ವೈಜ್ಞಾನಿಕ ಹೆಸರು: ಅಗೇವ್ಪ್ರಭೇದ, ಅಗೇವ್ಸಿಯೆ
ಕುಟುಂಬ: ಅಗೇವೇಸಿ

ಕತ್ತಾಳೆ ಹೂ ಗೊಂಚಲೊಡೆದು ಹನ್ನೆರಡು ವರ್ಷಕ್ಕೆ ಕಂಬಾವಸ್ಥೆ ತಲುಪುತ್ತದೆ. ಆದರೆ ಇದರ ಚಿಕ್ಕ ಕಾಂಡವನ್ನು ಎಲೆಗಳು ಗುಲಾಬಿ ಎಸಳಿನಂತೆ ಸುತ್ತಲೂ ಆವರಿಸಿರುತ್ತವೆ. ಎಲೆಗಳು ಬಹಳ ದಪ್ಪ ಒಂದು ಮೀಟರ್ ಉದ್ದವಿರುತ್ತವೆ. ಬುಡದಲ್ಲಿ ೧೫ ಸೆಂ.ಮೀ. ವರೆಗೆ ಅಗಲ ಮತ್ತು ಮೊನಚಾದ ದಪ್ಪ ಮುಳ್ಳಾಗಿದ್ದು ಅಲಗಿನಲ್ಲೂ ಚಿಕ್ಕ ಮುಳ್ಳುಗಳನ್ನು ಹೊಂದಿರುತ್ತವೆ. ಎಲೆಗಳು ಪ್ರಭೇದಗಳನ್ನು ಅನುಸರಿಸಿ ತಿಳಿಹಸಿರು, ಬೂದು ಮಿಶ್ರಿತ ನೀಲಿ ಬಣ್ಣವುಳ್ಳದ್ದಾಗಿರುತ್ತವೆ. ಕತ್ತಾಳೆ ಸಸ್ಯಗಳು ಹೂ ಕಾಯಿ ಬಿಟ್ಟ ನಂತರ ಸಾಯುತ್ತವೆ. ಹೂಗಳಿಗೆ ಬದಲಾಗಿ ಲಘುಲಶುನ ({ಸಣ್ಣಗಡ್ಡೆಗಳು) ಕಂಡು ಬರುತ್ತವೆ. ಇದಲ್ಲದೆ ಬುಡದಲ್ಲಿ ಬೇರಿನ ಕಂದುಗಳು ಅಸಂಖ್ಯಾತವಾಗಿ ಬಿಟ್ಟಿರುತ್ತವೆ.

ಪುನರುತ್ಪತ್ತಿ: ಬೀಜ, ಲಶುನ (ಮೋಸು), ಲಘುಲಶುನಗಳನ್ನು ಸಂಘ್ರಹಿಸಿ ಮಡಿಗಳಲ್ಲಿ ಹಾಕಿ ಸಸಿ ಬೆಳೆಸಿ ನೆಡಬಹುದು. ಕಂದುಗಳನ್ನು ತಾಯಿ ಗಿಡದಿಂದ ಬೇರ್ಪಡಿಸಿ ನೆಡಬೇಕಾದ ಸ್ಥಳಗಳಲ್ಲಿ ನೆಟ್ಟು ಸಂತಾನಾಭಿವೃದ್ಧಿ ಮಾಡಬಹುದು. ಲಘು ಲಶುನಗಳನ್ನು ನರ್ಸರಿ ಮಡಿಗಳಲ್ಲಿ ನಾಡಿ ಹಾಕಿ ಚೆನ್ನಾಗಿ ಬೆಳೆದ ನಂತರ ಕಿತ್ತು ನೆಡಬೇಕಾದ ಸ್ಥಳಗಳಲ್ಲಿ ನೆಡಬಹುದು.

ಉಪಯೋಗಗಳು: ಕತ್ತಾಳೆಯನ್ನು ವನ್ಯಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ತೋಪಿನ ಬೇಲಿಯಾಗಿ ಬೆಳೆಸುವುದು ರೂಢಿಯಲ್ಲಿದೆ. ರೈಲ್ವೆ ಕಂಬಿಗಳ ಎರಡು ಬದಿಗಳಲ್ಲಿ ಕೊರಕಲಾಗದಂತೆ ಬೆಳೆಸಲಾಗುತ್ತಿದೆ. ಬೇಲಿಯಲ್ಲಿ ಬೆಳೆದ ಮತ್ತು ವನಗಳಲ್ಲಿ ಬೆಳೆಸಿದ ಎಲೆಗಳಿಂದ ನಾರು ತೆಗೆದು ವರಮಾನ ಹೆಚ್ಚಿಸಿಕೊಳ್ಳಬಹುದು.. ಕೃಷಿಗೆ ನಾರಿನಿಂದ ಹಗ್ಗ, ಹುರಿ, ನಾರಿನ ಬಟ್ಟೆ ಇತ್ಯಾದಿಗಳನ್ನು ತಯಾರಿಸಿ ಉಪಯೋಗಿಸಬಹುದು. ಇದರ ನಾರು ಹತ್ತಿ ಮತ್ತು ತೆಂಗಿನ ನಾರಿಗಿಂತಲೂ ಬಲಿಷ್ಠ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ.