ಭಾಮಿನಿ
ಗುರು ವಸಿಷ್ಠಾದ್ಯಖಿಲ ಹಿರಿಯರ
ಚರಣಕಭಿವಂದಿಸುತ ಮೂವರು
ವರಮಹಾಮಂದಿರವ ಹೊರಟರು ಪೂರ್ವಮುಖವಾಗಿ |
ಕರದೊಳಗೆ ಬಿಲ್ಬಾಣ ಗಜರಥ
ತುರಗ ಸಂದಣಿಯಿಂದ, ಲೋಕದ
ನೆರವಣಿಯ ನಾರಿಯರು ನೆರೆದಿಂತೆಂದರೊಳಗೊಳಗೆ || ||೧೫೪||
ರಾಗ ಆನಂದಭೈರವಿ ಆದಿತಾಳ
ಅಕ್ಕ ನೋಡಿಂಥ ಬಾಲರ | ದೇಶಾಧಿಪ ವ |
ನಕ್ಕೆ ಕಳುಹುವನಲ್ಲೆ ||
ಮುಕ್ಕಣ್ಣ ಶಿವನೆ ಬಲ್ಲ | ಕೈಕೆ ತಾನಿಂಥ |
ಮಕ್ಕಳ ಹೆರಲಿಲ್ಲವೆ || ||೧೫೫||
ಹದಿನಾಲ್ಕು ವರುಷ ಬಿಟ್ಟು | ಕೌಸಲ್ಯಾದೇವಿ |
ಗೆದೆಯೆಂತು ನಿಲ್ವುದವ್ವ ||
ಮದನಕೋಟಿಸ್ವರೂಪ | ಲಕ್ಷ್ಮಣ ನೋಡೆ |
ಮದುಮಗನಂತಿರುವ || ||೧೫೬||
ಎಲ್ಲರಂತಲ್ಲವೆ ಜೀವ | ಸುಮಿತ್ರೆಗೇನು |
ಕಲ್ಲೆದೆಯಾಯಿತವ್ವ ||
ಫುಲ್ಲಲೋಚನೆ ಸೀತೆಯ | ತಾಯ್ತಂದೆಯರು |
ಎಲ್ಲಿಹರೇನಾಹರೊ || ||೧೫೭||
ಎಷ್ಟು ತಪವ ಗೈದರು | ಇಂಥಾಚೆಲ್ವರು |
ಪುಟ್ಟುವರೇನೆಯಕ್ಕ ||
ಸೃಷ್ಟಿಗೆ ಸೂರ್ಯರಲ್ಲೆ | ಹೀಗಾದ ಮೇಲೆ |
ಕೆಟ್ಟಿತಯೋಧ್ಯಾಪುರ || ||೧೫೮||
ರಾಗ ಕಾಪಿ ಅಷ್ಟತಾಳ
ಬಂದರು ರಾಮ ಲಕ್ಷ್ಮಣರು | ಆನೆ |
ಮಂದಿ ಕುದುರೆ ತೇರು ಸಂಗಡ ಬರಲು || ಪಲ್ಲವಿ ||
ಕೇರಿ ಕೇರಿಗಳೆಲ್ಲ ಕಳೆದು | ತಮ್ಮ |
ಊರು ತಾಯ್ತಂದೆಯ ಹಂಬಲ ತೊರೆದು |
ಏರುಕಂಬನಿ ಧರೆಗಿಳಿದು | ಮುಂದೆ |
ಸೇರಿಪ್ಪ ಸಂಸಾರ ಬಂಧನ ಹರಿದು || ||೧೫೯||
ಮಾತಾಪಿತರ ಮೊಗ ನೋಡಿ | ಸುಮ್ಮ |
ನೇತಕೆ ಕ್ಲೇಶವೆಂದೆನುತ ಮಾತಾಡಿ |
ಪ್ರೀತಿಯಿಂದವರ ಕೊಂಡಾಡಿ | ನಾನಾ |
ರೀತಿಯಿಂದೆಲ್ಲರೊಳಪ್ಪಣೆ ಬೇಡಿ || ||೧೬೦||
ಭಾಮಿನಿ
ಊರ ಹೊರವಂಟವರು ಗಂಗಾ
ತೀರಪರ್ಯಂತರದಿ ನಿಂತಾ
ಬೇರೆ ಬೇರೆಲ್ಲರಿಗೆ ಕರಗಳ ಮುಗಿದು ಬೀಳ್ಕೊಂಡು |
ಸಾರೆ ನದಿಯನು ಮಂತ್ರಿಸಹ ರಥ
ವೇರಿ ನಡೆದರು ಮುಂದೆ ಪಯಣದಿ
ಮೂರುದಿನ, ತಡೆನಿಂದು ರಾಮ ಸುಮಂತ್ರಗಿಂತೆಂದ || ||೧೬೧||
ರಾಗ ನೀಲಾಂಬರಿ ಅಷ್ಟತಾಳ
ಮಂತ್ರೀಶ ಕೇಳಯ್ಯ ನಿನ್ನೊಳು | ಪೇಳು |
ವಂಥದೇನುಂಟು ಬಲ್ಲವನೊಳು ||
ಚಿಂತಿಪ್ಪ ಜನಕ ಮುಪ್ಪಿನ ಕಾಲ | ಎಂದು |
ನೀಂ ತಿಳಿದೆಲ್ಲರ ಸಲಹಯ್ಯ || ||೧೬೨||
ಭರತಶತ್ರುಘ್ನರು ಬರಲಿಲ್ಲ | ಬೇಗ |
ಕರೆಸಿಕೊಳ್ಳಲಿ ಹೇಳು ಧರಣೀಶ |
ವರಜನನಿಯರು ಚಿಂತಿಸುವರು | ಭರತ |
ಗರುಹು ಚಂದದಿ ನೋಡಿ ಸಲಹಲಿ || ||೧೬೩||
ಮನಸಿನೊಳಗೆ ಭೇದವೆಣಿಸದೆ | ನಾ ಬಾ |
ಹನಕ ಒಕ್ಕಲುಗಳ ದಣಿಸದೆ |
ಘನತೆಗೆ ಕಡಿಮೆ ಎಂದೆನಿಸದೆ | ಧರ್ಮ |
ವೆನಿಸಿ ರಕ್ಷಿಸಹೇಳು ಭರತಗೆ || ||೧೬೪||
ರಾಗ ಫರಜು ಏಕತಾಳ
ಈ ತೆರದಲಿ ಮಂತ್ರಿಯ ಕಳುಹಿಸಿ ರಘು |
ನಾಥ ಮುಂದಡಿಯಿಡಲು |
ಸೀತಾದೇವಿಯು ಲಕ್ಷ್ಮಣ ಸಹ ಬರು |
ವಾತನ ಗುಹನು ಕಂಡು || ||೧೬೫||
ನೂತನವಿದು ದಶರಥನಣುಗರು ಬಹ |
ರೀತಿಯ ನೆರೆ ತಿಳಿದು ||
ಪ್ರೀತಿಯ ಕಾಣಿಕೆಯಿತ್ತಡಿಗೆರಗುತ |
ಮಾತಾಡಿಸುತೆಂದ || ||೧೬೬||
ರಾಗ ಆಹೇರಿ ಮಟ್ಟೆತಾಳ
ಎನ್ನಯ ಕುಲದೇವೇಶ | ರಾಮಚಂದ್ರ | ಪಾದ |
ವನ್ನು ಕಂಡು ಧನ್ಯನಾದೆ | ರಾಮಚಂದ್ರ ||
ಮನ್ನರಧಿಪತಿ ನೀನು | ರಾಮಚಂದ್ರ | ರಾಜ್ಯ |
ವನ್ನುಬಿಟ್ಟು ಪೋಪುದೇನು | ರಾಮಚಂದ್ರ || ||೧೬೭||
ಶರಣ ಗುಹನೆ ಬಾಬಾ ಯಾ | ರರಿಯದಂದದಿ | ನಮ್ಮ |
ಭರದಿ ಮೂವರನ್ನು ನದಿಯ | ಕರೆಗೆ ದಾಟಿಸೊ ||
ತರಣಿಯುದಯವಾದರಿಲ್ಲಿ | ದ್ದವರು ಕಂಡರೆ | ಸುಮ್ಮ |
ನಿರದೆಮಾಳ್ಪರು ಛಲವ | ಬರುವೆವೆಂಬರು || ||೧೬೮||
ಕಂಜದಳನೇತ್ರೆ ಸೀತೆ | ರಾಮಚಂದ್ರ | ಕಣ್ಗೆ|
ರಂಜಿಪ ಲಕ್ಷ್ಮಣನು ಸಹ | ರಾಮಚಂದ್ರ ||
ಸಂಜೆಯಾಯಿತೀಹೊತ್ತು | ರಾಮಚಂದ್ರ | ನಾಳೆ |
ಮುಂಜಾನೆ ಎದ್ದು ಪೋಗಿ | ರಾಮಚಂದ್ರ || ||೧೬೯||
ವಾರ್ಧಕ
ಗುಹನಿಂತು ಪ್ರಾರ್ಥನೆಯ ಮಾಡಿ ತಾ ಸಕಲ ಸ
ನ್ನಹವ ಕೊಟ್ಟಲ್ಲಿದ್ದರಾದಿವಸ ರಾತ್ರಿಯಲಿ
ಬಹು ಮುಂಚಿತಾಗಿ ಮರುದಿನ ಎದ್ದು ಬಂದು ಭಾರದ್ವಾಜನಂ ಕಂಡರು |
ವಿಹಿತ ಮಾರ್ಗದಲಿ ತಪಸಿರುವ ಮುನಿಗೆರಗಿದಡೆ
ಬಹುಮಾನದಿಂ ಪರಸಿ ಮನ್ನಿಸಿದನಿವರುಗಳ
ಅಹುದು ಇನಕುಲದರಸುಗಳು ನೀವು ಬಂದ ಹದನೇನೆಂದು ಬೆಸಗೊಂಡನು || ||೧೭೦||
ರಾಗ ಘಂಟಾರವ ಝಂಪೆತಾಳ
ದಶರಥ ನೃಪಾಲನೊಳು | ವಸುಧೆಯನು ಬೇಡಿ ಪೊರ |
ಡಿಸಿದಳೆಮ್ಮನು ಕೈಕೆ | ಕೇಳಯ್ಯ ಮುನಿಪ || ||೧೭೧||
ಬೇಡವೆಂದರೆ ಮಾತ | ಕೇಳದೀ ಜಾನಕಿಯು |
ಕೂಡಿ ಬಂದಳು ಅಳುತ | ಕಾಡೊಳಿರಲೆಂದು || ||೧೭೨||
ಯಾರು ಪೇಳ್ದರು ಮಾತ | ಮೀರಿ ಲಕ್ಷಣನೀತ |
ಸೇರಿ ಬಂದನು ವನವೆ | ಸುಖವೆಂದೆನುತ್ತ || ||೧೭೩||
ಈರೇಳು ವರ್ಷ ನಮ್ಮ | ಗಾರಣ್ಯದೊಳಗಿಹರೆ |
ತೋರಿಕೊಡಿ ಸುಸ್ಥಳವ | ಕಾರುಣ್ಯದಿಂದ || ||೧೭೪||
ಎನಲು ರಾಘವ ಕೇಳು | ಮುಂದಿರುವ ಪರ್ವತಕೆ |
ದನುಜರಟ್ಟುಳಿಯಿಲ್ಲ | ಭಯವಿಲ್ಲವಯ್ಯ || ||೧೭೫||
ದಿನದಿನಕೆ ಬೇಕಾದ | ಫಲಗಳಿವೆಯದರೊಳಗೆ |
ಅನುಮಾನ ಬೇಡ ಇರಿ | ಮನಶುದ್ಧವಾಗಿ || ||೧೭೬||
ಚಿತ್ರಮಯರಾಗಿರುವ | ಚಿತ್ರಮೂರುತಿಗಳನು |
ಚಿತ್ರಕೂಟಕೆ ಮುನಿಪ | ಕಳುಹಿಸಿದನಂದು || ||೧೭೭||
ಚಿತ್ರಮಯವೆಸೆವ ನವ | ಚಿತ್ರವನಗಳ ನೋಡಿ |
ಚಿತ್ತಶುದ್ದಿಯೊಳಲ್ಲಿ | ಇರುತಿರ್ದರವರು || ||೧೭೮||
ವಾರ್ಧಕ
ಮತ್ತೆ ಬಹು ರಮ್ಯತರ ವನಗಿರಿಯ ಸೌಭಾಗ್ಯ
ಚಿತ್ರಕೂಟದೊಳಿರ್ದವರರಿತ್ತ ದಶರಥನೃ
ಪೋತ್ತಮನು ಕೌಸಲ್ಯೆಯರಮನೆಗೆ ಬಂದು ನಿಜಪುತ್ರರಂ ನೆನೆನೆನೆಯುತ |
ಚಿತ್ತದಲಿ ಕಡುನೊಂದು ಚಿಂತಿಸುವ ವೇಳೆಯಲಿ
ಹತ್ತಿರಕೆ ನಡೆತಂದ ಮಂತ್ರೀಶನಂ ಕಂಡು
ಉತ್ತರವ ಬೆಸಗೊಂಡನೆಲ್ಲಿಪರ್ಯಂತೆನ್ನ ಪುತ್ರರೈದಿದರೆನ್ನುತ || ||೧೭೯||
ರಾಗ ಘಂಟಾರವ ಝಂಪೆತಾಳ
ಮಂತ್ರಿ ಮಮ ಬಾಲಕರ | ನೆಲ್ಲಿ ಬಿಟ್ಟು ಬಂದೆ |
ಕಾಂತೆ ಜಾನಕಿ ನಡೆದು | ಪೋದಳೇ ಮುಂದೆ || ||೧೮೦||
ಬರುವ ಸಮಯಕೆ ರಾಮ | ಕರೆದುದೇತಕೆ ನಿನ್ನ |
ಬರುವೆನೆಂದನೆ ಹಂಬ | ಲವ ತೊರೆದನೇನೈ || ||೧೮೧||
ಈಸು ಭಾಗ್ಯವನೆಲ್ಲ | ಬಿಟ್ಟೆನ್ನಣುಗರು ವನ |
ವಾಸಕೈದಿದರಲ್ಲೊ | ಅಯ್ಯಯ್ಯೋವಿಧಿಯೆ || ||೧೮೨||
ತರಹರಿಸುತಿದೆ ಪ್ರಾಣ | ತಾನುಳಿವಪಾಡಿಲ್ಲ |
ಕರೆಸು ಭರತನ ಮಂತ್ರಿ | ಚಾರಕರ ಕಳುಹು || ||೧೮೩||
ಅರೆನಿಮಿಷಮಾತ್ರ ಯುಗ | ವಾಗುತಿದೆ ಎನಗೀಗ |
ತರುಣಿಯರ ಮೂವರನು | ಕರೆಸಯ್ಯ ಬೇಗ || ||೧೮೪||
ರಾಗ ವರಾಳಿ ಏಕತಾಳ
ಎಂದಿನಂತೇಕೆ ಬಾರ | ರಾಮಚಂದ್ರ | ಕಣ್ಣ |
ಮುಂದೆ ಸುಳಿದಾಡಲೊಲ್ಲ | ರಾಮಚಂದ್ರ || ||೧೮೫||
ಬಿಲ್ಲುವಿದ್ಯೆಗಳ ತೋರೋ | ರಾಮಚಂದ್ರ | ಹಿಂದೆ |
ನಿಲ್ಲುವ ಲಕ್ಷ್ಮಣನ ಕಾಣೆ | ರಾಮಚಂದ್ರ || ||೧೮೬||
ಎಲ್ಲಿಗೆ ಪೋದಳೊ ಸೀತೆ | ರಾಮಚಂದ್ರ | ನ |
ಮ್ಮೆಲ್ಲರ ಬಿಟ್ಟು ನೀ ಪೋದೆ | ರಾಮಚಂದ್ರ || ||೧೮೭||
ರಾಗ ಆನಂದ ನೀಲಾಂಬರಿ ಆದಿತಾಳ
ಏಕೆ ನಿಂತಿರುವೆ ಮಂತ್ರಿ | ಬುದ್ದಿಗಳೆಲ್ಲ |
ಆ ಕಡೆಗಾಯಿತಲ್ಲ ||
ಕೌಸಲ್ಯೆಯೆಲ್ಲಿದ್ದಾಳೆ | ಕರೆಸು ಮಂತ್ರಿ |
ಕೈಕೆಯೂ ಬರಲಿ ಹೇಳು || ||೧೮೮||
ಭರತ ಶತ್ರುಘ್ನರ ಕರೆಯ | ಹೋದವರಾರು |
ಬರುತಾರೊ ಇಲ್ಲವೇನೊ ||
ಗುರು ತಾನೆಲ್ಲಿಗೆ ಪೋದನು | ಕರೆಸಯ್ಯ ಬೇಗ |
ಅರಿತ ಶಾಸ್ತ್ರದ ವಿಪ್ರರ || ||೧೮೯||
ಮೇಲುಶ್ವಾಸ ಉಕ್ಕಿತಲ್ಲಾ | ಇಂಥ ವೇಳ್ಯಕ್ಕೆ |
ಬಾಲಕರೊಬ್ಬರೂ ಇಲ್ಲ ||
ಮೇಲಾದ ಮಂತ್ರಿಗಳ | ಕರೆಸಯ್ಯ ಮತ್ತೆ |
ನಾಲ್ವರು ಕರಣಿಕರ || ||೧೯೦||
ಬಾಲರೆಲ್ಲರು ಮಕ್ಕಳು | ಬುದ್ಧಿಯ ಹೇಳಿ |
ಪಾಲಿಸು ರಾಜ್ಯವೆಲ್ಲ ||
ಬ್ಹಾಳ ಠಾಣ್ಯ ರಾವುತರು | ಅವರಿಗೆ ತಕ್ಕ |
ಹೇಳಿ ಕೇಳಿಸಿ ಪಾಲಿಸೋ || ||೧೯೧||
ರಾಮ ಲಕ್ಷ್ಮಣರರಿಯರು | ಅವರುಬಂದ |
ರಾಮೂಲವಾಗಿ ಪೇಳು ||
ರಾಮ ರಾಮಾ ಶ್ರೀರಾಮಾ | ರಾಜೀವನೇತ್ರ |
ನಾರಾಯಣಾ ನಾರಾಯಣ || ||೧೯೨||
ವಾರ್ಧಕ
ಧಾರಿಣೀಪತಿ ಮಾತುಮಾತಾಡಿದಂತೆಯೆದೆ
ಯಾರಿ ಕಣ್ಮುಚ್ಚಿ ನಾಲಗೆ ಸೆಳೆದು ದಂತದಡಿ
ಯಾರಿದುವು ರಕ್ತದೋಸರಣಿಗಳ್ ಶ್ವಾಸಸಂಚಾರವಿಲ್ಲದೆ ಹೋಯಿತು ||
ಮೂರು ಮಂದಿಯು ಪಟ್ಟದರಸಿಯರು ಕೇಳುತ್ತ
ಹೇರಾಳ ದುಃಖದಲಿ ಮೊರೆಯಿಡುತ ಬಂದು ಬಳಿ
ಕೂರ ಜನಮಧ್ಯದಲಿ ಬಾಯ್ಬಿಡುತ ಹಲುಬಿದರು ಪತಿಯಳಿದ ಕ್ಲೇಶದಿಂದ || ||೧೯೩||
ರಾಗ ವರಾಳಿ ಏಕತಾಳ
ಕಾಂತನೇಕೆ ಮಾತನಾಡ | ನಯ್ಯಯ್ಯೋ | ಈತ |
ಗಿಂಥ ಮರಣ ಬಂದಿತೇತ | ಕಯ್ಯಯ್ಯೋ ||
ಕಂತು ರೂಪಿನಂಥ ದೇಹ | ವಯ್ಯಯ್ಯೊ | ನಮ್ಮೊ |
ಳಂತರಂಗವಂಥ ಮೋಹ | ವಯ್ಯಯ್ಯೋ || ||೧೯೪||
ಕಣ್ಣು ಮೇಲಕುಪ್ಪರಿಸಿ | ತಯ್ಯಯ್ಯೋ | ಅಗ್ರ |
ಗಣ್ಯನೆಚ್ಚರಳಿದನಲ್ಲೊ | ಅಯ್ಯಯ್ಯೊ ||
ಪುಣ್ಯವ ಏನೆಂದು ಹೇಳ | ಲಯ್ಯಯ್ಯೋ | ಮೈಯ |
ಬಣ್ಣಗುಂದಿ ತಣ್ಣಗಾಯಿ | ತಯ್ಯಯ್ಯೋ || ||೧೯೫||
ಕಾರಣವೇನೆಂದು ತಿಳಿಯ | ದಯ್ಯಯ್ಯೋ | ಸುಕು |
ಮಾರರೊಬ್ಬರಿಲ್ಲದಾಗ | ಅಯ್ಯಯ್ಯೋ ||
ಧಾರಿಣಿಪಾಲಕನಿಂತು | ಅಯ್ಯಯ್ಯೋ | ನಮ್ಮ |
ಗಾರು ಮಾಡಿ ಪೋದನಲ್ಲೋ | ಅಯ್ಯಯ್ಯೋ || ||೧೯೬||
ಕಂದ
ಕಾಂತನ ಮೈಯಲಿ ಬಿದ್ದಾ
ಕಾಂತೆಯರಿಂತಳಲುತಿರಲು ಬಂದಾ ಮುನಿಪಂ |
ಸಂತಯ್ಸಲು ಬೇಕೆನ್ನುತ
ಚಿಂತಿಸುತಿಹ ಬಾಲೆಯರ್ಗೆ ನಯದಿಂ ಪೇಳ್ದಂ || ||೧೯೭||
ಚರಿತೆ (ಸಾಂಗತ್ಯ) ರಾಗ ಆನಂದಭೈರವಿ ರೂಪಕ ತಾಳ
ಬಾಲೆಯರಿರ ಕೇಳಿ ಬಲುಕ್ಲೇಶದಿಂದ ನೀವ್ |
ಗೋಳಿಟ್ಟು ಮೊರೆಯಿಡಲೇಕೆ ||
ಕೇಳಿದ ಜನರು ಮತ್ತೇನ ಪೇಳುವರು ಭೂ |
ಪಾಲರಿಗಿದುಯೋಗ್ಯವಲ್ಲ || ||೧೯೮||
ಹೆಮ್ಮಕ್ಕಳಿರ ನೀವು ಕೂಗಿಯಾಡಿದರಿಂದ |
ಬ್ರಹ್ಮನ ಲಿಖಿತ ತಪ್ಪುವುದೇ ||
ಕರ್ಮಬಂಧಗಳು ಕಟ್ಯೆಳೆವಾಗ ಮಿಕ್ಕಾದ |
ಧರ್ಮದೈವಗಳು ರಕ್ಷಿಪವೇ || ||೧೯೯||
ಗಾಳಿ ಸಿಡಿಲು ಮಳೆ ಹೊಯ್ಯಬೇಡೆಂದು ಕೈ |
ತೋಳನೆತ್ತಿದರೆ ನಿಲ್ಲುವುದೆ ||
ಬಾಲಕರಿಲ್ಲದ ವೇಳೆಯೆಂದರೆ ಯಮ |
ನಾಳುಗಳದರ ಕೇಳುವರೇ || ||೨೦೦||
ನೆಲೆಯಲ್ಲ ತನುವಿದು ಮಳೆಗಾಲದಲಿ ತುಂಬಿ |
ದ್ಹೊಳೆಯಲ್ಲಿ ನೆರೆಪುಟ್ಟುವಂತೆ ||
ನಳಿನಸಂಭವ ಬರೆದಾ ದಿನ ಸಂದರೆ |
ಉಳಿವವೇ ನಿಮಿಷ ಪ್ರಾಣಿಗಳು || ||೨೦೧||
ಈ ತೆರೆದೊಳು ನಾನಾ ನೀತಿಯ ಪೇಳ್ದಾಸು |
ನೀತೆಯರನ್ನೊಡಂಬಡಿಸಿ ||
ಭೂತಳಾಧಿಪನ ತೈಲದೊಳಿಟ್ಟು ಭರತನಿ |
ದ್ದಾ ತಾವಿಗೋಲೆಯಟ್ಟಿದನು || ||೨೦೨||
ಬಂದನು ಭರತನಾಕ್ಷಣದಿ ನೋಡುತಲಿದ |
ರಂದವೇನೆಂದು ಕೇಳಿದರೆ ||
ಒಂದುಳಿಯದೆ ಮುನಿ ಪೇಳ್ದರೆ ಧರೆಗೆ ಹಾ |
ಯೆಂದು ಮೂರ್ಛಿತನಾಗುತೆದ್ದ || ||೨೦೩||
ಪ್ರಳಯಕಾಲದ ರುದ್ರನಂತೆದ್ದಾರ್ಭಟಿಸಿ ಕಂ |
ಗಳ ಮೇಲೆ ಕಿಡಿಗೆದರಿದನು ||
ಹೊಳೆವ ಖಡ್ಗವ ಕೊಂಡು ಮಾತೆಯ ಕಡಿವೆನೆಂ |
ದಿಳಿಯೆ ಸುಮಂತ್ರ ಬೋಧಿಸಿದ || ||೨೦೪||
ರಾಗ ಭೈರವಿ ಝಂಪೆತಾಳ
ಎನಗಾಗಿ ಶ್ರೀರಾಮ | ವನಕೆ ತೆರಳಿದ ಮೇಲೆ |
ಅನುಮಾನವೇನೆನ್ನ | ಜನನಿಯೇ ಇವಳು || ||೨೦೫||
ಈ ನರೇಂದ್ರನು ತೀರಿ | ಹೋದ ಮೇಲೆನಗಾಗಿ |
ನಾನೆಂತುಮೊಗದೋರ್ಪೆ | ದಾನವಾಂತಕಗೆ || ||೨೦೬||
ಕಣ್ಣನೀರನು ತುಂಬಿ | ಕರಗಿ ಭರತನು ಮನದಿ |
ಎಣ್ಣಿಸಿದನೊಂದು ಅರೆ | ಗಳಿಗೆ ಪರ್ಯಂತ || ||೨೦೭||
ಕೌಸಲ್ಯೆಯರ ದುಃಖ | ಕಾಂಬುದಕೆ ಮುನ್ನವೇ |
ಲೇಸೆನಗೆ ಸಾವುದೆಂ | ದೇ ತಿಳಿದನಂದು || ||೨೦೮||
ಅಗ್ರಜನ ಪೊರಡಿಸಿದ | ಅ ದೋಷ ಪಿತೃವಧೆಯು |
ಅಗ್ನಿಯೊಳಗಲ್ಲದೇ | ಪೋಗವಿನ್ನಗಲಿ || ||೨೦೯||
ಹೀಗೆಂದು ಭರತನಣಿ | ಯಾಗೆ ಕಂಡು ಸುಮಂತ್ರ |
ರಾಘವನು ಪೇಳ್ದ ಮಾ | ತಾಗ ಪೇಳಿದನು || ||೨೧೦||
ರೂಢಿಪಾಲಕನ ತನು | ಸಂಸ್ಕಾರ ಕರ್ಮವನು |
ಮಾಡಿದಾಕ್ಷಣದೊಳಗೆ | ಭರತ ಹೊರವಂಟ || ||೨೧೧||
ಶಾರ್ದೂಲವಿಕ್ರೀಡಿತ
ನಾನಾ ಸೈನ್ಯವ ಕೂಡಿಕೊಂಡು ಪುರಕಂ ಶತ್ರುಘ್ನನಂ ನಿಲ್ಲಿಸೀ
ಕಾಣಲ್ ಬೇಕು ನರೇಂದ್ರ ಪಾದಯುಗಮೆಂದಾ ನದಿಗಳಂ ದಾಂಟುತಂ |
ತಾನುಂ ಮೂವರು ಜನನಿಯರ್ ಸಹಿತಲೈತಂದಾತನಂ ಕಾಣುತ
ಏನೆಂದಾರದೆ ಕೋಪದಿಂ ರಘುಜಗಾ ಸೌಮಿತ್ರಿಯಿಂತೆಂದನು || ||೨೧೨||
ರಾಗ ಶಂಕರಾಭರಣ ಮಟ್ಟೆತಾಳ
ಅಣ್ಣ ನೋಡು ಭರತ ರಾಜ್ಯ | ತನ್ನದಾಯಿತೆಂಬ ಗರ್ವ |
ವನ್ನು ತೋರಬಂದ ನಮ್ಮ | ಕಣ್ಣಿನೆದುರಿಗೆ || ||೨೧೩||
ಮಿಣ್ಣಗಿರಿ ನೀವ್ ನೇರಳೆ | ಹಣ್ಣು ಕುರುಕಿದಂತೆ ಬಲವ |
ಬನ್ನಬಡಿಸಿಬಿಡುವ ಕ್ಷಣಕೆ | ನಿನ್ನ ಕರುಣದಿ || ||೨೧೪||
ಸುಮ್ಮನಿರೈ ಭರತ ಬರುವ | ಧರ್ಮವನ್ನು ಅರಿಯೆ ನೀನು |
ಹೆಮ್ಮೆಗಾರನಲ್ಲ ಗುಣದಿ | ನಮ್ಮ ಸಹಜನು || ||೨೧೫||
ಎಂದು ತಮ್ಮೊಳಾಡುತಿರಲು | ಬಂದು ಭರತ ರಥವನಿಳಿದು |
ನಿಂದು ರಾಮಚಂದ್ರನಡಿಗೆ | ವಂದಿಸಿರ್ದನು || ||೨೧೬||
ಪಾದಕೆರಗಿದನುಜನಂ ವಿ | ನೋದದಿಂದಲಪ್ಪಿ ಬಳಿಕ |
ಆದರಿಸುತ ನುಡಿದ ತನ್ನ | ಸೋದರನೊಳು || ||೨೧೭||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದೆಯಾ ಇನವಂಶವಾರಿಧಿ | ಚಂದ್ರ ನಾ ಬರುವಾಗ ನಿನ್ನೊಡ |
ನೆಂದುದಿಲ್ಲವೆನುತ್ತ ಮನದಲಿ | ನೊಂದೆಯೇನೈ || ||೨೧೮||
ಎಂದು ಬಂದೆಯಯೋಧ್ಯಪುರಕಿದ | ನೆಂದು ಕೇಳಿದೆ ನಮ್ಮ ವಾರ್ತೆಯ |
ಎಂದು ಪೊರಟಿರಿ ಜನನಿಯರು ಸಹ | ಮಂದಿರವನು || ||೨೧೯||
ಕ್ಷೇಮವೇ ದಶರಥಪಿತಗೆ ಪರಿ | ಣಾಮವೇ ಶತ್ರುಘ್ನ ಮೊದಲಾ |
ದಾಮಹಾ ಪ್ರಜೆಗಳಿಗೆ ಕುಶಲವೆ | ಸೀಮೆಯೊಳಗೆ || ||೨೨೦||
ಏನು ಮುಖದಲಿ ಕಾಂತಿ ತಗ್ಗಿತು | ನೀನು ಜನನಿಯರೊಡನೆ ನಾವಿಹ |
ಕಾನನಾಂತಕೆ ಬಂದುದೇತಕೆ | ಮಾನನಿಧಿಯೆ || ||೨೨೧||
ರಾಗ ಪಂತುವರಾಳಿ (ಪಂಚಘಾತ) ಮಟ್ಟೆತಾಳ
ಜಯ ಜಯ ಶ್ರೀ ರಾಮಚಂದ್ರ |
ಜಯ ಜಯ ರವಿ ಕೋಟಿ ಸಾಂದ್ರ |
ಜಯ ಜಯ ಭಾನುಕುಲೇಂದ್ರ |
ಜಯತು ಜಯ ಉಪೇಂದ್ರ || ಪಲ್ಲವಿ ||
ಅಣ್ಣಾಶ್ರಿತಪೋಷ ಕೇಳು | ನಿನ್ನನು ಕಳುಹಿಸಿದ ಮೇಲೆ |
ಅನ್ನವುಣದೆ ಎಂಟು ದಿನಕೆ | ಇನ್ನು ನಾನು ಹೇಳಬೇಕೆ || ||೨೨೨||
ಇನಕುಲೇಶನಿಂದಿಗೆ ಮೂ | ರ್ದಿನವಾಯ್ತು ನೀನಿಲ್ಲದೆ |
ಮನಕರಗುತ ಕ್ಲೇಶದಿ ಸುರ | ಪನ ಪುರಕೈದಿದನು || ||೨೨೩||
ವಾರ್ಧಕ
ಇಂತೆಂದು ಭರತನಾಡಿದ ನುಡಿಯ ಕೇಳ್ದು ಬಲು
ಚಿಂತಾಸಮುದ್ರದೊಳಗಾಳ್ದು ಲಕ್ಷ್ಮಣ ಮೂರ್ಛೆ
ಯಂ ತಾಳ್ದ ಶಿವ ಶಿವಾಯೆನುತಲಂಗನೆ ಧರೆಗೆ ಹಮ್ಮಯ್ಸಿ ಬಿದ್ದಳಾಗ ||
ಇಂತು ಮಾಡಿತೆ ದೈವ ಇನಕುಲದ ಸೌಭಾಗ್ಯ
ಚಿಂತಾಮಣಿಯ ಬೆಳಕು ತಗ್ಗಿತೇ ಹರಹರಾ
ಯೆಂತಿರ್ದಡೇನಿನ್ನು ಎನುತ ಕಂಬನಿದುಂಬಿ ಕಾಂತೆ ಜಾನಕಿ ನುಡಿದಳು || ||೨೨೪||
ನೀಲಾಂಬರಿ ರೂಪಕತಾಳ (ಚತುರಶ್ರ ಅಷ್ಟ)
ಇನ್ನಾರೆನ್ನನು ಗುಣದಲಿ | ಮನ್ನಿಸಿ ಮನ್ನಿಸಿ ಕರೆವರು |
ಕಣ್ಣಲಿ ಕಾಣದೆ ಹೋಯಿತೆ | ಪುಣ್ಯವೆ ಹಾ ವಿಧಿಯೇ || ||೨೨೫||
ಮಾವನ ಗುಣ ವರ್ಣಿಸುವಡೆ | ಸಾವಿರ ಬಾಯಿರಬೇಕು |
ಯಾವರಿಗಿಂಥಾ ಮನಸಿದೆ | ದೇವರಿಗೆ ಸಮಾನ || ||೨೨೬||
ಎಷ್ಟರ ಸಂಕಟಪಟ್ಟನೊ | ಮಕ್ಕಳ ನೋಡುವೆನೆನುತಲಿ |
ಎಷ್ಟೆಮ್ಮನು ಕರೆಕರೆದು | ಬಿಟ್ಟನೊ ಪ್ರಾಣವನು || ||೨೨೭||
ಒಂದೇ ದಿನವಾದರೂ ಮನ | ನೊಂದೆನ್ನೊಳು ನುಡಿದರಿಯನು |
ತಂದೆತಾಯ್ಗಳಾರಾದರು | ಬಂದಪರೇ ಹೀಗೆ || ||೨೨೮||
ಹೊತ್ತಲ್ಲದ ಹೊತ್ತಿನಲಿ ನೃ | ಪೋತ್ತಮನಳಿದನೆ ಹಾಯೆನು |
ತತ್ತೆಯ ಮೊಗ ನೋಡುತ ಬಲು | ಅತ್ತಳು ಜನಕಸುತೆ || ||೨೨೯||
ಒದಗುವರಾಪತ್ತಿಗೆಂದು | ಮದುವೆಯ ಮಾಡಿದ ಮಗನಿಗೆ |
ತುದಿಗಾಲಕೆ ನಾವಿದ್ದಿ | ಲ್ಲದಹಾಗಾಯ್ತಲ್ಲ || ||೨೩೦||
ವಾರ್ಧಕ
ಪೋದ ಮಾವನ ಗುಣವನಭಿವರ್ಣಿಸುತ ಸೀತೆ
ಪಾದದಡಿಯಲಿ ಬಿದ್ದು ಹೊರಳುತಿರೆ ಕೌಸಲ್ಯೆ
ಮೇದಿನೀಸುತೆಯ ತೆಗೆದಪ್ಪಿ ಮೆಯ್ಯೊರಸಿ ಕಣ್ಣೀರ ಸೆರಗಿಂದ ತೊಡೆದು |
ಆದರಿಸುತವರು ಮೂವರು ಜನನಿಯರು ಸಹಿತ
ಪೋದರಾ ನದಿಯೆಡೆಗೆ ಗುರುಮುಖದಿ ಸ್ನಾನಕ
ರ್ಮಾದಿಗಳ ರಚಿಸಿದರು ಮುನಿಗಳಂ ಕರೆಸಿ ಬಹು ವಿಧಿವಿಹಿತಮಾರ್ಗದಿಂದ || ||೨೩೧||
ವೇದೋಕ್ತಮಂತ್ರದಿಂದಪರ ಕರ್ಮಂಗಳಂ
ಸಾಧಿಸಿಯೆ ದಾನದಕ್ಷಿಣೆ ಹೋಮ ನೇಮದಿಂ
ಮೇದನೀಶಗೆ ಸ್ವರ್ಗಮಂಗೊಳಿಸಿ ಸಕಲ ಪಿತೃಜನವ ಸಂತುಷ್ಟಿಗೊಳಿಸಿ |
ಆ ದಿವಸ ಉಪವಾಸದೊಳಗಿರ್ದು ಮರುದಿನದೊ
ಳಾದಯಾಂಬುಧಿ ರಾಮ ಕೌಸಲೆ ಸುಮಿತ್ರೆಯರ
ಪಾದಕೆರಗುತ ಸಕಲಮುನಿಜನರ ಮುಂದೆ ಧೈರ್ಯೋದ್ದಾಮನಿಂತೆಂದನು || ||೨೩೨||
ರಾಗ ತೋಡಿ ಏಕತಾಳ
ಬಂದುದು ಲೇಸಾಯಿತು ನೀವು | ಹೀಗಾದ ಮೇಲೆ |
ನೊಂದು ಮಾಳ್ಪುದಿನ್ನೇನು ನಾವು ||
ಎಂದಿಗಾದರೊಂದು ದಿನ ಸಿದ್ಧ | ಈ ದೇಹನಾಶ |
ಹೊಂದದೆ ನಿಲ್ಲದಿದು ಬದ್ಧ || ||೨೩೩||
ನೋವು ತೋಷವೆಂಬುವದೆಲ್ಲ | ಸಂಸಾರಿಗಳಿ |
ಗಾವರಿಗಾದರೂ ಉಂಟಲ್ಲ ||
ಸಾವು ಹುಟ್ಟು ಸುಖದುಃಖವೆಲ್ಲ | ಅರಿಯದ ಹಾಗೆ |
ನೀವು ಚಿಂತಿಸುವಿರಲ್ಲ || ||೨೩೪||
ಭರತನ ಮಾತೊಂದ ಮೀರದೆ | ಸೂರ್ಯವಂಶದ |
ದೊರೆತನಕ್ಕೆ ಕುಂದು ತಾರದೆ ||
ಅರಿತು ದಾನ ಧರ್ಮಂಗಳಲ್ಲಿ | ಕಡಿಮೆಯಿಲ್ಲದೆ |
ಸಿರಿತನದಿಂದಾಳಿ ನೀವೆಲ್ಲಿ || ||೨೩೫||
ತೆರಳಿ ನೀವೆಲ್ಲ ಊರಿಗೆ | ನಾ ಬಹೆನಂದು |
ವರುಷ ಈರೇಳರ ಮೇಲಲ್ಲಿಗೆ ||
ತರಳ ಶತ್ರುಘ್ನನೂ ನೀನೂ | ಒಂದೇ ಬುದ್ಧಿಯೊ |
ಳಿರುತ ರಾಜ್ಯವಾಳು ನೀನು || ||೨೩೬||
ಕಂದ ಪೋಗಯೋಧ್ಯಾನಗರಕ್ಕೆ | ಆನೆ ಕುದುರೆ |
ಮಂದಿರಾಜ್ಯವನಾಳುವುದಕ್ಕೆ ||
ಅಂದಿನ ದಿನಕೆ ನಾನು ಲಕ್ಷ್ಮಣ | ಜಾನಕಿ ಸಹಿತ |
ಬಂದೇನು ಪಟ್ಟಣಕ್ಕೆ ತತ್ಕ್ಷಣ || ||೨೩೭||
ವಚನ || ಇಂತೆಂದು ಶ್ರೀರಾಮದೇವರು ಕೌಸಲ್ಯೆ ಸುಮಿತ್ರೆ ಮೊದಲಾದಂಥವರನ್ನೊಡಂ
ಬಡಿಸಲಾಗಿ ಭರತನು ಏನೆಂದನು ಎಂದರೆ –
ರಾಗ ಕೇದಾರಗೌಳ ಅಷ್ಟತಾಳ
ಅಣ್ಣ ನೀವ್ ಮೂವರಾರಣ್ಯದೊಳಿರುವಾಗ |
ಬಣ್ಣವೆ ತನಗೆ ರಾಜ್ಯ ||
ಪುಣ್ಯಪುರುಷ ನಿನ್ನ ಪಾದವ ಬಿಡೆನೆಂದು |
ಕಣ್ಣನೀರನು ತುಂಬಿದ || ||೨೩೮||
ಹೆಮ್ಮಕ್ಕಳೊಳಗೆ ಗಯ್ಯಾಳಿ ಕೈಕಾದೇವಿ |
ಯಮ್ಮನಾಡಿದ ಮಾತಿಗೆ ||
ಸುಮ್ಮನೆ ರಾಜ್ಯವ ಬಿಡುವುದು ನೀತಿಯೆ |
ನಿಮ್ಮ ಮನಕೆ ಸರಿಯೆ || ||೨೩೯||
ನಿರ್ಮಲದೊಳು ಜ್ಯೇಷ್ಠಸುತನಿರಲಾತನ |
ತಮ್ಮಗೆ ರಾಜ್ಯವುಂಟೇ ||
ಸನ್ಮತವಲ್ಲದಿದ್ದರೆ ನಾ ಅಯೋಧ್ಯೆಗೆ |
ಜನ್ಮಾಂತರಕೂ ಪೋಗೆನು || ||೨೪೦||
ಕೋಪಿಸಿಕೊಂಡು ನೀವ್ ಜರೆದರೆ ದೃಢವಾಗಿ |
ಪೋಪೆ ಮತ್ತೊಂದೂರಿಗೆ ||
ಭೂಪ ನಿನ್ನಂತರಂಗವೆ ಸಾಕ್ಷಿಯಿದಕೆಂದು |
ತಾಪದಿ ನಿಂತಿರ್ದನು || ||೨೪೧||
ಕಂದ
ಎಂದಾ ಭರತನ ಮಾತಿಗೆ
ಅಂದೆಲ್ಲರು ಬದ್ಧವೆಂದು ಕರಗಳ ಮುಗಿಯಲ್ |
ಬಂದಾ ಕೈಕಾ ದೇವಿಯು
ಚಂದದಿ ರಾಮನೊಡನೆಂದಳೊಂದುತ್ತರಮಂ || ||೨೪೨||
ರಾಗ ಕಾಂಭೋಜಿ ಏಕತಾಳ
ಮಂಥರೆಯ ಮಾತ ಕೇಳಿ | ಮಂದಬುದ್ಧಿಯಿಂದ ನಾನು |
ಎಂದ ಮಾತಂತರಂಗಕ್ಕೆ | ತಂದುಕೊಳ್ಳಬೇಡ ರಾಮ || ||೨೪೩||
ಬಂದಯೋಧ್ಯಾಪುರಕೆ ತ | ಮ್ಮಂದ್ಯರನ್ನು ಕೂಡಿಕೊಂಡು ||
ಇಂದು ರಾಜ್ಯವಾಳು ನೀನು | ಎಂದೊಡಂಬಡಿಸಿದಳು || ||೨೪೪||
ಇಂತೆಂದು ಕೇಯಿಯ ಮಾತಿಗೆ ಶ್ರೀರಾಮನು ಉತ್ತರವಂ ಕೊಡದೆ ಭರತ
ನೊಡನೆ ಏನೆಂದನು ಎಂದರೆ –
ರಾಗ ಘಂಟಾರವ ಝಂಪೆತಾಳ
ತಮ್ಮ ಕೇಳಿನಕುಲದ | ರಾಯರಲಿ ಜನಿಸಿರ್ದು |
ಧರ್ಮವೇ ಸತ್ಯವನು | ಬಿಟ್ಟು ನಡೆಯುವುದು || ||೨೪೫||
ಪಿತನ ವಾಕ್ಯವ ಮೀರಿ | ಪಿಂತೆ ನಡೆದವರುಂಟೆ |
ಅತಿರೇಕವಿದು ಲೋಕ | ಕತಿಚೋದ್ಯವಯ್ಯ || ||೨೪೬||
ಹದಿನಾಲ್ಕು ವತ್ಸರದ | ತುದಿಯ ಮರುದಿವಸ ಬಂ |
ದೊದಗುವೆನು ಪಟ್ಟಣಕೆ | ಇದು ಕಪಟವಲ್ಲ || ||೨೪೭||
ಅನಿತುದಿನ ರಾಜ್ಯವನು | ಆಳಿಕೊಂಡಿರು ನೀನು |
ಮನಸಿನೊಳು ಅನುಮಾನ | ಮತ್ತೇನೂ ಬೇಡ || ||೨೪೮||
ಎನ್ನೊಡನೆ ಜನಿಸಿರ್ದ | ತಮ್ಮನಾದರೆ ನೀನು |
ಎನ್ನ ಮಾತನು ಕೇಳು | ಎರಡಿಲ್ಲದಾಳು || ||೨೪೯||
ಕಂದ
ಈ ಪರಿಯಿಂದಂ ತಮ್ಮನ
ಭೂಪಾಲಕನೊಡಬಡಿಸಲು ಬಳಿಕಾ ಭರತಂ |
ಕೋಪಿಸಿಕೊಂಡಗ್ರಜನೊಳ್
ಚಾಪವ ಕೈಗೆತ್ತಿಕೊಂಡು ಮತ್ತಿಂತೆಂದಂ ||೨೫೦||
ರಾಗ ಘಂಟಾರವ ಝಂಪೆತಾಳ
ಅಣ್ಣ ಕೇಳಿರೇಳು | ವತ್ಸರದ ಮರುದಿವಸ |
ಉಣ್ಣದಿಹೆನೊಂಭತ್ತು | ಗಳಿಗೆ ಪರ್ಯಂತ || ||೨೫೧||
ಅಗ್ರಜರು ನೀವಷ್ಟ | ರೊಳು ಬಾರದಿದ್ದರೆ |
ಅಗ್ನಿಕುಂಡದೊಳಿಳಿವೆ | ನಿಮ್ಮಪದದಾಣೆ || ||೨೫೨||
ಮರೆತು ಹೋಗದೆ ದಿವಸ | ಅರಿತುಕೋ ಲಕ್ಷ್ಮಣಾ |
ಶರತುದಿಯಲೀಗ ಬರೆ | ದಿರಿಸೊಂದುಕಡೆಯ || ||೨೫೩||
ಸೇವೆಗೆನ್ನುತ ತನ್ನ | ಪಾವನಾಂಘ್ರಿಯೊಳಿದ್ದ |
ಹಾವುಗೆಯ ಕೈಲಿಟ್ಟು | ಹರಸಿ ಬೀಳ್ಕೊಟ್ಟ || ||೨೫೪||
|| ಶ್ರೀರಾಮ ಪಟ್ಟಾಭಿಷೇಕ ಮುಗಿದುದು ||
Leave A Comment