ಉಡುಗೆ : ಹಸೆಮಣೆಯ ಮೇಲೆ ವಧುವಿಗೆ ಹಳದಿ ಸೀರೆ ಮತ್ತು ಮಕಮಲದ ಕುಪ್ಪಸ ಉಡಿಸಿ ಸೀರೆಯ ಬೆನ್ನು ಭಾಗದ ಮೇಲೆ ಸ್ವಸ್ತಿಕ ಸಾಂಕಪೂರೇರೋ (ಚಿಹ್ನೆ) ತೆಗೆಯುತ್ತಾರೆ. ಅಕ್ಷತೆ ಮುಗಿದು ಗಂಡನ ಮನೆಗೆ ಕಳಿಸುವ ಪೂರ್ವದಲ್ಲಿ ವಧುವಿಗೆ ಕುಪ್ಪಸ, ಲಂಗ ಮತ್ತು ಮೇಲು ಹೊದಿಕೆ”

[1] ಈ ಉಡುಪುಗಳನ್ನು ಉಡಿಸಿ ಸಂಪ್ರದಾಯದ ಪ್ರಕಾರ ಗಂಡನ ಮನೆಗೆ ಬೀಳ್ಕೊಡುತ್ತಾರೆ. ಹೋಗುವ ಆ ಸಂದರ್ಭದಲ್ಲಿ ಎಲ್ಲ ಬಟ್ಟೆಗಳನ್ನು ಒಂದು ಕೋತಳಿಯಲ್ಲಿ”[2] ಹಾಕಿ ಕಳಿಸುತ್ತಾರೆ.

ತೊಡುಗೆ : ಋತುಮತಿ ಆದಾಗ ತೊಡಿಸುವ ಆಭರಣಗಳ ಜೊತೆಗೆ ಕೆಲವು ವಿಶೇಷ ಆಭರಣಗಳನ್ನು ತೊಡಿಸುತ್ತಾರೆ. ಮುಂಗೂದಲಿಗೆ ಇಳಿಬಿಟ್ಟ ಘುಗರಿ ಮತ್ತು ಎರಡೂ ಮುಂಗೈಗಳಿಗೆ ಹಾಕಿರುವ ಚೂಡೋ ಇವುಗಳು ಲಂಬಾಣಿ ಸ್ತ್ರೀಯರ ಸುಮಂಗಲೆಯ ಸಂಕೇತ. ರಟ್ಟೆ(ತೋಳು)ಗಳಿಗೆ ಕಸೋಟಿಯಾ, ಮೂಗಿನಲ್ಲಿ ಭೂರಿಯಾ, ತುರುಬಿನಲ್ಲಿ ಅಂಟಿಗೆ ಟೋಪರೂಪೇರ, ಕವಡಿಸರ, ಉಣ್ಣೆಯ ಗೊಂಡೆ ಮತ್ತು ಕವಡೆಯ ಚೋಕಡಿ ಹಾಕುತ್ತಾರೆ. ಕಾಲಲ್ಲಿ ಕಸ, ಕೈಬೆರಳುಗಳಿಗೆ ಬೆಳ್ಳಿನಾಣ್ಯ ಬೆಸೆದು ಮಾಡಿರುವ ವಿಂಟಿ, ಚಾಲಾವಿಂಟಿ, ಕಾಲ್ಬೆರಳಿಗೆ ಬಿಚವಾ, ಚಟಕಿ, ಕಾಲಲ್ಲಿ ದೊಡ್ಡ ಬೆಳ್ಳಿಯ ಕಡಗ, ಹಣೆಯ ಮೇಲೆ ಟಿಕಿಯಾ ಇರುತ್ತದೆ. ಮದುವೆ ಮುಗಿಯುವವರೆಗೆ ಕಾಲಲ್ಲಿ ಮೋಚಡಿ (ಮಚ್ಚಿ ಚಪ್ಪಲ) ಇರುತ್ತದೆ. (ನೋಡಿ, ಪುಟ ೧೪೪)

ತಾಯಂದಿರಾದಾಗ :

ಉಡುಗೆ : ಹಡೆದ ಕೆಲವು ಗಳಿಗೆಯಲ್ಲಿ ಬಾಣಂತಿಯ ಮೈಮೇಲಿನ ಎಲ್ಲ ಬಟ್ಟೆಗಳನ್ನು ತೆಗೆಯುತ್ತಾರೆ. ತಲೆಯ ಕೂದಲು ಬಿಚ್ಚುತ್ತಾರೆ. ಹೊಟ್ಟೆಗೆ ಒಂದು ಬಿಳಿಯ ಬಟ್ಟೆ ಐದು ದಿನಗಳ ವರೆಗೆ ಸುತ್ತಿರುತ್ತಾರೆ. ಘೇರಲಾ ದಪ್ಪನೆಯ ಬಟ್ಟೆಯ ಲಂಗ ಉಡಿಸುತ್ತಾರೆ. ಹಡೆದ ಬಳಿಕ ಮೈಮೇಲೆ ಹೊದಿಯಲಿಕ್ಕೆ ಕಂಬಳಿ ಕೊಡುತ್ತಾರೆ. ಐದನೆಯ ದಿವಸದ ದಳವಾ ಧೋಕಾಯೇರೊ ಕಾರ್ಯ ಮುಗಿದ ಬಳಿಕ ಮೈಮೇಲೆ ಬಟ್ಟೆ ಉಡಿಸುತ್ತಾರೆ.

ತೊಡುಗೆ : ಬಾಣಂತಿಯ ಮೈಮೇಲಿನ ಎಲ್ಲ ತೊಡುಗೆಗಳನ್ನು ತೆಗೆಯುತ್ತಾರೆ. ಮೂಗಿನಲ್ಲಿ ಹಾಕುವ ಧೋಕಾಯೇರೊ (ಮೂಗುತಿ) ಕಾಲು ಬೆರಳಿಗೆ ಹಾಕಿರುವ ಚಟಕಿ, ಬಿಚವಾ ಇರುತ್ತದೆ. ದಳವಾ ಧೋಕಾಯೇರೊ ಕಾರ್ಯ ಮಾಡುವವರೆಗೆ ಮುಂಗೂದಲು ಕಟ್ಟುವುದಿಲ್ಲ. ಐದನೆಯ ದಿವಸದ ಕಾರ್ಯ ಮಾಡಿದ ಬಳಿಕ ಮೊದಲಿನಂತೆ ಒಡವೆಗಳನ್ನು (ಕೆಲವರು ಒಂದು ತಿಂಗಳವರೆಗೆ ಯಾವುದೆ ಆಭರಣ ಹಾಕುವುದಿಲ್ಲ) ಹಾಕಿಕೊಳ್ಳುತ್ತಾರೆ.

ದುಡಿಮೆಯಲ್ಲಿ:

ಉಡುಗೆ : ಶ್ರಮಜೀವನದಲ್ಲಿ ಸಂತೃಪ್ತಿ ಕಂಡ ಲಂಬಾಣಿಗರು ತಮ್ಮ ದನಕರುಗಳ ಮೇಲೆ ಖ್ಯಾದ ಪದಾರ್ಥಗಳನ್ನು ಹೇರಿಕೊಂಡು ಹೋಗುವಾಗ ತಮ್ಮ ರಂಗುರಂಗಿನ ಉಡುಗೆಗಳನ್ನು ಹಾಕಿಕೊಂಡು ಹೋಗುತ್ತಿದ್ದರು. ಬಟ್ಟೆಬರೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಈ ಗುಂಪಿನವರು ಉಡುಗೆಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳುತ್ತಿರಲಿಲ್ಲ. ಯಾವತ್ತೂ ಸುಂದರವಾಗಿ ಕಾಣಬೇಕೆಂಬುದೇ ಅವರ ಅಭಿಲಾಷೆ.

ತೊಡುಗೆ : ಪೂರ್ವದಲ್ಲಿ ಲಂಬಾಣಿ ಹೆಣ್ಣು ಮಕ್ಕಳು ತಮ್ಮ ಗಂಡಂದಿರಿಗೆ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಹಣದ ವ್ಯಾಪಾರಕ್ಕಾಗಿ ತಮ್ಮ ಸೊಂಟಗಳಿಗೆ ಕವಡೆಸರಗಳನ್ನು ಕಟ್ಟಿಕೊಳ್ಳುತ್ತಿದ್ದರು. ವ್ಯಾಪಾರದಲ್ಲಿ ನಷ್ಟವಾದಾಗ ತಮ್ಮ ಮೈಮೇಲಿನ ಬೆಳ್ಳಿ ಬಂಗಾರದ ಆಭರಣಗಳನ್ನು ಮಾರಿ ಚೇತರಿಸಿಕೊಳ್ಳಲೆಂದು ವಿಶೇಷ ಪ್ರಯತ್ನ ಮಾಡುತ್ತಿದ್ದರು. ಬಹುಶಃ ಈ ಒಂದು ಕಾರಣಕ್ಕಾಗಿಯೇ ಹೆಣ್ಣುಮಕ್ಕಳ ಮೈಮೇಲೆ ಹೆಚ್ಚಿನ ಒಡವೆಗಳಿರುವುದು ಕಂಡುಬರುತ್ತದೆ. ದುಡಿಯುವಾಗ ಯಾವುದೇ ಆಭರಣಗಳನ್ನು ತೆಗೆದಿಡುವ ಪ್ರಸಂಗವೇ ಬರುತ್ತಿರಲಿಲ್ಲ.

ಹಬ್ಬ ಹರಿದಿನಗಳಲ್ಲಿ :

ಉಡುಗೆ : ಉಪವಾಸ ಇದ್ದರೂ ಪರವಾಗಿಲ್ಲ. ಹೊತ್ತು ಹೊತ್ತಿಗೆ ಶುಭ್ರವಾದ ಬಟ್ಟೆಗಳೇ ಬೇಕೆಂದು ಬಯಸುವ ಸ್ತ್ರೀಯರಿಗೆ ಹಬ್ಬ ಹರಿದಿನಗಳೆಂದರೆ ಪಂಚಪ್ರಾಣ. ತಮ್ಮ ಕೋತಳಿ (ಪೋಟ್ಲಿ)ಗಳಲ್ಲಿ ಕಟ್ಟಿರುವ ಬಟ್ಟೆಗಳನ್ನು ಹೊರತೆಗೆದು ಅವುಗಳನ್ನು ಉಡುತ್ತಾರೆ. ಇತರ ಹೆಂಗಸರಿಗಿಂತ ಚಿತ್ತಾಕರ್ಷಕವಾಗಿ ಕಾಣಬೇಕೆಂದು ಒಳಗೊಳಗೆ ಪೈಪೋಟಿ, ಚದುರಿ ಹೋದ ಗುಂಪಿನ ಜನರು ಒತ್ತಟ್ಟಿಗೆ ಕೂಡುವುದು ಬಲು ಅಪರೂಪ. ಆದ್ದರಿಂದಲೇ “ಲಮಾಣ್ಯಾರಿಗೆ ಹೆಣ್ಣು ಕೊಟ್ಟಾಂಗ” ಎಂಬ ಗಾಧೆ ರೂಢಿಯಲ್ಲಿರಬೇಕು.[3]

ತೊಡುಗೆ : ತಮ್ಮ ಉಪಜೀವನಕ್ಕಾಗಿ ವಿವಿಧ ಕಡೆಗೆ ಹರಿದು ಹಂಚಿಹೋಗಿರುವ ಗುಂಪಿನ ಜನರು ಒತ್ತಟ್ಟಿಗೆ ಕೂಡುವುದು ಇಂತಹ ಸಂದರ್ಭಗಳಲ್ಲಿಯೇ ಆದ್ದರಿಂದ ಈ ಸಂದರ್ಭಗಳಲ್ಲಿ ಮೈಮೇಲೆ ಹೊಸ ಆಭರಣಗಳನ್ನು ಹಾಕಿಕೊಂಡು ಗುಂಪಿನ ಹೆಣ್ಣು ಮಕ್ಕಳ ಜೊತೆಗೆ ಹಾಡಿ ಕುಣಿಯುತ್ತಾರೆ. (ವಿವರಣೆಗೆ ಕೃತಿಯಲ್ಲಿಯ ಚಿತ್ರ ನೋಡಿ)

ಮುದುಕಿಯರು (ಅಜ್ಜಿಯರು) :

ಉಡುಗೆ : ತಮ್ಮ ಮುಪ್ಪಿನ ಕಾಲದಲ್ಲಿ ಮುದುಕಿಯರು ಕೋತಳಿಗಳಲ್ಲಿ ಕಟ್ಟಿಟ್ಟ ಓಬೆರಾಯನ! ಕಾಲದ ಬಟ್ಟೆಗಳನ್ನು ಹೊರತೆಗೆದು ಇರುವತನಕ ಉಟ್ಟುಕೊಂಡು ಇರೋಣ ಎಂದು ಬಯಸುತ್ತಾರೆ. ಉಡುಗೆ-ತೊಡುಗೆಗಳೆಂದರೆ ಹೆಣ್ಣು ಮಕ್ಕಳಿಗೆ ಅತೀವ ವ್ಯಾಮೋಹ. ಬಡವರಿದ್ದರೂ ಚಿಂತೆಯಿಲ್ಲ. ಸಾಲ ಸೋಲ ಮಾಡಿಯಾದರೂ ತಮ್ಮ ಪೋಷಾಕುಗಳನ್ನು ಸಿದ್ಧಪಡಿಸಿಕೊಂಡು ಶಿಸ್ತಿನ ಸಿಪಾಯಿಯಂತೆ ಇರುವರು. ಮುಪ್ಪಾದರೂ ಹೆಂಗಸರ ಮುಖದಲ್ಲಿ ನಗೆ ಉಕ್ಕಿ, ಅದು ಅವರ ವೇಷಭೂಷಣಕ್ಕೆ ಶೋಭೆ ಕೊಡುತ್ತಿರುತ್ತದೆ.

ತೊಡುಗೆ : ಶಕ್ತಿ ಕುಂದುತ್ತ ಹೋದಂತೆ ವೃದ್ಧೆಯರು ತಮ್ಮ ಮೈಮೇಲಿನ ಭಾರವಾದ ಹಾಂಸಲಿ, ರಪಿಯಾಹಾರ, ಕಾಲಲ್ಲಿಯ ಕಸ್ ಮುಂತಾದ ಆಭರಣಗಳನ್ನು ತೆಗೆದಿಡುತ್ತಾರೆ. ಆದರೆ ಉಳಿದ ಆಭರಣಗಳು ಅವರ ಮೈಮೇಲೆ ಹಾಗೆಯೇ ಇರುತ್ತವೆ.

ವಿಧವೆಯರಾದಾಗ :

ಉಡುಗೆ : ಗಂಡ ಸತ್ತ ಬಳಿಕ ಹೆಣ್ಣಿನ ಜೀವನದಲ್ಲಿ ಕರಾಳ ದಿನಗಳು ಆರಂಭವಾಗುತ್ತವೆ. ಹೆಣವನ್ನು ಸ್ಮಶಾನಕ್ಕೆ ಒಯ್ದಾಗ ಇತ್ತ ವಿಧವೆಯ ಮೈಮೇಲಿರುವ ಮುತ್ತೈದೆ ಸಂಕೇತದ ಉಡುಗೆಗಳನ್ನು ಇಬ್ಬರು ವಿಧವೆಯರು ಬಂದು ತೆಗೆಯುತ್ತಾರೆ. ಮೇಲುಹೊದಿಕೆಯ ಘುಂಗಟೋ ಕಾಂಚಳಿ(ಕುಪ್ಪಸ) ಎಡಭುಜದ ಮೇಲಿರುವ “ಖವಿಯಾ” ಮತ್ತು ಎದೆಯ ಮೇಲೆ ಹಾಕಿರುವ “ಚೋಟಿಯಾ” ಇವುಗಳನ್ನು ತೆಗೆಯುತ್ತಾರೆ.

ತೊಡುಗೆ : ಕೆಲವು ಲಂಬಾಣಿ ಹೆಂಗಸರ ಮೈಮೇಲೆ ಎಂಟು, ಹತ್ತು ಪೌಂಡಿನಷ್ಟು ಆಭರಣಗಳನ್ನು ಹಾಕಿಕೊಂಡಿರುತ್ತಾರೆ. ಗಂಡ ಸತ್ತ ಬಳಿಕ ಇಬ್ಬರು ವಿಧವೆಯರು ಬಂದು ಅವಳ ಮೈಮೇಲಿನ ಮುತ್ತೈದೆ ಸಂಕೇತದ (ಚುಡೋ) ಮಾಂಗಲ್ಯ ಆಭರಣಗಳನ್ನು ತೆಗೆಯುತ್ತಾರೆ. ಆಗ ವಿಧವೆ ದುಃಖದಿಂದ ಅಳುತ್ತ ಹೀಗೆ ಗುಣಗಾನ ಮಾಡುತ್ತಾಳೆ.

“ಕುಂವಾರ ಪಣೆರೋ ಸೋಬೊ ದೆಗೋ ಕಾಂಯಿ ರಾಜಿಯಾ
ಕಾಳೇರ ಕೋರಿ ಹಾಟೇರಿ ವಾಂದರಿ ಕರಗೋ ಕಾಂಯಿ ರಾಜಿಯಾ
ದುಸರೇರ ಮುಂಡೆ ಸಾಂವು ದೇ ಕಜು ಕರಗೋ ಕಾಂಯಿ ರಾಜಿಯಾ”

(ಸಾರಾಂಶ: ಯೌವನದಲ್ಲಿ ಇದ್ದ ವೇಷಭೂಷಣ ಕೊಟ್ಟು ಹೊದೆಯಾ, ಕರಾಳದ ದಿನಗಳ ಜೊತೆಗೆ ತನ್ನನ್ನು ಸಂತೆಯಲ್ಲಿ ಅಲೆಯುವ ಮಂಗನಂತೆ ಮಾಡಿದೆಯಾ, ಬೇರೆಯವರ ಮುಖ ನೋಡುವ ಹಾಗೆ ಮಾಡಿ ಹೋದೆಯಾ ಒಡೆಯ) ಇಲ್ಲಿ ವಿಧವೆಯು, ತನ್ನ ಗಂಡನ ಸಾವಿನ ಬಗ್ಗೆ ದುಃಖದಿಂದ ತನ್ನ ಮುಂದಿನ ಕರಾಳ ದಿನಗಳ ಬಗ್ಗೆ ಈ ಮೇಲಿನ ಪದ್ಯದಲ್ಲಿ ತೋಡಿಕೊಂಡಿದ್ದಾಳೆ.

ಮುತ್ತೈದೆ ಸಂಕೇತದ ಮುಂಗೂದಲಿಗೆ ಇಳಿಬಿಟ್ಟ ಘುಗರಿ, ರಟ್ಟೆಯಲ್ಲಿ ಹಾಕಿರುವ ಚುಡೋ ಇವುಗಳನ್ನು ಸಂಪ್ರದಾಯದಂತೆ ತೆಗೆಯುತ್ತಾರೆ. ಮತ್ತೆ ಕೆಲವು ಹೆಣ್ಣು ಮಕ್ಕಳು ಗಂಡ ಸತ್ತ ಬಳಿಕ ಆಭರಣಗಳನ್ನಾದರೂ ಹಾಕಿಕೊಂಡು ಏನು ಮಾಡುವುದೆಂದು ಬೆಳ್ಳಿಯ ಹಾಂಸಲಿ, ಚಂದ್ರಾಕಾರದ ರಪಿಯಾಹಾರ, ಕಾಲಲ್ಲಿಯ ಬೆಳ್ಳಿಯ ಕಡಗ, ಮೂಗಿನಲ್ಲಿ ಬಂಗಾರದ ಭೂರಿಯಾ ಈ ಕೆಲವು ಆಭರಣಗಳನ್ನು ತೆಗೆದಿಡುತ್ತಾರೆ.

ಈ ಸಂದರ್ಭದಲ್ಲಿ ವಿಧವೆಯರ ಮೈಮೇಲಿನಿಂದ ಒಂದು ಸಣ್ಣ ಬುಟ್ಟಿ ತುಂಬುವಷ್ಟು ಆಭರಣಗಳನ್ನು ತೆಗೆಯುತ್ತಾರೆ. ಆದಾಗ್ಯೂ ಮೈಮೇಲೆ ಇನ್ನುಳಿದ ಆಭರಣಗಳು ಹಸ್ತಿದಂತಿಯ ಚೂಡಿಗಳು, ಕೈಕಾಲು ಬೆರಳುಗಳಲ್ಲಿಯ ವಿಂಟಿ, ಪಿಲಿಯಾ, ಕೊರಳಲ್ಲಿಯ ಲಾಳ್ಡಿ ಹಾರಗಳು ಹಾಗೇ ಇರುತ್ತವೆ.

ಸಾವಿನ ಸಂದರ್ಭದಲ್ಲಿ :

ಉಡುಗೆ : ಮುತ್ತೈದೆ ಹೆಣ್ಣು ಮಕ್ಕಳು ಸತ್ತ ಬಳಿಕ ಹೆಣದ ಮೈಮೇಲಿನ ಯಾವುದೇ ಬಟ್ಟೆಗಳನ್ನು ಮನೆಯಲ್ಲಿ ತೆಗೆಯುವುದಿಲ್ಲ. ಹೆಣವನ್ನು ಚಟ್ಟದ ಮೇಲೆ ಸ್ಮಶಾನಕ್ಕೆ ಒಯ್ದು ಚಿತೆಯ ಮೇಲೆ ಇಡುತ್ತಾರೆ. ಆಗ ಅವಳ ಮೈಮೇಲಿನ ಎಲ್ಲ ಬಟ್ಟೆಗಳನ್ನು ಹರಿದು ಹಾಕಿ ಸಂಪೂರ್ಣವಾಗಿ ಮೈಮೇಲೆ ಬೇವಿನ ತಪ್ಪಲುಗಳಿಂದ ಮುಚ್ಚುತ್ತಾರೆ. ಮೈಮೇಲಿನಿಂದ ತೆಗೆದ ಬಟ್ಟೆಗಳನ್ನು ಹೆಣದ ಕಾಲಬಳಿಯಿಟ್ಟ ಬಳಿಕ ಚಿತೆಗೆ ಬೆಂಕಿ ಹಚ್ಚುತ್ತಾರೆ.

ತೊಡುಗೆ : ಹೆಣದ ಮೈಮೇಲೆ ಇದ್ದ ಆಭರಣಗಳನ್ನು ಮನೆಯಲ್ಲಿ ತೆಗೆಯುವುದಿಲ್ಲ. ಸ್ಮಶಾನದಲ್ಲಿ ಎಲ್ಲ ಆಭರಣಗಳನ್ನು ತೆಗೆಯುತ್ತಾರೆ. ಮೂಗಿನಲ್ಲಿ ಬಂಗಾರದ ಮೂಗುತಿ ಇದ್ದರೆ ಸ್ವಲ್ಪ ಬಂಗಾರದ ತುಣಕನ್ನು ಹೆಣದ ಬಾಯಲ್ಲಿ ಹಾಕಿ ಚಿತೆಗೆ ಬೆಂಕಿ ಹಚ್ಚುತ್ತಾರೆ. ಆ ಒಡವೆಗಳನ್ನು ಯಾರಿಗೂ ಕೊಡದೆ ಮರಳಿ ಮನೆಗೆ ಒಯ್ಯುತ್ತಾರೆ.

ತಾಂಡಾದಲ್ಲಿ ಯಾರಾದರೂ ಸತ್ತರೆ ಹೆಣದ ಹತ್ತಿರ ಹೋಗಿ ಬರುತ್ತಾರೆ. ಗಂಡಸರು ಹೆಣದ ಹಿಂದೆ ಹೋಗಿ ಸಂಸ್ಕಾರದ ಕಾರ್ಯ ಮುಗಿದ ಬಳಿಕ ಕೆರೆ, ಬಾವಿಗಳಲ್ಲಿ ಸ್ನಾನ ಮಾಡಿ ಬರುತ್ತಾರೆ. ಹೆಣ್ಣು ಮಕ್ಕಳು ಹೆಣದ ಹಿಂದೆ ಹೋಗುವುದಿಲ್ಲ. ಹೆಣ ಒಯ್ದ ಬಳಿಕ ತಮ್ಮ ತಮ್ಮ ಮನೆಯಲ್ಲಿ ತುಂಬಿದ ಕೊಡಗಳನ್ನು ಖಾಲಿ ಮಾಡಿ, ಬೇರೆ ನೀರನ್ನು ತಂದು ಸ್ನಾನ ಮಾಡುತ್ತಾರೆ.

ಮುರ್ಚೆಟ :

ಸಣ್ಣ ಮಕ್ಕಳಿಗೆ ಮುರ್ಚೆಟ ಆದರೆ ಮಂತ್ರ ಹಾಕುವವರ ಹತ್ತಿರ ಒಯ್ದು ಅವರಿಂದ ಮಂತ್ರ ಹಾಕಿಸುತ್ತಾರೆ. ಮಾಂತ್ರಿಕ ಮಂತ್ರ ಹಾಕಿ ಮಗುವಿನ ಕೊರಳಿಗೆ ಏಳು ಬಣ್ಣಗಳ ದಾರಗಳಿಂದ ಸಿದ್ಧಪಡಿಸಿದ ದಾರ ಕಟ್ಟುತ್ತಾನೆ. ಮಗುವಿಗೆ ಗೋಮೂತ್ರ ಸಿಂಪಡಿಸಿ ಸ್ನಾನ ಮಾಡಿಸುತ್ತಾರೆ. ಆ ಮಗುವಿನ ಮೈಮೇಲಿರುವ ಬಟ್ಟೆಯನ್ನು ತೆಗೆದು ಬಾರಿಯ ಗಿಡದ ಮೇಲೆ ಒಗೆದು ಬರುತ್ತಾರೆ.

ಗಂಡಸರ ಉಡುಗೆತೊಡುಗೆಗಳು :

ಲಂಬಾಣಿ ಗಂಡಸರ ಉಡುಗೆ ತೊಡುಗೆಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷ ಬದಲಾವಣೆಗಳು ಕಾಣಸಿಗುವುದಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಇವರ ಉಡುಗೆ-ತೊಡುಗೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿರುವುದು ಕಂಡುಬರುತ್ತದೆ. ದೃಢಕಾಯರೂ, ಸುಂದರವಾದ ಮೈಕಟ್ಟುಳ್ಳವರೂ ಆದ ಲಂಬಾಣಿ ಗಂಡಸರಿಗೆ ಮದುವೆ ಸಮಾರಂಭಗಳಲ್ಲಿ ವಿಶೇಷವಾದ ಉಡುಗೆ-ತೊಡುಗೆಗಳಿರುತ್ತವೆ. ತಲೆಗೆ ಸುತ್ತುವ ಪೇಟಾ, ಬಗಲ ಕಸಿ ಅಂಗಿ, ದಡಿ ಧೋತರ-ಇತ್ಯಾದಿ.

ಝೋಣ್ಣಾ (ಚಂಚಿ) :

ಲಂಬಾಣಿಗರಲ್ಲಿ ಮದುವೆ ಸಂದರ್ಭದಲ್ಲಿ ಎಲೆ ಅಡಿಕೆ ತಿನ್ನಲಿಕ್ಕೆ ಉಪಯೋಗಿಸುವ ಚೀಲಕ್ಕೆ “ಝೋಣ್ಣಾ” ಎಂದು ಕರೆಯುತ್ತಾರೆ. ಪೂರ್ವದಲ್ಲಿ ಮದುವೆ ಸಂದರ್ಭದಲ್ಲಿ ವರನಿಗೆ ಅತ್ತೆ ಮಾವನ ಮನೆಯಲ್ಲಿ ತಿಂಗಳುಗಟ್ಟಲೆ ಇರಬೇಕಾಗುತ್ತಿತ್ತು. ಆಗ ಮದಲಿಂಗನು ಪ್ರತಿದಿನ ತನ್ನ ಹತ್ತಿರ ಎಷ್ಟು ಜನ ಬಂದು ಹೋಗುತ್ತಾರೋ ಅಷ್ಟು ಜನರಿಗೆ ಎಲೆ ಅಡಿಕೆಗಳನ್ನು ಕೊಟ್ಟು ಆಮೇಲೆ ಹಿರಿಯರಿಗೆ ನಮಸ್ಕರಿಸುತ್ತಿದ್ದನು.

ಝೋಣ್ಣಾ ಒಂದು ಫೂಟಿನಷ್ಟು, ಚೌರಸ ಆಕಾರವಾಗಿರುತ್ತದೆ. ಕೆಳಭಾಗದಲ್ಲಿ ದಪ್ಪನೆಯ ಬಟ್ಟೆಯಿಂದ ಕೂಡಿದ ಉದ್ದನೆಯ ಪಟ್ಟಿ ಹಚ್ಚಿರುತ್ತಾರೆ. ಅಕ್ಕಪಕ್ಕಗಳಲ್ಲಿ ವಿವಿಧ ಬಗೆಯ ಕಸೂತಿಯ ಖಿಲಣ, ಬಾಳಿ ಗಾಡರೆ, ಮಧ್ಯದಲ್ಲಿ ಪಿಸಾರ ಘರ (ನಾಣ್ಯದ ಮನೆ) ಅಲ್ಲಲ್ಲಿ ಕಾಜಿನ ಬಿಲ್ಲೆಗಳನ್ನು ಹಚ್ಚಿರುತ್ತಾರೆ. ಝೋಣ್ಣಾ ಒಳಗಡೆಯಿರುವ ನಾಲ್ಕು ಪದರುಗಳಲ್ಲಿ ಅಡಕತ್ತು, ಎಲೆ, ಅಡಿಕೆ, ತಂಬಾಕು, ಕಾಂಚ, ಯಾಲಕ್ಕಿ ಮತ್ತು ಲವಂಗ ಹಾಕಿರುತ್ತಾರೆ. ಝೋಣ್ಣಾದ ಮೇಲ್ಭಾಗದಲ್ಲಿ ಎರಡು ಮೊಳದಷ್ಟು ಉದ್ದನೆಯ ಕೆಂಪು ಪಟ್ಟಿ ಹೆಗಲಿಗೆ ಹಾಕಲು ಮಾಡಿರುತ್ತಾರೆ. ಅದಕ್ಕೆ ವಿವಿಧ ವಿನ್ಯಾಸದ ಕಸೂತಿ ಅದರ ತುಂಬ ಉಣ್ಣೆಯ ಗೊಂಡೆಗಳು ಹಚ್ಚಿ ಝೋಣ್ಣಾದ ಮಧ್ಯಭಾಗದಲ್ಲಿ “ಜೀವಲ್ಲಾ ಕಸೂತಿ” ತೆಗೆದಿರುತ್ತಾರೆ. ಮದುವೆಯ ಸಂದರ್ಭದಲ್ಲಿ ಗಂಡ, ಹೆಂಡತಿಗೆ ಝೋಣ್ಣಾದೊಳಗಿನಿಂದ ಎಲೆ ಅಡಿಕೆ ವಧುವಿಗೆ ಕೊಟ್ಟರೆ ಇವರಿಬ್ಬರಲ್ಲಿ ಕೊನೆಯವರೆಗೆ ಗಾಢವಾದ ಪ್ರೇಮ ಇರುತ್ತದೆ ಎನ್ನುತ್ತಾರೆ. ಈ ಎರಡೂ ಜೀವಗಳು ಒಂದಾಗಲು ಝೋಣ್ಣಾದ ಮೇಲೆ ಹಾಕಿರುವ “ಜೀವಲ್ಯಾ ಕಸೂತಿ” ಕಾರಣವೆಂದು ಲಂಬಾಣಿಗರ ನಂಬುಗೆ.

ಕಣದೋರೋ (ಉಡದಾರ) :

ಇದು ಗಂಡಸರು ಸೊಂಟಕ್ಕೆ ಕಟ್ಟಿಕೊಳ್ಳುವ ಉಡದಾರ. ದಪ್ಪ ಕಾಶಿದಾರದ ಮೂರು ಎಳೆಗಳಿಗೆ ಪ್ರತ್ಯೇಕವಾಗಿ ಒಂದಕ್ಕೊಂದು ಕಸೂತಿ ತೆಗೆದು ಆಮೇಲೆ ಮೂರು ಎಳೆಗಳಿಗೆ ಒತ್ತಟ್ಟಿಗೆ ಕೂಡಿಸಿ ಮೂರು ಕಡೆಗೆ ಅಲ್ಲಲ್ಲಿ ಕಸೂತಿ ಹಾಕಿ ಬಿಗಿದಿರುತ್ತಾರೆ. ಎರಡೂ ಬದಿಗೆ ಕಟ್ಟಿಕೊಳ್ಳಲಿಕ್ಕೆ ಕೊಂಡಿ ಮಾಡಿರುತ್ತಾರೆ. ಕೊಂಡಿಗಳ ಮೇಲೆ ಪ್ರತ್ಯೇಕವಾದ ಒಂದು ಚೋಟ ಉದ್ದನೆಯ ಎಳೆಗಳ ಮೇಲೆ ಕಸೂತಿ ತೆಗೆದು ಅದರ ಮೇಲೆ ಅಲ್ಲಲ್ಲಿ ಉಣ್ಣೆಯ ಗೊಂಡೆ ಹಚ್ಚಿ ಮಿಶ್ರಧಾತುವಿನ (ಪಾರಿ) ತವರು ಹಚ್ಚಿ ತಯಾರಿಸುತ್ತಾರೆ.

ಗಂಡು ಮಗು :

ಉಡುಗೆ : ಮಗುವಿಗೆ ಹದಿನೈದು ದಿನಗಳವರೆಗೆ ಮೈಮೇಲೆ ತಿಳುವಾದ ಬಟ್ಟೆ ಹೊದ್ದಿರುತ್ತಾರೆ. ಆಮೇಲೆ ಬಿಳಿ ಬಟ್ಟೆಯನ್ನು ತಂದು ಅದರಿಂದ ಮೇಕಳ್ಯಾ(ಅಂಗಿ) ತಯಾರಿಸಿ ಉಡಿಸುತ್ತಾರೆ. ತಲೆ ಬೆಚ್ಚಗಿರಲೆಂದು ಒಂದು ಕುಲಾಯಿ ಕಟ್ಟುತ್ತಾರೆ. ಕೆಲವರು ಮಗು ಬೆಳೆಯುವವರೆಗೆ ಬಟ್ಟೆ ಉಡಿಸುವುದಿಲ್ಲ.

ತೊಡುಗೆ : ಐದನೆಯ ದಿವಸದ “ದಳವಾ ಧೋಕಾಯೇರೋ ಕಾರ್ಯ ಮಾಡುವಾಗ ಮಗುವಿನ ಕೈಯಲ್ಲಿ ಗೋದಿಕಾಳು ಪೋಣಿಸಿದ ಒಂದೊಂದು ಸರ ಕಟ್ಟುತ್ತಾರೆ. ಆಮೇಲೆ ಮಗುವಿಗೆ ಮೈಮೇಲೆ ಒಂದು ತಿಂಗಳವರೆಗೆ ಯಾವುದೇ ತೊಡುಗೆ ಹಾಕುವುದಿಲ್ಲ. ಒಂದು ತಿಂಗಳು ಕಳೆದ ಬಳಿಕ ಮಗುವಿನ ಕೈಯಲ್ಲಿ ಒಂದೊಂದಾಗಿ ಉಣ್ಣೆಯ ಬಳೆ, ಮಿಶ್ರಧಾತುವಿನ ಪರಿಹಾರ ಮತ್ತು ಬಿಳಿಯ ಕರ್ಪೂರದ ಚೂಡಿಗಳನ್ನು ಹಾಕುತ್ತಾರೆ. ಸೊಂಟಕ್ಕೆ ಕಾಶಿದಾರ, ಕಾಲಲ್ಲಿ ತಾಮ್ರದ ಅಂಬಳ್ಯಾ (ಕಡಗ) ಹಾಕುತ್ತಾರೆ.

ಬಾಲಕರು :

ಉಡುಗೆ : ಮಾಂಜರಪಟ್ಟಿ ಛಾಟಿ (ಬನಿಯನ್) ಮತ್ತು ಅಂಗಿ, ಉದ್ದನೆಯ “ಕಚೋಟಿ” (ಲಂಗೋಟಿ” ಉಟ್ಟುಕೊಳ್ಳುತ್ತಿದ್ದರು. ಕೆಲವರಂತೂ ಲಂಗೋಟಿ ಹಾಕದೆಯೇ ಉದ್ದನೆಯ ಒಂದು ಅಂಗಿಯ ಮೇಲೆ ಇರುತ್ತಿದ್ದರು. ತಲೆಗೆ ಟೋಪಿ ಇದು ಬಾಲಕರ ಉಡುಪು.

ತೊಡುಗೆ : ಮಳೆ, ಗಾಳಿ, ಬಿಸಿಲು, ರಾತ್ರಿ ಹಗಲೆನ್ನದೆ ಅಲೆಮಾರಿಗಳಾಗಿ ಕಾಡುಮೇಡುಗಳಲ್ಲಿ ಅಲೆಯುವುದರಿಂದ ತಮಗೆ ಸುಂದರವಾಗಿ ಕಾಣುವ ಕಲ್ಲು ಮುಳ್ಳುಗಳನ್ನು ಕಟ್ಟಿಕೊಳ್ಳುತ್ತಿದ್ದರು. ಉದಾಹರಣೆಗೆ, ಕಾಳಪತಡಿ(ಕರಿಕಲ್ಲು) ಘೋಡರ ಲಳಿ (ಹದ್ದಿನ ಉಗುರು), ವಾಗೇರ ನಕ(ಹುಲಿಯ ಉಗುರು), ಮೀನಿನ ಮುಳ್ಳುಗಳನ್ನು ಸಹ ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು. ಭೂತ, ಪಿಶಾಚಿ, ಗಾಳಿಶಕಾ ಆಗದಿರಲೆಂದು ಮೇಲು ಶಿಕಾರಿಗಳ ಕಡೆಯಿಂದ ಬಾಜರಟ್ಟೋ (ಒಂದು ಬಗೆಯ ತಾಯಿತ) ಪಡೆದುಕೊಂಡು ಮುಂಗೈಗೆ ಕಟ್ಟುತ್ತಿದ್ದರು. ಸೊಂಟದ ಮೇಲೆ ಕಾಶಿದಾರಕ್ಕೆ ಉಣ್ಣೆಯ ಗೊಂಡೆ ಹಚ್ಚಿ ಹೊಲಿದು ಕಟ್ಟಿಕೊಳ್ಳುತ್ತಿದ್ದರು.

ಮದುವೆಯಲ್ಲಿ :

ಉಡುಗೆ : ಮದಲಿಂಗನು ಅಂಗಿ, ಧೋತರ ತಲೆಗೆ ರುಮಾಲು ಹೆಗಲಿಗೆ ಎಲೆ ಅಡಿಕೆ ತಿನ್ನುವ ಝೋಣ್ಣಾ, ಕಾಲಲ್ಲಿ ಮೋಚಡಿ, ಮೈಮೇಲೆ ಕೆಂಪು ಶಾಲು ಹೊದ್ದಿರುತ್ತಾನೆ. ಮದಲಿಂಗನ ಹಿಂದೆ ಸಹಾಯಕನಾಗಿ ಲೇರಿಯಾ ಚಿಲುಮೆ ಸೇದುವ ಗುಡಗಡಿ ಹಿಡಿದಿರುತ್ತಾನೆ. ಹಸೆಮಣೆಯ ಮೇಲೆ ಕುಳಿತುಕೊಂಡಾಗ ಮದಲಿಂಗನಿಗೆ ಗುಡಗಿ ಚೊಣ್ಣ, ತಲೆಗೆ ಮೋಳಿಯಾ, ಕಮಾನಕಟ್ಟೆ (ಬಗಲ ಕಸಿ) ಅಂಗಿ ಉಡಿಸುತ್ತಾರೆ. ಮದಲಿಂಗನ ಬೆನ್ನ ಮೇಲೆ ಅರಿಷಿಣದಿಂದ ಸ್ವಸ್ತಿಕ ಚಿಹ್ನೆ ತೆಗೆದಿರುತ್ತಾರೆ. ಅಕ್ಷತೆ ಮುಗಿದ ಬಳಿಕ ಮದಲಿಂಗನಿಗೆ ಕಮಾನಕಟ್ಟಿ ಅಂಗಿ ಮೂರು ಮೊಳದ ಧೋತರ, ತಲೆಗೆ ಪೇಟಾ ಸುತ್ತುತ್ತಾರೆ.

ತೊಡುಗೆ : ಮದಲಿಂಗನು ಮದುವೆಗಾಗಿ ಅತ್ತೆ ಮಾವರ ಮನೆಗೆ ಹೋಗುವ ಮೊದಲಿನ ರಾತ್ರಿ ತಮ್ಮ ಮನೆಯಲ್ಲಿ ವದಾಯಿ(ಬರಿ) ಕಾರ್ಯ ಮುಗಿಸಿಕೊಂಡು ಬರುತ್ತಾನೆ. ಆಗ ಹಂದರದ ಕೆಳಗಡೆ ಹಿರಿಯರು ಪಾಲ್ಗೊಂಡು ಕಾಸಿದ ಸೂಜಿಯಿಂದ ಮದಲಿಂಗನ ಬಲತೋಳಿನ ಮೇಲೆ ಬರಿ ಕೊಟ್ಟು ಅಲ್ಲಿ ಅವನ ಕಿವಿ ಒಡೆದು ಕರಿದಾರ ಹಾಕುತ್ತಾರೆ. ಇತ್ತ ಮದುವೆಯಲ್ಲಿ ಅತ್ತೆ ಮಾವರು ಮದಲಿಂಗನ ಕಿವಿಯಲ್ಲಿ ಬಂಗಾರದ ಮುರುವು, ಕೈಬೆರಳುಗಳಲ್ಲಿ ಬಂಗಾರದ ಉಂಗುರ, ಮುಂಗೈಯಲ್ಲಿ ಬೆಳ್ಳಿಯ ಕಡಗ, ಸೊಂಟಕ್ಕೆ ವಿಶೇಷವಾದ ಉಣ್ಣೆಯ ಗೊಂಡೆಯಿಂದ ಸಿದ್ಧಪಡಿಸಿರುವ “ಕಣದೋರೋ” ಹಾಕುತ್ತಾರೆ. ಈ ಝೂಂಡಿ ಸೇವಾಭಾಯಾನ ಹೆಸರಿನ ಮೇಲೆ ಕಟ್ಟಿಕೊಳ್ಳುತ್ತಾರೆ. ಏಕೆಂದರೆ ಇತರ ಜನರ ಮಧ್ಯದಿಂದ ಲಂಬಾಣಿ ಪುರುಷರನ್ನು ಗುರುತಿಸಲಿಕ್ಕೆ ಇದು ಏಕೈಕ ಸಾಧನವಾಗಿದೆ ಎನ್ನುತ್ತಾರೆ. ಉದಾಹರಣೆಗೆ,

“ಕೋರೆ ಮಾಯಿತಿ ಗೋರೆ ಟಾಳೋ
ಮಾರೋ ಸೇವಾ ಭಾಯಾ
ರಾತಡಿ ಝಾಂಡಿವಾಳೋ ಮಾರೋ
ಗೋರವೀಯ ಭಾಯಾ”[4]

(ಸಾರಾಂಶ : ನಮ್ಮ ಸೇವಾಭಾಯಾ ಲಮಾಣೇತರರಿಂದ ಲಂಬಾಣಿಗರನ್ನು ಆಯ್ದನು. ಕೆಂಪು ಗೊಂಡೆಗಳನ್ನುಳ್ಳವರು ನಮ್ಮ ಲಂಬಾಣಿ ಬಂಧುಗಳಿದ್ದಾರೆ.) ಈ ಮೇಲಿನ ಪದ್ಯವನ್ನು ಗಮನಿಸಿದಾಗ, ಸೇವಾಭಾಯಾ ಇನ್ನುಳಿದ ಜನರಿಂದ ಲಂಬಾಣಿ ಜನರನ್ನು ಕೇವಲ ಝೂಂಡಿಯಾ ಗುರ್ತಿನ ಮೇಲೆ ಪ್ರತ್ಯೇಕಿಸುವುದು ವಿಸ್ಮಯ ಸಂಗತಿ.

ಹಬ್ಬ ಹರಿದಿನಗಳಲ್ಲಿ :

ಉಡುಗೆ : ಗಂಡಸರು ಕೂಡ ಹಬ್ಬ ಹರಿದಿನಗಳಲ್ಲಿ ಹೆಂಗಸರಂತೆ ರಂಗು ರಂಗಿನ ಬಟ್ಟೆಗಳನ್ನು ಉಡಲು ಬಯಸುತ್ತಾರೆ. ತಲೆಗೆ ವಿಶೇಷವಾಗಿ ರಾಜಸ್ಥಾನಿ ಚಿತ್ರ ಚಿತ್ತಾರವುಳ್ಳ ಪಟಗಾ, ಬಣ್ಣಗಳ ಅಂಗಿ, ಬಿಳಿಯ ಧೋತರ ಉಟ್ಟುಕೊಳ್ಳುತ್ತಾರೆ. ಈ ಪೋಷಾಕುಗಳನ್ನು ಉಟ್ಟುಕೊಂಡು ತಮ್ಮ ಗುಂಪಿನವರ ಜೊತೆ ಕೂಡಿಕೊಂಡು ನವೋದಾಡೋ (ಶುಭದಿನ) ಆಚರಿಸುತ್ತಾರೆ.

ತೊಡುಗೆ : ಸಾಮಾನ್ಯವಾಗಿ ಲಂಬಾಣಿ ಪುರುಷರು ಮದುವೆಯ ಸಂದರ್ಭದಲ್ಲಿ ಮಾತ್ರ ಮೈಮೇಲೆ ಹೊಸ ಒಡವೆಗಳನ್ನು ಹಾಕಿಕೊಳ್ಳುತ್ತಾರೆ. ಹಬ್ಬ ಹರಿದಿನಗಳಲ್ಲಿ ಯಾವುದೇ ಹೊಸ ಆಭರಣಗಳನ್ನು ಹಾಕಿಕೊಳ್ಳುವುದಿಲ್ಲ.

ವೃದ್ಧರು :

ಉಡುಗೆ : ಮುದುಕರು ಕಚ್ಚೆಪಂಚೆ, ಕಮಾನಕಟ್ಟಿ ಅಂಗಿ, ಒಳ ಅಂಗಿ (ಛಾಟಿ), ತಲೆಗೆ ಪೇಟಾ, ಸದಾ ಹೆಗಲ ಮೇಲೆ ದುಪ್ಪಟ್ಟಿ ಹಾಕಿಕೊಂಡಿರುತ್ತಾರೆ. ಸೊಂಟಕ್ಕೆ ಎಲೆ ಅಡಿಕೆಯ ಸಂಚಿ(ಬಟವಾ) ಕೈಯಲ್ಲಿ ಒಂದು ಕೋಲು, ದುಪ್ಪಟ್ಟಿ ಎಂದರೆ ವೃದ್ಧರಿಗೆ ಪ್ರಿಯವಾದ ವಸ್ತು. ಏಕೆಂದರೆ ಚಳಿಯಾದಾಗ ಹೊದೆಯಲಿಕ್ಕೆ, ಮಳೆ ಬಂದಾಗ ಖುಪಲಿ(ಗುಪ್ಪೆ) ಮಾಡಿಕೊಂಡು ಹೊದೆಯಲಿಕ್ಕೆ, ಮಲಗುವಾಗ ಇದರ ಉಪಯೋಗವಾಗುತ್ತದೆ ಎಂಬುದು ಅವರ ಭಾವನೆ.

ತೊಡುಗೆ : ಪೂರ್ವದಲ್ಲಿ ಲಂಬಾಣಿ ವೃದ್ಧರು ಮೈಮೇಲೆ ಸಾಕಷ್ಟು ಆಭರಣಗಳು ಇರುತ್ತಿದ್ದವು. ಮೇಲುಕಿವಿಗೆ ಕನಿಯಾ, ಕೆಳಕಿವಿಗೆ ಮುರುವು(ಚೌಕಾಳಿ), ಕೊರಳಲ್ಲಿ ಕಾಶಿದಾರ, ಮುಂಗೈಯಲ್ಲಿ ಮಂದಳ್ಯಾ, ಸೊಂಟಕ್ಕೆ ಬೆಳ್ಳಿಯ ಕಣದೋರೋ ಅಲ್ಲದೆ ಸೆಣಬಿನಿಂದ ತಯಾರಿಸಿರುವ ಮೂರು ಬೆರಳಿನಷ್ಟು ಅಗಲವಾದ “ಮಾಂಸಳಿ”ಯನ್ನು ಸಿದ್ಧಪಡಿಸಿ ಅದರಲ್ಲಿ ಬೆಳ್ಳಿಯ ನಾಣ್ಯಗಳನ್ನು ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು.

ಹೆಂಡತಿ ಸತ್ತಾಗ :

ಪುರುಷರು ಉಟ್ಟಿರುವ ಧೋತರದ ಗಂಟು ಬಿಚ್ಚುತ್ತಾರೆ. ಅದನ್ನು ಹೊರತುಪಡಿಸಿ ಮೈಮೇಲಿನ ಆಭರಣಗಳಾಗಲಿ, ಬಟ್ಟೆಗಳಾಗಲಿ ತೆಗೆಯುವುದಿಲ್ಲ.

ಸಾವಿನ ಸಂದರ್ಭದಲ್ಲಿ : ಮೈಮೇಲಿನ ಎಲ್ಲ ಆಭರಣಗಳನ್ನು ಮನೆಯಲ್ಲಿಯೇ ತೆಗೆದು, ಸ್ಮಶಾನಕ್ಕೆ ಒಯ್ದು ಚಿತೆಯ ಮೇಲಿಟ್ಟ ಬಳಿಕ ಮೈಮೇಲಿನ ಎಲ್ಲ ಬಟ್ಟೆಗಳನ್ನು ಬಿಚ್ಚಿ ರುಮಾಲನ್ನು ಕುಟುಂಬದ ಹಿರಿಯ ಮಗನ ತಲೆಗೆ ಸುತ್ತುತ್ತಾರೆ. ಅಂಗಿ,ಧೋತರವನ್ನು ಕೆಲವರು ಮನಗೆ ತರುತ್ತಾರೆ. ಮತ್ತೆ ಕೆಲವರು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಸೊಂಟಕ್ಕೆ ಕಟ್ಟಿರುವ ಉಡದಾರವನ್ನು ಕತ್ತರಿಸಿಬಿಡುತ್ತಾರೆ.

ಇದು ಲಂಬಾಣಿ ಉಡುಗೆ-ತೊಡುಗೆಗಳನ್ನು ಕುರಿತ ಒಂದು ಸ್ಥೂಲ ವಿವರಣೆ. ಇಲ್ಲಿ ಉಲ್ಲೇಖಿತ ಸಂಗತಿಗಳಲ್ಲದೆ ಲಂಬಾಣಿಗಳ ಅರ್ಚನಾ ವಿಧಾನ, ಕುಣಿತ, ಹೋಳಿಹಬ್ಬ, ಮದುವೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಅನೇಕ ಸೂಕ್ಷ್ಮ ಸಂಗತಿಗಳು ಕಂಡುಬರುತ್ತವೆ. ಅದಕ್ಕೆ ವ್ಯಾಪಕ ಕ್ಷೇತ್ರಕಾರ್ಯ ದತ್ತ ಸಂಗ್ರಹಣೆ, ವಿಶ್ಲೇಷಣೆಗಳ ಅಗತ್ಯವಿದೆ. ಪ್ರಸ್ತುತ ಪ್ರಬಂಧ ಈ ಕುರಿತು ಹೆಚ್ಚಿನ ಅಧ್ಯಯನ ಮಾಡುವವರಿಗೆ ಒಂದು ದಿಕ್ಸೂಚಿ ಮಾತ್ರ.


[1]     ಮದುವೆಯಲ್ಲಿ ಮದಲಿಂಗ ಮದಲಿಂಗಿಗೆ ಉಡಿಸಿರುವ ಬಟ್ಟೆಗಳನ್ನು ಕೋತಳಿ(ಚೀಲ)ಯಲ್ಲಿ ಹಾಕಿ ಬೀಳ್ಕೊಡುವ ದಿವಸ ಅವರ ಜೊತೆಗೆ ಒಯ್ಯುತ್ತಾರೆ. ಮೊದಲನೆ ರಾತ್ರಿಯ ದಿನ, ಅಕ್ಷತೆಯ ಸಂದರ್ಭದಲ್ಲಿ ಉಟ್ಟಿಕೊಂಡ ಬಟ್ಟೆಗಳಿಂದ ಒಂದು ಉದ್ದನೆಯ ತಲೆದಿಂಬು ತಯಾರಿಸಿ ಕೊಡುತ್ತಾರೆ. ಹೀಗೆ ಮಾಡುವುದರಿಂದ ಅವರಿಬ್ಬರಲ್ಲಿ “ಚಿರಂತನ ಪ್ರೇಮ” ಇರುತ್ತದೆಯೆಂಬ ನಂಬುಗೆ ಇದೆ.

[2]     “ಕೋತಳಿ” ಇದು ಸಾಮಾನುಗಳನ್ನು ಹಾಕುವ ಚೀಲ, ಇದನ್ನು ಕರಿ, ಕೆಂಪು ಬಟ್ಟೆಗಳಿಂದ ಅಂದವಾದ ಕಸೂತಿ ಹಾಕಿ ತಯಾರಿಸಿರುತ್ತಾರೆ. ಒಂದೂವರೆ ಮೊಳದಷ್ಟು ಉದ್ದ, ಒಂದು ಮೊಳದಷ್ಟು ಅಗಲವಿರುತ್ತದೆ. ಮದಲಿಂಗಿ ಗಂಡನ ಮನೆಯಲ್ಲಿ ತನ್ನ ಪೋಷಾಕುಗಳನ್ನು ಇದರಲ್ಲಿ ಹಾಕಿ ಇಡುತ್ತಾಳೆ. ಲಂಬಾಣಿಗರು ಪೂರ್ವದಲ್ಲಿ ಪೆಟ್ಟಿಗೆಗಳನ್ನು ಹೊತ್ತುಕೊಂಡು ಹೋಗಲಿಕ್ಕೆ ತೊಂದರೆ ಆಗುತ್ತದೆಂದು ಕೋತಳಿ(ಚೀಲ) (ಮೂಲ ಹಿಂದೀ ಶಬ್ದ ಪೋಟ್ಲಿ) ತಯಾರಿಸಿರಬೇಕು. (ಪುಟ ೧೩೭ರ ಚಿತ್ರ ನೋಡಿ).

[3]     ಅಲೆಮಾರಿಗಳಾದ ಲಂಬಾಣಿಗರು ವ್ಯಾಪಾರಕ್ಕಾಗಿ ತಮ್ಮ ಗುಂಪಿನವರ ಜೊತೆಗೆ ತಂಡೋಪತಂಡವಾಗಿ ವಲಸೆ ಹೋಗುತ್ತಿದ್ದರು. ವಲಸೆ ಹೋಗುವುದು ಅವರಿಗೆ ಅನಿವಾರ್ಯವೂ ಆಗಿತ್ತು. ಒಮ್ಮೆ ತಮ್ಮ ಹೆಣ್ಣುಮಕ್ಕಳನ್ನು ಬೇರೆ ತಂಡದವರ ಜೊತೆಗೆ ಮದುವೆ ಮಾಡಿಕೊಟ್ಟರೆ ಮತ್ತೊಮ್ಮೆ ಪರಸ್ಪರ ಭೆಟ್ಟಿ ಆಗುವುದು ಅಪರೂಪ. ಈ ಒಂದು ಕಾರಣಕ್ಕಾಗಿ ಇವರು ಒಬ್ಬರಿಗೊಬ್ಬರು ದುಃಖದಿಂದ ಅಪ್ಪಿಕೊಂಡು ಅಳುತ್ತಿದ್ದರು. ಆದ್ದರಿಂದ ಈ ಮೇಲಿನ ಗಾದೆ ರೂಢಿಯಲ್ಲಿರಬೇಕು. ಆದರೆ ಇಂದು ತಾಂಡಾಗಳ ರೂಪದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರೂ ಹೆಣ್ಣು ಮಕ್ಕಳಲ್ಲಿ “ಅಳುವ ಸಂಪ್ರದಾಯ” ಹಾಗೆಯೇ ರೂಢಿಯಲ್ಲಿ ಉಳಿದುಕೊಂಡಿದೆ.

[4]     ಡಾ. ಪಿ.ಕೆ. ಖಂಡೋಬಾ “ಕರ್ನಾಟಕದ ಲಂಬಾಣಿಗಳು : ಒಂದು ಸಾಂಸ್ಕೃತಿಕ ಅಧ್ಯಯನ”, ೧೯೯೧, ಪುಟ ೬೭