ಆಕಾಶದಲ್ಲಿ ಮಿನುಗುವ ತಾರೆಗಳಂತೆ ಲಂಬಾಣಿ ಬುಡಕಟ್ಟು ಭಾರತೀಯ ಜನಜೀವನದಲ್ಲಿ ಎದ್ದು ಕಾಣುವುದು.

[1] ಈ ಬುಡಕಟ್ಟು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿಕೊಂಡಿದ್ದರೂ ತಮ್ಮ ಉಡುಗೆ-ತೊಡುಗೆಗಳಲ್ಲಿ ಇತರರಿಗಿಂತ ಪ್ರತ್ಯೇಕವಾಗಿ ಎದ್ದು ಕಾಣುವುದು. ಈ ಬುಡಕಟ್ಟನ್ನು ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಭಿನ್ನ ಭಿನ್ನ ಹೆಸರುಗಳಿಂದ ಕರೆಯುತ್ತಾರೆ.[2]

ಚಮನ್‌ಲಾಲರವರು ತಾವು ಬರೆದ “ಜಿಪ್ಸಿಸ್” ಎಂಬ ಪುಸ್ತಕದ ಮುನ್ನುಡಿಯಲ್ಲಿ ಹೇಳುವಂತೆ ಯುರೋಪ ಮತ್ತು ಅಮೇರಿಕಾದ ಅಲೆಮಾರಿಗಳಾದ ಜಿಪ್ಸಿಗಳ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿದೆ, ಆದರೆ ನನಗೆ ಆಶ್ಚರ್ಯ ಆಗುವುದೆಂದರೆ ಅವರೆಲ್ಲ ನಮ್ಮ ಸ್ವಂತ ಸಂಬಂಧಿಕರೆನ್ನುವುದು ಎಷ್ಟು ಜನರಿಗೆ ತಿಳಿದಿದೆ. ಇವರು ಪಂಜಾಬ, ಸಿಂಧ, ಸೌರಾಷ್ಟ್ರ, ರಜಪುತ ಮತ್ತು ಮಾಳವಾ ಮುಂತಾದವುಗಳ ಆರ್ಯನ್ ಕುಟುಂಬಗಳಿಂದ ಬಂದವರಾಗಿದ್ದಾರೆ. ಅವರು ಇಜಿಪ್ತಿಯನ್‌ರಲ್ಲ. ಒಟ್ಟಿನಲ್ಲಿ ಅವರಲ್ಲಿ ಹರಿಯುವುದು ಭಾರತೀಯ ರಕ್ತ. ಅವರು ಭಾರತೀಯ ಪದಗಳನ್ನೇ ಬಳಸುತ್ತ ಬಂದಿದ್ದಾರೆ. “ನನ್ನನ್ನು ಶುಭಕೋರುವ ಸಂದರ್ಭದಲ್ಲಿ” ಅವರು ಹೀಗೆ ಹೇಳಿದರು, “ನೀವು ಮತ್ತು ನಾವು ಒಂದೇ ರಕ್ತ” ಹೊಂದಿದ್ದೇವೆ.[3] ಒಟ್ಟಿನಲ್ಲಿ ಇದರಿಂದ ಸ್ಪಷ್ಟವಾಗುವುದೇನೆಂದರೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಜಿಪ್ಸಿಗಳು ಭಾರತೀಯ ಮೂಲದವರು, ಬಂಜಾರಗಳು ಜಿಪ್ಸಿಗಳ ಮೂಲದವರೆಂಬುದು ಕಂಡು ಬರುತ್ತದೆ.

ರಾಜಸ್ಥಾನವೇ ಲಂಬಾಣಿಗರ ಮೂಲಸ್ಥಾನವೆಂದು ಅನೇಕ ಜನ ಸಂಶೋಧಕರು ಸಾಬೀತುಪಡಿಸಿದ್ದಾರೆ. ಕರ್ನಲ್ ಮೆಕಂಝಿಯವರು “ಬಂಜಾರಾ ರಾಜಾಸ್ಥಾನದ ಮೂಲನಿವಾಸಿಗಳಾಗಿದ್ದು, ವ್ಯಾಪಾರದ ಉದ್ದೇಶದಿಂದಾಗಿ ಸಾಮಾನು ಸರಕುಗಳನ್ನು ಹೇರಿಕೊಂಡು ದೂರದ ಪ್ರದೇಶಗಳಿಗೆ ಹೋಗುತ್ತಿದ್ದರು. ರಾಜಪುತಾಣವೇ ಇವರ ಮೂಲಸ್ಥಾನವಾಗಿದೆ.[4] ಎಂದು ಅಭಿಪ್ರಾಯಪಡುತ್ತಾರೆ.

ಬಂಜಾರಾಗಳ ಮೂಲವನ್ನು ಕುರಿತು ಜಿ.ಎ. ಗ್ರಿಯರ್ಸ್‌‌ನ್ ಅವರು “Linguistic survey of India” ಗ್ರಂಥದಲ್ಲಿ “Banjara are originally Dravidian, becoming aryanzed of a Comparatively early date and philogical considerations point to the that accured somewhere in Rajaputana”[5] ಎಂದು ಬಂಜಾರಾಗಳ ಮೂಲವನ್ನು ದ್ರಾವಿಡರಲ್ಲಿ ಕಂಡುಕೊಂಡಿದ್ದಾರೆ. ದ್ರಾವಿಡರಾದ ಇವರು ತದನಂತರದಲ್ಲಿ ಆರ್ಯರಾಗಿ, ರಾಜಸ್ಥಾನದಲ್ಲಿ ರಜಪೂತರಾದರೆಂದು ಅಭಿಪ್ರಾಯ ಹೊಂದಿದ್ದಾರೆ. ಇದೇ ಅಭಿಪ್ರಾಯ ಬರುವಂತೆ ಇತಿಹಾಸ ತಜ್ಞರಾದ ವ್ಯಾಟ್‌ಸನ್ ಅವರು ರಜಪೂತರು ಅನಾರ್ಯರಾಗಿದ್ದು, ಯುದ್ಧವೀರರಾಗಿದ್ದು, ಅವರನ್ನು ಸೂರ್ಯ ಮತ್ತು ಚಂದ್ರರ ವಂಶದವರೆಂದು ಗುರುತಿಸಲಾಗುತ್ತಿತ್ತು ಎಂದಿದ್ದಾರೆ.

ಲಂಬಾಣಿಗರು ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಸುಮಾರು ೪೦೦ ವರ್ಷಗಳ ಹಿಂದೆ ಮೊಘಲರ ಸೇನೆಯ ಜೊತೆಯಲ್ಲಿ ತಮ್ಮ ಅಸಂಖ್ಯಾತ ದನಕರುಗಳ ಮೇಲೆ ಆಹಾರ ಖ್ಯಾದ ಪದಾರ್ಥಗಳನ್ನು ಹೇರಿಕೊಂಡು ಬಹುದೂರದ ಪ್ರದೇಶಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಮೊಘಲರ ಸೇನೆಗಳಿಗೆ ಆಹಾರ ಸರಬರಾಜ ಮಾಡುವ ಹೊಣೆ ಹೊತ್ತರು. ರಜಪೂತರ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ಭಾರತೀಯ ಸೈನಿಕರಾಗಿ ತಮ್ಮ ಸರ್ವಸ್ವ ತ್ಯಾಗ ಬಲಿದಾನ ಮಾಡಿದ್ದಾರೆಂದು ಅವರಲ್ಲಿ ಪ್ರಚಲಿತವಿರುವ ಕಥೆ ಗೀತೆಗಳ”[6] ಮುಖಾಂತರ ತಿಳಿದುಬರುತ್ತದೆ.

ಲಂಬಾಣಿಗರು ಬಹಳ ಕಾಲದವರೆಗೆ ಅಲೆಮಾರಿಗಳಾಗಿದ್ದು, ಇವರು ಮುಂದೆ ಭಾರತದ ತುಂಬ ಹರಡಿಕೊಂಡರು. ಹಲವಾರು ರೀತಿಯಿಂದ ಮತ್ತು ಉಡುಗೆ ತೊಡುಗೆಗಳ ದೃಷ್ಟಿಯಿಂದ ತುಂಬಾ ವಿಶಿಷ್ಟವಾಗಿದ್ದಾರೆ. ಆಕರ್ಷಕ ಬಣ್ಣಗಳಿಂದ ತುಂಬಿದ ವಿವಿಧ ಉಡುಗೆಗಳ ರೂಪಣದಲ್ಲಿ ಅವರು ಬಳಸುವ ಕಂಚು ಕನ್ನಡಿ ಅವುಗಳನ್ನು ತಮ್ಮ ಉಡುಗೆಗಳಿಗೆ ಹಣೆಯುವಾಗ ಅವರು ತೋರುವ ಕುಸುರಿನ ಕೆಲಸ, ತೊಡುಗೆಗಳಲ್ಲಿ ಬಳಸುವ ವಸ್ತ್ರವಿನ್ಯಾಸ, ಅಂದರೆ ಬೆಳ್ಳಿ ಬಂಗಾರದಿಂದ ಹಿಡಿದು ತಾಮ್ರ ಹಿತ್ತಾಳೆಯವರೆಗೆ, ಕಾಜಿನ ಬಿಲ್ಲೆಗಳಿಂದ ಹಿಡಿದು ಮಿಶ್ರಧಾತು ಪಾವಲಾ (ನಾಣ್ಯ)ಗಳವರೆಗೆ, ಕವಡೆಗಳಿಂದ ಹಿಡಿದು ಉಣ್ಣೆಯ ಝಾಂಡಿ ಗೊಂಡೆಗಳವರೆಗೆ ಹೀಗೆ ಇವರ ಪ್ರತಿಯೊಂದು ವಸ್ತುವು ಪ್ರತ್ಯೇಕ ಗುಣಲಕ್ಷಣಗಳನ್ನು ಹೊಂದಿದ್ದು, ಇತರ ಯಾವುದೇ ಜನಪದ ಗುಂಪುಗಳಿಗಿರದಂಥ ವಿಶಿಷ್ಟ ಜಾಣ್ಮೆ ಮತ್ತು ಕುಶಲ ಕಲೆ ಇವರ ವೇಷಭೂಷಣಕ್ಕೆ ಇದೆ. ಈ ದೃಷ್ಟಿಯಿಂದ ಲಂಬಾಣಿಗರ ಉಡುಗೆ ತೊಡುಗೆಗಳು ಅತ್ಯಂತ ಚಿತ್ತಾಕರ್ಷಕವಾಗಿದ್ದು, ಮೇಲುನೋಟಕ್ಕೆ ಇದು ಲಂಬಾಣಿಗರ ವೇಷ ಎಂದು ಹೇಳುವಷ್ಟು ರಮಣೀಯವಾಗಿರುತ್ತದೆ.”[7] ಈ ಉಡುಗೆ ತೊಡುಗೆಗಳೆಂದರೆ ವಯೋಮಾನಕ್ಕನುಗುಣವಾಗಿ ಕಂಡುಬರುವ ಹಲವಾರು ನಮೂನೆ ಮಾದರಿಗಳು. ಇಲ್ಲಿ ಉಡುಗೆ ತೊಡುಗೆಗಳೆಂದರೆ ವಿಶೇಷವಾಗಿ ಬಾಲಿಕೆಯರು ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ಭಾವಿಸುವುದು ಹೆಚ್ಚು ಸೂಕ್ತ. ಲಂಬಾಣಿ ಪುರುಷರ ವೇಷಭೂಷಣಗಳಲ್ಲಿ ತಲೆಗೆ ಸುತ್ತುವ ಪೇಟಾ ಒಂದನ್ನು ಬಿಟ್ಟರೆ ಅದರ ಬಗೆಗೂ ಒಂದೆರಡು ಮಾತುಗಳನ್ನು ಹೇಳಲಾಗಿದೆ.

ಲಂಬಾಣಿ ಹೆಂಗಸರು ಉಡುವ ಬಟ್ಟೆಗಳು ನೋಡುವವರಿಗೆ ರಂಜನಿಯ ಮತ್ತು ಚಿತ್ತಾಕರ್ಷಕವಾಗಿರುತ್ತವೆ. ಈ ವಸ್ತ್ರ ವಿನ್ಯಾಸಗಳು ಸಂದರ್ಭದ ಹಿನ್ನೆಲೆಯನ್ನು ಪಡೆದುಕೊಂಡಿದೆ. ಪೂರ್ವದಲ್ಲಿ ಮದುವೆಯ ಸಂದರ್ಭದಲ್ಲಿ ಉಡಿಸುತ್ತಿದ್ದ ಹಳದಿ ಸೀರೆಯನ್ನು ಕತ್ತರಿಸಿ ಮದುವೆ ಮುಗಿದ ಬಳಿಕ ಅದರಿಂದ ಮೊಣಕಾಲದವರೆಗೆ ಲಂಗ(ಬಾಳಿಯಾ ಫೇಟಿಯಾ) ಮತ್ತು ಪಿತಾಂಬರ ಕುಪ್ಪಸ(ಮಕಮಲ್ ಕಾಂಚಳಿ) ಸಿದ್ಧಪಡಿಸಿ ಉಡಲು ಕೊಡುತ್ತಿದ್ದರಂತೆ. ಮುಂದೆ ಅವು ಹರಿದ ಬಳಿಕ ಘೇರಲಾ (ದಪ್ಪ, ಕರಿ) ಬಟ್ಟೆಯಿಂದ ಉಡುಪು ತಯಾರಿಸಿ ಕೊಡುತ್ತಿದ್ದರಂತೆ. ಕಾಲಾಂತರದಲ್ಲಿ ಹಳೆಯ ಬಟ್ಟೆಗಳ ವಿನ್ಯಾಸವನ್ನು ಪರಿವರ್ತಿಸಿ ಹೊಸದಾಗಿ ತಯಾರಿಸಿ ಉಟ್ಟುಕೊಂಡರೆಂದು ನಮ್ಮ ತಾಯಿ ಶ್ರೀಮತಿ ಘಮಣಾಬಾಯಿ ಅವರು ಹೇಳುತ್ತಾರೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಉತ್ತರ ಭಾರತದವರಾದ ಲಂಬಾಣಿಗರು, ಅಲ್ಲಿಯ ಬೇರೆ ಬೇರೆ ವರ್ಗಗಳಾದ, ಉದಾಹರಣೆಗೆ-ಜಾಟ್, ಗರಾಸಿಯ ಅಥವಾ ಖರಾಸಿಯ, ದಾಸಿ, ತಾಜಟ್, ರೋರ್ ಮುಂತಾದ ವರ್ಗದ ಸಾಂಪ್ರದಾಯಿಕ ಉಡುಪು ಲಂಬಾಣಿಗಳ ಮೇಲೆ ಆಗಿರುವ ಸಾಧ್ಯತೆ ಇದೆ. ಲಂಬಾಣಿಗರು ಬಳಸುವ “ಖಲಣಿ” ಅಥವಾ “ಖಿಲಣ” ಎಂಬ ಪದವು ಕನ್ನಡದ “ಕಸೂತಿ” ಪದಕ್ಕೆ ಸಮಾನಾರ್ಥವಾದದ್ದು.

ಪ್ರಾಚೀನ ಕಾಲದಿಂದಲೂ ತಮ್ಮ ವೇಷಭೂಷಣಗಳು ಹೇಗೆ ಬೆಳೆದು ಬಂದಿವೆ ಎಂಬುದಕ್ಕೆ ಲಂಬಾಣಿಗಳು ದಂತಕಥೆ ಐತಿಹ್ಯವನ್ನು ಸ್ವಾರಸ್ಯವಾಗಿ ಹೇಳುತ್ತಾರೆ. ಉದಾಹರಣೆಗೆ ಈ ಕೆಳಗಿನ ಐತಿಹ್ಯ ನೋಡಬಹುದು.

ಐತಿಹ್ಯ ಒಂದು : “ಯುದ್ಧ ವೀರರಾದ ಲಂಬಾಣಿಗರ ಪೂರ್ವಜರಲ್ಲೊಬ್ಬನು ಯುದ್ಧಕ್ಕೆಂದು ಧಾವಿಸಿ ಹೋಗಿ ಹೋರಾಟದಲ್ಲಿ ಇದ್ದಕ್ಕಿದ್ದಂತೆ ಅಕಾಲ ಮೃತ್ಯುವನ್ನು ಹೊಂದಿದ ವಾರ್ತೆಯನ್ನು ತಿಳಿದು, ತನ್ನ ಪೋಷಾಕುಗಳನ್ನು ಕಲಾತ್ಮಕವಾಗಿ ಕಸೂತಿ ಕೆಲಸದಿಂದ ಸಿದ್ಧಪಡಿಸಿಕೊಳ್ಳುತ್ತಿದ್ದ ಅವರ ಸತಿ “ಚಿತೆ” ಏರಿದ ಸಂಗತಿ ಅತ್ಯಂತ ರೋಚಕವಾಗಿದೆ. ಅನಾಗರಿಕತೆಯಿಂದ ನಾಗರಿಕತೆಯ ಹೊಸ್ತಿಲಲ್ಲಿ ಕಾಲಿಡುತ್ತಿರುವ ಆ ಸಮಯದಲ್ಲಿ ಈ ವೀರಶಿರೋಮಣಿಯು ಬಿಟ್ಟು ಹೋದ ಅಪೂರ್ಣ ಬಟ್ಟೆಗಳನ್ನು ಮುಂದಿನ ಪೀಳಿಗೆಯವರು ಕೈಗೆತ್ತಿಕೊಂಡು ಪೂರ್ಣ ಬಟ್ಟೆಗಳೆಂದೇ ಧರಿಸಿಕೊಂಡರು. ಕಾರಣ ಇಂದು ಲಂಬಾಣಿಗರು ಧರಿಸುವ ಲಂಗ (ಫೇಟಿಯಾ) ಹಾಗೂ ಕುಪ್ಪಸ (ಕಾಂಚಳಿ) ಇವೆರಡೂ ಕಾಲುಭಾಗ ಹೊಲಿಯದೆ ಹಾಗೆಯೇ ಬಿಟ್ಟಿರುತ್ತಾರೆ. ಕುಪ್ಪಸವು ಕೂಡ ಕೇವಲ ಎದೆ ಮುಚ್ಚುವ ಬೆನ್ನು ಸಂಪೂರ್ಣವಾಗಿ ಕಾಣುವ ಅಪೂರ್ಣ ಪೋಷಾಕು. ಇನ್ನು “ಛಾಂಟಿಯಾ” ಎನ್ನುವ ಮೇಲ್ಮುಸುಕು ಪ್ರಾಯಶಃ ಮೊದ ಮೊದಲು ಇದ್ದಂತಿಲ್ಲ. ಮೇಲಿನ ಎರಡೂ ಅಪೂರ್ಣ ಪೋಷಾಕುಗಳನ್ನು ಮುಚ್ಚಿಕೊಂಡು ಅನಂತರದಲ್ಲಿ ಮಾಡಿಕೊಂಡರೆಂದು ಕಾಣಿಸುತ್ತದೆ.”[8]

ಐತಿಹ್ಯ ಎರಡು : ಈಗಿರುವ ಹೈದರಾಬಾದ ನಗರ ಮೊದಲು ಭಾಗಾನಗರ ಅಥವಾ ಭಾಗ್ಯನಗರ ಎಂದು ಕರೆಯುತ್ತಿದ್ದರಂತೆ. ಹೈದರಾಬಾದ ರಾಜ್ಯವನ್ನು ೧೫೮೯ರಲ್ಲಿ “ಮಹಮ್ಮದ ಕೂಲಿ ಕುತಬ್‌ಶಾಹಿ” ಮನೆತನದ ವ್ಯಕ್ತಿ ಈತ ಗೋಲಕೊಂಡಾ ಕೋಟೆಯಲ್ಲಿ ಇದ್ದುಕೊಂಡು ಮೂಸಾನದಿ ದಂಸೆಯ ಆಚೆ ಈಚೆ ಹೈದರಾಬಾದ ರಾಜ್ಯವನ್ನು ಸ್ಥಾಪಿಸಿ ಆಳಿದ. “ಮಹಮ್ಮದ ಕೂಲಿ ಕುತುಬ್‌ಷಾಹಿ” ಲಂಬಾಣಿ ಯುವತಿಯಾದ ಭಾಗಾಮತಿಯ ನಿರಾಡಂಬರ ಸೌಂದರ್ಯಕ್ಕೆ ಮನಸೋತು ಅವಳನ್ನು ಮದುವೆ ಆಗಿ ಅವಳ ಮೇಲಿನ ತನ್ನ ವಿಶೇಷ ಮಮತೆಯನ್ನು ತೋರಿಸುವುದಕ್ಕಾಗಿ, ತನ್ನ ರಾಜ್ಯದ ರಾಜಧಾನಿಗೆ ಭಾಗ್ಯನಗರ ಎಂದು ಕರೆದನಂತೆ. ಹೈದರಾಬಾದ ಎನ್ನುವ ಹೆಸರು ಬರುವುದಕ್ಕೆಮೊದಲು ಈ ನಗರಕ್ಕೆ ಭಾಗ್ಯನಗರ ಎಂದು ಕರೆಯುತ್ತಿದ್ದರಂತೆ.”[9] ಹೈದರಾಬಾದ ನಗರದ ಸುತ್ತಮುತ್ತಲೂ “ಬಂಜಾರಾ ಹಿಲ್” ಎನ್ನುವ ಬೆಟ್ಟ ಪ್ರದೇಶವೇ ಇದೆ. ಒಂದು ಕಾಲಕ್ಕೆ ಅಲ್ಲಿ ಕೇವಲ ಬಂಜಾರಾಗಳು ಮಾತ್ರ ವಾಸಿಸುತ್ತಿದ್ದರಂತೆ.”[10]

ಲಂಬಾಣಿ ಹೆಂಗಸರ ಉಡುಗೆ ಬಂಜಾರಾಗಳು ಮಾತ್ರ ಇಷ್ಟೊಂದು ಆಕರ್ಷಣೀಯ ಮತ್ತು ಸಮೃದ್ಧವಾಗಿರಲು ಬಹುಶಃ ಮುಸ್ಲಿಂ ದೊರೆಗಳ ಜೊತೆಗೆ ಸಂಪರ್ಕ ಬಂದದ್ದೆ ಕಾರಣವಾಗಿರಬಹುದು. ಹೀಗಾಗಿ ಮೊದಲೇ ರಮ್ಯದಿಂದ ಇದ್ದ ಹೆಂಗಸರು ತಾವು ಮತ್ತಷ್ಟು ಚಿತ್ತಾಕರ್ಷಕರಾಗಿ ಕಾಣಬೇಕೆಂದು ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಂತೆ ತೋರುತ್ತದೆ.

ಲಂಬಾಣಿ ಹೆಣ್ಣು ಮಕ್ಕಳು ತಮ್ಮ ಉಡುಗೆಗಳಿಗೆ ಅಲ್ಲಲ್ಲಿ ಕಾಜಿನ ಬಿಲ್ಲೆಗಳನ್ನು ಹಾಕಿ ಹೊಲಿದುಕೊಳ್ಳುವುದಕ್ಕೆ ಇರುವ ಒಂದು ಕಾರಣವನ್ನು ಹೀಗೆ ವಿವರಿಸಬಹುದು. ಮರಳು ಭೂಮಿಯಾದ ರಾಜಸ್ಥಾನವೇ ಲಂಬಾಣಿಗರ ಮೂಲಸ್ಥಾನ. ಲಂಬಾಣಿ ಹೆಣ್ಣುಮಕ್ಕಳು ಕಾಡುಮೇಡುಗಳಲ್ಲಿ ಸುತ್ತಾಡಿ ಕಟ್ಟಿಗೆಗಳನ್ನು ಕಡಿದು ತಂದು ಮಾರುತ್ತಿದ್ದರು. ನೆತ್ತಿಯ ಮೇಲೆ ಸುಡುಬಿಸಿಲು, ತಲೆಯ ಮೇಲೆ ಭಾರವಾದ ಕಟ್ಟಿಗೆಯ ಹೊರೆ, ಜೊತೆಗೆ ಕೆಲವೊಮ್ಮೆ ಹೆಣ್ಣು ಮಕ್ಕಳ ಬಗಲಲ್ಲಿ ಕೂಸೊಂದು ಸುಡುಬಿಸಿಲಿನ ಬೇಗೆಯನ್ನು ತಮ್ಮ ಮೈಗೆ ತಾಕದಂತೆ ಕಾಪಾಡಿಕೊಳ್ಳಲಿಕ್ಕೆ ಹೆಣ್ಣು ಮಕ್ಕಳು ತಮ್ಮ ಉಡುಗೆಗಳಿಗೆ ಕಾಜಿನ ಬಿಲ್ಲೆಗಳನ್ನು ಉಪಯೋಗಿಸಿರಬೇಕು. ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಕಾಜಿನ ಬಿಲ್ಲೆಗಳಿಂದ ಸೂರ್ಯನ ಕಿರಣಗಳು ನೇರವಾಗಿ ಮೈಗೆ ತಾಕದೆ ಮರು ಪ್ರತಿಫಲನವಾಗುತ್ತವೆ. ಉಷ್ಣತೆ ಹೆಚ್ಚಾಗದಂತೆ ತಡೆಗಟ್ಟುವಲ್ಲಿ ಸಹಾಯಕಾರಿಯಾಗುತ್ತವೆ. ಈ ಒಂದು ಕಾರಣಕ್ಕಾಗಿ ಲಂಬಾಣಿ ಹೆಣ್ಣು ಮಕ್ಕಳು ತಮ್ಮ ಉಡುಗೆಗಳಿಗೆ ಕಾಜಿನ ಬಿಲ್ಲೆಗಳನ್ನು ಉಪಯೋಗಿಸಿರಬೇಕು. ಗಂಡಸರು ತಮ್ಮ ದನಕರುಗಳ ಮೇಲೆ ಉಪ್ಪು ಸಾಂಬಾರ ಪದಾರ್ಥಗಳನ್ನು ಹೇರಿಕೊಂಡು ವ್ಯಾಪಾರ ಮಾಡುವುದು, ಒಕ್ಕಲುತನದ ಕೂಲಿ ಕೆಲಸ ಮಾಡುವುದು, ಒಂಟೆಗಳಿಂದ “ಏತ” ಹೊಡೆಯುವುದು ಹೀಗೆ ವಿವಿಧ ಬಗೆಯ ಕೆಲಸಗಳನ್ನು ಮಾಡುತ್ತಿದ್ದರು. ಮುಂದೆ ತಮ್ಮ ಮೂಲ ಸ್ಥಾನವನ್ನು ಬಿಟ್ಟು ಜೀವನೋಪಾಯಕ್ಕಾಗಿ ವಿವಿಧ ಪ್ರದೇಶಗಳಿಗೆ ವಲಸೆ ಹೋದಾಗ ಅಲ್ಲಿಯೂ ಕೂಡ ತಮ್ಮ ಪರಂಪರಾಗತವಾಗಿ ಬೆಳೆದು ವೇಷ ಭೂಷಣಗಳನ್ನು ನಿರಾಕರಿಸಲಿಲ್ಲ.

ಹೆಂಗಸರ ಉಡುಗೆಗಳು :

ಲಂಬಾಣಿ ಹೆಂಗಸರು ತಾವು ಬಳಸುವ ಬಟ್ಟೆಗಳಲ್ಲಿ ಪ್ರಮುಖವಾಗಿ ಕೆಂಪು ಬಣ್ಣದ ಬಟ್ಟೆಗಳನ್ನೇ ಉಪಯೋಗಿಸುತ್ತಾರೆ. ಏಕೆಂದರೆ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದಿರುವ ಲಂಬಾಣಿಗರಿಗೆ ಕೆಂಪು ಬಣ್ಣ ಎಂದರೆ ಪಂಚಪ್ರಾಣ. “ಸೂಜಿ ಲಂಬಾಣಿಗರ ಒಡನಾಡಿ” ಎನ್ನುವ ಗಾದೆ ಅಕ್ಷರಸಃ ಸತ್ಯವೆನಿಸುತ್ತದೆ. ಹೆಂಗಸರಿಗೆ ಸೂಜಿಯೇ ಬದುಕಿನ ಜೀವನಾಡಿ. ಗೋವುಗಳನ್ನು ಕಾಯುವಾಗ, ಆಡು-ಕುರಿಗಳನ್ನು ಮೇಯಿಸುವಾಗ, ಮನೆಗೆಲಸ ಮುಗಿದ ಮೇಲೆ ವ್ಯರ್ಥ ಸಮಯ ಕಳೆಯದೆ ಕಸೂತಿ ಕೆಲಸ ಮಾಡುವುದುಂಟು. ವಿವಿಧ ಬಣ್ಣ ಬಣ್ಣದ ಬಟ್ಟೆಗಳ ಮೇಲೆ ಬಣ್ಣದ ದಾರಗಳಿಂದ ಬೇರೆ ಬೇರೆ ಬಗೆಯ ಕಸೂತಿಗಳನ್ನು ತೆಗೆಯುತ್ತಾರೆ. ಉದಾಹರಣೆಗೆ-ಬಾಳಿಗಾಡ್ರೆ, ಸಾದಾಗಾಡ್ರೆ, ಕಟೇರಿಯಾ, ಚಕಚುನಿ, ಕೋತರಾರನಕ(ನಾಯಿ) ಉಗುರು), ಪಿಸಾರ ಘರ(ನಾಣ್ಯಗಳ ಮನೆ), ಟೇಕಾ, ಕಟ್ಟಾ ಧೋಳಮಾಕಿ (ಬಿಳಿನೊಣ), ರೇಲಾಮಾಕಿ(ಸಾಲು ನೊಣಗಳು) ಇವು ಮೇಲು ಹೊದಿಕೆಯ (ಛಾಂಟಿಯಾ) ಮೇಲೆ ಅಲ್ಲಲ್ಲಿ ಬಿಲ್ಲೆಗಳನ್ನು ಹಾಕಿದ ವಿವಿಧ ವಿನ್ಯಾಸಗಳ ಕಸೂತಿಗಳಿಂದ ಕೂಡಿದ ರಂಗುರಂಗಿನ ಉಡುಪುಗಳನ್ನು ತೊಟ್ಟುಕೊಂಡು ಹೊರಟರೆ ನೋಟಕ್ಕೆ ಲಂಬಾಣಿ ಹೆಣ್ಣು ಮಕ್ಕಳ ಸೌಂದರ್ಯ ಮನಸೆಳೆಯುತ್ತದೆ.

ಹೆಂಗಸರ ಪ್ರತಿಯೊಂದು ಉಡುಗೆಗಳಿಗೆ ಅಲ್ಲಲ್ಲಿ ಕಾಜಿನ ಬಿಲ್ಲೆಗಳನ್ನು ಜೋಡಿಸಿ ಹೊಲಿದಿರುತ್ತಾರೆ. ನೋಡುವವರಿಗೆ ಇದು ವಿಚಿತ್ರವೆನಿಸಿದರೂ ಇದಕ್ಕೆ ಹಿನ್ನೆಲೆಯಾಗಿ ಅವರನ್ನು ವಿಚಾರಿಸಿದಾಗ ಅವರ ಬಾಯಿಂದ ಬರುವ ಉತ್ತರ ಹೀಗಿದೆ. ಪೂರ್ವದಲ್ಲಿ ತಮ್ಮ ಹಿರಿಯರು ಅಲೆಮಾರಿಗಳಾಗಿದ್ದು, ಜೀವನೋಪಾಯಕ್ಕಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಾಡುಮೇಡುಗಳ ಮಾರ್ಗವಾಗಿ ತಮ್ಮ ದನಕರುಗಳ ಮೇಲೆ ಖ್ಯಾದ್ಯ ಪದಾರ್ಥಗಳನ್ನು ಹೇರಿಕೊಂಡು ಸಂಚರಿಸುವ ಅಗತ್ಯವಿತ್ತು. ಆಗ ಕಾಡು ಪ್ರಾಣಿಗಳಿಂದ ಮತ್ತು ಕಳ್ಳಕಾಕರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಬಗೆಯ ಉಡುಪುಗಳು ಅವಶ್ಯವಾಗಿದ್ದವು. ಉದಾಹರಣೆಗೆ-ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ ಮುಂತಾದ ಪ್ರಾಣಿಗಳು ಕಾಡಿನಲ್ಲಿ ಅಲೆದಾಡುವ ಸಂದರ್ಭದಲ್ಲಿ ಮೈಮೇಲೆ ಬಂದರೆ, ಅವು ತಮ್ಮ ಪ್ರತಿಬಿಂಬಕ್ಕೆ ಹೆದರಿ ಭಯದಿಂದ ಓಡಿಹೋಗಬೇಕೆನ್ನುವ ಕಾರಣದಿಂದ ಕಾಜಿನ ಬಿಲ್ಲೆಗಳನ್ನು ಸ್ತ್ರೀಯರು ತಮ್ಮ ಉಡುಗೆಗಳ ಮೇಲೆ ಹಾಕಿಕೊಳ್ಳುತ್ತಿದ್ದರೆಂದು ವಕ್ತೃಗಳು ಹೇಳುತ್ತಾರೆ. ಈ ಪದ್ಧತಿ ಇಂದಿಗೂ ಬೆಳೆದುಬಂದಿದೆ.

ಈ ಬಟ್ಟೆಗಳೇ ಇಷ್ಟೊಂದು ಚಿತ್ತಾಕರ್ಷಕವಾಗಿವೆ. ಅಂದಮೇಲೆ ಇವುಗಳನ್ನು ಸಿದ್ಧಪಡಿಸಲಿಕ್ಕೆ ತೆಗೆದುಕೊಳ್ಳಬಹುದಾದ ಸಮಯ ಎಷ್ಟು? ಇದಕ್ಕೆ ತಗಲಬಹುದಾದ ವೆಚ್ಚ, ಪರಿಶ್ರಮ ಕೂಡ ವಿಸ್ಮಯಕಾರಿಯೇ. ಕುಪ್ಪಸ, ಲಂಗ ಮತ್ತು ಮೇಲುಹೊದಿಕೆ-ಇವುಗಳನ್ನು ಸಿದ್ಧಪಡಿಸಲಿಕ್ಕೆ ಕನಿಷ್ಠ ಎರಡೂವರೆಯಿಂದ ಮೂರು ತಿಂಗಳ ಕಲಾವಧಿ ಬೇಕಾಗುತ್ತದೆ. ಮೊದಲಿಗೆ ಕಸೂತಿ ಹಾಕಿದ ಬಟ್ಟೆಗಳನ್ನು (ಇತ್ತೀಚೆಗೆ ಸಿಂಪಿಗ ಅಥವಾ ತಮ್ಮತಾಂಡಾಗಳಲ್ಲಿ ರಾಟಿ ಕಲಿತಿರುವವರು ಬಳಿ ಹೊಲಿಸುತ್ತಾರೆ) ಸಿದ್ಧಪಡಿಸುತ್ತಾರೆ. ಲಂಬಾಣಿ ಸ್ತ್ರೀಯರ ಪೋಷಾಕುಗಳಿಗೆ ವಿವಿಧ ಬಣ್ಣಗಳ ಬಟ್ಟೆಗಳು, ದಾರಗಳು ಮತ್ತು ಕಾಜಿನ ಬಿಲ್ಲೆಗಳು ಬೇಕಾಗುತ್ತವೆ. ಈ ಉಡುಪುಗಳನ್ನು ಸಿದ್ಧಪಡಿಸಲಿಕ್ಕೆ ಇಂದು ಕನಿಷ್ಠ ೧,೫೦೦ ರಿಂದ ೨,೦೦೦ ರೂಪಾಯಿಗಳವರೆಗೆ (ಅಥವಾ ಇನ್ನೂ ಹೆಚ್ಚಾಗಬಹುದು) ಖರ್ಚು ತಗಲುತ್ತದೆ.

ಕಾಂಚಳಿ (ಕುಪ್ಪಸ) :

ಇದು ಒಂದು ಮೊಳದಷ್ಟು ಉದ್ದವಿರುತ್ತದೆ. ಅಳತೆಪಟ್ಟಿ, ಎದೆ ಪಟ್ಟಿ, ಹೊಟ್ಟೆ ಅಳತೆ ಪಟ್ಟಿ, ಎದೆಯ ಮೇಲೆ ಚೋಟಿಯಾ ಮತ್ತು ಎಡತೋಳಿನ ಮೇಲೆ ಖವಿಯಾ ಇರುತ್ತದೆ. ವಿಶೇಷವಾಗಿ ಖವಿಯಾ, ಚೋಟಿಯಾಗಳು (ನೋಡಿ, ಪುಟ ೧೩೭, ೧೩೯) ಮೂರರಿಂದ ಹದಿನಾರು ಮೊಳ ಉದ್ದವಿರುತ್ತದೆ. ಇವುಗಳಿಗೆ ಕಾಜಿನ ಬಿಲ್ಲೆಗಳನ್ನು ಹಾಕಿ ಹೊಲಿದಿರುತ್ತಾರೆ. ಕುಪ್ಪಸದ ತುಂಬೆಲ್ಲಾ ಅಲ್ಲಲ್ಲಿ ಸಣ್ಣ ಸಣ್ಣ ಕಾಜಿನ ಬಿಲ್ಲೆಗಳು, ತವರು ತಗಡಿನ ಗುಂಡಿ, ಸಣ್ಣ ಸಣ್ಣ ಕಸೂತಿ ಹಾಕಿರುತ್ತಾರೆ. ಬೆನ್ನ ಮೇಲಿನ ಭಾಗ ಪೂರ್ತಿ ಖಾಲಿ ಇರುತ್ತದೆ. ಮೇಲ್ಭಾಗದಲ್ಲಿ ಮತ್ತು ಮಧ್ಯಭಾಗದಲ್ಲಿ ಕಟ್ಟಿಕೊಳ್ಳಲು ಎರಡೆರಡು ಕಸಿಗಳನ್ನು ಹೊಲಿದಿರುತ್ತಾರೆ. (ವಿವರಣೆಗೆ ಕೃತಿಯಲ್ಲಿಯ ಕಾಂಚಳಿಯ ಚಿತ್ರ)

ಫೇಟಿಯಾ (ಲಂಗ) :

ಸಾಮಾನ್ಯವಾಗಿ ಒಂದು ಫೇಟಿಯಾದಲ್ಲಿ ಐದು ಭಾಗವಿರುತ್ತವೆ. ೧. ಲೇಪೋ (ಸೊಂಟಪಟ್ಟಿ), ೨. ಕಾಳೋ ಘೇರೋ (ಕರಿಬಟ್ಟೆ), ೩. ರಾತಡೋ ಛಾಂಟಿಯಾ (ಕೆಂಪು ಬಟ್ಟೆ), ೪. ಪಿತಾಂಬರ ಜರಸಿ ಮತ್ತು ೫. ಲಾವಣಿ (ಉದ್ದ ಪಟ್ಟಿ).

. ಲೇಪೋ (ಸೊಂಟಪಟ್ಟಿ) : ಐದರಿಂದ ಆರು ಗೇಣು ಉದ್ದವಿರುತ್ತದೆ. ಒಂದು ಚೋಟು ಅಗಲವಿರುತ್ತದೆ. ಮೇಲ್ಭಾಗ ಮತ್ತು ಕೆಳಭಾಗದಲ್ಲಿ ವಿವಿಧ ಬಣ್ಣಗಳ ದಾರಗಳಿಂದ ಸಾದಾ ಗಾಡ್ರೆ, ಬಾಳಿಗಾಡ್ರೆ ಮಧ್ಯಭಾಗದಲ್ಲಿ ೩೦ ರಿಂದ ೫೦ರವರೆಗೆ ಕಾಜಿನ ಬಿಲ್ಲೆಗಳನ್ನು ಕೂಡಿಸಿ ಕಟೇರಿಯಾ ನಾಯಿ ಉಗುರು, ಖಿಲಣ, ಚಿಣಗಿ ಮೊದಲಾದ ಬಗೆ ಬಗೆಯ ಕಸೂತಿಗಳ-ಕುಸುರಿ ಕೆಲಸ ಮಾಡಿರುತ್ತಾರೆ. (ನೋಡಿ, ಲಂಬಾಣಿ ಪದಕೋಶ ಪುಟ ೧೩೫)

) ಕಾಳೋ ಘೇರೋ (ಕರಿಬಟ್ಟೆ) : ಹನ್ನೆರಡು ಮೊಳ ಉದ್ದವಿರುವ ಒಂದು ಚೋಟು ಅಗಲವಾದ ಕರಿಬಟ್ಟೆ ಇರುತ್ತದೆ. ಅದರ ಮಧ್ಯದಲ್ಲಿ ಟೇಕಾ, ನಕರಾದ ಅಂದವಾದ ಕಸೂತಿ, ಗೋಟಿನ ಮೇಲೆ ಕಲಣಿ ಕೆಳಗೆ ಬಟ್ಟೆಯಿಂದ ಕಸೂತಿ ತೆಗೆದಿರುತ್ತಾರೆ.

). ರಾತಡೋ ಛಾಂಟಿಯಾ (ಕೆಂಪುಬಟ್ಟೆ) : ಹನ್ನೆರಡು ಮೊಳ ಉದ್ದ, ಒಂದು ಚೋಟ ಅಗಲ ಕೆಂಪು ಬಟ್ಟೆ. ಅದರ ಮಧ್ಯದಲ್ಲಿ ಟೀಕಾ ಕಸೂತಿ, ಕಟ್ಟಾ (ಚೌಕ) ಗೋಟ, ಕಲಣಿ ವಿವಿಧ ಆಕಾರದ ಕಸೂತಿ (ಪೋಲಣಿ) ತೆಗೆದಿರುತ್ತಾರೆ.

) ಪಾಟ ಪಿತಾಂಬರ (ಪಿತಾಂಬರ ಹಳದಿ ಬಟ್ಟೆ) : ಹನ್ನೆರಡು ಮೊಳ ಉದ್ದ, ಒಂದು ಗೇಣು ಅಗಲ ಪಿತಾಂಬರ ಬಟ್ಟೆ ಇರುತ್ತದೆ. ಕೆಳಬದಿಗೆ ಹನ್ನೊಂದು ವಿವಿಧ ಬಟ್ಟೆಗಳ ಖಾಂಪಲಿ (ತ್ರಿಕೋನಾಕಾರದ) ಬಟ್ಟೆ, ಅದರ ಮೇಲೆ ಹೂವಿನ ಗಿಡ ತೆಗೆದಿರುತ್ತಾರೆ.

) ಲಾವಣಿ (ಉದ್ದ ಪಟ್ಟಿ) : ಎರಡು ಅಂಗುಲಳತೆಯ ಕೆಂಪು ಮತ್ತು ಕರಿ ಹನ್ನೆರಡು ಮೊಳ ಉದ್ದ ಪಟ್ಟಿ ಇರುತ್ತದೆ. ಕೆಂಪು ಬಟ್ಟೆಯ ಮೇಲೆ ಅಲ್ಲಲ್ಲಿ ಕಾಜಿನ ಬಿಲ್ಲೆಗಳನ್ನು ಹಚ್ಚಿ ಕಸೂತಿಯ ಪೋಟೆ ಎರಡೂ ಬದಿಗೆ ಬಿಳಿ ಬಟ್ಟೆಯ ಗೋಟ ಹಚ್ಚಿ ಹಳದಿ ಮತ್ತು ಕರಿ ದಾರಗಳಿಂದ ಕಲಣಿ ಕಸೂತಿ ತೆಗೆದಿರುತ್ತಾರೆ. ಲಾವಣಿಯ ಒಳಪದರಿಗೆ ಸೀರೆ ಬಟ್ಟೆಗಳನ್ನು ಹಾಕಿ ಹೊಲಿದಿರುತ್ತಾರೆ. ಲಾವಣಿಗೆ ಅಲ್ಲಲ್ಲಿ ಕಾಜಿನ ಬಿಲ್ಲೆಗಳನ್ನು ಮತ್ತು ವಿವಿಧ ಬಗೆಯ ಕಸೂತಿಗಳನ್ನು ಹಾಕಿರುತ್ತಾರೆ. ಲಂಗದ ಎಡಭಾಗಕ್ಕೆ ಕಾಲುಭಾಗದಷ್ಟು ಢಂಗೋ (ಹೊಲಿಯದೆ ಬಿಟ್ಟದ್ದು, ಖಾಲಿ)[11] ಬಿಟ್ಟಿರುತ್ತಾರೆ. ಸೊಂಟ ಪಟ್ಟಿಯ ಎರಡೂ ತುದಿಗೆ ಉದ್ದನೆಯ ಕಸಿಗಳನ್ನು ಬಿಟ್ಟಿರುತ್ತಾರೆ. ಬಲಗಡೆಗೆ ಎರಡೂವರೆಯಿಂದ ಮೂರು ಫೂಟಿನಷ್ಟು ಮೂರು ಸಾಲಿನ ಉದ್ದನೆಯ ಸಡಕ(ಕವಡೆ ಸರ)ಗಳನ್ನು ಇಳಿಬಿಟ್ಟಿರುತ್ತಾರೆ.[12] ಒಂದೊಂದು ಸಾಲಿನಲ್ಲಿ ನೂರರಿಂದ ಇನ್ನೂರರ ವರೆಗೆ ಕವಡೆಗಳಿರುತ್ತವೆ. (ವಿವರಣೆಗೆ ಕೃತಿಯಲ್ಲಿಯ ಚಿತ್ರ ನೋಡಿ)

ಛಾಂಟಿಯಾ (ಮೇಲು ಹೊದಿಕೆ) :

ಇದು ಐದು ಮೊಳ ಉದ್ದ, ಮೂರು ಮೊಳ ಅಗಲ ಇರುತ್ತದೆ. ಇದನ್ನು ಕೆಂಪು, ಹಸಿರು ಇಲ್ಲವೆ ಕಂದು ಬಣ್ಣದ ಬಟ್ಟೆಗಳಿಂದ ಸಿದ್ಧಪಡಿಸಿರುತ್ತಾರೆ.

ಘುಂಗಟೋ : ಮೇಲು ಹೊದಿಕೆಯ ಬಲಭಾಗಕ್ಕೆ ಒಂದೂವರೆಯಿಂದ ಎರಡು ಮೊಳ ಉದ್ದವಾದ ಘುಂಗಟೋ (ಘುಂಗಟ) ಇರುತ್ತದೆ. ಇದು ವಿಶೇಷವಾಗಿ ಎರಡು ಅಥವಾ ಮೂರು ಸಾಲುಗಳುಳ್ಳ ಕಾಜಿನ ಬಿಲ್ಲೆಗಳಿಂದ ಸಿದ್ಧಪಡಿಸಿರುತ್ತಾರೆ. ಇದರಲ್ಲಿ ಎಂಭತ್ತರಿಂದ ನೂರು ಕಾಜಿನ ಬಿಲ್ಲೆಗಳಿರುತ್ತವೆ. ಬಿಲ್ಲೆಗಳ ಸುತ್ತಮುತ್ತಲೂ ವಿವಿಧ ಬಣ್ಣದ ದಾರಗಳಿಂದ ಕಿಲಣಿ (ಕಸೂತಿ) ಹಾಕಿರುತ್ತಾರೆ. ಛಾಂಟಿಯಾದ ಮೇಲಿರುವ ಘುಂಗಟೋ ಇಳಿಬಿಟ್ಟಿರುತ್ತಾರೆ.”[13] (ಈ ಕೃತಿಯಲ್ಲಿಯ ಚಿತ್ರ ನೋಡಿ)

ಪಾಂಚಫೂಲ (ಐದು ಹೂಗಳು) : ಛಾಂಟಿಯಾದ ಕೆಳಭಾಗ ಹಾಗೂ ಮೇಲ್ಭಾಗದ ಎರಡೂ ಬದಿಗೆ ಎರಡು ಅಂಗುಲ ಅಳತೆಯ ಕರಿ ಮತ್ತು ಕೆಂಪು ಎರಡು ಪಟ್ಟಿಗಳಿರುತ್ತವೆ. ವಿವಿಧ ಬಗೆಯ ವಿನ್ಯಾಸದ ಕಸೂತಿಯ ಮೇಲ್ಭಾಗಕ್ಕೆ ಹಾಗೂ ಕೆಳಭಾಗಕ್ಕೆ ಐದು ಖಾಂಪಲಿ (ಕಸೂತಿ ಬಟ್ಟೆ) ಅದರ ಮೇಲೆ ಗೊಂಡೆ ಅಲ್ಲಲ್ಲಿ ವಿವಿಧ ವಿನ್ಯಾಸದ ಕರಿ ಮತ್ತು ಬಿಳಿ ಕಟ್ಟಾ, ಟೆಕಾ ಬದಿಗೆ ವಿವಿಧ ಬಗೆಯ ಕಸೂತಿ ತೆಗೆದಿರುತ್ತಾರೆ.

ಛಾಂಟಿಯಾದ ಮಧ್ಯಭಾಗದಲ್ಲಿ ಐದು ಚೌಕಾಕಾರದ ಒಂದು ಪ್ರಮಾಣದ ಹಳದಿ ಬಣ್ಣದ ಪಿಡಿ (ಒಂದು ಬಗೆಯ ಕಸೂತಿ) ಪಾಂಚಫೂಲ (ಐದು ಹೂಗಳು) ಅದರ ಮಧ್ಯಗೊಂಡೆ, ಕಾಜಿನ ಬಿಲ್ಲೆಗಳು ಬಿಳಿ ಮತ್ತು ಕರಿ ದಾರಗಳಿಂದ ನೊಣ(ಕಸೂತಿ ಕಲೆ) ಅಲ್ಲಲ್ಲಿ ಗೊಂಡೆ, ಮೂಗತಿ ಕಸೂತಿ ತೆಗೆದಿರುತ್ತಾರೆ. ನೂರರಿಂದ ನೂರಾಐವತ್ತು ಕಾಜಿನ ಬಿಲ್ಲೆಗಳನ್ನು ಜೋಡಿಸಿ ಹೊಲಿದಿರುತ್ತಾರೆ.

ಅಡಛೇಡಾ : ಮೇಲ್ಮುಸುಕಿನ ಬಲತುದಿಗೆ ಅಢಛೇಡಾ[14] ಇರುತ್ತದೆ. ಇದರಲ್ಲಿ ಹತ್ತು ಕಾಜಿನ ಬಿಲ್ಲೆಗಳು ಇರುತ್ತವೆ. ಅದನ್ನು ಕಲಾತ್ಮಕವಾಗಿ ಕಸೂತಿ ತೆಗೆದು ಖಿಲಣ, ಬೆಳ್ಳಿ, ಬಿಳಿ ಬಳ್ಳಿ ಮುಂತಾದ ವಿನ್ಯಾಸದ ಕಸೂತಿಗಳನ್ನು ತೆಗೆದಿರುತ್ತಾರೆ. ಹದಿನೈದರಿಂದ ಇಪ್ಪತ್ತರವರೆಗೆ ಗೊಂಡೆಗಳು, ಗೆಜ್ಜೆಸರ, ಎಂಟ್ಹತ್ತು ಕವಡೆಗಳು ಸಣ್ಣ ದಂತದ ಚೂಡಿ(ಬಳೆ) ಮತ್ತು ಬಲಿಯಾ ಹಾಕಿ ತಯಾರಿಸಿರುತ್ತಾರೆ. ಮೇಲ್ಮುಸುಕಿನ ಅಂಚಿನಲ್ಲಿ ಕಾಜಿನ ಬಿಲ್ಲೆಗಳು, ಖಾಂಪಲಿ (ತ್ರಿಕೋನಾಕಾರದ ಬಟ್ಟೆ) ವಿವಿಧ ಮಾದರಿಯ ಕಸೂತಿ ತೆಗೆದಿರುತ್ತಾರೆ. ಮೂಲದಲ್ಲಿ ಇದೆಲ್ಲ ವಸ್ತ್ರವಿನ್ಯಾಸದ ಮಗ್ಗದಲ್ಲಿ ನೆಯ್ದ ಅರಳಿ ಬಟ್ಟೆಯಲ್ಲಿ ಆಗುತ್ತಿತ್ತು. ಕಾರಣಾಂತರ ಚಮಕಾ, ಕಲ್ಲನಾರು, ಈ ರೀತಿಯ ಚಮಕಾ ಬಟ್ಟೆಗಳು ಒಂದು ಬಣ್ಣ ಇತ್ಯಾದಿಗಳನ್ನು ಹಾಕಿ ಉಪಯೋಗಿಸಲಾಯಿತು.

ತೊಡುಗೆ : ಲಂಬಾಣಿ ಹೆಂಗಸರು ಆಭರಣಗಳನ್ನು ತಲೆಕೂದಲಿಗೆ ಕಿವಿ, ಮೂಗು, ಕೊರಳಿಗೆ, ಕಾಲುಗಳಲ್ಲಿ ಒಟ್ಟಾರೆ ಅಂಗೈಯಿಂದ ಮುಂಗೈವರೆಗೆ ಹಾಕಿರುತ್ತಾರೆ. ಅಲೆಮಾರಿಗಳಾದ ಲಂಬಾಣಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜೀವನೋಪಾಯಕ್ಕಾಗಿ ಕಾಡುಮೇಡುಗಳ ಮುಖಾಂತರ ಸಂಚರಿಸಬೇಕಾಗುತ್ತಿತ್ತು. ಬೇಟೆ ಪ್ರಿಯರಾದ ಇವರು ಕಾಡುಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಕೋಡು,ದಂತ, ಚರ್ಮ ಮುಂತಾದವುಗಳಿಂದ ತೊಡುಗೆ ಮಾಡಿಕೊಂಡು ಧರಿಸುತ್ತಿದ್ದರು. ಈ ಜಂಗಲಿ ಪೋಷಾಕು ಹಾಕಿಕೊಂಡು ಹೊರಟರೆ ಇವರ ತಂಟೆಗೆ ಯಾರೂ ಬರುತ್ತಿರಲಿಲ್ಲವಂತೆ. ಕಾಡುಪ್ರಾಣಿಗಳು ಇವರ ಪೋಷಾಕು ನೋಡಿ ಹೆದರಿಕೊಳ್ಳುತ್ತಿದ್ದವಂತೆ!

ಲಂಬಾಣಿಗರ ವೇಷಭೂಷಣಗಳನ್ನು ಕುರಿತು ಎಡ್ಗರ್ ಥರ‍್ಸ್‌ಟನ್ ಅವರು ಹೀಗೆ ಹೇಳಿದ್ದಾರೆ, “ಅವರ ವೇಷ ವಿಶಿಷ್ಟವಾದುದು. ಅವರ ಆಭರಣಗಳು ಅವರವೇ ಆಗಿವೆ. ಲಂಬಾಣಿ ಸ್ತ್ರೀಯರನ್ನು ಗುರುತಿಸಲಿಕ್ಕೆ ಈ ಆಭರಣಗಳು ಸಾಕು. ಇನ್ನೊಂದು ವೈಶಿಷ್ಟ್ಯವೆಂದರೆ, ಹೆಣ್ಣು ಮಕ್ಕಳ ಬೆನ್ನಿಗಿರುವ ಕೂಸು, ಬೇರೆ ಭಾರವಾದದ್ದು. ಹಸ್ತಿದಂತ ಹಾಗೂ ಮಿಶ್ರಧಾತುಗಳ ಆಭರಣಗಳ ತೂಕ ಒಬ್ಬೊಬ್ಬರ ಮೈ ಮೇಲೂ ಎಂಟು, ಹತ್ತು ಪೌಂಡುಗಳಷ್ಟು ಆಭರಣಗಳಿರುತ್ತವೆ”[15] ಎಂದಿದ್ದಾರೆ.

ಹೆಣ್ಣು ಮಗು:

ಉಡುಗೆ : ಹುಟ್ಟಿದ ಹೆಣ್ಣು ಮಗುವಿಗೆ ಹದಿನೈದು ದಿನಗಳವರೆಗೆ ತಿಳುವಾದ ಬಟ್ಟೆ ಹೊದಿಸುತ್ತಾರೆ. ಆಮೇಲೆ ಛಾಂಟಿಯಾ ಬಟ್ಟೆಯನ್ನು ತಂದು ಕಲಾತ್ಮಕವಾಗಿ ಕತ್ತರಿಸಿ ಮನೆಯಲ್ಲಿ ಸಿದ್ಧಪಡಿಸಿ ಮೇಕಳ್ಯಾ (ಸಣ್ಣ ಮಕ್ಕಳ ಅಂಗಿ) ಮತ್ತು ಟೋಪಿ ಉಡಿಸುತ್ತಾರೆ.

ತೊಡುಗೆ : ಹದಿನೈದು ದಿನಗಳು ಕಳೆದ ಮೇಲೆ ಮಗುವಿನ ಕೈಯಲ್ಲಿ ಉಣ್ಣೆಯ ಬಳೆ, ಬಿಳಿ ಲಾಳ್ದಿ(ಮಣಿ)ಸರ, ಪಾರಿ(ತಗಡು) ಹಾರು, ಕಾಲಲ್ಲಿ ನಿಲಿಮಣಿ ಸರ ಹಾಕುತ್ತಾರೆ. ಹಡೆದ ಐದನೆಯ ದಿವಸಕ್ಕೆ ದಳವಾ ಧೋಕಾಯೇರೋ (ದೇವರಿಗೆ ನಮಸ್ಕರಿಸುವುದು) ಕಾರ್ಯ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಮಗುವಿನ ಕೈಗೆ ಗೋದಿ ಕಾಳುಗಳಿಂದ ಪೋಣಿಸಿ ಮಾಡಿರುವ ಸರ ಕಟ್ಟಿರುತ್ತಾರೆ.

ಬಾಲಿಕೆಯರು :

ಉಡುಗೆ : ಮೂರು ವರ್ಷದಿಂದ ಹಿಡಿದು ಋತಮತಿ ಆಗುವವರೆಗೆ ಸಾಡಿ ಬಟ್ಟೆಯಿಂದ ಗಗ್ಗರಿ ಮತ್ತು ಕರಿ ಭಡವಾ ಬಟ್ಟೆಯಿಂದ ಖಲಿಯಾ (ಜಂಪರ) ಸಿದ್ಧಪಡಿಸಿ ಉಡಿಸುತ್ತಾರೆ. ಅತೀ ಬಡವರಾದವರು ಫಡಕಿಯನ್ನು ಮೈಗೆ ಸುತ್ತಿಕೊಳ್ಳುತ್ತಾರೆ.

ತೊಡುಗೆ : ಲಂಬಾಣಿ ಬಾಲಿಕೆಯರು ಮೈನೆರೆಯುವ ಮೊದಲೇ ಮೈಮೇಲೆ ಬಗೆಬಗೆಯ ಹಚ್ಚೆ ಹುಯ್ಸಿಕೊಂಡಿರುತ್ತಾರೆ. ಮೈನೆರೆದ ಬಳಿಕ ಹಚ್ಚೆ ಹುಯ್ಸಿಕೊಳ್ಳುವುದು ಅಷ್ಟೊಂದು ಸರಿಯಲ್ಲ ಎಂದು ಅವರ ನಂಬುಗೆ. ತಲೆಗೂದಲನ್ನು ಹಿಂಬದಿಯಾಗಿ ತುರಬು ಕಟ್ಟಿರುತ್ತಾರೆ. ಮೂಗಿನ ಮೂಗುತಿ, ಕಿವಿಯಲ್ಲಿ ಓಲೆ, ಕೊರಳಲ್ಲಿ ಬಣ್ಣ ಬಣ್ಣದ ಮಣಿಗಳ ಹಾರ ಹಾಕಿರುತ್ತಾರೆ. ಕೈಯಲ್ಲಿ ಬಳೆ, ಕಾಲಲ್ಲಿ ಝಾಂಜರಾ(ಚೈನ) ಕರಮಣಿ ಸರ, ಪಿಲ್ಲೆ ಹಾಕಿರುತ್ತಾರೆ.

ಋತುಮತಿ ಆದಾಗ :

ಉಡುಗೆ : ಯುವತಿ ಋತುಮತಿ ಆದಾಗ, ನಾಲ್ಕೈದು ಜನ ಸುಮಂಗಲೆಯರು ಬಂದು ಮೈಮೇಲಿನ ಹಳೆಯ ಬಟ್ಟೆಗಳನ್ನು ತೆಗೆದು, ಅರಿಷಿಣ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಿಸಿ ಎರೆಯುತ್ತಾರೆ. ಮೂರು ಮೊಳದ ಫೇಟಿಯಾ (ಲಂಗ) ಕಾಂಚಳಿ (ಕುಪ್ಪಸ) ಮತ್ತು ಮೇಲು ಹೊದಿಕೆಯಾಗಿ ಪಾಂಬಡಿ (ಪಲ್ಲು) ಉಡಿಸುತ್ತಾರೆ. ಮದುವೆ ಆಗುವವರೆಗೆ ಇದೇ ಬಗೆಯ ಉಡುಪಿನಲ್ಲಿ ಇರುತ್ತಾರೆ.

ತೊಡುಗೆ : ಯುವತಿಯರು ಮುಂಗೂದಲಿಗೆ ಇಳಿಬಿಟ್ಟ ಸಾದಾ ಟೋಪಲಿ(ಜುಲಪಿ) ಮತ್ತು ತುರುಬಿಗೆ ಉಣ್ಣೆಯ ಗೊಂಡೆ, ಅದರ ಮೇಲೆ ಕವಡೆಗಳು, ಕಿವಿಯಲ್ಲಿ ಕನಿಯಾ (ನತ್ತು), ಮೂಗಿನಲ್ಲಿ ಪೂಲಿ(ಮೂಗುತಿ), ಕೊರಳಲ್ಲಿ ವಿವಿಧ ಬಣ್ಣಗಳ ಮಣಿಸರ, ಬೆಳ್ಳಿಯ ಹಾಂಸಲಿ ಚಂದ್ರಾಕಾರದ ರಪಿಯಾ ಹಾರ (ನಾಣ್ಯಗಳ ಸರ), ಮುಂಗೈಯಲ್ಲಿ ಬಿಳಿದಂತಿ ಚೂಡಿ(ಬಳೆ) ಮತ್ತು ಕೆಂಪು ಬೋದ್ಲು (ಕಟ್ಟಿಗೆಯ ಬಳೆ) ತಾಮ್ರದ ಬಳೆಗಳು, ಕೈಬೆರಳುಗಳಿಗೆ ಮಾಟಲಿ (ನಾಣ್ಯ ಬೆಸೆದು ಮಾಡಿರುವ ಆಭರಣ), ಕಾಲಲ್ಲಿ ಬಟ್ಟೆಯಿಂದ ತಯಾರಿಸಿರುವ ಕಸ, ತಾಮ್ರದ ವಾಂಕಿಯಾ, ಗೆಜ್ಜೆಸರಗಳ ಜೋಡಿ, ಕಾಲ್ಬೆರಳಿಗೆ ಚಟಕಿ (ಕಾಲುಂಗುರು) ಹಾಕಿರುತ್ತಾರೆ.

ಯುವತಿಯರಿಗೆ ಸೂತಕ ಮುಗಿಯುವವರೆಗೆ ಮೈಮೇಲೆ ನೀರು ಹಾಕುವುದಿಲ್ಲ. ಅವಳಿಗೆ ಒಂದು ತಾಟು, ತಂಬಿಗೆ, ಹೊದೆಯಲಿಕ್ಕೆ ಹಾಸಿಗೆ ಕೊಟ್ಟು ಪ್ರತ್ಯೇಕವಾದ ಚಪ್ಪರ ಕಟ್ಟಿ ಇಟ್ಟಿರುತ್ತಾರೆ. ಕೊನೆಯ ದಿನ ಅವಳಿಗೆ ಗೋಮೂತ್ರ ಬೆರೆಸಿದ ನೀರಿನಿಂದ ಸ್ನಾನ ಮಾಡಿಸಿ, ಹಳೆಯ ಬಟ್ಟೆಗಳಿಗೂ ಸಹ ಗೋಮೂತ್ರ ಸಿಂಪಡಿಸಿ ಒಗೆದು ಹಾಕುತ್ತಾರೆ.


*     ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ದಿನಾಂಕ ೨೪ ಮತ್ತು ೨೫ ಫೆಬ್ರವರಿ ೧೯೯೪ರಂದು ಜರುಗಿದ ೨೧ನೆಯ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ “ಜಾನಪದ ಸಾಹಿತ್ಯದರ್ಶನ, ಭಾಗ-೨೧,ರಲ್ಲಿ ಪ್ರಕಟಗೊಂಡ ಲೇಖನದ ಪರಿಷ್ಕೃತ ರೂಪ ಮಂಡಿಸಿದ ಪ್ರಬಂಧ.

[1]     ಲಂಬಾಣಿಗರ ಉಡುಗೆ-ತೊಡುಗೆಗಳನ್ನು ಕುರಿತು ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿ ಅವರು ಪಿತಾಂಬರದಲ್ಲಿ ಥಳಥಳಿಸುವ ಜರದ ಎಳೆಗಳಂತೆ ಬಂಜಾರಾ ಬುಡಕಟ್ಟು ಭಾರತೀಯ ಜನಜೀವನದಲ್ಲಿ ಎದ್ದು ಕಾಣುವುದು “ಮರುಜನ್ಮವಿದ್ದರೆ, ಬಂಜಾರಾ ಕುಲನಾರಿಯಾಗಿ ಜೀವಿಸಲು ನಾನು ಇಚ್ಛಿಸುತ್ತೇನೆ” ಎಂದು ಹೇಳಿರುವುದನ್ನು ಗಮನಿಸಿದರೆ, ಈ ಬುಡಕಟ್ಟಿನವರು ಶ್ರಮಜೀವಿಗಳು ಮತ್ತು ಮಹಿಳೆಯರ ರಂಗುರಂಗಿನ ವೇಷಭೂಷಣಗಳು ಅವರಿಗೆ ಚಿತ್ತಾಕರ್ಷಕವಾಗಿ ಕಂಡಿರಬೇಕು. ಆ ಕಾರಣದಿಂದಲೇ ಮೇಲಿನ ಮಾತನ್ನು ಹೇಳಿರಬೇಕು. “ನಾಯಕ ಎಜ್ಯುಕೇಶನ್ ಸೊಸೈಟಿ, ಬಿಜಾಪುರ ಸಂಸ್ಮರಣ ಸಂಪುಟ” ೧೯೭೫, ಪುಟ ೧೨)

[2]     “ಜನಾಂಗೀಯ ಅಭ್ಯಾಸದ ಹವ್ಯಾಸವುಳ್ಳ ಶ್ರೀ ರಾಮಸಿಂಗ್ ಭಾನಾವತ (ಢಾಡಿ) ಎಂಬ ಬಂಜಾರಾ ಸಂಶೋಧಕರೊಬ್ಬರು ಹಲವಾರು ಬಾರಿ ವಿದೇಶಗಳನ್ನು ಸುತ್ತಾಡಿ ಅಲ್ಲಿಯ “ಬಂಜಾರ” ಅಥವಾ “ಲಂಬಾಣಿ” ಜನಗಳ ಜೀವನ ಕ್ರಮವನ್ನು ಪರಿಶೀಲಿಸಿದ್ದಾರೆ. ಅದಕ್ಕೂ ಮೊದಲು ಜಿಪ್ಸಿ ಇತಿಹಾಸದ ಬಗ್ಗೆ ಅಭ್ಯಾಸ ಮಾಡಿದವರು ಓಬೆರಾವ ದಿವಾನ್. ಪದ್ಮಶ್ರೀ ಡಬ್ಲು. ಆರ್.ರಷಿ, ಚಮನ್‌ಲಾಲ ಹಾಗೂ ಡಾ. ಮೋಹನಸಿಂಗ್ ದುಬೆ ಎಂಬ ವಿದ್ವಾಂಸರುಗಳು. ಅವರ ಪ್ರಕಾರ ೫೬ ದೇಶಗಳಲ್ಲಿ ಸುಮಾರು ಅದರ ಅರ್ಧದಷ್ಟು ಸಂಖ್ಯೆಯ ಜನಗಳಿದ್ದಾರೆ. ವಿದೇಶಿ ಲಂಬಾಣಿಗಳಿಗೂ ಭಾರತದ ಲಂಬಾಣಿಗಳಿಗೂ ಉಡುಗೆ-ತೊಡುಗೆಗಳಲ್ಲಿ ಸಂಪೂರ್ಣ ಬೇದವಿದ್ದರೂ ಮಾತು, ಹಾಡು, ಕುಣಿತ, ಕಥೆ, ಪಂಚಾಯತಿ ಮುಂತಾದ ಸಾಂಸ್ಕೃತಿಕ ವಿಚಾರಗಳಲ್ಲಿ ಸಾಕಷ್ಟು ಸ್ವಾಮ್ಯವಿದೆ.” (ಬಿ.ಟಿ. ಲಲಿತಾನಾಯಕ “ದೇಶ ವಿದೇಶಗಳಲ್ಲಿ ಲಂಬಾಣಿಗರು”, ರಾಜ್ಯ ಮಟ್ಟದ ಲಂಬಾಣಿ ಸಮ್ಮೇಳನ ಮತ್ತು ಜಾನಪದ ಕಲಾಮೇಳ, ಬೆಂಗಳೂರು, ೧೯೮೭ ಅಕ್ಟೋಬರ್ ೨೬ ಮತ್ತು ೨೭, “ಸ್ಮರಣ ಸಂಚಿಕೆ).

[3]     “Most of you have heard of the wandering Gipsies of Europe and America, but I wonder how many of you know that they are our own Kith and Kin. They are descended from the Aryan stock of Punjab, Sindh, Sourashtra, Rajputana and Malwa. They are not Egyptian. One and all they have Indian blood. They continue to use Indian words. In greeting me they said “Tu main Ek Rakt”, i.e., “you and I have the same blood” (CHAMANLAL “GIPSIES” FORGOTTEN CHILDREN OF INDIA”, “PREFACE”, Page XI, 1962).

[4]     Colonel Meakenzie “Beerar Census Report,” 1881.

[5]     G.A. Grierson “Linguistic Survey of India,” Vol. IX, 1907, Page 205.

[6]     ಜೇಮಲ್ ಫತ್‌ಮಲ್‌ರನ್ನು ಕುರಿತು ವೀರಗಾಥೆ ಪ್ರಚಲಿತವಿರುವುದನ್ನು ಈ ಕೆಳಗಿನಂತೆ ನೋಡಬಹುದು.

“ಹರಮೇಹೋ ಹೋರೆ ಮಾರೇ ಜೇಮಲ್-ಫತಮಲ್ ರಾಜೇನ |
ತಮಾರೋ ಬಾಪವೀಯೇ ಬಾಪವೀಯೇ ಪೃಥ್ವಿ-ರಾಜ ಚವ್ಹಾಣ |
ಹರಮೇಹೋ ಊತೋ ನವಾಬೇರ ಕಾಟೇತಿಯೇ, ಕಾಟೇತಿಯೇ ಮರಣ ಕರನ |
ಹರಮೇಹೋ ಹೋರೆ ಮಾರೇ ಜೇಮಲ್ ಫತಮಲ್ ರಾಜೇನ ||

ಅರ್ಥ: ಹರಮೇಹೋ ಹೋರೆ ನನ್ನ ಜೇಮಲ್-ಫತಮಲ್ ರಾಜರಿಗೆ, ನಿಮ್ಮ ತಂದೆ ಪೃಥ್ವಿರಾಜ ಚವ್ಹಾಣನಿದ್ದು, ನವಾಬನ ತೊಂದರೆಯಿಂದ ಮರಣವ ಪಡೆದನು, ಎಂದು ಅವರ ತಂದೆಯ ವಿಷಯವಾಗಿ ತಿಳಿಸಿದಳು. ಅಲ್ಲದೆ ತಮ್ಮ ರಾಜರ ರಾಜಧಾನಿ ಚಿತ್ತೋಡವು ನವಾಬನ ವಶದಲ್ಲಿರುವುದಾಗಿ ನುಡಿದಳು. (ವಿವರಣೆ ನೋಡಿ : “ಲಂಬಾಣಿ ಜನಪದ ಸಾಹಿತ್ಯ”, ಡಾ. ಡಿ.ಬಿ. ನಾಯಕ, ೨೦೦೦, ಪುಟ ೧೩೪, ೧೩೫)

[7]     ಪಾಕ್ ಅಫಘಾನ್ ಗಡಿಭಾಗದ ಚಮನ್‌ನಲ್ಲಿ “ಖರಸಾನಿ ಎಂದೇ ಗುರುತಿಸಿಕೊಂಡ ಅಫಘಾನಿಸ್ತಾನದ ಅಲೆಮಾರಿ ಬುಡಕಟ್ಟಿನ ಮಹಿಳೆಯರ ವೇಷಭೂಷಣ “ಬಂಜಾರಾ” ಮಹಿಳೆಯರ ವೇಷಭೂಷಣದಂತೆ ಇರುವುದು ಕಂಡುಬರುತ್ತದೆ. (ವಿವರಣೆ ನೋಡಿ : ಇದೇ ಲೇಖಕರ “ಬಂಜಾರಾ ಗೋತ್ರಗಳು”, ೨೦೦೨).

[8]     ಡಾ. ಪಿ.ಕೆ. ಖಂಡೋಬಾ “ಕರ್ನಾಟಕದ ಲಂಬಾಣಿಗಳು : ಒಂದು ಸಾಂಸ್ಕೃತಿಕ ಅಧ್ಯಯನ”, ೧೯೯೧, ಪುಟ ೬೧.

[9]     “Hyderabad state, A Regional and Economic Survey” B.N. Chaturvedi, 1956, Page 114

[10]    ಈ ಸಂಗತಿಯನ್ನು ಗುರುಗಳಾದ ಡಾ. ದೇವೇಂದ್ರಕುಮಾರ ಹಕಾರಿ ಅವರು ನನ್ನ ಗಮನಕ್ಕೆ ತಂದರು. ಅವರಿಗೆ ನಾನು ಋಣಿಯಾಗಿದ್ದೇನೆ.

[11]    “ಢುಂಗೋ” ಲಂಬಾಣಿ ಸ್ತ್ರೀಯರು ಫೇಟಿಯಾ(ಲಂಗ)ದ ಎಡಭಾಗಕ್ಕೆ ಕಾಲುಭಾಗದಷ್ಟು ಹೊಲಿಯದೆ ಬಿಟ್ಟಿರುತ್ತಾರೆ. ಇದು ಇತರರಿಗೆ ಕಾಣದಂತೆ ಛಾಂಟಿಯಾ (ಮೇಲು ಹೊದಿಕೆ)ಯಿಂದ ಮರೆ ಮಾಡಿರುತ್ತಾರೆ. ಲಂಬಾಣಿಗರ ಹೋಳಿ ಹಾಡುಗಳಲ್ಲಿ ಢುಂಗೋದ ಪ್ರಸ್ತಾಪ ಬರುತ್ತದೆ.

[12]    ಕವಡೆಗಳನ್ನು ಏತಕ್ಕಾಗಿ ಉದ್ದುದ್ದನೆಯ ಸರ ಮಾಡಿಕೊಂಡು ಲಂಗದ ಮೇಲೆ ಬಿಟ್ಟಿಕೊಳ್ಳುತ್ತಿದ್ದರೆಂದು ಕೇಳಿದರೆ, ಅವರು ಕೊಡುವ ಉತ್ತರ ಹೀಗಿದೆ. ನಮ್ಮ ಗಂಡಸರಲ್ಲಿ ಕುಡಿಯುವ ಚಟ ಜಾಸ್ತಿಯಾಗಿದ್ದು, ವ್ಯಾಪಾರದ ಲಾಭನಷ್ಟಗಳ ಕಡೆಗಾಗಲಿ, ಹಣಕಾಸಿನ ಲೆಕ್ಕಾಚಾರಕ್ಕಾಗಲಿ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಹಾಗಾಗಿ ಅವಿದ್ಯಾವಂತರಾದರೂ ವ್ಯವಹಾರದ ಲೆಕ್ಕಾಚಾರ ಮಾಡಿ ತಮ್ಮ ತಮ್ಮ ಯಜಮಾನರುಗಳಿಗೆ ನೆರವಾಗುತ್ತಿದ್ದರಂತೆ. ಅದಕ್ಕಾಗಿ ಈ ಕವಡೆಗಳು ನಮ್ಮಲ್ಲಿ ಲಕ್ಷ್ಮೀ ಎಂದು ಪರಿಗಣಿಸಿ ಧರಿಸುತ್ತಾ ಬಂದಿದ್ದೇವೆ ಎನ್ನುತ್ತಾರೆ. (ಎನ್. ಬಸವರಾಜ : “ಲಂಬಾಣಿಗರು,” ೧೯೮೦, ಪುಟ ೭)

[13]    ಲಂಬಾಣಿಗರು ಮೊದಲಿನಿಂದಲೂ ತಮ್ಮ ಸಂಪ್ರದಾಯಗಳನ್ನು ಬಲು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುತ್ತಾರೆ. ಹೆಣ್ಣುಮಕ್ಕಳು ಸ್ನಾನ ಮಾಡುವಾಗ ಮತ್ತು ಮಲಗಿಕೊಳ್ಳುವಾಗ ಮಾತ್ರ ತಲೆಯ ಮೇಲಿನ ಸೆರಗನ್ನು ತೆಗೆಯುತ್ತಾರೆ. ಉಳಿದ ವೇಳೆಯಲ್ಲಿ ಆ ಸೆರಗನ್ನು ತೆಗೆಯುವುದಿಲ್ಲ. ಒಂದು ವೇಳೆ ಸೆರಗು ತೆಗೆದದ್ದು, ಹಿರಿಯರಿಗೆ ಕಾಣಿಸಿಕೊಂಡರೆ ಅಂಥ ಹೆಣ್ಣುಮಗಳಿಗೆ “ಉಗಡಿ ಕಾಂಯಿ ಒಗಾಡ ಹಿಂಸರಿ” (ಲಜ್ಜೆ ಗೆಟ್ಟವಳು ಸೆರಗಿಲ್ಲದೆ ತಿರುಗುತ್ತಿದ್ದಾಳೆ) ಎಂದು ಬೈಯುತ್ತಾರೆ. ಸಂಬಂಧಿಕರು ಮನಗೆ ಬಂದರೆ ತಲೆಯ ಮೇಲೆ ಸೆರಗು ಹೊದ್ದುಕೊಂಡು ನೀರು ಕೊಟ್ಟು ನಮಸ್ಕರಿಸಬೇಕಾಗುತ್ತದೆ. ಒಟ್ಟಾರೆ ಮೇಲ್ಮುಸುಕು ಲಂಬಾಣಿ ಸ್ತ್ರೀಯರಿಗೆ ಗೌರವದ ಸಂಕೇತ.

[14]    ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಮನೆಯ ಮುಂದೆ ಅಕ್ಷತೆ ಮುಗಿದು ಮದುವಣಗಿತ್ತಿಯ ದಿಬ್ಬಣ ಕಳಿಸುವ ಮುಂಚೆ ಮನೆಯ ಮುಂದೆ ಕಂಟ್ಲೆತ್ತು ತಂದು ನಿಲ್ಲಿಸುತ್ತಾರೆ. ಮದುವಣಗಿತ್ತಿ ಕಂಟ್ಲೆತ್ತಿನ ಮೇಲೆ ನಿಂತು ಎರಡೂ ಕೈಗಳನ್ನು ಮೇಲೆತ್ತಿಕೊಂಡು ಬಲಗೈಯಿಂದ “ಅಡಛೇಡಾ” ಹಿಡಿದು ಬಂಧು-ಬಳಗದವರ ಕಡೆಗೆ ಬೀಸುತ್ತ “ಹವೇಲಿ(ಗುಣಗಾನ) ಮಾಡುತ್ತಾಳೆ. ಆ ಸಂದರ್ಭದಲ್ಲಿ “ಅಡಛೇಡಾ”ದ ಮಹತ್ವ ಬರುತ್ತದೆ.

[15]    E. Thurston : “The Castes and Tribes of Southern India,” Madrass, 1909, Page 235