ರಾಗ ತೋಡಿ ಏಕತಾಳ

ಅಂಜಬೇಡೆಲೆ ಸೀತೆ | ಮಿಥಿಲೇಂದ್ರಕುಲಜಾತೆ |
ಭಂಜಿಸುವೆ ರಾಕ್ಷಸಿಯ | ಕುಂಜರಗಮನೆ || ||೫೯||

ಕಣ್ಣ ಮುಚ್ಚಿಕೊ ನೀನು | ಕಂಡರಂಜವೆಯವಳ |
ಹೆಣ್ಣುಮೂಳಿಯ ಕೊಂದು | ಮಣ್ಣುಗೂಡಿಸುವೆ || ||೬೦||

ಎಂದು ಧೈರ್ಯವ ಪೇಳೆ | ಬಂದು ರಾಮನ ದೂರ |
ದಿಂದ ನೋಡಿದಳುಸುರೆ | ಚಂದವಾಗಿರಲು || ||೬೧||

ಕಂಡರೆ ಮದನನಂಥ | ಗಂಡುಸಾಗಿರುವನೀತ |
ಕೊಂಡೊಯ್ದು ಮನೆಗೆನ್ನ | ಗಂಡನಂ ಮಾಳ್ಪೆ || ||೬೨||

ದ್ವಿಪದಿ

ಎನುತ ಮನದೊಳಗಿಂತು ಯೋಚನೆಯ ಮಾಡಿ
ಘನವಾದ ದೇಹವನು ಕುನಿಸಿ ಮರೆಮಾಡಿ || ||೬೩||

ಮಾಯಕದ ರೂಪದಲಿ ಮತ್ತೊಂದು ಬಗೆಯ
ಕಾಯವನು ಧರಿಸಿದಳು ಕಪಟದಾಕೃತಿಯ || ||೬೪||

ಹದಿನಾರು ವತ್ಸರದ ಹೆಣ್ಣಾದಳವಳು
ಮುದದಿಂದ ಶೃಂಗಾರವಾಗಿ ಮತ್ತವಳು || ||೬೫||

ಪೂಗೋಲನುರುಪಟ್ಟದಾನೆಯಂದದಲಿ
ರಾಘವನ ಬಳಿಗೆ ನಡೆತಂದಳೊಲವಿನಲಿ || ||೬೬||

ಕರವಮುಗಿದಳು ಬಳಿಕ ಕಂಡು ರಘುಪತಿಯ
ಅರುಹಿದಳು ಕಾರ್ಯಗಳ ಅಂತರಸ್ಥಿತಿಯ || ||೬೭||

ರಾಗ ಗೌಳ ಆದಿತಾಳ (ಚೌತಾಳ)

ನೀ ಗುಣನಿಧಿಯೆಂದು | ನಿನ್ನ ಸೇರಿದೆ ಬಂದು || ಪಲ್ಲವಿ ||

ಅತಿಕುಲವತಿ ನಾನು | ಪೃಥಿವಿಪಾಲಕ ನೀನು |
ರತಿದೇವಿಗೆಣೆ ನಾನು | ಮನ್ಮಥ ನೀನು || ||೬೮||

ಸರಸಿಜಾಂಬಕಿ ನಾನು | ತರಣಿಪ್ರಕಾಶ ನೀನು |
ವರ ಬಿಂಬಾಧರೆ ನಾನು | ಅರಗಿಣಿನೀನು || ||೬೯||

ಕವಲು ಮನವ ಬಿಟ್ಟು | ತವಕದಿ ದಯವಿಟ್ಟು |
ಸವಿದಂಬುಲವ ನೀಡು | ಸರಸ ಮಾತಾಡು || ||೭೦||

ಎಲ್ಲಿ ನೋಡಿದರೆನ | ಗಿಲ್ಲ ಒಪ್ಪುವ ಜನ |
ಬಲ್ಲತನದಿನೆರೆಯೊ | ಬಲುಬೇಗ ಕರೆಯೊ || ||೭೧||

ರಾಗ ಕಾಂಭೋಜಿ ಏಕತಾಳ

ಮದನನ ಪಟ್ಟದರಾಣಿ | ಮೊದಲೆ ಬಂದುದಿಲ್ಲ ||
ಚದುರೆ ಸಣ್ಣವಳೊಬ್ಬಳ | ಮದುವೆಯಾದೆನಲ್ಲ || ||೭೨||

ಒಂದು ಚೂರಿಗೆರಡು ಒರೆ | ಹೊಂದುವುದೆ ಪೇಳು ||
ಮಂದಗಮನೆ ಪೇಳ್ವೆ ನಿನಗಿ | ನ್ನೊಂದು ಯತುನ ಕೇಳು || ||೭೩||

ನಮ್ಮಿಂದ ನೂರ್ಮಡಿಗೆ ಚೆಲುವ | ತಮ್ಮನಿಗೆ ಪ್ರಾಯ ||
ಗಮ್ಮನೆ ನೀ ಹೋಗಿ ತೋರು | ನಿನ್ನಲ್ಲಿದ್ದುಪಾಯ || ||೭೪||

ವಂಚನೆಯಿಲ್ಲದೆ ಪೋಗು | ಚಂಚಲಾಕ್ಷಿ ಬೇಗ ||
ಪಂಚಬಾಣನುರುಬೆಯಿಂದ | ಮುಂಚೆ ಕೂಡುವನೀಗ || ||೭೫||

ರಾಗ ಗೌಳೀಪಂತು ರೂಪಕತಾಳ

ಚಂದ | ದಿಂದ ಬಂದಳಬ್ಜಲೋಚನೆ | ರಾಮ |
ಚಂದ್ರ ಹೇಳಿದಂಥ ಮಾತಿ | ನಂದವನ್ನು ಬಣ್ಣಿಸುತ್ತ || ಪಲ್ಲವಿ ||

ಕನ್ನಡಿಯನು ತೆಗೆದು ನೋಡುತ | ಮೊಗವು |
ಚೆನ್ನವಿಹುದೆಂದತಿ ನೆಗಾಡುತ | ಮತ್ತೆ |
ತನ್ನೊಳ್ ತಾನೆ ಮಾತನಾಡುತ | ತನಗೆ |
ಕನ್ನೆಯರೊಳಗೆಣೆಯಿಲ್ಲೆನ್ನುತ || ಭರ || ||೭೬||

ಕುರುಳ ಕೈಬೆರಳಿಂದ ತಿದ್ದುತ | ಪುಷ್ಪರಸದ |
ಪರಿಮಳದೊಳೋಲಾಡುತ | ಮುಂದು |
ವರಿದ ತಿಲಕ ಸೆರಗಿಂದೊರಸುತ | ನೋಡಿ |
ತರಳ ಲಕ್ಷ್ಮಣನೆಡೆಯ ಹೊದ್ದುತ || ಭರ || ||೭೭||

ರಾಗ ಮಿಶ್ರತೋಡಿ ಅಷ್ಟತಾಳ

ಕಾಮಸನ್ನಿಭ ಮಾತ ಕೇಳು | ಪೇಳಿ |
ರಾಮ ಕಳುಹಿದನಿಂದಿನೊಳು |
ನಾ ಮನವಿಟ್ಟು ಕೃಪಾಳು | ನಿನ್ನೋಳ್ |
ಕಾಮಿಸಿ ಬಂದೆ ಮೋಹದೊಳು | ಇನ್ನು |
ತಾಮಸಗೊಳದಿರು ತಾಳಲಾರೆನು ಸು |
ಪ್ರೇಮದಿಂದಲೆ ಕೂಡು ಸರಸಮಾತಾಡು || ||೭೮||

ನೆರೆ ಮನಸೆನ್ನಮೇಲಿಟ್ಟು | ಇಕ್ಕೊ |
ಗುರುಕುಚವೆರಡ ನೀ ಮುಟ್ಟು |
ತೆರೆದ ಚೆಂದುಟಿಗೆ ಬಾಯಿಟ್ಟು | ಚ |
ಪ್ಪರಿಸಿ ಸುರತಸುಖ ಕೊಟ್ಟು | ಎನ್ನ |
ವಿರಹವ ನಿಲಿಸು ಕಾತರವನ್ನೆ ಮರೆಸು ಕಣ್ |
ದೆರೆದೆನ್ನ ನೋಡು ಕಾರುಣ್ಯದಿಂದಲೆ ಕೂಡು || ||೭೯||

ರಾಗ ಮಿಶ್ರಬಿಲಹರಿ ಅಷ್ಟತಾಳ

ಮಂದಗಮನೆ ಇಂಥಸುದ್ದಿ | ಯೊಂದನೆನ್ನೊಳಾಡದಿರು |
ಮುಂದೆ ಬ್ರಹ್ಮಚಾರಿ ನಾ ಕಾಣೆ |
ಬಂದದಾರಿಗೆ ಸುಂಕವಿಲ್ಲ | ತಂದರಣ್ಣನ ಗುರುತವನ್ನು |
ಚೆಂದದಿಂ ಕೂಡುವೆನೆಂದನು || ||೮೦||

ಭಂಡುಮಾತನಾಡುತಿದ್ದಿ | ಕಂಡರತಿ ಚೆಲುವೆ ನಿನ್ನ |
ಗಂಡನಾರು ದೇಶವಾವುದು |
ಪುಂಡರೀಕಲೋಚನೆ ಭೂ | ಮಂಡಲೇಶ ರಾಮದೇವರ |
ಕಂಡುದೆಲ್ಲಿ ಪೋಗು ಸುಮ್ಮನೆ || ||೮೧||

ಎಂದ ಮಾತ ಕೇಳಿ ಧೈರ್ಯ | ಗುಂದಿ ಕೋಪಾಕ್ರಾಂತಳಾಗಿ |
ಬಂದಳು ಶ್ರೀ ರಾಮನಲ್ಲಿಗೆ |
ಚಂದವಾಯ್ತು ರಾಘವಾ ನಿ | ನ್ನಿಂದ ಬುದ್ಧಿವಂತ ತಮ್ಮ |
ನೆಂದರೆ ಜಾನಕಿ ನಕ್ಕಳು || ||೮೨||

ರಾಗ ಶಂಕರಾಭರಣ ಮಿಶ್ರ ಅಷ್ಟತಾಳ

ಏಕಪತ್ನಿಯ ವ್ರತ ನಿನಗೆ | ಬ್ರಹ್ಮ |
ಚಾರಿತ್ವ ಸಾಕಾರಿಸುತಿದೆ ತಮ್ಮನಿಗೆ |
ಬೇಕಂತೆ ಗುರುತವಾತನಿಗೆ | ಪಾಲಿಸಯ್ಯ ವಿ |
ವೇಕದಿಂದನುಜ ಲಕ್ಷ್ಮಣಗೆ || ||೮೩||

ನಗೆಗೇಡ ಮಾಡಿದಿರಲ್ಲ | ಸುಮ್ಮನೆ ಬಂದು |
ಹಗುರವಾದೆನು ನಿಮಗೆಲ್ಲ |
ಹಗರಣ ಗೆಯ್ವುದು ಸಲ್ಲ | ಎನ್ನ ವಂಚಿಸಿ |
ಮಿಗುವರಿವುದು ಸಮವಲ್ಲ || ||೮೪||

ಚದುರೆ ಬಾ ಬಾರೆಂದು ಕರೆದು | ರಾಮನಂಬಿನ |
ತುದಿಯೊಳ್ ಮೂಗನು ಕೊಯ್ಯಲು ಬರೆದು |
ಒದಗಿ ತೋರಿಸು ಬೆನ್ನ ಸರಿದು | ಈ ಕುರುಹ ನೋ |
ದಿದರೆ ಕೂಡುವ ನಲಿನಲಿದು || ||೮೫||

ಎಂದ ಮಾತನು ಕೇಳಿ ಕಡೆಗೆ | ನಲ |
ವಿಂದ ಬಂದಳು ತಮ್ಮನೆಡೆಗೆ |
ವಂದಿಸಿದಳು ಪಾದದೆಡೆಗೆ | ಬೆನ್ನ ನೋಡು ನೋ |
ಡೆಂದು ರಕ್ಕಸಿ ಪೇಳ್ದ ನುಡಿಗೆ || ||೮೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಣ್ಣನಾಜ್ಞೆಯ ನೋಡಿ ಲಕ್ಷ್ಮಣ |
ತನ್ನ ಮನದಲಿ ತಾನೆ ನಗುತಲಿ |
ಕನ್ನೆ ಪ್ರಾಯದ ಚದುರೆ ಬಾ ಮೋ | ಹನ್ನಕಾರಿ || ||೮೭||

ಇತ್ತ ಬಾರೆಂದೆನುತ ಹಸ್ತವ |
ನೆತ್ತಿ ತವಕದೊಳೆರಡು ಮೊಲೆಗಳ |
ನೊತ್ತಿ ಎಳೆದಾ ಖಡುಗದಿಂದಲಿ | ಕತ್ತರಿಸಿದ || ||೮೮||

ಕೆತ್ತಿದನು ನಾಸಿಕವನುದ್ದಕೆ |
ರಕ್ತಮಾಂಸಗಳುದಿರೆ ಭರದಲಿ |
ಮತ್ತೆ ಕೂಗಿದಳಸುರೆ ಶರಧಿಯೆ | ಬತ್ತುವಂತೆ || ||೮೯||

ನೋಡುವಳು ಮಾಂಸಗಳ ಮೊಲೆಯೀ |
ಡಾಡುವಳು ಬಾಯ್ದೆಗೆದಸುರೆ ಹೊರ |
ಳಾಡುವಳು ಮನದೊಳಗೆ ಜಾನಕಿ | ನೋಡಿ ಬೆದರೆ || ||೯೦||

ರಾಗ ಮಾರವಿ ಮಟ್ಟೆತಾಳ

ರಾಘವಾ ಲೇಸು ಲೇಸಾಯಿ | ತೀಗ ನೀಮಾಡಿರುವ ಮೋಸ |
ಆಗಲಾಗಲದಕೇನೀಗ | ತಾಳು ತಾಳಯ್ಯ || ||೯೧||

ಎನ್ನಗ್ರಜರಿಂಗಿದನೆಂದು | ನಿನ್ನ ಸತಿಯಳನ್ನು ತಂದು |
ಬನ್ನಬಡಿಸದಿದ್ದರೆ ನಾ | ಹೆಣ್ಣಿನ ಕುಲವೆ || ||೯೨||

ಎತ್ತ ಹೋದರತ್ತ ಬಿಡದೆ | ಮತ್ತೆ ನಿನ್ನ ಹೆಂಡತಿಯ |
ಎತ್ತಿಕೊಂಡೊಯ್ಯದಿದ್ದರೆ ನಾ | ಹೊತ್ತದ್ದು ಮೊಲೆಯೆ || ||೯೩||

ಸೃಷ್ಟಿ ಈರೇಳರೊಳು ಬ | ಚ್ಚಿಟ್ಟುಕೊಂಡಿದ್ದರೂ ಅವಳ |
ಬಿಟ್ಟು ಹೋದೆನಾದರೆ ನಾ | ನುಟ್ಟಿದ್ದು ಸೀರೆಯೆ || ||೯೪||

ವಾರ್ಧಕ

ಪಂಥಗಳನಾಡಿ ಮೊಲೆಮೂಗಿನುರಿಗೌಷಧಿಯ
ಮಂತ್ರಗಳನೆಸಗಿ ಭೋರೆಂದಾರ್ದು ಕನಲಿ ತ
ನ್ನಂತರಂಗದೊಳು ಪಗೆವಿಡಿದು ನಾನಾ ಪರಿಯ ಚಿಂತಿಸುತ ನಡೆತಂದಳು |
ಎಂತಾದಡಾಗಲಾ ರಾಮಲಕ್ಷ್ಮಣರ್ಗೆ ಕೇ
ಡಂ ತಾರದಿರೆನೆಂದು ಶೀಘ್ರದಿಂದಯ್ದಿ ವೃ
ತ್ತಾಂತಮಂ ಖರದೂಷಣಾದಿಗಳ ಮುಂದೆ ತಾ ನಿಂತುಕೊಂಡಿಂತೆಂದಳು || ||೯೫||

ರಾಗ ತೋಡಿಮಿಶ್ರ ನೀಲಾಂಬರಿ ಏಕತಾಳ

ಅಣ್ಣ ಕೇಳಿಂತೆನಗಾದುದೇ | ಈ ಮಾನಭಂಗ |
ಹೆಣ್ಣುಜನ್ಮಕೊದಗಿ ಪೋದುದೇ ||
ಕಣ್ಣಾರೆ ನೀ ನೋಡಬಾರದೆ | ಎನ್ನಯ ಮೆಯ್ಯ |
ಬಣ್ಣವು ಕಂಗಳಿಗೆ ತೋರದೆ || ||೯೬||

ದಶರಥರಾಯನ ಮಕ್ಕಳಂತೆ | ಇಬ್ಬರು ತಮ್ಮ |
ವಸುಧೆಯನ್ನು ಬಿಟ್ಟಿಹರಂತೆ ||
ಅಸಮ ಸಾಹಸಿಗಳಂತೆ | ಏನೆಂದು ನಾ ವ |
ರ್ಣಿಸುವೆನಯ್ಯೊ ರಾಘವನ ಕಾಂತೆ || ||೯೭||

ತಮ್ಮನಾದ ಲಕ್ಷ್ಮಣನು ತಾನು | ಎನ್ನೆರಡೂ ಕುಚವ |
ಸುಮ್ಮನೀಗ ಕೊಯ್ದುಬಿಟ್ಟನು |
ಹೆಮ್ಮೆಯಿಂದ ಮೂಗ ತರಿದನು | ಎನ್ನಗ್ರಜರು |
ನಿಮ್ಮಂಥವರಿದ್ದೂ ಹೀಗಾದೆನು || ||೯೮||

ಪುಂಡರೀಕನೇತ್ರೆಯೊರ್ವಳು | ರಾಮಚಂದ್ರಗೆ |
ಹೆಂಡತಿಯಾಗಿರುವವಳು ||
ಕಂಡರೆ ರಂಭೆಯಂತಿರ್ಪಳು | ಬೇಗದಿ ಕದ್ದು |
ಕೊಂಡು ಬಂದರೆ ನಿನಗಾಪಳು || ||೯೯||

ರಾಗ ಭೈರವಿ ಝಂಪೆತಾಳ

ದುರುಳೆಯಾಡಿದ ನುಡಿಯ | ದುಷ್ಟಖರ ಕೇಳುತ್ತ |
ಶಿರವ ತೂಗಿದನಂದು | ಹರಹರಾಯೆಂದು || ||೧೦೦||

ತಂಗಿಗೀಪರಿ ಮಾನ | ಭಂಗವೆಸಗಿದ ಮೇಲೆ |
ವಿಂಗಡದೆ ನಾವಿದ್ದು | ಇನ್ನೇನು ಫಲವು || ||೧೦೧||

ಅಸುರರೊಳಗಾರಿಹರು | ಅಸಮಸಾಹಸರೆಂದು |
ಕುಶಲದೊಳು ಕರೆದೆಂದ | ತ್ರಿಶಿರನೆಂಬವನ || ||೧೦೨||

ರಾಮಲಕ್ಷ್ಮಣರ ನಿ | ರ್ನಾಮವೆಸಗುತ ರಣದಿ |
ಕಾಮಿನಿಯ ತಾರೆಂದ | ಕಡುತವಕದಿಂದ || ||೧೦೩||

ಕಂದ

ಅಗ್ರಜನಾಡಿದ ಮಾತಿಗೆ
ಉಗ್ರಾಂತದಿ ತ್ರಿಶಿರನಾಗ ಚಾಪವ ಕೊಂಡುಂ |
ಶೀಘ್ರದಿ ಬಂದಾವನದೊಳು
ಭೋರ್ಗರೆಯುತ ಪರ್ಣಶಾಲೆಯಡೆಗೈತಂದಂ || ||೧೦೪||

ರಾಗ ಮಾರವಿ ಮಟ್ಟೆತಾಳ

ಆರೆಲೋ ಮುಂದಿರುವ ಧೀರನೇ | ಸಂಗ್ರಾಮಶೂರ |
ನಾರೆಲೋ ಮುಂದಿರುವ ಧೀರನೆ || ಪಲ್ಲವಿ ||

ಮೂರು ತಲೆಯ ನೋಡೊ ಯೆನ್ನ | ಶೂರತನವು ಬೇಡ ನಿನ್ನ |
ಬೇರುಸಹಿತ ಕಡಿದು ಕೊಚ್ಚಿ | ನೂರು ಚೂರು ಮಾಳ್ಪೆನೀಗ || ||೧೦೫||

ತಂಗಿಯಾದ ಶೂರ್ಪಣಖೆಯ | ಹೆಂಗುಸೆಂದು ನೋಡದವಳ |
ತುಂಗಕುಚವ ಕೊಯ್ದು ನಾಸಿ | ಕಂಗಳನ್ನೆ ತರಿದ ಮೂಢ || ||೧೦೬||

ಪುಂಡುಹುಡುಗ ಲಕ್ಷ್ಮಣನ | ಕಂಡಮಾತ್ರದಲ್ಲಿ ಮುನ್ನ |
ಖಂಡಖಂಡವಾಗಿ ಕಡಿದು | ಕೆಂಡದಲ್ಲಿ ಸುಟ್ಟು ತಿನುವೆ || ||೧೦೭||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ಈ ಪರಿಯಲಿ ಭಾಷೆಗಳನು | ಭೂಪನೊಡನೆ ಪೇಳಿ ಕೈಯ |
ಚಾಪವನ್ನು ನೆಗಹಿಶರವ | ತಾಪದಿಂದ ಬಿಡಲು ರಾಮ |
ಮಾಪುಗೆಯ್ದು ತಿರುಗಿ ನೋಡಿದ | ಬಳಿಕ ಸುಪ್ರ |
ತಾಪದಿಂದ ಶರವ ಹೂಡಿದ | ದನುಜರೊಡನಾ |
ಟೋಪದಿಂದ ಯುದ್ಧ ಮಾಡಿದ ||
ಆರೆಲೋ ಮದಾಂಧವೀರನೆ || ||೧೦೮||

ಜಡಿದು ಚಾಪದಿಂದ ಬಾಣ | ಬಿಡಲು ಗಿರಿಗಳದಿರುವಂತೆ |
ನಡುಗೆ ಮುನಿಗಳಸುರಗಂಜಿ | ಧಡಿಗ ದೈತ್ಯನಾರಭಟೆಗೆ |
ಮಡದಿ ಬಾಯ ಬಿಡುತಲಿರ್ದಳು | ಲಕ್ಷ್ಮಣಾಖ್ಯ |
ನೆಡೆಗೆ ಬೇಗದಿಂದ ಸಾರ್ದಳು | ಧುರವ ಕಾಣು |
ತೊಡನೆ ಮನದಿ ಬೆದರುತಿರ್ದಳು ||
ಏನನೆಂಬೆನಂದಿನಾಹವ || ||೧೦೯||

ದುಷ್ಟ ದನುಜನೊಡನೆ ತಾನಿ | ನ್ನೆಷ್ಟು ಕಾದಲೆನುತ ಶರವ |
ಬಿಟ್ಟು ರಾಮ ಕಣನೊಳಿ | ದ್ದಷ್ಟು ಬಲವನೆಲ್ಲ ಯಮನ |
ಪಟ್ಟಣಕ್ಕೆ ಸೇರಿಸಿರ್ದನು | ಜನಕ ಸುತೆಯ |
ನೆಟ್ಟ ಭಯವ ಹಾರಿಸಿರ್ದನು | ಮಡಿದ ಹೆಣನ |
ಬೆಟ್ಟ ಸತಿಗೆ ತೋರಿಸಿರ್ದನು ||
ಪೇಳಲೇನು ರಣಚರಿತ್ರವ || ||೧೧೦||

ಈಸು ಬಲವನೆಲ್ಲ ಸವರಿ | ದಾ ಸಾಮರ್ಥ್ಯಗಳ ಕೇಳಿ |
ಮೋಸಗತಿಯೊಳಿವರ ಗೆಲ್ವ | ಭಾಷೆಯನ್ನು ಹೂಡಿ ಬಂದ |
ದೂಷಣಾಸುರನ್ನ ಮಡುಹಿದ | ಅವನ ತಲೆಯ |
ಗಾಸಿಮಾಡಿ ಧರೆಗೆ ಕೆಡಹಿದ | ರಘುಜ ಮಹೋ |
ಲ್ಲಾಸದಿಂದ ಶರವ ತುಡುಕಿದ ||
ಒರೆಯಲೇನು ಧುರದ ಭಂಗವ || ||೧೧೧||

ವಾರ್ಧಕ

ತ್ರಿಶಿರಮೊದಲಾಗಿ ದೂಷಣ ಭಂಡ ಸಹಿತ ರಾ
ಕ್ಷಸರೆಲ್ಲ ಬಂದು ಕಾಳೆಗಗೊಟ್ಟು ಮಡಿಯೆ ನಾ
ಲ್ದೆಸೆ ತುಂಬುವಂತೆ ಮಾರ್ಬಲವೆರಸಿ ಬಂದು ಖರನೆಂಬಸುರನಿದಿರಾದನು |
ಮಸೆದಲಗು ಕಣೆಯ ಕಂಪಣ ಶೂಲ ಖಡ್ಗ ಪೆ
ರ್ಮುಸಲ ಮುದ್ಗರ ಪಿಂಡಿವಾಳ ಪಟ್ಟಸವೆಂಬ
ಪೆಸರಾಯುಧಂಗಳಂ ತೆಗೆದು ಮುಂದಿಳುಹಿಯಾರ್ಭಟಿಸಿದಂ ರೋಷದಿಂದ || ||೧೧೨||

ರಾಗ ಶಂಕರಾಭರಣ ಮಟ್ಟೆತಾಳ

ಘೋರ ರೂಪಿನಿಂದ ಖರನು | ಭಾರಿಶರವನೆಸೆಯಲದನು |
ವೀರ ರಾಘವಾಂಕ ಕಡಿದು | ವಾರಣಿಸಿದನು ||
ಬೇರೆ ಮತ್ತೊಂದು ಬಗೆಯ | ಭಾರಿ ಬಾಣವೆಸೆಯಲದರ |
ಬೇರ ಕಡಿದು ಬಿಸುಟ ರಾಮ | ಧಾರಿಣಿಯಲಿ || ||೧೧೩||

ಭೋರ್ಗುಡಿಸುತ ಖರನು ಬಹಳ | ಉಗ್ರದಿಂದಲಾರ್ಭಟಿಸಲು |
ಸ್ವರ್ಗಲೋಕ ಸಹಿತಲಿಳೆಯ | ಗರ್ಭ ನಡುಗಿತು ||
ಅರ್ಗಳಾಸ್ತ್ರ ಪಿಂಡಿವಾಳ | ಮುದ್ಗರ ಮೃಸುಂಡಿಗಳನು |
ದೀರ್ಘದಿಂದ ಬಿಡಲು ದನುಜ | ಭಾರ್ಗವಾರಿಗೆ || ||೧೧೪||

ತಂಡ ತಂಡದಾಯುಧಗಳ | ತುಂಡು ತುಂಡು ಮಾಡಿ ರಾಮ |
ಕೆಂಡ ಕಣ್ಣೊಳುದಿರೆ ಕೋಪ | ಗೊಂಡು ಜರೆಯುತ ||
ಗಂಡುಸಹುದೊ ಭಳಿರೆ ನಿನ್ನ | ಕಂಡೆ ಶೌರ್ಯಗಳನು ಮುನ್ನ |
ಭಂಡ ಫಡ ಫಡೆನುತ ಧನುವ | ಖಂಡಿಸಿರ್ದನು || ||೧೧೫||

ಬಿಟ್ಟು ಚಾಪವನ್ನು ಖರನು | ಮುಷ್ಟಿಯಿಂದ ತಿವಿಯೆ ರಾಮ |
ಹೊಟ್ಟೆಯೂರಿ ಬಿದ್ದ ಸೀತೆ | ನಟ್ಟನಡುಗಲು ||
ಕೆಟ್ಟೆನೆಂದು ಬೆದರುತಿರ್ದ | ಳಷ್ಟರೊಳಗೆ ಎದ್ದು ರಾಮ |
ದುಷ್ಟನಿಗ್ರಹಕ್ಕೆ ಮನವ | ಕೊಟ್ಟನಾಗಲೇ || ||೧೧೬||

ಮತ್ತೆ ತೆಗೆದು ಮೂಲಶರವ | ಶಕ್ತಿಯಿಂದ ತೊಡಿಸಿ ತಿರುವ |
ನೆತ್ತಿ ಸೆಳೆದು ಬಿಡಲು ಬೆದರಿ | ತಾ ತ್ರಿಲೋಕವು ||
ಮೃತ್ಯುಬಾಯಿದೆರೆದ ತೆರದಿ | ಸುತ್ತಿಶರವು ಹೂಂಕರಿಸುತ |
ಮಸ್ತಕಕ್ಕೆ ತಗಲಿ ಕೊರಳ | ಕತ್ತರಿಸಿದುದು || ||೧೧೭||

ಮತ್ತೇಭವಿಕ್ರೀಡಿತ

ಇನವಂಶಾಂಬುಧಿಚಂದ್ರ ರಾಘವ ಮಹಾರಕ್ಷೌಘಮಂ ಕೊಲ್ಲಲುಂ
ಮನಸಂತೋಷದೊಳಿರ್ದರಿತ್ತಲು ಮಹಾಮೌನೀಜನಂ ತೋಷದಿ |
ಅನುವಂ ಕಂಡುರೆ ದೇವದುಂದುಭಿಗಳುಂ ಧ್ವನಿಗೆಯ್ಯಲಾಕಾಶದಿ
ಇನಿತಾನಂದದಿ ಮಂಗಳೋತ್ಸವ ಮಹಾ ಶ್ರೀರಾಮನಿಂಗಾದುದು || ||೧೧೮||

ರಾಗ ರೇಗುಪ್ತಿ ಏಕತಾಳ

ಜಯ ರಾಘವೇಂದ್ರ | ಶ್ರೀರಾಮಚಂದ್ರ |
ಜಯ ಜಯತು ರಾಘವೇಂದ್ರ || ಪಲ್ಲವಿ ||

ಶರಧಿತನುಜೆಯರ | ಸಾ ಜನರಂಜನ |
ಉರಗಶಯನ ಪಂ | ಕಜನಾಭ |
ವರಅಹಲ್ಯಾಸತಿ | ಪಾಪವಿಮೋಚನ |
ದುರಿತದುರ್ಗಸಂ | ತರಣಗುಣ || ||೧೧೯||

ಕೌಸಲ್ಯಾಹೃದ | ಯಾಬ್ಧಿ ಚಂದ್ರ ಇನ |
ವಂಶರತ್ನ ತಾಟ | ಕೀಹರಣ |
ವಿಶ್ವರೂಪ ವಿ | ಶ್ವಾತ್ಮಕ ನರಹರಿ |
ವಿಶ್ವವಂದ್ಯ ಬಹು | ವಿಶ್ವಮಯ || ||೧೨೦||

ಸಾಕೇತಾಗ್ರಣಿ | ಸರ್ವೋತ್ತಮ ಸುರ |
ಲೋಕನಾಥ ಮಂ | ಗಲರೂಪ || ||೧೨೧||

ರಾಗ ಢವಳಾರ (ಸೌರಾಷ್ಟ್ರ) ಏಕತಾಳ

ಮಂಗಲಂ | ಶ್ರೀರಾಮ ಚಂದ್ರನಿಗೆ || ಪಲ್ಲವಿ ||

ಹೃದಯಕಮಲವೆಂಬ | ಹರಿವಾಣದೊಳು ದಿವ್ಯ |
ಸದಮಲ ಭಕ್ತಿರ | ಸದ ತೈಲದಿ |
ಪದುಮನಾಭನ ನಾಮ | ವೆಂಬ ಜ್ಯೊತಿಯ ತಂದು |
ಮುದದಿಂದ ಜ್ಞಾನದಾ | ರತಿಯೆತ್ತಿರೇ || ಮಂಗಲಂ || ||೧೨೨||

ದಶರಥನುದರದಿ | ಜನಿಸಿ ವಿಶ್ವಾಮಿತ್ರ |
ಋಷಿಯ ಮಾತಿನಲಿ ತಾ | ಟಕಿಯ ಕೊಂದು |
ಪಶುಪತಿಧನುವೆತ್ತಿ | ಪರಶುರಾಮನ ಗೆದ್ದ |
ವಸುಧಾಪಾಲಕನಿಗಾ | ರತಿಯೆತ್ತಿರೇ || ಮಂಗಲಂ || ||೧೨೩||

ಪಿತನ ವಾಕ್ಯವ ಕೇಳಿ | ಸೌಮಿತ್ರಿಯೊಡಗೂಡಿ |
ಸತಿಸಹಿತವೆ ಪಂಚ | ವಟಿಗೆ ಬಂದು |
ಖತಿಯಿಂದ ಖರದೂಷ | ಣರ ಕೊಂದು ಶರಣ ಸಂ |
ತತಿಯ ರಕ್ಷಿಸಿದಂಗಾ | ರತಿಯೆತ್ತಿರೆ || ಮಂಗಲಂ || ||೧೨೪||

ಸಾಕೇತ ಪುರವಾಸ ಸರ್ವಲೋಕಾಧೀಶ |
ಮಾಕಾಂತಮಹಿಮ ಮಂ | ಗಲರೂಪಗೆ |
ಲೋಕೇಶಜನಕ ಮೂ | ಲೋಕವಂದಿತನಿಗೆ |
ಸಾಕಾರಮೂರ್ತಿಗಾ | ರತಿಯೆತ್ತಿರೇ || ಮಂಗಲಂ || ||೧೨೫||

ವಾರ್ಧಕ

ಬಾಲಕರು ಕೇಳಿಂತು ಪಂಚವಟ್ಯದ ವನದಿ
ಖೂಳ ಖರದೂಷಣರ ಸಂಹರಿಸಿಯಾ ವನವ
ಪಾಳುಮಾಡುತವೆ ಋಷಿಗಳಿಗೆ ಮತ್ತಾವನದಿ ಕಾಲೋಚಿತಂ ಗೆಯ್ದರು |
ಮೇಲಲ್ಲಿ ಲವಕುಶರ ಕೂಡೆ ವಾಲ್ಮೀಕಿಮುನಿ
ಪೇಳಿದೀ ಸಂಧಿಯ ಪ್ರಸಂಗವನು ಧರೆಯೊಳಗೆ
ಹೇಳಿ ಕೇಳುವರನುಂ ಕಣ್ವಪುರದೊಡೆಯ ಗೋಪಾಲ ರಕ್ಷಿಸುವ ಬಿಡದೆ || ||೧೨೬||

|| ಗೋಪಾಲಕೃಷ್ಣಾಯ ನಮಃ ||

|| ಪಂಚವಟಿ ಪ್ರಸಂಗ ಮುಗಿದುದು ||