ವೈಜ್ಞಾನಿಕ ಹೆಸರು: ಜತ್ತೋಫ ಕುರ್ಕಸ್
ಕುಟುಂಬ: ಯೂಫೋರ್ಬಿಯೇಸಿ

ಇದು ೩ ರಿಂದ ೪ ಮೀ. ಎತ್ತರಕ್ಕೆ ಬೆಳೆಯುವ ಪೊದೆ. ಪೋರ್ಚುಗೀಸರು ಅಮೇರಿಕಾದಿಂದ ಎಣ್ಣೆ ಕೊಡುವ ಸಸ್ಯವೆಂದು ತಂದು ನಮ್ಮ ದೇಶದಲ್ಲಿ ಬೆಳೆಸಿದರು. ಎಲೆಗಳು ನಿತ್ಯ ಹಸಿರು, ದೊಡ್ಡದು, ಅಲಗು ಹೃದಯಾಕಾರ, ಬುಡದಲ್ಲಿ ೩ ರಿಂದ ೫, ಮೊನಚು ಮತ್ತು ಅಷ್ಟೆ ನಾಳಗಳನ್ನುಳ್ಳದ್ದಾಗಿರುತ್ತದೆ. ಸಸ್ಯವು ಬಿಳಿ ಕ್ಷೀರ ಹೊಂದಿರುತ್ತದೆ. ಹೂಗೊಂಚಲು ಹಳದಿ ಮಿಶ್ರಿತ. ಫಲಗಳು ೨.೫ ಸೆಂ.ಮೀ. ಉದ್ದಂಡಾಕಾರ, ಬಲಿತಾಗ ಬಿರಿದು ೩ ಹೋಳಾಗುತ್ತವೆ. ಪ್ರತಿ ಹೋಳಿನಲ್ಲೂ ಮಾಸಲು ಕಂದು ಮಿಶ್ರಿತ ಕಪ್ಪು ಅಂಡಾಕಾರದ ಬೀಜಗಳಿರುತ್ತವೆ. ಬೀಜಗಳು ಹರಳಿನಂತಿದ್ದು ಗಾತ್ರದಲ್ಲಿ ಸ್ವಲ್ಪ ದಪ್ಪವಿರುತ್ತವೆ.

ಪುನರುತ್ಪತ್ತಿ: ಎಣ್ಣೆಗಾಗಿ ಇತ್ತೀಚೆಗೆ ಕೃಷಿಯನ್ನು ಮಾಡಲಾಗುತ್ತಿದೆ ಮತ್ತು ಪ್ರತಿ ಎಕರೆಗೆ ೧೦೦೦ ಕಿ.ಗ್ರಾಂವರೆಗೆ ಬೀಜೋತ್ಪತ್ತಿಯಾಗುತ್ತದೆ. ಇದನ್ನು ವೆನಿಲ್ಲಾ ಬಳ್ಳಿಗೆ ಆಸರೆ ಮರವಾಗಿ, ಬೇಲಿಯಾಗಿ ಮತ್ತು ಇದರ ಹಾಲು ಸಂಗ್ರಹಕ್ಕಾಗಿ ವನಗಳಲ್ಲಿ ಬೆಳೆಸುತ್ತಾರೆ. ಬೀಜದಿಂದ ಮತ್ತು ಕಾಂಡದ ಚಿಣ್ಣಿಗಳಿಂದ ಈ ಸಸ್ಯವನ್ನು ಸುಲಭವಾಗಿ ಬೆಳೆಸಬಹುದಾಗಿದೆ.

ಉಪಯೋಗಗಳು: ಈ ಸಸ್ಯವನ್ನು ಜಾನುವಾರುಗಳು ಮೇಯುವುದಿಲ್ಲ. ಯಾವ ಮಟ್ಟಕ್ಕೆ ಬೇಕಾದರೂ ಕತ್ತರಿಸಬಹುದು. ಆದ್ದರಿಂದ ಬೇಲಿಗೆ ಸೂಕ್ತ. ಬೀಜಗಳನ್ನು ವಿಷಕಾರಕ, ಭೇದಿಕಾರಕವಾಗಿ ಉಪಯೋಗಿಸುತ್ತಾರೆ. ಬೀಜಗಳನ್ನು ಅರೆದು ಪಾಮ್‌ ಎಣ್ಣೆಯಲ್ಲಿ ಇಲಿಗಳಿಗೆ ಪಾಷಾಣವಾಗಿ ಕೊಡಲಾಗುತ್ತದೆ. ಕಾಕಂಬಿ ಜೊತೆ ಮಿಶ್ರಣಮಾಡಿ ಹೊಟ್ಟೆ ನೋವು ನಿವಾರಣೆಗೆ ಮತ್ತು ವಿಷಪ್ರಾಶನದ ನಿವಾರಣೆಗೆ ಕೊಡಲಾಗುತ್ತದೆ. ಅರೆಗಟ್ಟಿಯಾಗುವ ಲಕ್ಷಣವಿರುವುದರಿಂದ ಅರೆಗಟ್ಟಿಯಾಗದ ಆಲ್ಕಲಾಯ್ಡುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಣ್ಣೆಯನ್ನು ಉರಿಸಲು, ವಾರ್ನಿಷ್‌ ತಯಾರಿಕೆಗೆ, ಯಂತ್ರಗಳಿಗೆ ಕೀಲೆಣ್ಣೆ, ಸೋಪು ಮತ್ತು ಮೇಣದ ಬತ್ತಿ ತಯಾರಿಕೆಗೆ, ಚರ್ಮರೋಗ ಮತ್ತು ವಾತ ರೋಗಕ್ಕೆ, ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿಸುತ್ತಾರೆ. ತೊಗಟೆಯ ಟ್ಯಾನಿನ್‌ ಅನ್ನು ಮೀನಿನ ಬಲೆ ಮತ್ತು ಹಗ್ಗಗಳಿಗೆ ಹದ ಕೊಡಲು ಮತ್ತು ಸೊಪ್ಪನ್ನು ಹಸಿರೆಲೆ ಗೊಬ್ಬರವಾಗಿ ಬಳಸುತ್ತಾರೆ ಹಾಗೂ ಜಾವಾದಲ್ಲಿ ಎಲೆಗಳನ್ನು ಬೇಯಿಸಿ ತಿನ್ನುತ್ತಾರೆ. ಅಸ್ಸಾಂನಲ್ಲಿ ಎರಿ ರೇಷ್ಮೆ ಹುಳು ಸಾಕಲು ಇದರ ಸೊಪ್ಪನ್ನು ಉಪಯೋಗಿಸುತ್ತಾರೆ. ಹಾಲಿನೊಂದಿಗೆ ಸೊಪ್ಪಿನ ರಸವನ್ನು ಮಿಶ್ರಣ ಮಾಡಿ ಕಜ್ಜಿ ಮತ್ತು ಚರ್ಮ ರೋಗಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಹಾಲನ್ನು ಊದಿ ಗಾಳಿಯಲ್ಲಿ ಗುಳ್ಳೆಗಳಾಗಿ ಆಟವಾಡಲು ಉಪಯೋಗಿಸುತ್ತಾರೆ. ಹಾಲನ್ನು ಜೈವಿಕ ಇಂಧನವಾಗಿ ಉಪಯೋಗಿಸುವ ಸಂಶೋಧನೆಗಳು ನಡೆಯುತ್ತಿವೆ.