ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ
ಶರಣೆಂಬೆ ಶಿವನ ಮಡದೀ (ಗೆ) | ಗೌರಮ್ಮಗೆ
ಶರಣೆಂದು ಕಲ್ಲ ಹಿಡಿದೇನು

ಕಲ್ ಹೂಗಿಡಿ ನೆನೆದೇವು ಕಲ್ಯಾಣದಯ್ಯನ
ಬಿಲ್ಲು ಬಾಣದಿ ಬಿದಿರೇ (ಯ) | ರಂಗಯ್ಯನ
ಸೊಲ್ಲು ಸೊಲ್ಲಿಗೆ ನೆನೆದೇವು

ಈಗನೇ ಕಲ್ ಹೂಡಿ ಈಗ್ಯಾರ ನೆನೆದೇವು
ಈ ಊರು ಗ್ರಾಮದೊಡೆಯಾ (ನ) | ಮಲ್ಲಯ್ಯನ
ಈಗ ಕಲ್ ಹೂಡಿ ನೆನೆದೇವು

ದೊಡ್ಡನೇ ಕಲ್ ಹೂಡಿ ದೊಡ್ಡೋರ ನೆನೆದೇವು
ದೊಡ್ಡ ಗಾತ್ರದ ಗರತೀ (ಯ) | ಲಕ್ಕಮ್ಮನ
ದೊಡ್ಡ ಕಲ್ ಹೂಡಿ ನೆನೆದೇವು

ಅಕ್ಕಿ ಒರಳಿಗೆ ಹುಯ್ದ ಅಪ್ಪ ನಿಮ್ಮ ನೆನೆದೇನು
ಅಕ್ಕ ಮಾದೇವಿ ಗಿರಿಜೇ (ಯ) | ಕೆಂಚಮ್ಮನ
ಮಕ್ಕಳೈವರ ನೆನೆದೇನು

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲಾನೆ ಉದುರಮ್ಮ | ನಾ ನಿನಗೆ
ನೆಲ್ಲಕ್ಕಿ ಪಡಿಯ ನಡಸೇನು

ಕಲ್ಲವ್ವ ತಾಯಿ ಮೆಲ್ಲವ್ವ ರಾಜನವ
ಜಲ್ಲ ಜಲ್ಲಾನೆ ಉದುರವ್ವ ! ನಾ ನಿನಗೆ
ಬೆಲ್ಲದಾರತಿಯ ಬೆಳಗೇನು

ಆರತಿ ಬೆಳಗಿ ಬೆರಳೆಲ್ಲ ನೊಂದು
ದೂಪವ ಬೀಸಿ ಭುಜನೊಂದು | ಸರಸಾತಿ
ನಾಮವ ಪಾಡಿ ಸ್ವರನೊಂದು

ಆರತಿ ಬೆಳಗೇನು ಪಾದವ ನೆನೆವೇನು
ಒಲಿಯವ್ವ ತಾಯಿ ಸಿರಿದೇವಿ | ಲಕುಮಿಯೆ
ಹೊನ್ನಿನ ಕಲಶ ಇಡಿಸೇನು

ಬೆಳ್ಳಿ ಬೆಟ್ಟದ ಮೇಲೆ ಕಂಡೇನು ಸಿರಿಜವನ
ಲೋಕದ ಮಾತೆ ಗಿರಿಜಾತೆ | ಪಾರ್ವತಿ
ನಿನ್ನ ಧ್ಯಾನದಲಿ ಕಂಡೆ ಕೋಟಿ ಜಂಗಮರ

ಕೋಟಿ ಕೋಟಿಯ ಕಂಡೆ ಕೊರಳ ಲಿಂಗವ ಕಂಡೆ
ದಾಟುತ್ತಾ ಕಂಡೆ ಜಲಧಿ (ಯ) | ಗಂಗಮ್ಮನ
ಜಾತ್ರೇಲಿ ಕಂಡೆ ಪರಸೇಯ

ಕಲ್ಲೇ ಬೀಸೋ ಕಲ್ಲೆ ಸಕ್ಕರೆ ಒಡೆಗಲ್ಲೆ
ಅಪ್ಪನ ಮನೆಯ ರಜಗಲ್ಲೆ | ಪಚ್ಚೇಕಲ್ಲೆ
ಬಿತ್ತರದ ಕಲ್ಲೆ ಕೊಡು ದಸಿಯ

ರಾಗಿ ಬೀಸೋ ಕಲ್ಲೆ ರನ್ನ ಮುತ್ತಿನ ಕಲ್ಲೆ
ಅಣ್ಣನ ಮನೆಯ ಸಿರಿಗಲ್ಲೆ | ಪಚ್ಚೇಕಲ್ಲೆ
ಶೋಬನದ ಕಲ್ಲೆ ಕೊಡು ದನಿಯ

ಅಕ್ಕಿ ಬೀಸೋ ಕಲ್ಲೆ ಸಕ್ಕರೆ ಪುಡಿಗಲ್ಲೆ
ಅಪಾಜಿ ಮನೆಯ ಪದಗಲ್ಲೆ | ಪಚ್ಚೇಕಲ್ಲೆ
ಮುತ್ತಿನ ಕಲ್ಲೆ ಕೊಂಡು ದನಿಯ

ರಾಗಿಯು ಮುಗಿದಾವು ರಾಜಾಣ ಹೆಚ್ಚಾವು
ನಾನ್ಹಿಡಿದ ಕೆಲಸ ವದಗ್ಯಾವು | ರಾಗೀ ಕಲ್ಲೆ
ನಾ ತೂಗಿ ಬಿಡುವೇನು ಬಲದೋಳ