ವೈಜ್ಞಾನಿಕ ಹೆಸರು: ಬ್ಯಾಂಬೂಸ ಅರುಂಡಿನೇಸಿ
ಕುಟುಂಬ: ಪೋಯೇಸಿ

ಇದರ ಗುಮ್ಮಿಯಲ್ಲಿ ದೊಡ್ಡ , ದಪ್ಪ ಹಸಿರು ಬಣ್ಣದ, ೧೦-೩೦ ಮೀ. ಅಥವಾ ಅದಕ್ಕೂ ಹೆಚ್ಚು ಎತ್ತರವಿರುವ ಗಳುಗಳಿರುತ್ತವೆ. ಗಳುಗಳ ಗಿಣ್ಣಿನಲ್ಲಿ ಅನೇಕ ಚಿಕ್ಕ ಕವಲುಗಳಲ್ಲಿ ೩ ಸಂಖ್ಯೆಯಲ್ಲಿ ಮೊನಚಾದ ಮುಳ್ಳುಗಳಿರುತ್ತವೆ. ಗಳುಗಳು ಗಿಣ್ಣುಗಳಲ್ಲಿ ಹೆಚ್ಚು  ಟೊಳ್ಳಾಗಿರುವುದು ಕಂಡು ಬರುತ್ತದೆ. ಎಲೆಗಳು ಹುಲ್ಲಿನಂತೆ ಇರುತ್ತವೆ. ಸಂತಾನೋತ್ಪತ್ತಿ ದೀರ್ಘಕಾಲದ ನಂತರ ಆಗುತ್ತದೆ. ಫಲೋತ್ಪತ್ತಿಯಾದ ಮೇಲೆ ಗುಮ್ಮಿಗಳು ಸತ್ತು ಒಣಗಿ ಹೋಗುತ್ತವೆ.

ಪುನರುತ್ಪತ್ತಿ: ಬೀಜಗಳಿಂದ ಮತ್ತು ಕಾಂಡದಿಂದ ಉತ್ಪತ್ತಿಯಾದ ಮೋಸುಗಳಿಂದ ಸಂತಾನಾಭಿವೃದ್ಧಿಯಾಗುತ್ತದೆ. ಹಳೆಯ ಗುಮ್ಮಿಯ ಗುಪ್ತಕಾಂಡ ಬೇರ್ಪಡಿಸಿ ಬೇರೆ ಕಡೆ ನೆಡಬಹುದು. ಹಾಗೆಯೇ ಬೀಜ ಬಿತ್ತಿ ಸಸಿ ಕವಲೊಡೆದ ಮೋಸುಗಳನ್ನು ಬೇರ್ಪಡಿಸಿ ಸಂತಾನಾಭಿವೃದ್ಧಿ ಮಾಡಬಹುದು. ಒಂದು ವರ್ಷದ ಬಿದಿರಿನ ಕಾಂಡದ ಮೋಸುಗಳನ್ನು ಭೂಮಟ್ಟಕ್ಕೆ ೩ ರಿಂದ ೪ ಅಡಿ ಬಿಟ್ಟು ಕತ್ತರಿಸಿ, ಗುಪ್ತ ಕಾಂಡವನ್ನು ಅಗೆದು ಬೇರಿನೊಂದಿಗೆ ಮೊಗ್ಗುಳ್ಳ ಚಿಣ್ಣೆಗಳನ್ನು ಕತ್ತರಿಸಬೇಕು. ಈ ಚಿಣ್ಣೆಗಳನ್ನು ೨ ರಿಂದ ೩ ಹೆಣ್ಣುಗಳು ಇರುವಂತೆ ನೋಡಿ ಮಳೆಗಾಲದಲ್ಲಿ ನೆಡಬೇಕು. ಇದರ ಜೊತೆಗೆ ಬೇರಿಲ್ಲದ ಕಾಂಡಗಳ ಚಿಣ್ಣೆಗಳನ್ನು ಕತ್ತರಿಸಿ ನೆಟ್ಟಾಗ ಬೇರು ಸಸ್ಯ ಉತ್ಪತ್ತಿಯಾಗುತ್ತದೆ. ಗಿಣ್ಣುಗಳ ಮಧ್ಯದಲ್ಲಿ ಕೆತ್ತಿ ಒಂದು ತೂತು ಮಾಡಿದಲ್ಲಿ ನೀರು ಒಳ ಹೋಗಿ ಗಿಣ್ಣು ಚಿಗುರಲು ಸಹಾಯಕವಾಗುತ್ತದೆ. ಗುಮ್ಮಿಯಿಂದ ಗುಮ್ಮಿಗೆ ೧೦ ಮೀ. ಅಂತರ ಕೊಡುವುದು ಸೂಕ್ತ.

ಉಪಯೋಗಗಳು: ಇದೂ ಸಹ ಕಿರು ಬಿದಿರಿನಂಥೆಯೇ ಉಪಯುಕ್ತ. ಕ್ಷಾಮ ಕಾಲದಲ್ಲಿ ಇದರ ಅಕ್ಕಿಯಿಂದ ಅನ್ನ ಮಾಡುತ್ತಾರೆ ಮತ್ತು ಬುಡಕಟ್ಟು ಜನರು ಇದನ್ನು ಸದಾ ಉಪಯೋಗಿಸುತ್ತಾರೆ. ಬೇಲಿಯಾಗಿ ಜಮೀನಿನ ಸುತ್ತಲೂ ಹಾಗೂ ಬೇಲಿಯಾಗಿ ಹಳ್ಳಕೊಳ್ಳ ಮತ್ತು ನದಿ ದಂಡೆಗಳಲ್ಲಿ ಸಹ ಪ್ರವಾಹ ತಡೆಯಲು ಬೆಳೆಸಬಹುದು.