ವಾರ್ಧಕ

ಭರತ ಚತುರಂಗ ಸೇನೆಯನೆಲ್ಲ ಕರಕೊಂಡು
ಸಿರಿರಾಮಚಂದ್ರಗಭಿವಂದಿಸುತ ತಿರುಗಿದಂ
ವರಮಾತೆಯರ ಸಹಿತ ಗಂಗಾನದಿಯ ದಾಂಟಿ ಪುರಕೆ ಕಳುಹಿಸುತೆಲ್ಲರ |
ಇರಿಸಿ ನಿಜ ಪಟ್ಟಣಕೆ ಶತ್ರುಘ್ನನಂ ತಾನು
ಕರುಣಾಳು ಶ್ರೀರಾಮನಂಘ್ರಿಯಂ ಧ್ಯಾನಿಸುತ
ಇರಲು ನಂದಿಗ್ರಾಮದೊಳಗಿತ್ತ ರಾಮ ಮುನಿವರರ ಕೂಡಿಂತೆಂದನು || ||೧||

ರಾಗ ಶಂಕರಾಭರಣ ರೂಪಕತಾಳ

ಬಂದು ಬಹಳ ದಿವಸ ನಮ್ಮ | ಸಲಹಿಕೊಂಡಿರಿ |
ಇಂದು ಪರ್ಯಂತ ನಮ್ಮ | ನುಳುಹಿಸಿಕೊಂಡಿರಿ || ||೨||

ಮುಂದೆ ಪೋಪೆವಿನ್ನು ನಾವು | ಕಳುಹಿ ನಮ್ಮನ್ನು |
ಒಂದು ದಿನವೂ ಮರೆವುದಿಲ್ಲ | ಮುಂದೆ ನಿಮ್ಮನು || ||೩||

ದಂಡಕಾರಣ್ಯದೆಡೆಗೆ | ದಾರಿಯಾವುದು |
ಹಿಂಡು ಮುನಿಗಳಿಪ್ಪ ವನದ | ತಂಡವಾವುದು || ||೪||

ಎನುತ ರಾಮ ಕೈಯ ಮುಗಿದು | ಕೇಳ್ದ ಮಾತಿಗೆ |
ಮುನಿಗಳೆಲ್ಲ ಗುರುತವನ್ನು | ಪೇಳ್ದರಾತಗೆ || ||೫||

ಮುಂದೆ ರಾಮ ನಡುವೆ ಸೀತೆ | ಹಿಂದೆ ಲಕ್ಷ್ಮಣ |
ಒಂದೆ ಮತದಿ ಚಿತ್ರಕೂಟ | ದಿಂದ ಪೊರಟರು || ||೬||

ಬನ್ನಬಡಿಸಿ ಶಂಬುಕಾಸು | ರನ್ನ ಗೆಲಿದರು |
ಬಿನ್ನವಿಸುವ ಋಷಿಗಳಾಶ್ರ | ಮವನು ಕಳೆದರು || ||೭||

ವಾರ್ಧಕ

ಗಿರಿಸರಸಿ ಕಾನನಂಗಳೊಳು ಗುಹೆ ಕಲ್ಲಿನೊಳು
ತೆರಳಿ ಬಂದವರು ಬಹುದಿವಸ ಉಪವಾಸದಿಂ
ದಿರಲು ಚಳಿಗಾಳಿ ಬಿಸಿಲ್ ಬೇಸರಿಕೆಯೆಣ್ಣೆ ನೀರಿಲ್ಲದಾಸರಿನಟ್ಟುಳಿ |
ಬರದ ನಿದ್ರೆಯ ರಾಕ್ಷಸರ್ಕಳಾರ್ಭಟೆ ಕೂಡೆ
ಪಿರಿದಾದ ಸಿಂಹಶಾರ್ದೂಲಗರ್ಜನೆಯ ನಿ
ಷ್ಠುರಕೆ ಬಸವಳಿದೊಂದು ದಿನ ತನ್ನ ಕಾಂತಂಗೆ ಧರಣಿನಂದನೆ ನುಡಿದಳು || ||೮||

ರಾಗ ಘಂಟಾರವ ಏಕತಾಳ

ಕಾಂತ ರಾಮಚಂದ್ರದೇವ | ಚಿಂತೆ ಹೆಚ್ಚಿತೆನ್ನ ಜೀವ |
ಅಂತರಿಸಲಾರೆನೀಗ | ಇಂತು ಪೋಪುದೇಕೊ ಬೇಗ || ||೯||

ನಡೆಯಲಾರೆನಯ್ಯೊ ಮುಂದೆ | ಅಡವಿಯಲ್ಲೊ ನೋಡು ಹಿಂದೆ |
ನಡುಗುತಿದೆನ್ನ ಕೈಕಾಲು | ಒಡೆದುದೇತಕಯ್ಯೋ ಹೇಳು || ||೧೦||

ಜನಕರಾಯನನು ಕಾಣದೆ | ಮನಸು ಬಹಳ ಕರಗುತಿದೆ |
ಕನಸಿನಲ್ಲಿ ಕಂಡೆ ತಾಯ | ನೆನಸಿ ಬಡವಾದೆ ಪ್ರೀಯ || ||೧೧||

ವಾರ್ಧಕ

ಬಸವಳಿದು ಸೀತೆ ಮೈಗುಂದಿ ಕಾಲೊಡೆದು ನೆರೆ
ಬಸಿವರುಣಧಾರೆಯಲಿ ಬಟ್ಟೆ ಕೆಸರಾಯ್ತು ಮಾ
ತುಸುರಲಾರದೆ ಬಿದ್ದಳಬುಜಾಕ್ಷಿ ತಲೆತಿರುಗಿ ಕಣ್ಣಾಲಿ ಮೇಲೊತ್ತಿತು ||
ಕುಶನೆ ಕೇಳಿದನು ಲಕ್ಷ್ಮಣ ಕಂಡು ರಾಮನೊಡ
ನುಸುರೆ ರಘುಕುಲ ತಿಲಕ ಕಮಲದೆಲೆಯಲಿ ನೀರ
ಪಸರಿಸುತ ಕಣ್ಣಿಗೊತ್ತ್ಯಮೃತಹಸ್ತದಿ ತನುವ ತಡವರಿಸುತಿಂತೆಂದನು || ||೧೨||

ರಾಗ ವರಾಳಿ ಆದಿತಾಳ

ದೃಷ್ಟಿಸಿ ನೋಡಿದೆಯೇನೊ | ತಮ್ಮಾ ತಮ್ಮಾ || ಜಾನಕಿ ಬಂದು |
ಕಷ್ಟ ಬಟ್ಟಳಲ್ಲೊ ಬರಿದೆ | ತಮ್ಮಾ ತಮ್ಮಾ ||
ಹೊಟ್ಟೆಗನ್ನವಿಲ್ಲದೆ ನಡೆದು | ತಮ್ಮಾ ತಮ್ಮಾ || ಅದರಿಂದ ಕಂ |
ಗೆಟ್ಟು ಮೂರ್ಛೆಹೋದಳಲ್ಲೊ | ತಮ್ಮಾ ತಮ್ಮಾ || ||೧೩||

ಜನಕನುದರದಲ್ಲಿ ಜನಿಸಿ | ತಮ್ಮಾ ತಮ್ಮಾ | ಎನ್ನ ಕೈವಿಡಿದು |
ಇನಿತು ಭಾಗ್ಯ ಉಂಡಳಲ್ಲೊ | ತಮ್ಮಾ ತಮ್ಮಾ ||
ಘನತೆಯಿಲ್ಲ ಇನ್ನಿವಳಿಂದ | ತಮ್ಮಾ ತಮ್ಮಾ | ಅಯೋಧ್ಯೆಯಲ್ಲಿ |
ವನಿತೆಯನ್ನು ಬಿಟ್ಟು ಬಾರೊ | ತಮ್ಮಾ ತಮ್ಮಾ || ||೧೪||

ರಾಗ ಪಂತುವರಾಳಿ (ಪಂಚಘಾತ) ಮಟ್ಟೆತಾಳ

ರಘುಕುಲೇಂದ್ರ ರಾಮ ನಿನ್ನ | ಅಗಣಿತಾಶ್ರಯವ ಬಿಟ್ಟು |
ಅಗಲಲಾರೆ ನಿಮಿಷ ತವ | ಪಾದದಾಣೆಗೊ || ||೧೫||

ನೀರ ನಿನ್ನನಿಲ್ಲಿ ಬಿಟ್ಟು | ಊರೊಳೇನು ಭಾಗ್ಯವುಣಲಿ |
ಬೇರೆ ಮತಗಳಿಲ್ಲವಯ್ಯ | ನೀರಜೇಕ್ಷಣ || ||೧೬||

ಎನಲು ಸೀತೆ ರಾಮನತ್ರಿ | ಮುನಿಪನಾಶ್ರಮಕ್ಕೆ ಬರಲು |
ಘನವಿವೇಕದಿಂದ ತಿಳಿದು | ಧರ್ಮಶಾಸ್ತ್ರವ || ||೧೭||

ಅನಸೂಯಾದೇವಿ ಭೂ | ಷಣವ ಕೊಡಲು ತೆಗೆದುಕೊಂಡು |
ಮನದ ಹರುಷದಿಂದಲಲ್ಲಿ | ದಿನವ ಕಳೆದರು || ||೧೮||

ವಾರ್ಧಕ

ತಿಂಗಳತ್ರಿಯ ಮುನಿಪನಾಶ್ರಮದೊಳಿರ್ದು ರಘು
ಪುಂಗವಂ ಬಳಿಕೆದ್ದನಲ್ಲಿಂದ ಮುಂದೆ ಕರು
ಣಂಗಳಿಂ ಜಮದಗ್ನಿಯಂ ಕಂಡು ಖಳವಿರಾಧನ ಮುರಿದು ಮಾರ್ಗದೊಳಗೆ |
ಕಂಗೊಳಿಪ ದಂಡಕಾರಣ್ಯಕೈತಂದು ಶರ
ಭಂಗಋಷಿಯಂ ಕಂಡು ಮೈತ್ರಾವರುಣಿಯಲ್ಲಿ
ಸಂಗಡಿಸಿ ಮೂವತ್ತು ದಿವಸ ಬಳಿ ಕೈ ತಂದು ಕುಂಭಸಂಭವನಲ್ಲಿಗೆ || ||೧೯||

ರಾಗ ಕಾಂಭೋಜಿ ಏಕತಾಳ

ರಾಮ ಹರೇ | ರಘು | ರಾಮ ಹರೇ |
ಭೂಮಿಪಾಲಕ ಚಾರು | ಶೀಲ ಸಜ್ಜನಪಾಲ || ಪಲ್ಲವಿ ||

ಖರದೂಷಣ ದಶ | ಶಿರ ಮುಂತಾದಸುರರ |
ಶಿರವ ಕತ್ತರಿಸುವ | ಶರವಿದೇ ಸಹಜ || ||೨೦||

ಕಂದ

ಚಾಪವ ಕೊಟ್ಟ ಮುನೀಂದ್ರಗೆ
ಭೂಪಾಲಕ ಕೈಯ ಮುಗಿದು ಪೊರಟಲ್ಲಿಂದಂ |
ಈ ಪರಿ ವನಗಳ ಕಾಣುತ
ತಾಪಸರಂ ಮನ್ನಿಸುತ್ತ ಸೀತೆಗೆ ಪೇಳ್ದಂ || ||೨೧||

ದ್ವಿಪದಿ

ಕಂಡೆಯಾ ಜನಕಸುತೆ ಕಡುವಿಚಿತ್ರಗಳ
ದಂಡಕಾ ವನದೊಳಿಹ ಸಕಲವಸ್ತುಗಳ || ||೨೨||

ಇದೆ ಲವಂಗ ವಿಳಂಗ ಕುರವಕವು ಬದರಿ
ಇದೆ ಕಕ್ಕೆ ಕಲಗು ಕಮ್ಮರ ಕಡಿಕು ಕದಳಿ || ||೨೩||

ಆಲ ಲಂಬಟೆ ಕಣಿಲು ಬೆಟ್ಟು ಬೊಬ್ಬುಳಿಯು
ಸಾಲ ಕಿತ್ತಿಳೆ ಪನಸ ಬಿಲ್ವ ಸಮಿಧೆಗಳು ||೨೪||

ತೂಗುತಿಹ ಚೂತಫಲವಿದೆ ಸುತ್ತಮುತ್ತ
ಪೂಗ ಪುನ್ನಾಗ ಕಲ್ಲರಳಿಯಶ್ವತ್ಥ || ||೨೫||

ಇದೆ ತವಸೆ ತಡಸೆ ತಂಡಸಿಲೆ ರೆಂಜೆಗಳು
ಇದಕೊ ರುದ್ರಾಕ್ಷಿ ಖರ್ಜೂರ ಬೆಳಲೆಗಳು ||೨೬||

ಬಿದಿರು ಬಿಲವಟ್ಟಾಲ ಬೀಜಪುರ ಮತ್ತಿ
ಇದೆ ನೆಲ್ಲಿ ಮಧುಕ ಮಾದಳ ಮರುಗ ಇತ್ತಿ || ||೨೭||

ಕಲ್ಲತ್ತಿ ಕದವು ಕಾಲತಿ ಕಟ್ಟು ಸೋದಿ
ಬೆಲ್ಲವತ್ತವು ಕಪಿತ ಸುರಹೊನ್ನೆ ಬೋದಿ || ||೨೮||

ಚಿತ್ತವರೆ ಯಣಿಲೆ ಮುಳುಮುತ್ತುಗಾದಿಗಳ
ಮತ್ತೆ ನೋಡಿಲ್ಲಿರುವ ಕರ್ಣಿಕಾರಗಳ || ||೨೯||

ಹಿಂತಾಳ ಹಾಲೆ ಹಿಪ್ಪಲಿ ಹುಗಿಲು ಹಗುಳ
ಮುಂತಾದ ಮಿಕ್ಕುಳ್ಳ ಗುಗ್ಗುಳಾದಿಗಳ || ||೩೦||

ಕಲ್ಲರಳಿ ಕರ್ಪೂರ ಕೊಡಸಿಗೆಯು ಮೊದಲ
ವೆಲ್ಲ ತರ ವೃಕ್ಷಗಳ ಕಂಡೆಯಾ ಬದಲ || ||೩೧||

ಕಡವು ಕಾತರು ಜಾಲಿ ಕೈಸೋರೆ ಬೇಲ
ಗಿಡಗಳು ಕಪಿತ್ಥ ಸುರಹೊನ್ನೆಗಳ ಸಾಲ || ||೩೨||

ಚಾರು ಜಂಬೀರ ವರನಾಗಚಂಪಕವ
ಗೇರು ಗಾವಟೆ ಚಳ್ಳೆ ತಿಲಕ ತರುಕುಲವ || ||೩೩||

ಇದೆ ಬಾಗೆ ಸೀಗೆ ಮೊದಲಾದ ತರುಚಯವ
ಸುದತಿಮಣಿ ನೋಡಿತ್ತ ವನದ ಸಂಭ್ರಮವ || ||೩೪||

ಹರಿ ಕ್ರೋಡ ಖಡ್ಗಿಯ ಕರಂಗಿ ಕಡಸಗಳ
ಶರಭ ಶಾರ್ದೂಲ ಸಾರಂಗ ಕರಡಿಗಳ || ||೩೫||

ಕಾಡಾನೆ ಕಾಳ್ಕೋಣ ಕಾಡೆಮ್ಮೆಗಳನು
ಕಾಳ್ನಾಯಿ ಕಾಡ್ಕೋಳಿ ಕಾಳ್ಬೆಕ್ಕುಗಳನು || ||೩೬||

ಚಾತಕ್ಕಿ ಬೋಳಕ್ಕಿ ಜಕ್ಕವಕ್ಕಿಗಳ
ನೂತನ ಕಳಿಂಗ ಗೊರವಂಕ ಗುಬ್ಬಿಗಳ || ||೩೭||

ಕೋಡಗಗಳುರಿಗಣ್ಣ ಜಂಬುಕಾದಿಗಳ
ಕಾಡೊಳೋಡಾಡುತಿಹ ಮೂಷಿಕಾದಿಗಳ || ||೩೮||

ಕಸ್ತೂರಿಮೃಗ ಚಮರಿ ಗರಗ ಮತ್ತಿರವ
ಇತ್ತನೋಡ್ ಮುಂಗುಲಿಯ ಚಂದದಾನನವ || ||೩೯||

ಶುಕಪಿಕಂಗಳ ಕೇಳು ನುಡಿಯ ಗಾನಗಳ
ನಿಖಿಲ ವನದಲಿ ನೋಡು ಸಕಲ ವಸ್ತುಗಳ || ||೪೦||

ಇಂತೆಂದು ತೋರಿಸುತ ನಡೆತಂದರಂದು
ಕಾಂತೆ ಜಾನಕಿಸಹಿತ ಪಂಚವಟಿಗಂದು || ||೪೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನೋಡಿ ನಿರ್ಮಲ ಜಲಸಮೀಪದಿ |
ಮಾಡಿಕೊಂಡರು ಪರ್ಣಶಾಲೆಯ |
ರೂಢಿಪಾಲರು ಪಂಚವಟ್ಯದ | ಕಾಡಿನೊಳಗೆ || ||೪೨||

ವನದ ಫಲಗಳ ಕೊಯ್ದು ಲಕ್ಷ್ಮಣ |
ದಿನದಿನವರಿಗೆ ತಂದುಕೊಡುವನು |
ವನದೊಳತಿಸುಖದಿಂದ ಕಳೆದರು | ದಿನವ ಕೆಲವು || ||೪೩||

ಒಂದು ದಿನ ಅಲ್ಲಿರುವ ಋಷಿಗಳು |
ಬಂದು ರಾಮನ ಚರಣಕೆರಗುತ |
ಲೆಂದರಾ ರಾಕ್ಷಸರ ಕೃತ ನಿ | ರ್ಬಂಧಗಳನು || ||೪೪||

ರಾಗ ಫರಜು ಅಷ್ಟತಾಳ

ಚಿತ್ತೈಸಯ್ಯ ರಾಮ ನಿನ್ನೆ | ಘೋರ ದನುಜನೊಬ್ಬ ಬಂದು |
ವ್ಯರ್ಥ ವಂಚಿಸುತ್ತ ನಮ್ಮ ನು | ಯಜ್ಞಶಾಲೆಯ |
ಕಿತ್ತು ಬೀಸಾಡಿ ಪೋದನು || ||೪೫||

ಮತ್ತೊಬ್ಬ ಖಳನು ದೂರ | ನಿತ್ತುಕೊಂಡು ಕಲ್ಲಲಿಟ್ಟು |
ಹತ್ತುಗಾಯವ ಮಾಡಿದ | ಮೂಗಿಂದ ಬಹ |
ನೆತ್ತರ ನೀನು ನೋಡಿದ್ಯಾ || ||೪೬||

ಭಂಡ ದೈತ್ಯರಿಬ್ಬರು ಮುಂ | ಕೊಂಡು ಬಂದು ನಮ್ಮ ಯಜ್ಞ |
ಕುಂಡಕೆಂಜಲನಿಟ್ಟರು | ವ್ಯಾಘ್ರಚರ್ಮವ |
ಕೊಂಡು ಕೂಡೆ ಓಡಿಪೋದರು || ||೪೭||

ಮೂರು ಮಂಡೆಯವನೊಬ್ಬ | ಘೋರದಾನವ ಬಂದು |
ನಾರುವಸ್ತ್ರವ ಸೆಳೆದ | ಜಪಗಳ ಮಾಳ್ಪ |
ಹಾರವ ಕಡಿದೋಡಿದ || ||೪೮||

ವಾರ್ಧಕ

ಎಂದು ಹುಯ್ಲಿಟ್ಟ ಋಷಿಗಳ ಮಾತ ಕೇಳ್ದು ರಘು
ನಂದನನು ನಸುನಗುತ ಬೆದರದಿರಿ ರಕ್ಕಸರ
ಕೊಂದು ಕೊಡುವೆನು ತಾಳಿ ಕಿರಿದು ದಿನದೊಳಗೆ ತಾನೆಂದೊಡಂಬಡಿಸಿ ಬಳಿಕ |
ಹಿಂದೆ ಕಳುಹಿದನವರ ಸಂತಯ್ಸಿ, ಮುನಿವಧುಗ
ಳೆಂದ ಮಾತನು ನೆನೆದು ಜನಕಸುತೆ ಭೀತಿಯಲಿ
ನೊಂದುಕೊಂಡವಳಾಗಿ ಭಯದಿಂದ ಕಾಂತನೊಳು ಕರವ ಮುಗಿದಿಂತೆಂದಳು || ||೪೯||

ರಾಗ ಎರುಕಲಕಾಂಭೋಜಿ ಏಕತಾಳ

ವನಜಲೋಚನ ಕೇಳ್ ಮುಂದೆ |
ಘನವಾದ ಘೋರಡವಿಯಂತೆ |
ಅನುವಿಲ್ಲದ ಗಹ್ವರವಂತೆ | ಅಲ್ಲಿ ರಕ್ಕಸರು |
ಮನೆ ಮಾಡಿಕೊಂಡಿಹರಂತೆ | ಹಿಂದೆ ಅನೇಕ |
ವನಿತೆಯರ ನೊಯ್ದಿಹರಂತೆ | ಈ ವಿಪಿನದೊಳಿರುವದು ಕಷ್ಟ ರಾಘವ || ||೫೦||

ರಾತ್ರಿಂಚರನಾಥನಾಗಿ |
ಮತ್ತೊಬ್ಬ ಖಳನಿರುವನಂತೆ |
ಮಸ್ತಕಂಗಳು ಹತ್ತುಂಟಂತೆ | ಆ ಮೇಲವಗೆ |
ಹಸ್ತಂಗಳಿಪ್ಪತ್ತುಂಟಂತೆ | ಹಣ್ಣುಗಳೆಂಬ |
ಪಿತ್ತ ತಲೆಗೇರಿಹುದಂತೆ | ಈ ವಿಪಿನದೊಳಿರುವುದು ಕಷ್ಟ ರಾಘವ || ||೫೧||

ವಾರ್ಧಕ

ಅಗ್ಗಳದ ದನುಜರಟ್ಟುಳಿಯನಾಲಿಸಿ ರಾಮ
ಶೀಘ್ರದಿಂ ಜನಕನಂದನೆಗೆ ಧೈರ್ಯವ ಪೇಳಿ
ಉಗ್ರಶರಚಾಪಮಂ ಕೊಂಡು ಮನದೊಳಗೆ ಶೌರ್ಯಾಗ್ನಿಯಂ ಪ್ರಜ್ವಲಿಸಲು |
ಭೋರ್ಗರೆವ ರಕ್ಕಸರ ದಂಡು ಬಾಯ್ಬಿಟ್ಟೊದರೆ
ನಿರ್ಘೋಷದಬ್ಬರದ ಗಮಕದಾರ್ಭಟೆಯ ಸಿಡಿ
ಲೊಗ್ಗರದ ಬೊಬ್ಬೆಯಿಂ ಶೂರ್ಪಣಖೆ ಬಂದಳಾ ಕಾನನಕೆ ಕುಲಗೇಡಿಯು || ||೫೨||

ರಾಗ ಕಲ್ಯಾಣಿ ಅಷ್ಟತಾಳ

ಆರೆಲೋ ಮನುಜ | ಈ ವನದೊಳಿಪ್ಪ | ನಾರೆಲೋ ಮನುಜ || ಪಲ್ಲವಿ ||

ಬಾರಿ ಬಾರಿಗೆ ಮೆಯ್ಯ ವಾಸನೆ | ಬೀರುತಿದೆ ಪೊಸ ಗಮರು ನಿಶಿಚರ |
ವೀರರೆಲ್ಲರು ಬನ್ನಿ ನಮ್ಮಯ | ಪಾರಣೆಗೆ ತುತ್ತಾಗಿ ಬಂದವ |
ನಾರೆಲೋ ಮನುಜ || ||೫೩||

ಇಷ್ಟು ಕಾಲದೊಳೊಬ್ಬರಿಲ್ಲಿಗೆ | ಥಟ್ಟನೇ ತನಗಂಜಿ ಬಾರರು |
ದಿಟ್ಟರಿವರಿಂದಾರು ನೋಳ್ಪಡೆ | ದೃಷ್ಟಿಗೋಚರವಿಲ್ಲ ಬಂದವ ||
ನಾರೆಲೋ ಮನುಜ || ||೫೪||

ಖಂಡ ಖಂಡವ ಬೇರೆ ಬೇರೆ | ತುಂಡು ತುಂಡಾಗೆಸಗಿ ನುಂಗುವೆ |
ಕೆಂಡದಲೆ ಸುಟ್ಟವರೆಲುಬುಗಳ | ನುಂಡು ತೇಗುವೆನೀಗ ಬಂದವ ||
ನಾರೆಲೋ ಮನುಜ || ||೫೫||

ಮತ್ತೇಭವಿಕ್ರೀಡಿತ

ಇತಿಯಾ ರಾಕ್ಷಸಿ ಭೀಕರಾಕೃತಿಯೊಳುಂ ಕೂಗಿಟ್ಟು ಬಂದಿರ್ದಡಾ
ಪೃಥಿವೀ ತಗ್ಗಿತು ಪರ್ವತಂಗಳದಿರಲ್ ನಾಲ್ದೆಸೆಗಳಂಜುತ್ತಲೇ |
ಅತಿವೇಗಂ ರಘುವೀರ ಚಾಪಶರಮಂ ಪಿಡಿಯಲ್ಕೆ ಕಂಡಾಗಲೂ
ಮಿಥಿಲೇಂದ್ರಾಕುಲಜಾತೆಯಂಜಿ ಬಳಿಕಂ ತಾ ಕಾಂತಗಿಂತೆಂದಳುಂ || ||೫೬||

ರಾಗ : ಘಂಟಾರವ ತ್ರಿವುಡೆತಾಳ

ರಾಘವ ನೀ ಎನ್ನ ಬಿಟ್ಟು | ಪೋಗದಿರಯ್ಯ |
ಈಗ ಬಂದಳಾ ರಾಕ್ಷಸಿ | ಕೂಗುತಾಳೆ ಆರ್ಭಟಿಸಿ || ಪಲ್ಲವಿ ||

ಲಕ್ಷ್ಮಣ ತಾನೆಲ್ಲಿದ್ದಾನೊ | ರಾಕ್ಷಸಿಯ ಕಂಡನೇನೊ |
ದಾಕ್ಷಿಣ್ಯವಿಲ್ಲದೆ ನಮ್ಮ | ಭಕ್ಷಿಸುವಳು ನೋಡು ನೀನು || ||೫೭||

ವ್ಯರ್ಥವಾಗಿ ಬಂದೆವು ಮುನಿ | ಪೋತ್ತಮರ ಮಾತ ಮೀರಿ |
ಮೃತ್ಯು ಮುಂದೆ ಬಂದಳ್ ಮಾರಿ | ತುತ್ತುಗೊಂಬಳೊಂದೇ ಸಾರಿ || ||೫೮||