ರಾಗ ಮಾರವಿ ಅಷ್ಟತಾಳ
ಧರಣೀಶ ಕೇಳೆನ್ನ ಮಾತಾ | ನಿನಗೆ |
ಸರಿಯಾರ ಕಾಣೆನು ಲೋಕ ಪ್ರಖ್ಯಾತಾ ||೨೪೬||
ಇಷ್ಟುಪಚಾರವೇಕಯ್ಯಾ | ಇನ್ನು |
ಕಷ್ಟ ಎಳ್ಳಿನಿತಿಲ್ಲ ಲೇಸಹುದಯ್ಯಾ ||
ಇಷ್ಟಾರ್ಥ ಸಿದ್ಧಿಸಲಯ್ಯಾ | ರಾಜ |
ಶ್ರೇಷ್ಠ ನಿನ್ನಯ ಮನವರಿತೆ ಕೇಳಯ್ಯಾ ||೨೪೭||
ವಚನ
ಇಂತೆಂದು ಭೀಷ್ಮಕನೊಡನೆ ಕೃಷ್ಣನು ಮಾತಾಡುತಿರೆ ಭೂಪರು ಮಾಗಧನೊಳು ಏನೆನುತಿರ್ದರು ಎಂದರೆ –
ರಾಗ ಮುಖಾರಿ ಆದಿತಾಳ
ಮಗಧೇಶ ಕೇಳೆಮ್ಮಯ ಮಾತ | ಲೋಕ ಪ್ರಖ್ಯಾತಾ || ಪಲ್ಲ ||
ಜಗವು ಮೂರೊಂದಾಗಿ ಬಂದೂ | ನಮ್ಮ ಮೇಲಿಂದು |
ಮಗುಚಿದರಳುಕೆವಾವಿಂದೂ || ಅನುಪಲ್ಲ ||
ತಡವೇಕೆ ಚೈದ್ಯಭೂಪನಿಗೇ | ವೈದರ್ಭಿಯನು |
ಕೊಡಹೇಳು ರುಗ್ಮನೊಳ್ ಬೇಗಾ ||
ಕಡಲೊಳು ತಾ ಮು | ನ್ನಡಗಿದ ಗೋವಳ |
ಹುಡುಗರು ಬಂದೀ | ಹುಡುಗಿಯನೊಯ್ಯುವ |
ಬೆಡಗಿನೊಳಿಹರಾ | ವೆಡೆಯೊಳು ನೋಡೈ ||೨೪೮||
ರಾಗ ಭೈರವಿ ಝಂಪೆತಾಳ
ಇಂತು ಪೇಳಿದ ಭಟರ | ಸಂತವಿಡುತಲೆ ಧೈರ್ಯ |
ಮುಂ ತಾಳುತೆಂದ ಭೂ | ಕಾಂತ ಮಾಗಧನೂ ||೨೪೯||
ಆದುದಾಗಲಿ ನೋಡು | ಯಾದವರ ಪಾಡೇನು |
ಸಾದರದಿ ಲಗ್ನವದು | ಸಾಧಿಸುವೆನೆನುತಾ ||೨೫೦||
ಕರೆಸಿ ಭೀಷ್ಮಕನನ್ನು | ಭರದಿ ಬಂದಿದೆ ಲಗ್ನ |
ಬರಿಸು ತನುಜೆಯ ಧಾರೆ | ಎರೆಕ್ಷಿಪ್ರದಿಂದಾ ||೨೫೧||
ರಾಗ ಕೇತಾರಗೌಳ ಝಂಪೆತಾಳ
ಎಲೆ ಮಗಧಭೂಪ ಕೇಳೂ | ರುಗ್ಮಿಣಿಯು | ಕುಲದೇವಿಯನ್ನು ಮೊದಲೂ ||
ಒಲಿದು ಪೂಜೆಯ ಮಾಡಲೀ | ಬಳಿಕ ಶುಭ | ಕೆಲಸವನು ಕೈಗೊಳ್ಳಲೀ ||೨೫೨||
ಎಂದು ಭೀಷ್ಮಕ ಪೇಳಲೂ | ಲೇಸು ಲೇ | ಸೆಂದೆನುತ ಅತಿ ಭರದೊಳೂ ||
ಮಂದಮತಿ ರುಗ್ಮನಾಗಾ | ಭಟ ವಾಜಿ | ವೃಂದ ಕಳುಹಿಸಿದ ಬೇಗಾ ||೨೫೩||
ವಿಪ್ರ ಪತ್ನಿಯರವೆರಸೀ | ಅಕ್ಷತೆಯ | ಕ್ಷಿಪ್ರದಿಂದಿಟ್ಟು ಹರಸೀ ||
ಅಪ್ರತಿಮೆಯನ್ನು ನೋಡೀ | ಕಳುಹಲ್ಕೆ | ಸುಪ್ರೌಢೆಯರನು ಕೂಡೀ ||೨೫೪||
ಮಂದಗಮನೆಯು ಬಂದಳೂ | ಮೆರೆವ ಕಾ | ಲಂದುಗೆ ಝಣರೆನ್ನಲೂ ||
ವೃಂದಾರಕರು ಪೊಗಳಲೂ | ಶುಭಶಕುನ | ಸಂದೋಹಮಂ ಕಂಡಳೂ ||೨೫೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮನದಿ ಕೃಷ್ಣನ ಧ್ಯಾನಿಸುತ ಮಿಗೆ | ಗೆಣತಿಯರ ಪೊಂಗೊಡೆಯ ನೆಳಲಲಿ |
ವನಿತೆಯರ ಮೇಳದಲಿ ಮನ್ಮಥ | ಜನನಿಯಾಗಾ ||೨೫೬||
ಪರಿಪರಿಯ ಘನವಾದ್ಯ ಮೊಳಗಲು | ತರುಣಿ ಮೌನದಿ ಬಂದು ತನ್ನಯ |
ಚರಣಯುಗವನು ತೊಳೆದು ಸಾರ್ದಳು | ಗಿರಿಜೆಯೆಡೆಗೇ ||೨೫೭||
ಬಂದು ಸದ್ಭಕ್ತಿಯಲಿ ಚರಣಕೆ | ವಂದನೆಯ ಗೈವುತ್ತ ಜಯಜಯ |
ಎಂದು ನುತಿಸುತ ಪೂಜಿಸಿದಳಾ | ನಂದದಿಂದಾ ||೨೫೮||
ರಾಗ ಢವಳಾರ ಆದಿತಾಳ
ಗಿರಿಜಾತೆಗೆ ಗಜಮುಖಮಾತೆಗೆ |
ಶರಣಾಗತಜನವತ್ಸಲೆಗೆ |
ಕರುಣಾ ಸಾಗರೆಗೆ | ಶ್ರೀಗೌರಿಗೆ ||
ಶ್ರೀಗೌರಿಗೆ ಸಿಂಹವಾಹಿನಿಗೆ |
ಸರಸಿಜಾಂಬಕಿಗೆ | ಜಯಜಯ ||೨೫೯||
ರಾಗ ಮಾರವಿ ಏಕತಾಳ
ಪಾಲಿಸೆ ಪಾರ್ವತಿ ಇಷ್ಟಾರ್ಥವನ್ನು |
ಬಾಲೇಂದುಧಾರಿಣಿ ಭಾಗ್ಯಪ್ರದಾಯಿನಿ ||೨೬೦||
ನೀಲಕುಂತಳೆ ನೀರಜಪತ್ರನೇತ್ರೆ |
ಫಾಲಲೋಚನೆ ಭರ್ಗಭುವನಪವಿತ್ರೆ ||೨೬೧||
ಶೈಲೇಶತನುಜಾತೆ ಶಾಂಭವಿ ಗುಹಮಾತೆ |
ಶ್ರೀಲೋಲ ವರಿಪಂತೆ ಚಾರುಚರಿತ್ರೆ ||೨೬೨||
ರಾಗ ಕಾಂಭೋಜಿ ಝಂಪೆತಾಳ
ಕುಡಿಮೊಲೆಯ ಭಾರದಲಿ | ನಡು ಬಳುಕೆ ಅಧರನೊ |
ಪ್ಪಿಡುತೀ ಜಗದಿ ಪೊಸತೆನಲೂ ||
ಪಡೆಯೆಲ್ಲ ಪಲ್ಲಟಿಸಿ | ನೋಡತಿರಲಡಿಗಡಿಗೆ |
ನಡೆತಂದಳಾಗ ಲಲಿತಾಂಗೀ ||೨೬೩||
ಮೆಲ್ಲಮೆಲ್ಲನೆ ಬರುತ | ಅಲ್ಲಲ್ಲಿ ನೋಡುತ್ತ |
ನಿಲ್ಲುನಿಲ್ಲುತ ಬರಲು ಕಂಡೂ ||
ಸಲ್ಲಲಿತ ಸತ್ತಿಗೆಯ | ಪಲ್ಲವಿಸಿ ರಥವ ತಂ |
ದುಲ್ಲಸದಿ ಭಟರು ಪೇಳಿದರೂ ||೨೬೪||
ತಾಯೆ ತೆರಳೆಂದೆನಲು | ತೋಯಜಾಂಬಕಿ ಮಹಾ |
ದಾಯಸದಿ ಹರಿಯ ಧ್ಯಾನಿಸುತಾ ||
ಬಾಯ ಬಿಡುತೊರಲುತಿರೆ | ಕಾಯಜೋಪಮಪಿತಗೆ |
ರೋಹಿಣಿಯ ಜಾತನಿಂತೆಂದಾ ||೨೬೫||
ಇದು ಸಮಯ ಕೃಷ್ಣ ಕೇಳ್ | ಪದುಮದಳಲೋಚನೆಯ |
ಒದಗಿನಲಿ ಕೈವಿಡಿದು ನೀನೂ ||
ಮುದದಿ ನಡೆ ದ್ವಾರಕಿಗೆ | ಮದಮುಖರ ಸದೆದು ಜಯ |
ವಧುವನೊಡಗೊಂಡು ನಾ ಬಹೆನೂ ||೨೬೬||
ರಾಗ ಭೈರವಿ ಏಕತಾಳ
ಹಲಧರ ಪೇಳಿದ | ಸುಲಲಿತ ವಾಕ್ಯವ | ಜಲರುಹಲೋಚನ | ತಿಳಿದತಿರಮ್ಯದಿ |
ಬೆಳಗುವ ರಥವೇ | ರ್ದಲಸದೆ ನಡೆತಂ | ದಳಲುವ ತರಳೆಯ ಬಳಿಯಲಿನಿಂದಾ |
ಕೇಳುರಾಯ ||೨೬೭||
ಸುತ್ತಲು ಬಿಗುಹಿನೊಳ್ | ಮುತ್ತುವ ಸುಭಟರ | ನೆತ್ತಿಯ ಬಡೆದರ | ಹುತ್ತಿರೆ ರೋಷದಿ |
ಮತ್ತಗಜಾಶ್ವದ ಮೊತ್ತವ ಛೇದಿಸಿ | ವೃತ್ತಕುಚೆಯ ಪಿಡಿ | ದೆತ್ತಿದ ಮುದದೀ || ವಾಸುದೇವ ||೨೬೮||
ಕನ್ನೆಯ ಕರುಣದಿ | ತನ್ನಯ ರಥದಲಿ | ಮನ್ನಿಸೆ ಮಾನಿನಿ | ಸನ್ನುತಿಗೈವುತ |
ಉನ್ನತ ಹರುಷದಿ | ಮುನ್ನಿನ ದುಃಖಗ | ಳನ್ನೆ ಮರೆತು ಜಯವೆನ್ನುತಲಿರಲೂ ||
ಕಂಡರೆಲ್ಲ ||೨೬೯||
ಅಂಗರಕ್ಷೆಗೆ ಯದು | ಪುಂಗವರೆಲ್ಲರು | ಬೆಂಗಡೆಯಲಿ | ಬರೆ | ರಂಗನು ಹರುಷದಿ |
ಪೊಂಗಲಶಂಖವ | ಹಿಂಗದೆ ನಾದಿಸೆ | ಅಂಗನೆಸಹಿತಲಿ | ಬೆಡಗಿನೊಳ್ ಭರದೀ ||
ಬಂದರೆಲ್ಲ ||೨೭೦||
ರಾಗ ಭೈರವಿ ತ್ರಿವುಡೆತಾಳ
ಪೊಡವಿಪತಿ ಮಗಧೇಶನೀಕ್ಷಿಸಿ | ಕಿಡಿಗಳನೆ ಕಂಗಳಲಿ ಸೂಸುತ |
ನಡೆದ ಶರಧನು ಹಿಡಿದು ಯಾದವ | ಪಡೆಯನೆಲ್ಲವ ಪಿಡಿದು ಕೆಡವುತ ||೨೭೧||
ಹುಡುಗಿಯನು ಕದ್ದೊಯ್ದ ಗೊಲ್ಲರ | ಹುಡುಗನನು ಪಿಡಿತನ್ನಿರೆನ್ನುತ |
ಘುಡಿಘುಡಿಸಿ ಕೋಪದಲಿ ಮುರಹರ | ನೆಡೆಗೆ ಬರಲೊಡನೊಡನೆ ಸುಭಟರು ||
ಬಂದರಾಗ | ಸಮರಕೈ | ತಂದರಾಗ ||೨೭೨||
ರಾಗ ಶಂಕರಾಭರಣ ಮಟ್ಟೆತಾಳ
ಉರುತರಾಸ್ತ್ರ ಶಸ್ತ್ರ ಶೂಲ | ಪರಶು ಮುದ್ಗರಾ ||
ಮೆರೆವ ಕುಂತ ಖಡ್ಗ ಸಹಿತ | ಬಂದನಾಸುರಾ ||೨೭೩||
ಧುರಕೆ ಯಾದವರನು ಕರೆದು | ಬೆರಸಿ ಹೊಯ್ಯುತಾ ||
ತರುಣಿಯನ್ನು ಕದ್ದ ಚೋರ | ನಿಲ್ಲು ಎನ್ನುತ್ತಾ ||೨೭೪||
ಮುತ್ತಿ ಬರುವ ಭಟರ ಕಾಣು | ತ್ತಿತ್ತ ಯದುಗಳೂ ||
ಮೊತ್ತಗಜರಥಾಶ್ವಗಳನು | ಒತ್ತಿ ಭರದೊಳೂ ||೨೭೫||
ಭಾಮಿನಿ
ಚಂಡಭುಜಬಲ ಕೃಷ್ಣ ರಿಪುಗಳ |
ತಂಡವನು ಸದೆಬಡಿಯುತಿರಲದ |
ಕಂಡು ಮಣಿರಥವೇರಿ ತಾನೈತಂದ ರೇವತಿಯಾ ||
ಗಂಡ ನುಡಿದನು ರುಗ್ಮಿಣಿಯ ಕರ |
ಕೊಂಡು ನೀ ನಡೆ ವೈರಿನಿಕರವ |
ದಿಂಡುಗೆಡಹುವೆನೆನುತ ರೋಷದಿ ಸಮರಕಿದಿರಾದಾ ||೨೭೬||
ರಾಗ ನಾದನಾಮಕ್ರಿಯೆ ಅಷ್ಟತಾಳ
ಬಲನು ರೋಷದಿ ದಿವ್ಯಹಲದೊಳೂ | ದೈತ್ಯ | ಬಲವೆಲ್ಲ ಬೀಳುವ ತೆರದೊಳೂ ||
ಚಳಕದಿ ಹೊಯ್ದೊರಗಿಸಿದನೂ | ಖಳ | ರಲಸದೆ ಹೊಡೆದರು ಬಲನನೂ ||೨೭೭||
ಕನ್ನೆಯ ಕದ್ದೊಯ್ದ ಖೂಳನೇ | ಶಿರ | ವನ್ನರಿಯುವೆ ನೋಡು ಚೋರನೇ ||
ಮುನ್ನ ನೀ ಗೆಲಿದಹಂಕೃತಿಯನೇ | ಬಿಡು | ಉನ್ನತಿಕೆಯ ಬಡ ಗೊಲ್ಲನೇ ||೨೭೮||
ತರುಣಿಯ ದೆಸೆಯಿಂದ ಪ್ರಾಣವಾ | ನೀವು | ತೆರುವುದೇತಕೆ ಬಂದ ಮಾರ್ಗವಾ ||
ಪರಿಕಿಪುದೊಳ್ಳಿತು ನೋಡೂ | ಗೊಲ್ಲ | ತರಳರೊಳ್ ಯುದ್ಧ ಸರ್ವಥಾ ಬೇಡಾ ||೨೭೯||
ಎನುತ ಹಲಾಯುಧದಿಂದಲೀ | ಬಂದ ಬಿನುಗು ದೈತ್ಯರಿಗೆಚ್ಚ ಭರದಲೀ ||
ತನುವ ನೀಗದೆ ಓಡಿಪೋದರೂ | ನೊಂದು | ಜನಪ ದೈತ್ಯೇಶನೊಳೊರೆದರೂ ||೨೮೦||
ಬಂದ ಕಾರ್ಯವು ವ್ಯರ್ಥವಾಯಿತೂ | ಭಟ | ವೃಂದವೆಲ್ಲವು ಕಾದಿ ಬಳಲಿತೂ ||
ಇಂದೆಲ್ಲ ಊರಿಗೆ ಪೋಗುವಾ | ನಾಳೆ | ಒಂದಾಗಿ ಬಂದು ಕೈಮಾಡುವಾ ||೨೮೧||
ಇಂತೆಂದು ಸಾಲ್ವ ಜರಾಸುತಾ | ಬಂದು | ಸಂತೈಸುತಿರೆ ಚೈದ್ಯ ಕೇಳುತಾ ||
ಬಂತೆಮಗವಮಾನವೆನುತಲೀ | ಶೋಕ | ವಾಂತುಸುರಿದನತಿ ವ್ಯಥೆಯಲೀ ||೨೮೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಹರಹರೆನಗೀ ಪರಿಯ ದುರ್ದಶೆ | ದೊರಕಿದುದೆ ಹಾಯೆನುತ ತನ್ನಯ |
ಶಿರದೊಳಿಹ ಬಾಶಿಗವ ತಾ ತೆಗೆ | ದಿರಿಸಿ ಭರದೀ ||೨೮೩||
ಮುಂಗಡೆಯೊಳಿರಿಸಿದ್ದ ಚೆಲುವಿನ | ಪೊಂಗಲಶ ಕನ್ನಡಿಯ ಕಾಣುತ |
ಕಂಗಳಲಿ ಕಿಡಿಗೆದರಿ ಬಿಸುಟನು | ಅಂಗಳದಲೀ ||೨೮೪||
ಇಟ್ಟುಕೊಂಡಿಹುದೆಲ್ಲವನು ತೆಗೆ | ದಿಟ್ಟು ಬೀದಿಗೆ ಬಂದು ಭ್ರಮೆಯಲಿ |
ಬಿಟ್ಟಮಂಡೆಯೊಳಾಗ ತಿರುಗಿದ | ಬಟ್ಟೆವಿಡಿದೂ ||೨೮೫||
ಭಾಮಿನಿ
ಇತ್ತ ರುಗ್ಮನು ಕಾಣುತಲಿ ಬೆಂ |
ಬೊತ್ತಿದನು ಮುರಹರನನಾ ಕ್ಷಣ |
ಮತ್ತಗಜಗಾಮಿನಿಯ ತಾರದೆ ಪುರವ ಪೊಗೆನೆಂದೂ ||
ಸುತ್ತ ಶಸ್ತ್ರಾಸ್ತ್ರಗಳ ಮಳೆಗೆರೆ |
ವುತ್ತ ಭೀಕರ ಸಿಂಹನಾದದಿ |
ಹತ್ತಿರಕೆ ನಡೆತಂದು ನುಡಿದನು ಬಹಳ ರೋಷದಲೀ ||೨೮೬||
ರಾಗ ಭೈರವಿ ಅಷ್ಟತಾಳ
ನಿಲ್ಲುನಿಲ್ಲೆಲೊ ಬಡ ಗೊಲ್ಲನೇ | ಇಂಥ | ಕಳ್ಳತನಗಳೇಕೆ ಖುಲ್ಲನೇ ||
ಒಳ್ಳೆ ಮಾತಿನೊಳೆಮ್ಮ ಅನುಜೆಯಾ | ಬಿಟ್ಟು | ನಿಲ್ಲದೆ ನಡೆ ಬಂದ ದಾರಿಯಾ ||೨೮೭||
ಬಿಟ್ಟುಪೋಗೆಂಬುವ ನುಡಿ ಏನೂ | ಗಂಟು | ಕಟ್ಟಿಕೊಟ್ಟವರಾರು ಹೆಣ್ಣನೂ ||
ದಿಟ್ಟತನವು ಸಾಕು ಸುಮ್ಮನೇ | ನಿನ್ನ | ಗುಟ್ಟುಳುಹಿಕೊಕಡುಭಂಡನೇ ||೨೮೮||
ಭಂಡನಲ್ಲದೊಡಿಂಥ ಪರಿಯನೂ | ಕೈ | ಗೊಂಡವನೇನಯ್ಯ ಪ್ರೌಢನೂ ||
ತುಂಡರಿಸುವೆ ಬಿಡದಿರೆ ನಿನ್ನಾ | ಎಂದು | ಕುಂಡಲಿಶರವನೆಚ್ಚನು ಮುನ್ನಾ ||೨೮೯||
ಗರುಡಾಸ್ತ್ರದಿಂದದ ತರಿದನೂ | ದಿವ್ಯ | ತರಮಂತ್ರಾಸ್ತ್ರಗಳ ತಾನೆಸೆದನೂ ||
ಹಿರಿಯ ಭಾವಯ್ಯ ಕೇಳ್ತಂಗಿಯಾ | ದಯ | ವಿರಿಸಿ ಮಾಡೆನಗೀಗ ಪರಿಣಯಾ ||೨೯೦||
ಎಂದು ಸುರಿದ ನುಡಿಯನು ಕೇಳೀ | ನಂದ | ಕಂದಗೆಂದನು ರುಗ್ಮ ಖಾತಿ ತಾಳೀ ||
ಬಂದು ಚೋರತ್ವದೊಳೊಯ್ದೆಯಾ | ಮನ | ಬಂದಂತೆ ನೀನೀಗ ಬಗುಳ್ವೆಯಾ ||೨೯೧||
ರಾಗ ಶಂಕರಾಭರಣ ಮಟ್ಟೆತಾಳ
ಚೋರ ನಾನಹೇ | ಧೀರ ನೀನಹೇ ||
ಚೋರತನವನೂ | ತೋರಬಂದೆಯಾ ||೨೯೧||
ಬಗುಳಬೇಡವೋ | ಬಾಲೆಯನು ಬಿಡೂ ||
ಬಿಗುವ ಕಳುಹುವೇ | ಹಗೆಯ ತೀರ್ಚುವೇ ||೨೯೨||
ಜರೆದು ನುಡಿವುದಾ | ಹರಿಯು ಕೇಳಿದಾ ||
ಭರದಿ ನೋಡಿದಾ | ಸರಸವಾಡಿದಾ ||೨೯೩||
ರಾಗ ಶಂಕರಾಭರಣ ರೂಪಕತಾಳ
ಎಲವೊ ಕೃಷ್ಣ ಮಗಧನೊಡನೆ | ನಿಲಲಸಾಧ್ಯವಾಗಿ ಬೆದರಿ |
ನೆಲನ ಬಿಟ್ಟು ಪೋಗಿ ಪಿಂತೆ | ಜಲದ ಮಧ್ಯದೊಳ್ ||
ನಿಳೆಯವನ್ನು ರಚಿಸಿಕೊಂಡು | ಬಳಗಸಹಿತಲಿದ್ದುಕೊಂಡು |
ಲಲನೆಗಾಗಿ ಬಂದು ನಿನ್ನ | ತಲೆಯ ಕೊಡುವೆಯಾ ||೨೯೪||
ಬರಿದೆ ಸಾಯಬೇಡವೀಗ | ತರಳೆಯನ್ನು ಬಿಟ್ಟು ನಮ್ಮ |
ಚರಣಕೆರಗಿ ಬೇಡಿಕೊಳಲು | ಕೊರಳ ಕಾಯ್ವೆನು ||
ಧುರವು ಸದರವಲ್ಲ ಕೇಳು | ಪಿರಿದು ಶೌರ್ಯವಿದ್ದಡೀಗ |
ವರಮಹಾಸ್ತ್ರವನ್ನು ತೆಗೆದು | ಭರದಿ ಎಸೆಯಲಾ ||೨೯೫||
ವಾರಿಜಾಕ್ಷ ನಗುತ ಪೇಳ್ದ | ಧೀರನೈಸೆ ನಿನ್ನ ಪೋಲ್ವ |
ವೀರರಿಲ್ಲ ನಾವು ಬರಿದೆ | ನಾರಿಗೋಸುಗಾ ||
ಚೋರತನದಿ ಬಂದುದಹುದು | ತೋರು ಬಲುಹನೆನುತಲೆಚ್ಚ |
ತೇರು ಕುದುರೆ ಸಹಿತವಾಗಿ | ಆರು ಶರದಲೀ ||೨೯೬||
ಘಾಸಿಯಾದ ರಥವನಿಳಿದು | ಸೀಸಕವಚ ಬಲಿದು ರುಗ್ಮ |
ಮೀಸೆಯನ್ನು ತಿರುಹುತೆಂದ | ವಾಸಿಯಿಂದಲೀ ||
ಈಶ ತಾನೆ ಬರಲಿ ಕೇಳು | ವಾಸುದೇವ ನಿನ್ನ ತಲೆಯ |
ನಾಶಮಾಡದುಳಿಯೆ ನೋಡು | ಈ ಶರೌಘದೀ ||೨೯೭||
ಎನುತಲೈದು ಶರವ ತೆಗೆದು | ಧನುವಿಗೊಡ್ಡಿ ಹೂಡಿ ಸಿಂಹ |
ಸ್ವನವ ಗೈದು ಬರಲು ಕಂಡು | ದನುಜವೈರಿಯೂ ||
ಕ್ಷಣದೊಳನಿತು ಶರವ ಕಡಿದು | ವಿನಯರಸದೊಳೊಂದು ದಿವ್ಯ |
ಕಣೆಯ ಕಳುಹುತವನ ಚಾಪ | ವನು ಸಗಾಢದೀ ||೨೯೮||
ಕಡಿಯೆ ಕಂಡು ಭರದಿ ರುಗ್ಮ | ಕಡುಹಿನಿಂದ ಶೂಲವನ್ನೆ |
ಪಿಡಿದು ಬೊಬ್ಬೆಗೈವುತಾಗ | ನುಡಿದ ಕೋಪದೀ ||
ಕಡು ಸಮರ್ಥನಹುದೊ ಗೊಲ್ಲ | ರೊಡೆಯ ಕೇಳು ನಿನ್ನ ತಲೆಯ |
ಹೊಡೆವೆನೀಗ ನೋಡೆನುತ್ತ | ಬಿಡಲು ಶೂಲವಾ ||೨೯೯||
ಶೂಲ ಬರುತಲಿರಲು ಕಂಡು | ಲೋಲನೇತ್ರ ಕೋಪಗೊಂಡು |
ಕೋಲಿನಿಂದ ಕಡಿಯೆ ರುಗ್ಮ | ತಾಳಿ ಕೋಪದೀ ||
ಆಲಿ ಹಲಗೆ ಕತ್ತಿ ಪಿಂಡಿ | ವಾಳ ಮುದ್ಗರಂಗಳಿಂದ |
ಬೀಳೆನುತ್ತ ಹೊಯ್ಯುತಿರಲು | ಶ್ರೀಲಲಾಮನೂ ||೩೦೦||
ಕಂಡು ಕರದಿ ಖಡ್ಗವನ್ನು | ತುಂಡುಮಾಡಿ ಭರದೊಳವನ |
ಚಂಡಿಕೆಯನು ಹೊಡೆದು ಕೆಡಹಿ | ಕೊಂಡು ಕೋಪದೀ ||
ಖಂಡೆಯವನು ಚಾಚಿ ಕೊರಳ | ಖಂಡಿಸುವೆನೆಂದಿರಲು ಕಂಡು |
ಪುಂಡರೀಕವದನೆ ಬೇಡಿ | ಕೊಂಡಳಾಕ್ಷಣ ||೩೦೧||
ರಾಗ ರೇಗುಪ್ತಿ ಅಷ್ಟತಾಳ
ಕೊಲ್ಲಬೇಡವೀಗಾ | ನಮ್ಮಣ್ಣನ | ಕೊಲ್ಲಬೇಡವೀಗಾ ||
ಕೊಲ್ಲಬೇಡೀಗ ಶ್ರೀ | ವಲ್ಲಭಕೃಷ್ಣ | ಫುಲ್ಲಲೋಚನ ಕೋಪದೀ || ನಿರ್ದಯದೀ ||೩೦೨||
ಕಾವ ದೇವನೆ ನೀನೂ | ಕಾಯದೆ ಕೊಲ್ವ | ದಾವ ನೀತಿಯೇ ನೀನೂ ||
ಭಾವನಿಂತೆಂಬುದ | ಭಾವಿಸದಾದೆಯ | ಜೀವಕ್ಕೆ ಮುನಿದೆಯಲ್ಲಾ || ಏನಲ್ಲಾ ||೩೦೩||
ಕೊರಳನೆ ಕೊಯ್ಯಬೇಡಾ | ರಕ್ಷಿಸು ಬೇಗ | ಕರುಣಾ ಸಾಗರ ಗಾಢಾ ||
ದುರುಳಾತ್ಮನಾ ದರ್ಪ | ಮುರಿದುಪೋದುದು ಸಾಕು | ಚರಣಾಬ್ಜಯುಗಕೆ ನಾನೂ ||
ಶಿರಬಾಗುವೆನೂ ||೩೦೪||
ರಾಗ ಬೇಗಡೆ ಆದಿತಾಳ
ಇಂದಿರೇ | ಇವ | ನಿಂದ ನೀ ನೊಂದೆಯೇ |
ಚಂದಿರಮುಖಿ ಅರ | ವಿಂದನಯನೆಯೆ || ಇಂದಿರೇ || ಪಲ್ಲ ||
ತಂದೆ ತಾಯಿಗಳನು | ನಿಂದಿಸಿ ನಮ್ಮನು |
ಕುಂದ ನುಡಿದ ಕಡು | ಮಂದಮತಿಯೆ ಕೇಳ್ || ಇಂದಿರೇ ||೩೦೫||
ಮಂದಮತಿಯು ಬ | ಲ್ಪಿಂದ ನಮ್ಮೊಳು ಜಯ |
ಪೊಂದದೆ ಸಿಲುಕಿದ | ಕೊಂದಪೆನೀತನ || ಇಂದಿರೇ ||೩೦೬||
ಆಗದಾಗದು ತಲೆ | ವಾಗಿ ಬೇಡುವೆ ಛಲ |
ನೀಗಿ ಸಲಹು ಅಣ್ಣ | ನಾಗಿ ಬಾಳಿರಲಿವ ||೩೦೭||
ಕನ್ಯಾಮಣಿಯೆ ಸಂ | ಪನ್ನೆ ಸುಗುಣೆ ಕೇಳ್ |
ನಿನ್ನ ನುಡಿಯ ತಾ | ಮನ್ನಿಸುವೆನು ಕೇಳ್ || ಇಂದಿರೇ ||೩೦೮||
ರಾಗ ಭೈರವಿ ಝಂಪೆತಾಳ
ಇಂತೆಂದು ರುಗ್ಮಿಣಿಯ | ಸಂತಸದಿ ತಕ್ಕೈಸಿ |
ಕಂತುಜನಕನು ತನ್ನ | ಪಂಥ ಸಲಲೆಂದೂ ||೩೦೯||
ಕಿರುನಗೆಯ ಸೂಸುತ್ತ | ಭರದಿ ರುಗ್ಮನ ಶಿಖಿಯ |
ಕರದ ಖಡ್ಗದೊಳು ಕ | ತ್ತರಿಸಿದನು ಜವದೀ ||೩೧೦||
ಹೆಡೆ ಮುಡಿಯ ಕಟ್ಟಿ ಮು | ನ್ನೆಡೆಯ ಕಂಭಕೆ ಬಿಗಿದು |
ಬಿಡಿಸುವರ ತೋರೆಂದು | ನುಡಿಯುತಿರೆ ಹರಿಯೂ ||೩೧೧||
ಮಂಡಲೇಶನ ಸುತನೆ | ಮಂಡೆಬೋಳಾದುದೇ |
ಕಂಡು ರಕ್ಷಿಪರ ತೋ | ರೆಂದ ಬಲರಾಮಾ ||೩೧೨||
ರಾಗ ಭೈರವಿ ಅಷ್ಟತಾಳ
ಏನಯ್ಯ | ರಂಗ | ಏನಯ್ಯ ||
ಏನಯ್ಯ ನೀನೀ ಮಾನವೇಂದ್ರನ | ಮಾನಹಾನಿಯ ಮಾಳ್ಪಂಥ |
ಹೀನ ಬುದ್ಧಿಗಳಿಂದೂ ||೩೧೩||
ಭಾವೆರುಗ್ಮಿಣಿ ಕ್ಲೇಶಬಡುತಿಹಳಲ್ಲಾ | ಭಾವಂಗೆ ಮರ್ಯಾದೆ ಮಾಡಿದೆಯಲ್ಲಾ |
ಯಾವಾಗಲು ಚಿಕ್ಕ ಬುದ್ಧಿಯು ಸಲ್ಲಾ | ಮೋಹವೆಂಬುದು ನಿನಗೆಳ್ಳಿನಿತಿಲ್ಲಾ ||
ಏನಯ್ಯ | ರಂಗ | ಏನಯ್ಯ ||೩೧೪||
ರಾಗ ಭೈರವಿ ಆದಿತಾಳ
ಈ ಪರಿಯೊಳು ಹಲಧರನೂ | ಸುಮ | ಚಾಪಪಿತಗೆ ಹೇಳಿದನೂ ||
ಭೂವನ ಕೈ ಬಿಡಿಸಿದನೂ | ಸಂ | ತಾಪವ ತಾ ನಿಲಿಸಿದನೂ ||೩೧೫||
ಅರಿಯದೆ ಎಸಗಿದ ಪರಿಗೇ | ನೀ | ಮರುಗದಿರೈ ಮನದೊಳಗೇ ||
ಪಿರಿಯವನಲ್ಲವೆ ನೀನೂ | ನ | ಮ್ಮರಸನೆ ಬಿಡು ದುಗುಡವನೂ ||೩೧೬||
ಹರಿಯಗ್ರಜ ಪೇಳ್ದುದನೂ | ಭೂ | ವರ ಕೇಳುತ ಖೇದದಲೀ ||
ಹರನ ಚರಣಧ್ಯಾನದಲೀ | ನಿಜ | ಪುರದಿಂದತಿ ವಹಿಲದಲೀ ||೩೧೭||
ಭೋಜಕಟಕಪುರದಲ್ಲೀ | ನೀ | ವ್ಯಾಜದೊಳಿರೆ ತಪದಲ್ಲೀ ||
ಮೂಜಗದೊಡೆಯನು ನಗುತಾ | ಅಂ | ಭೋಜದಳಾಕ್ಷಿಯ ಸಹಿತಾ ||೩೧೮||
ಯದುಬಲ ಹಲಧರ ಕೂಡೀ | ನ | ರ್ಮದೆಯನು ದಾಟಲು ನೋಡೀ ||
ತ್ರಿದಶರು ಪೂಮಳೆಗರೆಯೇ | ಸ | ಮ್ಮುದದೊಳು ಪಾಠಕರುಲಿಯೇ ||೩೧೯||
ದ್ವಿಪದಿ
ಮಂದಿರಕೆ ನಡೆತಂದು ಮಾಧವನು ಸಹಿತ |
ತಂದೆತಾಯ್ಗಳ ಪಾದಕೆರಗಿ ತೋಷಿಸುತ ||೩೨೦||
ಇರಲು ಶೂರಾತ್ಮಜರ ಪರಸಿ ತೋಷದಲಿ |
ಹರಿಯ ವದನವ ನೋಡಿ ಪೇಳ್ದರೊಲವಿನಲಿ ||೩೨೧||
ತರಳ ಕೇಳೈ ನೀನು ಪರಿಣಯಕೆ ಬರಲಿ |
ಧರಣೀಶ ಭೀಷ್ಮಕನ ಕರೆತರಿಸು ಇಲ್ಲಿ ||೩೨೨||
ಬಂಧುಗಳ ಸಮ್ಮತದಿ ಮಾಳ್ಪುದುತ್ಸವವ |
ಎಂದೆನಲು ಶ್ರೀಕೃಷ್ಣ ತಾಳ್ದು ಕೌತುಕವ ||೩೨೩||
ರಾಗ ಭೈರವಿ ಝಂಪೆತಾಳ
ಭರದೊಳುದ್ಧವನನ್ನು | ಕರೆದು ಪೇಳಿದ ಶೌರಿ |
ಧರಣೀಶ ಭೀಷ್ಮಕನ | ಕರೆದುತಾರೆನುತಾ ||೩೨೪||
ಉಡುಗೊರೆಯನಿತ್ತು ಮ | ತ್ತೊಡನೆ ಓಲೆಯ ಬರೆದು |
ಕೊಡಲು ಕುಂಡಿನಪುರಕೆ | ನಡೆತಂದನವನೂ ||೩೨೫||
ಬಂದು ರಾಯನ ಕಂಡು | ತಂದ ವಸ್ತ್ರಾಭರಣ |
ಮುಂದಿರಿಸಿ ಪೇಳಿದನು | ಮಂದಹಾಸದಲೀ ||೩೩೬||
ಸಿರಿಯ ಪರಿಣಯಕೆಂದು | ಧೊರೆ ಶೂರಸುತ ನಿಮ್ಮ
ಕರೆಯ ಕಳುಹಲು ಬಂದೆ | ತೆರಳಿ ನೀವಿಗಾ ||೩೨೭||
ಎನಲು ಓಲೆಯ ನೋಡಿ ಮನದಿ ಹರುಷವತಾಳಿ |
ಘವೇಗದಲಿ ಪೊರಟ | ವನಿತೆ ಸಹವಾಗೀ ||೩೨೮||
ರಾಗ ಮಾರವಿ ತ್ರಿವುಡೆತಾಳ
ವರ ಕುಮಾರರು ಪರಿಜನಂಗಳು |
ಪುರಜನಂಗಳವೆರಸಿ ಭೀಷ್ಮಕ |
ಬರುತಿರಲು ವಸುದೇವ ನಾನಾ |
ಧರಣಿಪಾಲರ ಕರೆಸಿದಾ || ಬಂದರಾಗ ||೩೨೯||
ಕಂಡು ಶೂರಾತ್ಮಜನು ರಾಯರ |
ತಂಡವನು ಒಡಗೊಂಡು ಬಂದಾ |
ಕುಂಡಿನಾಪುರದರಸನನು ಇದಿ |
ರ್ಗೊಂಡನಾ ಕ್ಷಣ ವಿಭವದೀ || ಘೋಷದಿಂದಾ ||೩೩೦||
ಭಾಮಿನಿ
ಬಂದ ಭೂಮಿಪರನ್ನು ಮನ್ನಿಸಿ |
ಮಂದಹಾಸದಿ ಶೂರಸುತನರ |
ವಿಂದನಯನೆಯ ಕರೆದು ತಿಳುಹಿದ ಭೀಷ್ಮಕನ ಬರವಾ ||
ಇಂದಿರೆಯು ಕಳುಹಲ್ಕೆ ಲಲನಾ |
ವೃಂದದಲಿ ನಡೆತಂದು ನಸುನಗೆ |
ಯಿಂದ ಮಾತೆಗೆ ನಮಿಸಿ ಜನಕಗೆ ಮಣಿದು ಭಕ್ತಿಯಲೀ ||೩೩೧||
ರಾಗ ಮಾರವಿ ಏಕತಾಳ
ಜನನಿಯ ಬಳಿಯಲಿ | ಕನಕಲತಾಂಗಿಯು | ವಿನಯದೊಳಿರಲತ್ತಾ ||
ವನರುಹನೇತ್ರನ | ಜನಕನು ಬಾಂಧವ | ಜನಸಹಿತಾ ಕ್ಷಣದೀ ||೩೩೨||
ಲಲನೆಯ ಕೇಳಲು | ಫಲವಾಹಿನಿ ಬಳಿ | ಗೆಲವಿನಿಂದೈತರಲೂ ||
ಘಳಿಲನೆ ಭೀಷ್ಮಕ | ನಲಿವುತದಿರ್ಗೊಳ | ಲುಲಿವುತ ನಡೆತಂದೂ ||೩೩೩||
ವಿಪುಳಮತಿಯು ತಾ | ನಿಪುಣತೆಯಲಿ ಯದು | ನೃಪಕುಲಮೌಳಿಯನೂ ||
ಉಪಚರಿಸಲು ಕಂಡು | ಪಾವನತರದಿಂ | ಸುಫಲವನಿತ್ತಾಗಾ ||೩೩೪||
ಪರಿತೋಷದೊಳ್ಯದು | ವರವಸುದೇವನು | ಸಿರಿಯರಸನ ಮತದೀ ||
ಸಿರಿಯನು ಬೇಡಿದ | ಕರುಣಾರ್ಣವನಿಗೆ | ಧರಣಿಪನೊಳು ಮುದದೀ ||೩೩೫||
ಲೇಸಾದುದು ನ | ಮ್ಮೀ ಶಶಿವದನೆಯ | ವಾಸುದೇವಗೆ ಕೊಡುವೇ ||
ದೋಷರಹಿತ ಜಗ | ದೀಶ ಶ್ರೀಕೃಷ್ಣನ | ದಾಸತ್ವವ ಪಡೆವೇ ||೩೩೬||
ಭಾಮಿನಿ
ಸಕಲ ಜನ ಕೊಂಡಾಡೆ ನಿರ್ಜರ |
ನಿಕರ ನಲಿನಲಿದಾಡೆ ಕೋಮಲ |
ವಿಕಸಿತಾಮಲಪಾದಪಂಕಜ ಪದ್ಮಭವಜನಕಾ ||
ಭಕುತಜನಪರಿಪಾಲ ಭವಹರ |
ಮುಕುತಿದಾಯಕ ನರಮುರಾಂತಕ |
ಭಕುತಿದಾಯಕ ನೀನೆ ಸಲಹೆಂದಿತ್ತ ರುಗ್ಮಿಣಿಯಾ ||೩೩೭||
ರಾಗ ಘಂಟಾರವ ಝಂಪೆತಾಳ
ದುಂದುಭಿಯು ಮೊಳಗೆ ದ್ವಿಜ | ವೃಂದ ಸಹಿತಲೆ ಗಾರ್ಗ್ಯ |
ಚಂದದಿಂ ಧಾರೆಯನ್ನೆರೆಸೆ ನಲವಿಂದಾ ||
ಮಂದಗಮನೆಯರು ನಡೆ | ತಂದು ಸತಿಪತಿಗಳಿಗೆ |
ಕುಂದಣಾರತಿಯ ಬೆಳಗಿದರು ಮುದದಿಂದಾ ||೩೩೮||
ರಾಗ ಕೇತಾರಗೌಳ ಅಷ್ಟತಾಳ
ಈ ರೀತಿಯಲಿ ಬಹು | ವಿಭವವಾಗಲು ಸರ್ವ | ನಾರಿಯರುತ್ಸವದೀ ||
ಬೀರುತ್ತ ಹಸೆಯ ಶೃಂ | ಗಾರವನೆಸಗುತ್ತ | ಶೌರಿಯ ಕರೆದರಾಗಾ ||೩೩೯||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತು ದ್ವಾರಕಿಯಲ್ಲಿ ನೀಲಾ | ಕಾಂತೆ ರುಗ್ಮಿಣಿ ಸಹಿತ ಕೃಷ್ಣನ |
ಚಿಂತಿಸುವ ಭಕ್ತರಿಗೆ ಕೊಡುತಿಹ | ಸಂತಸವನೂ ||೩೪೦||
ಪರಮ ವಿಭವದೊಳಿದ್ದನೆನುತಲೆ | ದೊರೆ ಪರೀಕ್ಷಿತಗೊಲಿದು ಶುಕಮುನಿ |
ವರನು ಪೇಳ್ದೀ ಕಥೆಯನೆಲ್ಲವ | ಹರುಷದಿಂದಾ ||೩೪೧||
ಧರಣಿಯೊಳಗರಿತವರು ಕನ್ನಡ | ವರಮಹಾಕಾವ್ಯವನು ಮನ್ನಿಸಿ |
ಇರಲು ತಪ್ಪುಗಳನ್ನು ತಿದ್ದುತ | ಕರುಣಿಸುವುದೂ ||೩೪೨||
ರಾಗ ಕಾಂಭೋಜಿ ಝಂಪೆತಾಳ
ಸುರನಿಕರವಂದಿತಗೆ | ಸೂರ್ಯಸಂಕಾಶನಿಗೆ |
ಕರುಣಾಪಯೋನಿಧಿಗೆ ಕಲ್ಯಾಣಿಗೇ ||
ಶರದೇಂದುನಿಭಮುಖಿಗೆ | ಸೌಂದರ್ಯರೂಪಿಣಿಗೆ |
ಪರಮಪಾವನೆಗೆ ಪಂಕಜನೇತ್ರೆಗೇ || ಮಂಗಲಂ ಶುಭ ಮಂಗಲಂ ||೩೪೩||
ಯಕ್ಷಗಾನ ರುಗ್ಮಿಣೀಸ್ವಯಂವರ ಮುಗಿದುದು
Leave A Comment