ವೈಜ್ಞಾನಿಕ ಹೆಸರು: ಲಾಸೋನಿಯ ಇನರ್ಮಿಸ್(Syn: ಲಾ. ಆಲ್ಬ)
ಕುಟುಂಬ: ಲಿತ್ರೇಸಿ

ಇದು ಸುಮರು ೫ ಮೀ. ವರೆಗೆ ಸ್ಥಳಕ್ಕೆ ಅನುಗುಣವಾಗಿ ದೊಡ್ಡ ಪೊದೆಯಾಗಿ ಬೆಳೆಯುತ್ತದೆ. ಅನೇಕ ಕೊಂಬೆಗಳನ್ನು ಹೊಂದಿದ್ದು ಮತ್ತು ಕೊಂಬೆಗಳ ತುದಿ ಮುಳ್ಳಿನಂತೆ ಚೂಪಾಗಿದ್ದು ನಾಲ್ಕು ಕೋನಗಳುಳ್ಳದ್ದಾಗಿರುತ್ತದೆ. ಅಭಿಮುಖ ಜೋಡಣೆಯ ದೀರ್ಘ ವೃತ್ತಾಕಾರದ ೨ ರಿಂದ ೩ ಸೆಂ.ಮೀ. ಉದ್ದ, ಸಮ ಅಂಚಿನ, ಬುಡದೆಡೆಗೆ ಕಿರಿದಾದ ಅಲಗು ಚೂಪು ತುದಿ ಹೊಂದಿದ್ದು, ಜೊತೆಗೆ ೧೦ ಜೊತೆ ಬಿಳಿ ನರಗಳನ್ನು ಹೊಂದಿರುತ್ತದೆ. ಮಿಶ್ರ ಜೋಡಣೆಯ ಮಧ್ಯಾರಂಭಿ ಹೂಗೊಂಚಲು, ಸುವಾಸನೆಯ ಬಿಳಿ ಮಿಶ್ರಿತ ಗುಲಾಬಿ ಬಣ್ಣದ ಚಿಕ್ಕ ಹೂಗಳು ಮತ್ತು ಗೋಳಾಕಾರದ ಚಿಕ್ಕ ಫಲವನ್ನು ಬಿಡುತ್ತವೆ.

ಪುನರುತ್ಪತ್ತಿ: ಬೀಜ ಮತ್ತು ಕಾಂಡದ ಚಿಣ್ಣಿಗಳಿಂದ ವಂಶಾಭಿವೃದ್ಧಿ ಮಾಡಬಹುದು. ಜಮೀನಿನ ಬದಿಗಳಲ್ಲಿ ಇದಕ್ಕೆ ಮುಳ್ಳುಗಳಿರುವುದರಿಂದ ಬೇಲಿಯಾಗಿ ಬೆಳೆಗಳ ರಕ್ಷಣೆಗೆ ಬೆಳೆಸಬಹುದು ಮತ್ತು ಆಗಾಗ್ಗೆ ಕತ್ತರಿಸಿ ಒಣಗಿಸಿ ಪುಡಿಮಾಡುವುದರಿಂದ ಬಣ್ಣವನ್ನು ಪಡೆದು ಹಣ ಗಳಿಸಬಹುದು.

ಉಪಯೋಗಗಳು: ಎಲೆಗಳನ್ನು ಅರೆದು ಚರ್ಮ, ಬಟ್ಟೆಗಳಿಗೆ, ತಲೆಗೂದಲಿಗೆ ಮತ್ತು ಹುಬ್ಬಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ಚರ್ಮರೋಗ, ಕುರು, ಸುಟ್ಟ ಗಾಯ, ಗಂಟಲಿನ ಕೆರೆತಕ್ಕೆ ಇದರ ಕಷಾಯವನ್ನು ಉಪಯೋಗಿಸುತ್ತಾರೆ. ಎಲೆಗಳ ಚರಟವನ್ನು ತಲೆನೋವು ಮತ್ತು ಪಾದಗಳ ಉರಿ ಶಮನ ಮಾಡಲು ಉಪಯೋಗಿಸುತ್ತಾರೆ. ತೊಗಟೆ ಮತ್ತು ಬೀಜಗಳನ್ನು ಅನೇಕ ಆಯುರ್ವೇದ ಔಷಧಗಳ ತಯಾರಿಕೆಗೆ ಬಳಸುತ್ತಾರೆ.