ವೈಜ್ಞಾನಿಕ ಹೆಸರು: ಕ್ಯಾಸ್ಸಿಯ ಆರಿಕ್ಯುಲೇಟ
ಕುಟುಂಬ: ಫೇಬೇಸಿ

ಇದು ನಿತ್ಯಹರಿದ್ವರ್ಣದ ಪೊದರು. ಒಣ ಹವೆಯ, ಎಲೆ ಉದುರುವ ಮತ್ತು ಕುರುಚಲು ಗಿಡಗಳ ಕಾಡುಗಳಲ್ಲಿ ಮತ್ತು ಮೈದಾನ ಪ್ರದೇಶದಲ್ಲಿ ಬೆಳೇಯುತ್ತದೆ. ಅನುಕೂಲವಾದ ಪರಿಸರದಲ್ಲಿ ಇದರ ಎತ್ತರ ೨.೫ ಮೀ. ನಷ್ಟಿರುತ್ತದೆ. ತೊಗಟೆ ಸ್ವಲ್ಪ ಕಪ್ಪಾದ ಬೂದು ಬಣ್ಣವನ್ನು ಹೊಂದಿರುತ್ತದೆ. ದ್ವಿಗರಿ ರಚನೆಯ ಸಂಯುಕ್ತ ಎಲೆಗಳನ್ನು ಹೊಂದಿದ್ದು ಹೂಗಳು ಹಳದಿ ಬಣ್ಣವಿರುತ್ತವೆ. ಫಲಗಳು ೫ ರಿಂದ ೧೩ ಸೆಂ.ಮೀ. ಉದ್ದವಿದ್ದು ೧.೫ ಸೆಂ.ಮೀ. ಅಗಲವಿರುತ್ತವೆ. ಒಣಗಿದ ಫಲ ಕಂದು ಬಣ್ಣ. ಬೀಜ ಸುಮರು ೦.೮ ಸೆಂ.ಮೀ. ಉದ್ದ, ಪುಷ್ಪಗಳು ಅಕ್ಟೋಬರ್ ನಿಂದ ಮೇವರೆಗೂ, ಫಲಗಳು ಜನವರಿಯಿಂದ ಜೂನ್‌ವರೆಗೂ ಕಾಣಿಸಿಕೊಳ್ಳುತ್ತವೆ.

ಪುನರುತ್ಪತ್ತಿ: ಇದರ ಬೀಜಗಳನ್ನು ಬಿತ್ತಿ ಗಿಡಗಳನ್ನು ಸುಲಭವಾಗಿ ಬೆಳೆಸಬಹುದು. ಅರಣ್ಯ ಇಲಾಖೆಯವರು ಕೆಲವು ಒಣ ಪ್ರದೇಶಗಳಲ್ಲಿ ಕಂದಕ ಮತ್ತು ದಿಣ್ಣೆ ಪ್ಲಾಂಟೇಶನ್‌ಗಳಲ್ಲಿ ಮಳೆಗಾಲಕ್ಕೆ ಮುಂಚೆ ಇದರ ಬೀಜಗಳನ್ನು ದಿಣ್ಣೆಗಳ ಮೇಲೆ ಬಿತ್ತಿ, ಗಿಡಗಳನ್ನು ಬೆಳೆಸುತ್ತಾರೆ. ಕಟಾವು ಮಾಡಿದ ಮೇಲೆ ಬುಡಚಿಯಿಂದ ಕಚ್ಚಿಗುರು ಹುಟ್ಟಿ ಗಿಡಗಳಾಗಿ ಬೆಳೆಯುತ್ತವೆ.

ಉಪಯೋಗಗಳು: ಇದರ ತೊಗಟೆಯನ್ನು ಚರ್ಮ ಹದ ಮಾಡಲು ಉಪಯೋಗಿಸುತ್ತಾರೆ. ಇದರ ಹೂ ಬೀಜ ಮತ್ತು ತೊಗಟೆಗಳು ಔಷಧಿಯಲ್ಲಿ ಉಪಯೋಗವಾಗುತ್ತವೆ. ತೊಗಟೆಯನ್ನು ತೆಗೆದ ಮೇಲೆ ಉಳಿಯುವ ಕಡ್ಡಿಗಳು ಪುರಲೆ ಸೌದೆಯಾಗಿ ಉಪಯೋಗವಾಗುತ್ತವೆ.

ತೊಗಟೆಯು ಅರಣ್ಯ ಇಲಾಖೆಯ ಸಣ್ಣ ಉತ್ಪನ್ನಗಳಲ್ಲಿ ಮುಖ್ಯವಾದುದು. ಇದು ನಿತ್ಯ ಹರಿದ್ವರ್ಣವಾದ ಹೊದರಾಗಿದ್ದು ಇದನ್ನು ಸುಲಭವಾಗಿ ಬೆಳೆಸಬಹುದು ಹಾಗೂ ಇದನ್ನು ಜಾನುವಾರುಗಳು ಮೇಯುವುದಿಲ್ಲ. ಇದನ್ನು ಕಡಿದ ಮೇಲೆ ಬುಡಚಿಯಿಂದ ಕಚ್ಚಿಗುರು ಗಿಡಗಳಾಗಿ ಬೆಳೆಯುತ್ತವೆ. ಈ ಕಾರಣಗಳಿಂದ ಈ ಹೊದರನ್ನು ಗಾಳಿಯ ತಡೆಯಲ್ಲಾಗಲೀ ಅಥವಾ ಆಶ್ರಯ ಪಟ್ಟೆಯಲ್ಲಾಗಲೀ ಬೆಳೆಸಬಹುದು. ಇದರ ಎಲೆಯು ಒಳ್ಳೆಯ ಹಸಿರು ಗೊಬ್ಬರ.