ರಾಗ ಸೌರಾಷ್ಟ್ರ ಅಷ್ಟತಾಳ

ಬರಲಾಗ ವಾಜಿ ಕಣ್ಣೀರ ಸುರಿಸಿತು ದಿವ್ಯ |
ಕರಿಯು ತೂರಿತು ಮಣ್ಣ ಶಿರದೊಳಾಕ್ಷಣದೀ ||೧೬೦||

ತೂಗಿತು ಭೂಮಿಯು ಬೀಸಿತು ಬಿರುಗಾಳಿ |
ಭೋಗಿಯು ಕಾಣಿಸಿಕೊಂಡವಲ್ಲಲ್ಲೀ ||೧೬೧||

ಕೂಗಿತು ಪಳ್ಳು ಮಾರ್ಜಾಲ ಓಡ್ಯಾಡಿತು |
ಕಾಗೆಗಟ್ಟಿತು ಪಾರ್ವನೋರ್ವನೈತಂದಾ ||೧೬೨||

ನೋಡಿ ನೋಡದೆ ಬಂದ | ರವಶಕುನವನೆಲ್ಲ |
ಮೂಢಾತ್ಮ ಮಾಗಧರಾಯನಾಜ್ಞೆಯಲೀ ||೧೬೩||

ಕೂಡಿ ದಿಬ್ಬಣ ಬಂದುದೆಂಬ ವಾರ್ತೆಯ ಕೇಳಿ |
ಗಾಢದಿ ರುಗ್ಮಭೂಪಾಲನಿದಿರ್ಗೊಂಡಾ ||೧೬೪||

ರಾಗ ಭೈರವಿ ಝಂಪೆತಾಳ

ತಂದೆ ಭೀಷ್ಮಕರಾಯ | ತಾಯಿ ಚಂದ್ರಾನನೆಯು |
ಬಂಧುಗಳು ನಿಜಪುರೋ | ಹಿತರು ಜೋಯಿಸರೂ ||
ಮುಂದೆ ಕನ್ನಡಿ ಕಲಶ | ವೃಂದಸೀಮಂತಿನೀ |
ವೃಂದಸಹಿತಲೆ ನಡೆ | ತಂದು ದಿಬ್ಬಣದೀ ||೧೬೫||

ಭಾಮಿನಿ

ಧರಣಿಪರು ನಡೆತಂದ ಕಾರ್ಯವ |
ತರುಣಿ ರುಕ್ಮಿಣಿ ತಿಳಿದು ಮನದಲಿ |
ಮರುಗಿ ತನ್ನೊಳು ತಾನೆ ನೆನೆದಳು ತಕ್ಕುಪಾಯವನೂ ||
ಮುರಹರನ ಸನ್ನಿಧಿಗೆ ಓಲೆಯ |
ಬರೆದು ನೋಳ್ಪೆನು ತಾನೆನುತ್ತಲಿ |
ಕರೆಸೆ ದ್ವಿಜಕುಲ ವರನು ಬಂದನು ಬಹಳ ಹರುಷದಲೀ ||೧೬೬||

ರಾಗ ಶಂಕರಾಭರಣ ಆದಿತಾಳ

ಕರೆದ ಕೆಲಸವೇನು ಪೇಳೆ | ಶ್ರೀಲತಾಂಗೀ || ಪುಣ್ಯ |
ಚರಿತೆ ಭಾಗ್ಯವಂತೆ ನೀನು | ಶ್ರೀಲತಾಂಗೀ ||೧೬೭||

ಏನು ನಿಮ್ಮ ಮನೆಯೊಳಿಂದು | ಶ್ರೀ ಲತಾಂಗೀ || ಈಗ |
ಸ್ನಾನವನ್ನು ಮಾಡಿ ಬಂದೆ | ಶ್ರೀಲತಾಂಗೀ ||೧೬೮||

ನೀನು ಲೋಕಮಾತೆಯೈಸೆ | ಶ್ರೀಲತಾಂಗೀ || ಯಾವ |
ದಾನವೇನು ದಯಮಾಡಮ್ಮ | ಶ್ರೀಲತಾಂಗೀ ||೧೬೯||

ರಾಗ ಆರಭಿ ರೂಪಕತಾಳ

ಕೇಳು ಭೂಮಿದೇವ ನಾನು ಪೇಳ್ವ ಮಾತನೂ | ಆ |
ನೀಲವರ್ಣ ಶತ್ರುವೆನುತ ಅಣ್ಣ ರುಗ್ಮನೂ ||
ಖೂಳ ಚೈದ್ಯನಿಂಗೆ ನಾಳೆ ಕೊಡುವನೆನ್ನನೂ | ಭೂ |
ಪಾಲರನ್ನು ಈಗ ತಾನು ಕರೆಸಿಕೊಂಡನೂ ||೧೭೦||

ತಂದೆ ಪೇಳ್ದ ಮಾತನೆಲ್ಲ ಕೇಳಲಿಲ್ಲಯ್ಯಾ | ಮುಂದೆ |
ಬಂದುದೆಲ್ಲ ಬರಲಿ ನೋಳ್ಪೆ ಕೇಳಯ್ಯಾ ||
ಮಂದಭಾಗ್ಯನೊಡನೆ ಬಾಳಲಾರೆ ನಾನಯ್ಯಾ | ಗೋ |
ವಿಂದನಲ್ಲದನ್ಯರಿಂಗೆ ಒಲಿಯೆ ತಾನಯ್ಯಾ ||೧೭೧||

ಮರುಳ ರುಗ್ಮ ಮಾಡಿದ ವೃತ್ತಾಂತವನ್ನೂ | ನಾನು |
ಬರೆದು ಕೊಡವೆನಯ್ಯ ನಿನಗೆ ಲಿಖಿತವನ್ನೂ ||
ಹರಿಯ ಚರಣದೆಡೆಗೆ ಪೋಗಿ ಇತ್ತು ಬೇಗಾ | ಎನ್ನ |
ಪರಿಯ ತಿಳುಹಿ ಕರೆದುತಾರಯ್ಯ ಈಗಾ ||೧೭೨||

ಎನಗೆ ಹಿತನು ನೀನೆಂದು ಒರೆದೆ ನಿನ್ನೊಳೂ | ದುಷ್ಟ |
ಜನರು ಓರ್ವರರಿಯದಂತೆ ಪೋಗು ಭರದೊಳೂ ||
ಎನುತ ಪೇಳಿ ಲಿಖಿತವೀಯೆ ವಿಪ್ರ ಮನದೊಳೂ | ಹರಿಯ |
ಗುಣವ ನೆನೆದ ತಾನೆ ಬಂದನವನು ಮುದದೊಳೂ ||೧೭೩||

ರಾಗ ಸಾಂಗತ್ಯ ರೂಪಕತಾಳ

ಘನವೇಗದಲಿ ವಿಪ್ರ ಮನದಲ್ಲಿ ಶ್ರೀಕೃಷ್ಣ | ವನಜನಾಭನೆ ರಕ್ಷಿಸೆನುತಾ ||
ನೆನೆದು ಕೀರ್ತನೆಗಳ ಪಾಡುತ್ತ ಬರೆ ಕಂಡ | ವನಧಿ ರಂಜಿಸುತಿಪ್ಪ ಪರಿಯಾ ||೧೭೪||

ಒಡೆದು ಚಿಪ್ಪುಗಳನ್ನು ಪಿಡಿವ ಮುತ್ತುಗಳ ಸರಿ | ಗಡಣವೋಲೆಂಬ ಶೀರ್‌ವರಿಯಾ ||
ಕಡು ಪರಾಕ್ರಮದಿಂದ ಪೊಡವಿಯೊಳು ಸೂಸುವ | ಬೆಡಗುಗಳ್ ಕಣ್ಗೆ ರಂಜಿಸಿತೂ ||೧೭೫||

ಇಂತಿರುವಬ್ಧಿರಾಜನ ನೋಡಿ ಮನದಲ್ಲಿ | ಸಂತಸದಿಂದಲೆ ದ್ವಿಜನೂ ||
ತಾಂ ತಳುವದೆ ದಾಟಿ | ಬರಲಾಗ ಕಂಡ ಶ್ರೀ | ಕಾಂತನಾಳುವ ರಾಜಸಿರಿಯಾ ||೧೭೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಟ್ಟೆಗಳ ನೋಡುತ್ತಲಿರೆ ಅರ | ವಟ್ಟಿಗೆಗಳಲ್ಲಲ್ಲಿ ಸ್ವರ್ಣದ |
ಪುಟ್ಟ ಕಲಶದಿ ಪರಿಮಳಾಂಬುವ | ಕುಡಿದನಂದೂ ||೧೭೭||

ಸಾಲು ಸಾಲುಗಳಾಗಿ ರಂಜಿಪ | ತಾಳ ಚಂಪಕ ಬಕುಳ ಪಾದರಿ |
ನಾಳಿಕೇರ ಕದಂಬ ಚಮರಕ | ಚೂತ ವನಸಾ ||೧೭೮||

ಚಾಲ ಚಂದನ ಕ್ರಮುಕ ಕುರವಕ | ಬಾಳೆ ಮಲ್ಲಿಗೆ ಜಾಜಿ ಕುಂದ ಲ |
ತಾದಿ ತರುಗುಲ್ಮಗಳ ಸೊಬಗನು | ಕಂಡನವನೂ ||೧೭೯||

ವಾರ್ಧಕ

ಬಗೆಬಗೆಯ ತರುಗುಲ್ಮ ಚಿಗುರಿದ್ದ ವನಗಳಂ |
ಸೊಗಸಾದ ಪಣ್ಗಳಿಂದೋರೆಸೆವ ಧಾರೆಯಂ |
ಮಿಗೆ ಮುತ್ತುತಿಹ ಭ್ರಮರ ಮಘಮಘಿಪ ಸುಮಗಳಂ ಖಗನಿಕರ ಮೃಗತಲೆಯನೂ ||
ನೆಗೆನೆಗೆದು ಶಾಖೆಶಾಖೆಗೆ ಹಾರ್ವಕಪಿಗಳಂ |
ನಗೆಯೊಳೈತಹ ಜನರು ಮೊಗೆದು ನೀರ್ಗುಡಿವುದಂ |
ದೃಗುಯುಗದಿ ನೋಡುತ್ತ ಪೊಗಳುತ್ತ ಭೂಸುರಂ ನಗರದೆಡೆಗೈತಂದನೂ ||೧೮೦||

ರಾಗ ಕೇತಾರಗೌಳ ಅಷ್ಟತಾಳ

ಒಳಪೊಕ್ಕು ನಗರದ ಮೆರೆವ ಗೋಪುರಗಳ | ಕಲಶಕೋಟಿಯ ಕಾಣುತ್ತಾ ||
ಗೆಲವಿನಿಂದಲಿ ಕೈಯ ಮುಗಿದು ಮುಂದಡಿಯಿಟ್ಟು | ಚೆಲುವಾದ ಬೀದಿಯೊಳೂ ||೧೮೧||

ಬತ್ತೀಸಾಯುಧದಿ ಸಮರ್ಥರಾಗಿರುತಿಹ | ಉತ್ತಮ ಕ್ಷತ್ರಿಯರಾ ||
ಮೊತ್ತ ರಾಜಿಸುತಿಪ್ಪ ಮಂದಿರಂಗಳನು ನೋ | ಡುತ್ತ ತಾ ನಡೆತಂದನೂ ||೧೮೨||

ದ್ವಿಜರಾದಿ ಷಟ್ಕರ್ಮಂಗಳನು ಮಾಡುವ ಭೂರಿ | ದ್ವಿಜರ ಮಂದಿರಗಳನೂ ||
ಭಜಿಸಲೋಸುಗ ಬರ್ಪ ಬ್ರಹ್ಮಾದಿ ದೇವ | ವ್ರಜವ ನೋಡುತ ಬಂದನೂ ||೧೮೩||

ರಾಗ ಕಾಂಭೋಜಿ ಝಂಪೆತಾಳ

ಕಾರ್ಯ ಸಂಗತಿಗಳನು ದ್ವಾರಪಾಲರಿಗರುಹಿ | ಧೈರ್ಯಮಂ ತಾಳಿ ಒಳಹೊಕ್ಕೂ ||
ಸೂರ್ಯತೇಜವ ಪೋಲ್ವ ಸದ್ಧರ್ಮಸಭೆಯೊಳಿಹ | ಶೌರಿಯನು ಕಂಡ ಬ್ರಾಹ್ಮಣನೂ ||೧೮೪||

ರಾಗ ಕೇದಾರಗೌಳ ಅಷ್ಟತಾಳ

ಚರಣಾಬ್ಜಯುಗವನ್ನು ಪೂಜಿಸುತಾಗ ಮ | ತ್ತಿರದೆ ಮಜ್ಜನವ ಗೈಸೀ ||
ಪರಮಾನ್ನಭಕ್ಷ್ಯ ಶಾಲ್ಯೋಗರಾದಿಗಳಿಂದ | ಹರಿಯು ಭುಕ್ತವ ಮಾಡಿಸೀ ||೧೮೫||

ಕಡೆಗೆ ದಕ್ಷಿಣಿ ವೀಳ್ಯವನ್ನಿತ್ತು ನಮ್ರತೆಲಿ | ನುಡಿದನು ತೋಷದಲೀ ||
ಕಡುಭಾಗ್ಯರಾವಾದೆವೆಂದೆನುತಲಿ ಕೈಯ | ಪಿಡಿದೆಂದನಾ ಹರಿಯೂ ||೧೮೬||

ಎಲ್ಲಿಂದೆಲ್ಲಿಗೆ ಬಂದಿರಿ ಯಾವ ದೇಶ ನ | ಮ್ಮಲ್ಲಿ ಕಾರ್ಯವೇನೂ ||
ಸೊಲ್ಲಿಸಬೇಕೆಂದು ನಮಿಸುತ್ತ ದಾನವ | ದಲ್ಲಣ ಬೆಸಗೊಂಡನೂ ||೧೮೭||

ಎಂದ ಮಾತನು ಕೇಳಿ ಭೂದೇವನು ಭಕ್ತಿ | ಯಿಂದ ಪೀಠವನಿಳಿದೂ ||
ಇಂದಿರೇಶನ ನೋಡಿ ಸ್ತುತಿಮಾಡಿ ಓಲೆಯ | ಮುಂದಿಟ್ಟು ಕೈಮುಗಿದಾ ||೧೮೮||

ಕರದಿ ಪತ್ರಿಕೆಯನ್ನು ಪಿಡಿದು ಗೋವಳರಾಯ | ಪರಮ ಆನಂದದಲೀ ||
ತರಳೆ ರುಗ್ಮಿಣಿ ಬರೆದುದನೆಲ್ಲವನತಿ | ಕರುಣದಿಂದಲಿ ನೋಡಿದಾ ||೧೮೯||

ರಾಗ ಕಾಂಭೋಜಿ ಝಂಪೆತಾಳ

ಶ್ರೀರಮಣಿಯರಸ ಸುವಿ | ಚಾರಿ ಸನ್ನುತತೋಷ | ಮಾರನಯ್ಯನೆ ನಿನ್ನ ಪದಕೇ ||
ಭೂರಮಣ ಭೀಷ್ಮಕಕು | ಮಾರಿ ರುಗ್ಮಿಣಿ ಎಂಬ | ನಾರಿ ಮಾಡುವ ಬಿನ್ನಹವನೂ ||೧೯೦||

ಲಾಲಿಸು ಕೃಪಾಂಬುನಿಧಿ | ಬಾಲತನದಲಿ ನಾನು | ಶೀಲಗುಣಗಳ ಕೇಳಿ ನಿನ್ನಾ ||
ಮೇಲೆ ಮನವಿರಿಸಿಯನು | ಕೂಲೆಯಾಗಿರಲಣ್ಣ | ಖೂಳತನದಲಿ ನೆನೆದನೊಂದಾ ||೧೯೧||

ತಂದೆತಾಯಿಗಳು ನೆರೆ | ಬಂಧುಗಳು ನಿನಗೀವೆ | ವೆಂದು ನಿಶ್ಚಯಮಾಡೆ ಕೇಳೀ ||
ಮಂದಮತಿಯಲಿ ಚೈದ್ಯ | ನಿಂಗೀವೆನೆನುತ ಭರ | ದಿಂದ ಕರೆಸಿದನು ಭೂಮಿಪರಾ ||೧೯೨||

ಕೊಡುವ ನಾಳಿನಲಿ ಕಂ | ಗೆಡಿಕೆ ಬಂದಿದೆ ಜೀವ | ಬಿಡುತಿಹೆನು ಬಹಳ ಮಾತೇನೂ ||
ಒಡೆಯ ನೀನಿಹೆ ಎಂದು | ಪಿಡಿದಿಹೆನು ಜೀವವನು | ತಡೆಯದೈ ತರಬೇಕು ಜವದೀ ||೧೯೩||

ಗಿರಿಜೆಯನು ಪೂಜಿಪಡೆ | ಪುರಬಾಹ್ಯಗೈತಹೆನು | ಭರದೊಳಲ್ಲಿಗೆ ಬಂದು ಎನ್ನಾ ||
ಕರಗ್ರಹಣವನು ಮಾಡಿ | ದುರುಳರನು ಸದೆದು ನಿಜ | ಚರಣದಾಸಳ ಪಾಲಿಸುವುದೂ ||೧೯೪||

ಮುನ್ನ ತವ ಪಾದಾಬ್ಜವನ್ನು ನಾ ಭಜಿಸಿದ್ದ | ಡಿನ್ನು ನೀ ಕರುಣದಿಂದೊಲಿದೂ ||
ಮನ್ನಿಸುವಡಭಿಮಾನ | ನಿನ್ನದೈ ಸಲೆ ಸುಗುಣ | ರನ್ನ ಚಿತ್ತೈಸು ಬಿನ್ನಪವಾ ||೧೯೫||

ರಾಗ ಶಂಕರಾಭರಣ ತ್ರಿವುಡೆತಾಳ

ಇಂತು ರುಗ್ಮಿಣಿ ಬರೆದುದೆಲ್ಲವ | ಅಂತರಂಗದಿ ನೋಡುತಲೆ ನಯ |
ನಾಂತರದಿ ನೀರೇದುತಲೆ ಶ್ರೀ | ಕಾಂತನಾಗಾ ||೧೯೬||

ಎನ್ನನೀಕ್ಷಿಸಲೇಕೆ ನಿನಗಾ | ಕನ್ನೆ ರನ್ನಳೆಯನ್ನು ಕರುಣದಿ |
ಮನ್ನಿಸೈ ಶ್ರೀಕಾಂತ ಸದ್ಗುಣ | ದನ್ನ ನೀನೂ ||೧೯೭||

ಎಂದು ನುಡಿದಂದವನು ಶ್ರೀಗೋ | ವಿಂದ ಲಾಲಿಸಿ ಅಣ್ಣ ರಾಮಗೆ |
ವಂದಿಸುತ ಮುದದಿಂದ ಪೇಳಿದ | ನೊಂದು ಮಾತಾ ||೧೯೮||

ರಾಗ ಕಾಪಿ ಅಷ್ಟತಾಳ

ಕ್ಷಿಪ್ರದಿ ಕಳುಹಿಸಿಕೊಡು ಎನ್ನಾ | ಈ |
ವಿಪ್ರನು ಕರೆಯಲು ಬಂದ ಕಾಣಣ್ಣಾ ||೧೯೯||

ಕುಂಡಿನಪುರದ ಅರಸನ ಮಗಳೂ | ಭೂ |
ಮಂಡಲದೊಳ ಗತಿ ಚೆಲುವೆ ಕೋವಿದಳೂ ||
ಕಂಡು ಎನ್ನರಿಯಳು ಸಣ್ಣವಳೂ | ನಾ |
ಗಂಡನೆನುತ ಓಲೆ ಬರೆದಿಹಳೂ ||೨೦೦||

ಹಗೆತನವನು ರುಗ್ಮ ಎಣಿಸಿದನೂ | ಚೈದ್ಯ |
ನಿಗೆ ನಿಶ್ಚಯವ ತಾ ನಡೆಸಿದನೂ ||
ಮಗಧಮುಖ್ಯರನೆಲ್ಲ ಕರೆಸಿದನೂ | ಬಲು |
ಹಗರಣವಾಗಿದೆ ಪೋಗಬೇಕೆನ್ನೂ ||೨೦೧||

ಎನ್ನಯ ಬರವ ಹಾರೈಸುವಳೂ | ಆ |
ಕನ್ನೆಯ ಬಿಡುವುದುಚಿತವಲ್ಲ ಕೇಳೂ ||
ಮನ್ನಿಸಿ ಕರೆತಹೆ ಶೀಘ್ರದೊಳೂ | ಸಂ |
ಪನ್ನ ಪಟ್ಟಣದ ರಕ್ಷೆಗೆ ನಿಲ್ಲು ನೀನೂ ||೨೦೨||

ವಚನ

ಎಂದ ನುಡಿಯನು ಕೇಳುತ ಬಲಭದ್ರ ಶ್ರೀಕೃಷ್ಣನೊಳು ಏನೆಂದನು ಎಂದರೆ –

ರಾಗ ಸಾವೇರಿ ಅಷ್ಟತಾಳ

ಕೇಳಯ್ಯ ನಾ ಪೇಳ್ವುದೊಂದಾ | ಲೋಕ | ಪಾಲ ಶ್ರೀಲೋಲ ಮುಕುಂದಾ ||
ಬಾಳಲೋಚನಮಿತ್ರ | ಪಂಕಜಾಯತನೇತ್ರ | ಲೋಲಾಳಿನಿಭಕೇಶ | ರವಿಸುಪ್ರಕಾಶ ||೨೦೩||

ದುರುಳ ಮಾಗಧಮುಖ್ಯರೆಲ್ಲಾ | ಅಲ್ಲಿ | ನೆರಹಿಕೊಂಡಿಹರು ಸುಳ್ಳಲ್ಲಾ ||
ಪುರಕೇನು ಭಯವಿಲ್ಲ | ಪರಿವಾರ ಸಹಿತ ನಾ | ಬರುವೆನು ಭರದಲ್ಲಿ | ತೆರಳಯ್ಯ ನೀ ಮುಂದೆ ||೨೦೪||

ರಾಗ ಶಂಕರಾಭರಣ ಮಟ್ಟೆತಾಳ

ಎಂದ ಮಾತ ಕೇಳಿ ಕೃಷ್ಣ ಮಂದಹಾಸದೀ | ತಂದೆ ತಾಯಿಗೆರಗಿ ರಾಮಪದಕೆ ಶೀಘ್ರದಿ ||
ವಂದಿಸುತ್ತ ರಥವನೇರಿ ವಿಪ್ರಸಹಿತಲೇ | ಒಂದು ನಿಮಿಷದಲ್ಲಿ ಬಂದ ಗಗನಪಥದಲೀ ||೨೦೫||

ಪುರದ ಬಾಹ್ಯೆಯಲ್ಲಿ ನಿಂತು ಕರೆದು ವಿಪ್ರನಾ | ಹರುಷದಿಂದ ಪೇಳ್ದನಾಗ ದುರುಳಮರ್ದನಾ ||
ಧರೆಯ ದಿವಿಜ ಕೇಳು ನೀನು ಪುರಕೆ ಪೋಗಯ್ಯಾ | ತರಳೆಯೊಡನೆ ಬಂದೆನೆಂದು ಭರದಿ ]
ಪೇಳಯ್ಯಾ ||೨೦೬||

ರಾಗ ಮಾರವಿ ಏಕತಾಳ

ಮುರಹರನಾಡಿನ ಮಧುರೋಕ್ತಿಯ ದ್ವಿಜ | ವರನಾಲಿಸಿ ಮುದದೀ ||
ಕರುಣಾಕರನಡಿಗೆರಗುತ ಪೇಳ್ದನು | ಪರಮಾನಂದದಲೀ ||೨೦೭||

ಮಂದರಧರ ನೀನೆಂದ ನುಡಿ ಅರ | ವಿಂದನಯನೆಯೊಡನೇ ||
ಕುಂದದೆ ಪೇಳುವೆ ಹಿಂದುಗಳೆಯದಿರು | ಇಂದೀ ಕಾರ್ಯದಲೀ ||೨೦೮||

ಮದುವೆಯ ಮಾಳ್ಪರು ಮದಮುಖಚೈದ್ಯಗೆ | ಪದುಮದಳಾಕ್ಷಿಯನೂ ||
ಒದಗಿಲಿ ಕೈಪಿಡಿವುದು ತಡೆಯದೆ ಸದೆ | ವುದು ನೀ ರಿಪುಗಳನೂ ||೨೦೯||

ಬಡವನ ನುಡಿಯನು ನಡೆಸದೆಪೋದರೆ | ಕೆಡುವುದು ಬಹುಕೆಲಸಾ ||
ದೃಢವುಂಟಾದರೆ ಕೊಡು ಎನಗಭಯವ | ತಡೆಯದೆ ಪೋಗುವೆನೂ ||೨೧೦||

ವಚನ

ಧರಣೀಶನರ್ಧಾಂಗಿ ಹರಿಣಾಕ್ಷಿ ಸ್ನೇಹದಿಂ |

ರಾಗ ಸಾವೇರಿ ಏಕತಾಳ

ಧರಣಿದೇವನೆ ಕೇಳು | ತರುಣಿಗೋಸ್ಕರ ಬಂದು |
ಬರಿದೆ ಪೋಗುವ ನಲ್ಲ | ದೃಢನಂಬುಗೆ ಸೊಲ್ಲ ||೨೧೧||

ಬಾಲೆ ವಿದರ್ಭಿಯ | ಮೇಲೆ ನಾ ಮನವಿಟ್ಟು |
ಬೀಳುಗೊಂಡುದು ರಾತ್ರೆ | ನಿದ್ರೆಯು ನನಗೆ ||೨೧೨||

ಆಲಸ್ಯವನು ಬಿಟ್ಟು | ಪೇಳೈ ನೀ ಪೋಗಿ |
ಕಾಳಾಹಿವೇಣಿಗೆ | ಸಲೆ ದೃಢವಾಗಿ ||೨೧೩||

ಭಾಮಿನಿ

ಪದುಮನಾಭನು ಪೇಳ್ದ ವಾಕ್ಯದ |
ಮಧುರತೆಯ ಸೇವಿಸುತ ವಿಪ್ರನು |
ಒದಗಿನಲಿ ಬರಲಿತ್ತಲತ್ತಲು ಪುರದ ಭೂಸುರರೂ ||
ಮದುವೆ ಇಂದಿನೊಳೆಂದು ದಕ್ಷಿಣೆ |
ಗೊದಗಿ ಬರುವುದ ಕಂಡು ರುಗ್ಮಿಣಿ |
ಬೆದರಿ ಬಸವಳಿಯುತ್ತ ಹಲುಬಿದಳ್ ಬಹಳ ಶೋಕದಲೀ ||೨೧೪||

ರಾಗ ಆನಂದ ಭೈರವಿ ರೂಪಕತಾಳ

ಪೋದ ವಿಪ್ರನೇಕೆ ಬಾರ | ದಾದ ಮುದದಲೀ ||
ಮಾಧವಂಗೆ ಲಿಖಿತವೀಯೆ | ಓದಿ ಭರದಲೀ ||೨೧೫||

ತರುಣಿ ತಾನು ಬರೆದಳೆಂದು | ಹರಿಯು ಹಾಸ್ಯದೀ ||
ಜರೆದು ನುಡಿಯೆ ಕೇಳಿ ವಿಪ್ರ | ಮರುಗಿ ಖೇದದೀ ||೨೧೬||

ಇತ್ತ ಬರಲು ನಾಚಿಕೊಂಡು | ಎತ್ತ ಪೊದನೋ ||
ಚಿತ್ತಜನಕ ಬಾರದಿರಲು | ಹೊತ್ತುಗಳೆವನೋ ||೨೧೭||

ದಾನವಾರಿ ಕಾಯದುಳಿಯ | ಮಾನವೊಂದನೂ ||
ಏನು ಮಾಡಲಿನ್ನು ಪುಣ್ಯ | ಹೀನೆಯಾದೆನೂ ||೨೧೮||

ಮಾತೆ ಪೇಳ್ದ ಮಾತಿದೆಲ್ಲ | ಪುಸಿಯೆಂದಾಯಿತೂ ||
ತಾತ ನೆನೆದ ಕಾರ್ಯವೆಲ್ಲ | ನೀತಿತಪ್ಪಿತೂ ||೨೧೯||

ಯಾರಿಗುಸುರಲಿನ್ನು ಮುಂದೆ | ಪಾರಗಾಣೆನೂ ||
ದಾರಿ ತೋರಲಿಲ್ಲ ಇಂದು | ಗೌರಿ ತನ್ನನೂ ||೨೨೦||

ಕೆಟ್ಟೆನಕಟ ಕೃಷ್ಣ ಕೈಯ | ಬಿಟ್ಟನೆನ್ನನೂ ||
ಪುಟ್ಟಿ ವ್ಯರ್ಥವಾದೆ ತನುವ | ಇಟ್ಟುಕೊಳ್ಳೆನೂ ||೨೨೧||

ಎಂದು ಮರುಗೆ ವಾಮನಯನ | ಸ್ಪಂದವಾದುದೂ ||
ಮಂದಗಮನೆ ಪೇಳೆ ಸಖಿಯು | ನಿಂದು ಪೇಳ್ದಳೂ ||೨೨೨||

ರಾಗ ಕಾಂಭೋಜಿ ಆದಿತಾಳ

ಇಂದಿರೆ ನಿನ್ನ ವಾಮಾಂಗ | ಸ್ಪಂದವೇನಮ್ಮಾ || ಕೇ |
ಳಿಂದು ಬಂದು ನಮ್ಮಾ || ಲೋಕ | ದೊಡೆಯನನು
ತಂದು ತೋರ್ಪ | ವಿಪ್ರನಮ್ಮಾ ||೨೨೩||

ಇಂತು ಪೇಳುತಿರಲು ಲಕ್ಷ್ಮೀ | ಕಾಂತನೆಡೆಯಿಂದಾ || ಶ್ರೀ |
ಕಾಂತೆ ಬಳಿಗೆ ವಿಪ್ರ ಹರುಷ | ವಾಂತು ಬಂದಾ ||೨೨೪||

ರಾಗ ಭೈರವಿ ಝಂಪೆತಾಳ

ಬರುವ ವಿಪ್ರನ ಕಂಡು | ತರಳೆ ರುಗ್ಮಿಣಿ ಮನದಿ |
ಅರಿತಳಿಂಗಿತದಿಂದ | ಹರಿ ಬಂದನೆಂದೂ ||೨೨೫||

ಗದ್ದುಗೆಯನಿಳಿದು ತಾ | ನೆದ್ದು ನಿಲ್ಲಲು ಸುಪ್ರ |
ಸಿದ್ಧದ್ವಿಜ ನಡೆತಂದು | ಹೊದ್ದಿದನು ಸಿರಿಯಾ ||೨೩೬||

ನೀಲವರ್ಣನ ಕರುಣ | ದೇಳಿಗೆಯ ಸಂಗ್ರಾಮ |
ಪೇಳಿದನು ನಲಿನಲಿದು | ಶ್ರೀಲತಾಂಗಿಯೊಳೂ ||೨೨೭||

ರಾಗ ಕಾಪಿ ಏಕತಾಳ

ಕೇಳು ಭೀಷ್ಮಕಜಾತೇ | ಸದ್ಗುಣ | ಶೀಲೆ ಮನ್ಮಥಮಾತೇ ||
ಮೂರ್ಲೋಕಾರ್ಚಿತೆ | ಮುನಿಜನಸನ್ನುತೆ | ಲೋಲನಯನೆ ಹರಿ | ಬಾಲೆ ಸುಶೀಲೆ ||೨೨೮||

ಬರೆದ ಓಲೆಯ ನೋಡೀ | ಮುರ | ಹರನು ಪ್ರೀತಿಯ ಮಾಡೀ ||
ಶರದಲಿ ದುರುಳರ | ಶಿರಗಳ ತರಿದತಿ | ಭರದೊಳು ನಿನ್ನನು | ಕರೆದೊಯ್ವೆನೆಂದ ||೨೨೯||

ಬಲರಾಮಗರುಹಿದನೂ | ನಿಜ | ಲಲನೆ ನೀನೆಂಬುದನೂ ||
ತಳುವದೆ ಕಳುಹಿಸಿ | ಕೊಳುತಲೆ ಗೆಲವಿಲಿ | ಪೊಳಲ ಬಳಿಗೆ ಬಂದ | ಅಳಲದಿರವ್ವ ||೨೩೦||

ನಿನ್ನ ಪುಣ್ಯದ ಕಣಿಯೂ | ಗುಣ | ದನ್ನೆ ಭಾಗ್ಯದ ಕಣಿಯೂ ||
ನಿನ್ನ ಇರುಳಿನೊಳು | ಕಣ್ಣಿಗೆ ನಿದ್ರೆಯು | ಹಣ್ಣದೆ ಉದಯದಿ | ಮಿಣ್ಣನೆ ಬಂದ ||೨೩೧||

ದ್ವಿಪದಿ

ಇಂತೆಂದುದನು ಲಾಲಿಸುತ್ತ ರುಗ್ಮಿಣಿಯೂ ||
ಸಂತೋಷವನು ತಾಳ್ದು ಪೇಳ್ದಳತಿ ಭರದೀ ||೨೩೨||

ಬಂದನೇ ಮುರಹರನು ಬಳಲಿದಿರಿ ನೀವೂ |
ಬಂದುದೈ ಸಲೆ ನಿಮ್ಮ ದಯದಿ ಸಂಪದವೂ ||೨೩೩||

ಬಳಲಿಸಿದೆ ನಿಮ್ಮಡಿಯ ಹಲವು ಮಾತೇನೂ |
ಛಲವನುದ್ಧರಿಸಿದಿರಿ ಮರೆವೆನೇ ನಾನೂ ||೨೩೪||

ಚರಣಕೆರಗಿದ ಸಿರಿಯ ಪಿಡಿದೆತ್ತಿ ಪರಸೀ |
ಹರಿ ಒಲಿಯಲೆಂದು ಕರವೆತ್ತಿ ಸಂತೈಸೀ ||೨೩೫||

ಇಂತೆನುತ ನುಡಿದು ಭೂಸುರನು ವಹಿಲದಲೀ |
ಕಂತುಪಿತನಂ ಭಜಿಸಿ ಪೋದ ಹರುಷದಲೀ ||೨೩೬||

ಇತ್ತಲಾ ರುಗ್ಮಿಣಿಯು ಘನ ಹರುಷದಿಂದಾ |
ಚಿತ್ತದಲಿ ಹರಿಯ ಭಜಿಸುತ್ತಿರ್ದಳೆಂದಾ ||೨೩೭||

ಭಾಮಿನಿ

ಧರಣಿಪತಿ ಕೇಳಿತ್ತ ಹಲಧರ |
ಕರಿ ತುರಗ ರಥ ಪತ್ತಿಸಂಕುಲ |
ವೆರಸಿ ನಾನಾ ಘೋಷದಿಂ ನಗರವನು ಪೊರಮಟ್ಟಾ ||
ವರವರೂಥವನೇರಿ ಭರದಲಿ |
ಬರುತ ಭೀಷ್ಮಕನಾಳ್ವ ಕುಂಡಿನ |
ಪುರದ ಬಾಹ್ಯೆಯೊಳಿಪ್ಪ ಹರಿಯನು ಕಂಡು ಬೆಸಗೊಂಡಾ ||೨೩೮||

ರಾಗ ಪಂತುವರಾಳಿ ಏಕತಾಳ

ಏನಯ್ಯ ರಂಗ | ನೀಲನಿಭಾಂಗ  || ಪಲ್ಲವಿ ||

ಬಾಲೆಗೋಸ್ಕರ ಬಂದು ಸುಮ್ಮನೆ | ವೇಳೆಕಳೆವುದು ನೀತಿಯೇ  || ಅನುಪಲ್ಲವಿ ||
ಧರಣಿಪಾಲರು ನೆರೆದುಕೊಂಡಿಹರಿಂದು |
ತರುಣಿರನ್ನೆಯ ದುರುಳಚೈದ್ಯಗೆ |
ಭರದಿ ಮದುವೆಯ ಮಾಳ್ಪರೂ ||೨೩೯||

ಬರಿದೆ ಪೋಗುವ ತೆರನಾಗುವುದು ನಾವು |
ಪುರಕೆ ಬೇಗದಿ ತರಳೆಯನು ಕರೆ |
ತರುವುದೊಳ್ಳಿತು ನೋಡಿಕೋ ||೨೪೦||

ರಾಗ ಸೌರಾಷ್ಟ್ರ ಅಷ್ಟತಾಳ

ಇಂತೆಂದು ನೀಲಾಂಬರಸಹಿತಲೆ ದಾನ |
ವಾಂತಕನೈತರೆ ಕೇಳಿ ಭೀಷ್ಮಕನೂ ||
ಸಂತೋಷದಿಂದಿದಿರ್ಗೊಂಡು ಪಾದಾಕ್ರಾಂತ |
ನಾಗುತ್ತ ಬಲು ಭಕ್ತಿಯಿಂದ ಇಂತೆಂದಾ ||೨೪೧||

ರಾಗ ಮಾರವಿ ಏಕತಾಳ

ಹರಿಯೇ ಲಾಲಿಸು ನಿನ್ನ | ಸಿರಿಪಾದವನು ಕಂಡು |
ಹರಿದುಪೋದುದು ಎನ್ನ | ದುರಿತವನೇಕಾ ||೨೪೨||

ಸರಿಯಾರು ಕಾಣೆ ಈ | ಧರಣೀಭಾರವನೆನ್ನ |
ತರಳಗೆ ಇತ್ತೆನು ಎನ್ನ | ಗೃಹಕೆ ದಯಮಾಡೀ ||೨೪೩||

ವಚನ

ಇಂತೆಂದ ಭೀಷ್ಮಕನೊಡನೆ ಬಲಭದ್ರ ಮುರಾಂತಕರೈತರುತಿರ್ದರದೆಂತೆನೆ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಮಕೃಷ್ಣರ ಕರೆದು ಭೀಷ್ಮಕ | ಪ್ರೇಮದಿಂದುಪಚರಿಸಿ ಹರಿಪದ |
ತಾಮರಸಕೊಂದಿಸುತ ಪೇಳ್ದನು | ಕಾಮಿತವ ಸಲಿಸೆನ್ನುತಾ ||೨೪೪||

ಸುತನ ಮತ ಚೈದ್ಯಂಗೆನುತ್ತಲಿ | ಸುತೆಯು ನಿನ್ನನೆ ಬಯಸಿಹಳು ಮ |
ನ್ಮತವು ಸುತೆಯಭಿಮತವು ನೀನೇ | ಪತಿಕರಿಸಿ ಪೊರೆ ಎಂದನೂ ||೨೪೫||