ಪಂ. ಬಸವರಾಜ ರಾಜಗುರು ಅವರ ನಿಧನದ ನಂತರ ಅವರ ಮನೆತನದವರು ಹಾಗೂ ಶಿಷ್ಯಬಳಗದವರು ಅವರ ಸಂಗೀತ ಪರಂಪರೆಯನ್ನು ಉಳಿಸಿಕೊಂಡು ಹೋಗಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವುಗಳ ವಿವರವನ್ನಿಲ್ಲಿ ನೀಡಲಾಗಿದೆ.

ರಾಜಗುರು ಸಂಗೀತ ಸಭಾ (ಕಾರ್ಯದಶಿ ನಿಜಗುಣ ರಾಜಗುರು)

ಆಗಸ್ಟ್‌೧೯೮೯ರಲ್ಲಿ ತಮ್ಮ ೭೦ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದ್ದ ಪಂಡಿತ ಬಸವರಾಜ ರಾಜಗುರು ಅವರನ್ನು ಸತ್ಕರಿಸಲು ಅವರ ಶಿಷ್ಯವೃಂದ ಹಾಗೂ ಅಭಿಮಾನಿಗಳೆಲ್ಲರೂ ಸೇರಿ ಒಂದು ಸನ್ಮಾನ ಸಮಿತಿಯನ್ನು ಮಾಡಿದ್ದರು. ಆ ವಿಷಯವನ್ನು ತಿಳಿದು ಪಂ. ರಾಜಗುರು ಅವರು ಈ ಸಮಿತಿ ಕೇವಲ ನನ್ನ ಸತ್ಕಾರಕ್ಕೆ ಮಾತ್ರ ಸೀಮಿತವಾಗಬಾರದು. ಜನರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ಉಂಟಾಗಬೇಕು ಮತ್ತು ನಮ್ಮಲ್ಲಿ ಅನೇಕ ಹಿರಿಯ ಕಲಾವಿದರಾಗಿದ್ದಾರೆ. ಅವರಿಗೂ ಗೌರವ ಸನ್ಮಾನ ಮಾಡುವಂತಹ ಸಮಿತಿ ಮಾಡಿರಿ ಎಂದು ಹೇಳಿದರು. ಆ ಬಗ್ಗೆ ಶ್ರೀ ಸಿ.ಬಿ.  ಗುತ್ತಲ ಅವರ ನೇತೃತ್ವದಲ್ಲಿ ಶ್ರೀ ಸೋಮನಾಥ ಮರಡೂರ, ಗಣಪತಿ ಭಟ್ಟ, ಶ್ರೀಪಾದ ಹೆಗಡೆ, ಡಾ||ಹೆಚ್‌.ಎ.ಕಟ್ಟಿ ಶಾಂತಾರಾಮ ಹೆಗಡೆ ಸೇರಿ ಚರ್ಚಿಸಿ ರಾಜಗುರುಗಳನ್ನು ಸತ್ಕರಿಸುವ ದಿನದಂದೆ ಅವರ ಹೆಸರಿನಿಂದ ಸಂಗೀತದ ವಿಕಾಸಕ್ಕಾಗಿ ಕೆಲಸ ಮಾಡುವಂತ ಒಂದು ಸಮಿತಿಯನ್ನು ರಚಿಸಲು ನಿರ್ಧರಿಸಿದರು. ಅದರಂತೆ ೧೬ ಸಪ್ಟಂಬರ ೧೯೮೯ ರಂದು ನಡೆದ ರಾಜಗುರುಗಳ ೭೦ನೇ ವರ್ಷದ ಭವ್ಯ ಸನ್ಮಾನ ಸಮಾರಂಭದಲ್ಲಿ ನೆರೆದ ಅಪಾರ ಸಂಗೀತಾಭೀಮಾನಿಗಳ ಸಮ್ಮುಖದಲ್ಲಿ ರಾಜಗುರು ಸಂಗೀತ ಸಭಾದ ಶುಭಾರಂಭವಾಯಿತು. ಮೊದಲಿಗೆ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯ ದಿನಾಚರಣೆಯ ಸಂಗೀತ ಕಾರ್ಯಕ್ರಮ, ಹಿರಿಯ ಕಲಾವಿದರಿಗೆ ಸತ್ಕಾರ, ಯುವ ಕಲಾವಿದರಿಗೆ ಪ್ರೋತ್ಸಾಹ ಮುಂತಾದ ಕಾರ್ಯಕ್ರಮಗಳನ್ನು ಸಭಾ ೧೯೯೧ ರ ವರೆಗೂ ಮಾಡುತ್ತಿತ್ತು.

ಸಂಗೀತದೊಂದಿಗೆ ತಮ್ಮ ಜೀವನವನ್ನು ಸವಿಸಬೇಕು, ಸಂಗೀತದಲ್ಲಿಯೆ ಐಕ್ಯನಾಗಬೇಕು ಎಂಬ ಪರಮ ಗುರಿಯನ್ನು ಹೊಂದಿದ ಪಂಡಿತ ರಾಜಗುರು ಅವರು ಜುಲೈ ೨೧, ೧೯೯೧ ರಂದು ಸಂಗೀತದಲ್ಲಿ ಲೀನವಾಗಿ ಹೋದರು. ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲ ತಮ್ಮದೇಯಾದ ವಿಶಿಷ್ಟ ಪದ್ಧತಿಯಿಂದ (ಅವರ ಪದ್ಧತಿ “ರಾಜಗುರು ಶೈಲಿ” ಎಂದು ಪ್ರಸಿದ್ಧಿ ಹೊಂದಿದೆ.) ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ಸಲ್ಲಿಸಿದ ರಾಜಗುರುಗಳ ಸ್ಮರಣೆ ಮತ್ತು ಅವರು ಬೆಳೆಸಿದ ಸಂಗೀತ ಪರಂಪರೆ ನಿರಂತರವಾಗಿ ಮುಂದುವರೆಸಿಕೊಂಡು ಹೋಗುವ ಸಲುವಾಗಿ,  ಅವರ ದೊಡ್ಡದಾದ ಶಿಷ್ಯವೃಂದ ರಾಜಗುರು ಸಂಗೀತ ಸಭಾಕ್ಕೆ ಹೊಸ ರೂಪವನ್ನು ಕೊಟ್ಟು ರಜಿಸ್ಟರ್ಡ ಸಂಸ್ಥೆಯನ್ನಾಗಿ ಮಾಡಿದ್ದಾರೆ. ಅದರ ವತಿಯಿಂದ ಪ್ರತಿವರ್ಷ ಪಂಢಿತ ರಾಜಗುರು ಪುಣ್ಯತಿತಿ ಸಂಗೀತೋತ್ಸವವನ್ನು ಆಚರಿಸುವುದು ಮತ್ತು ದೇಶದ ಜನಪ್ರೀಯ ಕಲಾವಿದರನ್ನು ಆಮಂತ್ರಿಸಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವುದು ನಡೆದಿದೆ. ಅಲ್ಲಿ ಹಿರಿಯ ಕಲಾವಿದರಿಗೆ ಗೌರವ ಸತ್ಕಾರಗಳನ್ನು ಮಾಡುವುದು ಇದೆ. ಪಂಡಿತ ರಾಜಗುರು ಹಾಗೂ ಇತರ ಶ್ರೇಷ್ಠ ಸಂಗೀತಗಾರರ ಸಂಗೀತವನ್ನು ಆಡಿಯೋ ಮತ್ತು ವಿಡಿಯೋ ಮಾಧ್ಯಮಗಳಲ್ಲಿ ಸಂಗ್ರಹಿಸಿ ಮುಂದಿನ ಯುವ ಪೀಳಿಗೆಗಾಗಿ ಕಾಯ್ದರಿಸುವದು ಒಂದು ಗುರಿಯಾಗಿದೆ. ಪ್ರತಿಭಾನ್ವಿತ ಯುವ ಕಲಾವಿದ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಬಹುಮಾನಗಳನ್ನು ಪ್ರೋತ್ಸಾಹಿಸುವುದು ಇದೆ. ಪಂಡಿತ ರಾಜಗುರು ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುವುದು ಇದೆ. ಸಂಗೀತಾಭ್ಯಾಸಕ್ಕೆ ನೆರವಗುವ ಪುಸ್ತಕ, ಲೇಖನಗಳನ್ನು ಸಂಗ್ರಹಿಸಿ ವಾಚನಾಲಯವನ್ನು ಸ್ಥಾಪಿಸುವುದು ಇದೆ.

ರಾಜಗುರು ಸಂಗೀತ ಸಭಾದ ಮುಖ್ಯ ಉದ್ದೇಶ ಹಾಗೂ ಯೋಜನೆಗಳು ಶಾಸ್ತ್ರೀಯ ಸಂಗೀತದ ವಿಕಾಸ ಮತ್ತು ಜನರಲ್ಲಿ ಅದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನುಂಟುಮಾಡುವುದೇ ಆಗಿವೆ. ಈ ಮಹೋನ್ನತ ಕಾರ್ಯಕ್ಕೆ ಸಂಗೀತ ಪ್ರೇಮಿಗಳ ಸಹಾಯ ಸಹಕಾರ ಅವಶ್ಯವಾಗಿದೆ. ರಾಜಗುರು ಸಂಗೀತ ಸಭಾಕ್ಕೆ ಸಹಾಯ ಸಲ್ಲಿಸಿಬಯಸುವವರಿಗೆ ಹಾಗೂ ಸದಸ್ಯರಾಗಿ ಅದರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಇಚ್ಛಿಸುವವರಿಗೆ ಆತ್ಮೀಯ ಸ್ವಾಗತವಿದೆ.

ಸಂಗೀತ ಅಕಾಡೆಮಿ, ಹಾಸಣಗಿ,  ಜಿಲ್ಲಾ ಕಾರವಾರ

ಕಾರವಾರ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಹಾಸಣಗಿಗೆ ಹೋದರೆ ಅಲ್ಲಿ ಅದ್ಭುತವಾದ ಸಂಗೀತ ಅಕಾಡೆಮಿಯೊಂದು ಎದ್ದು ನಿಂತಿದೆ. ಅಲ್ಲಿಯ ಹಿಂದೂಸ್ತಾನಿ ಕಲಾವಿದ ಗಣಪತಿ ಭಟ್ಟ ಹಾಸಣಗಿಯವರು ತಮ್ಮ ಗುರುಗಳಾದ ಪಂ. ರಾಜಗುರು ಅವರ ಸ್ಮರಣಾರ್ತ ಸಂಗೀತ ಅಕಾಡೆಮಿಯನ್ನು ತೆರೆದಿದ್ದು ಹೆಮ್ಮೆಯ ಸಂಗತಿಯಾಗಿದೆ.

ಮದ್ಯ ವಯಸ್ಸಿನ ಪ್ರತಿಭಾವಂತ ಗಾಯಕ ಗಣಪತಿ ಭಟ್ಟರು ಕಾರವಾರ ಜಿಲ್ಲೆಯ ಸಂಗೀತ ಕಲಿಸುವಿಕೆಗೆ ಎಲ್ಲಿಲ್ಲದ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಅವರ ಶಿಷ್ಯ ಬಳಗವೀಗ ಸಂಗೀತ ಕಛೇರಿಗಳನ್ನು ನೀಡುತ್ತಿದ್ದು ವಿದ್ಯಾವಿಶಾರದರಾಗಿದ್ದಾರೆ. ಈ ಸಂಗೀತ ಅಕಾಡೆಮಿಯ ಇನ್ನೊಂದು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುವುದರೊಂದಿಗೆ ಸಂಗೀತ ವಿಷಯದಲ್ಲಿ ವಿಚಾರ ಸಂಕೀರ್ಣಗಳನ್ನು, ಸಂಗೀತ ಕಛೇರಿಗಳನ್ನು, ಸ್ಪರ್ಧೆಗಳನ್ನು ನಡೆಸುತ್ತಿದೆ. ಗಣಪತಿ ಭಟ್ಟರು ಅನೇಕ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಅವರು ಸಂಗೀತ ವಿಷಯದಲ್ಲಿ ಅನೇಕ ಲೇಖನಗಳನ್ನು  ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅಷ್ಟೆ ಅಲ್ಲ ಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿವೇತನಗಳನ್ನು ನೀಡುತ್ತಿದ್ದಾರೆ.

ರಾಜಗುರು ಸ್ಮೃತಿ ಸಂಗೀತ ಸಭಾ

ಪಂ. ಬಸವರಾಜ ರಾಜಗುರು ಅವರ ಸಂಗೀತದ ದಿವ್ಯ ವ್ಯಕ್ತಿತ್ವಕ್ಕೆ ಅವರ ಅಪಾರ ಅಭಿಮಾನಿ ಬಂಧುಗಳು ಸ್ಥಾಪಿಸಿದ ಸಂಗೀತ ಸಂಘಟನೆಗಳು ನಿದರ್ಶನಗಳಾಗಿವೆ. ಅಂತವುಗಳಲ್ಲಿ ಅವರ ಶಿಷ್ಯ ಪರಮೇಶ್ವರ ಹೆಗಡೆಯವರು ಬೆಂಗಳೂರಿನಲ್ಲಿದ್ದ “ರಾಜಗುರುಸ್ಮೃತಿ”ಯನ್ನು ಸ್ಥಾಪಿಸಿದ್ದಾರೆ. “ರಾಜಗುರು ಸ್ಮೃತಿ” ಯೊಂದು ರಾಜಗುರು ಅವರ ಹೆಸರಿನಲ್ಲಿ ಸ್ಥಾಪಿತವಾದ ಸಾರ್ವಜನಿಕ ಸಮಗೀತ ಸಂಸ್ಥೆಯಾಗಿದೆ.

ಪಂಡಿತ ರಾಜಗುರು ಅವರ ಪರಮ ಶಿಷ್ಯರಲ್ಲೊಬ್ಬರಾದ ಪರಮೇಶ್ವರ ಹೆಗಡೆಯವರು ಈ ಸಂಸ್ಥೆಯನ್ನು ತಮ್ಮ ಗುರುಗಳ ನೆನಪಿನಲ್ಲಿ ಸಂಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮುಖ್ಯ ಚಟುವಟಿಕೆಗಳು ಈ ಕೆಳಗಿನಂತಿವೆ.

ಸಂಗೀತ ಸಮಾರೋಹ:

ಈ ಕಾರ್ಯಕ್ರಮದಡಿ ವರ್ಷಕ್ಕೊಮ್ಮೆ ಎರಡು ದಿನದ ಸಂಗೀತ ಸಮಾರೋಹ ನಡೆಯುತ್ತಿದ್ದು ಅದರಲ್ಲಿ ಆರು ಜನರ ಕಛೇರಿಗಳು ಜರುಗುತ್ತವೆ. ಸಂಗೀತಾಭಿಮಾನಿಗಳು ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರವೇಶ ಫೀ ಎಂದೆನೂ ಇಲ್ಲ. ‘ರಾಜಗುರು ಸ್ಮೃತಿ’ ಸಂಸ್ಥೆಯು ಸಂಗೀತ ವಿದ್ವಾಂಸರಿಂದ ವಿಚಾರ ಸಂಕೀರಣಗಳನ್ನು ಏರ್ಪಡಿಸುತ್ತದೆ. ಮುಂಬರುವ ದಿನಗಳಲ್ಲಿ ಹಿಂದೂಸ್ತಾನಿ ಸಂಗೀತದ ಪ್ರಸಾರಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ಗ್ರಾಮೀಣ ಪ್ರದೇಶದಲ್ಲಿ ಸಂಗೀತ ಕಛೇರಿಗಳನ್ನು ನಡೆಸುವುದು ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ನೀಡುವ ಗುರಿ ಇದೆ.

“ಪಂಡಿತ ಬಸವರಾಜ ರಾಜಗುರು ಸುವರ್ಣ ಪದಕ”

ಸಂಗೀತ ಅಭಿಮಾನಿಗಳಾದ ಮಾನ್ಯಶ್ರೀ ಸಿ.ಬಿ. ಗುತ್ತಲ, ಚೇರಮನ್‌.  ಬಿ.ಎಲ್‌.ಡಿ.ಇ. ಅಸೋಶಿಯೆಶನ್‌, ಬಿಜಾಪೂರ ಅವರು ತಮ್ಮ ಪುತ್ರಿ ಹಾಗೂ ಪಂಡಿತ ರಾಜಗುರು ಅವರ ಶಿಷ್ಯೆಯಾಗಿದ್ದ ದಿ. ಶ್ರೀಮತಿ ಸವಿತಾ ಗುತ್ತಲ ಸ್ಮರಣಾರ್ಥವಾಗಿ ವಿಶ್ವವಿದ್ಯಾಲಯಕ್ಕೆ ಸಂಗೀತ ವಿಷಯದಲ್ಲಿ ಪ್ರಥಮವಾಗಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಪಂಡಿತ ಬಸವರಾಜ ರಾಜಗುರು ಸುವರ್ಣ ಪದಕವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಟ್ಟಿದ್ದಾರೆ.

ಪಂಡಿತ ರಾಜಗುರು ಸ್ಮಾರಕಕ್ಕೆ ನಿವೇಶನ ಭರವಸೆ

ಪಂಡಿತ ರಾಜಗುರು ಅವರು ಸ್ಮಾರಕ ನಿರ್ಮಿಸುವ ಪ್ರಸ್ತಾಪ ಬಂದಲ್ಲಿ ಸೂಕ್ತ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಇದರಿಂದಾಗಿ ರಾಜಗುರು ಸ್ಮಾರಕವನ್ನು ನಿರ್ಮಿಸುವ ಅಗತ್ಯವಿದೆ.

ಪಂಡಿತ ರಾಜಗುರು ಧ್ವನಿಮುದ್ರಣಗಳು

ಪಂಡಿತ ರಾಜಗುರು ಅವರ ಅನೇಕ ಧ್ವನಿ ಮುದ್ರಣಗಳನ್ನು, ವಿಡಿಯೋ ಚಿತ್ರಗಳನ್ನು, ಲೇಖನ ಬರಹಗಳನ್ನು ಮತ್ತು ಭಾವಚಿತ್ರಗಳನ್ನು ಸಂಗ್ರಹಿಸಿಡಲಾಗಿದೆ. ಅವುಗಳ ಬಗ್ಗೆ ಆಸಕ್ತಿ ಉಳ್ಳವರು ಪಂಡಿತ ರಾಜಗುರು ಅವರ ಪುತ್ರ ಶ್ರೀ ನಿಜಗುಣ ಅವರನ್ನು ಸಂಪರ್ಕಿಸಬಹುದು.

ಪದ್ಮಶ್ರೀ ಪಂಡಿತ ಬಸವರಾಜ ರಾಜಗುರು ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ “ಇಂಚರ”

ಹಿಂದೂಸ್ತಾನಿ ಸಂಗೀತ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ ಪಂಡಿತ ಬಸವರಾಜ ರಾಜಗರು ಅವರು ನಮ್ಮವರು ಎನ್ನುವುದು ಹೆಮ್ಮೆಯ ಸಂಗತಿ. ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಶಿಷ್ಯ ಶ್ರೀ ಪಂಚಾಕ್ಷರಿ ಗವಾಯಿಗಳ ಶ್ರೇಷ್ಠ ಶಿಷ್ಯಂದಿರಲ್ಲಿ ಅವರ ಸಾಧನೆ ದೊಡ್ಡದು. ಅವರು ಮೊದಲಿನಿಂದಲೂ ಶ್ರೀ ಜ. ಕೊಟ್ಟುರು ಸ್ವಾಮಿ ಮಠದ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದರು. ಆದುದರಿಂದ ೧೯೮೩ ರಲ್ಲಿ ಶ್ರೀ ಮಠದಲ್ಲಿ ಪಂ.ರಾಜಗುರು ಅವರ ಷಷ್ಠಿಪೂರ್ತಿ ಸಮಾರಂಭವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರಿಗೊಂದು “ಇಂಚರ” ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಲಾಯಿತು.

ಪಂ. ರಾಜಗುರು ಅವರಿಗೆ ಅರ್ಪಿಸಿದ “ಇಂಚರ” ಅಭಿನಂದನಾ ಗ್ರಂಥದ ಸಂಪಾದಕರು ಡಾ. ಬಸವರಾಜ ಮಲಶೆಟ್ಟಿಯವರು. ಈ ಗ್ರಂಥದಲ್ಲಿ ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ ಪಂ. ರಾಜಗುರು ಅವರ ವ್ಯಕ್ತಿತ್ವದ ದರ್ಶನವಿದೆ. ಎರಡನೇ ಭಾಗದಲ್ಲಿ ರಾಜಗುರು ಅವರು ಪ್ರಾವಿಣ್ಯ ಪಡೆದ ಶಾಸ್ತ್ರೀಯ