ಮಿದುಳಿನ ಪ್ರಧಾನ ಮಸ್ತಿಷ್ಕದ ಮೇಲ್ಮೈ ಅತಿ ವಿಶಾಲವಾಗಿದೆ. ಮಡಿಕೆ ಮಡಿಕೆಗಳಾಗಿರುವ ಮಿದುಳಿನ ಬೂದಿ ವಸ್ತು (Grey Matter) ವ್ಯಕ್ತಿಯ ಮಾನಸಿಕ ಸಾಮರ್ಥ್ಯಗಳನ್ನು ರೂಪಿಸುತ್ತದೆ. ಇಡೀ ಮೇಲ್ಮೈಯನ್ನು ಮುಂಭಾಗ (Frontal Lobe) ಪಾರ್ಶ್ವ ಭಾಗ (Parietal Lobe) ಕಪೋಲ ಭಾಗ (Temporal Lobe) ಮತ್ತು ಹಿಂಭಾಗ (Occipital Lobe) ಎಂದು ವಿಭಾಗಿಸಲಾಗಿದೆ. ಈ ಒಂದೊಂದು ಭಾಗ ಯಾವ ಯಾವ ಕೆಲಸ ಮಾಡುತದೆ ಎಂಬುದನ್ನು ನೋಡೋಣ.

. ಮುಂಭಾಗ

) ಚಲನಕ್ಷೇತ್ರ : ಕೈ ಕಾಲುಗಳು, ದೇಹದ ಚಲನೆಗಳು, ಮಾತು, ಕಣ್ಣು ಗುಡ್ಡೆ ಚಲನೆ

) ಪ್ರಿ ಫ್ರಾಂಟಲ್ (ಮುಂತುದಿ) ಭಾಗ:

 • ಆಲೋಚನೆಗಳನ್ನು ಹೊಂದಿಸುವುದು, ತರ್ಕಬದ್ಧವಾಗಿ, ಉದ್ದೇಶಪೂರ್ವಕವಾಗಿ ಆಲೋಚಿಸುವುದು
 • ನೆನಪು
 • ಬೌದ್ಧಿಕ ಕೆಲಸ
 • ಭಾವನೆಗಳು
 • ತೀರ್ಮಾನಗಳನ್ನು ಮಾಡುವುದು
 • ವ್ಯಕ್ತಿತ್ವ

. ಕಪೋಲ ಭಾಗ

 • ಧ್ವನಿಗಳನ್ನು ಮಾತುಗಳನ್ನು ಅರ್ಥಮಾಡಿಕೊಳ್ಳುವುದು
 • ಸಂಗೀತವನ್ನು ಆಲಿಸಿ, ಅನುಭವಿಸುವುದು
 • ನೆನಪು
 • ಪ್ರೇರಣೆ, ಇಚ್ಛೆ, ಆಸಕ್ತಿ
 • ವ್ಯಕ್ತಿತ್ವ ಮತ್ತು ಭಾವನೆ

. ಪಾರ್ಶ್ವಭಾಗ

 • ಸ್ಪರ್ಶ ಸಂವೇದನೆ
 • ಸ್ಪರ್ಶದಿಂದಲೇ ವಸ್ತುಗಳನ್ನು ಗುರುತಿಸುವುದು
 • ಶರೀರದ ಯಾವ ಭಾಗದಲ್ಲಿ ನೋವು/ ಉರಿಯಾಗುತ್ತಿದೆ ಎಂದು ಗುರುತಿಸುವುದು
 • ದೇಹದ ಭಂಗಿ-ಬಿಂಬವನ್ನು ಅರ್ಥ ಮಾಡಿಕೊಳ್ಳುವುದು
 • ಬಟ್ಟೆ ತೊಡುವುದು, ಆಕಾರಗಳನ್ನು ಬಿಡಿಸುವುದು, ಕೆಲಸದ ಹಂತಗಳನ್ನು ಗಮನಿಸುವುದು (ಉದಾ: ಒಲೆ ಹಚ್ಚಬೇಕಾದರೆ, ಬೆಂಕಿಪೆಟ್ಟಿಗೆ ತೆಗೆಯುವುದು, ಕಡ್ಡಿ ಗೀಚುವುದು, ಸ್ಟವ್‌ನ ಬತ್ತಿ ಎತ್ತಿ ಅಂಟಿವುದು)

ಯಾವುದೇ ಕಾರಣದಿಂದ ಮಿದುಳಿನ ಈ ಭಾಗಗಳಿಗೆ ಹಾನಿಯಾಗಬಹುದು. ಪೆಟ್ಟು ರಕ್ತಸ್ರಾವ, ರಕ್ತಪೂರೈಕೆ ತಗ್ಗುವುದು, ನರಕೋಶಗಳು ಸವೆಯುವುದು, ಗೆಡ್ಡೆ ಬೆಳೆಯುವುದು, ನರಕೋಶಗಳ ಒಳಗೆ ರಾಸಾಯನಿಕ ಕ್ರಿಯೆಗಳು ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯ ಕಾರಣಗಳು.

ಮುಂಭಾಗ (Frontal Lobe)ಕ್ಕೆ ಹಾನಿಯಾದರೆ, ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:

೧. ವಿರುದ್ಧ ಕಡೆಯ ಕೈಕಾಲುಗಳು ನಿಷ್ಕ್ರಿಯಗೊಳ್ಳುವುದು, ಲಕ್ವ (ಅಂದರೆ ಎಡ ಮಿದುಳಿನ ಹಾನಿಯಿಂದ ಬಲಗೈ ಬಲಗಾಲು ಲಕ್ವ ಪೀಡಿತವಾಗುತ್ತದೆ)

೨. ಮಾತು ನಿಲ್ಲುವುದು (ಎಡಭಾಗಕ್ಕೆ ಹಾನಿಯಾದಾಗ) ಕಣ್ಣಿನ ಚಲನೆ ಅಸ್ತವ್ಯಸ್ತ

೩. ಜವಾಬ್ದಾರಿ/ ಕೆಲಸವನ್ನು ಯೋಚಿಸಿ ಮಾಡಲಾಗುವುದಿಲ್ಲ, ಸಮಸ್ಯೆಯ ಪರಿಹಾರವನ್ನು ಚಿಂತಿಸಲು ಆಗುವುದಿಲ್ಲ.

೪. ಅಮೂರ್ತ ಆಲೋಚನೆ ಅಸಾಧ್ಯ.

೫. ಹೇಳಿದ್ದನ್ನೇ ಹೇಳುವುದು, ಪದಗಳನ್ನು ಪುನರುಚ್ಚರಿಸುವುದು

ಆಕ್ರಮಣಶೀಲತೆ, ಅತಿ ಖುಷಿ, ಅತಿ ದುಃಖದಂತಹ ಭಾವೋದ್ವೇಗಗಳು

೭. ತೀರ್ಮಾನ ಕೈಗೊಳ್ಳುವುದರಲ್ಲಿ ತಪ್ಪುಗಳು.

ಪಾರ್ಶ್ವ ಭಾಗ ಹಾನಿ

೧. ವಿರುದ್ಧ ಕಡೆಯ ದೇಹದ ಭಾಗದಲ್ಲಿ ಸ್ಪರ್ಶ ಗೊತ್ತಾಗುವುದಿಲ್ಲ.

೨. ಸ್ಪರ್ಶದಿಂದ ವಸ್ತುಗಳನ್ನು ಗುರುತಿಸಲಾಗುವುದಿಲ್ಲ.

೩. ಚಿತ್ರವನ್ನು ನಕ್ಷೆಯನ್ನು, ನಕಲು ಮಾಡಲು ಅಸಾಧ್ಯ.

೪. ಬಟ್ಟೆ ತೊಡಲು ಬರುವುದಿಲ್ಲ.

೫. ಲೆಕ್ಕಾಚಾರ ಮಾಡಲು ಆಗುವುದಿಲ್ಲ.

ಹಿಂಭಾಗದ ಮಿದುಳಿಗೆ ಹಾನಿ

ನೋಡಿದ್ದನ್ನು ಗಮನಿಸುವುದಿಲ್ಲ. ದಾರಿ ಗುರುತಿಸಲು ಕಷ್ಟ. ಕಳ್ಳ ಬಂದು, ವಸ್ತುಗಳನ್ನು ಕೊಂಡು ಹೋಗುತ್ತಿದ್ದರೂ ವ್ಯಕ್ತಿ ನೋಡಿಯೂ ಸುಮ್ಮನೆ ಕೂಡಬಹುದು!

 

ಮಿದುಳಿನ ಅರೆಗೋಳಗಳು ಮತ್ತು ಅವುಗಳ ಮಹತ್ವ

ಪ್ರಧಾನ ಮಸ್ತಿಷ್ಕದ ಎಡ ಮತ್ತು ಬಲ ಅರೆಗೋಳಗಳ ಗಾತ್ರ, ಅದರ ಉಬ್ಬು-ತಗ್ಗುಗಳಿಂದಾಗಿ ಲಭ್ಯವಿರುವ ವಿಶಾಲ ಮೇಲ್ಮೈ ನಮ್ಮ ಗಮನಸೆಳೆಯುತ್ತವೆ. ಬಹು ಇತ್ತೀಚಿನವರೆಗೆ ಒಂದು ಅರೆಗೋಳ ಪ್ರಧಾನವಾದದ್ದು ಮತ್ತೊಂದು ಅದರ ಹಿಂಬಾಲಕ ಎಂದು ನಂಬಲಾಗುತ್ತಿತ್ತು. ಬಹುತೇಕ ಕೆಲಸಗಳನ್ನು ಬಲಗೈನಿಂದ ಮಾಡುವವರಲ್ಲಿ ಎಡ ಅರೆಗೋಳ ಪ್ರಧಾನ. (Dominent Hemisphere). ಹಾಗೇ ಎಡಚರಲ್ಲಿ ಬಲ ಅರೆಗೋಳ ಪ್ರಧಾನ ಎಂದು ಹೇಳಲಾಗುತ್ತಿತ್ತು. ಅಪಘಾತದಲ್ಲಿ, ರಕ್ತಸ್ರಾವವಾಗಿ ಅಥವಾ ಮತ್ಯಾವುದೇ ರೀತಿಯಲ್ಲಿ ಪ್ರಧಾನ ಅರೆಗೋಳಕ್ಕೆ ಹಾನಿಯುಂಟಾದರೆ, ಆ ವ್ಯಕ್ತಿ ತೀವ್ರ ರೀತಿಯ ಅಂಗವೈಕಲ್ಯ, ಮೂಕತನಗಳಿಗೆ ತುತ್ತಾಗುವನು ಎಂದು ನಂಬಲಾಗುತ್ತಿತ್ತು.

ಎಡ ಮತ್ತು ಬಲ ಅರೆಗೋಳಗಳನ್ನು ಒಂದುಗೂಡಿಸುವ ‘ಕಾರ್ಪಸ್ ಕೆಲೋಸಮ್‌’ನ ಪ್ರಾಮುಖ್ಯತೆ ಮೊದಮೊದಲು ತಜ್ಞರಿಗೆ ಗೊತ್ತೇ ಇರಲಿಲ್ಲ. ೧೯೫೦ ರ ಪ್ರಾರಂಭದಲ್ಲಿ ಚಿಕಾಗೋ ವಿಶ್ವವಿದ್ಯಾಲಯದ ರೋನಾಲ್ಡ್ ಮೇಯರ್ಸ್ ಮತ್ತು ರೋಜರ್ ಸ್ಪೆರೀ ಈ ಕಾರ್ಪಸ್ ಕೆಲೋಸಮ್ ಅನ್ನು ಸೀಳಿ, ಎಡ ಮತ್ತು ಅರೆಗೋಳಗಳ ಅಧ್ಯಯನಕ್ಕೆ ನಾಂದಿ ಹಾಡಿದರು. ಈ Split Brain Experiments ಗಳಿಂದಾಗಿ ಒಂದು ಅರೆಗೋಳ ಪ್ರಧಾನ, ಇನ್ನೊಂದು ಅದರ ಆಜ್ಞಾದಾರಿ ಹಿಂಬಾಲಕ ಎಂಬುದು ಮಿಥ್ಯೆ ಎಂದು ವಿಜ್ಞಾನಿಗಳಿಗೆ ಮನವರಿಕೆ ಆಗಿದ್ದಷ್ಟೇ ಅಲ್ಲ, ನಮಗೆ ಸ್ವತಂತ್ರವಾಗಿ, ಪ್ರತ್ಯೇಕವಾಗಿ ಕಾರ್ಯನಿರ್ವಹಿಸಬಲ್ಲ ಎರಡು ಅರೆಗೋಳಗಳು ಅಂದರೆ ಎರಡು ಮಿದುಳುಗಳಿವೆ ಎಂದು ತಿಳಿಯಿತು. ಬಾಲ್ಯದ ಮೊದಲ ವರ್ಷಗಳಲ್ಲಿ ಒಂದು ಅರೆಗೋಳಕ್ಕೆ ಹಾನಿಯುಂಟಾದರೆ ಇನ್ನೊಂದು ಅರೆಗೋಳ ಹೆಚ್ಚು ವಿಕಾಸಗೊಂಡು, ಇಡೀ ಅರೆಗೋಳದ್ವಯಗಳ ಕೆಲಸ ಕೌಶಲಗಳನ್ನು ಮಾಡಬಲ್ಲದು ಎಂಬುದು ನಂಬಲು ಅಸಾಧ್ಯವಾದ ಸತ್ಯ. ಮಾತಿನ ಕೇಂದ್ರ ಬಹುತೇಕ ಜನರಲ್ಲಿ ಎಡಗೋಲದಲ್ಲಿರುತ್ತದೆ. ಬಾಲ್ಯದಲ್ಲಿ ಎಡಗೋಳ ಹಾಳಾದರೆ, ಬಲ ಅರೆಗೋಳ ವ್ಯಕ್ತಿಯ ನೆರವಿಗೆ ಬಂದು ಆತ ಮಾತು ಕಲಿಯಲು ಅವಕಾಶ ಮಾಡಿಕೊಡುತ್ತದೆ. ಆತ ಮೂಕನಾಗಿ ಉಳಿಯಲು ಬಿಡುವುದಿಲ್ಲ ಎಂಬುದು ಗಮನಾರ್ಹ.

ಅಕಲೇಟಿಸ್ ಮತ್ತು ಗಜಾನಿಗ ಮುಂತಾದವರು ಈ ಅರೆಗೋಳಗಳನ್ನು ಪ್ರತ್ಯೇಕಿಸುವ ಪ್ರಯೋಗಗಳನ್ನು ಮುಂದುವರೆಸಿದರು. ಕಾರ್ಪಸ್ ಕೆಲೋಸಮ್ ಅನ್ನು ಸೀಳಿ, ಎಡ ಮತ್ತು ಬಲ ಅರೆಗೋಳಗಳು ಪರಸ್ಪರ ಸಂಪರ್ಕಿಸುವುದನ್ನು ತಪ್ಪಿಸಲಾಯಿತು. ಎಡ ಮತ್ತು ಬಲ ಅರೆಗೋಳಗಳಿಗೆ, ಪ್ರತ್ಯೇಕವಾಗಿ, ದೃಶ್ಯ ಅಥವಾ ಶಬ್ದಮಾಹಿತಿಯನ್ನು ನೀಡಲಾಯಿತು. ಪ್ರತಿ ಅರೆಗೋಳವೂ ಈ ಮಾಹಿತಿಯನ್ನು ಸ್ವೀಕರಿಸಿ, ಅರ್ಥೈಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಪಟ್ಟರು. ಒಂದು ವ್ಯತ್ಯಾಸವೆಂದರೆ ತಾನು ನೋಡಿದ್ದನ್ನು ಎಡ ಅರೆಗೋಳ ಅರ್ಥ ಮಾಡಿಕೊಂಡು ಮಾತುಗಳಲ್ಲಿ ವಿವರಿಸುತ್ತಿತ್ತು. ಬಲ ಅರೆಗೋಳ ತಾನು ನೋಡಿದ್ದನ್ನು ಅರ್ಥ ಮಾಡಿಕೊಂಡರೂ ಮಾತಿನಲ್ಲಿ ಹೇಳಲು ಅಸಮರ್ಥವಾಗಿತ್ತು.

ಉದಾಹರಣೆಗೆ: ಎಡ ಅರೆಗೋಳಕ್ಕೆ ತಲುಪುವಂತೆ, ದೇಹದ ವಿರುದ್ಧ ಭಾಗದಲ್ಲಿ ನೋವುಂಟು ಮಾಡಿದಾಗ ವ್ಯಕ್ತಿ ತನಗೆ ಇಂತಹ ನಿರ್ದಿಷ್ಟ ಜಾಗದಲ್ಲಿ ನೋವಾಗುತ್ತಿದೆ ಎಂದು ಹೇಳುತ್ತಿದ್ದ. ಆದರೆ, ಬಲ ಅರೆಗೋಳಕ್ಕೆ ತಲುಪುವಂತೆ ನೋವುಂಟು ಮಾಡಿದಾಗ, ನೋವಿನ ಪ್ರತಿಕ್ರಿಯೆಯನ್ನು ಆತ ವ್ಯಕ್ತಪಡಿಸಿದರೂ (ಆ ಭಾಗವನ್ನು ಹಿಂದಕ್ಕೆ ಎಳೆದು ಕೊಳ್ಳುವುದು ನೋವಿನಿಂದ ಮುಖ ಕಿವಿಚುವುದು ಇತ್ಯಾದಿ) ಮಾತಿನಲ್ಲಿ ಏನೂ ಹೇಳುತ್ತಿರಲಿಲ್ಲ. ಇನ್ನೊಂದು ಪ್ರಯೋಗದಲ್ಲಿ ಬಲ ಅರೆಗೋಳಕ್ಕೆ ಮಾತ್ರ ಗೊತ್ತಾಗುವಂತೆ ಪುಸ್ತಕ ಎಂಬ ಪದವನ್ನು ತೋರಿಸಲಾಯಿತು. ‘ಈಗ ನೀನು ಕಂಡಿದ್ದೇನು’ ಎಂದು ಕೇಳಿದಾಗ ‘ನಾನೇನನ್ನೂ ನೋಡಲಿಲ್ಲವಲ್ಲ’ ಎಂದು ಆತ ನುಡಿದ. ಆದರೆ ಪುಸ್ತಕವೂ ಸೇರಿದಂತೆ, ಹಲವು ವಸ್ತುಗಳಲ್ಲಿಟ್ಟು ನೀನು ಕಂಡಿದ್ದೇನು ಈ ಸಂಗ್ರಹದಿಂದ ಆರಿಸು ಎಂದಾಗ ಪುಸ್ತಕವನ್ನು ಕೈಗೆತ್ತಿಗೊಂಡ.

ಹೀಗೆ ಅನೇಕ ಪ್ರಯೋಗಗಳಿಂದ ಎಡ ಮತ್ತು ಬಲ ಅರೆಗೋಳಗಳು ಸಂಪೂರ್ಣವಾಗಿ ಸ್ವತಂತ್ರವಾಗಿ ಮಾಹಿತಿಯನ್ನು ಸ್ವೀಕರಿಸಿ, ಅರ್ಥ ಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಬಲ್ಲವು. ತಕ್ಕ ಭಾವನೆಗಳನ್ನು ತೋರಿಸಿ, ಅಂಗಾಂಗಗಳ ಚಲನೆಯನ್ನು ನಿಯಂತ್ರಿಸಬಲ್ಲವು ಎಂಬುದು ಸಾಬೀತಾಗಿದೆ.

ಸಾಮಾನ್ಯ ಸ್ಥಿತಿಯಲ್ಲಿ ಎರಡು ಅರೆಗೋಳಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ. ಒಂದು ಅರೆಗೋಳಕ್ಕೆ ಬಂದ ಮಾಹಿತಿ, ಅನುಭವ ಕಾರ್ಪಸ್ ಕೆಲೊಸಂ ಮೂಲಕ ಮತ್ತೊಂದಕ್ಕೆ ರವಾನೆಯಾಗುತ್ತದೆ. ಕೆಲವು ವಿಷಯ, ಸಾಮರ್ಥ್ಯಗಳನ್ನು ಎಡ ಅರೆಗೋಳ ಚೆನ್ನಾಗಿ ಕಲಿತು, ನಿರ್ದೇಶಿಸಿದರೆ ಕೆಲವನ್ನು ಬಲ ಅರೆಗೋಳ ಚೆನ್ನಾಗಿ ಕಲಿತು ನಿರ್ದೇಶಿಸುತ್ತದೆ.

ಉದಾಹರಣೆಗೆ: ಬಲ ಅರೆಗೋಳದ ಕಾರ್ಯ ಕೌಶಲ ವೈಶಿಷ್ಟ್ಯಗಳಿವು:

 • ಕ್ಷೇತ್ರ ಜ್ಞಾನ: ನಮ್ಮ ಪರಿಸರದಲ್ಲಿರುವ ಪ್ರತಿಯೊಂದು ವಸ್ತುವಿನ ಆಕಾರ, ವಸ್ತು-ವಸ್ತು ನಡುವಿನ ಅಂತರ, ವಸ್ತುಗಳು ಮತ್ತು ನಮಗಿರುವ ಅಂತರವನ್ನು ಗುರುತಿಸುವ ಶಕ್ತಿ. ಟೇಬಲ್ ಮೇಲಿರುವ ಲೋಟವನ್ನು ತೆಗೆದುಕೊಳ್ಳಲು, ನಕ್ಷೆಯನ್ನು ನೋಡಿ, ಒಂದು ಸ್ಥಳ ಅಥವಾ ವಿವರವನ್ನು ಸ್ಥೂಲವಾಗಿ ಗುರುತಿಸುವುದು. ವಾಹನ ಚಲಿಸುವಾಗ, ನಮ್ಮ ವಾಹನಕ್ಕೂ ಇನ್ನೊಂದು ವಾಹನಕ್ಕೂ ಇರುವ ದೂರವನ್ನು ಗುರುತಿಸುವುದು ಇತ್ಯಾದಿ.
 • ದಾರಿ, ದಿಕ್ಕುಗಳನ್ನು ಗಮನಿಸಿ, ಗುರುತಿಸುವುದು.
 • ನೋಟ, ಧ್ವನಿ, ಸ್ಪರ್ಶದಂತಹ ಸಂವೇದನೆಗಳನ್ನು ಗುರ್ತಿಸಿ ಅರ್ಥೈಸುವುದು.
 • ಭಾವನೆಗಳ ಪ್ರಕಟಣೆ
 • ಸಂಗೀತ, ಚಿತ್ರಕಲೆ, ಕಲ್ಪನಾ ಸಾಮರ್ಥ್ಯ ಇತರ ಲಲಿತ ಕಲೆಗಳು
 • ಇತರರ ಮುಖ ಪರಿಚಯ
 • ಆಧ್ಯಾತ್ಮಕ ಆಸಕ್ತಿ ಮತ್ತು ವಿಚಾರಗಳು

ಎಡ ಅರೆಗೋಳದ ಕಾರ್ಯಕೌಶಲಗಳಿವು:

 • ಭಾಷೆಗಳನ್ನು ಕಲಿಯುವುದು, ಅವನ್ನು ಸಮರ್ಥವಾಗಿ ಉಪಯೋಗಿಸುವುದು. ಯಾವುದೇ ಅನುಭವ – ಪ್ರತಿಕ್ರಿಯೆಯನ್ನು ಮಾತಿನ ಮೂಲಕ ಪ್ರಕಟಿಸುವುದು.
 • ವಸ್ತು ಮತ್ತು ಪರಿಸರದ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸುವುದು. (ಉದಾ: ಪತ್ರಿಕೆಯಲ್ಲಿ ಬರುವ ಒಂದೇ ರೀತಿ ಕಾಣುವ ಎರಡು ಚಿತ್ರಗಳಲ್ಲಿನ ವ್ಯತ್ಯಾಸಗಳನ್ನು ಗಮನಿಸುವುದು) ಗೂಡಾರ್ಥಗಳ ವಿಶ್ಲೇಷಣೆ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದು.
 • ವಿಚಾರ ಮಾಡುವುದು, ಮನನ ಮಾಡುವುದು.
 • ತಂತ್ರಜ್ಞಾನ, ವಿಜ್ಞಾನ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು, ಗಣಿತದಲ್ಲಿ ಪರಿಣತಿ ಪಡೆಯುವುದು.

ಅಂದರೆ ಬಲ ಅರೆಗೋಳ ವಸ್ತು ಪರಿಸರವನ್ನು ಸ್ಥೂಪವಾಗಿ ಅರಿಯುತ್ತದೆ. (ಒಂದು ಪಕ್ಷಿ ನೋಟದಂತೆ !) ಸಣ್ಣಪುಟ್ಟ ವಿವರಗಳಿಗೆ ಸೂಕ್ಷ್ಮ ಅಂಶಗಳಿಗೆ ಅದು ಗಮನಕೊಡದು. ಆದರೆ ಎಡ ಅರೆಗೋಳ ಪ್ರತಿಯೊಂದು ಚಿಕ್ಕ ವಿವರವನ್ನು ಗಮನಿಸುತ್ತದೆ. ಸೂಕ್ಷ್ಮದರ್ಶಿಯಂತೆ ಕೆಲಸ ಮಾಡುತ್ತದೆ. ಬಲ ಅರೆಗೋಳ ಭಾವನೆ, ಸಂವೇದನೆ, ಸೃಜನಶೀಲ ಲಲಿತಕಲಾ ಚಟುವಟಿಕೆಗಳ ತೌರು. ಎಡ ಅರೆಗೋಳ ಚಿಂತನೆ, ತರ್ಕ, ಭಾಷೆ, ತಂತ್ರಜ್ಞಾನಗಳ ತೌರು. ಕೆಲವರಲ್ಲಿ ಬಲ ಅರೆಗೋಳ ಹಚ್ಚು ಸಮರ್ಥವಾಗಿರುತ್ತದೆ. ಅವರು ಭಾವನಾಜೀವಿಗಳು, ಕಲಾವಿದರು. ಆಧ್ಯಾತ್ಮದಲ್ಲಿ ಆಸಕ್ತರು. ಆದರೆ ಲೆಕ್ಕಾಚಾರದಲ್ಲಿ ತಂತ್ರಜ್ಞಾನದಲ್ಲಿ ದುರ್ಬಲರು. ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳಲಾರರು. ಕೆಲವರಲ್ಲಿ ಎಡ ಅರೆಗೋಳ ಹೆಚ್ಚು ಸಮರ್ಥವಾಗಿರುತ್ತದೆ. ಅವರು ಗಣಿತ, ವಿಜ್ಞಾನ, ಮಾತುಗಾರಿಕೆಯಲ್ಲಿ ಮುಂದು. ಕೆಲವರಲ್ಲಿ ಮಾತ್ರ ಈ ಎರಡೂ ಅರೆಗೋಳಗಳೂ ಸಮಾನವಾಗಿ ಹೆಚ್ಚು ಸಮರ್ಥವಾಗಿದ್ದು ಕಲೆ-ವಿಜ್ಞಾನ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುತ್ತಾರೆ.

ಕಲಿಕೆ ಮತ್ತು ನೆನಪಿನ ಶಕ್ತಿಯಲ್ಲಿ ಭಾಗವಹಿಸುವ ಮಿದುಳಿನ ಭಾಗಗಳು: ಮಿದುಳಿನ ಹಿಂಭಾಗ (ದೃಶ್ಯ), ಕಪೋಲ ಭಾಗ (ಆಲಿಸುವುದು) ಮುಂಭಾಗ (ಚಿಂತನೆ) ಅಮಿಗ್ಡಿಲಾ, ಹಿಪ್ಪೊಕಾಂಪಸ್ (ನೆನಪು), ಬ್ರೋಕಾ ಮತ್ತು ವರ್ನಿಕೆಯ ಕ್ಷೇತ್ರಗಳು (ಮಾತು ಮತ್ತು ಭಾಷೆ)

 

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಎಡ ಅರೆಗೋಳದ ಸಾಮರ್ಥ್ಯ ಕೌಶಲಗಳಿಗೆ ಹೆಚ್ಚು ಪ್ರಾಶಸ್ತ್ಯ ಈ ವ್ಯಕ್ತಿಗಳೇ ಹೆಚ್ಚು ಬುದ್ದಿವಂತರು ಎಂಬ ಧೋರಣೆ ಇದೆ. ಹೀಗಾಗಿ ಎಲ್ಲ ಮಕ್ಕಳನ್ನೂ ನಾವು ‘ವಿಜ್ಞಾನ’ವನ್ನೇ ಕಲಿಯಿರಿ ಎಂದು ಒತ್ತಾಯಿಸುತ್ತೇವೆ. ಗಣಿತ-ವಿಜ್ಞಾನ ಕಲಿಯದೇ, ಸಂಗೀತವನ್ನೋ, ಚಿತ್ರಕಲೆಯನ್ನೋ, ನೃತ್ಯವನ್ನೋ ಕಲಿಯುತ್ತೇನೆ ಎನ್ನುವವರನ್ನು ಅಪ್ರಯೋಜಕ ‘ದಡ್ಡ’ ಎನ್ನುತ್ತೇವೆ. ಇದು ಖಂಡಿತ ಸರಿ ಅಲ್ಲ. ಬಲ ಅರೆಗೋಳದ ಸಾಮರ್ಥ್ಯಗಳಿಗೂ ಸನ್ಮಾನ, ಮಾನ್ಯತೆ ಪ್ರೋತ್ಸಾಹ ಸಿಗುವಂತಾಗಬೇಕು. ಮಕ್ಕಳ ಶಿಕ್ಷಣದಲ್ಲಿ ಈ ಅಂಶಗಳನ್ನು ನಮ್ಮ ತಂದೆ-ತಾಯಿಗಳು, ಶಿಕ್ಷಕರು ಗಮನಿಸಬೇಕು. ವಿಜ್ಞಾನ ವಿಷಯಗಳಿಗೆ ಕೊಡುವಷ್ಟು ಮಾನ್ಯತೆ ಪ್ರೋತ್ಸಾಹಗಳನ್ನು ಕಲೆ-ಸಾಂಸ್ಕೃತಿಕ ಚಟುವಟಿಕೆಗಳಿಗೂ ಕೊಡಬೇಕು. ಆಗಲೇ ವ್ಯಕ್ತಿಯ ಸಮಾಜದ ಸರ್ವಾಂಗೀಣ ಏಳಿಗೆ ಸಾಧ್ಯ.

ಉಪಮಸ್ತಿಷ್ಕ

ಯಾವುದೇ ಸ್ನಾಯು ಅಥವಾ ಸ್ನಾಯುಗಳ ಸಮೂಹದ ಹೊಂದಾಣಿಕೆ ಚಲನೆಯ ಜವಾಬ್ದಾರಿಯನ್ನು ಉಪಮಸ್ತಿಷ್ಕ ಹೊರುತ್ತದೆ. ಅದು ಕೆಲಸ ಮಾಡದಿದ್ದರೆ ನಾವು ನೇರವಾಗಿ, ಒಂದು ಗೆರೆಯ ಮೇಲೆ ನಡೆಯಲಾರೆವು. ಕುಡಿದು ನಶೆಯಲ್ಲಿರುವ ಕುಡುಕನಂತೆ ಓಲಾಡುತ್ತೇವೆ. ಬೆಂಕಿಪೊಟ್ಟಣವನ್ನು ಹಿಡಿದು ಕಡ್ಡಿಯನ್ನೂ ಗೀರಲಾರೆವು. ಮುಂದೆ ಚಾಚಿ, ತೋರುಬೆರಳಿನಿಂದ ಒಂದು ಸಣ್ಣ ವಸ್ತುವನ್ನು ನಿಖರವಾಗಿ ಮುಟ್ಟಲಾರೆವು. ಉಪಮಸ್ತಿಷ್ಕ ಹಾನಿಗೀಡಾಗಿದ್ದರೆ ಇತರರ ಆಸರೆ ಇಲ್ಲದೆ, ನಾವು ಕುಳಿತುಕೊಳ್ಳಲಾರೆವು, ನಿಂತುಕೊಳ್ಳಲಾರೆವು. ಮೂಗಿನ ಮೇಲೆ ಕುಳಿತ ನೊಣವನ್ನು ಓಡಿಸಲು ಕೈ ಎತ್ತಿದರೆ, ಅದು ಮುಖವನ್ನು ಜೋರಾಗಿ ಅಪ್ಪಳಿಸಬಹುದು.

ಈ ಹೊಂದಾಣಿಕೆಯ ಕೆಲಸದ ಜವಾಬ್ದಾರಿ ಹೊರಲು, ಉಪಮಸ್ತಿಷ್ಕಕ್ಕೆ ಪರಿಧಿಯಿಂದ ಎಲ್ಲಾ ಸಂವೇದನೆಗಳು ಹಾಗೆಯೇ ಮಿದುಳಿನ ಮೇಲ್ಮೈಯಿಂದ ಎಲ್ಲ ಚಲನ-ಸಂದೇಶಗಳು ಮುಟ್ಟುವ ವ್ಯವಸ್ಥೆ ಇದೆ.

ಹಲವಾರು ವರ್ಷಗಳ ಮದ್ಯಪಾನದಿಂದ ಅಥವಾ ಅಲ್ಪಕಾಲದ ಅನಿಯಂತ್ರಿತ ವಿಪರೀತ ಮದ್ಯ ಸೇವನೆಯಿಂದ ಉಪಮಸ್ತಿಷ್ಕದ ಒಂದು ಭಾಗ ಹಾನಿಗೀಡಾಗುತ್ತದೆ. ಆಗ ಆ ವ್ಯಕ್ತಿಯ ಸೊಂಟ ಮತ್ತು ಕಾಲು ದುರ್ಬಲವಾಗಿ, ಆತ ನಡೆಯುವಾಗ ಆಗಾಗ ಎಡವಿ ಬೀಳುವುದು, ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಲು ಆಗದಿರುವುದು ಕಂಡುಬರುತ್ತದೆ. ಜೊತೆಗೆ ಯಾವುದೇ ಒಂದು ವಸ್ತುವನ್ನು ಕೈಗೆತ್ತಿಕೊಳ್ಳುವಾಗ, ಕೈಯನ್ನು ಎಷ್ಟು ಚಾಚಬೇಕು, ಎಷ್ಟು ಬಲವನ್ನು ಉಪಯೋಗಿಸಬೇಕು ಎಂದು ಗೊತ್ತಾಗದೆ, ಅವನ ಕೈ ಚಲನೆ ಎರಾಬಿರೀಯಾಗುತ್ತದೆ.

ಈಜುಕೊಳದಲ್ಲಿ ‘ಡೈವ್’ ಮಾಡುವ ಕ್ರೀಡಾ ಪಟುವನ್ನು ನೋಡಿ. ಅವನ ದೇಹ ಎಷ್ಟು ಲಯಬದ್ಧವಾಗಿ ಚಲಿಸುತ್ತದೆ, ತಿರುಗುತ್ತದೆ, ಪಲ್ಟಿ ಹೊಡೆಯುತ್ತದೆ. ಆ ಚಲನೆಯನ್ನು ನೋಡಲು ಕಣ್ಣಿಗೆ ಹಬ್ಬ. ಹಾಗೆಯೇ ಬ್ಯಾಲೆ ನೃತ್ಯಗಾತಿಯ ಮನಮೋಹಕ ಚಲನೆಯನ್ನು ಕಂಡು ಅಥವಾ ಜಿಮ್ನಾಸ್ಟಿಕ್ ಪಟುವಾದ ಯುವತಿಯ ತನ್ನ ದೇಹದ ಮೇಲಿನ ಹತೋಟಿಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ. ಈ ಅದ್ಭುತ, ನಿಯಂತ್ರಿತ, ಮೋಹಕ ಚಲನೆಗೆ ಉಪ ಮಸ್ತಿಷ್ಕವೇ ಕಾರಣ.