ರಾಗ ಭೈರವಿ ಏಕತಾಳ
ಬಂದುದು ಬರಲಿ ಎನಗೇ | ಮನ | ದಿಂದೀವೆನು ಚೈದ್ಯನಿಗೇ ||
ಬಂಧುಗಳಿಂದೇನಹುದೂ | ಗೋ | ವಿಂದಗೆ ಕೊಡೆ ತಾನೆಂದೂ ||೭೭||
ನಡೆನಡೆ ನೀನೆಂದೆನುತಾ | ತನ | ಕುಡಿಮೀಸೆಯ ತಿರುಹುತ್ತಾ ||
ಕಡುಹಿಲಿ ಭುಜಗಳ ತಟ್ಟೀ | ಬಲು | ಕಿಡಿಗೆದರಿದ ಜಗಜಟ್ಟೀ ||೭೮||
ತರಳೆಯ ಚೈದ್ಯನಿಗೀಗಾ | ತಾ | ಕರೆಸಿ ಕೊಡುವೆನತಿ ಬೇಗಾ ||
ಬರಬೇಕೆಲ್ಲಾ ಜಗದಾ | ಸರಿ | ದೊರೆಗಳು ಸಹಿತಲೆ ಮಗಧಾ ||೭೯||
ಎಂದಾ ಕ್ಷಣ ಮನಮುಟ್ಟೀ | ಸಾ | ನಂದದೊಳು ಡುಗೊರೆ ಕಟ್ಟೀ ||
ಚಂದದಿ ಕರಣಿಕರೊಡನೇ | ಆ | ನಂದದಿ ಬರೆಸಿದ ತಾನೇ ||೮೦||
ಬರೆದಿಹ ಓಲೆಯ ನೋಡೀ | ಅನು | ಚರರಿಂಗದನು ತಾ ನೀಡೀ ||
ತ್ವರಿತದೊಳುಡುಗೊರೆ ಸಹಿತಾ | ಘನ | ಹರುಷದಿ ಕಳುಹಿದನಾತಾ ||೮೧||
ಭಾಮಿನಿ
ಧರಣಿಪನ ಬೀಳ್ಕೊಡಲು ನಿಲ್ಲದೆ |
ಭರದಿ ದೂತರು ಬಂದು ಮಾಗಧ |
ದೊರೆಗೆ ಹದನವ ತಿಳುಹಿ ಚೈದ್ಯನೃಪಾಲನಿದ್ದೆಡೆಗೇ ||
ಹರುಷದಿಂ ನಡೆತಂದು ರಾಯನ |
ಚರಣಕಾನತರಾಗಿ ವಸ್ತ್ರಾ |
ಭರಣ ಲೇಖನವಿತ್ತು ಬಿನ್ನೈಸಿದರು ವಿನಯದಲೀ ||೮೨||
ರಾಗ ಸಾರಂಗ, ಅಷ್ಟತಾಳ
ಕೇಳಯ್ಯ ಚೈದ್ಯಭೂಪಾ | ಸತ್ಕುಲದೀಪ | ಕೇಳಯ್ಯ ಚೈದ್ಯಭೂಪಾ || ಪಲ್ಲವಿ ||
ಜನಪ ಭೀಷ್ಮಕರಾಯನೂ | ತನ್ನಯ ಮುದ್ದು | ತನುಜೆ ವೈದರ್ಭಿಯನ್ನೂ ||
ವನಜನಾಭನಿಗೀವೆ | ನೆನುತ ಯೋಚಿಸೆ ರುಗ್ಮ | ಘನರೋಷವನು ತಾಳಿ | ನಿನಗೆ ನಿಶ್ಚೈಸಿದ ||೮೩||
ಬರೆದ ಲೇಖನವ ನೋಡೀ | ಬಂಧುಗಳನ್ನು | ನೆರಹಿ ಭೂಭುಜರ ಕೂಡೀ ||
ಭರದೊಳಲ್ಲಿಗೆ ಬಂದು | ಹರುಷದಿ ಧಾರೆಯ | ನೆರೆದುಕೊಳ್ಳುವುದೆಂದು | ಧರಣೀಶ ಪೇಳಿದ ||೮೪||
ತಂಗಿಯ ನಿನಗೀವೆನೂ | ಗೋಕುಲದ ಶ್ರೀ | ರಂಗ ಬಂದರೆ ಗೆಲ್ವೆನೂ ||
ತುಂಗವಿಕ್ರಮನಂತ | ರಂಗ ನಿನ್ನೊಳು ಕೋಮ | ಲಾಂಗಿ ರುಗ್ಮಿಣಿ ಬೆಡ | ಗಿಂದರಂಜಿಪಳಯ್ಯ ||೮೫||
ರಾಗ ಶಂಕರಾಭರಣ, ಮಟ್ಟೆತಾಳ
ಚರರು ಪೇಳ್ದ ನುಡಿಯ ಕೇಳಿ | ಭರದಿ ಹರುಷವನ್ನು ತಾಳಿ |
ಸಿರಿಯುಸೇರ್ದಳೆನಗೆ ಇನ್ನು | ಸರಿಯದಾವನೂ ||೮೬||
ಕೇಳು ಮಂತ್ರಿ ರುಗ್ಮಭೂಪ | ಶೀಲಭಾಗ್ಯನಿಧಿಯು ತಾನು |
ಬಾಲಸ್ನೇಹದಿಂದಲೆನ್ನ | ಮೇಲೆ ದಯದಲೀ ||೮೭||
ಶೀಲಗುಣವಿಶಾಲಳಾದ | ಶ್ರೀಲತಾಂಗಿಯನ್ನು ಎನಗೆ |
ನಾಳೆ ಕೊಡುವೆ ಬಪ್ಪುದೆಂದು | ಓಲೆ ಬರೆದಿಹಾ ||೮೮||
ಒಡನೆ ಬಪ್ಪೆ ನೀನು ರುಗ್ಮ | ನೆಡೆಗೆ ಪೋಗಿ ವಹಿಲದಲ್ಲಿ |
ನುಡಿವುದಾತನಿರವ ತಿಳಿದು | ಮಡದಿರನ್ನೆಗೇ ||೮೯||
ತೊಡುವದುಡುವ ಮುಡಿವದಿಡುವ | ಪಿಡಿದು ನೋಳ್ಪ ದಿವ್ಯ ವಸ್ತು |
ಒಡವೆಗಳನು ಕೊಡಿಸು ಬಂದ | ಗಡಣ ತಿಳಿಯಲೀ ||೯೦||
ಎನುತಲಿನಿತು ವಸ್ತುಗಳನು | ಕ್ಷಣದಿ ತರಿಸಿ ಕೊಡಿಸಿ ನೋಡಿ |
ದಣಿದ ತೆರದ ದೂತರಿಂಗೆ | ಕನಕವಸನವಾ ||೯೧||
ವಿನಯದಿಂದಲಿತ್ತು ಕಳುಹೆ | ಅನಿಲವೇಗದಲ್ಲಿ ಮಂತ್ರಿ |
ಜನಪ ರುಗ್ಮನೆಡೆಗೆ ಬಂದ | ಜನಸಮೂಹದೀ ||೯೨||
ರಾಗ ಭೈರವಿ, ಝಂಪೆತಾಳ
ಬಂದ ವಾರ್ತೆಯ ಕೇಳಿ | ಮಂದಿರಕೆ ಕರೆತಂದು |
ಅಂದದಿಂದುಪಚರಿಸು | ತೆಂದ ವಿನಯದಲೀ ||೯೩||
ಕೇಳಯ್ಯ ಮಂತ್ರಿ ಶಿಶು | ಪಾಲಕ್ಷೇಮವೆ ಪ್ರಜೆಯ |
ಪಾಲಿಪನೆ ಮಗಧಭೂ | ಪಾಲ ಹಿತಕರನೇ ||೯೪||
ಎಡಬಲದ ಭೂಮಿಪರು | ಕೊಡುತಿಹರೆ ಕಪ್ಪವನು |
ಒಡನೆ ಬಂಧುಗಳು ಸುಖ | ಪಡುವರೇನಯ್ಯಾ ||೯೫||
ವಚನ
ಇಂತೆಂದ ರುಗ್ಮನೊಡನೆ ಮಂತ್ರಿಯು ಏನೆನುತಿರ್ದನು ಎಂದರೆ –
ರಾಗ ಮಾರವಿ, ಅಷ್ಟತಾಳ
ಕೇಳಯ್ಯ ರುಗ್ಮಭೂಪಾಲ ಗುಣಶೀಲಾ |
ಸ್ಥೂಲರಿಪುಜಾಲಕಾಲಾಗ್ನಿರೂಪಾ || ಪಲ್ಲವಿ ||
ಧರಣೀಶ ಶಿಶುಪಾಲ ಕ್ಷೇಮವಾಗಿಹನಯ್ಯಾ |
ಸರಿರಾಯರೆಲ್ಲ ಕಪ್ಪವನೀವರಯ್ಯಾ ||
ಪರಿವಾರ ಪ್ರಜೆ ಎಲ್ಲ ಸುಖದಿಂದಲಿಹರು |
ನೆರೆಬಂಧುಗಳು ಸುಖದಿಂದ ಬಾಳಿಹರು ||೯೬||
ಮಗಧಪೃಥ್ವೀಶನು ಸ್ನೇಹದಿ ನಡೆವ |
ಮಿಗೆ ನೀವು ತನಗೆ ಬಂಧುಗಳೆಂದು ನುಡಿವ ||
ಅಗಜೆನಾಥನ ಪಾದಯುಗವ ಧ್ಯಾನಿಸುವ |
ಪಗೆ ಎಂದು ಪೇಳುವ ಖಗಯಾನನಿರವ ||೯೭||
ನಿಮ್ಮ ಓಲೆಯ ನೋಡಿಕೊಂಡು ತೋಷದಲಿ |
ಸುಮ್ಮಾನವನು ತಾಳಿ ಪ್ರೀತಿಭಾವದಲಿ ||
ನಮ್ಮ ಕಳುಹಿದರಿಂ ಬಂದೆ ನಾವಿಲ್ಲಿ |
ಸಂಬಂಧ ಒಳ್ಳಿತೈ ಬಂಧುವರ್ಗದಲಿ ||೯೮||
ಭಾಮಿನಿ
ಮತ್ತೆ ಕೇಳೈ ಭೂಪ ನಮ್ಮ ನೃ |
ಪೋತ್ತಮನು ಮನದೊಳಗೆ ಸಂತಸ |
ವೆತ್ತು ಕಳುಹಿದ ಸಕಲ ಆಭರಣಾದಿ ವಸನಗಳಾ ||
ಇತ್ತು ಬಪ್ಪುದು ನಿಮಗೆ ನಿಮ್ಮಯ |
ಚಿತ್ತದೊಲವನು ತಿಳಿದು ಲಲನೆಗೆ |
ಪೆತ್ತವರ್ಗೆನುತೀಯೆ ಕಳುಹಿದ ಕೊಳ್ಳು ನೀನೆಂದಾ ||೯೯||
ರಾಗ ಕೇತಾರಗೌಳ ಅಷ್ಟತಾಳ
ಎಂದ ಮಾತನು ಕೇಳಿದಾ | ಭೂಪತಿ ಸಾ | ನಂದದಿಂದಲಿ ನೋಡಿದಾ ||
ಮಂದಗಮನೆ ಬಳಿಗೇ | ತಾನೇ ಕಳುಹುವೆ | ತಂದೆ ಭೀಷ್ಮಕನೆಡೆಗೇ ||೧೦೦||
ಅತಿ ಬೇಗದಲಿ ಪೋಗಯ್ಯಾ | ಮಂತ್ರೀಶ ನೀ | ಮತಿಯುತನಹುದಯ್ಯಾ ||
ಕ್ಷಿತಿನಾಥ ಶಿಶುಪಾಲನೂ | ಇತ್ತುದನೆಲ್ಲ | ಹಿತದಿಂದ ಕೊಡಿಸು ನೀನೂ ||೧೦೧||
ವಾರ್ಧಕ
ಇನಿತು ಪೇಳಿದ ವಾಕ್ಯವನು ಕೇಳ್ದು ಮಂತ್ರೀಶ |
ಘನಬೇಗದಿಂ ಬರಲು ಗುಣನಿಧಿಯು ಕಾಣುತರ |
ಮನೆಯ ಬಾಗಿಲ ಚರರು ಜನಪಂಗೆ ಬಿನ್ನವಿಸೆ ಅನುಮಾನವಂ ತಾಳ್ದನೂ ||
ವಿನಯದಿಂ ಕರೆಸೆ ಪದವನಜಯುಗ್ಮಕೆ ನಮಿಸಿ |
ನಿನಗೆ ಕಳುಹಿದ ಚೈದ್ಯನೆನುತಾಗ ಮುದದಿ ನೂ |
ತನ ವಸನ ಗಜ ವಾಜಿ ಕನಕ ಭೂಷಣಗಳನು ಮನವೊಲಿಯೆ ತಾನಿತ್ತನೂ ||೧೦೨||
ರಾಗ ಘಂಟಾರವ, ಏಕತಾಳ
ಬಂದ ಮಂತ್ರೀಶಗಾಸನವಿತ್ತು ವಿನಯದಿಂ | ತಂದ ವಾಹನ ವಸ್ತುಗಳ ನೋಡಿ ಮುದದೀ ||
ಇಂದು ನಿಮ್ಮೊಡೆಯನೇತಕೆ ಇದನು ಕಳುಹಿದನೆ | ಮ್ಮಿಂದಲಾಗುವುದೇನು ಪೇಳಯ್ಯ
ಮಂತ್ರೀ ||೧೦೩||
ರಾಗ ಸಾಂಗತ್ಯ, ಮಟ್ಟೆತಾಳ
ಧರಣೀಶ ಕೇಳ್ನಿಮ್ಮ ತನುಜಾತಿಯನು ನಮ್ಮ
ದೊರೆ ಚೈದ್ಯಭೂಪನಿಗೊಲಿದೂ ||
ಕರುಣದಿಂದೀಯಬೇಕೆನುತ ಕೇಳಲು ಬಂದೆ |
ಮರೆಯ ಮಾತಲ್ಲ ಭೂಪಾಲ ||೧೦೪||
ರಾಗ ಪಂತುವರಾಳಿ ಏಕತಾಳ
ಪೆಣ್ಣಿದ್ದ ಬಳಿಯಲ್ಲಿ ಕೇಳುವುದುಚಿತ ಸಂ |
ಪನ್ನನಹುದು ಶಿಶುಪಾಲ ಭೂಲೋಲಾ ||
ಕನ್ನೆಯ ಪಣೆಯಲ್ಲಿ ವಿಧಿ ತಾನು ಬರೆದಿರ್ಪು |
ದನ್ನು ಮೀರುವರ್ಯಾರು ಕೇಳಯ್ಯ ಮಂತ್ರೀ ||೧೦೫||
ರಾಗ ಸಾವೇರಿ, ಆದಿತಾಳ
ಏನ ಮಾಡಲಿ ರಾಯ | ಯತ್ನವ ಮಾಡಯ್ಯ | ಸಾನುಕೂಲವು ದೈವಾಧೀನಾ ||
ಮಾನವಧೀಶ (ನಿನ್ನ) ಮಗನ | ಮಾನ್ಯನೆನಿಸುತ ಪ್ರ | ವೀಣ ನಿನಗೇಕನುಮಾನಾ ||೧೦೬||
ರಾಗ ಸಾಂಗತ್ಯ, ಮಟ್ಟೆತಾಳ
ಇಂತು ಪೇಳುತ ಬೀಳುಗೊಂಡು ಮಂತ್ರೀಶ ತಾ | ಸಂತೋಷದಲಿ ರುಗ್ಮನೆಡೆಗೇ ||
ಅಂತಸ್ಥ ಹೀಗೆಂದು ಅರುಹಲ್ಕೆ ಕೋಪದಿ | ತಾಂ ತಳುವದೆ ರುಗ್ಮನೆಂದಾ ||೧೦೭||
ಭಾಮಿನಿ
ಕೇಳು ಮಂತ್ರಿಯೆ ತಾತ ವೃದ್ಧನು |
ಪೇಳಿದುದು ನಿಜವಾಗಿ ತೋರ್ಪುದು |
ಮೇಲೆ ನಡೆಸುವ ಭಾರ ನಮ್ಮದು ಚಿಂತೆ ಏಕಿದಕೇ ||
ನಾಳೆ ಲಗ್ನವು ಬರಲಿ ಬಾಂಧವ |
ಜಾಲಸಹಿತಲೆ ಚೈದ್ಯ ಧರಣೀ |
ಪಾಲನೆನುತಲಿ ಕಳುಹಿದನು ಸುಪ್ರೇಮಭಾವದಲೀ ||೧೦೮||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಅತ್ತ ಚೈದ್ಯನ ಬಳಿಗೆ ಸಂತಸ | ವೆತ್ತು ಸಚಿವನು ಪೋಗೆ ರುಗ್ಮನು |
ಸುತ್ತಣವರನು ಕರೆಸಿಕೊಂಬೆನೆ | ನುತ್ತಲಾಗಾ ||೧೦೯||
ಧರಣಿಪರಿಗುಡುಗೊರೆಯ ಓಲೆಯ | ಚರರ ಕೈಯಲಿ ಕೊಟ್ಟು ಕಳುಹಲು |
ಬರುತಲಿದ್ದರು ಭೂಮಿಯಗಲಕೆ | ಹರುಷದಿಂದಾ ||೧೧೦||
ದಿಟ್ಟರುಗ್ಮನು ಚೈದ್ಯನೃಪ ಮನ | ಮುಟ್ಟಿ ಕಳುಹಿದ ಸಕಲ ವಸ್ತುವ |
ಬಟ್ಟೆಕುಚೆಯರ ಕೈಯ ತಂಗಿಗೆ | ಕೊಟ್ಟನಾಗಾ ||೧೧೧||
ಪುಲ್ಲನಯನೆಯರೊಳ್ಳಿತೆನುತಲಿ | ಸಲ್ಲಲಿತ ಸಭೆಯೊಳಗೆ ಒಪ್ಪುವ |
ಫುಲ್ಲನೇತ್ರೆಯ ಬಳಿಯೊಳಿರಿಸುತ | ಸೊಲ್ಲಿಸಿದರೂ ||೧೧೨||
ರಾಗ ಕಾಂಭೋಜಿ ಝಂಪೆತಾಳ
ಕೇಳು ಲಲಿತಾಂಗಿ ಗುಣ | ಶೀಲೆ ಚೈದ್ಯನು ನಿಮ್ಮ | ಮೇಲೆ ಮನಸಿಟ್ಟು ಸಂಭ್ರಮದೀ ||
ಭೂಲೋಲ ಹರುಷವಂ | ತಾಳಿ ನಿಮ್ಮಣ್ಣನಿಗೆ | ಓಲೆಯ ಬರೆದು ವೇಗದಲೀ ||೧೧೩||
ಕನಕ ರತ್ನಾಭರಣ | ವನು ಕಳುಹೆ ನಿನಗೀವು | ದೆನುತಿತ್ತ ರುಗ್ಮ ನಮ್ಮುವನೇ ||
ಮನದೊಳಗೆ ಮತ್ತೊಂದು | ನೆನೆಯದೆಲ್ಲವ ನೋಡಿ | ವಿನಯದಿಂ ನಲಿದಾಡು ತಾಯೇ ||೧೧೪||
ಕುಲದೊಳುತ್ತಮ ಭೂಪ | ರೊಳಗಧಿಕ ವೆಗ್ಗಳನು | ಮಲೆತ ರಿಪುಸಂಹಾರಿಧೀರಾ ||
ಇಳೆಯೊಳಗೆ ಇಂತಿಪ್ಪ | ಚೆಲುವ ಪುರುಷನ ಕಾಣೆ | ನಳಿನಾಕ್ಷಿ ನೀನಾಲಿಸಮ್ಮಾ ||೧೧೫||
ಆತನೊಲಿದರೆ ನಿನಗೆ | ಭೂತಳಾಧಿಪರೆಲ್ಲ | ದೂತರಾಗಿಹರಮ್ಮ ನಿರತಾ ||
ನೀ ತಿಳಿಯದವಳೆ ಮ | ತ್ತೇನು ಶಿಶುಪಾಲ ಭೂ | ನಾಥನೈತಹ ನಾಳೆ ನೋಡೂ ||೧೧೬||
ಇಂತು ಪೇಳುತಲಿಪ್ಪ | ಕಾಂತೆಯರ ನುಡಿ ಕೇಳಿ | ಸಂತಾಪವನು ತಾಳ್ದು ಮನದೀ ||
ಅಂತರಂಗದಲಿ ಶ್ರೀ | ಕಾಂತನನು ನೆನೆದು ಗುಣ | ವಂತೆ ನುಡಿದಳು ದೈನ್ಯದಿಂದಾ ||೧೧೭||
ಭಾಮಿನಿ
ಲಲನೆಯರ ನೀವೇಕೆ ಪೇಳ್ವಿರಿ |
ಕೆಲರ ಸುದ್ದಿಯ ನಮ್ಮ ರುಗ್ಮನು |
ಕಳುಹಿದೊಡವೆಯನಿತ್ತು ಪೋಪುದು ಬಂದ ಮಾರ್ಗದಲೀ ||
ಜಲಜಸಂಭವ ಬರೆದ ಬರೆಹದ |
ನೆಲೆಯ ಕಂಡವರಾರು ದಾನವ |
ಕುಲವಿರೋಧಿಯೆ ಬಲ್ಲನೆಂದಳು ಸುಯ್ದು ಲಲಿತಾಂಗೀ ||೧೧೮||
ರಾಗ ಮಾರವಿ ಝಂಪೆತಾಳ
ಎನಲು ಕೇಳುತಲಾಗ | ವನಿತೆಯರು ದುಗುಡದಿಂ |
ಜನಪನಲಿ ಬರಲಾಗ | ಮನದಿ ರುಗ್ಮಿಣಿಯೂ ||೧೧೯||
ಅಣ್ಣನೆಂಬುವನೆನಗೆ | ಹಣ್ಣಿದನು ಮೃತ್ಯುವನು |
ಇನ್ನಾರು ಗತಿ ಎನುತ | ಕಣ್ಣೀರಗರೆದೂ ||೧೨೦||
ಮರುಗಿದಳು ಶೋಕಾಗ್ನಿ | ಯುರವಣಿಸಿ ತನುಗುಂದಿ |
ಪೊರಳಿದಳು ಧರಣಿಯೊಳು | ಹರಿಯ ನೆನೆನೆನೆದೂ ||೧೨೧||
ಸಾಟಿಯಲ್ಲದವಂಗೆ | ಕೊಡುವನೆನ್ನನು ಚಂದ್ರ |
ಜೂಟನರ್ಧಾಂಗಿ ಸಲಹೆನುತಾ ||೧೨೨||
ಊಟವಂ ಮಾಡದಾ | ದಳು ಮಾತನಾಡಳೈ |
ನೋಟವಂ ನೀಗಿ ಅನ್ಯರಲೀ ||೧೨೩||
ಏಕೆ ಪುಟ್ಟಿದೆನಯ್ಯೊ | ಪೆಣ್ಣಾಗಿ ಧರೆಯೊಳು ವಿ |
ವೇಕವಿಲ್ಲದ ಜ್ಯೇಷ್ಠನೊಡನೇ ||೧೨೪||
ಸಾಕು ಸಾಕೀ ತನುವ | ತ್ಯಜಿಸಿ ಜನ್ಮಾಂತರದೊ |
ಳ್ನಾ ಕಾಂಬೆ | ಹರಿಪದಾಂಬುಜವಾ ||೧೨೫||
ಯಾತುಧಾನನು ಎನ್ನ | ಮೋತಿಪ್ಪ ಪಾಪಾತ್ಮ |
ನಾತನಾ ಕೈಯಾರೆ ಕೊಲಲೀ ||೧೩೬||
ಮಾತೆ ಎಂಬಳು ಕಾಳ | ಕೂಟವನೆ ಕೊಡಲೀಗ |
ಭರ್ತೃವೇ ಮೃತ್ಯುರೂಪಕನೂ ||೧೨೭||
ಎಂದೆನುತ ಮೂರ್ಛೆಯೊಳು | ಬೀಳಲಾ ದಾಸಿಯರು |
ತಂದು ಪನ್ನೀರ ಗಿಂಡಿಯಲೀ ||೧೨೮||
ಕಂದಿದಾನನವನ್ನು | ತೊಳೆದಾಗ ಬೀಸಣಿಗೆ |
ಯಿಂದ ಬೀಸಿದರು ಬೇಗದಲೀ ||೧೨೯||
ಗಾಳಿ ಸೋಕಲು ಗಾತ್ರ | ಕಣ್ಬೆಳಕು ಪಾರುತ್ತ |
ಕಾಳಾಹಿವೇಣಿ ರುಗ್ಮಿಣಿಯೂ ||೧೩೦||
ಲೋಲಾಕ್ಷಿಯರ ನೋಡಿ | ಕೊರಳಪ್ಪಿ ದುಗುಡದಿಂ |
ಬಾಲೆ ತಾ ನುಡಿದಳೀ ತೆರದೀ ||೧೩೧||
ರಾಗ ಶಂಕರಾಭರಣ ಅಷ್ಟತಾಳ
ಏನ ಪೇಳೆಲಿನ್ನೂ | ನಾ ಪಡೆದುದ | ಕ್ಕೇನು ಮಾಡಲಿನ್ನೂ || ಪಲ್ಲವಿ ||
ತಂದೆಯಾದಿಯೊಳೂ | ಮಾತೆಯು ಸಾ | ನಂದದಿ ಬಂಧುಗಳೂ ||
ನಂದ ನಂದನಗೀವೆ | ನೆಂದು ಯೋಚಿಸೆ ರುಗ್ಮ | ಬಂದು ಕೇಳಿದನೂ | ವಾರ್ತೆಯನೂ ||೧೩೨||
ಪರಮಾಪ್ತ ಚೈದ್ಯನೆಂದೂ | ಸಿದ್ಧವ ಮಾಡಿ | ಬರೆಸಿ ಓಲೆಯ ತಾನಿಂದೂ ||
ಬರಲಿ ತಾನೆನುತೀಗ | ಚರರ ಕೈಯಲಿ ಕೊಟ್ಟು | ಭರದೊಳಟ್ಟಿರ್ದನಂತೇ | ತಾನಂತೇ ||೧೩೩||
ನಾಳೆ ಲಗ್ನವಂತೇ | ಚೈದ್ಯನೆಂಬ | ಖೂಳಬರುವನಂತೇ ||
ಪಾಲೊಳಗೆರೆದನು | ಕಾಲಕೂಟವ ತಾನು | ಕಾಳುಮಾಡಿದನೆನ್ನನೂ | ಇನ್ನೇನೂ ||೧೩೪||
ಭಾಮಿನಿ
ಪಿಂತೆ ಮಾಡಿದ ಕರ್ಮವಿದು ತನ |
ಗಿಂತು ತೋರ್ಪುದೆನುತ್ತ ಮರುಗುವ |
ಕಂತುಜನನಿಯ ಪರಿಯ ಕಾಣುತ ತೀವ್ರಗಮನದಲೀ ||
ಕಾಂತೆಯೋರ್ವಳು ಬಂದು ಧರಣೀ |
ಕಾಂತನರಸಿಗೆ ಪೇಳಲಾಕ್ಷಣ |
ಚಿಂತಿಸುತ ನಡೆತಂದು ಪೇಳ್ದಳು ಸುತೆಗೆ ಸೈರಣಿಯಾ ||೧೩೫||
ರಾಗ ಸೌರಾಷ್ಟ್ರ, ಅಷ್ಟತಾಳ
ಮಗಳೆ ನಿನ್ನಯ ಮುದ್ದು | ಮೊಗವೇಕೆ ಕಂದಿತು | ಸುಗುಣೆ ಪೇಳೇ || ಈಗ |
ದೃಗುಯುಗದಲಿ ವಾರಿ | ಸುರಿವ ಕಾರಣವೇನು | ಮಗಳೆ ಪೇಳೆ ||೧೩೬||
ದುಗುಡವಿದೇನವ್ವ | ತೆಗೆಯೆ ಗಲ್ಲದ ಕೈಯ | ನಾಗವೇಣೀ || ಆವ |
ಬಗೆಯೊಳರುಹು ಇಂಥ | ಹಗರಣ ಬೇಡ ಕೇಳ್ | ಕೀರವಾಣೀ ||೧೩೭||
ರಾಗ ಭೈರವಿ ರೂಪಕತಾಳ
ಪೇಳಲೇನವ್ವಾ | ತಾಯೆ | ಪೇಳಲೇನವ್ವಾ || ಪಲ್ಲ ||
ಪೇಳಿ ಮಾಳ್ಪುದೇನು ನಿಮ್ಮ | ಬಾಲರುಗ್ಮ ಚೈದ್ಯನೆಂಬ |
ಖೂಳನಿಂಗೆ ಕೊಡುವನೆನ್ನ | ನಾಳೆ ನಡೆವ ದಿವಸದೀ || ಪೇಳಲೇನವ್ವಾ ||೧೩೮||
ಕಾಲನಾದನಣ್ಣನೆನಗೆ | ಬಾಳಲಾರೆ ನಾನು ಜಗದಿ |
ನೀಲವರ್ಣ ಬಿಟ್ಟನೆನ್ನ | ಮೇಲೆ ದಯವ ಮಾಡದೇ || ಪೇಳಲೇನವ್ವಾ ||೧೩೯||
ರಾಗ ಕಲ್ಯಾಣಿ ಝಂಪೆತಾಳ
ಸೈರಿಸಲು ಬೇಕವ್ವ | ಸಿರಿದೇವಿ ನೀನೀಗ |
ವೈರಿಗಳು ತಮ್ಮಿಂದ | ತಾವೆ ಅಳಿಯುವರೂ ||೧೪೦||
ಜನನಕಾಲದಿ ಲಗ್ನ | ವನು ನೋಡಿ ಜೋಯಿಸರು |
ಗುಣಿಸಿ ಪೇಳ್ದರು ಲೋಕ | ಜನನಿ ಎಂದೂ ||೧೪೧||
ನಿನಗೆ ಸಂಶಯ ಬೇಡ | ಅನಿಮಿಷರು ಪೂಮಳೆಯ |
ವಿನಯದಿಂ ಕರೆಯಲದು | ಘನಮಹಿಮೆಯೈಸೇ ||೧೪೨||
ಇಳೆಯ ಭಾರವನೆಲ್ಲ | ಕಳೆಯಬೇಕೆನುತೀಗ |
ಕಲಹವನು ಹಣ್ಣಿದನು | ಕಮಲನಾಭಾ ||೧೪೩||
ತಿಳಿದು ನೋಡವ್ವ ನಿ | ನ್ನೊಳಗೆ ನೀನೀ ಪರಿಯ |
ಬಳಲದಿರು ನಿನಗಾತ | ನೊಲಿವ ನಿಶ್ಚಯವೂ ||೧೪೪||
ವಚನ
ಈ ಪ್ರಕಾರದಿಂ ಸುತೆಗೆ ಸೈರಣೆ ಪೇಳ್ದಂತಃಪುರಕಂ ಪೋಗಲಿತ್ತಲು ಕಾಂತೆಯರು ರುಗ್ಮನೆಡೆಗೈತಂದೇನೆನುತಿರ್ದರದೆಂತೆನೆ -–
ರಾಗ ಮಾರವಿ, ಅಷ್ಟತಾಳ
ಕೇಳಯ್ಯ ರುಗ್ಮಭೂಪಾ | ಮನ್ಮಥರೂಪ || ಕೇಳಯ್ಯ || ಪಲ್ಲ ||
ತರಳೆ ರುಗ್ಮಿಣಿಗೆ ನೀವೂ | ಇತ್ತುದನೆಲ್ಲ | ಭರದಿಂದ ಪೋಗಿ ನಾವೂ ||
ಚರಣ ಕಾನತರಾಗಿ | ಪರಿಪರಿ ವಿಧದಿಂದ |
ಒರೆದು ಮುದ್ದಿಡಲಾಗ | ಹರುಷಗೊಳ್ಳದೆ ಪೇಳ್ದಳ್ ||೧೪೫||
ಬದಲು ಮಾತೇತಕಿಂದೂ | ಅಣ್ಣಯ್ಯ ಕೊ | ಟ್ಟುದನಿತ್ತು ಪೋಪುದೆಂದೂ ||
ವಿಧಿಯ ಕಟ್ಟಳೆ ಏನುಂ | ಟದ ಬಲ್ಲ ಹರಿ ಎಂದು |
ಹೃದಯ ಬೇರಾಗಿದೆಂ | ಬುದು ಪುಸಿಯಲ್ಲ ಸಿದ್ಧ ||೧೪೬||
ದ್ವಿಪದಿ
ಎಂದು ಪೇಳ್ದುದ ರುಗ್ಮ ಯೋಚಿಸುತ ಮನದೀ |
ನೊಂದು ಮಂತ್ರಿಯನು ಕರೆದೆಂದ ಸಂಶಯದೀ ||೧೪೭||
ಅನುಜೆಯನು ಶಿಶುಪಾಲಭೂಪನಿಗೆ ತಾನೂ |
ವಿನಯದಿಂದಲಿ ಕೊಡುವೆ ನಗರವನು ನೀನೂ ||೧೪೮||
ಭರದಿ ಶೃಂಗರಿಸೆನಲು ಕೇಳಿ ಕೈಮುಗಿದೂ |
ತರಿಸಿದನು ಪರಿಪರಿಯ ವಸ್ತುಗಳನೊಲಿದೂ ||೧೪೯||
ಚಪ್ಪರಂಗಳ ಸೊಬಗಿನಿಂದ ವಿರಚಿಸಿದಾ |
ಒಪ್ಪುವಂದದಿ ಮೇಲು ಕಟ್ಟು ಕಟ್ಟಿಸಿದಾ ||೧೫೦||
ಗೊನೆಸಹಿತ ರಂಜಿಸುವ ಸಾಲುಕದಳಿಗಳೂ |
ಮನೆ ಮನೆಯ ಮುಂದೆ ಬಣ್ಣದ ಪತಾಕೆಗಳೂ ||೧೫೧||
ರಾಗ ಕೇತಾರಗೌಳ ಅಷ್ಟತಾಳ
ಕೇರಿಕೇರಿಗಳೊಳಗೊಪ್ಪಿತು ಕುಂಕುಮ | ಸಾರಣೆ ಕಸ್ತೂರಿಯಾ ||
ತೋರ ಮುತ್ತಿನ ರಂಗೋಲೆಯು ಸೊಬಗಿಂದ | ತೋರಿತು ಬೀದಿಯೊಳೂ ||೧೫೨||
ನವರತ್ನಖಚಿತದಿಂ ಧಾರೆಮಂಟಪ ರಾಜ | ಭವನಂಗಳೆಸೆವುತಲೀ ||
ನವಖಂಡ ಪೃಥ್ವೀಶರಿಂಗಿಹ ಸ್ಥಾನವು | ವಿವಿಧದಿಂದೊಪ್ಪಿತಲ್ಲೀ ||೧೫೩||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅತ್ತಲಾ ಮಂತ್ರೀಶ ಚೈದ್ಯನೃ | ಪೋತ್ತಮನ ಬಳಿಗೈದಿ ರುಗ್ಮನ |
ಚಿತ್ತದುತ್ಸಹಗಳನು ಸಭೆಯೊಳು | ಬಿತ್ತರಿಸಿದಾ ||೧೫೪||
ನಾಳೆ ಲಗ್ನವು ಬರಲಿ ಬಾಂಧವ | ಜಾಲ ಸಹಿತದಿ ನಿಮಗೆ ಪಂಕಜ |
ಲೋಲನೇತ್ರೆಯ ಕೊಡುವೆನೆಂದನು | ಭೂಲಲಾಮಾ ||೧೫೫||
ತಡವಮಾಡುವ ಕಾರ್ಯವಲ್ಲಿದು | ನಡೆಯಲೀ ಕ್ಷಣ ಸಕಲಸೇನೆಯು |
ಪೊಡವಿಪರ ಕರೆಸೆಂದು ಮಂತ್ರಿಗೆ | ನುಡಿದ ಬೇಗಾ ||೧೫೬||
ರಾಗ ಮುಖಾರಿ ಆದಿತಾಳ
ಇಂತು ಸಚಿವಗಾಜ್ಞೆಯಿತ್ತು | ಚೈದ್ಯನಾಗಾ || ಭೂಮಿ |
ಕಾಂತ ಜರೆಯ ಸುತರ ಕೂಡಿ | ಕೊಂಡು ಬೇಗಾ ||೧೫೭||
ಭರದಿ ಮಗಧರಾಯನಿಂದ | ಕೇಳಿಕೊಂಡೂ || ಚೈದ್ಯ |
ಹರುಷದಿಂದ ದೇವಕಾರ್ಯ | ಮಾಡಿಕೊಂಡೂ ||೧೫೮||
ಚಾರುತರ ಬಾಸಿಗವ ಕಟ್ಟಿ | ನಲವಿನಿಂದಾ || ಸರ್ವ |
ಧಾರಿಣೀಶರನ್ನು ಕೂಡಿ | ಪೊರಟುಬಂದಾ ||೧೫೯||
Leave A Comment