) ಹನಿ ನೀರಾವರಿಗೆ ಪ್ರಶಸ್ತವೆನಿಸುವ ಸನ್ನಿವೇಶಗಳು : ಹನಿ ನೀರಾವರಿಯನ್ನು ಹಲವಾರು ಸನ್ನಿವೇಶಗಳಲ್ಲಿ ಅಳವಡಿಸಲು ಸಾಧ್ಯವಿದೆಯಾದರೂ, ಕೆಲವು ಸನ್ನಿವೇಶಗಳಲ್ಲಿ, ಈ ಪದ್ಧತಿಯು ಹೆಚ್ಚು ಪ್ರಶಸ್ತವೆನಿಸುತ್ತದೆ. ಅಂಥ ಪ್ರಮುಖ ಸನ್ನಿವೇಶಗಳು ಕೆಳಗಿನಂತಿವೆ.

 • ಅಧಿಕ ಲಾಭವನ್ನು ತರುವ, ಒಂದು ಗಿಡ ಅಥವಾ ಮರದಿಂದ ಇನ್ನೊಂದಕ್ಕೆ ಹೆಚ್ಚು ಅಂತರವಿರುವ ವಾಣಿಜ್ಯ ಬೆಳೆಗಳು, ಉದಾಹರಣೆಗೆ, ಅಡಿಕೆ, ತೆಂಗು, ಸಪೋಟಾ, ಕಿತ್ತಳೆ, ಮೋಸಂಬಿ, ಲಿಂಬೆ ಇತ್ಯಾದಿ.
 • ಅಲ್ಪ ಕಾಲದವರೆಗೆ ನೀರಿನ ಕೊರತೆಯಾದರೂ, ಬೆಳವಣಿಗೆಯು ಕುಂಠಿತಗೊಂಡು, ಉತ್ಪತ್ತಿಯ ಮೇಲೆ ದುಷ್ಪರಿಣಾಮವುಂಟಾಗುವ ಬೆಳೆಗಳು. ಉದಾಹರಣೆಗೆ, ವೀಳ್ಯದ ಎಲೆ, ಹೂವುಗಳು, ಸೊಪ್ಪಿನ ತರಕಾರಿಗಳು ಇತ್ಯಾದಿ.
 • ಹೆಚ್ಚು ಆರೈಕೆಯು ಬೇಕಾಗುವ ಸಸಿಗಳು, ಕುಂಡಗಳಲ್ಲಿ ಬೆಳೆಯುವ ಸಸ್ಯಗಳು.
 • ಎಲೆ ಇಲ್ಲವೇ ಕಾಂಡಗಳಿಗಾಗಿಯೇ ಬೆಳೆಯಲಾಗುವ ಬೆಳೆಗಳು, ಉದಾಹರಣೆಗೆ, ಚಹ, ಹಿಪ್ಪು ನೇರಳೆ (ಕೋರಿ ಗಿಡ), ಮೇವಿನ ಬೆಳೆಗಳು, ಕಬ್ಬು ಇತ್ಯಾದಿ.
 • ನೀರಿನ ಕೊರತೆಯಿರುವ ಪ್ರಸಂಗದಲ್ಲಿ ಅಥವಾ ನೀರಿನ ಬೆಲೆಯು ಅಧಿಕ ಇರುವಲ್ಲಿ, ಈ ಪದ್ಧತಿಯನ್ನು ಅಳವಡಿಸಿಕೊಂಡರೆ, ಕಡಮೆ ನೀರಿನಲ್ಲಿಯೇ ಹೆಚ್ಚು ಪ್ರದೇಶಕ್ಕೆ ನೀರನ್ನು ಪೂರೈಸಿ, ಖರ್ಚನ್ನು ಕಡಮೆ ಮಾಡಬಹುದು.
 • ಭೂಮಿಯು ಇಳಿಜಾರು ಅಧಿಕವಿರುವಲ್ಲಿ ಅಥವಾ ತಗ್ಗು ದಿಣ್ಣೆಗಳಿರುವ ಭೂ ಪ್ರದೇಶದಲ್ಲಿ ಇಲ್ಲವೇ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವು ಕಡಮೆ ಇರುವ, ಕಡಮೆ ಆಳದ ಮರಳಿನ ಪ್ರಾಬಲ್ಯವಿರುವ ಮಣ್ಣುಗಳು ಇರುವಲ್ಲಿ, ಹನಿ ನೀರಾವರಿ ಪದ್ಧತಿಯು ಹೆಚ್ಚು ಪ್ರಶಸ್ತವೆನ್ನಬಹುದು.
 • ಕೂಲಿ ಆಳುಗಳ ಕೊರತೆಯಿರುವಲ್ಲಿ ಮತ್ತು ವಿದ್ಯುತ್ತಿನ ಬೆಲೆಯು ಅಧಿಕವಿರುವಲ್ಲಿ, ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ.
 • ಲವಣಯುತ ನೀರನ್ನು ಬಳಸುವ ಅನಿವಾರ್ಯತೆಯು ಇರುವಲ್ಲಿ ಇನ್ನಿತರ ನೀರಾವರಿ ಪದ್ದತಿಗಳಿಗಿಂತ, ಹನಿ ನೀರಾವರಿ ಪದ್ಧತಿಯು ಪ್ರಶಸ್ತ.
 • ಕಳೆಗಳ ಪ್ರಾಬಲ್ಯವಿರುವಲ್ಲಿ, ಈ ಪದ್ಧತಿಯು ತುಲನಾತ್ಮಕವಾಗಿ ಹೆಚ್ಚು ಅನುಕೂಲವೆನ್ನಬಹುದು.

) ಹನಿ ನೀರಾವರಿ ವ್ಯವಸ್ಥೆಯ ಘಟಕಗಳು:  ಹನಿ ನೀರಾವರಿ ವ್ಯವಸ್ಥೆಯ ವಿವಿಧ ಘಟಕಗಳನ್ನು ಕೆಳಗಿನಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು. (ಚಿತ್ರ : ೨೫)

i. ನೀರು ಸಂಗ್ರಹ ಮತ್ತು ಶುದ್ಧೀಕರಣ ವಿಭಾಗ :

 • ಬಾವಿಯಿಂದ ನೀರನ್ನು ಮೇಲೆತ್ತುವ ಪಂಪು (ಸೆಂಟ್ರಿಫ್ಯೂಗಲ್‌/ಜೆಟ್/ಆಳಬಾವಿಯ ಮುಳುಗಿರುವ ಪಂಪುಗಳು) ಅಥವಾ ನೀರನ್ನು ಸಂಗ್ರಹಿಸಿಡಬಲ್ಲ ತೊಟ್ಟಿ(ಕಾಂಕ್ರೀಟ್ ತೊಟ್ಟಿ/ಇಟ್ಟಿಗೆ ಇಲ್ಲವೇ ಕಲ್ಲುಗಳಿಂದ ನಿರ್ಮಿಸಿದ ತೊಟ್ಟಿ/ಕಬ್ಬಿಣ ಇಲ್ಲವೇ ಪ್ಲಾಸ್ಟಿಕ್ ತೊಟ್ಟಿ)
 • ನೀರನ್ನು ಶುದ್ಧಗೊಳಿಸುವ ಸಾಧನಗಳು (ನೀರನ್ನು ತಿಳಿಗೊಳಿಸುವ ತೊಟ್ಟಿಗಳು ಮರಳನ್ನು ಬೇರ್ಪಡಿಸುವ ಸಾಧನೆಗಳು, ಸೈನ್‌ಲೆಸ್‌ಸ್ಟೀಲ್‌/ನೈಲಾನ್‌/ಪಾಲಿಸ್ಟರ‍್ನಿಂದ ತಯಾರಿಸಿದ ಸೋಸುವ ಜಾಲರಿಗಳು, ಮರಳು ತುಂಬಿದ ಸೋಸು ಪೆಟ್ಟಿಗೆಗಳು).
 • ನೀರಿನ ಕೊಳವೆಗಳನ್ನು ಜೈವಿಕ ಮತ್ತು ರಾಸಾಯನಿಕ ಕಲ್ಮಷಗಳಿಂದ ಸ್ವಚ್ಛಗೊಳಿಸುವ ಸಾಧನಗಳು. ಮುಖ್ಯ ಪಂಪಿನ ಮೂಲಕ ಅಥವಾ ಪ್ರತ್ಯೇಕ ಪಂಪಿನ ಮೂಲಕ ಇಲ್ಲವೇ ಎತ್ತರದಲ್ಲಿಟ್ಟ ಕಡಾಯಿಯ ಸಹಾಯದಿಂದ ಅಥವ ವೆಂಚುರಿ ಸಾಧನದ ಮೂಲಕ ಶುದ್ಧೀಕರಣದ ಈ ಕಾರ್ಯವನ್ನು ಮಾಡಬಹುದು. ಇದಕ್ಕಾಗಿ ಹರಿತ್ ಪೀತಾಲ್ಮ (Hydrochloric acid), ಗಂಧಕಾಮ್ಲ ಅಥವಾ ರಂಜಕಾಮ್ಲ ಇವುಗಳಲ್ಲಿ ಒಂದನ್ನು ಉಪಯೋಗಿಸಬಹುದು. ಇವುಗಳ ಬದಲು ಕ್ಲೋರಿನ್ ಅಥವಾ ಕ್ಯಾಲ್ಸಿಯಂ ಹೈಪೋಕ್ಲೋರೈಡ್ ಇಲ್ಲವೇ ಸೋಡಿಯಂ ಹೈಪೋಕ್ಲೋರೈಡ್ ಇವುಗಳಲ್ಲಿ ಒಂದನ್ನು ಉಪಯೋಗಿಸಬಹುದು.
 • ನಿಯಂತ್ರಣದ ಸ್ವಿಚ್ ಮತ್ತು ವಿವಿಧ ಕವಾಟಗಳು (Valves).

ii. ನೀರನ್ನು ಸಾಗಿಸುವ ಕೊಳವೆಗಳು : ಸಾಮಾನ್ಯವಾಗಿ ಕಪ್ಪು ಬಣ್ಣದ ಪಿ.ವಿ.ಸಿ.ಯ ಮೂರು ಬಗೆಯ ಕೊಳವೆಗಳು ಬೇಕಾಗುತ್ತವೆ.

) ಮುಖ್ಯ ಕೊಳವೆ : ನೀರಿನ ಮೂಲದಿಂದ ಮುಖ್ಯ ಕೊಳವೆಯು ನೀರನ್ನು ಉಪ ಮುಖ್ಯ ಕೊಳವಗಳಿಗೆ ಹರಿಯಲು ಅನುಕೂಲ ಮಾಡಿಕೊಡುತ್ತದೆ. ಕೊಳವೆಯ ವ್ಯಾಸವು ವಿವಿಧ ಭಾಗಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ, ಕೊಳವೆಯ ಒಳ ವ್ಯಾಸವು ೪೦ ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ.

) ಉಪ ಮುಖ್ಯ ಕೊಳವೆಗಳು : ಮುಖ್ಯ ಕೊಳವೆಯಿಂದ ನೀರನ್ನು ಕವಲು ಕೊಳವೆಗಳಿಗೆ ಸಾಗಿಸುವ ಕಾರ್ಯವನ್ನು ಉಪ ಮುಖ್ಯ ಕೊಳವೆಗಳು ಮಾಡುತ್ತವೆ. ಈ ಕೊಳವೆಗ ಒಳ ವ್ಯಾಸವು ೩೨ರಿಂದ ೭೫ ಮಿ.ಮೀ. ನಷ್ಟಿರುತ್ತದೆ. ನೀರಿನ ಲಭ್ಯತೆ, ಪೂರೈಸಬೇಕೆಂದಿರುವ ನೀರಿನ ಪ್ರಮಾಣ, ಭೂಮಿಯ ರಚನೆ ಇತ್ಯಾದಿಗಳ ಮೇಲಿಂದ, ಉಪ ಮುಖ್ಯ ಕೊಳವೆಗಳ ಸಂಖ್ಯೆ ಮತ್ತು ಅವುಗಳ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ.

) ಅಡ್ಡ ಕೊಳವೆಗಳು (ಕವಲು ಕೊಳವೆಗಳು): ಉಪ ಮುಖ್ಯ ಕೊಳವೆಗಳಿಂದ, ನೀರನ್ನು ಗಿಡದ ಸಮೀಪಕ್ಕೆ ಒದಗಿಸಲು ಅಡ್ಡ ಕೊಳವೆಗಳನ್ನು ಬಳಸಲಾಗುತ್ತದೆ. ಮೂರು ಮೀ.ಗಳಿಗಿಂತ ಹೆಚ್ಚು ಅಂತರವಿರುವ ಬೆಳೆಗಳಲ್ಲಿ, ಪ್ರತಿ ಸಾಲಿಗೆ ಒಂದರಂತೆ ಅಡ್ಡ ಕೊಳವೆಯನ್ನು ಜೋಡಿಸಬೇಕಾಉಗತ್ತದೆ. ಆದರೆ, ಕಡಿಮೆ ಅಂತರವಿರುವ ಬೆಳೆಗಳಲ್ಲಿ ಒಂದೇ ಅಡ್ಡ ಕೊಳವೆಯಿಂದ ಎರಡು ಅಥವಾ ಮೂರು ಸಾಲುಗಳಿಗೆ ನೀರನ್ನು ಒದಗಿಸಬಹುದು.

iii. ನೀರನ್ನು ಹೊರಬಿಡುವ ಸಾಧನಗಳು : ಹನಿ ನೀರಾವರಿ ಪದ್ದತಿಯಲ್ಲಿ, ನೀರನ್ನು ಹೊರಬಿಡುವ ಸಾಧನಗಳು, ಈ ವ್ಯವಸ್ಥೆಯ ಬಹು ಮುಖ್ಯ ಘಟಕಗಳೆನ್ನಬಹುದು. ಈ ಸಾಧನಗಳನ್ನು ಅವುಗಳ ಕಾರ್ಯವೈಖರಿಯ ಮೇಲಿಂದ, ಎರಡು ಗುಂಪುಗಳಾಗಿ ವಿಂಗಡಿಸಬಹುದು.

. ಮಣ್ಣಿನ ಇಡೀ ಸಾಲನ್ನೇ ಒದ್ದೆ ಮಾಡುವ ಸಾಧನಗಳು: ನೀರಿನ ಹನಿಗಳು ಹೊರಬಂದು ಒಂದಕ್ಕೊಂದು ಅತಿ ಹತ್ತಿರದಲ್ಲಿಯೇ ಬೀಳುವ ವ್ಯವಸ್ಥೆ ಇರುವುದರಿಂದ ಹನಿಗಳು ಬೆರೆತು ಇಡೀ ಸಾಲೇ ತೇವವಾದಂತೆ ಕಾಣುತ್ತದೆ. ಬೆಳೆಯ ಸಾಲಿನ ಅಂತರವು ಕಡಿಮೆ ಇರುವಲ್ಲಿ ಈ ಸಾಧನವು ಪ್ರಯೋಜನಕಾರಿ, ಜಿನುಗು ಕೊಳವೆಗಳು (Seep hose pipe), ದ್ವಿಕೋಶ ಕೊಳವೆಗಳು (Bi-wall pipies), ಸಚ್ಛಿದ್ರ ಕೊಳವೆಗಳು (Perforated pipes) ಇತ್ಯಾದಿಗಳು ಈ ಗುಂಪಿನ ಉದಾಹರಣೆಗಳು.

. ಮಣ್ಣಿನಲ್ಲಿ ಬಂದಗುಳನ್ನು ಒದ್ದೆ ಮಾಡುವ ಸಾಧನಗಳು: ನಿರ್ದಿಷ್ಟ ಅಂತರಗಳಲ್ಲಿ ನೀರಿನ ಹನಿಗಳು ಮಣ್ಣಿನ ಮೇಲೆ ಬೀಳುವ ವ್ಯವಸ್ಥೆ ಇರುವುದರಿಂದ ಪ್ರತಿ ಹನಿಯು ಬಿದ್ದ ಸ್ಥಳದ ಸುತ್ತಲೂ ಗೋಲಾಕಾರದಲ್ಲಿ ಮಣ್ಣು ತೇವವಾಗುತ್ತದೆ. ತೇವಗೊಂಡ ವಲಯಗಳು ಒಂದಕ್ಕೊಂದು ಬೆರೆಯುವುದಿಲ್ಲ. ಸಸ್ಯಗಳ ಅಂತರವು ಅಧಿಕವಾಗಿರುವ ಬೆಳೆಗಳಲ್ಲಿ ಈ ಸಾಧನಗಳು ಪ್ರಯೋಜನಕಾರಿಯಾಗಿವೆ. ಇಂಥ ಸಾಧನಗಳಲ್ಲಿ ಎರಡು ಬಗೆಗಳಿವೆ.

ಅ) ಸೂಕ್ಷ್ಮ ರಂಧ್ರ ಹಾನಿ ಸಾಧನ (Oriffice dripper) ಮತ್ತು ವರ್ಟೆಕ್ಸ್‌ಹನಿ ಸಾಧನ (Vertex dripper): ಇವು ಮೊದಲ ಪ್ರಕಾರದ ಸಾಧನಗಳ ಉದಾಹರಣೆಗಳು. ಕವಲು ಕೊಳವೆಯಲ್ಲಿನ ನೀರಿನ ಒತ್ತಡವು ಬದಲಾದಂತೆ, ಈ ಸಾಧನಗಳಿಂದ ಹೊರಬರುವ ನೀರಿನ ಪ್ರಮಾಣವು ಹೆಚ್ಚು ಕಡಿಮೆಯಾಗುತ್ತದೆ.

ಆ) ಎರಡನೆಯ ಬಗೆಯ ಸಾಧನದಲ್ಲಿ, ಕವಲು ಕೊಳವೆಯಲ್ಲಿರುವ ನೀರಿನ ಒತ್ತಡದಲ್ಲಿ ಏರುಪೇರಾದರೂ, ಹೊರಬರುವ ನೀರಿನ ಪ್ರಮಾಣದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಕಂಡು ಬರುವುದಿಲ್ಲ. ಹಿಗ್ಗುವ ಸೂಕ್ಷ್ಮರಂಧ್ರದ ಸಾಧನ (Expanding Orifice dripper), ಬಾಲ್‌ಎಂಡ್ ಸ್ಲಾಟೆಡ್ ಸೀಟ್ ಡ್ರಿಪರ್ (Ball and slotted seat dripper) ಇವು ಎರಡನೆಯ ಪ್ರಕಾರದ ಉದಾಹರಣೆಗಳು.

ಮೇಲಿನ ಎರಡೂ ಬಗೆಯ ಸಾಧನಗಳಲ್ಲಿ, ಕಸ, ಕಡ್ಡಿ, ರೇವೆ ಅಥವಾ ಪಾಚಿ ಇತ್ಯಾದಿಗಳು ಸಿಲುಕಿಕೊಂಡು, ಈ ಸಾಧನಗಳಿಂದ ನೀರು ಸರಿಯಾಗಿ ಹೊರಬರದಂತಾಗುತ್ತದೆ. ಆದ್ದರಿಂದ ಸಾಧನಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಸ್ವಚ್ಛ ಮಾಡುವ ಕೆಲಸವು ಶ್ರಮದಾಯಕ. ಇವುಗಳ ಬದಲು, ಸೂಕ್ಷ್ಮ ಕೊಳವೆಗಳನ್ನು (Mircro tubes) ಕವಲು ಕೊಳವೆಗಳಲ್ಲಿ ಸಿಕ್ಕಿಸಿ, ಅದರ ಮೂಲಕ ನೀರು ಹರಿಯುವಂತೆ ಮಾಡುವ ಪದ್ಧತಿಯು ಹಲವೆಡೆ ಬಳಕೆಯಲ್ಲಿದೆ. ಸೂಕ್ಷ್ಮ ಕೊಳವೆಗಳು ಕಸ ಕಡ್ಡಿ ಇತ್ಯಾದಿಗಳಿಂದ ಕಟ್ಟಿಕೊಳ್ಳುವುದು ಕಡಿಮೆ. ಒಂದೊಮ್ಮೆ ಕಟ್ಟಿಕೊಂಡು, ನೀರು ಹೊರಬಾರದಂತಾದರೆ, ಬಾಯಿಯಿಂದ ಊದಿ ಕೊಳವೆಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು.

iv. ನೀರನ್ನು ನಿಯಂತ್ರಿಸುವ ಸಾಧನಗಳು: ನೀರನ್ನು ನಿಯಂತ್ರಿಸುವ ಮತ್ತು ಈ ಕಾರ್ಯಕ್ಕೆ ಸಹಾಯಕವಾದ ಕೆಲವು ಸಾಧನಗಳು ಈ ಗುಂಪಿನಲ್ಲಿ ಅಡಕವಾಗಿವೆ. ಪ್ರಮುಖವಾದ ಸಾಧನಗಳ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿವೆ.

ಕವಾಟುಗಳು (Valves)

 • ಕೊಳವೆಯೊಳಗೆ ಹರಿಯುವ ನೀರಿನ ಪ್ರಮಾಣವನ್ನು ನಿಯಂತ್ರಿಸಲು ಕವಾಟುಗಳನ್ನು ಅಳವಡಿಸಲಾಗುತ್ತದೆ. ಕವಾಟುಗಳು ನಿಧಾನವಾಗಿ ತೆರೆದುಕೊಳ್ಳುವ ಕವಾಟುಗಳಿರಬಹುದು ಅಥವಾ ಒಮ್ಮೆಲೇ ತೆರೆದುಕೊಳ್ಳಬಹುದಾದ ಗುಂಡು ಕವಾಟಗಳಾಗಿರಬಹುದು.
 • ಹನಿ ನೀರಾವರಿ ವ್ಯವಸ್ಥೆಯ ಯಾವುದೇ ಭಾಗದಲ್ಲಿ, ಒತ್ತಡವು ಅಧಿಕಗೊಂಡಿತೆಂದರೆ ಆ ಒತ್ತಡವನ್ನು ನಿಯಂತ್ರಿಸಲು ಕವಾಟದಿಂದ ಸಾಧ್ಯವಾಗುತ್ತದೆ.
 • ಸಂಗ್ರಹಗೊಳ್ಳುತ್ತಿರುವ ಕಲ್ಮಷಗಳನ್ನು ಹೊರಹಾಕುವ ಕವಾಟಗಳನ್ನು ಅಳವಡಿಸಲಾಗುತ್ತದೆ. ಇವು ಸ್ವಯಂಚಾಲಿತವಿರಬಹುದು ಇಲ್ಲವೇ ಮಾನವಚಾಲಿತವಿರಬಹುದು.
 • ಕೊಳವೆಗಳಲ್ಲಿ ಸೇರಿಕೊಂಡ ಗಾಳಿಯನ್ನು ಹೊರಹಾಕಲು ಮತ್ತು ನೀರಾವರಿಯ ಕಾರ್ಯವು ಮುಗಿದ ನಂತರ ಯಂತ್ರವನ್ನು ನಿಲ್ಲಿಸಿದಾಗ ಒಳಬರುವ ಗಾಳಿಯೊಡನ ಕಲ್ಮಷಗಳು ಒಳನುಗ್ಗದಂತೆ ತಡೆಯಲು, ವಾಯು ವಿಮೋಚನಾ ಕವಾಟಗಳಿರುತ್ತದೆ.

ಮಾಪಕಗಳು

ಹನಿ ನೀರಾವರಿ ವ್ಯವಸ್ಥೆಯಲ್ಲಿ ಕೆಳಗಿನ ಮಾಪಕಗಳಿರುತ್ತದೆ.

 • ಹರಿಯುವ ನೀರಿನ ಪ್ರಮಾಣವನ್ನು ಅಳೆಯಲು ಜಲಮಾಪಕ
 • ಒತ್ತಡವನ್ನು ಮತ್ತು ಒತ್ತಡದ ನಷ್ಟವನ್ನು ಅಳೆಯಲು ಒತ್ತಡ ಮಾಪಕ

ತಡೆಗಳು

 • ಮುಖ್ಯ ಕೊಳವೆಯ ದಿಕ್ಕನ್ನು ಬದಲಾಯಿಸುವ ಸ್ಥಳದಲ್ಲಿ ನೀರು ಸಾಗುತ್ತಿರುವ ದಿಕ್ಕಿನ ವಿರುದ್ಧ ದಿಶೆಯಲ್ಲಿ ಕೊಳವೆಗಳು ಸಡಿಲುಗೊಳ್ಳದಂತೆ ಮಾಡಲು ಕಲ್ಲು ಅಥವಾ ಸಿಮೆಂಟ್ ಕಾಂಕ್ರಿಟಿನ ತಡೆಗಳನ್ನು ನಿರ್ಮಿಸಬೇಕು.
 • ಉದ್ದವಾದ ಕೊಳವೆಗಳ ಕೊನೆಗೆ, ಕೆಳತುದಿಗಿಂತ ಸ್ವಲ್ಪ ಹಿಂದೆ, ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯದ ಮುಚ್ಚಳವಿರುವ ಕಾಂಕ್ರೀಟ್ ತೊಟ್ಟಿಯನ್ನು ನಿರ್ಮಿಸಬೇಕು. ಇದರಿಂದ, ಕೊಳವೆಗಳಿಗೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು.

ನೀರು ಮೇಲಿನಿಂದ ಬಂದು ಭೂಮಿಗೆ ಬೀಳುವ ವಿಧಾನ: ಸೇಚನ (ಸಿಂಪಡಿಕೆ) (Sprinkler) ನೀರಾವರಿ ಪದ್ಧತಿಯು ಈ ವಿಧಾನವನ್ನು ಪ್ರಮುಖವಾದುದೆನ್ನಬಹುದು. ನೀರಾವರಿಯ ಜಲವನ್ನು ಕೊಳವೆಗಳ ಮೂಲಕ ಸಾಗಿಸಿ, ಭೂಮಿಯಿಂದ ನಿರ್ದಿಷ್ಟ ಎತ್ತರದಲ್ಲಿ ಹೊರಹೊಮ್ಮಿಸಿ, ತುಂತುರು ಹನಿಗಳ ರೂಪದಲ್ಲಿ ಭೂಮಿಯ ಮೇಲೆ ಮಳೆಯಂತೆ ಬೀಳಗೊಡುವುದೇ ಸೇಚನ ಪದ್ಧತಿ.

ಸೇಚನ (ಸಿಂಪಡಿಕೆ) ನೀರಾವರಿ ಪದ್ಧತಿಗೆ ಅನುಕೂಲವೆನಿಸುವ ಸನ್ನಿವೇಶಗಳು

ಮುಂದೆ ಸೂಚಿಸಿದ ಪ್ರಸಂಗಗಳಲ್ಲಿ ಇತರ ನೀರಾವರಿ ಪದ್ದತಿಗಳಿಗಿಂತ, ಸೇಚನ ನೀರಾವರಿಯು ಹೆಚ್ಚು ಪ್ರಲಪ್ರದವೆನ್ನಬಹುದು.

 • ಕಡಮೆ ಆಳವಿರುವ ಮಣ್ಣು, ಅತಿ ಇಳಿಜಾರಾದ ಭೂಮಿ, ಮೇಲ್ಮಣ್ಣು ಕೊಚ್ಚಿ ಹೋದ ಭೂಮಿ, ತಗ್ಗು ದಿಣ್ಣೆಗಳಿಂದ ಕೂಡಿದ ನೆಲವನ್ನು ಸಮಪಾತಳಿ ಮಾಡಲು ಅಧಿಕ ಖರ್ಚನ್ನು ಮಾಡಬೇಕಾದ ಭೂಮಿ ಇತ್ಯಾದಿಗಳಿದ್ದಾಗ ಸೇಚನ ಪದ್ಧತಿಯನ್ನು ಲಾಭದಾಯಕವಾಗಿ ಬಳಸಬಹುದು.
 • ಮಣ್ಣಿನಲ್ಲಿ ನೀರು ಬಹುಬೇಗನೆ ಇಂಗುವ ಮರಳು ಮಣ್ಣಿನಲ್ಲಿ ಇತರ ಪದ್ದತಿಗಳಿಗಿಂತ, ಸೇಚನ ಪದ್ಧತಿಯು ಹೆಚ್ಚು ಸೂಕ್ತ.
 • ಹರಿದು ಬರುವ ನೀರಿನ ಪ್ರವಾಹವು ಕಡಮೆ ಇರುವಾಗ ಇತರ ನೀರಾವರಿ ಪದ್ಧತಿಗಳಿಂದ ನೀರಿನ ಪೂರೈಕೆಯನ್ನು ಬೆಳೆಗೆ ಸಮಾಧಾನಕರವಾಗಿ ಮಾಡುವುದು ಕಷ್ಟಕರ. ಇಂತಹ ಸಂದರ್ಭದಲ್ಲಿ ಸೇಚನ ನೀರಾವರಿಯು ಸೂಕ್ತವಾದ ಪದ್ಧತಿ.

ಸೇಚನ ನೀರಾವರಿ ಪದ್ಧತಿಯ ಸಂಕ್ಷಿಪ್ತ ಇತಿಹಾಸ : ಸೇಚನ ನೀರಾವರಿ ಪದ್ಧತಿಯು, ೧೯೪೬ರವರೆಗೆ ಗಣನೀಯ ಪ್ರಮಾಣದಲ್ಲಿ ಬೆಳೆದು ಬಂದಿರಲಿಲ್ಲವೆನ್ನಬಹುದು. ನಂತರದ ವರ್ಷಗಳಲ್ಲಿ ಪ್ರಮುಖವಾಗಿ ಯುರೋಪ್ ಖಂಡದ ದೇಶಗಳಲ್ಲಿ ಮತ್ತು ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ, ಈ ನೀರಾವರಿ ಪದ್ದತಿಯು ಬಹುವೇಗದಿಂದ ಅಭಿವೃದ್ಧಿಗೊಂಡಿತು. ಇಸ್ರೇಲ್, ಲಿಬಿಯಾ, ಟರ್ಕಿ, ತೈವಾನ್, ಗ್ರೀಸ್, ಇಟಲಿ, ಆಸ್ಟ್ರೇಲಿಯಾಗಳಲ್ಲದೇ ಇತರ ಹಲವು ದೇಶಗಳಲ್ಲೂ ಸೇಚನ ನೀರಾವರಿ ಪದ್ಧತಿಯು ಪ್ರಚಲಿತಗೊಂಡಿತು.

ಸೇಚನ ನೀರಾವರಿ ಪದ್ಧತಿಯು ೧೯೮೦ರ ಸುಮಾರಿಗೆ ಭಾರತವನ್ನು ಪ್ರವೇಶಿತೆನ್ನಬಹುದು. ಆದರೆ ಈ ಪದ್ಧತಿಗೆ ಅವಶ್ಯವಿರುವ ಸಾಧನಗಳಿಗೆ ಅಧಿಕ ಖರ್ಚು ಆಗುವುದರಿಂದ, ಇದು ವೇಗದಿಂದ ರೈತರಲ್ಲಿ ಪ್ರಚಲಿತಗೊಳ್ಳಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ರೀತಿಯಲ್ಲಿ ಆರ್ಥಿಕ ನೆರವನ್ನು ಒದಗಿಸಿದ್ದರಿಂದ ರಾಜ್ಯದಲ್ಲಿ ಈ ಪದ್ಧತಿಯು ಬಳಕೆಗೆ ಬಂದಿತು.

ಸೇಚಕಗಳ ವರ್ಗೀಕರಣ: ಸೇಚಕಗಳ ವರ್ಗೀಕರಣವು ಕೆಳಗಿನಂತಿವೆ.

) ಮೊದಲನೆಯ ರೀತಿ

 • ಸುತ್ತ ತಿರುಗುವ ಸೇಚಕಗಳು: ನೀರು ಹರಿಯುವ ಕೊಳವೆಗಳನ್ನು ಭೂಮಿಯ ಮೇಲೆ ಇಟ್ಟು, ನಿರ್ದಿಷ್ಟ ಸ್ಥಳಗಳಲ್ಲಿ ಈ ಕೊಳವೆಗಳಿಗೆ ಲಂಬವಾಗಿ ಸಣ್ಣ ವ್ಯಾಸದ ಕೊಳವೆಗಳನ್ನು ಕೂಡಿಸಲಾಗುತ್ತದೆ. ಪ್ರತಿ ಸಣ್ಣ ಕೊಳವೆಯ ಮೇಲ್ತುದಿಗೆ ಸೇಚನ ಸಾಧನವನ್ನು (Nozzle) ಇಡಲಾಗಿರುತ್ತದೆ. ಕೊಳವೆಯೊಳಗೆ ನೀರು ಒತ್ತಡದಿಂದ ನುಗ್ಗಿ, ಸುತ್ತ ತಿರುಗುವ ಸೇಚನ ಸಾಧನದ ಮೂಲಕ ತುಂತುರು ರೂಪದಲ್ಲಿ ಹೊರ ಹೊಮ್ಮುತ್ತದೆ. ಭೂಮಿಯ ಮೇಲೆ ಬಿದ್ದ ತುಂತುರು ಹನಿಗಳು ಮಣ್ಣನ್ನು ಒದ್ದೆ ಮಾಡುತ್ತವೆ.
 • ರಂಧ್ರಗಳಿರುವ ಕೊಳವೆಗಳು: ಕೊಳವೆಗಳಲ್ಲಿ ವಿಶಿಷ್ಟ ಬಗೆಯ ರಂಧ್ರಗಳನ್ನು ಕೊರೆಯಲಾಗಿರುತ್ತದೆ. ಈ ರಂಧ್ರಗಳಿಂದ ನೀರು ಒಂದೇ ವೇಗದಲ್ಲಿ ಹೊರಬಂದು ಎರಡೂ ಪಾರ್ಶ್ವಗಳ ಸುಮಾರು ೬-೧೫ ಮೀ. ಅಗಲದ ಭೂಮಿಯನ್ನು ತೋಯಿಸುತ್ತದೆ. ಈ ಕೊಳವೆಗಳಿಂದ ಪ್ರತಿ ಸೆಕೆಂಡಿಗೆ ಹೊರಬರುವ ನೀರು ತುಲನಾತ್ಮಕವಾಗಿ ದೊಡ್ಡ ಪ್ರಮಾಣದಲ್ಲಿರುವುದರಿಂದ, ಹೊರಬಂದ ಈ ನೀರನ್ನು ಒಳಗೆ ಪ್ರವೇಶಿಸಲು ಅನುವು ಮಾಡಿಕೊಡುವ ಮಣ್ಣಿಗೆ ಈ ಪದ್ಧತಿಯು ಸೂಕ್ತವೆನಿಸಿದೆ. ಸುಮಾರು ೪೦-೬೦ರಿಂದ  ಸೆಂ. ಮೀ.ಗಿಂತ ಅಧಿಕ ಎತ್ತರವಾಗಿರದ ಬೆಳೆಗಳಿಗೆ ಈ ಪದ್ಧತಿಯಿಂದ ನೀರನ್ನು ಪೂರೈಸಬಹುದು.

) ಎರಡನೆಯ ರೀತಿ : ಸೇಚಕಗಳನ್ನು ಇನ್ನೊಂದು ರೀತಿಯಿಂದಲೂ ವರ್ಗೀಕರಿಸಬಹುದು.

 • ಸುಲಭವಾಗಿ ಸಾಗಿಸಬಲ್ಲ ಸೇಚಕಗಳು: ನೀರೆತ್ತುವ ಪಂಪು ಮತ್ತು ಕೊಳವೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೇವಲ ಆಳುಗಳ ಸಹಾಯದಿಂದಲೇ ಒಯ್ಯಬಹುದು. ವಹನದ ಈ ಕಾರ್ಯಕ್ಕೆ ಯಂತ್ರವನ್ನೂ ಬಳಸಬಹುದು. ಆದರೆ ಇದರಿಂದ ಖರ್ಚು ಹೆಚ್ಚಾಗುತ್ತದೆ.
 • ಭಾಗಶಃ ಸಾಗಿಸಬಲ್ಲ ಸೇಚಕಗಳು: ನೀರೆತ್ತುವ ಪಂಪನ್ನು ಜಲ ಮೂಲದ ಸಮೀಪದಲ್ಲಿ ಶಾಶ್ವತವಾಗಿ ಸ್ಥಾಪಿಸಲಾಗಿರುತ್ತದೆ. ಕೊಳವೆಗಳನ್ನು ಮಾತ್ರ ಒಂದು ಸ್ಥಳದಿಂದ ಇನ್ನೊಂದೆಡೆ ಒಯ್ಯಬಹುದಾದ ವ್ಯವಸ್ಥೆ ಇರುತ್ತದೆ.
 • ಅರೆ ಶಾಶ್ವತ ಸೇಚಕಗಳು: ನೀರೆತ್ತುವ ಪಂಪನ್ನು ಜಲ ಮೂಲದ ಸಮೀಪದಲ್ಲಿ ಶಾಶ್ವತವಾಗಿ ನೆಲೆಗೊಳಿಸಲಾಗಿರುತ್ತದೆಯಲ್ಲದೇ ಅವುಗಳಿಗೆ ಜೋಡಿಸಿದ ಉಪ ಮುಖ್ಯ ಕೊಳವೆಗಳನ್ನು ಶಾಶ್ವತವಾಗಿ ಮಣ್ಣಿನೊಳಗೆ ಹೂಳಲಾಗಿರುತ್ತದೆ. ಇಲ್ಲಿ ಅಡ್ಡ ಕೊಳವೆಗಳನ್ನು ಮಾತ್ರ ಸ್ಥಳಾಂತರಿಸಬಹುದು.
 • ಶಾಶ್ವತ ಸೇಚಕಗಳು: ನೀರೆತ್ತುವ ಪಂಪು, ಮುಖ್ಯ, ಉಪಮುಖ್ಯ ಮತ್ತು ಅಡ್ಡಕೊಳವೆಗಳನ್ನು ಬೇಸಾಯದ ಉಪಕರಣಗಳಿಗೆ ನಿಲುಕದಷ್ಟು ಆಳದಲ್ಲಿ, ಶಾಶ್ವತವಾಗಿ ಹೂತಿಡಲಾಗಿರುತ್ತದೆ. ಸೇಚಕಗಳಿಗೆ ಆಧಾರವನ್ನೀಯುವ ಕೊಳವೆಗಳನ್ನು ಸಹ ಶಾಶ್ವತವಾಗಿ ಜೋಡಿಸಲಾಗಿರುತ್ತದೆ. ಈ ಪದ್ಧತಿಗೆ ಹೆಚ್ಚು ಹಣವು ಬೇಕಾಗುತ್ತದೆ. ಬಹು ವಾರ್ಷಿಕ ಬೆಳೆಗಳಿರುವ ತೋಟದಲ್ಲಿ ಮತ್ತು ಸ್ವಯಂಚಾಲಿತ ಸಾಧನಗಳನ್ನು ಅಳವಡಿಸಬೇಕಾದಲ್ಲಿ, ಶಾಶ್ವತ ಸೇಚಕಗಳು ಪ್ರಯೋಜನಕಾರಿ ಎನ್ನಬಹುದು.

ಸೇಚಕ ನೀರಾವರಿ ಪದ್ಧತಿಯಿಂದಾಗುವ ಇತರ ಪ್ರಯೋಜನಗಳು:

 • ಬೀಜಗಳನ್ನು ಬಿತ್ತಿದೊಡನೆ ಸೇಚನ ನೀರಾವರಿ ಪದ್ಧತಿಯಿಂದ ನೀರನ್ನು ಸಿಂಪಡಿಸಿದರೆ ಬೀಜಗಳು ಬೇಗನೆ ಮೊಳಕೆಯೊಡೆಯುತ್ತವೆ. ನೀರಾವರಿಯ ಇತರ ಪದ್ಧತಿಗಳಿಂದ ದೊರೆಯುವ ಪ್ರಯೋಜನವು ಇಷ್ಟು ಪರಿಣಾಮಕಾರಿ ಎನಿಸುವುದಿಲ್ಲ.
 • ಸೂಕ್ತ ಬದಲಾವಣೆಗಳೊಂದಿಗೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಪೂರೈಸಬಹುದು.
 • ಅತಿ ಶೀತವಿದ್ದಾಗ (Frost) ಮಣ್ಣಿಗೆ ಶೀಘ್ರಗತಿಯಿಂದ ನೀರನ್ನು ಒದಗಿಸಬಹುದು.
 • ಸಸ್ಯ ಸಂರಕ್ಷಣೆಯ ರಾಸಾಯನಿಕಗಳನ್ನು ಸೇಚನ ಪದ್ಧತಿಯಿಂದ ಪೂರೈಸಲು ಸಾಧ್ಯವಿದೆ.
 • ಲಿಂಬೆ ಮತ್ತು ಆ ಗುಂಪಿಗೆ ಸೇರಿದ ಇತರ ಬೆಳೆಗಳು, ದ್ರಾಕ್ಷಿ ಮುಂತಾದ ಬೆಳೆಗಳ ಕಾಯಿಗಳು, ಅತಿಯಾದ ಉಷ್ಣತೆಯನ್ನು ತಡೆದುಕೊಳ್ಳಲಾರದೆ, ಉದುರ ತೊಡಗುತ್ತವೆ. ಇಂತಹ ಸಂದರ್ಭವು ಒದಗಿದಾಗ ಸೇಚನ ಪದ್ಧತಿಯಿಂದ ನೀರನ್ನು ಸಿಂಪಡಿಸಿದರೆ ಈ ಸಮಸ್ಯೆಯನ್ನು ನಿವಾರಿಸಿ ಅಧಿಕ ಇಳುವರಿಯನ್ನು ಪಡೆಯಬಹುದು.
 • ಮೇಲಿನ ಕಾರ್ಯಗಳಿಗಲ್ಲದೇ ದನ ಕರುಗಳು ಮತ್ತು ಕೋಳಿಗಳು ವಾಸಿಸುವ ಪ್ರದೇಶದಲ್ಲಿಯ ವಾತಾವರಣವನ್ನು ತಂಪಾಗಿಸಲು, ಬೆಂಕಿಯನ್ನು ಆರಿಸಲು ಮತ್ತು ವಾತಾವರಣವನ್ನು ಕಲುಷಿತಗೊಳಿಸುವ ಧೂಳನ್ನು ನಿವಾರಿಸಲು ಸೇಚನ ಪದ್ಧತಿಯನ್ನು ಬಳಸಬಹುದು.

ಗುಣಗಳು

 • ಪ್ರತಿ ಹಂಗಾಮಿನಲ್ಲಿ ಅಥವಾ ಪ್ರತಿ ಬಾರಿ ಬೆಳೆಯನ್ನು ಬೆಳೆಯುವಾಗ ಭೂಮಿಯನ್ನು ಸಿದ್ಧಪಡಿಸುವ ಅವಶ್ಯಕತೆ ಇಲ್ಲದಿರುವುದರಿಂದ ಆ ಖರ್ಚಿನ ಉಳಿತಾಯವಾಗುತ್ತದೆ.
 • ಇತರ ಹಲವು ನೀರಾವರಿಯ ಪದ್ಧತಿಗಳಲ್ಲಿ ಭೂಮಿಯನ್ನು ಸಿದ್ಧಪಡಿಸುವಾಗ ಬದು ಮತ್ತು ಕಾಲುವೆಗಳನ್ನು ನಿರ್ಮಿಸಬೇಕಾಗುತ್ತದೆ. ಆದರೆ ಈ ಪದ್ಧತಿಯನ್ನು ಅನುಸರಿಸಿದರೆ ಸ್ಥಳದ ಉಳಿತಾಯವಾಗುವುದರಿಂದ ಉತ್ಪಾದನೆಗೆ ಅಧಿಕ ಭೂಮಿಯು ದೊರೆಯುತ್ತದೆ.
 • ಅಧಿಕ ಇಳಿಜಾರಿನ ಅಥವಾ ತಗ್ಗು ದಿನ್ನೆಗಳಿರುವ ಭೂಮಿಗೆ ಸೇಚನ ನೀರಾವರಿಯು ಸೂಕ್ತ ಪದ್ಧತಿಯೆನ್ನಬಹುದು.
 • ನೀರು ಹರಿದು ಹೋಗಿ ವ್ಯರ್ಥವಾಗುವ ಅಥವಾ ಮಣ್ಣು ಕೊಚ್ಚಿ ಹೋಗಿ ನಷ್ಟವಾಗುವ ಸಾಧ್ಯತೆಯಿಲ್ಲ.
 • ಬೆಳೆಗೆ ಬೇಕಾಗುವಷ್ಟು ನೀರನ್ನು ಪೂರೈಸಬಲ್ಲ ವ್ಯವಸ್ಥೆಯಿರುವುದರಿಂದ, ನೀರು ಬಸಿದು ಭೂಮಿಯಾಳಕ್ಕೆ ಹೋಗುವ ಮತ್ತು ಅದರೊಡನೆ ಪೋಷಕಗಳೂ ನಷ್ಟವಾಗುವ ಸಂದರ್ಭವಿಲ್ಲ.
 • ಮಣ್ಣಿನ ಕಣಗಳ ರಚನೆಯ ಮೇಲೆ ಹೇಳಿಕೊಳ್ಳುವಂತಹ ದುಷ್ಪರಿಣಾಮವಾಗುವುದಿಲ್ಲ.
 • ಮಧ್ಯಂತರ ಬೇಸಾಯವನ್ನು ಮಾಡಲು ಎತ್ತುಗಳು ಎಳೆಯುವ ಅಥವಾ ಯಂತ್ರಚಾಲಿತ ಉಪಕರಣಗಳನ್ನು ಬಳಸಬಹುದು.
 • ಸಸ್ಯಗಳ ಮೇಲೆ ನೀರಿನ ಸಿಂಚನವಾಗಿರುವುದರಿಂದ ಅವುಗಳ ಬೆಳವಣಿಗೆಗೆ ಕೆಲವು ರೀತಿಯಿಂದ ಅನುಕೂಲಗಳಾಗುತ್ತವೆ.

ಅವಗುಣಗಳು

 • ಪ್ರಾರಂಭಿಕ ಖರ್ಚು ಅಧಿಕ.
 • ಗಾಳಿಯು ವೇಗವಾಗಿ ಬೀಸುವ ಸಮಯದಲ್ಲಿ, ನೀರು ಎಲ್ಲೆಡೆ ಸರಿಯಾಗಿ ಪಸರಿಸಲಾರದು.
 • ಆಳವಾದ ಬೇರುಗಳಿರುವ ಬೆಳೆಗಳಿಗೆ ಈ ಪದ್ಧತಿಯು ಅಷ್ಟು ಪ್ರಯೋಜನಕಾರಿಯಲ್ಲ.
 • ದಿನದ ನೀರಾವರಿಯು ಮುಗಿದ ನಂತರ, ಕೊಳವೆಗಳನ್ನು ಸಾಗಿಸುವ ಕೆಲಸವು ಶ್ರಮದಾಯಕ. ಅದರಂತೆಯೇ ನೀರಾವರಿಯ ಕಾರ್ಯವು ನಡೆಯುತ್ತಿರುವಾಗ ಕೊಳವೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಕೆಲಸವು ಕಷ್ಟಕರ. ಅದರಲ್ಲಿಯೂ ಎರೆ ಮಣ್ಣಿನಲ್ಲಿ ಈ ಕೆಲಸವು ಅತಿ ಕಷ್ಟದಾಯಕ.
 • ಸಸ್ಯಗಳ ಎಲೆಗಳು ಆರ್ದ್ರಗೊಳ್ಳುತ್ತವೆಯಾದ್ದರಿಂದ ಕೆಲವು ರೋಗಾಣುಗಳ ಅಭಿವೃದ್ಧಿಗೆ ಅನುಕೂಲವಾದ ವಾತಾವರಣವುಂಟಾಗಿ ಬೆಳೆಯು ರೋಗಗಳಿಗೆ ತುತ್ತಾಗಬಹುದು.
 • ರಾಸಾಯನಿಕ ಗೊಬ್ಬರಗಳನ್ನು ನೀರಿನೊಡನೆ ಮಿಶ್ರಮಾಡಿ ಬೆಳೆಗೆ ಪೂರೈಸುವಾಗ, ಗೊಬ್ಬರಗಳ ಪ್ರಕಾರ ಮತ್ತು ಪ್ರಮಾಣಗಳ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳದಿದ್ದರೆ ಸಸ್ಯದ ಎಲೆಗಳಿಗೆ ಅಪಾಯವುಂಟಾಗಬಹುದು.

ಭೂಮಿಯೊಳಗಿನಿಂದ ನೀರನ್ನು ಪೂರೈಸುವ ವಿಧಾನಗಳು: ಭೂಮಿಯ ಒಳಗೆ ಸ್ಥಾಪಿಸಿದ ಛಿದ್ರಯುತ ಕೊಳವೆಗಳ ಮುಖಾಂತರ ಇಲ್ಲವೇ ಕಾಲುವೆಗಳ ಮೂಲಕ ಬೆಳೆಗಳಿಗೆ ನೀರಿನ ಪೂರೈಕೆ ಮಾಡಬಹುದು. ಮಣ್ಣಿನ ಆಳದಲ್ಲಿ ಪೂರೈಕೆಯಾದ ನೀರು, ಮೇಲೇರುತ್ತ ಬಂದು, ಸಸ್ಯದ ಬೇರುಗಳಿಗೆ ದೊರೆಯುತ್ತದೆ. ಮಣ್ಣಿನ ಗುಣಧರ್ಮ ಮತ್ತು ಸಸ್ಯದ ಬೇರುಗಳ ಆಳದ ಮೇಲಿಂದ ನೀರನ್ನು ಒದಗಿಸುವ ಕೊಳವೆಗಳ ಆಳವನ್ನು ೩೦ರಿಂದ ೧೦೦ ಸೆಂ.ಮೀವರೆಗೆ ಇಡಬೇಕಾಗಬಹುದು. ಎರಡು ಕೊಳವೆಗಳ ಅಥವಾ ಕಾಲುವೆಗಳ ಅಂತರವನ್ನು ೧೫ ರಿಂದ ೩೦ ಮೀ.ಗಳಷ್ಟು ಇಡುವುದು ವಾಡಿಕೆ.

ಕೆಳಗಿನ ಸನ್ನಿವೇಶಗಳನ್ನು ಈ ವಿಧಾನವು ಯಶಸ್ವಿಯಾಗಿದೆ.

 • ಮಣ್ಣಿನ ಕಣಗಳ ಗಾತ್ರವು ಎಲ್ಲೆಡೆ ಒಂದೇ ರೀತಿಯದಾಗಿರಬೇಕು.
 • ಮಣ್ಣಿನಲ್ಲಿ ಉದ್ದ ಮತ್ತು ಅಡ್ಡ ದಿಕ್ಕುಗಳಲ್ಲಿ ನೀರು ನಿರಾತಂಕವಾಗಿ ಹರಿಯುವಂತಿರಬೇಕು.
 • ಭೂಮಿಯಾಳಕ್ಕೆ ನೀರು ಬಸಿದು ಹೋಗದಂತೆ ಕೆಳಗೆ ಗಟ್ಟಿ ಪ್ರದೇಶವಿರಬೇಕು. ಇಲ್ಲವೇ ತಾತ್ಪೂರ್ತಿಕವಾದ ನೀರಿನ ಪಾತಳಿಯಿರಬೇಕು.
 • ಜಲಧಾರಣಾ ಶಕ್ತಿಯು ಕಡಿಮೆ ಇರುವ ಮತ್ತು ನೀರು ವೇಗವಾಗಿ ಒಳ ಹರಿಯಲು ಬಿಡುವ ಮಣ್ಣಿನಲ್ಲಿ, ಬೇರೆ ಪದ್ಧತಿಯ ನೀರಾವರಿಯನ್ನು ಅನುಸರಿಸಲು ಸಾಧ್ಯವಿಲ್ಲದಿದ್ದಲ್ಲಿ ಮತ್ತು ಸೇಚನ ಪದ್ಧತಿಯು ಅತಿ ವೆಚ್ಚವೆಂದು ಕಂಡು ಬಂದಲ್ಲಿ, ಭೂಮಿಯ ಒಳಗಿನಿಂದ ನೀರನ್ನು ಪೂರೈಸುವ ವಿಧಾನವು ಸೂಕ್ತ. ಆದರೆ ಲವಣಯುತ ನೀರು ಈ ವಿಧಾನಕ್ಕೆ ಸರಿಯಿಲ್ಲ.

ಭೂಮಿಯ ಒಳಗಿನಿಂದ ನೀರನ್ನು ಪೂರೈಸುವ ವಿಧಾನವನ್ನು ಅನುಸರಿಸಬೇಕಾದರೆ, ಮೇಲೆ ಸೂಚಿಸಿದಂತೆ ಕೆಲವು ವಿಶಿಷ್ಟ ಸನ್ನಿವೇಶಗಳು ಇರಬೇಕಾಗುತ್ತವೆ. ಭಾರತದಲ್ಲಿ ಈ ವಿಧಾನವು ಅಷ್ಟಾಗಿ ಬಳಕೆಯಲ್ಲಿಲ್ಲ. ಆದರೂ ಕಾಶ್ಮೀರದಲ್ಲಿಯ “ದಾಲ್‌” ಸರೋವರದ ನೀರಿನಿಂದ ತರಕಾರಿಗಳನ್ನು ಬೆಳೆಯಲು ಈ ವಿಧಾನವನ್ನು ಬಳಸುತ್ತಾರೆ. ಅದರಂತೆಯೇ ಕೇರಳದ ಕಟ್ಟುನಾಡ ಭಾಗದಲ್ಲಿ ತೆಂಗಿನ ಬೆಳೆಗೆ ನೀರನ್ನು ಪೂರೈಸಲು ಈ ವಿಧಾನವನ್ನು ಅನುಸರಿಸಲಾಗುತ್ತದೆ.

ಗುಣಗಳು

 • ನೀರಿನ ಮಿತವ್ಯಯ ಸಾಧ್ಯವಾಗುತ್ತದೆ.
 • ಮೇಲ್ಮಣ್ಣಿನ ಕಣಗಳ ರಚನೆಗೆ ಬಾಧೆ ತಟ್ಟುವುದಿಲ್ಲ ಮತ್ತು ಮಣ್ಣಿನಲ್ಲಿ ವಾಯುವಿನ ಚಲನೆಗೆ ಆತಂಕವುಂಟಾಗುವುದಿಲ್ಲ.
 • ಸಸ್ಯದ ಬೇರುಗಳ ಸನಿಹಕ್ಕೆ ನೀರು ಪೂರೈಕೆಯಾಗುತ್ತದೆಯಾದ್ದರಿಂದ, ಬೆಳೆಯು ಉತ್ತಮ ಬೆಳವಣಿಗೆಗೆ ಆಸ್ಪದವುಂಟಾಗುತ್ತದೆ.

ಅವಗುಣಗಳು

 • ಇತರ ಹಲವು ನೀರಾವರಿ ಪದ್ಧತಿಗಳಿಗಿಂತ ಈ ವಿಧಾನವು ಹೆಚ್ಚು ಖರ್ಚಿನದು.
 • ನೀರು ಚಲಿಸಿ ಮಣ್ಣನ್ನು ಆರ್ದ್ರಗೊಳಿಸುತ್ತ ಸಸ್ಯಗಳ ಬೇರುಗಳನ್ನು ಸಮೀಪಿಸಲು ಹೆಚ್ಚು ಸಮಯವು ಬೇಕಾಗುತ್ತದೆ.

ರಂಧ್ರಗಳಿರುವ ಕೊಳವೆಗಳನ್ನು ಬಳಸಿದಾಗ ಕೆಲವು ಬಾರಿ ರಂಧ್ರಗಳು ಮುಚ್ಚಿ, ನೀರಿನ ಪೂರೈಕೆಗೆ ವ್ಯತ್ಯಯವುಂಟಾಗುತ್ತದೆ. ಸರಿಪಡಿಸುವ ಕಾರ್ಯವು ಶ್ರಮದಾಯಕ ಮತ್ತು ಖರ್ಚಿನದು