ವೈಜ್ಞಾನಿಕ ಹೆಸರು: ಪ್ಯಾಂಡೇನಸ್ಟೆಕ್ಟೋರಿಯಸ್
(Syn: ಪ್ಯಾ. ಫ್ಯಾಸಿಕ್ಯುಲೇರಿಸ್‌)
ಕುಟುಂಬ: ಪ್ಯಾಂಡೇನೇಸಿ

ಉಸುಕು ಮತ್ತು ಜೌಗುಳ್ಳ ಹಳ್ಳಕೊಳ್ಳಗಳಲ್ಲಿ ಗುಂಪು ಗುಂಪಾಗಿ ಸುತ್ತಲೂ ಕವಲೊಡೆದು ದಪ್ಪನಾದ ಕಾಂಡದ ಸುತ್ತಲೂ ಬೇರೂರಿ ೧೦ ಮೀ. ವರೆಗೆ ಎತ್ತರಕ್ಕೆ ಬೆಳೆಯುವ ದೊಡ್ಡ ಪೊದರು ಇದು. ದೊಡ್ಡ ಎಲೆಗಳು ೧ ರಿಂದ ೨ ಮೀ. ಉದ್ದವಿದ್ದು ಮಧ್ಯದಲ್ಲಿ ದಿಂಡು ಹೊಂದಿದ್ದು ಖಡ್ಗದಂತಿರುವ ಒರಟು ಎಲೆಗಳು. ಅಲಗಿನಂಚಿನಲ್ಲಿ ಅನೇಕ ಚಿಕ್ಕ ಮುಳ್ಳುಗಳನ್ನು ಉದ್ದಕ್ಕೂ ಹೊಂದಿರುತ್ತವೆ. ಎಲೆಗಳು ಕೊಂಬೆಗಳ ತುದಿಯಲ್ಲಿ ದಳದಂತೆ ಸುತ್ತುವರಿದು ಜೋಡಿಸಲ್ಪಟ್ಟಿರುತ್ತವೆ. ಹೂಗಳು ಏಕಲಿಂಗ, ತೆನೆಗಳಂತೆ ಹೂಗೊಂಚಲನ್ನು ಬೇರೆ ಬೇರೆಯಾಗಿ ಏಕಲಿಂಗ ಮರಗಳಲ್ಲಿ ಬಿಟ್ಟಿರುತ್ತವೆ. ಗಂಡು ಹೂ ತೆನೆ ಉದ್ದವಾಗಿದ್ದು ೩ ಸಾಲಿನಲ್ಲಿ ಸುವಾಸನೆಯುಳ್ಳ ೧ ಮೀ. ಉದ್ದದ ಹಳದಿ ಆಕರ್ಷಕ ಪತ್ರಗಳು ಆವೃತವಾಗಿದ್ದು, ಇದರ ಮಧ್ಯದಲ್ಲಿ ಕೇಸರ ದಂಡಗಳು ಕೂಡಿಕೊಂಡು, ಚಿಕ್ಕ ಕೇಸರ ಕೊಳವೆ ೧ ಸೆಂ.ಮೀ. ಉದ್ದ, ಬಿಳಿ ಮಿಶ್ರಿತ ಬಣ್ಣ ಹಾಗೂ ಸುವಾಸನೆಯುಳ್ಳವು. ಒಂಟಿಯಾದ ಸ್ಟೇಡಿಕ್ಸ್‌ ಹೆಣ್ಣು ಹೂ ಗೊಂಚಲು ೭-೮ ಸೆಂ.ಮೀ. ವ್ಯಾಸ, ೪-೧೦ ಕಾರ್ಪೆಲ್ಲುಗಳಿದ್ದು ೭.೫ ಸೆಂ.ಮೀ. ಉದ್ದವಿರುತವೆ. ಬಲಿತಾಗ ಅನಾನಸ್ಸಿನಂತಹ ಸಂಯುಕ್ತ ಫಲ ಬಿಡುತ್ತವೆ ಹಾಗೂ ಅವು ಮುಳ್ಳು ಹೊಂದಿದ್ದು, ೯ ಸೆಂ.ಮೀ.-೨೫ ಸೆಂ.ಮೀ. ಉದ್ದವಿರುತ್ತವೆ. ಅವುಗಳ ತುದಿ ದುಂಡಾಗಿದ್ದು, ತುದಿಯಲ್ಲಿ ತಗ್ಗಾಗಿರುತ್ತದೆ ಮತ್ತು ಬಲಿತಾಗ ಹಳದಿ ಅಥವಾ ಕೆಂಪಾಗಿರುತ್ತದೆ.

ಪುನರುತ್ಪತ್ತಿ: ಸಸ್ಯದ ಪುನರುತ್ಪತ್ತಿಯನ್ನು ತೇವವುಳ್ಳ ಸ್ಥಳಗಳಲ್ಲಿ ಕೊನೆಗಳನ್ನು ನೆಡುವುದರಿಂದ, ಬೇರೆಯಾಗಿ ಅಥವಾ ನೀರಿನ ದಂಡೆಗಳಲ್ಲಿ ಬೆಳೆಸುವುದರಿಂದ ಅಭಿವೃದ್ಧಿಪಡಿಸಬಹುದು.

ಉಪಯೋಗಗಳು: ಸುವಾಸನೆಯ ಪುಷ್ಪ ಪತ್ರಕಗಳನ್ನು ಬಾಷ್ಪೀಕರಿಸಿ ‘ಕಿವಡಾ’ ಸುಗಂಧ ತೈಲವನ್ನು ಪಡೆಯುತ್ತಾರೆ . ಈ ತೈಲವನ್ನು ಅತ್ತರು, ಸುಗಂಧ ತೈಲಗಳಲ್ಲಿ, ಸಾಬೂನು ತಯಾರಿಕೆಯಲ್ಲಿ, ಕೆಲ ಕೇಶಾಲಂಕಾರಕಗಳನ್ನು ಸುವಾಸನೆಗೊಳಿಸಲು ಉಪಯೋಗಿಸುತ್ತಾರೆ. ಪುಷ್ಪ ಪತ್ರಕಗಳನ್ನು ಪೂಜೆಗೆ, ಹೆಂಗಸರು ಮುಡಿದುಕೊಳ್ಳಲು ಉಪಯೋಗಿಸುತ್ತಾರೆ. ಎಲೆಗಳನ್ನು ಚಾಪೆ, ಸಕ್ಕರೆ, ಚೀಲ, ಕುಂಚವಾಗಿ ಮತ್ತು ಟೋಪಿಗಳನ್ನು ತಯಾರಿಸುತ್ತಾರೆ. ಎಳೆಯ  ಕಾಯನ್ನು ತರಕಾರಿಯಾಗಿ ಬಳಸುತ್ತಾರೆ. ಎಲೆಗಳು ಖಾರವಾಗಿರುವುದರಿಂದ, ಕುಷ್ಠರೋಗ ಮತ್ತು ಕೆಲವು ಅಂಟು ರೋಗಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ನಿದ್ರಾಜನಕವಾಗಿ ಮತ್ತು ಕಫದ ನಿವಾರಣೆಗೆ ಉಪಯೋಗಿಸುತ್ತಾರೆ. ಪತ್ರದ ತೈಲವನ್ನು ಪಾಂಡು ರೋಗ, ಹೃದ್ರೋಗ, ಮೆದುಳು ರೋಗ ಮತ್ತು ತಂಪಿಗೆ ಉಪಯೋಗಿಸುತ್ತಾರೆ. ಪತ್ರಕದ ತೈಲವನ್ನು ಸ್ನಾಯು ಸೆಳೆತ, ತಲೆ ನೋವು, ನರಗಳ ದೌರ್ಬಲ್ಯತೆ ಹೋಗಲಾಡಿಸಲು ಉಪಯೋಗಿಸುತ್ತಾರೆ. ಬೇರಿನ ತೈಲವನ್ನು ಕೆಲವು ಔಷಧಿಯುಕ್ತ ಎಣ್ಣೆಗಳಲ್ಲಿ ಉಪಯೋಗಿಸುತ್ತಾರೆ.