ವೈಜ್ಞಾನಿಕ ಹೆಸರು: ಡೊಡೋನಿಯ ವಿಸ್ಕೋಸ
ಕುಟುಂಬ: ಸ್ಯಾಪಿಂಡೇಸಿ

ಇದು ಗುಂಪು ಗುಂಪಾಗಿ ಬೆಳೆಯುವ ಹಸಿರು ಪೊದೆ ಅಥವಾ ಚಿಕ್ಕ ಮರ. ಎಲೆಗಳು ಚಿಕ್ಕವು, ನೆಟ್ಟಗೆ, ವಿರಳವಾಗಿ ಕೊಂಬೆಗಳಲ್ಲಿ ಪರ್ಯಾಯವಾಗಿರುತ್ತವೆ ಹಾಗೂ ಹೊಳಪು ಮತ್ತು ಅಂಟುಳ್ಳದ್ದಾಗಿರುತ್ತವೆ. ಇದರ ಫಲ ೨-೩ ರೆಕ್ಕೆಗಳುಳ್ಳ ತೆಳು ಬಿರಿಯುವ ಬಲೂನಿನಂತೆ ಉಬ್ಬಿರುತ್ತದೆ. ಕಾಂಡದ ತೊಗಟೆ ತೆಳು ಮತ್ತು ಬೂದು-ಕಂದು ಬಣ್ಣವುಳ್ಳಾದ್ದಾಗಿರುತ್ತದೆ. ಕಪ್ಪು ಗುಂಡಾದ ೬ ಬೀಜಗಳು ಒಂದು ಫಲದಲ್ಲಿರುತ್ತವೆ.

ಪುನರುತ್ಪತ್ತಿ: ಬೀಜಗಳಿಂದ ಸಂತಾನಾಭಿವೃದ್ಧಿಯನ್ನು ಮಾಡಬಹುದು. ಬೀಜಗಳನ್ನು ಹಾಕಿ ಜಮೀನಿನ ಸುತ್ತ ಬೇಲಿಯಾಗಿ ಬೆಳೆಸಬಹುದು.

ಉಪಯೋಗಗಳು: ಇದರ ಪೊದೆಯನ್ನು ಕತ್ತರಿಸಿ ಪೊರಕೆಯಾಗಿ, ಬತ್ತದ ಬೀಜ ಸಂಗ್ರಹಣೆ ಮತ್ತು ಬೀಜ ಮೊಳೆಯಲು ಸೊಪ್ಪನ್ನು ಮುಚ್ಚಲು ಉಪಯೋಗಿಸುತ್ತಾರೆ. ಇದಲ್ಲದೆ ಒಣಗಿಸದೆ ಸಸಿ ಮತ್ತು ಒಣ ಕಾಂಡವನ್ನು ಉರುವಲಾಗಿ ಬಳಸುತ್ತಾರೆ. ಕಾಂಡವನ್ನು ಆಯುಧಗಳ ಹಿಡಿಗೆ, ಊರುಗೋಲಾಗಿ, ಟರ್ನಿಂಗ್‌ ಮತ್ತು ಕೊರೆಯುವ ಮರವಾಗಿ ಬಳಸಬಹುದು. ಇದೊಂದು ಶ್ರೇಷ್ಠ ಉರುವಲಾಗಿದ್ದು ನಿಧಾನವಾಗಿ ಉರಿಯುತ್ತದೆ. ಇದರ ಎಲೆಗಳನ್ನು ಗಾಯ, ಊತ, ಸುಟ್ಟ ಗಾಯ, ಸಂಧಿವಾತ ನಿವಾರಣೆಗೆ ಉಪಯೋಗಿಸುತ್ತಾರೆ. ಎಲೆಯನ್ನು ನೋವು ಮತ್ತು ಸೆಳೆತಗಳ ಉಪಶಮನಕ್ಕೆ ಉಪಯೋಗಿಸುತ್ತಾರೆ. ಪೆರು ದೇಶದಲ್ಲಿ ಕೊಕೆ ಎಲೆಯಂತೆ ಚೋದಕವಾಗಿ ಜಗಿಯುತ್ತಾರೆ. ಸೊಪ್ಪನ್ನು ಮತ್ತು ಟೊಂಗೆಗಳನ್ನು ಹಸಿರೆಲೆ ಗೊಬ್ಬರವಾಗಿ ಉಪಯೋಗಿಸುತ್ತಾರೆ. ತೊಗಟೆಯನ್ನು ಬಂಧಕವಾಗಿ, ತಂಪಿಗಾಗಿ ಮತ್ತು ಮೀನಿಗೆ ವಿಷಾಪಹಾರಿಯಾಗಿ ಬಳಸುತ್ತಾರೆ./ ಸೊಪ್ಪನ್ನು ಟಸಾರ್ ರೇಷ್ಮೆ ಹುಳು ಮೇಯಿಸಲು ಹಾಕುತ್ತಾರೆ. ಈ ಸಸ್ಯವನ್ನಲು ಸವಕಳಿ ಮತ್ತು ಜೌಗು ಪ್ರದೇಶ ಫಲವತ್ತಾಗಿಸಲು ಬೆಳೆಸಬಹುದಾಗಿದೆ.