ವೈಜ್ಞಾನಿಕ ಹೆಸರು: ಕ್ಯಾರಿಸ್ಸ ಕರಂಡಾಸ್
ಕುಟುಂಬ: ಅಪೊಸೈನೇಸಿ

ಇದು ನಿತ್ಯ ಹಸಿರು, ದ್ವಿಕವಲೊಡೆದು ಬೆಳೆಯುವ ಪೊದೆ ಅಥವಾ ಚಿಕ್ಕ ಮರ. ದ್ವಿ ಕವಲಾದ ಜೋಡಿ ಅಸಂಖ್ಯಾತ ಮುಳ್ಳುಗಳು ಕಾಂಡದ ಮೇಲಿರುತ್ತವೆ. ಅಭಿಮುಖ ಎಲೆಗಳ ನರಗಳು ಬಿಳಿ ಮಿಶ್ರಿತ ಮತ್ತು ಹಾಲುಳ್ಳದ್ದಾಗಿರುತ್ತವೆ. ಹೂಗಳು ಬಿಳುಪು ಮತ್ತು ಚಿಕ್ಕವು, ಕಾಯಿ ೧ ಸೆಂ.ಮೀ.ನಿಂದ ೨.೫ ಸೆಂ.ಮೀ. ಉದ್ದವಿರುತ್ತವೆ ಹಾಗೂ ದುಂಡಗಾಗಿರುತ್ತವೆ. ಅವು ಬಲಿತಾಗ ಹಸಿರು ಮಿಶ್ರಿತ ಕೆಂಪು, ಮಾಗಿದಂತೆ ಕಪ್ಪಾಗುತ್ತವೆ ಮತ್ತು ಹೊಳಪು ಮೇಲ್ಮೈ ಹೊಂದಿರುತ್ತವೆ.

ಪುನರುತ್ಪತ್ತಿ: ಬೀಜಗಳಿಂದ ಮತ್ತು ಬೇರು ಚಿಗುರುಗಳಿಂದ ಸಂತಾನಾಭಿವೃದ್ಧಿ ಮಾಡಬಹುದು.

ಉಪಯೋಗಗಳು: ಹಣ್ಣು ಪಿತ್ತ ನಿವಾರಕ ಮತ್ತು ರುಚಿಕರವಾಗಿರುವುದರಿಂದ ತಿನ್ನಲು ಉಪಯೋಗಿಸುತ್ತಾರೆ. ಇದರಲ್ಲಿನ ಟ್ಯಾನಿನ್‌ ಅನ್ನು ಬಣ್ಣ ಹಾಕುವಿಕೆಗೆ ಬಳಸುತ್ತಾರೆ. ಫಲವು ಬಂಧಕ ಗುಣವುಳ್ಳದ್ದು. ಇದರಿಂದ ಉಪ್ಪಿನ ಕಾಯಿ ತಯಾರಿಸುತ್ತಾರೆ. ಇದನ್ನು ಕಡುಬು ಮತ್ತು ಜೆಲ್ಲಿ ತಯಾರಿಕೆಗೆ ಬಳಸುತ್ತಾರೆ. ಇದರ ಚೇಗು ಮರವನ್ನು ಸೌಟು ಮತ್ತು ಬಾಚಣಿಗೆ ತಯಾರಿಕೆಗೆ ಉಪಯೋಗಿಸುತ್ತಾರೆ. ಬೇರನ್ನು ಹೊಟ್ಟೆನೋವು ಮತ್ತು ಜಂತುಹುಳು ನಿವಾರಕವಾಗಿ ಉಪಯೋಗಿಸುತ್ತಾರೆ. ಎಲೆ ಕಷಾಯವನ್ನು ಬಿಟ್ಟು ಬಿಟ್ಟು ಬರುವ ಜ್ವರ ನಿವಾರಣೆಗೆ ಉಪಯೋಗಿಸುತ್ತಾರೆ. ಎಲೆಗಳನ್ನು ಟಸ್ಸಾರ್ ರೇಷ್ಮೆ ಮೇಯಿಸಲು ಉಪಯೋಗಿಸುತ್ತಾರೆ. ಸಸ್ಯಕ್ಕೆ ಮುಳ್ಳುಗಳಿರುವುದರಿಂದ ಬೇಲಿಯಾಗಿ ಬೆಳೆಸಬಹುದು.