ಸಂಸರು ೧೯೧೪ ರಲ್ಲಿಯೇ ಅಂದರೆ ತಮ್ಮ ೧೬ನೆಯ ವಯಸ್ಸಿನಲ್ಲಿಯೇ ಬರವಣಿಗೆಯನ್ನು ಪ್ರಾರಂಭಿಸಿದರು. ‘ಕೌಶಲ’ ವೆಂಬ ಪತ್ತೇದಾರಿ ಕಾದಂಬರಿಯನ್ನು ಮೊದಲು ರಚಿಸಿದರು. ಅದು ‘ಕರ್ನಾಟಕ ಚಂದ್ರಿಕೆ’ ಗ್ರಂಥಮಾಲೆಯ ೪೯ನೆಯ ಪುಸ್ತಕವಾಗಿ ಪ್ರಕಟವಾಯಿತು. ಪ್ರೇಮವೇ ಮುಖ್ಯವಸ್ತುವಾಗಿರುವ ಈ ಕಾದಂಬರಿಯ ಸನ್ನಿವೇಶಗಳು ಕೆಲವಡೆ ಅಸಹಜ ನಾಟಕೀಯವೆನ್ನಿಸುತ್ತವೆ. ಆದರೆ ಹದಿನಾರರ ವಯಸ್ಸಿನಲ್ಲಿಯೆ ಸಂಸರು ವಸ್ತು ಮತ್ತು ಭಾಷೆಯ ಮೇಲೆ ಸಾಧಿಸಿದ ಹಿಡಿತ ಮೆಚ್ಚುವಂತಹುದು. ಮುಂದೆ ಸಂಸರು ೧೯೧೮ರಲ್ಲಿ ‘ಶ್ರೀಮಂತೋದ್ಯಾನ ವರ್ಣನಂ’ ಎಂಬ ಕಾವ್ಯವನ್ನೂ, ಮಂತ್ರಿವರ್ಯರಾದ ‘ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು’ ಎಂಬ ಸ್ತೋತ್ರ ಮಾಲಿಕೆಯನ್ನೂ ೧೯೨೨ ರಲ್ಲಿ ‘ಸಂಸಪದಂ’ ಎಂಬ ಪ್ರೌಢಕಾವ್ಯವನ್ನೂ ರಚಿಸಿದರು. ಈ ಕೃತಿಗಳು ಸಂಸರ ಕಾವ್ಯ ಸಾಮರ್ಥ್ಯವನ್ನು ಅರಿಯಲು ಸಹಾಯಕವಾಗಿವೆ. ಇವನ್ನಲ್ಲದೇ ಸಂಸರು ‘ನರಕ ದುರ್ಯೋಧನೀಯಂ’ ‘ಈಶ ಪ್ರಕೋಪನ’ ‘ಅಚ್ಚುಂಬಶತಕ’ ಮುಂತಾದ ಕಾವ್ಯಗಳನ್ನು ರಚಿಸಿದ್ದು ಅವು ಉಪಲಬ್ಧವಿಲ್ಲವಾಗಿವೆ. ಅವುಗಳ ಪದ್ಯಗಳನ್ನು ಮತ್ತು ವ್ಯಾಖ್ಯಾನಗಳನ್ನು ಕೇಳಿದ ಸ್ನೇಹಿತರ ಸಿಹಿನೆನಪು ಮಾತ್ರ ಈಗ ಉಳಿದಿದೆ.

‘ಶ್ರೀಮಂತೋದ್ಯಾನ ವರ್ಣನಂ’ ಇದು ಸಂಸ್ಕೃತ ಭೂಯಿಷ್ಠವಾದ ಹಳಗನ್ನಡ ಶೈಲಿಯಲ್ಲಿದೆ. ಕಂದಪದ್ಯ ಹಾಗೂ ಗದ್ಯಗಳಿಂದ ಕೂಡಿದೆ. ಇದರಲ್ಲಿ ಕವಿಯ ಭಾಷಾ ಫ್ರೌಢಿಮೆಯನ್ನು ಗುರುತಿಸಬಹುದಾಗಿದೆ. ಅದರಂತೆ ವಿಶ್ವೇಶ್ವರಯ್ಯನವರನ್ನು ಕುರಿತ ಕಾವ್ಯವೂ ವೃತ್ತಗಳಲ್ಲಿ ಹಣೆಯಲ್ಪಟ್ಟಿದೆ. ಮೇಲಿನ ಎರಡು ಕೃತಿಗಳಿಗಿಂತ ‘ಸಂಸಪದಂ’ ಹೆಚ್ಚು ವೈಶಿಷ್ಟ್ಯ ಪೂರ್ಣವಾದುದು. ಇದರಲ್ಲಿ ಮಾಲಿನೀ, ಶಾರ್ದೂಲ ವಿಕ್ರೀಡಿತ, ಕಳಾಭಾಷಿಣೀ, ಉತ್ಪಲಮಾಲಾ, ಚಿತ್ರಲತೆ, ಕಂದ, ಚಂಪಕ ಮಾಲಾ, ಛಂದೋವತಂಸ, ವನಮಯೂರ, ಮಂದಾಕ್ರಾಂತ, ತ್ರಿಪದಿ, ಮದನವತಿ, ಸಾಂಗತ್ಯ, ರೋಧಕಂ, ಎಡೆಯಕ್ಕರ, ಮತ್ತೇಭವಿಕ್ರೀಡಿತ, ವಾರ್ಧಕಷಟ್ಪದಿ, ಲಲಿತಪದಂ, ದೊರೆಯಕ್ಕರ, ದಂಡಕ, ಕಿರಿಯಕ್ಕರ, ಉತ್ಸಾಹ ರಗಳೆ, ಅರ್ಧಸಮವೃತ್ತ, ದ್ರುತಪದಂ, ತ್ರಿವುಡೆ, ದುವಯಿ, ಚೌಪದಿಯ ಹಾಡು, ಲಲಿತ ರಗಳೆ, ಆರ್ಯಾ, ಮಹಾಸ್ರಗ್ಧರಾ, ಸ್ರಗ್ಧರಾ, ಪ್ರವರ, ಗೀತಿಕೆ, ಏಳೆ, ಅಕ್ಕರಿಕೆ, ವಂಶಸ್ಥ, ಮಲ್ಲಿಕಾಮಾಲೆ, ಉತ್ಸಾಹವೃತ್ತ, ಪಿರಿಯಕ್ಕರ, ಭಾಮಿನಿಷಟ್ಪದಿ ವೈತಾಳಿಕೆ, ಚೌಪದಿ, ಸೀಸ ಮುಂತಾಗಿ ನಾಲ್ವತ್ತಕ್ಕೂ ಹೆಚ್ಚು ಛಂದೋಪ್ರಕಾರಗಳನ್ನು ಬಳಸಿಕೊಂಡು ಕವಿತ್ವ, ಕವಿಸ್ತವನಗಳನ್ನು  ಮಾಡಿದ್ದಾರೆ. ಕವಿಗೆ ಸಂಸ್ಕೃತ ಹಾಗೂ ಕನ್ನಡ ಛಂದಸ್ಸುಗಳ ಮೇಲಿರುವ ಹಿಡಿತಕ್ಕೆ, ಪಾಂಡಿತ್ಯ ಪ್ರದರ್ಶನಗಳಿಗೆ ಈ ಕಾವ್ಯನಿದರ್ಶನವಾಗಿದೆ. ಎಸ್‌.ಎಸ್‌.ಎಲ್‌.ಸಿ ಪಾಸು ಮಾಡಲಾಗದ ಹುಡುಗ, ನಂತರ ಕರಿಬಸವ ಶಾಸ್ತ್ರಿಗಳು ಹಾಗೂ ಇತರ ಪಂಡಿತರ ಸಹಾಯದಿಂದ ಹಳಗನ್ನಡ ಭಾಷೆ ಛಂದಸ್ಸುಗಳ ಮೇಲೆ ಎಂತಹ ಹತೋಟಿ ಸಾಧಿಸಿಕೊಂಡಿದ್ದರೆಂಬುದನ್ನು ಈ ಕಾವ್ಯದ ಮೂಲಕ ನೋಡಬಹುದು. ‘ನರಕದುರ್ಯೋಧನೀಯಂ’ದಲ್ಲಿ ಸತ್ತುನರಕ ಸೇರಿದ ಮೇಲೆ, ದುರ್ಯೋಧನ ತನ್ನ ನಡತೆಯನ್ನು ಸಮರ್ಥಿಸಿಕೊಳ್ಳುತ್ತಾನೆ. ಸಂಸರ ದುಷ್ಟಪಾತ್ರಗಳು ಬರಿಯದುಷ್ಟರಲ್ಲ. ಸಮರ್ಥನೀಯರೂ ಹೌದು ಎಂಬುದನ್ನು ಸಂಸರ ಈ ಕಾವ್ಯ ಪ್ರತಿಪಾದಿಸುತ್ತದೆ. ಆದರೆ, ಇಂದು ಇದು ಉಪಲಬ್ಧವಿಲ್ಲ.

ಸಂಸರು ಇಂಗ್ಲೀಷಿನಲ್ಲಿ Indian sherlock Holmes in England ಎಂಬ ಹೆಸರಿನ ಕಾದಂಬರಿಯನ್ನು ಬರೆದಿದ್ದರಂತೆ. ಅದನ್ನು ಎಡಿನ್‌ಬರೋ ಪ್ರಕಟನಾಲಯವೊಂದು ಮುದ್ರಿಸಿ ಪ್ರಕಟಿಸಲು ಒಪ್ಪಿಕೊಂಡಿತ್ತಂತೆ. ಆದರೆ ಕರಾರಿನಲ್ಲಿ ಯಾವುದೋ ತಕರಾರು ಹೂಡಿ ಸಂಸರು ಅದನ್ನು ರದ್ದುಗೊಳಿಸಿದರಂತೆ. ಕೊನೆಗೆ ಆ ಹಸ್ತಪ್ರತಿ ಎಲ್ಲಿ ಹೋಯಿತೋ ತಿಳಿಯದು.