ವೈಜ್ಞಾನಿಕ ಹೆಸರು: ಡೆಂಡ್ರೋಕ್ಯಲಾಮಸ್ಸ್ಟ್ರಿಕ್ಟಸ್
ಕುಟುಂಬ: ಪೋಯೇಸಿ

ಇದು ದಟ್ಟವಾಗಿ ಅತಿ ಹೆಚ್ಚು ಗಳುವುಳ್ಳ ಗುಮ್ಮಿಯಾಗಿ, ಗಿಣ್ಣಿನಂತರದಲ್ಲಿ ಕಾಂಡದಲ್ಲಿ ಟೊಳ್ಳು ರಹಿತವಾಗಿ ಬೆಳೆಯುತ್ತದೆ. ಆಯಾ ಸ್ಥಳಕ್ಕೆ ಅನುಗುಣವಾಗಿ ೬ ಮೀ. ನಿಂದ ೧೬ ಮೀ. ಎತ್ತರದವರೆಗೆ ಹಾಗೂ ೩೦ ಸೆಂ.ಮೀ. ದಪ್ಪವಾಗಿ ಬೆಳೆಯುತ್ತದೆ. ಖುಷ್ಕಿಯಲ್ಲಿ ಬೆಳೆದ ಗಳುಗಳಲ್ಲಿ ಟೊಳ್ಳು ಕಡಿಮೆ ಮತ್ತು ತೇವದ ಸ್ಥಳಗಳಲ್ಲಿ ಸ್ವಲ್ಪ ಟೊಳ್ಳು ಕಂಡುಬರುತ್ತದೆ. ಎಲೆಗಳಲ್ಲಿ ಕವಚ ಮತ್ತು ಅಲಗು ಹುಲ್ಲುಗಳಂತೆಯೇ ಇರುತ್ತವೆ ಮತ್ತು ಮುಳ್ಳುಗಳಿರುವುದಿಲ್ಲ. ವಿಶೇಷವಾಗಿ ಇದರಲ್ಲಿ ಒಂದು ಗಳವು ಎಲೆಗಳು ಇಲ್ಲದೆ ಅತಿ ಎತ್ತರಕ್ಕೆ ಬೆಳೆದಿರುತ್ತದೆ. ಹೂ ಗೊಂಚಲು ದೀರ್ಘ ಕಾಲದ ನಂತರ ಒಮ್ಮೆ ಬೆಳೆದು ಬೀಜೋತ್ಪತ್ತಿಯಾದ ನಂತರ ಗುಮ್ಮಿ ಸತ್ತು ಒಣಗಿ ಹೋಗುತ್ತದೆ.

ಪುನರುತ್ಪತ್ತಿ: ನೈಸರ್ಗಿಕವಾಗಿ ಬೀಜೋತ್ಪತ್ತಿಯಾಗಿ ಉದುರಿದ ಬೀಜಗಳಿಂದ ಮಳೆಗಾಲದಲ್ಲಿ ಸಸಿಗಳು ಉತ್ಪತ್ತಿಯಾಗುತ್ತವೆ. ಆದರೆ ಬೆಂಕಿ ಮತ್ತು ವನ್ಯಜೀವಿ ಮೇಯುವಿಕೆಯಿಂದ ಈ ಸಸಿಗಳು ಹಾಳಾಗುವುದು ಉಂಟು.

ಬೀಜಗಳಿಂದ ಸಸಿ ಬೆಳೆಸುವುದರಿಂದ ಗುಪ್ತ ಕಾಂಡ, ಮೋಸುಗಳಿಂದ ಮತ್ತು ಕಾಂಡದ ಚಿಣ್ಣಿಗಳಿಂದ ಬೇರೂರಿಸಿ ನೆಡುವುದರಿಂದ ಸಂತಾನಾಭಿವೃದ್ಧಿ ಮಾಡಬಹುದು. ಬೀಜಗಳನ್ನು ಮಡಿಗಳಲ್ಲಿ ಬಿತ್ತಿ ಸಸಿಗಳನ್ನು ಕಿತ್ತು ನೇರವಾಗಿ ಬೆಳೆಸಬೇಕಾದ ಸ್ಥಳದಲ್ಲಿ ಅಥವಾ ಪಾಲಿಥೀನ್‌ ಚೀಲಗಳಲ್ಲಿ ನೆಟ್ಟು ಬೆಳೆಸಬಹುದು. ೧-೨ ವರ್ಷ ಹಳೆಯ ಗುಮ್ಮಿಗಳಿಂದ ಮೋಸುಗಳನ್ನು ಸಂಗ್ರಹಿಸಿ ನೆಡಬಹುದು. ಬೇರಿನೊಂದಿಗೆ ಸಂಗ್ರಹಿಸಿದ ಮೋಸುಗಳನ್ನು ಮಡಿಗಳಲ್ಲಿ ಒಂದು ಅಥವಾ ಎರಡು ಗಿಣ್ಣುಗಳಿರುವಂತೆ ನೋಡಿ ನೆಡುವುದರಿಂದ ಒಳ್ಳೆಯ ಫಲಿತಾಂಶ ಕಂಡು ಬಂದಿದೆ. ಬೀಜಗಳನ್ನು ಮಡಿ ಅಥವಾ ಪಾಲಿ ಚೀಲಗಳಲ್ಲಿ ೫-೬ ತಿಂಗಳವರೆಗೆ ಬೆಳೆಸಿ ನಂತರ ನೆಡುತೋಪಿನಲ್ಲಿ ನೆಡಬಹುದಾಗಿದೆ.

ಉಪಯೋಗಗಳು: ಮೂರು ವರ್ಷದ ಆವರ್ತ ಪದ್ಧತಿಯಲ್ಲಿ ಪ್ರತಿಯೊಂದು ಗುಮ್ಮಿಯಿಂದ ಬಲಿತ ಗಳುಗಳನ್ನು ಅಂದರೆ ಪ್ರತಿ ಗುಮ್ಮಿಯಲ್ಲಿ ೫-೧೫ ಗಳುಗಳನ್ನು ತೆಗೆಯಬಹುದು. ಒಂದು ಹೆಕ್ಟೇರ್ ನಲ್ಲಿ ೧೫೦೦ ರಿಂದ ೨೦೦೦ ಗಳುಗಳನ್ನು ಪಡೆಯಬಹುದು. ಕಾಗದ ತಯಾರಿಕೆ, ಗುಡಿ ಕೈಗಾರಿಕೆ, ಗಣಿತ ಸಲಕರಣೆ, ಕೃಷಿ ಉಪಕರಣ, ತಟ್ಟಿ, ರೇಷ್ಮೆ, ಸಾಕಾಣಿಕೆ, ಜರಡಿ, ಚಾಪೆ, ಗೂಟ, ಗುಡಾಣ, ಚೌಕಟ್ಟುಗಳಿಗೆ ಮತ್ತು ಪ್ಲೈವುಡ್‌ ಮೇಲು ಪದರ, ಗುಡಿಸಲು ಛಾವಣಿ, ಮಣ್ಣಿನ ಗೋಡೆಗಳಿಗೆ ಇತ್ಯಾದಿ ಅನೇಕ ಉಪಯೋಗಗಳಿಗೆ ಬಳಕೆಯಾಗುತ್ತದೆ. ಜಮೀನು ಬದಿಗೆ ಬೇಲಿಯಾಗಿ ಮತ್ತು ಹಳ್ಳಕೊಳ್ಳಗಳಲ್ಲಿ ನೆಟ್ಟಾಗ ಮಣ್ಣಿನ ಸವಕಳಿ ಮತ್ತು ನದಿಗಳಿಂದ ನೇರ ಹಾವಳಿಗೆ ರಕ್ಷಣೆಯಾಗುತ್ತದೆ.