ಮಾನವನ ಇತಿಹಾಸವೆಂದರೆ, ಕೇವಲ ಪುರುಷನ ಇತಿಹಾಸವೆನ್ನುವ ಭ್ರಮೆ ಹುಟ್ಟಿಸುವ ಮಟ್ಟಿಗೆ ಅವನ ಶೌರ್ಯ, ಸಾಹಸ, ದಿಗ್ವಿಜಯ ಬುದ್ಧಿವಂತಿಕೆಯನ್ನು ವೈಭವೀಕರಿಸಿದ ಸಮಾಜ ವ್ಯವಸ್ಥೆ ಸಾಂಸ್ಕೃತಿಕ ಇತಿಹಾಸಕ್ಕೆ ಮಹಿಳೆ ನೀಡಿದ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿ ಬಿಟ್ಟಿತು. ಅವಳ ಸೃಜನಾತ್ಮಕ ಪ್ರತಿಭೆ, ಕಲೆ, ಸಾಹಿತ್ಯ ಮತ್ತು ಶಕ್ತಿ, ಸಾಮರ್ಥ್ಯಗಳನ್ನು ವ್ಯವಸ್ಥೆ ಮರೆಮಾಚುತ್ತ ಬಂದಂತೆ ಒಂದು ಬಗೆಯ ‘‘ಶೂನ್ಯ’ತೆ’ ನಿರ್ಮಾಣಗೊಂಡಿತು.

ಮಾನವನ ನಾಗರಿಕತೆಯನ್ನು ಬೆಳಗಿದವಳು, ಮಾನವ ಜನಾಂಗದ ನಾಯಕಿಯಾಗಿದ್ದು ಸಂರಕ್ಷಿಸಿದವಳು ಮಹಿಳೆ, ಹೀಗಿದ್ದೂ ಗರ್ಭಧರಿಸುವಿಕೆ, ಹೆರಿಗೆ, ಸಂತಾನದ ಪೋಷಣೆಯ ಹಂತಗಳಲ್ಲಿ ಅವಳ ದೈಹಿಕ ದೌರ್ಬಲ್ಯ ಮತ್ತು ಜೈವಿಕ ಕಾರಣಗಳನ್ನು ಮುಂದೆ ಮಾಡಿದ ಪುರುಷ ಸಮಾಜ ಅವಳನ್ನು ಅಬಲೆ ಎಂದು ಘೋಷಿಸಿತು. ಪುರುಷನ ಸಮಾನವಾಗಿ ದುಡಿದು ತಿನ್ನುವ ಸ್ವಾತಂತ್ಯ್ರವನ್ನು ಕಿತ್ತುಕೊಂಡ ವ್ಯವಸ್ಥೆ ಅವಳನ್ನು ಅಧೀನಳನ್ನಾಗಿಸಿತು.ಹೊರ ಜಗತ್ತಿನ ಬೆಳಕಿನಿಂದ ವಂಚಿತಳಾದ ಹೆಣ್ಣು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಳು. ಇಂತಹ ಅಧೀನತೆಯ ಪರಿಧಿಯಲ್ಲಿಯೇ ಅವಳು ಪಟ್ಟ ಪಾಡುಗಳು ಹಾಡಾಗಿ ಹರಿದು ಬಂದವು.

ಪುರುಷ ಪ್ರಧಾನ ವ್ಯವಸ್ಥೆ ಸೃಷ್ಟಿಸಿದ ಮೌಲ್ಯಗಳನ್ನೇ ಅವಳು ಸ್ವೀಕರಿಸಿದಂತೆ ತೋರಿದರೂ, ಆಗಾಗ ಅವಳ ಒಳಜಗತ್ತು ತೆರೆದು ಕೊಂಡಿರುವುದನ್ನು ಜನಪದ ಕಥನ ಗೀತೆಗಳು ಮತ್ತು ಬಿಡಿ ಬಿಡಿಯಾಗಿ ದೊರೆಯುವ ತ್ರಿಪದಿಗಳಲ್ಲಿ ಕಾಣಬಹುದು. ಪಿತೃ ಪ್ರಧಾನ ವ್ಯವಸ್ಥೆಯ ಮೌಲ್ಯಗಳನ್ನು ಆಕೆ ದಾಟಲು ಪ್ರಯತ್ನಿಸಿದ್ದಾಳೆ. ಲಿಂಗಾಧಾರಿತ ತಾರತಮ್ಯ ನೀತಿಯನ್ನು ಸಹಿಸಲಾರದೆ ಪ್ರತಿಕ್ರಿಯಿಸಿದ್ದಾಳೆ, ಪ್ರಶ್ನಿಸಿದ್ದಾಳೆ, ಪ್ರತಿಭಟಿಸಿದ್ದಾಳೆ.

ಮಹಿಳಾ ಜಾನಪದ ಕಥೆಗಳು, ಹೆಣ್ಣಿನ ಬುದ್ಧಿವಂತಿಕೆ, ಶಕ್ತಿ, ಸಾಮರ್ಥ್ಯವನ್ನು, ಅನನ್ಯತೆಯನ್ನು ದಾಖಲಿಸಿವೆ.

ನಾಗರಿಕತೆಯಿಂದ ದೂರವಿರುವ ಬುಡಕಟ್ಟು ಜನಾಂಗಗಳಲ್ಲಿ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳು ಮಾತೃಪ್ರಧಾನ ವ್ಯವಸ್ಥೆಯ ಸ್ತ್ರೀ ಶಕ್ತಿ ಕೇಂದ್ರಗಳಾಗಿವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಮಹಿಳಾ ಜಾನಪದಕ್ಕಿಂತ ಇವು ಭಿನ್ನವಾಗಿವೆ. ಹೆಣ್ಣು ತನ್ನ ಪ್ರಾಧಾನ್ಯತೆಯನ್ನೇ ಉಳಿಸಿಕೊಂಡು, ತನ್ನ ಅಸ್ತಿತ್ವ, ಸ್ತ್ರೀ ಶಕ್ತಿಯ ಅನನ್ಯತೆಯನ್ನು ದಾಖಲಿಸಿವೆ. ಜನಪದ ರಾಮಾಯಣ, ಮಹಾಭಾರತ ಮತ್ತು ಬುಡಕಟ್ಟು ಜನಾಂಗದ ಕಥನ ಗೀತೆಗಳು, ತುಳು ಸಂಸ್ಕೃತಿಯಲ್ಲಿರುವ ಪಾಡ್ಡನಗಳು ಇಂತಹ ಸ್ತ್ರೀಶಕ್ತಿಯ ಮಾದರಿಗಳಾಗಿವೆ.

ಮಹಿಳಾ ಜಾನಪದ ಅಧ್ಯಯನ, ನಿಗೂಢವಾಗಿರುವ ಮಹಿಳಾ ಜಗತ್ತಿನ ಒಳಲೋಕವನ್ನು ಹೊಕ್ಕು ನೋಡಲು ಬೆಳಕಿಂಡಿಗಳಾಗಿವೆ. ಇಂತಹ ಅಧ್ಯಯನಗಳು ಕಾಲ ಗರ್ಭದಲ್ಲಿ ಹೂತು ಹೋದ ಮಹಿಳೆಯ ವ್ಯಕ್ತಿತ್ವ, ಶಕ್ತಿ ಸಾಮರ್ಥ್ಯಗಳನ್ನು ಶೋಧಿಸುವಲ್ಲಿ ಅರ್ಥವತ್ತಾಗಿ ತೊಡಗಿಕೊಂಡಿವೆ.

ಸ್ತ್ರೀವಾದೀ ಚಿಂತನೆಗಳು, ಮಹಿಳಾ ಅಧ್ಯಯನಗಳು ಸ್ತ್ರೀ ವಿಮೋಚನಾ ಚಳುವಳಿಗಳು ಮಾನವ ಪರವಾದವು ಜೀವ ಪರವಾದವು. ಮಹಿಳಾ ಅಧ್ಯಯನಗಳು ಮಾನ ಜನಾಂಗದ ಇತಿಹಾಸದ ಪುನಾರಚನೆಗೆ, ಮರುಚಿಂತನೆಗೆ ಪೂರಕವಾದವು. ಸ್ತ್ರೀ ಪುರುಷ ಸಮಾನತೆಯ ಸಮಾಜ ರೂಪುಗೊಳ್ಳಲು ಆಶಿಸುವಂತಹವು.