ರಾಗ ನಾಟಿ, ಝಂಪೆತಾಳ
ಶ್ರೀ ಗಣಪ ಗಜವದನ | ಸುರನಿಕರನುತಚರಣ |
ನಾಗನಿಚಯಾಭರಣ | ನತಜನೋದ್ಧರಣಾ ||
ಯೋಗಿಜನಹೃದಿನಿಲಯ | ನಾಗಭೂಷಣತನಯ |
ರೋಗಾದಿದೋಷಹರ | ರಂಜಿತಾಕಾರಾ ||೧||
ಪರಮಪಾವನಚರಿತ | ಸರಸ ಸದ್ಗುಣಭರಿತ |
ತರುಣಾರ್ಕಸಂಕಾಶ | ದುರಿತೌಘನಾಶಾ ||
ಶರಧಿಸಮ ಗಂಭೀರ | ಸಕಲ ವಿದ್ಯಾಧಾರ |
ನಿರತಗಾನವಿಲೋಲ | ನಿರ್ಮಲಸುಶೀಲಾ ||೨||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಶರಣು ಶಂಕರ ತ್ರಿಪುರನಾಶನ | ಶರಣು ನುತಜನಪೋಷಣಾ ||
ಶರಣು ಗಿರಿಜಾನಾಥ ಸ್ಮರಹರ | ಶರಣು ಪರಶಿವ ಪಾಹಿ ಮಾಂ ||೩||
ನೀಲಕಂಧರ ನಿರ್ಮಲಾತ್ಮಕ | ಕಾಲಕರ್ಮ ವಿವರ್ಜಿತಾ ||
ವ್ಯಾಳಭೂಷ ಕಪಾಲಧರ ಗಣ | ಜಾಲವಂದಿತ ಪಾಹಿ ಮಾಂ ||೪||
ದಕ್ಷ ಮಖಸಂಹರಣ ಸುರಮುನಿ | ಯಕ್ಷ ಕಿನ್ನರಪೂಜಿತಾ ||
ಪಕ್ಷಿವಾಹನಮಿತ್ರ ಭವಹರ | ತ್ರ್ಯಕ್ಷ ಮಾಂ ಪರಿಪಾಲಯಾ ||೫||
ರಾಗ ಮಾರವಿ, ಏಕತಾಳ
ಅಂಬಾ ಮಾಂ ಪಾಹಿ ಶ್ರೀ | ಅಂಬುಜವದನೇ ||
ಬಿಂಬೋಷ್ಠೆ ಭಕ್ತ ವಾ | ಲಂಬೆ ಶಿವಸದನೇ ||೬||
ಕಲಕೀರವಾಣಿ ಕೋ | ಮಲೆ ಕಂಜಪಾಣೀ ||
ಅಳಿನೀಳಾಳಕಶ್ರೇಣಿ | ದೇವಿ ಶರ್ವಾಣೀ ||೭||
ಲಲನಾಮಣಿ ನೀಲೋ | ತ್ಪಲ ದಳನಯನೇ ||
ಸುಲಲಿತ ಸುಮವರ | ಮಾಲೆ ಸುಶೀಲೇ ||೮||
ಶರಜನ್ಮಜನನೀ ರು | ದ್ರಾಣಿ ಕಲ್ಯಾಣೀ ||
ಸುರಗಣ ಮಣಿಮಕು | ಟೋಜ್ವಲ ಚರಣೇ ||೯||
ಸುರುಚಿರ ರತ್ನಾಂ | ಬರೆ ವಿಮಲಚರಣೇ ||
ಕರುಣಾಸಾಗರೆ ಕಂಬು | ಕಂಠಿ ಸುಭರಣೇ ||೧೦||
ನಿರತ ನೀ ಪಾಲಿಸೆ | ಸುಜನರ ಬೇಗಾ ||
ವರ ಕುಟಚಾದಿಸ್ಥಿರ | ವಾಸೆ ಮುಕಾಂಬೇ ||೧೧||
ದ್ವಿಪದಿ
ಪರಮ ಸತ್ಕವಿ ಶುಕನ ಚರಣಾಬ್ಜಯುಗವ |
ಭರದಿ ಧ್ಯಾನಿಸಿ ಪಡೆವೆ ಜ್ಞಾನಸಂಪದವ ||೧೨||
ಸುರನಿಕರಕಭಿನಮಿಸಿ ಮುನಿನಿಕರಕೆರಗೀ |
ಸರಸಕವಿಗಳ ನೆನೆದು ಭಕ್ತಿಯುತನಾಗಿ ||೧೩||
ಭಾಗವತ ಪೌರಾಣದೊಳಗೆ ರುಗ್ಮಿಣಿಯ |
ಭೋಗಿಶಯನನು ವರಿಸಿ ಮೆರೆದ ಸಂಗತಿಯಾ ||೧೪||
ಪೇಳುವೆನು ಶ್ರೀಮುಕಾಂಬಿಕೆಯ ಕರುಣದಲಿ |
ಪಾಲಿಸಿದ ವಾಕ್ಯವನು ಯಕ್ಷಗಾನದಲಿ ||೧೫||
ಎನಿತು ತಪ್ಪಿರ್ದಡದ ಕೋವಿದರು ಮುದದಿ |
ವಿನಯದಿಂ ತಿದ್ದಿ ಮೆರೆಸುವುದು ಮೂಜಗದಿ ||೧೬||
ವಚನ
ಇಂತು ದೇವಗುರುಪ್ರಾರ್ಥನೆಯ ಮಾಡಿ ಸತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ –
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಸೋಮವಂಶೋದ್ಭವ ಪರೀಕ್ಷಿತ | ಭೂಮಿಪತಿ ಶುಕಯೋಗಿನಾಥನ |
ಕೋಮಲಾಂಘ್ರಿಗೆ ನಮಿಸಿ ಕೇಳ್ದನು | ಪ್ರೇಮದಿಂದಾ ||೧೭||
ವರಮಹಾ ಮುನಿ ಕೇಳು ತವ ಮುಖ | ಸರಸಿಜದೊಳುದಿಸಿರ್ದ ಲಕ್ಷ್ಮೀ |
ವರನ ಲೀಲಾ ಚರಿತವನು ಅತಿ | ಹರುಷದಿಂದ ||೧೮||
ಸವಿಯೆ ಕರ್ಣಕೆ ತೃಪ್ತಿಪಡಿಸದೆ | ಸವಿಯದೆಂತುಟೊ ಕಾಣೆ ಕಮಲಾ |
ಧವನು ರುಗ್ಮಿಣಿಗೊಲಿದ ಪರಿಯನು | ವಿವರಿಸೆನಗೆ ||೧೯||
ಎಂದು ಪೃಥ್ವೀಶ್ವರನು ಪುನರಪಿ | ವಂದಿಸಲು ಪಿಡಿದೆತ್ತಿ ಕರುಣಾ |
ಸಿಂಧು ಮುನಿಪತಿ ನಗುತ ಪೇಳ್ದನು | ಚಂದದಿಂದ ||೨೦||
ಅರಸ ಕೇಳೈ ನಿನ್ನ ಭಕ್ತಿಗೆ | ಸರಿಯೆ ಬೇರಿನಿತಿಲ್ಲ ಜಗದೊಳು |
ಮುರಹರನ ಮಹಿಮೆಯನು ಪೇಳ್ವೆನು | ಕರುಣೆಯಿಂದ ||೨೧||
ರಾಗ ಶಂಕರಾಭರಣ ಮಟ್ಟೆತಾಳ
ಧರಣಿಪತಿಯೆ ಲಾಲಿಸಯ್ಯ | ವರ ವಿದರ್ಭದೇಶದೊಳಗೆ |
ಮೆರೆವ ಕುಂಡಿನಾಖ್ಯಪುರದ | ಸಿರಿಯ ಸೊಬಗನೂ ||೨೨||
ಉರಗಪತಿಗೆ ಪೇಳಲರಿದು | ಸುರಪನಾಳ್ವ ನಗರವನ್ನು |
ಜರೆವ ತೆರದಿ ಪರಮಸೌಖ್ಯ | ತೆರದೊಳುಲಿವುತಾ ||೨೩||
ದ್ವಾರ ನಾಲ್ಕು ಪುರದ ನಡುವೆ | ತೋರುತಿರ್ಪುದಖಿಳಜನಕೆ |
ಕೇರಿ ಕೇರಿಯೊಳಗೆ ಮಕರ | ತೋರಣಂಗಳೂ ||೨೪||
ಎಲ್ಲಿ ನೋಡೆ ವಾಜಿ ಗಜಗ | ಳೆಲ್ಲಿ ನೋಡೆ ದಿವ್ಯರಥಗ |
ಳಲ್ಲಿ ಸುಭಟವಾರ ಮೆರೆವು | ತಲ್ಲಿ ತೋರ್ಪುದೂ ||೨೫||
ಎಲ್ಲಿ ನೋಡೆ ನೃತ್ಯಗೀತ | ಎಲ್ಲಿ ನೋಡೆ ವಾದ್ಯಘೋಷ |
ಎಲ್ಲಿ ನೋಡೆ ಸಕಲ ವಿಭವ | ದಲ್ಲಿ ಮೆರೆದುದೂ ||೩೬||
ಭಾಮಿನಿ
ಈ ಪರಿಯ ಸೌಭಾಗ್ಯ ಸುಖಕರ |
ವಾಪ ಮೆರೆಯುವ ದಿವ್ಯನಗರದಿ |
ರೂಪ ಯೌವನ ಗುಣದಿ ಶೋಭಿತಳಾದ ಸತಿ ಸಹಿತಾ ||
ಚಾಪವಿದ್ಯಾನಿಪುಣ ಸದ್ಗುಣ |
ದಾಪ ಕೀರ್ತಿಕಲಾಪವೆನಿಸುವ |
ಭೂಪ ಭೀಷ್ಮಕರಾಯನಿದ್ದನು ರಾಜತೇಜದಲೀ ||೨೭||
ರಾಗ ಮಧುಮಾಧವಿ, ತ್ರಿವುಡೆತಾಳ
ಇಂತು ವಿಭವದಿ ರಾಯಭೀಷ್ಮಕ | ಸಂತಸದೊಳಿರಲಮಿತ ಸದ್ಗುಣ |
ವಂತರುದಿಸಿದರಧಿಕತೇಜದಿ | ಕಂತುರೂಪದೊಳೈವರು ||೨೮||
ರುಗ್ಮ ಹಿರಿಯನು ರುಗ್ಮಿ ಕಿರಿಯನು | ರುಗ್ಮಬಾಹು ಸುರುಗ್ಮಕೇತನು |
ರುಗ್ಮಭೂಷಣ ಗಾತ್ರನೆನಿಸುವ | ರುಗ್ಮನಾಮದೊಳೈವರು ||೨೯||
ಸುತರು ರಾಜ್ಯಕೆ ಪತಿಗಳಾದರು | ಸುತೆಯು ತನಗಿಲ್ಲೆನುತ ರಾಯನ |
ಸತಿಯು ಚಿಂತಿಸುತಿರಲು ಲಕ್ಷ್ಮೀ | ಪತಿಯ ವ್ರತಮಂ ತಾಳ್ದಳು ||೩೦||
ಧರೆಯ ಭಾರವ ಕಳೆಯಲೋಸುಗ | ಧರೆಯೊಳವತರಿಸಿದನು ಪತಿ ಎಂ |
ದರಿತು ತಾನುದಿಸುವೆನು ಭೀಷ್ಮಕ | ನರಸಿಯುದರದಿ ಮುದದೊಳು ||೩೧||
ಎನುತ ರಮೆಯತಿಕರುಣದಿಂದಲಿ | ವನಿತೆ ಚಂದ್ರಾನನೆಯ ಗರ್ಭದಿ |
ವಿನಯದಿಂದಲೆ ವಾಸವಾಗಲು | ಮನದಿ ಸಂತಸಗೊಂಡಳು ||೩೨||
ರಾಗ ಸಾಂಗತ್ಯ ರೂಪಕತಾಳ
ಸಿರಿದೇವಿ ಜಠರದಿಂ ಕರುಣದೊಳೈಲೆಸೆ ಭೂ | ವರನ ರಾಣಿಗೆ ಗರ್ಭದೇಳ್ಗೆ ||
ಕುರುಹುದೋರಿತು ಸರ್ವ ಗಾತ್ರದೊಳ್ಮುಖಪದ್ಮ | ಪರಿಶೋಭಿಸಿತು ಶುಭ್ರವಾಗಿ ||೩೩||
ಭುವನಾಧಿಪತಿ ಕೇಳು ಕುವಲಯನೇತ್ರೆಗೆ | ನವಮಾಸ ತುಂಬಲಾ ಕ್ಷಣದಿ ||
ಭವಣೆಗೊಳ್ಳುತ ಮಂಚವನೆ ಸಾರ್ದು ಮನದಲ್ಲಿ | ಶಿವನೇ ರಕ್ಷಿಸು ಎಂದಳಬಲೆ ||೩೪||
ರಾಗ ನೀಲಾಂಬರಿ ಆದಿತಾಳ
ತಾಳಲಾರೆನು || ಪಲ್ಲವಿ ||
ಎನ್ನಂಗದ ವ್ಯಥೆಯ | ತಾಳಲಾರೆನು || ಅ.ಪ ||
ಘಳಿಗೆ ಘಳಿಗೆಗೊಂದೊಂದು |
ಅಲಗು ನೆಟ್ಟಂತಹುದು || ||೩೫||
ಉಂಡರುಬ್ಬಸ ಹೆಚ್ಚಿ |
ಗುಂಡು ಕಲ್ಲಿಟ್ಟಂತೆದೆಯೊಳ್ | ||೩೬||
ಅಡಿ ಇಡಲಳವಲ್ಲ |
ನುಡಿವರೆ ಮನಸಿಲ್ಲ || ||೩೭||
ಶ್ರೀಶ ಸದಾನಂದ |
ಕೇಶವ ದಯದಿಂದ || ತಾಳಲಾ ||೩೮||
ಪೋಷಿಸಬೇಕೆನ್ನನು |
ಕೈ ಮುಗಿವೆನು || ತಾಳಲಾರೆನು ||೩೯||
ಕಂದ
ಇಂತಿರಲಾ ಸಮಯದಿ ವರ |
ಕಂತುಜನನಿಯಾ ಭೂಮೀಶನ ನಿಜ ಪಟ್ಟದ ||
ಕಾಂತೆಜಠರದಿಂ ಧರೆಗೆ |
ತಾಂ ತವಕದಿ ಅವತರಿಸಿದಳತಿ ವೈಭವದಿಂ ||೪೦||
ದ್ವಿಪದಿ
ಯುವತಿ ಚಂದ್ರಾನನೆಗೆ ಮಜ್ಜನವ ಗೈದು |
ನವದುಕೂಲವನುಡಿಸಿ ಭೂಷಣ ತೊಡಿಸೀ ||೪೧||
ಧರಣೀಶ ಭೀಷ್ಮಕಗೆ ಪೇಳಲಾ ಕ್ಷಣದಿ |
ಧರಣಿ ಯಮರರು ಸಹಿತ ಬಂದರಾ ಕ್ಷಣದಿ ||೪೨||
ನಾಮಕರಣವ ಮಾಳ್ಪುದೆನೆ ಶಿಶುವ ನೋಡಿ |
ಪ್ರೇಮದಿಂ ಭೂಸುರೋತ್ತಮರ್ಗಣಿತ ಮಾಡಿ ||೪೩||
ರುಗ್ಮವರ್ಣದೊಳೆಸೆವ ಸುಕುಮಾರಿಗಾಗ |
ರುಗ್ಮಿಣಿಯು ಎಂದು ಘನ ಪೆಸರಿಸಲು ಬೇಗ ||೪೪||
ರಾಗ ಕೇತಾರ, ಝಂಪೆತಾಳ
ಮೃದುತರದ ಹಾಸು ಹಾಸೀ | ತಾಮರಸ |
ಸದನೆಯನು ಶಯನಗೈಸೀ ||
ವದನಾಬ್ಜವನು ನೋಡುತಾ | ಅರ್ತಿಯಲಿ |
ಸುದತಿ ಚಂದ್ರಾನನೆಯು ||೪೫||
ಪಕ್ಷಿವಾಹನನೆ ದಯದೀ | ಈ ಶಿಶುವ |
ರಕ್ಷಿಸೈ ಎಂದು ಮುದದೀ ||
ರಕ್ಷೆ ಕಟ್ಟುತಲೆ ಪಾಡೀ | ಬಳಿಕ ಕಮ |
ಲಾಕ್ಷಿಯರು ತೂಗೆ ಕೂಡೀ ||೪೬||
ರಾಗ ಜೋಗುಳ, ಆದಿತಾಳ
ಜೋಜೋ ಜೋ ಫಣಿವೇಣಿ ಕಲ್ಯಾಣೀ |
ಜೋಜೋ ಕಲಕೀರವಾಣಿ ಕಟ್ಟಾಣೀ ||
ಜೋಜೋ ವಿಕಸಿತಕುವಲಯನೇತ್ರೇ |
ಜೋಜೋ ಮೋಹನ ಕೋಮಲಗಾತ್ರೆ || ಜೋಜೋ ||೪೭||
ಜೋಜೋ ಅಳಿನೀಲಕುಂತಳ ಜೋಜೋ |
ಜೋಜೋ ಸುಲಲಿತ ಕನಕಾಂಗಿ ಜೋಜೋ ||
ಜೋಜೋ ತಿಲಸುಮನಾಸಿಕೆ ಜೋಜೋ |
ಜೋಜೋ ವರಕಂಬುಕಂಧರೆ ಜೋಜೋ || ಜೋಜೋ ||೪೮||
ಶರದೇಂದುನಿಭಮುಖಿ ಶಿರಿದೇವಿ ಜೋಜೋ |
ತರುಣಾರ್ಕ ನಿಭಕೋಟಿಸಂಕಾಶೆ ಜೋಜೋ ||
ಧರಣೀಶ ಭೀಷ್ಮಕತನುಜಾತೆ ಜೋಜೋ |
ಕರುಣಾಕರೆ ಗುಣಸಾಗರೆ ಜೋಜೋ || ಜೋಜೋ ||೪೯||
ಭಾಮಿನಿ
ಇಂತು ವಿಭವದಿ ಪುರದ ವಧುಗಳ |
ನಂತರಾಗದಿ ಪಾಡಿ ತೂಗುತ |
ಸಂತಸದೀ ವೀಳೆಯವನಿತ್ತುಪಚರಿಸೆ ಮನೆಗಳಿಗೇ ||
ಕಾಂತೆಯರ ಬೀಳ್ಕೊಟ್ಟು ಶಿಶುರೂ |
ಪಾಂತ ಶ್ರೀದೇವಿಯನು ಧರಣೀ |
ಕಾಂತನರಸಿಯು ನೋಡುತಿದ್ದಳು ಪರಮಹರುಷದಲೀ ||೫೦||
ವಾರ್ಧಕ
ಧರಣೀಶನರ್ಧಾಂಗಿ ಹರಿಣಾಕ್ಷಿ ಸ್ನೇಹದಿಂ |
ಶಿರಿದೇವಿಯಂ ಸಲಹುತಿರಲೊಂದು ದಿನದಿ ಶ್ರೀ |
ವರನಿರ್ಪ ದ್ವಾರಕಾಪುರದಿಂದ ನಾಯಕರು ಭರದೊಳೈತಂದು ಮುದದೀ ||
ಧೊರೆಯ ಸನ್ಮುಖದಲ್ಲಿ ಪರಮಪಾವನಚರಿತ |
ಮುರಹರನ ಮಹಿಮೆಯಂ ಪರಿಪರಿಯ ರಾಗದಿಂ |
ಸರಸವಾಡುತ ಪೇಳೆತರಳೆರುಗ್ಮಿಣಿ ಕೇಳಿ ಪರಿತೋಷಮಂ ತಾಳ್ದಳೂ ||೫೧||
ರಾಗ ಮಧುಮಾಧವಿ, ತ್ರಿವುಡೆತಾಳ
ರಾಯ ಹಿಮಕರಕುಲಜ ಲಾಲಿಸು | ಗಾಯಕರ ಮುಖದಿಂದ ಪಂಕೇ |
ಜಾಯತಾಕ್ಷನ ಗುಣಗಣಂಗಳ | ಕಾಯಸಂಭವಜನನಿಯು ||೫೨||
ಕೇಳಿ ತನ್ನೊಳು ತಾನೆ ಹಿಗ್ಗುತ | ನೀಲಮೇಘಶ್ಯಾಮ ಕೃಷ್ಣನ |
ಮೇಲೆ ಚಿತ್ತವನಿಟ್ಟು ಮನದಲಿ | ಬಾಲೆ ಧ್ಯಾನಿಸುತಿದ್ದಳು ||೫೩||
ಕಾಮಪಿತ ಕಮಲಾಕ್ಷನೀರಜ | ಶ್ಯಾಮ ಸದ್ಗುಣಧಾಮ ರಿಪುನಿ |
ರ್ನಾಮ ತವಪದತಾಮರಸವನು | ಪ್ರೇಮದಿಂ ತೋರೆನುತಲಿ ||೫೪||
ರಾಜಿಸುವ ನವಸ್ವರ್ಣಪ್ರತಿಮೆಯ | ಮೂಜಗತ್ಪತಿ ಕೃಷ್ಣನೆಂದತಿ |
ಪೂಜಿಸುವಳವಳರ್ತಿಸುವಳು ಸ | ರೋಜನಾಭನ ನೆನೆವುತ ||೫೫||
ಮಾರನಯ್ಯನ ಮನದಿ ನೆನೆವುತ | ಮಾರನಸ್ತ್ರಕೆ ಮೈಯನೊಡ್ಡುತ |
ಮಾರಮಣ ಮೈದೋರಿಸೆನುತಲಿ | ಮಾರಮಣಿ ನುತಿಗೈದಳು ||೫೬||
ಭಾಮಿನಿ
ಪತಿ ತನಗೆ ಶ್ರೀಕೃಷ್ಣನೆನುತಲಿ |
ಹಿತದಿ ಭಾವಿಪ ತನ್ನ ಮೋಹದ |
ಸುತೆಯ ಮತಮಂ ತಿಳಿದು ವಿಸ್ಮಿತನಾಗುತಡಿಗಡಿಗೇ ||
ಕ್ಷಿತಿಗೊಡೆಯ ಭೀಷ್ಮಕನು ಬಾಂಧವ |
ತತಿಯ ಸಂತಸಬಡಿಸಿ ದಾನವ |
ಮಥನಗೀ ಬಾಲಕಿಯ ನೀವುದು ಹಿತಗಳೆನುತಿದ್ದಾ ||೫೭||
ರಾಗ ಭೈರವಿ, ಝಂಪೆತಾಳ
ಕ್ಷಿತಿಪ ಭೀಷ್ಮಕರಾಯ | ಸುತೆಯ ಶ್ರೀದೇವಕಿಯ |
ಸುತಗೆ ತಾ ಕೊಡುವೆನೆನು | ತತಿ ಹಿತದೊಳಿರಲು ||೫೮||
ಕೇಳಿ ದೂತರು ಬಂದು | ಪೇಳಲಾ ಕ್ಷಣ ರುಗ್ಮ |
ನಾಲಿಸುತ ಕೋಪಮಂ | ತಾಳಿ ಕಿಡಿಗೆದರಿ ||೫೯||
ಹುಡುಗಿಯನು ಗೋವಳಗೆ | ಕೊಡುವೆನೆಂಬವನ ಹಲು |
ಹೊಡೆವೆನೆಂದೆನುತಾಗ | ಘುಡು ಘುಡಿಸಿ ಭರದಿ ||೬೦||
ತಂದೆ ಇದ್ದೆಡೆಗೆ ನಡೆ | ತಂದು ನಿಲ್ಲಲು ತಿಳಿದು |
ಕಂದ ಬಾರೈ ಕುಳ್ಳಿ | ರೆಂದ ಭೀಷ್ಮಕನು ||೬೧||
ಮಗನೆ ನಿನ್ನಯ ಮುದ್ದು | ಮೊಗದಿ ದುಗುಡವಿದೇನು |
ಬಗೆಯನೆನಗರುಹೆನುತ | ನಗುತ ಕೇಳಿದನು ||೬೨||
ರಾಗ ಸೌರಾಷ್ಟ್ರ ಅಷ್ಟತಾಳ
ತಾತ ಕೇಳೈ ಗೋಪಾಲಂಗೆ | ಓತು ಮಗಳನೀವೆನೆಂಬ |
ಮಾತ ಕೇಳ್ದು ನಾನು ಬಂದೆ | ನೀತಿಯೇನಯ್ಯಾ ||೬೩||
ಪಾತಾಳ ಭೂವ್ಯೋಮಕೆಲ್ಲ | ನಾಥಕಾಣೈ ಕೃಷ್ಣರಾಯ |
ಏತಕಿಂಥ ಬುದ್ಧಿ ನಿನಗೆ | ನೀತಿಯೇನಯ್ಯಾ ||೬೪||
ತೆಗೆತೆಗೆ ಜಾರ ಚೋರನ | ಬಗೆಯನೆಲ್ಲ ಬಲ್ಲೆ ನಾನು |
ಜಗದೊಳು ಜಾತಿಹೀನಂಗೆ | ಮಗಳೀಯಬೇಡಾ ||೬೫||
ಮಗನೆ ಕೇಳ್ನಾನೆಂದ ಮಾತು | ನಿಗಮ ಸಿದ್ಧವಾದ ವಾಕ್ಯ |
ಪೊಗಳಿಕೆ ಇದಲ್ಲ ಬೇರೆ | ನಗೆಯ ಮಾತಲ್ಲಾ ||೬೬||
ಗೊಲ್ಲರ ಗೃಹದೊಳಿದ್ದು | ಕಳ್ಳಿಯನ್ನ ಉಂಡು ಗೋವ |
ನೆಲ್ಲ ಕಾಯ್ವತನ ಪೊಗಳಿ | ಜಳ್ಳಾಗಬೇಡಾ ||೬೭||
ಬಲ್ಲೆನೆಂದಾಡಿದೆ ಮಗನೆ | ನಿಲ್ಲದೆ ಸರ್ವರ ಹೃದಯ |
ದಲ್ಲಿ ವಾಸವಾಗಿರ್ಪಾತ | ಗೆಲ್ಲಿಯ ಭೇದಾ ||೬೮||
ವೃದ್ಧರಯ್ಯ ತಾತ ನಿಮ್ಮ | ಬುದ್ಧಿಯು ಹಾಗಿರಲಿ ನಮ್ಮ |
ಮುದ್ದು ಮೊಗದ ಶಿಶುಪಾಲಂಗೆ | ಸಿದ್ಧಮಾಡಯ್ಯಾ ||೬೯||
ಬುದ್ಧಿವಂತನುಹುದು ಸುಪ್ರ | ಸಿದ್ಧನಾದ ಶಿಶುಪಾಲಾನ |
ಇದ್ದ ನಾಲ್ಕು ಕರದೊಳೆರಡ | ಕದ್ದಾತನಾರೈ ||೭೦||
ರಾಗ ಶಂಕರಾಭರಣ, ಮಟ್ಟೆತಾಳ
ಕೇಳು ತಾತ ನಿಮ್ಮ ಮಾತ ಮೀರಬಾರದೂ |
ಪೇಳಲೇನು ರಾಜ ಕಾರ್ಯ ಮುಂದೆ ಬಪ್ಪುದೂ ||
ಶೂಲಧರನ ವರದಿ ರಾಜ್ಯ ಆಳ್ವ ಮಗಧನೂ |
ನೀಲವರ್ಣಗಿತ್ತರೆಯು ಕಾಳುಮಾಳ್ಪನೂ ||೭೧||
ಕದನದಲ್ಲಿ ಸೋತ ಕೃಷ್ಣ ಜಲಧಿ ಮಧ್ಯದೀ |
ಸದನವನ್ನು ಮಾಡಿದುದ ಬಲ್ಲೆ ಶೀಘ್ರದೀ ||
ಚದುರ ಚೈದ್ಯಭೂಪನಿಗೆ ಮಗಧ ಮಿತ್ರನೂ |
ಮುದದೊಳಾತನಿರಲು ನಮಗೆ ರಿಪುವ ಕಾಣೆನೂ ||೭೨||
ಉರಗಶಯನ ವೈರಿ ನಮಗೆ ದೈವ ಪಶುಪತೀ |
ಧರಣಿಯೊಳಗೆ ಸುಪ್ರತಾಪಿ ಮಗಧಭೂಪತೀ ||
ಬರಿಯ ಮಾತಿನಿಂದಲೇನು ತಂಗಿವರಿಸಲೀ |
ಕರೆಸು ಚೈದ್ಯಭೂಪನಿಂಗೆ ಮದುವೆಯಾಗಲೀ ||೭೩||
ರಾಗ ಶಂಕರಾಭರಣ ತ್ರಿವುಡೆತಾಳ
ಮಗನೆ ನಿನಗಿನ್ನೇನ ಪೇಳಲಿ | ಜಗದ ಭಾರವ ಕಳೆಯಲೋಸುಗ |
ನಗಧರನು ತಾನುದಿಸಿದನು ಕೇ | ಳ್ಮಗಳು ಮಾಯೇ ||೭೪||
ಮಿಗುವಡರಿದೀ ಮಗಧ ಚೈದ್ಯರು | ಪಗೆತನದೆ ಪಾಳಾಗಿ ಪೋಪರು |
ನಗೆಗೆ ನಮ್ಮೆಡೆಮಾಡಬೇಡೈ | ಸುಗುಣ ನೀನೂ ||೭೫||
ಕೇಡು ಬಪ್ಪುದು ಈಗ ಜಗದೊಳು | ಆಡಿಕೊಂಬರು ಬೈದು ನೆಂಟನು |
ಬೇಡ ಹಗೆತನ ಕೃಷ್ಣರಾಯನ | ಕೂಡೆ ನಿನಗೇ ||೭೬||
Leave A Comment