇತ್ರವನ್ನು, ಕಿಂಡಿಯ ಉದ್ದ ಮತ್ತು ಎತ್ತರ ಇವುಗಳ ಗುಣಾಕಾರದಿಂದ ಗೊತ್ತುಪಡಿಸಬೇಕು. ಅದರಂತೆಯೇ ಹರಿಯುವ ನೀರಿನ ಮೇಲ್ಹರಿಯ ಪಾತಳಿಯ ಮತ್ತು ಕೆಳಹರಿವಿನ ಪಾತಳಿಯ ಅಂತರವನ್ನು (ಮೇಲಿನ ಚಿತ್ರಗಳನ್ನು ನೋಡಿರಿ) ಗೊತ್ತುಪಡಿಸಬೇಕು. ಕೆಳಗಿನ ಸಮೀಕರಣವನ್ನು ಬಳಸಿ, ಕಿಂಡಿಯಿಂದ ಹೊರಬರುವ ನೀರಿನ ಪ್ರಮಾಣವನ್ನು ಲೆಕ್ಕ ಮಾಡಬಹುದು.

ii. ತೂಬುಗಳು (ಕೋಡಿಗಳು) (Weirs): ನೀರು ಹರಿಯುವ ಕಾಲುವೆಗೆ ಅಡ್ಡಲಾಗಿ ಕಟ್ಟೆಯನ್ನು ರಚಿಸಿ, ಅದರಲ್ಲಿ ನಿರ್ದಿಷ್ಟ ಅಳತೆಯ ಛೇದವನ್ನು ಮಾಡಲಾಗಿರುತ್ತದೆ. ಈ ಭಾಗಗಳು ಮೂರು ಪ್ರಕಾರಗಳಾಗಿರಬಹುದು. ಅವುಗಳ ವಿವರಗಳು ಕೆಳಗಿನಂತಿವೆ.

ಚೌಕೋನಾಕಾರದ ಛೇದ (Rectangular Weir): ಇದು ಎಲ್ಲಕ್ಕಿಂತ ಹಳೆಯ ಸಾಧನವೆನ್ನಬಹುದು. ಈ ಸಾಧನವನ್ನು ಹರಿಯುವ ನೀರಿಗೆ ಲಂಬವಾಗಿರುವಂತೆ ಸ್ಥಾಪಿಸಬೇಕು. ಇದರ ಹಿಂಭಾಗದಲ್ಲಿರುವ ಕಾಲುವೆಯು ಸಾಕಷ್ಟು ದೂರದವರೆಗೆ ಸರಳ ರೇಖೆಯಲ್ಲಿರಬೇಕು. ತೂಬನ್ನು ಸಮೀಪಿಸಿದಾಗ ಹರಿಯುತ್ತಿರುವ ನೀರಿನ ವೇಗವು ಪ್ರತಿ ಸೆಕೆಂಡಿಗೆ ೧೫. ಸೆಂ.ಮೀ.ಗಿಂತ ಅಧಿಕವಿರದಂತೆ ವ್ಯವಸ್ಥೆ ಮಾಡಬೇಕು. ಅದರಂತೆಯೇ, ತೂಬಿನ ಮೇಲ್ಭಾಗದಲ್ಲಿರುವ ಕಾಲುವೆಯಲ್ಲಿ ರೇವೆಯು ಸಂಗ್ರಹವಾಗದಂತೆಯೂ ಎಚ್ಚರ ವಹಿಸಬೇಕು. ನೀರಿನ ಎತ್ತರವನ್ನು ಅಳೆಯಲು ಕಾಲುವೆಯ ಒಂದು ಬದಿಗೆ ತೂಬಿನಿಂದ ಮೇಲ್ಬದಿಯಲ್ಲಿ ಅಳತೆಕೋಲನ್ನು ನಿಲ್ಲಿಸಬೇಕು.

ವಿಷಮಭುಜ ಚೌಕೋನಾಕಾರದ ತೂಬು ಅಥವಾ ಸಿಪೊಲೆಟ್ಟಿ ತೂಬು (Trapezodial or Cipolletti Weir) : ಇಟಲಿ ದೇಶದ ಇಂಜಿನಿಯರಾದ ಸಿಪೊಲೆಟ್ಟಿ ಎಂಬುವರು ಈ ತೂಬನ್ನು ರಚಿಸಿದ್ದರಿಂದ ಈ ಸಾಧನಕ್ಕೆ ಅವರ ಹೆಸರನ್ನಿಡಲಾಗಿದೆ. ಚೌಕೋನ ಆಕಾರದ ತೂಬಿನಲ್ಲಿರುವ ಅನುಕೂಲತೆಗಳೇ ಇದರಲ್ಲಿಯೂ ಇವೆ. ಆದರೆ ಈ ಪ್ರಕಾರದ ತೂಬಿನ ನಿರ್ಮಾಣವು ಸ್ವಲ್ಪ ಕಷ್ಟದಾಯಕವಾಗಿದೆ.

ತ್ರಿಕೋನಾಕಾರದ ತೂಬು ಅಥವಾ ೯೦  ಅಥವಾ V ಆಕಾರದ ತೂಬು (Triangular or ‘v’ notch Weir): ಅತಿ ನಿಧಾನವಾಗಿ ಹರಿಯುವ ನೀರಿನಿಂದ ಆರಂಭಿಸಿ ಪ್ರತಿ ಸೆಕೆಂಡಿಗೆ ೦.೭೫ ಮೀ. ವೇಗದಿಂದ ಹರಿಯುವ ನೀರಿನ ಪ್ರಮಾಣವನ್ನು ಈ ಸಾಧನದಿಂದ ತಪ್ಪಾಗದಂತೆ ಅಳೆಯಬಹುದು. ಆದರೆ ನೀರಿ ವೇಗವು ಪ್ರತಿ ಸೆಕೆಂಡಿಗೆ ೧.೨೦ ಮೀ. ದಾಟಿದರೆ ಈ ಸಾಧನವನ್ನು ಉಪಯೋಗಿಸಬಾರದು. ಈ ತೂಬಿನ ನಿರ್ಮಾಣವು ಸುಲಭ. ಇದರ ಭುಜಗಳು ಒಂದಕ್ಕೊಂದು ೪೫ ಕೋನಗಳಾಗುವಂತೆ ನೀರಿನ ಕಾಲುವೆಯಲ್ಲಿ ಸ್ಥಾಪಿಸಬೇಕು. ಈ ತೂಬನ್ನು ಬೇಕಾದ ಕಡೆಗೆ ಸುಲಭವಾಗಿ ಸಾಗಿಸಬಹುದು.

iii. ಪಾರ್ಶಲ್ ಫ್ಲೂಮ್‌(Parshall Flume): ಪಾರ್ಶಲ್ ಎಂಬುವರು ಈ ಸಾಧನವನ್ನು ೧೯೫೦ರಲ್ಲಿ ರಚಿಸಿದರು. ಇದರಲ್ಲಿ ಕೇಂದ್ರದೆಡೆಗೆ ಕಿರಿದಾಗುತ್ತ ಸಾಗುವ ವಿಭಾಗ, ಕಂಠದ ವಿಭಾಗ ಮತ್ತು ಕೇಂದ್ರದಿಂದ ವಿಶಾಲವಾಗುತ್ತ ಹೊರ ಹೋಗುವ ವಿಭಾಗ ಹೀಗೆ ಮೂರು ಭಾಗಗಳಿವೆ. ಕಂಠ ಎರಡೂ ಪಾರ್ಶ್ವಗಳ ಒಂದಕ್ಕೊಂದು ಸಮಾಂತರವಾಗಿರುತ್ತವೆ.

ಈ ಸಾಧನವು ನೀರಿನ ಸರಿಯಾದ ವೇಗವನ್ನು ಅಳೆಯಬಲ್ಲದೆಂದು ಹೇಳಬಹುದು. (ಶೇ. ೫ರ ಮಿತಿಯೊಳಗೆ) ಹರಿಯುವ ನೀರಿನ ವೇಗದಷ್ಟಿದ್ದರೂ ಈ ಸಾಧನವನ್ನು ಉಪಯೋಗಿಸಬಹುದು. ನೀರಿನಲ್ಲಿರುವ ರೇವೆಯು ಒಳಗೆ ಸಂಗ್ರಹವಾಗುವುದಿಲ್ಲ.

ವಿವಿಧ ಆಕಾರದ ಕಂಠವುಳ್ಳ ಪಾರ್ಶಲ್ ಫ್ಲೂಮುಗಳನ್ನು ನಿರ್ಮಿಸಿಕೊಳ್ಳಬಹುದು. ಸಣ್ಣ ಫ್ಲೂಮುಗಳನ್ನು ಧಾತುವಿನ ದಪ್ಪ ತಗಡಿನಿಂದ ನಿರ್ಮಿಸಲಾಗುತ್ತದೆ. ದೊಡ್ಡ ಆಕಾರದವುಗಳನ್ನು ಸಿಮೆಂಟ್ ಕಾಂಕ್ರೀಟಿನಿಂದ ನಿರ್ಮಿಸುವುದು ವಾಡಿಕೆ.

iv. ಕಂಠರಹಿತ ಫ್ಲೂಮ್ (Cut Throat Flume): ಸೋಗರ್ಬೋ ಮತ್ತು ಅವರ ಸಹ ಸಂಶೋಧಕರು (Skogerboe et al) ಈ ಸಾಧನವನ್ನು ೧೯೬೭ ರಲ್ಲಿ ತಯಾರಿಸಿದರು. ಕಂಠವು ಇದರಲ್ಲಿ ಇರದೇ ಇದ್ದುದರಿಂದ ಈ ಸಾಧನಕ್ಕೆ ಕಂಠ ರಹಿತ ಫ್ಲೂಮ್ ಎಂಬ ಹೆಸರು ಬಂದಿದೆ. ಪಾರ್ಶಲ್ ಫ್ಲೂಮಿನಲ್ಲಿ ನೀರು ಹರಿಯುವ ತಳಭಾಗವು ಇಳಿಜಾರಾಗಿರುತ್ತದೆ. ಆದರೆ ಕಂಠರಹಿತ ಫ್ಲೂಮ್‌ನಲ್ಲಿ ಈ ಭಾಗವು ಸಮಪಾತಳಿಯಲ್ಲಿರುತ್ತದೆ. ಆದ್ದರಿಂದ ಈ ಸಾಧನದ ರಚನೆಯು ಸುಲಭ.

v. ಘನಮಾನ ಪದ್ಧತಿ (Volumetric Method): ಹರಿದು ಬರುವ ನೀರನ್ನು ಬಾಂಡ್ಲಿ ಇಲ್ಲವೇ ಬಾನಿಯಲ್ಲಿ ನಿರ್ದಿಷ್ಟ ಸಮಯದವರೆಗೆ (ಉದಾಹರಣೆಗೆ ೫ ಅಥವಾ ೧೦ ಸೆಕೆಂಡುಗಳವರೆಗೆ) ಸಂಗ್ರಹಿಸಿ, ಸಂಗ್ರಹಗೊಂಡ ನೀರನ್ನು ಅಳತೆ ಮಾಡಿ, ಪ್ರತಿ ಸೆಕೆಂಡಿಗೆ ಹರಿದು ಬರುವ ನೀರಿನ ಪ್ರಮಾಣವನ್ನು ಕಂಡುಹಿಡಿಯಬಹುದು. ಸರಿಯಾದ ವೇಳೆಯನ್ನು ತಿಳಿಯಲು ಸ್ಟಾಪ್‌ವಾಚನ್ನು (Stop Watch) ಬಳಸಬಹುದು.

ನೀರು ಹರಿದು ಬರುವ ವೇಗ (ಪ್ರತಿ ಸೆಕೆಂಡಿಗೆ ಲೀಟರುಗಳು)

=

ಸಂಗ್ರಹಗೊಂಡ ನೀರು (ಲೀಟರುಗಳು)

ಸಂಗ್ರಹಕ್ಕೆ ತೆಗೆದುಕೊಂಡ ಸಮಯ (ಸೆಕೆಂಡುಗಳಲ್ಲಿ)

ನೀರನ್ನೆತ್ತುವ ಪಂಪುಗಳು ಅಥವಾ ಇತರ ಸಾಧನಗಳಿಂದ ಹೊರ ಬರುವ ನೀರಿನ ಪ್ರಮಾಣವನ್ನು ತಿಳಿಯಲು ಈ ಪದ್ಧತಿಯು ಅನುಕೂಲಕರವಾಗಿದೆ.

vi. ಜಲಮಾಪಕ ಸಾಧನಗಳು ಅಥವಾ ಪ್ರವಾಹ ಮಾಪಕಗಳು (Current meters): ಹರಿದು ಬರುವ ನೀರನ್ನು ಜಲಮಾಪಕ ಸಾಧನಗಳು ಲೀಟರು ಅಥವಾ ಗ್ಯಾಲನ್ನುಗಳಲ್ಲಿ ನೇರವಾಗಿ ತೋರಿಸುತ್ತವೆ. ಇವು, ಆಕಾರದಲ್ಲಿ ಸಣ್ಣ ಮತ್ತು ವಿಶ್ವಾಸಾರ್ಹ ಸಾಧನಗಳನ್ನೆಬಹುದು. ಈ ಸಾಧನಗಳೊಳಗೆ ಅಲಗು(Blade)ಗಳನ್ನು ಜೋಡಿಸಲಾಗಿರುತ್ತದೆ. ಇವು ಹರಿಯುವ ನೀರಿನ ವೇಗಕ್ಕೆ ಅನುಗುಣವಾಗಿ ತಿರುಗುತ್ತವೆ ಮತ್ತು ಸುತ್ತುವ ವೇಗವನ್ನು ಈ ಸಾಧನವು ಪರಿವರ್ತಿಸಿ ಲೀಟರುಗಳಲ್ಲಿ ತೋರಿಸುತ್ತದೆ.

vii. ನೀರಿನ ಪ್ರಮಾಣವನ್ನು ಕಂಡುಹಿಡಿಯುವ ಸುಲಭೋಪಾಯ: ಇನ್ನೊಂದು ರೀತಿಯಿಂದಲೂ ಹರಿದು ಬರುವ ನೀರಿನ ಪ್ರಮಾಣವನ್ನು ಅಳೆಯಬಹುದು. ಇದಕ್ಕಾಗಿ ಮುಂದಿನ ಸಮೀಕರಣವನ್ನು ಉಪಯೋಗಿಸಬೇಕು.

ಪ್ರತಿ ಸೆಕೆಂಡಿಗೆ ಹೊರ ಬರುವ ನೀರಿನ ಪ್ರಮಾಣ(ಘನ ಮೀ.ಗಳು)

=

ನೀರು ಹರಿಯುತ್ತಿರುವ ಕೊಳವೆಯ ಅಥವಾ ಕಾಲುವೆಯ ಅಡ್ಡಭಾಗದ (Cross sectional) ಕ್ಷೇತ್ರ (ಚ.ಮೀ.ಗಳು)

x

ಪ್ರತಿ ಸೆಕೆಂಡಿಗೆ ಹರಿಯುವ ನೀರಿನ ವೇಗ(ಮೀ.ಗಳು)

 • ನೀರು ಹರಿದು ಬರುವ ಕಾಲುವೆಯ ಅಡ್ಡಭಾಗದ ಪ್ರದೇಶವನ್ನು ಸುಲಭವಾಗಿ ಕಂಡುಕೊಳ್ಳಬಹುದು.
 • ಹರಿಯುವ ನೀರಿನ ವೇಗವನ್ನು ತೆಪ್ಪ (Float)ವನ್ನು ಉಪಯೋಗಿಸಿ ಕೆಳಗೆ ವಿವರಿಸಿದ ರೀತಿಯಲ್ಲಿ ಕಂಡು ಹಿಡಿಯಬಹುದು.

ಉದ್ದ “ಕತ್ತಿಗೆ” ಇರುವ ಒಂದು ಬಾಟಲಿಯೊಳಗೆ ಅರ್ಧದಷ್ಟು ನೀರನ್ನು ತುಂಬಿ, ಬಾಟ್ಲಿಯ ಮುಚ್ಚಳವನ್ನು ಭದ್ರಪಡಿಸಬೇಕು. ಬಾಟ್ಲಿಯನ್ನು ನೀರಿನ ಮೇಲೆ ಇಟ್ಟರೆ ಅದು ತೇಲುತ್ತದೆ. ಸರಳ ರೇಖೆಯಲ್ಲಿರುವ ಸುಮಾರು ೩೦ ಮೀ.ನಷ್ಟು ಉದ್ದದ ಕಾಲುವೆಯ ಭಾಗವನ್ನು ಆರಿಸಿಕೊಂಡು ಆರಂಭದಲ್ಲಿ ಮತ್ತು ಕೊನೆಯಲ್ಲಿ ಒಂದೊಂದು ದಾರವನ್ನು ಗುರುತಿಗಾಗಿ ಕಟ್ಟಬೇಕು. ಇವೆರಡು ದಾರಗಳ ಮಧ್ಯದ ಅಂತರವನ್ನು ನಿಖರವಾಗಿ ಅಳೆಯಬೇಕು.

ಈಗ ಬಾಟ್ಲಿಯನ್ನು ಆರಂಭದ ದಾರಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ನಿಧಾನವಾಗಿ ತೇಲು ಬಿಡಬೇಕು. ಬಾಟ್ಲಿಯು ದಾರವನ್ನು ಮುಟ್ಟಿದೊಡನೆ ಸಮಯವನ್ನು ಗುರುತು ಹಾಕಿಕೊಳ್ಳಬೇಕು. ಅದರಂತೆಯೇ ಬಾಟ್ಲಿಯು ದಾರವನ್ನು ಮುಟ್ಟಿದೊಡನೆಯೇ ಪುನಃ ಸಮಯವನ್ನು ನೋಡಬೇಕು. ಎರಡು ದಾರಗಳ ಮಧ್ಯದ ಅಂತರ ಮತ್ತು ಈ ಅಂತರವನ್ನು ಕ್ರಮಿಸಲು ಬೇಕಾದ ಸಮಯ ಇವುಗಳಿಂದ ತೆಪ್ಪದ ವೇಗವನ್ನು ಲೆಕ್ಕ ಮಾಡಬೇಕು. ತೆಪ್ಪದ ವೇಗವೇ ನೀರಿನ ಪ್ರವಾಹದ ವೇಗವೆಂದು ಪರಿಗಣಿಸಬೇಕು.

ಮೇಲೆ ವಿವರಿಸಿದ ಬಾಟ್ಲಿಯ ಬದಲು ಮರದ ತುಂಡನ್ನು ಬಳಸಬಹುದು.

viii. ಗುರುತಿಸಬಲ್ಲ ವಸ್ತುಗಳ ಸಹಾಯದಿಂದ ಹರಿಯುವ ನೀರಿನ ವೇಗ (Tracer Technique): ಈ ಪದ್ಧತಿಯು ವಿದೇಶಗಳಲ್ಲಿ ಬಳಕೆಯಲ್ಲಿದೆ. ನಮ್ಮದೇಶದಲ್ಲಿ ಅಷ್ಟಾಗಿ ಪ್ರಚಲಿತವಾಗಿಲ್ಲ. ಈ ಪದ್ಧತಿಯ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿದೆ.

ಈ ಪದ್ಧತಿಯಲ್ಲಿ ಎರಡು ವಿಧಾನಗಳಿಂದ ಹರಿಯುವ ನೀರಿನ ವೇಗವನ್ನು ಕಂಡು ಹಿಡಿಯಬಹುದು.

ವಿಧಾನ : ಸ್ವಲ್ಪ ನೀರಿನಲ್ಲಿ ಕರಗಬಹುದಾದಷ್ಟು ಲವಣವನ್ನಾಗಲೀ ಬಣ್ಣವನ್ನಾಗಲೀ ಮಿಶ್ರಮಾಡಿ ದ್ರಾವಣವನ್ನು ಸಿದ್ಧಪಡಿಸಬೇಕು. ಈ ದ್ರಾವಣವನ್ನು ಸಣ್ಣ ಬಾಟ್ಲಿಯಲ್ಲಿ ಅಥವಾ ಕೊಳವೆಯಲ್ಲಿ ತುಂಬಿ, ದ್ರಾವಣವು ಕಾಲುವೆಯ ನೀರಿನಲ್ಲಿ ನಿರ್ದಿಷ್ಟ ವೇಗದಲ್ಲಿ ತೊಟ್ಟಿಕ್ಕುವಂತೆ ವ್ಯವಸ್ಥೆ ಮಾಡಬೇಕು. ದ್ರಾವಣವು ಬೀಳುವ ಸ್ಥಳದಲ್ಲಿಯ ಲವಣದ ಪ್ರಮಾಣವನ್ನು ತಿಳಿಯಬೇಕು. ಈ ಸ್ಥಳದಿಂದ ನಿಶ್ಚಿತ ಅಂತರದಲ್ಲಿ ಈ ಲವಣದ ಪ್ರಮಾಣವನ್ನು ಕಂಡು ಹಿಡಿಯಬೇಕು. ಈ ಪ್ರಮಾಣವು ಪ್ರಾರಂಭದ ಸ್ಥಳದಲ್ಲಿರುವ ಲವಣದ ಪ್ರಮಾಣಕ್ಕಿಂತ ಸಹಜವಾಗಿಯೇ ಕಡಿಮೆ ಇರುತ್ತದೆ. ಪ್ರತಿ ಸೆಕೆಂಡಿಗೆ ನೀರಿನ ವೇಗವನ್ನು ಮೇಲಿನ ವಿವರಗಳಿಂದ ಕಂಡು ಹಿಡಿಯಬೇಕು.

ಈ ವಿಧಾನದಲ್ಲಿ ಅಡಿಗೆ ಉಪ್ಪನ್ನು (ಸೋಡಿಯಂ ಕ್ಲೋರೈಡ್) ಬಳಸಬಹುದು. ಈ ಲವಣದ ಪ್ರಮಾಣವು ಆರಂಭದಲ್ಲಿ ಮತ್ತು ಕೊನೆಯಲ್ಲಿ ಎಷ್ಟಿದೆಯೆಂಬುದನ್ನು ವಿದ್ಯುತ್ ವಹನ ಪದ್ಧತಿಯಿಂದ ತಿಳಿಯಬಹುದು. ಉಪ್ಪಿನ ಬದಲು ಸೋಡಿಯಂ ಡೈಕ್ರೋಮೇಟನ್ನು ಉಪಯೋಗಿಸಹುದು. ಈ ರಾಸಾಯನಿಕದ ಪ್ರಮಾಣವನ್ನು ರಾಸಾಯನಿಕ ವಿಶ್ಲೇಷಣೆಯಿಂದ ಇಲ್ಲವೇ ಫ್ಲೇಮ್ ಪೋಟೋ ಮೀಟರ್‌ನ (Flame Photometer) ಸಹಾಯದಿಂದ ತಿಳಿದುಕೊಳ್ಳಬಹುದು ಇಲ್ಲವೇ,

ನೀರಿನಲ್ಲಿ ಕರಗಬಲ್ಲ ಕೆಲವು ಬಣ್ಣಗಳನ್ನು ಉಪಯೋಗಿಸಬಹುದು. ಇವುಗಳ ಪ್ರಮಾಣವನ್ನು ಕೈಲೊರಿ ಮೀಟರಿನ ಸಹಾಯದಿಂದ ಕಂಡುಕೊಳ್ಳಬಹುದು.

ವಿಧಾನ : ಮೇಲಿನ ವಿಧಾನದಲ್ಲಿ ಸೂಚಿಸಿದಂತೆ ಲವಣಗಳ ಅಥವಾ ಬಣ್ಣಗಳ ಬದಲು ವಿಕಿರಣ ಐಸೋಟೋಪ್ (Radio active isotopes)ಗಳನ್ನು ಉಪಯೋಗಿಸಿಯೂ ಹರಿಯುತ್ತಿರುವ ನೀರಿನ ವೇಗವನ್ನು ನಿರ್ಧರಿಸಬಹುದು. ನಿರ್ದಿಷ್ಟ ಪ್ರಮಾಣದ ವಿಕಿರಣ ಐಸೋಟೋಪನ್ನು, ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಆರಿಸಿದ ಸ್ಥಳದಲ್ಲಿ ಸೇರಿಸಿ ಅಲ್ಲಿಯ ವಿಕಿರಣದ ಪ್ರಮಾಣವನ್ನು ಗೊತ್ತುಪಡಿಸಬೇಕು. ಅಲ್ಲಿಂದ ಕೆಳಭಾಗದಲ್ಲಿರುವ ನಿರ್ದಿಷ್ಟ ಅಂತರದಲ್ಲಿ ಅದೇ ಅಯ್ಸೋಟೋಪಿನ ವಿಕಿರಣ ಸಾಮರ್ಥ್ಯವನ್ನು ಅಳೆಯಬೇಕು. ವಿಕಿರಣ ಸಾಮರ್ಥ್ಯವನ್ನು ಅಂತರದ ಮೇಲಿಂದ ನೀರು ಚಲಿಸುವ ವೇಗವನ್ನು ಲೆಕ್ಕ ಮಾಡಬಹುದು.

ವಿಕಿರಣ ಐಸೋಟೋಪ್‌ನ ಸಂಪರ್ಕದಿಂದ ಮನುಷ್ಯರಿಗೆ ಅಪಾಯವುಂಟಾಗುವುದರಿಂದ ತಜ್ಞರೇ ಈ ವಿಧಾನವನ್ನು ಅನುಕರಿಸಬೇಕಾಗುತ್ತದೆ. ಈ ವಿಧಾನದ ಬಗ್ಗೆ ಹೆಚ್ಚಿನ ಅಧ್ಯಯನಗಳು ಅವಶ್ಯ.