“ಯುದ್ಧಸ್ಯ ಕಥಾ” ಎಂಬ ಹೇಳಿಕೆಯಂತೆ ವೀರರ ಕಥೆ ಯಾವಾಗಲೂ ರಮ್ಯವೇ, ಮನೋಹರವೇ. ಅದರಲ್ಲೂ ಇಪ್ಪತ್ತನೆಯ ಶತಮಾನದ ಅಂತ್ಯ ಭಾಗದಲ್ಲೂ ಹಿಂದುಳಿದ ಜಿಲ್ಲೆಯೆಂದೇ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಮುಗ್ಧ ವನಿತೆಯರು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ತೋರಿದ ಸಾಹಸದ ಕಥೆ ಮತ್ತು ಮನೋಹರವಾದದ್ದು ಹಾಗೂ ಅಸಾಮಾನ್ಯವಾದದ್ದು. ಸಾಮಾಜಿಕ ಕಟ್ಟಳೆ, ಸಾಂಸಾರಿಕ ಮೋಹಗಳನ್ನು ಬದಿಗಿರಿಸಿ, ಭಾರತಾಂಬೆಯ ಮೋಹಪಾಶಕ್ಕೆ ಸಿಲುಕಿ, ಅವಳ ಬಂಧನವನ್ನು ಕಿತ್ತೊಗೆಯಲು ಕಂಕಣಬದ್ಧರಾಗಿದ್ದು ಕಾಲ್ಪನಿಕ ಕಥೆಯೇನಲ್ಲ, ಅದೊಂದು ವೀರ ನೈಜ ಗಾಥೆ.

ನೆರೆಮನೆಯ ಕಟ್ಟೆಯನ್ನು ಕೂಡ ಎಂದಿಗೂ ಏರಿರದ ಅಡಿಗೆ ಮನೆ ಸಾಮ್ರಾಜ್ಞಿಯರು ಪೊಲೀಸರ ಲಾಠಿ ಏಟಿಗೂ ಬೆದರದೇ ಅಳುಕದೇ ನಡುಪೇಟೆಯಲ್ಲಿ ನಡೆದುದು ಕಿತ್ತೂರು ಸಾಮ್ರಾಜ್ಞಿ ಚೆನ್ನಮ್ಮನ ಸಾಹಸಕ್ಕೆ ಕಡಿಮೆಯಾಗಿರುವ ಸಾಹಸವೇನಲ್ಲ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ತಂದೊಡ್ಡುವ ಜೀವನ ಸಂಗ್ರಾಮದಲ್ಲಿ ಹೋರಾಡಿಯೇ ಸೋತು ಸೊರಗಿ, ಬಸವಳಿದು ಹೋಗಿದ್ದಿದ್ದೂ, ಜೀವನದಲ್ಲಿನ ಆಸಕ್ತಿ, ಉತ್ಸಾಹಗಳೆಲ್ಲ ಕಮರಿ ಹೋಗಿರುವ ಕಾಲದಲ್ಲೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡುವ ಆಸಕ್ತಿ, ಧೈರ್ಯ, ಉತ್ಸಾಹಗಳು ಕೊನರಿದ್ದನ್ನು ಪವಾಡ ಸದೃಶ ಸಂಗತಿಯೆಂದು ಭಾವಿಸಿದಲ್ಲಿ, ಅದು ಬಹುಶಃ ಅತಿಶಯೋಕ್ತಿಯಾಗಲಾರದು. ಆದರೆ ಇದರ ಹಿನ್ನೆಲೆಯಲ್ಲಿ ಇದಕ್ಕೆ ಕಾರಣೀಭೂತವಾಗಿರುವ ಅನುಕೂಲಕರವಾಗಿರುವ ಅನೇಕ ಅಂಶಗಳನ್ನು ನಾವಿಲ್ಲಿ ಸ್ಮರಿಸಬಹುದು.

. ಭಾಗದ ಜನರ ರಕ್ತದಲ್ಲಿಯೇ ಪ್ರವಹಿಸುತ್ತಿರುವ ದೇಶಪ್ರೇಮ: ಸಾಮಾನ್ಯವಾಗಿ ಜನರಲ್ಲಿ ಮೊದಲು ‘ನಾನು’ ನಂತರ ನನ್ನ ‘ಕುಟುಂಬ’ ನನ್ನ ಊರು, ನನ್ನ ಜಿಲ್ಲೆ, ರಾಜ್ಯ ಬಳಿಕ ನನ್ನ ದೇಶ ಹೀಗೆ ಅನುಕ್ರಮವಾಗಿ ಇಳಿಕೆಯ ಕ್ರಮದಲ್ಲಿ ಪ್ರೇಮ ಉಕ್ಕುವುದನ್ನು ನಾವು ನೋಡುತ್ತೇವೆ. ಆದರೆ, ಈ ಜಿಲ್ಲೆಯ ಬಹುತೇಕ ಜನರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದಕ್ಕೆ ವಿರುದ್ಧವಾಗಿ ಪ್ರೇಮ ಉಕ್ಕುತ್ತಿದ್ದುದನ್ನು ನಾವು ಕಾಣಬಹುದಾಗಿತ್ತು. ಗಂಡ, ಮಕ್ಕಳು, ಮನೆ ಇತ್ಯಾದಿಗಳನ್ನೆಲ್ಲ ಗೌಣವಾಗಿ ಗಣಿಸಿ ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಂದ ಕಷ್ಟಗಳನ್ನೆಲ್ಲ ನಗುನಗುತ್ತ ಎದುರಿಸಿದ್ದೇ ಇದಕ್ಕೆ ಸಾಕ್ಷಿ. ಪ್ರಾರಂಭದಿಂದಲೂ ಅಂತಹ ಒಂದು ವಾತಾವರಣ, ಮನೋ ಭೂಮಿಕೆ ಈ ಭಾಗದ ಜನರಲ್ಲಿತ್ತು. ರಾಷ್ಟ್ರೀಯ ಚಳವಳಿಯು ಉತ್ತರದಲ್ಲಿ ಉದಯವಾಗುವುದಕ್ಕೆ ಮೊದಲೇ ಉತ್ತರ ಕರ್ನಾಟಕದಲ್ಲಿ ಪರಕೀಯರ ವಿರುದ್ಧ ಪ್ರತಿಭಟನೆ ಹತ್ತೊಂಭತ್ತನೆಯ ಶತಮಾನದ ಪ್ರಾರಂಭದಿಂದಲೂ ಕಂಡುಬಂದಿತ್ತೆಂಬ ವಿಷಯವನ್ನು ನಾವು ಇತಿಹಾಸದಲ್ಲಿ ಓದುದ್ದೇವೆ. ಅಲ್ಲಲ್ಲಿ ರೈತರ ದಂಗೆಗಳು, ಅನೇಕ ಸಾಹಸಿಗಳ ಪ್ರತಿಭಟನೆ, ಕಿತ್ತೂರು ಚೆನ್ನಮ್ಮ ನಂತಹವರ ಬ್ರಿಟೀಷ್‌‌‌ ವಿರೋಧ ಇವುಗಳಿಂದ ಕರ್ನಾಟಕದಲ್ಲಿ ಅದರಲ್ಲೂ ವಿಷೇಶವಾಗಿ ಉತ್ತರ ಭಾಗದಲ್ಲಿ ಸ್ವಾತಂತ್ರ್ಯ ಪ್ರೇಮ, ದೇಶಭಕ್ತಿ ಪ್ರಬಲವಾಗಿದ್ದುದು ಕಂಡು ಬರುತ್ತದೆ.

ಈಗಿನ ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಂಥ ಕಿತ್ತೂರು ರಾಜ್ಯ ದೇಶಮಟ್ಟದಲ್ಲೇ ಆಗ ಸ್ವಾತಂತ್ರ್ಯ ಹೋರಾಟದ ಕುರಿತು ಪ್ರಸಿದ್ಧಿ ಪಡೆದಂಥ ಪ್ರದೇಶವಾಗಿತ್ತು. “History of the freedom movement” ಹೊತ್ತಗೆಯಲ್ಲಿ ಈ ಕುರಿತು ಈ ಕೆಳಗಿನಂತೆ ಉದ್ಗರಿಸಲಾಗಿದೆ. “ಪುಟ್ಟ ಪ್ರದೇಶವಾದ ಕಿತ್ತೂರು ೧೮೨೪ ರಲ್ಲಿ ಭಾರತದ ಇತರ ಭಾಗಗಳಿಗೆ ಬ್ರಿಟೀಷ್‌‌‌ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ನಿರ್ಭಯವಾಗಿ ಹೋರಾಡುವುದನ್ನು ಕಲಿಸಿಕೊಟ್ಟಿತು. ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ಈ ಊರಿನಲ್ಲೇ ಪ್ರಾರಂಭವಾಗಿದೆ.” “ಕಿತ್ತೂರು ಚೆನ್ನಮ್ಮನ ಈ ಪರಿಯ ಹೋರಾಟ ಸಮಗ್ರ ಭಾರತವನ್ನೇ ಈ ದಿಶೆಯಲ್ಲಿ ಪ್ರಚೋದಿಸಿರುವಷ್ಟು ಪ್ರಾಬಲ್ಯಪೂರ್ಣವಾಗಿರುವಾಗ ಸಮೀಪದ ಉತ್ತರ ಕನ್ನಡ ಜಿಲ್ಲೆಯ ಜನರು (ಸ್ತ್ರೀಯರನ್ನೊಳಗೊಂಡು) ಪ್ರಭಾವಿತರಾಗಿದ್ದಿದ್ದರೆ ಅದು ಸಹಜ. ಆಶ್ಚರ್ಯದ ಸಂಗತಿಯಂತೂ ಅಲ್ಲವೇ ಅಲ್ಲ.

. ಅನುಕೂಲಕರ ನೈಸರ್ಗಿಕ ಪರಿಸರ: ವಿಶಾಲವಾದ ಕರಾವಳಿ ತೀರ, ದಟ್ಟವಾದ ಅರಣ್ಯ ಪ್ರದೇಶಗಳನ್ನು ಒಳಗೊಂಡಂಥ ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಪರಿಸರವೂ ಜನರ ಮನೋ ಭೂಮಿಕೆಗೆ ಪೂರಕವಾಗಿದ್ದು- ಉಪ್ಪಿನ ಸತ್ಯಾಗ್ರಹ, ಜಂಗಲ್‌ ಸತ್ಯಾಗ್ರಹಗಳನ್ನೊಳಗೊಂಡು ಅನೇಕ ಸತ್ಯಾಗ್ರಹಗಳನ್ನು ಮಾಡಲು ಅನುವು ಮಾಡಿ ಕೊಟ್ಟಿತು. ಅಂತೆಯೇ ಪೌರ ಅಸಹಕಾರ ಚಳುವಳಿಗೆ ಉತ್ತರ ಕನ್ನಡ ಜಿಲ್ಲೆ ಪ್ರಶಸ್ತವಾದ ಸ್ಥಳವೆಂದು ಪ್ರದೇಶ ಕಾಂಗ್ರೆಸ್ ಸಮಿತಿ, ರಾಷ್ಟ್ರೀಯ ಕಾಂಗ್ರೆಸ್ ಸಮಿತಿಗೆ ತಿಳಿಸಿತ್ತು. “ಸಾಮೂಹಿಕ ಸವಿನಯ ಕಾಯ್ದೆ ಭಂಗವನ್ನು ಪ್ರಚಂಡ ಪ್ರಮಾಣದಲ್ಲಿ ಕೈಕೊಳ್ಳಲು ಉತ್ತರ ಕನ್ನಡ ಜಿಲ್ಲೆಯಷ್ಟು ಸರ್ವವಿಧ ದಿಂದಲೂ ಅನುಕೂಲವಾದ ಕ್ಷೇತ್ರ ಇನ್ನೊಂದಿಲ್ಲ. ಸಮುದ್ರ ದಡದಲ್ಲಿ ಉಪ್ಪಿನ ಕಾಯದೆ ಭಂಗ ಪ್ರಾರಂಭಿಸಲು ಬರುವಂತಿದೆ. ಅಲ್ಲಿಯ ಜನರು ಮೂಲತಃ ಶಾಂತ ಸ್ವಭಾವದವರು. ತಿಳಿಸಿದ್ದನ್ನು ಅಥವಾ ಕಂಡದ್ದನ್ನು ಕೂಡಲೇ ತಿಳಿದು ಕೊಳ್ಳುವ ಒಳ್ಳೆ ಗ್ರಹಣಶಕ್ತಿಯುಳ್ಳವರು. ಮೇಲಾಗಿ ಮಹಾತ್ಮಾಗಾಂಧಿ ಯವರಲ್ಲಿ ಅಚಲವಾದ ಭಕ್ತಿಯನ್ನಿಟ್ಟುಕೊಂಡವರು. ಆದುದರಿಂದ ಉಪ್ಪಿನ ಕಾಯದೆ ಭಂಗ ಪ್ರಾರಂಭಿಸಲು ವಿಹಿತವಾದೀತು” ಎಂಬ ವರದಿಯ ಆಧಾರದ ಮೇಲೆ ಉಪ್ಪಿನ ಕಾಯದೆಗಳನ್ನು ಮುರಿಯುವ ಉದ್ದೇಶದಿಂದ ಸ್ವಯಂ ಸೇವಕರ ಮೆರವಣಿಗೆಯು ಕರಾವಳಿಯ ನಗರವಾದ ಅಂಕೋಲವನ್ನು ತಲುಪಿತು. ೧೯೩೦ ರ ಏಪ್ರಿಲ್ ೧೩ ರಂದು ಶಿಸ್ತಿನಿಂದ ಕೂಡಿದ ಒಂದು ದೊಡ್ಡ ಮೆರವಣಿಗೆ ಸಮುದ್ರ ತೀರಕ್ಕೆ ತೆರಳಿ ಉಪ್ಪು ನೀರನ್ನು ಸಂಗ್ರಹಿಸಿ, ತಾಲೂಕು ಕಚೇರಿಗೆ ತಂದು ಅಲ್ಲಿ ಉಪ್ಪನ್ನು ತಯಾರಿಸಿ, ಮಾರಿತು, ಆ ಸಂದರ್ಭದಲ್ಲಿಯೇ ಅನೇಕ ಜನರು ಬಂಧಿಸಲ್ಪಟ್ಟರು. “ಅಂಕೋಲ ಅಂದು ಕರ್ನಾಟಕದ ಬಾರ್ಡೋಲಿಯಾಯಿತು”.

. ಅನುಕೂಲಕರ ಸಾಮಾಜಿಕ ಪರಿಸರ: ಭಾರತದ ಕೆಲಸ ಭಾಗಗಳಲ್ಲಿ ಕಂಡು ಬರುವ, ಸ್ತ್ರೀಯರನ್ನೇ ಪ್ರತ್ಯೇಕವಾಗಿರುವ ಪರದಾ ಪದ್ಧತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲ. ಹಾಗಾಗಿ ಸಂದರ್ಭ ಬಂದಲ್ಲಿ ಯಾವುದೇ ಮಹಿಳೆಗಾದರೂ ಮನೆಯ ಹೊರಗೆ ಸಹಜವಾಗಿ ಪುರುಷರಂತೆಯೇ ಓಡಾಡುವ ಸ್ವಾತಂತ್ರ್ಯವಿತ್ತು. ಈಗಲೂ ಇದೆ. ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದಕ್ಕೆ ಸಾಮಾಜಿಕ ನಿರ್ಬಂಧನೆಗಳಿರಲಿಲ್ಲ. ಗಂಡನಿಗೋ ಮಗನಿಗೋ ಆರತಿ ಎತ್ತಿ ಹೂಮಾಲೆ ಹಾಕುವಷ್ಟರ ಮಟ್ಟಿಗೆ ದೇಶಪ್ರೇಮ ನಿಲ್ಲದೇ, ಎಳೆ ಮಕ್ಕಳನ್ನು ಎತ್ತಿಕೊಂಡಾದರೂ, ಮಳೆ-ಬಿಸಿಲೆನ್ನದೇ ದಾರಿ ನಡೆದು ಭಾಷಣ ಕೇಳಿಯೋ, ಭಾಷಣ ಮಾಡಿಯೋ ಒಟ್ಟಿನಲ್ಲಿ ಚಳುವಳಿಯಲ್ಲಿ ವಿವಿಧ ರೀತಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿತು. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿನ ಆ ಪರಿಸ್ಥಿತಿಗೆ ಮಹಿಳೆಯರು ತೀವ್ರವಾಗಿ ಸ್ಪಂಧಿಸಿದ್ದರ ಹಿನ್ನೆಲೆಯಲ್ಲಿ ಪೂರಕವಾಗಿರುವಂಥ ಈ ಸಾಮಾಜಿಕ ಅಂಶವೂ ಗಮನಾರ್ಹ.

ಸತ್ಯಾಗ್ರಹದ ವಿವಿಧ ಮುಖಗಳು ಹಾಗೂ ಪ್ರಮುಖ ಮಹಿಳೆಯರು

. ಉಪ್ಪಿನ ಸತ್ಯಾಗ್ರಹ: ೧೯೩೦ರ ಏಪ್ರಿಲ್ ೧೩, ಅಂಕೋಲ ಕರ್ನಾಟಕದ ಬಾರ್ಡೋಲಿಯಾದ ದಿನ. ಮುಂದಿನ ಅನೇಕ ಸತ್ಯಾಗ್ರಹಗಳಿಗೆ ನಾಂದಿ ಹಾಡಿದ ದಿನ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಗೊಂದು ಸ್ಥಾನ ದಕ್ಕಿದ್ದಾದರೆ, ಅದಕ್ಕೆ ಅಡಿಪಾಯ ಹಾಕಿದ ದಿನ. ಅಂದು ಉಪ್ಪಿನ ಕಾಯದೆಗಳನ್ನು ಮುರಿಯುವ ಉದ್ದೇಶದಿಂದ ಹೊರಟ ಮೆರವಣಿಗೆಯಲ್ಲಿ ಅನೇಕ ಹಳ್ಳಿಗಳಿಂದ ಬಂದು ಸೇರಿದ ಸಹಸ್ರಾರು ಸ್ತ್ರೀ ಪುರುಷರನ್ನು ಕಾಣಬಹುದಾಗಿತ್ತು. ಅದರಲ್ಲಿ ಅನೇಕ ಹೆಂಗಸರಂತೂ ಎಳೆಮಕ್ಕಳನ್ನು ಎತ್ತಿಕೊಂಡು ಬಿಸಿಲಿನಲ್ಲಿ ನಡೆದು ಬಂದಿದ್ದರು. ಶ್ಯಾಮರಾವ ಶೆಣೈರವರ ತಂಗಿ ಸೀತಾಬಾಯಿ ಸರಾಫರು “ಕರಕೊಟ್ಟ ಉಪ್ಪನ್ನು ಯಾರೂ ತಿನ್ನಕೂಡದು. ಉಪ್ಪಿನ ಕಾಯದೆ ಭಂಗವು ನಮ್ಮ ಮೇಲೆ ಹೇರಿದ ಅಪ್ರತ್ಯಕ್ಷ ಕರದ ನಿರಾಕರಣೆ, ಕರಕೊಡದ ಸ್ವತಂತ್ರ್ಯ ಉಪ್ಪು ತಿಂದು ನಾವು ಸ್ವಾತಂತ್ರ್ಯ ಪಡೆಯುವಾ” ಎಂದು ಆವೇಶ ಪೂರ್ಣವಾಗಿ ಭಾಷಣ ಮಾಡಿದರು. ಶ್ರೀಮತಿ ಆನಂದಿಬಾಯಿ ಹನಮಟ್ಟಿಕರರೂ ಕೂಡ ಅಷ್ಟೇ ಆವೇಶದಿಂದ ಸಭೆಯಲ್ಲಿ ಭಾಷಣ ಮಾಡಿ ಕಾಯದೆ ಭಂಗ ಮಾಡುವುದಕ್ಕೆ ಕರೆ ಇತ್ತರು. ಅನೇಕ ವೀರ ತರುನಿಯರು ಪುರಷರೊಂದಿಗೆ ಸರಿಸಮನಾಗಿ ಮಣಗಟ್ಟಲೇ ಉಪ್ಪನ್ನು ಅಲ್ಲಿಯೇ ಅಂದೇ ತಯಾರಿಸಿ ಮಾರಾಟ ಮಾಡಿದರು. ಇದೇ ರೀತಿಯ ಕಾರ್ಯಕ್ರಮವು ಕರಾವಳಿಯ ಇನ್ನಿತರ ಭಾಗಗಳಲ್ಲೂ ನಡೆದು ಯಶಸ್ವಿಯಾಯಿತು.

. ವಿದೇಶೀ ವಸ್ತ್ರ ಬಹಿಷ್ಕಾರ: ಉಪ್ಪಿನ ಸತ್ಯಾಗ್ರಹದಂತೆಯೇ ವಿದೇಶಿ ವಸ್ತ್ರ ಬಹಿಷ್ಕಾರ ಚಳವಳಿಯೂ ಅಂಕೋಲೆಯಲ್ಲಿ ಬಹು ಜನಪ್ರಿಯವಾಯಿತು. ಆದರೆ ಇದರ ವೈಶಿಷ್ಟ್ಯವೆಂದರೆ, ಮಹಿಳೆಯರೇ ಮುಖ್ಯವಾಗಿ ಇದರಲ್ಲಿ ಪಾತ್ರವಹಿಸಿ, ಇದನ್ನು ಯಶಸ್ವಿಗೊಳಿಸಿದ್ದು. ಅಂಕೋಲೆಯಲ್ಲಿ ವಿದೇಶಿ ವಸ್ತ್ರ ಬಹಿಷ್ಕಾರ ಆಂದೋಲನವು ಸೌ. ಯಶೋಧಾ ಶ್ಯಾಮರಾವ ಶೆಣೈರವರ ಧುರೀಣತ್ವದಲ್ಲಿ ದಿನ ದಿನಕ್ಕೆ ಪ್ರಭಾವಿಯಾಗ ತೊಡಗಿತು. ಮಹಿಳೆಯರೇ ಮನೆ ಮನೆಗೆ ಹೋಗಿ, ವಿದೇಶೀ ವಸ್ತ್ರಗಳನ್ನು ತಂದು, ಅವುಗಳನ್ನು ಸುಡುವೂ, ವಿದೇಶಿ ಬಟ್ಟೆಗಳನ್ನು ತರಿಸದಂತೆ ವರ್ತಕರಿಗೆ ಬಿನ್ನವಿಸುವುದೂ, ಇತ್ಯಾದಿ ಕಾರ್ಯಕ್ರಮಗಳನ್ನು ಕೈಗೊಂಡರು, ಇಷ್ಟೇ ಅಲ್ಲ, ವರ್ತಕರನ್ನು ಮತ್ತೆ ವಿದೇಶಿ ಬಟ್ಟೆಗಳನ್ನು ತರಿಸದಂತೆ ಆಗ್ರಹಿಸಿದರು. ಅಂತೆಯೇ ಆ ಕುರಿತಾದ ಪ್ರತಿಜ್ಞಾ ಪತ್ರಕ್ಕೆ ಅವರ ಅಂಕಿತ ಹಾಕಿಸುವಲ್ಲಿ ಯಶಸ್ವಿಯಾದರು.

. ಜಂಗಲ್ ಸತ್ಯಾಗ್ರಹ: ಉಪ್ಪಿನ ಸತ್ಯಾಗ್ರಹ ವಿದೇಶಿ ವಸ್ತ್ರ ಬಹಿಷ್ಕಾರಗಳಲ್ಲಿ ಅಂಕೋಲ ಪ್ರಮುಖ ಪಾತ್ರ ನಿರ್ವಹಿಸಿದರೆ, ಜಂಗಲ್ ಸತ್ಯಾಗ್ರಹದಲ್ಲಿ ಘಟ್ಟದ ಮೇಲಿನ ಪ್ರದೇಶಗಳು ತಮ್ಮ ಸಾಮರ್ಥ್ಯ ಪರೀಕ್ಷಿಸಲು ಮುಂದಾದವು. ಇದರಲ್ಲಾದರೂ ತಾವು ಅಂಕೋಲೆಯವರನ್ನು ಮೀರಿಸುವಂಥ ಸಾಮೂಹಿಕ ಕಾಯದೆ ಭಂಗ ಮಾಡಿ ತೋರಿಸೋಣವೆನ್ನುವ ಹುಮ್ಮಸ್ಸು, ಹುರುಪು ಈ ಭಾಗದ ಜನರಲ್ಲಿ ತುಂಬಿತು. ಇದಕ್ಕೆ ಮಹಿಳೆಯರೇನೂ ಹೊರತಾಗಿರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ನಾಲ್ವರು ಸ್ತ್ರೀ ಸತ್ಯಾಗ್ರಹಿಗಳು ಹನ್ನೆರಡು ಪುರುಷ ಸತ್ಯಾಗ್ರಹಿಗಳೊಂದಿಗೆ ಬಂಧಿಸಲ್ಪಟ್ಟರು. ಎಕ್ಕಂಬಿಯ ಶ್ಯಾಮ ಭಟ್ಟ ಬಿಸಲಕೊಪ್ಪ ಇವರ ಬಂಧನದ ನಂತರ ಅವರ ಪತ್ನಿಯೇ ಸ್ವತಃ ಮರ ಕಡಿದು ಜಂಗಲ ಕಾಯದೆ ಭಂಗ ಮಾಡಿ ಪೊಲೀಸರಿಗೆ ತನ್ನನ್ನು ಬಂಧಿಸಲು ಆಮಂತ್ರಣ ನೀಡಿದರು. ಆಗಲೂ ಅವರು ಬಂಧಿಸದಾದಾಗ “ಕಾಯದೆ ಭಂಗ ಮಾಡಿದ ನನ್ನನ್ನು ಬಂಧಿಸದೇ ಅನ್ಯಾಯ ಮಾಡಿದ್ದಾರೆ. ಇನ್ನು ನಾವು ಹೆಂಗಸರೇ ಕಾಯದೆ ಭಂಗ ಮಾಡುವೆವು” ಎಂದು ಸಾರಿ ಅಧಿಕಾರಿಗಳಿಗೆ ಕುಂಕಮ ಹಚ್ಚಿದ ಪ್ರಸಂಗ ಈಗ ಹಾಸ್ಯ ಪ್ರದವಾಗಿ ತೋರಬಹುದು. ಆದರೆ ಆಗ ಆ ಕೃತ್ಯದ ಹಿಂದಿನ ವೀರಾವೇಶ, ದೇಶಭಕ್ತಿಗಳನ್ನು ನಾವು ಕಡೆಗಣಿಸುವಂತಿಲ್ಲ, ಮರೆಯುವಂತಿಲ್ಲ. ಇದೇ ರೀತಿ ಅನೇಕ ಮಹಿಳೆಯರು ನೇರ ಕಾಡಿಗೆ ಹೋಗಿ ತಾವು ಕಡಿದ ಟೊಂಗೆಗಳನ್ನು ಕೈಯಲ್ಲಿ ಹಿಡಿದು ಹಳ್ಳಿ-ಹಳ್ಳಿಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದುದು, ಆಗ ಜೂನ್-ಜುಲೈ-ಆಗಸ್ಟ್ ತಿಂಗಳುಗಳ ಮುಸಲಧಾರೆಯ ನಂತರ ಹರಿಯುವ ಮಹಾಪ್ರವಾಹದಷ್ಟೇ ಸಾಮಾನ್ಯ ದೃಶ್ಯವಾಗಿತ್ತು. ಸಾಮೂಹಿಕ ಸ್ವರೂಪದ ಈ ಸತ್ಯಾಗ್ರಹ ಯಾವ ಮಟ್ಟವನ್ನು ಮುಟ್ಟಿತ್ತೆಂದರೆ, ಅಂಕೋಲದಲ್ಲಿ ಅದಂತೆಯೇ, ಎಷ್ಟೋ ಕಡೆ ಅಧಿಕಾರಿಗಳು-ಬಾಲಕರು ಮತ್ತು ಹೆಂಗಸರು ಹಾಗೂ ಮಕ್ಕಳು ಎರಡು-ಮೂರು ತಾಸುಗಳಷ್ಟು ಅವಧಿಯಾದರೂ ಒಂದೇ ಸ್ಥಳದಲ್ಲಿ ಕುಳಿತು ಅಧಿಕಾರಿಗಳ ತಾಳ್ಮೆಯನ್ನೇ ಪರೀಕ್ಷಿಸಿ, ಅವರೇ ಎಷ್ಟೋ ಬಾರಿ ಸೋತು “ಏನು ಬೇಕಾದರೂ ಮಾಡಿ” ಎಂದು ಸ್ವಾತಂತ್ರ್ಯ ಬಿಟ್ಟುಕೊಟ್ಟು ಹೋದ ಬಳಿಕ ತಿರುಗಿ ಕಾಡಿಗೆ ಹೊರಟ ಹಾಸ್ಯಮಯ ಸನ್ನಿವೇಶಗಳೆಷ್ಟೋ ಇವೆ. ಹೀಗೆ ಈ ಸತ್ಯಾಗ್ರಹದ ಆರಂಭ, ಘಟ್ಟದ ಮೇಲೆ ಪ್ರದೇಶಗಳಲ್ಲಾದರೂ ನಂತರ ಅಂಕೋಲಾ, ಕುಮಟಾ ತಾಲೂಕುಗಳಲ್ಲೂ ಇದು ವ್ಯಾಪಕವಾಗಿ ಮುಂದುವರೆಯಿತು.

. ಕರ ನಿರಾಕರಣೆ: ಕರನಿರಾಕರಣೆ ಕಾಯದೆ ಭಂಗದ ಕೊನೆಯ ಮೆಟ್ಟಿಲೆಂದು ಆಗ ಭಾವಿಸಲಾಗಿತ್ತು. ಅದು ತುಂಬಾ ಕಷ್ಟ ಸಾಧ್ಯ ಎಂಬ ಭಾವನೆಯಿತ್ತು. ಧುರೀಣರಾದ ಶ್ರೀ ರಂಗನಾಥ ದಿವಾಕರರೇ “ಕರನಿರಾಕರಣೆಯಂಥ ಅಗ್ನಿಪರೀಕ್ಷೆಗೆ ಜನರು ಸಿದ್ಧರಿದ್ದರೆ ಇಲ್ಲಿ ಆಂದೋಲನವನ್ನು ಪ್ರಾರಂಭಿಸಬಹುದು” ಎಂದು ಹೇಳಿದ್ದನ್ನು ಗಮನಿಸುವಾಗ ಅದರ ಕಠೋರತೆ ಕಠಿಣತೆಯ ಪ್ರಜ್ಞೆ ಬಂದು ನಮಗೆ ಈಗಲಾದರೂ ಎದೆ ನಡುಗದೇ ಇರದು. ಆದರೆ ತಮ್ಮ ದೇಶಭಕ್ತಿ, ದೇಶಪ್ರೇಮದ ಕುರಿತು ಇನಿತೂ ಶಂಕೆ ಇರದ ಪರಿಪೂರ್ಣ ದೇಶಪ್ರೇಮಿಗಳಾದ ಆ ಜನರು ಅಗ್ನಿ ಪರೀಕ್ಷೆಗೆ ಎಂದಾದರೂ ಹೆದರುವುದು ಸಾಧ್ಯವೇ? ಕೊನೆಯ ಮೆಟ್ಟಿಲನ್ನೂ ಧೈರ್ಯವಾಗಿ ಏರಿಯೇ ಬಿಟ್ಟರು! ದೈಹಿಕವಾಗಿ ಅಬಲೆಯರಾದರೂ ಮಾನಸಿಕವಾಗಿ ಬಹಳ ಸಬಲೆಯರಾದ ವನಿತೆಯರೂ ಇದಕ್ಕೆ ಹಿಂದು-ಮುಂದು ನೋಡಲಿಲ್ಲ. ಅವರೂ ಆ ಮೆಟ್ಟಿಲನ್ನು ಹತ್ತಿಯೇ ಬಿಟ್ಟರು! ಕರನಿರಾಕರಣೆಯ ಸಂಘಟನೆಯ ಹೊಣೆಯನ್ನು ಹೊತ್ತ ಶ್ರೀ ದಿವಾಕರರು, ಶ್ರೀ ಕರಮರಕರ ಮತ್ತು ಶ್ರೀಮತಿ ಕೃಷ್ಣಾಬಾಯಿ ಪಂಜಿಕರರೊಂದಿಗೆ ಅಂಕೋಲೆ ತಾಲೂಕಿನಲ್ಲಿ ಸಂಚರಿಸಿದರು. ಅಲ್ಲಲ್ಲಿ ಸಭೆಗಳನ್ನು ಏರ್ಪಡಿಸಿ, ಜನರಿಗೆ ಅದರ ಮಹತ್ವವನ್ನು ಮನವರಿಕೆ ಮಾಡಿ ಅವರ ಸಂಶಯಗಳನ್ನು ತಮ್ಮ ಸಮಂಜಸ ಉತ್ತರಗಳಿಂದ ಹೋಗಲಾಡಿಸಿ, ಧೈರ್ಯ ತುಂಬತೊಡಗಿದರು. ಶ್ರೀಮತಿ ಪಂಜಿಕರರ ಉತ್ಸಾಹಪ್ರದ ಭಾಷಣಗಳು ಅಂಕೋಲೆ ತಾಲೂಕಿನ ಸ್ತ್ರೀ ಪುರುಷರನ್ನು ರಾಷ್ಟ್ರೀಯ ಸೈನಿಕರನ್ನಾಗಿ ಮಾಡಿ ಅವರಲ್ಲಿ ವೀರಶ್ರೀಯನ್ನು ತುಂಬಿದವು. ಅವರು ಅಂಕೋಲೆ ತಾಲೂಕಿನಲ್ಲಿ ಮೊದಲು ಕಾಲಿಟ್ಟಾಗಲೇ ತಾಲೂಕು ಬಿಟ್ಟು ಹೋಗಬೇಕೆಂಬ ವಾರಂಟ್‌ ಅವರ ಮೇಲಿತ್ತು. ಅವರಿಗೆ ಅದನ್ನು ಜಾರಿ ಮಾಡಲು ಪೊಲೀಸರು ಹಳ್ಳಿಯಿಂದ ಹಳ್ಳಿಗೆ ಅಲೆಯುತ್ತಿದ್ದರು.

ಕೃಷ್ಣಾಬಾಯಿಯವರು ವಾರಂಟು ಬೆನ್ನಟ್ಟಿರುವಾಗಲೇ ಅಲ್ಲಲ್ಲಿ ಸ್ತ್ರೀಯರ ಸಭೆಗಳನ್ನು ಸೇರಿಸಿ ಅನೇಕ ಭಾಷಣ ಮಾಡಿದರು. ಕರನಿರಾಕರಣೆಯು ಯಶಸ್ವಿಯಾಗಲು ಸ್ತ್ರೀಯರ ಸಹಕಾರ ಅತ್ಯಗತ್ಯವೆಂದರಿತದ್ದರಿಂದ ತೀರ ಸರಳ ರೀತಿಯಲ್ಲಿ ಆ ವಿಷಯವನ್ನವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೇ ಅದಕ್ಕೆ ಪ್ರತಿಫಲವಾಗಿ ಅವರ ಸಂಪೂರ್ಣ ಸಹಕಾರವನ್ನು ಪಡೆಯುವಲ್ಲಿ ಯಶಸ್ವಿಯಾದರು.

೧೯೩೧ರ ಜನವರಿ ೨೬ರಂದು ಕರನಿರಾಕರಣೆಗೆ ಸಮ್ಮತಿಸುವವರ ಯಾದಿಗೆ ನಾ ಮುಂದು ತಾ ಮುಂದು ಎಂದು ಅಂಕೋಲ ತಾಲೂಕಿನ ಹಳ್ಳಿಗರು ಧ್ವಜದಡಿಯಲ್ಲಿ ನಿಂತು, ಅಂಕಿತ ಹಾಕಿ ಪ್ರತಿಜ್ಞೆ ಮಾಡಿದರು. ಇದಾದ ನಂತರ ಕರನಿರಾಕರಣೆಯನ್ನು ಯಶಸ್ವಿಯಾಗಿ ಮಾಡಿ ತೋರಿಸುವ ಹುಮ್ಮಸ್ಸು ಅಲ್ಲಿಯ ಸ್ತ್ರೀ ಪುರುಷರಲ್ಲಿ ದಿನದಿನಕ್ಕೆ ಪ್ರಬಲವಾಗುತ್ತ ನಡೆದಿತ್ತು.

ಆದರೆ ಸರ್ಕಾರಿ ಅಧಿಕಾರಿಗಳು- ಹಳ್ಳಿ-ಹಳ್ಳಿಗಳಲ್ಲಿ ಅಡ್ಡಾಡಿ, ಕರನಿರಾಕರಣೆಯಿಂದ ಎದುರಿಸಬೇಕಾಗುವ ಕಷ್ಟ-ನಷ್ಟಗಳ ಭಯಾನಕ ಚಿತ್ರವನ್ನು ಜನರ ಮುಂದಿಟ್ಟು, ಆ ನಿಧಾರವನ್ನು ಬದಲಿಸಲು ಉಪದೇಶಿಸುತ್ತಿದ್ದರು. ಮಾಮಲೇದಾರರೊಬ್ಬರು ಸೂರ್ವೆಯಲ್ಲಿ ಈ ರೀತಿ ಜನರಿಗೆ ಬೋಧ ಮಾಡುತ್ತಿರುವಾಗ ತಿಪ್ಪು ಹಮ್ಮಣ್ಣಾ ನಾಯ್ಕ ಎಂಬ ಧೀರೆ ಮುಂದೆ ಬಂದು “ನಾವು ಮಹಾತ್ಮಾ ಗಾಂಧಿಯವರ ಮಾತಿನಂತೆ ಕರಬಂದಿ ನಡೆಸಿದ್ದೇವೆ. ಗಾಂಧಇಯವರಿಗಿಂತ ನೀವು ತಿಳಿದವರಲ್ಲ, ನಿಮ್ಮ ನೌಕರಿಗಾಗಿ ಸ್ವರಾಜ್ಯ ಸಾಧಿಸುವ ದಾರಿಯಲ್ಲಿ ಅಡ್ಡ ಬಂದು ಪಾಪ ಕಟ್ಟಿಕೊಳ್ಳಬೇಡಿರಿ. ನೌಕರಿಯನ್ನು ಬಿಟ್ಟು ನೀವೂ ಚಳವಳಿಯಲ್ಲಿ ಸೇರಿರಿ”, ಎಂದು ಅವರಿಗೇ ಮರುಬೋಧನೆ ಮಾಡಿಯೇ ಬಿಟ್ಟರು. ಅವರು ಅದಕ್ಕೆ ನಿರುತ್ತರರಾದರಷ್ಟೇ ಅಲ್ಲ, ಆ ಊರಲ್ಲಿ ಕರನಿಕಾರಣೆಯ ಹೋರಾಟ ಬಿಟ್ಟು ಕೊಡಿರೆಂದು ಮುಂದೆ ಅವರು ಯಾರಿಗೂ ಉಪದೇಶ ಮಾಡುವ ಗೋಜಿಗೇ ಹೋಗಲಿಲ್ಲ.

. ಪಿಕಟಿಂಗ: ಕರ ವಸೂಲಿ ಕ್ರಮಗಳನ್ನು ಜನರು ಎಷ್ಟೇ ತೀವ್ರವಾಗಿ ಪ್ರತಿಭಟಿಸಿದರೂ ಸರ್ಕಾರದವರು ಜಪ್ತ ಮಾಡಿಯಾದರೂ ಸರಕುಗಳನ್ನು ಪಡೆದು, ಅದನ್ನು ಲಿಲಾವ ಮಾಡಿ ಹಣ ಪಡೆಯಲು ಪ್ರಾರಂಭಿಸಿದರು. ಇದರಿಂದ ಕಂದಾಯದ ಕೆಲ ಭಾಗವು ವಸೂಲಾಗುತ್ತಿರುವುದನ್ನು ಅರಿತ ಸತ್ಯಾಗ್ರಹಿಗಳು ಅದನ್ನು ವಿಫಲಗೊಳಿಸಲು ಮುಂದಾದರು. ಕರ ನಿರಾಕರಣೆ ಮಾಡಿದ ಸತ್ಯಾಗ್ರಹಿಗಳ ಜಪ್ತಾದ ಮಾಲನ್ನು ಯಾರೂ ಖರೀದಿಸದಂತೆ ಪಿಕೆಟಿಂಗ ನಡೆಸಲು ಸ್ತ್ರೀಯರ ಒಂದು ಗುಂಪು ಅಗತ್ಯವೆಂದು ನಿರ್ಧರಿಸಿ ಶ್ರೀ ವೆಂಕಟರಾಮಯ್ಯನವರ ಪತ್ನಿ ಶ್ರೀಮತಿ ಗೌರಮ್ಮನವರಿಗೆ ಈ ಜವಾಬ್ದಾರಿಯನ್ನು ವಹಿಸಲಾಯಿತು. ಸಿದ್ದಾಪುರ ತಾಲೂಕಿನ ಹಳ್ಳಿಗಳಲ್ಲಿ ಅವರು ಸಂಚರಿತಿ, ಸ್ತ್ರೀಯರಲ್ಲಿ ಜಾಗೃತಿಯನ್ನುಂಟು ಮಾಡಿದರು.

ಶ್ರೀಮತಿಯರಾದ ದೊಡ್ಮನೆ ಮಹಾದೇವಮ್ಮ, ಕಲ್ಲಾಳದ ಕಾವೇರಮ್ಮ ಹಾಗೂ ಲಕ್ಷ್ಮಮ್ಮ, ಹಣಜೀಬೈಲ ದುಗ್ಗಮ್ಮ, ತ್ಯಾಗಲಿ ಭುವನೇಶ್ವರಮ್ಮ ಮುಂತಾದ ಅನೇಕ ಧೀರೆಯರು ಸ್ತ್ರೀಯರ ಸಂಘಟನಾ ಕಾರ್ಯಗಳನ್ನು ಕೈಕೊಳ್ಳಲು ಮುಂದೆ ಬಂದರು. ಲಿಲಾವಿನ ಕಾಲಕ್ಕೆ ಭಗಿನಿಯರು ಪಿಕೆಟಿಂಗ್ ಮಾಡುತ್ತಲಿದ್ದರೂ ಅದನ್ನು ಲೆಕ್ಕಿಸದೇ, ಲಿಲಾವಿನಲ್ಲಿ ಅಗ್ಗ ಬೆಲೆಗೆ ದನಕರುಗಳನ್ನೂ, ಪಾತ್ರಗಳನ್ನೂ, ಅಕ್ಕಿಯನ್ನೂ ಕೊಂಡುಕೊಳ್ಳುವ ಸಂಕುಚಿತ ಮನದ ಜನರ ಹೃದಯ ಪರಿವರ್ತನೆಗಾಗಿ ಅಂತಹವರ ಮನೆಯ ಮುಂದೆ ಈ ಧೀರ ನೀರೆಯರು ಸತ್ಯಾಗ್ರಹ ಹೂಡುತ್ತಿದ್ದರು. ಆ ಮೂಲಕ ಸತ್ಯಾಗ್ರಹಿಗಳ ಸರಕುಗಳನ್ನು ಮರಳಿ ಪಡೆದು ಅದನ್ನು ತಂದು ಸತ್ಯಾಗ್ರಹಿಗಳಿಗೆ ತಿರುಗಿ ಒಪ್ಪಿಸುವ ಮಹಿಳೆಯರ ಮಹತ್ವದ ಕಾರ್ಯವು ಸಿದ್ಧಾಪುರ ತಾಲೂಕಿನ ಸ್ವತಂತ್ರ್ಯ ಸಂಗ್ರಾಮದ ಇತಿಹಾಸದಲ್ಲೇ ಪ್ರಸಿದ್ಧವಾಗಿದೆ.

ಈ ಸಂದರ್ಭದಲ್ಲಿ ಸ್ತ್ರೀ ಸತ್ಯಾಗ್ರಹಿಗಳು ತುಳಿದ ಹಾದಿ ಭಯಂಕರವಾದದ್ದು ಹಾಗೂ ಘೋರವಾದದ್ದು. ಸಾಮಾನ್ಯ ಮಟ್ಟದ ಧೈರ್ಯವನ್ನು ಹೊಂದಿದ ಮಹಿಳೆಯರಾದರೂ ಈ ಪಥದಲ್ಲಿ ಮುಂದುವರೆಯುವುದು, ಅಸಾಧ್ಯವಾಗಿರುವಂಥ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಸಾಧ್ಯ ಅಮಾನುಷ ಹಾಗೂ ಭಯಂಕರವೆನ್ನಿಸುವಂಥ ಶಿಕ್ಷೆಗಳಿಗೆ ಅವರು ಬಲಿಯಾದರು. ಹೊಡೆತ, ಬಡಿತ, ಬೆನ್ನಮೇಲೆ ಗುದ್ದುವುದು, ಕಾಲು ತಿರುಚುವುದು ಇತ್ಯಾದಿ ದೈಹಿಕ ಮಟ್ಟದ ಶಿಕ್ಷೆಗಳಷ್ಟೇ ಅಲ್ಲದೆ, ಕೈಯಲ್ಲಿರುವಂಥ ಶಿಶುಗಳನ್ನು ಎತ್ತಿ ಒಗೆಯುವುದು, ಹಸುಗೂಸುಗಳು ತೊಟ್ಟಿಲಲ್ಲಿ ಮಲಗಿರುವಾಗಲೇ ತೊಟ್ಟಿಲನ್ನು ಶಕ್ತಿಯಿದ್ದಷ್ಟು ದೂರ ಬಿಸಾಡುವುದು, ಅವರ ಇದಿರಿನಲ್ಲೇ ಅವರ ಗಂಡ, ಮಕ್ಕಳನ್ನು ಹಿಂಸಿಸುವುದು. ಇದ್ಯಾವುದಕ್ಕೂ ಬಗ್ಗುವುದಿಲ್ಲ ಎಂದು ಕಂಡು ಬಂದಾಗ ಮಾನಭಂಗದಂಥ ಹೇಯ ಕೃತ್ಯಕ್ಕೂ ಹಿಂಜರಿಯದ ರೀತಿಯಲ್ಲಿ ಮಾನಸಿಕ ಮಟ್ಟದಲ್ಲೂ ಶಿಕ್ಷೆ ಕೊಡಲು ಮನುಷ್ಯ ರೂಪದ ಪಿಶಾಷಿಗಳು ಸಿದ್ಧರಾಗಿದ್ದುದು ಅವರು ದುರ್ದೈವವೆಂದೇ ಹೇಳಬೇಕು. ಇಂತಹ ಭಯಾನಕ ವಾತಾವರಣ ನಿರ್ಮಾಣವಾಗಿದ್ದರ ಅರಿವಿದ್ದೂ ಕೂಡ ಒಬ್ಬರ ನಂತರ ಇನ್ನೊಬ್ಬರು ಸತ್ಯಾಗ್ರಹದಲ್ಲಿ ಭಾಗವಹಿಸಲು ಮುಂದೆ ಬರುತ್ತಿದ್ದುದು ಅವರ ಅಸಾಮಾನ್ಯ ಮಟ್ಟದ ಧೈರ್ಯಕ್ಕೆ ಸಾಕ್ಷಿಯಾಗಿರುವಂಥದು. ಈ ಕುರಿತು ಓದುವಾಗ, ಕೇಳುವಾಗ ಅವರೆಲ್ಲ ಸಾಮಾನ್ಯ ಮಹಿಳೆಯರಾಗಿ ತೋರದೇ ಧೈರ್ಯ ಲಕ್ಷ್ಮಿಯ ಅವತಾರಗಳೇನೋ ಎಂಬ ಭಾವನೆ ಬರುವುದು ಸಹಜ.

ಮಹಿಳೆಯರು ವಿವಿಧ ಕಡೆಗಳಲ್ಲಿ, ವಿವಿಧ ಗುಂಪುಗಳಲ್ಲಿ, ಕೆಲವೊಮ್ಮೆ ಒಬ್ಬೊಬ್ಬರೇ ಲೀಲಾವಿನಲ್ಲಿ ಮಾಲು ಕೊಂಡವರ ಮನ ಪರಿವರ್ತನೆಗಾಗಿ ಅನ್ನ ಸತ್ಯಾಗ್ರಹಗಳನ್ನು ಮಾಡುತ್ತಿದ್ದರು. ಅಂತಹ ಮೊದಲನೇ ಸತ್ಯಾಗ್ರಹವ ಹಚ್ಚೆ ಗ್ರಾಮದ ರಾಮಪ್ಪ ಪಟೇಲರ ಮನೆಯಲ್ಲಿ ೧೯೩೨ ರ ಮಾರ್ಚ ಇಪ್ಪತ್ತೊಂಭತ್ತರಂದು ಪ್ರಾರಂಭವಾಯಿತು. ಶ್ರೀಮತಿಯರಾದ ಗೌರಮ್ಮ, ಕಲ್ಲಾಳ ಕಾವೇರಮ್ಮ ಹಾಗೂ ಲಕ್ಷ್ಮಮ್ಮ- ಈ ಮೂವರು ಹೆಚ್ಚೆಯ ಪಟೇರ ಮನೆಗೆ ಹೋಗಿ ಲಿಲಾವಿನಲ್ಲಿ ಕೊಂಡ ಸತ್ಯಾಗ್ರಹಿಗಳ ಎಮ್ಮೆಯನ್ನು ಮರಳಿ ಕೊಡಲು ಕೇಳಿದರು. ಅದಕ್ಕೆ ಅವರು ಒಪ್ಪದಾದಾಗ ಈ ಮೂವರು ಅವರ ಮನೆಯಲ್ಲಿಯೇ ಅನ್ನ ಸತ್ಯಾಗ್ರಹವನ್ನು ಪ್ರಾರಂಭಿಸಿಯೇ ಬಿಟ್ಟರು. ಮೂರು ದಿನಗಳು ಹೀಗೆ ಮುಂದುವರಿದ ನಂತರ ಎಳೆ ಪ್ರಾಯದ ಗೌರಮ್ಮನವರ ಸ್ಥಿತಿ ತುಂಬಾ ಹದಗೆಟ್ಟಿತು. ಅವರು ಸಾವು ಬದುಕಿನ ಉಯ್ಯಾಲೆಯಲ್ಲಿ ತೂಗಾಡತೊಡಗಿದರು. ಅಷ್ಟಾದರೂ ಪಟೇಲರು ಬಗ್ಗಲಿಲ್ಲ, ಸತ್ಯಾಗ್ರಹಿಗಳೂ ಜಗ್ಗಲಿಲ್ಲ. ದೇವರಿಗೇ ಈ ಕಷ್ಟ ನೋಡಲಾಗಲಿಲ್ಲವೋ ಎನ್ನುವ ರೀತಿಯಲ್ಲಿ ಪಟೇಲರು ಪಯಣಿಸುತ್ತಿದ್ದ ಗಾಡಿ ಬಿದ್ದು ಅವರಿಗೆ ತುಂಬಾ ಪೆಟ್ಟಾಗಿ, ಅದು ಈ ಪಾಪದಿಂದಲೇ ಆಗಿದ್ದು ಎನ್ನುವ ಭಾವನೆ ಅವರಲ್ಲಿ ಮೂಡಿ, ಮರುದಿನವೇ ತಪ್ಪೊಪ್ಪಿಕೊಂಡು, ಲಿಲಾವಿನಲ್ಲಿ ಪಡೆದ ಮಾಲನ್ನು ಸತ್ಯಾಗ್ರಹಿಗಳಿಗೆ ಒಪ್ಪಿಸಿದರು.

ಇದೇ ಸಮಯದಲ್ಲಿ ಶಿರಳಗಿಯ ಮದ್ವೀರಗೌಡರ ಮನೆಯ ಮುಂದೆ ಲಿಲಾವಿನಲ್ಲಿ ಎಮ್ಮೆ ಕೊಂಡ ಕಾರಣಕ್ಕಾಗಿಯೇ ಶಿರಳಗಿಯ ಶ್ರೀಮತಿ ಭಾಗೀರಥಮ್ಮ, ಹಣಜಿಬೈಲ ದುಗ್ಗಮ್ಮ ಇವರು ಅನ್ನ ಸತ್ಯಾಗ್ರಹ ನಡೆಸಿದರು. ನಾಲ್ಕು ದಿನಗಳಾದ ಮೇಲೆ ಪೊಲೀಸರು ಇವರನ್ನು ಕೆಲ ಗಂಟೆಗಳಷ್ಟು ಕಾಲ ಬಂಧಿಸಿದರೂ ಬಿಡುಗಡೆ ಮಾಡಿದ ಕೂಡಲೇ ತಿರುಗಿ ಬಂದು ಇನ್ನಿತರ ಸತ್ಯಾಗ್ರಹಿಗಳನ್ನು ಸೇರಿಕೊಂಡರು. ಇಪ್ಪತ್ತೆರಡು ದಿವಸಗಳ ಸತತ ಉಪವಾಸ ಸತ್ಯಾಗ್ರಹದ ಬಳಿದ ಗೌಡರು ಸೋತು ಶರಣಾದರು.

ಈ ಮೇಲಿನ ಎರಡು ಪ್ರಕರಣಗಳಲ್ಲಿ ಯಶ ಗಳಿಸಿದ ಈ ಧೀರೆಯರೇ ಅಕ್ಕುಂಜಿಗೆ ತೆರಳಿ, ಅಲ್ಲಿ ಬೊಮ್ಮೇಗೌಡರು ಹಾಗೂ ಮಹಾದೇವಪ್ಪಗೌಡರ ಮನೆಗಳ ಮುಂದೆ ಲಿಲಾವಿನಲ್ಲಿ ಮಾಲುಖರೀದಿಸಿದ ಕಾರಣಕ್ಕಾಗಿಯೇ ಶರಣಾದರೂ ಮಹದೇವಪ್ಪ ಗೌಡರು ಮಾತ್ರ ನಾಲ್ಕು ದಿನಗಳವರೆಗೂ ಸೋಲನ್ನೊಪ್ಪಿಕೊಳ್ಳಲಿಲ್ಲ. ಆ ಕಾಲದಲ್ಲಿ ಪೊಲೀಸರು ಸತ್ಯಾಗ್ರಹಿಗಳಿಗೆಲ್ಲಾ ಹೊಡೆದು, ಬಡಿದು, ಅದರಲ್ಲೂ ಕಾವೇರಮ್ಮ ಹಾಗೂ ಗೌರಮ್ಮನವರಿಗೆ ಮಿತಿಮೀರಿ ಹೊಡೆದು, ಒಂದು ದಿನ ಜೈಲಿನಲ್ಲಿಟ್ಟು ಬಿಡುಗಡೆ ಮಾಡಿದರು. ಆ ಸಂದರ್ಭದಲ್ಲಿ ಸತ್ಯಾಗ್ರಹಿ ವೀರ ಮಹಿಳೆಯರ ಇನ್ನೊಂದು ಗುಂಪು ಅಲ್ಲಿಗೆ ತೆರಳಿದ ನಂತರ ಸತ್ಯಾಗ್ರಹವನ್ನು ಮುಂದುವರಿಸಲಾರಂಭಿಸಿತು. ಆಗ ಗೌಡರ ಮನೆಯ ಹೆಂಗಸರೇ ಗೌಡರಿಗೆ ಛೀ… ಥು…. ಮಾಡಲಾರಂಭಿಸಿದಾಗ, ಅವರಿಗೆ ಬೇಸರವಾಗಿ ಶರಣಾದರು.

ಲಿಲಾವಿನಲ್ಲಿ ಮಾಲುಕೊಂಡ ಕಾರಣಕ್ಕಾಗಿಯೇ ಏಪ್ರಿಲ್ ೧೩ ರಂದು, ಹೊಸತೋಟ ವೆಂಕಟರಮಣ ಭಟ್ಟರ ಮನೆಯೆದುರು ಸತ್ಯಾಗ್ರಹ ಪ್ರಾರಂಭವಾಯಿತು. ಮುಗ್ಧ ಸಣ್ಣ ಮಕ್ಕಳೂ ತಮ್ಮ ತಾಯಂದಿರೊಂದಿಗೆ ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು ಇದರ ಒಂದು ವೈಶಿಷ್ಟ್ಯವಾಗಿತ್ತು. ಎರಡು ವರ್ಷದ ಮಗುವಿನೊಂದಿಗೆ ಲಕ್ಷ್ಮಮ್ಮ ಇಡಕಲಗದ್ದೆ, ಒಂದು ವರ್ಷದ ಮಗುವಿನೊಂದಿಗೆ ದೇವಿ ಸರಸಮ್ಮ ಅಪ್ಪೆಕಟ್ಟು, ಒಂದು ವರ್ಷದ ಮಗುವಿನೊಂದಿಗೆ ದೇವಿ ಗೌರಮ್ಮ ಕುರಾ- ಇವರನ್ನೊಳಗೊಂಡು ಒಟ್ಟು ೧೬ ಭಗಿನಿಯರು ಹಾಗೂ ೧೦ ರಿಂದ ೧೮ ವರ್ಷ ಪ್ರಾಯದೊಳಗಿನ ೬ ಬಾಲಕರು, ಗಾಂಧೀಜಿಯವರ ಭಾವಚಿತ್ರವನ್ನು ಮುಂದಿಟ್ಟುಕೊಂಡು, ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಸಿಟ್ಟಿಗೆದ್ದ ಭಟ್ಟರು, ಸತ್ಯಾಗ್ರಹಿಗಳು ಮಲ-ಮೂತ್ರ ವಿಸರ್ಜನೆಗೂ ಹೊರಗೆ ಹೋಗದಂತೆ ನಿರ್ಬಂಧಪಡಿಸಿ, ಓರ್ವ ಆಳನ್ನು ಆ ಕಾರಣಕ್ಕಾಗಿಯೇ ಕಾವಲು ನಿಲ್ಲಿಸಿದರು. ಎಳೆಯ ಕೂಸುಗಳು ಹಸಿದು ಅಳುತ್ತ ಅಂದಿನ ದಿನವನ್ನು ಕಳೆದವು. ಮಾರನೇ ದಿನ ಯಾರೋ ಹಾಲು ತಂದು ಕೂಸುಗಳಿಗೆ ಹಾಕಿದರು. ಶ್ರೀಮತಿಯರಾದ ಗೌರಮ್ಮ ಕುರಾ, ಲಕ್ಷ್ಮಮ್ಮ ಇಡಕಲಗದ್ದೆ ಹಾಗೂ ಗಂಗಮ್ಮ ಹೆಗಡೆ ಇವರು ಉಪವಾಸದಿಂದ ಎಚ್ಚರ ತಪ್ಪಿ ಬಿದ್ದರು. ಸತ್ಯಾಗ್ರಹಿಗಳನ್ನು ಬೆದರಿಸಲು ಬಂದ ಪೊಲೀಸರು ಗಾಂಧೀಜಿಯವರ ಫೋಟೋ ತೆಗೆದುಕೊಂಡು ಅದನ್ನು ಎತ್ತಿ, ಒಡೆದು ಹಾಕುವ ಪ್ರಯತ್ನದಲ್ಲಿದ್ದಾಗ ಶಮೇಮನೆ ಗಂಗಮ್ಮ ನವರು ಅದನ್ನು ತಪ್ಪಿಸಲು ಮುಂದಾದರು. ಆಗ ಅವರನ್ನು ದರದರ ಎಳೆದುದರಿಂದ ಕಾಲಿನ ಚರ್ಮ ಕಿತ್ತು ರಕ್ತ ಸೋರತೊಡಗಿತು. ಮತ್ತು ಎತ್ತಿ ನೆಲಕ್ಕೆ ಅಪ್ಪಳಿಸಿದ್ದರಿಂದ ಬೆನ್ನಿಗೆ ಕಲ್ಲು ಬಡಿದು ಅಲ್ಲಿಯೂ ರಕ್ತ ಹರಿಯತೊಡಗಿತು. ಇಷ್ಟು ಹಿಂಸೆ ಕೊಟ್ಟರೂ ಫೋಟೋ ಬಿಟ್ಟು ಕೊಡದ್ದರಿಂದ ಪೊಲೀಸರೇ, ಅದನ್ನು ಕಿತ್ತುಕೊಳ್ಳುವ ತಮ್ಮ ನಿರ್ಧಾರವನ್ನು ಬಿಟ್ಟುಕೊಟ್ಟರು. ಎಷ್ಟು ತೊಂದರೆ ಕೊಟ್ಟರೂ ಐದನೇ ದಿನದಲ್ಲಿಯೂ ಗಂಗಮ್ಮ ಶಮೇಮನೆ, ತಿಮ್ಮಮ್ಮ ಗಣಪಯ್ಯ, ಸರಸಮ್ಮ ನರಸಭಟ್ಟ, ಸುಬ್ಬಮ್ಮ ಮಂಜಪ್ಪ ಹೆಗಡೆ, ಲಕ್ಷ್ಮಮ್ಮ ಮಂಜಪ್ಪ ಹೆಗಡೆ ಇವರ ನೇತೃತ್ವದಲ್ಲಿ ಸತ್ಯಾಗ್ರಹ ಮುಂದುವರಿಯುತ್ತಿರುವುದುದನ್ನು ನೊಡಿದ ಭಟ್ಟರೇ ಪಶ್ಚಾತ್ತಾಪ ಪಟ್ಟು ತಾವು ಕೊಂಡ ಆಸ್ತಿಯನ್ನು ಮರಳಿಕೊಟ್ಟು, ವೀರ ನಾರಿಯರಿಗೆ ಶರಣಾದರು.

೧೯೩೨ ರ ಮೇ ತಿಂಗಳಿನಲ್ಲಿ ಮಾವಿನ ಗುಂಡಿಯಲ್ಲಿ- ಲಿಲಾವಿನಲ್ಲಿ ಎಮ್ಮೆಗಳನ್ನು ಖರೀದಿಸಿದ ಕಾರಕೂನನ ಮನೆ ಹಾಗೂ ಪೊಲೀಸ ಹವಾಲ್ದಾರನಿರುವ ಪೊಲೀಸ ಠಾಣೆಯ ಮುಂದೆ ಮಹಿಳೆಯರು ನಡೆಸಿದ ಅನ್ನ ಸತ್ಯಾಗ್ರಹವು ಇಡೀ ದೇಶದ ಗಮನವನ್ನು ಸಿದ್ದಾಪುರ ತಾಲೂಕಿನತ್ತ ಸೆಳೆಯುವಷ್ಟು ಪ್ರಬಲವಾಗಿತ್ತು. ಕಾರಕೂನನ ಮನೆಯ ಎದುರು ಮೇ ೮ ರಂದು ಶ್ರೀಮತಿಯವರಾದ ಗಣಪಮ್ಮ ಹಾಗೂ ಭಾಗೀರಥಮ್ಮ ಕುಳೀಬೀಡು, ಸೀತಮ್ಮ ಹೊಸಕೊಪ್ಪ, ದೇವಮ್ಮ ಹೆಮ್ಗಾರು- ಇವರು ಅನ್ನ ಸತ್ಯಾಗ್ರಹ ಪ್ರಾರಂಭಿಸಿದರು. ಅಂದೇ ಹವಾಲ್ದಾರನು ಲಿಲಾವಿನಲ್ಲಿ ಖರೀದಿಸಿದ ಎಮ್ಮಯನ್ನು ಮರಳಿ ಪಡೆಯಲೆಂದು ಆತನಿದ್ದ ಪೊಲೀಸ ಠಾಣೆಯ ಮುಂದೆ ಶ್ರೀಮತಿ ಭುವನೇಶ್ವರಮ್ಮ ತ್ಯಾಗ್ಲಿ, ಇವರು ನಿರಂತರ ೩೧ ದಿನಗಳವರೆಗೆ, ಶ್ರೀಮತಿ ಲಕ್ಷ್ಮಮ್ಮ ಕಲ್ಲಾಳ ಇವರು ನಿರಂತರ ೨೨ ದಿನಗಳವರೆಗೆ ಅನ್ನ ಸತ್ಯಾಗ್ರಹ ಮಾಡಿದರು. ಇವರ ಸಹಾಯಕ್ಕೆಂದು ಬಂದ ಅಪಾದನೆಗಾಗಿ ದೊಡ್ಮನೆ ಮಹದೇವಮ್ಮ, ಕಲ್ಲಾಳ ಕಾವೇರಮ್ಮ, ಹಣಜೀಬೈಲ ದುಗ್ಗಮ್ಮ ಇವರುಗಳು ಮೂರು ತಿಂಗಳ ಶಿಕ್ಷೆ ಅನುಭವಿಸಬೇಕಾಯಿತು. ಉಪವಾಸದಿಂದ ಪ್ರಾಣವೇ ಹಾರಿಹೋಗುವಂಥ ಚಿಂತಾಜನಕ ಸ್ಥಿತಿ ಉಂಟಾದರೂ ವಿವಿಧ ರೀತಿಯ ಶಿಕ್ಷೆಗಳಿಗೆ ಬಲಿಯಾಗಬೇಕಾಗಿ ಬಂದರೂ ಹೆದರದ ಈ ಧೀರೆಯರಿಗೆ ಲಿಲಾವಿನಲ್ಲಿ ಎಮ್ಮೆಯನ್ನು ಕೊಂಡ ಧೀರರಿಬ್ಬರೂ ಹೆದರಿದ್ದು, ನಂತರ ಶರಣಾಗಿದ್ದರಿಂದಾಗಿ, ಉತ್ತರ ಕನ್ನಡ ಜಿಲ್ಲೆಯ ವೀರ ವನಿತೆಯರ ಸತ್ಯಾಗ್ರಹ ವಿಜಯದ ಕಿರೀಟಕ್ಕೆ ಇನ್ನೊಂದು ಗರಿ ಸೇರಿಂತಾಯಿತು.

೧೯೩೨ ರ ಜೂನ್ ೧೮ ರಂದು ಲಿಲಾವಿನಲ್ಲಿ ಕೊಂಡ ಮಾಲನ್ನು ತಿರುಗಿ ಪಡೆಯುವ ಉದ್ದೇಶದಿಂದಲೇ ಬಿಳಗಿಯಲ್ಲಿ ಹೊನ್ನ ನಾಯ್ಕ ಎಂಬ ಉಗ್ರಾಣಿಯ ಮನೆಯ ಮುಂದೆ ಶ್ರೀಮತಿ ಲಕ್ಷ್ಮೀಬಾಯಿ ಮಡಗಾಂವಕರ ಹಾಗೂ ಸೀತಾಬಾಯಿ ಭಂಡಾರಿ ಇವರಿಬ್ಬರೂ ಅನ್ನ ಸತ್ಯಾಗ್ರಹ ಪ್ರಾರಂಭಿಸಿದರು. ಹಾಗೂ ಅವರ ಸಹಾಯಕ್ಕೆಂದು ದೇವಯಾನಿಬಾಯಿ ಪೈ ಇವರು (ಒಂದು ವರ್ಷದ ಮಗುವಿನೊಂದಿಗೆ) ಇದ್ದರು. ಮರುದಿನ ಮುಂಜಾನೆ, ನಾಯ್ಕನು ಪಶ್ಚಾತ್ತಾಪಗೊಂಡು ಲಿಲಾವಿನ ಮಾಲನ್ನು ಸತ್ಯಾಗ್ರಹಿಗಳ ಮುಂದಿಟ್ಟು ನಮಸ್ಕರಿಸಿ ಕ್ಷಮೆ ಯಾಚಿಸಿದನು ಮತ್ತು ಲಿಲಾವಿನಲ್ಲಿ ತನ್ನ ಹೆಸರಿನಲ್ಲಿ ಬರೆದ ಭತ್ತವು ಪಟೇಲ ಕುಲಕರ್ಣಿಯವರ ಹತ್ತರವಿದೆಯೆಂದು ಹೇಳಿದನು. ಬಳಿಕ ದೇವಯಾನಿಬಾಯಿ ಪೈ, ರಮಾಬಾಯಿ ಗೋಸಾವಿ, ಚಂದ್ರ ಭಾಗಾಬಾಯಿ ಭಟ್ಟ, ಕಾಶೀಬಾಯಿ ಕ್ಯಾದಗಿ- ಇವರು ಪಟೇಲ ಕುಲಕರ್ಣಿಯವರನ್ನು ಭೆಟ್ಟಿಯಾಗಿ- “ನಾಯ್ಕನ ಹೆಸರಿನಲ್ಲಿ ಬರೆಯಿಸಿ, ನೀವು ಇಟ್ಟುಕೊಂಡ ಭತ್ತವನ್ನು ತಿರುಗಿ ಕೊಡಿರಿ” ಎಂದು ಹೇಳಿ, ಅವರ ಮನೆಯ ಮುಂದೆ ಸತ್ಯಾಗ್ರಹಕ್ಕೆ ಕುಳಿತರು. ಆಗ ಸಿಟ್ಟಿಗೆದ್ದ ಅವರು ಸತ್ಯಾಗ್ರಹಿಗಳನ್ನು ವಿವಿಧ ರೀತಿಯಲ್ಲಿ ಹಿಂಸಿಸಿದರು. ಕಟ್ಟೆಯ ಮೇಲಿಂದ ಈ ಮಹಿಳೆಯರನ್ನು ಕೆಳಗಿ ಕಾಲುವೆಗೆ ನೂಕಿದಾಗ, ಒಂದು ವರ್ಷದ ಹಸುಳೆಯೂ ಕಾಲುವೆಗೆ ಬಿದ್ದು ಗಾಯಗೊಂಡಿತು. ಆದರೆ, ಅಂದೇ ರಾತ್ರಿ ಹತ್ತು ಗಂಟೆಗೆ ಅವರು ಶರಣಾದರು.

ಇದೇ ರೀತಿಯ ಅನೇಕ ಸತ್ಯಾಗ್ರಹಗಳನ್ನು ಶಿರಸಿ ತಾಲೂಕಿನ ಮಹಿಳೆಯರು ನಡೆಸಿದರು, ಅವುಗಳಲ್ಲಿ ತಿಗಣಿಯಲ್ಲಿ ನಡೆದ ಸತ್ಯಾಗ್ರಹವು ಅಸಾಮಾನ್ಯವಾದುದು. ಜೂನ ೬ ರಂದು ನಾಗವೇಣಿ ಬಾಯಿ ಭಟ್ಟ ಹಾಗೂ ಮಹಾಲಕ್ಷ್ಮೀದೇವಿ ಸುಬ್ರಾಯ ಹೆಗಡೆ ಬೆಳ್ಳೆಕೇರಿ ಇವರಿಬ್ಬರೂ ಲಿಲಾವಿನಲ್ಲಿ ಸತ್ಯಾಗ್ರಹಿಗಳ ಮೂರು ಎಮ್ಮೆಗಳನ್ನು ಕೊಂಡ ತಿಗಣಿಯ ಗದಿಗೆಪ್ಪಗೌಡನ ಮನೆಯ ಮುಂದೆ ಅನ್ನ ಸತ್ಯಾಗ್ರಹ ಪ್ರಾರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಈ ಗೌಡ ಕೆಲ ಕುಡುಕರನ್ನು ಕರೆಸಿ ಅವರನ್ನು ಈ ಸತ್ಯಾಗ್ರಹಿಗಳ ಮೇಲೆ ಛೂ ಬಿಟ್ಟರು. ಅದು ಸತ್ಯಾಗ್ರಹಿಗಳಿಗಿದ್ದ ದೈವ ಸಹಾಯದಿಂದಲೋ ಎಂಬಂತೆ ಸಫಲ ಆಗಲಿಲ್ಲ. ಆಗ ಪೊಲೀಸರಿಂದ ಬಂಧಿಸಿದನು. ಆದರೆ ನಾಗವೇಣಿಬಾಯಿ ಭಟ್ಟ, ಸೀತಾಬಾಯಿ ಹೆಗಡೆ ಇವರು ಸತ್ಯಾಗ್ರಹವನ್ನು ಮುಂದುವರೆಸಿದರು. ಇವರನ್ನೂ ಬಂಧಿಸಲಾಗಿ ಕಮಲಾದೇವಿ ಭಟ್ಟ ಹಾಗೂ ಗಂಗಮ್ಮ ಕಡವೆ ಇವರು ಸತ್ಯಾಗ್ರಹ ಮುಂದುವರೆಸಿದರು. ಇವರಿಬ್ಬರ ಬಂಧನದ ನಂತರ ವೆಂಕೂಬಾಯಿ ಸೋಂದಾ ಮತ್ತು ಪರಮೇಶ್ವರಮ್ಮ ಹುಳಗೋಳ ಇವರು ಸತ್ಯಾಗ್ರಹವನ್ನು ಮುಂದುವರೆಸಿದರು, ಸತ್ಯಾಗ್ರಹಿಗಳು ಕುಳಿತುಕೊಳ್ಳದಂತೆ, ಅಂಗಳದಲ್ಲಿ ಕೆಸರು ಹರಿಸಿ ಮುಳ್ಳು ನೆಡೆಸಿದರೂ, ಅಲ್ಲೇ ಕುಳಿತು ಮಳೆ ಬಂದಾಗ ಮಾತ್ರ ಮಾರಿಗುಡಿಗೆ ಹೋಗಿ ಮಲಗಿಕೊಂಡರು. ಅಲ್ಲಿಯೂ ಗೌಡನು ಕಳಿಸಿದ ಆಳುಗಳು ಬಂದು ತೊಂದರೆ ಕೊಟ್ಟಾಗ, ಅದನ್ನು ಪ್ರತಿಭಟಿಸುವಾಗ ಅನೇಕ ಕಡೆ ಗಾಯಗಳಾಗಿ, ಜ್ವರವೂ ಅವರಿಗೆ ಬಂದಿತು. ದೇಹಕ್ಕೆ ಶಕ್ತಿ ಬಂದೊಡನೆ ಮತ್ತೆ ಸತ್ಯಾಗ್ರಹ ಮುಂದುವರಿಸುವುದಾಗಿ ಅವರು ಹೇಳಿದ್ದರು. ಆದರೆ ಅಷ್ಟರಲ್ಲಿಯೇ ಗೌಡನು ಶರಣಾದ್ದರಿಂದ ಆ ಪ್ರಸಂಗ ಬರಲಿಲ್ಲ.

ಹೀಗೆ ಪ್ರತಿಯೊಂದು ಕಡೆ ನಡೆಸ ಸತ್ಯಾಗ್ರಹವೂ ಈ ವೀರ ಮಹಿಳೆಯರ ತಾಳ್ಮೆಯನ್ನೂ, ಧೈರ್ಯವನ್ನೂ ಹಾಗೂ ಕಷ್ಟ ಸಹಿಷ್ಣುತೆಗಳನ್ನೂ ಒರೆಗಲ್ಲಿಗೆ ಹಚ್ಚುವ ಪರೀಕ್ಷೆಯಾದುದು ಆದರೆ, ಎಂತಹ ಭೀಕರ ವಾತಾವರಣ ನಿರ್ಮಾಣವಾದರೂ ಸೋಲನ್ನೊಪ್ಪಿಕೊಳ್ಳದೇ ಅದೇ ಪಥದಲ್ಲಿ ಮುಂತುವರಿದುದು ಮತ್ತು ಪ್ರತಿಯೊಂದು ಸತ್ಯಾಗ್ರಹವನ್ನೂ ಯಶಸ್ವಯಾಗಿಯೇ ಮುಗಿಸಿದ್ದು ಅವರ ಹಿರಿಮೆಯ ಹಾಗೂ ವರ್ಣನಾತೀತ ಧೈರ್ಯದ ಕುರುಗಾಗಿ ನಮ್ಮ ಮುಂದೆ ನಿಂತಿದೆ.

ಚಳುವಳಿಯ ಇನ್ನಿತರ ಮುಖಗಳು: ಸರ್ಕಾರಿ ಅಧಿಕಾರಿಗಳ ನೀತಿ ಬದಲಾದಂತೆಯೇ ಸತ್ಯಾಗ್ರಹಿಗಳ ಕಾರ್ಯಕ್ರಮಗಳೂ ಬದಲಾಗುತ್ತಿದ್ದವು. ಅಂಕೋಲಾ ತಾಲೂಕಿನಲ್ಲಿ ಸತ್ಯಾಗ್ರಹಿಗಳನ್ನು ಮನೆ ಮನೆಗಳಿಂದ ಹೊರದೂಡಿ ಅವರ ಮನೆಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಹತ್ತಿದರೆ, ಅಲ್ಲಿಯ ವೀರ ನಾರಿಯರು ತಮ್ಮ ಜೀವದ ಹಂಗು ತೊರೆದು ಬೀಗ ಮುದ್ರೆಗಳನ್ನು ಮುರಿದು, ಆ ಮನೆಗಳಲ್ಲಿ ವಾಸ ಮಾಡುವ ಸತ್ಯಾಗ್ರಹವನ್ನು ಪ್ರಾರಂಭ ಮಾಡಿದರು. ಇದಕ್ಕಾದರೂ ಅಸಾಮಾನ್ಯ ಧೈರ್ಯವೇ ಬೇಕು. ಇದು ಅಧಿಕಾರಿಗಳ್ನನೇ ನೇರವಾಗಿ ಎದುರಿಸುವುದಾದ್ದರಿಂದ ಬೀಗಮುದ್ರೆಗಳನ್ನು ಮುರಿದ ಈ ವನಿತೆಯರಿಗೆ ದಿನದಿನವೂ ಒಂದಕ್ಕಿಂತ ಒಂದು ಭಯಂಕರವಾಗಿರುವಂಥ ಶಿಕ್ಷೆಗಳೇ ಕಾದಿರುತ್ತಿದ್ದವು.

೧೯೩೨ ಆಗಸ್ಟ ೧೪ ರಂದು ವಾಸ್ರೆಯಲ್ಲಿ ಬೊಮ್ಮಯ್ಯ ನಾಯ್ಕರ ಮನೆಯ ಬೀಗ ಮುದ್ರೆಯನ್ನು ಮುರಿದು, ಮಾಣುದೇವಿಯವರ ನೇತೃತ್ವದಲ್ಲಿ ಅನೇಕ ಸ್ತ್ರೀ ಸತ್ಯಾಗ್ರಹಿಗಳು ಒಳಹೊಕ್ಕಾಗ, ಪೊಲೀಸರು ಮಾಣುದೇವಿಯವರನ್ನು ನೆಲಕ್ಕೆ ಕೆಡವಿ, ಬೂಟುಗಾಲಿನಿಂದ ಒದ್ದು, ಬೆನ್ನ ಮೇಲೆ ತುಳಿದು, ಇವೆಲ್ಲದರಿಂದ ಪ್ರಜ್ಞೆ ತಪ್ಪಿ ಬಿದ್ದರೂ, ಅವರಿಗೆ ಸಮಾಧಾನವಾಗದೇ ಕಣ್ಣಲ್ಲಿ ಮೆಣಸಿನಪುಡಿ ತುಂಬಿ ಬೀಸಾಡಿ ಹೋದರೂ ಮತ್ತೆ ೩-೪ ದಿನಗಳ ವಿಶ್ರಾಂತಿಯ ನಂತರ, ತಿರುಗಿ ಅದೇ ರೀತಿಯ ಸತ್ಯಾಗ್ರಹವನ್ನು ಮುಂದುವರಿಸಬೇಕಾದರೆ ಅವರ ತಾಳ್ಮೆ, ಧೈರ್ಯವಾದರೂ ಅಳತೆಗೆ, ಕಲ್ಪನೆಗೆ ಮೀರಿದ್ದು ಎನ್ನುವ ಭಾವನೆ ನಮಗೆ ಈಗ ಬರುವುದು ಸಹಜ.

ನವ್ಹೆಂಬರ್ ೨೨ ರಂದು ಮುಂಬಯಿ ಗವರ್ನರರು ಕಾರವಾರಕ್ಕೆ ಬರುವ ಸುದ್ದಿ ತಿಳಿದ ಸತ್ಯಾಗ್ರಹಿಗಳು ಅವರಿಗೆ ಪ್ರತಿಭಟನಾರ್ಥವಾಗಿ ಕಪ್ಪು ಧ್ವಜ ತೋರಿಸಬೇಕೆನ್ನುವ ನಿರ್ಧಾರಕ್ಕೆ ಬಂದರು. ಆದರೆ ಆ ಮಾರ್ಗ ಹಿಡಿದ ಅನೇಕ ಜನರನ್ನು ಪೊಲೀಸರು ಬಂಧಿಸಿದಾಗ ಅಡವಿಯ ದಾರಿಯಿಂದ ಹೇಗೋ ಬಂದು, ಅವರ ಹಡಗಿಳಿದು ಬರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ಕಣಗಿಲದ ಬೊಮ್ಮಾ ಎನ್ನುವ ಮಹಿಳೆ, ಅವರಿಗೆ ಕಪ್ಪು ಧ್ವಜವನ್ನು ತೋರಿಸಿ “ಗವರ್ನರರೇ ಮರಳಿ ಹೋಗಿ” ಎಂದು ಅಷ್ಟೊಂದು ಪೊಲೀಸರ ಎದುರಿನಲ್ಲೇ ಕೂಗಿ ಹೇಳಬೇಕಾದರೆ, ಅವಳ ಧೈರ್ಯವೇನು ಸಾಮಾನ್ಯವೇ?

ಸಿರಸಿ-ಸಿದ್ದಾಪುರ ತಾಲೂಕುಗಳಲ್ಲಿ ಹೆಚ್ಚಾಗಿ ನಡೆದ ಧ್ವಜ ಸತ್ಯಾಗ್ರಗಳಲ್ಲಾಗಲೀ, ಸರಾಯಿಬಂದೀ ಸತ್ಯಾಗ್ರಹಗಳಲ್ಲಾಗಲೀ ಸ್ತ್ರೀಯರ ಪಾತ್ರ ಮಹತ್ವಪೂರ್ಣವಾಗಿದ್ದು, ಅವರು ತಮ್ಮ ಅಸಾಧಾರಣ ಪರಾಕ್ರಮವನ್ನು ಉಳಿದ ಸತ್ಯಾಗ್ರಹಗಳಲ್ಲಿಯಂತೆಯೇ ಮೆರೆಸಿದ್ದಾರೆ.

ಅಪ್ರತ್ಯಕ್ಷ ಕೊಡುಗೆ: ಕಾರಣಾಂತರಗಳಿಂದ ನೇರವಾಗಿ ಸತ್ಯಾಗ್ರಹಗಳಲ್ಲಿ ಭಾಗವಹಿಸಲಾಗದ ಮಹಿಳೆಯರಾದರೂ ತಮ್ಮ ಸೀಮಿತ ಪರಿಧಿಯಲ್ಲೇ ತಮ್ಮ ಹೃದಯವಂತಿಕೆ, ಧೈರ್ಯವಂತಿಕೆಗಳನ್ನು ದೊಡ್ಡ ಪ್ರಮಾಣದಲ್ಲಿಯೇ ತೋರಿ, ಸ್ವಾತಂತ್ರ್ಯ ಚಳುವಳಿಗಳಿಗೆ ತಮ್ಮ ಉದಾತ್ತ ಕೊಡುಗೆ ಸಲ್ಲಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಅದರಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಕೆಳಗಿನಮನೆಯ ಹಸಲರ ದೇವಮ್ಮನದು. ದೇವಮ್ಮ ಎಂದರೆ ಅವಳು ನಿಜವಾಗಿಯೂ ದೇವಮ್ಮನೆ! ಕರನಿರಾಕರಣೆ ಮಾಡಿದವರ ಮನೆಗಳನ್ನು ಜಪ್ತ ಮಾಡುವುದು, ಅವರನ್ನು ಬಂಧಿಸುವುದು ಪ್ರಾರಂಭವಾದ ನಂತರ, ಕೆಳಗಿನಮನೆ ನಾಗೇಶ ಹೆಗಡೆಯವರ ಕುಟುಂಬದವರೆಲ್ಲರೂ ತಮ್ಮ ಹೆಚ್ಚಿನ ಆಭರಣ, ಹಣವನ್ನು ಒಂದು ತಪ್ಪಲೆಯಲ್ಲಿ ಹಾಕಿ ಅದನ್ನು ತಮ್ಮ ತೋಟದಲ್ಲಿ ಹುಗಿದಿಟ್ಟರು. ನಂತರ ಒಬ್ಬೊಬ್ಬರಾಗಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟು ಕುಟುಂಬದ ಎಲ್ಲ ಸದಸ್ಯರು ಜೈಲುವಾಸಿಗಳಾದರು. ಈ ಸಮಯದಲ್ಲಿ ಒಂದು ದಿನ ದೇವಮ್ಮನಿಗೆ ಮಳೆಯಿಂದಾಗಿ ಮೇಲಿನ ಮಣ್ಣು ಕೊಚ್ಚಿ ಹೋಗಿದ್ದರಿಂದ ಹುಗಿದಿಟ್ಟ ತಪ್ಪಲೆ ಗೋಚರಿಸಿತು. ಅದನ್ನು ಗೌಪ್ಯವಾಗಿ ತನ್ನ ಮನೆಗೆ ತಂದು ಬಚ್ಚಿಟ್ಟು, ಧನಿಯ ಕುಟುಂಬದವರ ವರ್ಷದ ನಂತರ ಬಿಡುಗಡೆ ಹೊಂದಿ ಬರುವವರೆಗೂ ಬಹಳ ಕಷ್ಟದಿಂದ ಅದನ್ನು ರಕ್ಷಿಸಿ ನಂತರ ಅದನ್ನು ಅವರಿಗೆ ಅದೇ ಸ್ಥಿತಿಯಲ್ಲಿ ಮುಟ್ಟಿಸಿ ಧನ್ಯಳಾದಳು. ಮಹಾಭಾರವನ್ನು ಇಳಿಸಿ ನಿಟ್ಟುಸಿರು ಬಿಟ್ಟರು. ಆನಿಧಿ ಅವಳ ಹತ್ತಿರವಿದ್ದಾಗ ಪೊಲೀಸರಿಗೆ ಹೇಗೂ ಸ್ವಲ್ಪ ಅನುಮಾನ ಬಂದು, ಅವಳನ್ನೂ, ಅವಳ ಗಂಡನನ್ನೂ ವಿವಿಧ ರೀತಿಯ ಚಿತ್ರಹಿಂಸೆಗೆ ಗುರಿಮಾಡಿದರು. ಅದೇ ನೆವದಲ್ಲಿ ಅವಳ ಗಂಡ ತೀರಿಕೊಂಡು ಬಿಟ್ಟ. ಇಷ್ಟೆಲ್ಲ ಕಷ್ಟವನ್ನನುಭವಿಸಿಯೂ ಪೊಲೀಸರಿಗೆ ಅದರ ಗುಟ್ಟು ಬಿಟ್ಟುಕೊಡದೇ ಬಳಿಕ ಹೆಗಡೆಯವರು ಪ್ರೀತಿಯಿಂದ ಆಭರಣವನ್ನೆತ್ತಿ ಬಹುಮಾನದ ರೂಪದಲ್ಲಿ ಕೊಟ್ಟರೂ, ಅದನ್ನು ಆಶೆಯ ದೃಷ್ಟಿಯಿಂದ ಕೂಡ ನೋಡದೇ, ಅದನ್ನು ತಿರುಗಿ ಅವರಿಗೆ ಕೊಟ್ಟು ಹೋದಂಥ ಅಪರೂಪದ ವ್ಯಕ್ತಿತ್ವದ ಮಹಾ ಸ್ವಾಮಿನಿಷ್ಠಳಾದ ದೇವಮ್ಮನಂಥವರು ಇದ್ದುದರಿಂದಲೇ ದೇಶದಲ್ಲಿ ಮಳೆ-ಬೆಳೆಯಾಗುತ್ತಿದೆ ಎಂದು ಅನೇಕರು ಹೇಳಿದ್ದರಲ್ಲಿ ಅತಿಶಯೋಕ್ತಿಯೇನಿಲ್ಲ.

ಪತ್ರಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವ ಕೆಲಸವನನ್ನು-ಕಟ್ಟಿಗೆಯ ಹೊರೆಯನ್ನು ಒಯ್ಯುವ ನೆವದಲ್ಲಿಯೋ, ಮಕ್ಕಳನ್ನು ಸೊಂಟದ ಮೇಲಿಟ್ಟುಕೊಂಡು ತೌರೂರಿಗೋ, ಬೀಗರ ಮನೆಗೋ ಸಿಂಗಾರಾಗಿ ಹೊರಟಂತೆ ನಟಿಸುತ್ತಲೋ, ಮೀನು ಮಾರುವ ಗಡಿಬಿಡಿಯಲ್ಲಿದ್ದಂತೆ ತೋರಿಸುತ್ತಲೋ ಇತ್ಯಾದಿ ರೀತಿಗಳಲ್ಲಿ ಸ್ತ್ರೀಯರೇ ಮಾಡುತ್ತಿದ್ದರು. ಅನುಮಾನ ಬಂದಾಗ ಪೊಲೀಸರಿಂದ ಶೋಧನೆ, ಸಿಕ್ಕಿಬಿದ್ದರೆ ಶಿಕ್ಷೆಗೂ ಅವರು ಒಳಗಾಗಬೇಕಾಗಿತ್ತು.

ವಾರಂಟ ಇದ್ದ ಚಳುವಳಿಗಾರರು ಊರಲ್ಲಿದ್ದಾಗ, ಪೊಲೀಸರು ಅಲ್ಲಿಗೆ ಬಂದರೆ ಆ ಕೂಡಲೇ ೨-೩ ಹೆಂಗಸರು ದೊಡ್ಡ ಜಗಳದ ನಾಟಕ ಪ್ರಾರಂಭಿಸಿ, ಪೊಲೀಸರು ಅದನ್ನೇ ನೋಡುತ್ತ ನಿಲ್ಲುವಂತೆ ಮಾಡಿ, ವಾರಂಟ ಇದ್ದವರಿಗೆ ಈ ಸುದ್ದಿ ತಿಳಿಸಿ, ಅವರು ತಪ್ಪಿಸಿಕೊಂಡು ಹೋಗುವುದಕ್ಕೆ ಸಹಾಯ ಮಾಡುತ್ತಿದ್ದರು.

ಸತ್ಯಾಗ್ರಹ ಸಂಘಟನೆಯ ಕೆಲಸದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೆರವಾದರು. ಸ್ತ್ರೀಯರು ಸತ್ಯಾಗ್ರಹ ಮಾಡಿ ಜೈಲಿಗೆ ಹೋದ ನಂತರ ಬಾಲಕರ ಯೋಗಕ್ಷೇಮ ನೋಡಿಕೊಳ್ಳುವುದು; ಕಾರವಾರ, ಶಿವಮೊಗ್ಗಗಳಲ್ಲಿರುವ ಬಾಲಕಾಶ್ರಮಕ್ಕೆ ಕಳಿಸುವಂತೆ ಪಾಲಕರ ಮನವೊಲಿಸುವುದುಲ ಗಂಡಸರೆಲ್ಲ ಜೈಲಿಗೆ ಹೋಗಿ ಕೇವಲ ಹೆಂಗಸರೇ ಉಳಿದಿರುವಂಥ ಕುಡುಂಬಗಳ ಊಟ ಉಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳುವುದು; ಇದಕ್ಕೆಲ್ಲ ದೇಣಿಗೆ ಸಂಗ್ರಹಿಸುವದು ಇತ್ಯಾದಿ ಕೆಲಸಗಳನ್ನೆಲ್ಲ ಅತ್ಯಂತ ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ಹಾಗೂ ಭಕ್ತಿಯಿಂದ ಅನೇಕ ಮಹಿಳೆಯರು ಮಾಡಿದರು.

ಪ್ರತಿಕೂಲ ಅಂಶಗಳು:

) ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ: ಇದರಿಂದಾಗಿ ಯೋಗ್ಯತೆ ಹಾಗೂ ಮನಸ್ಸುಗಳೆರಡೂ ಇದ್ದರೂ ಸತ್ಯಾಗ್ರಹಗಳಲ್ಲಿ ಹೆಚ್ಚನ ಭಾಗ ತೆಗೆದುಕೊಳ್ಳಲು ಅನೇಕ ಮಹಿಳೆಯರಿಗೆ ಸಾಧ್ಯ ಆಗಲಿಲ್ಲ. ಗಂಡನೋ, ಮಾವನೋ, ತಂದೆಯೋ, ಅವರ ಇಚ್ಛೆಗೆ ವಿರುದ್ಧವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸದಂತೆ ಅಪ್ಪಣೆ ಕೊಡಿಸಿದ ಕಾರಣದಿಂದಾಗಿ ಮನೆಯಲ್ಲೇ ಇದ್ದ ಪ್ರಸಂಗಗಳೆಷ್ಟೋ ಇವೆ.

) ದೈಹಿಕ ಅನಾನುಕೂಲತೆಗಳು: ಗರ್ಭಿಣಿಯೋ, ಬಾಣಂತಿಯೋ ಅಥವಾ ಇನ್ನಿತರ ದೈಹಿಕ ಅನಾನುಕೂಲತೆಗಳಿಂದಾಗಿ ಎಷ್ಟೋ ಮಹಿಳೆಯರು ಮನಸ್ಸಿಗೆ ವಿರುದ್ಧವಾಗಿ ಸತ್ಯಾಗ್ರಹದಲ್ಲಿ ಪಾಲು ತೆಗೆದುಕೊಳ್ಳದೇ ಇದ್ದುದೂ ಉಂಟು.

) ಪ್ರಚಾರದ ಅಭಾವ: ಈ ಮೇಲಿನ ಎರಡೂ ಅಂಶಗಳು ಭಾಗವಹಿಸಿದೇ ಇದ್ದವರ ಕುರಿತಾಗಿದ್ದರೆ, ಸತ್ಯಾಗ್ರಹಗಳಲ್ಲಿ ಸಾಕಷ್ಟು ಭಾಗವಹಿಸಿದವರಿಗೂ ಸರಿಯಾದ ಪ್ರಚಾರ, ಪುರಸ್ಕಾರದ ಅನುಕೂಲ ದೊರೆಯಲಿಲ್ಲ. ಕಾಡಿನ ಜಿಲ್ಲೆಯಾದ ಉತರ ಕನ್ನಡ ಜಿಲ್ಲೆಯ ಈ ಕಾನನ ಕುಸುಮಗಳು ಕಾನನದಿಂದ ಹೊರಬರದ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಬೇರೆ ಬೇರೆ ರೀತಿಯಲ್ಲಿ ವಿಶ್ವದಾಖಲೆ ನಿರ್ಮಿಸಿರಬಹುದಾದ ಸಾಧ್ಯತೆಗಳಿದ್ದರೂ, ಅದಕ್ಕೊಂದು ಸರಿಯಾದ ಪ್ರಚಾರ ಸಿಗಲಿಲ್ಲವಾದ ಕಾರಣ, ಅದು ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಸೇರುವ ಸಾಧ್ಯತೆ ಹೇಗೂ ಇರಲಿ- ದೇಶ ಮಟ್ಟದಲ್ಲಿ ಅಷ್ಟೇಕೆ ಜಿಲ್ಲಾ ಮಟ್ಟದಲ್ಲಿ ಕೂಡ ಸರಿಯಾದ ಪ್ರಚಾರ ಸಿಗಲಿಲ್ಲವಾದ ಕಾರಣ, ಅವರ ಸಾಹಸ ಆಯಾ ಊರು, ತಾಲೂಕುಗಳನ್ನು ಮಟ್ಟದಲ್ಲೇ ಮುರುಟುವಂತಾಯಿತು. ಸತ್ತುಹೋದ ಮಹಿಳೆಯರಿಗೆ ಸ್ಮಾರಕಗಳನ್ನು ನಿರ್ಮಿಸುವ ಪರಂಪರೆಯಿದ್ದ ನಮ್ಮಲ್ಲಿ ಬಹುಶಃ ಈ ಧೀರೆಯರಿಗೆಲ್ಲ ಒಂದೊಂದು ಸ್ಮಾರಕವನ್ನು ನಿರ್ಮಿಸಿದರೆ, ನೋಡಿದಲ್ಲೆಲ್ಲ ಅವೇ ಕಾಣಬಹುದೇನೋ.

ಈ ಕಾರಣಗಳಿಂದಗಿ ಅವರ ಶಕ್ತಿ ಸಾಮರ್ಥ್ಯಗಳು ಸಾಕಷ್ಟು ಪಸರಿಸದಿದ್ದರೂ, ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರನೇಕರು ತೋರಿದ ಧೈರ್ಯ, ತಾಳ್ಮೆಯೇನು ಸಾಮಾನ್ಯವೇ? ಯಾರಿಗಾದರೂ ‘ಅಬ್ಬಾ!’ ಎನಿಸುವಂತಹದೇ. ಸತ್ಯಾಗ್ರಹಗಳಲ್ಲಿ ಅವರು ತೋರಿಸ ಧೈಯ್ಯವಾದರೂ ಎಂತಹದು?

ಮೂಲತಃ ಹೇಡಿಯಿದ್ದರೂ ಹೆಂಡವೋ ಅಥವಾ ಇನ್ಯಾವುದೋ ಅಮಲಿನ ಬಲದಿಂದ ತಾತ್ಕಾಲಿಕವಾಗಿ ಏರಿ ಬಂದ ಧೈರ್ಯವಲ್ಲ ಅವರ ಧೈರ್ಯ. ಇವರದು ದೇಶಭಕ್ತಿ, ಗಾಂಧೀನಿಷ್ಠೆಯ ಹಿನ್ನೆಲೆಯಲ್ಲಿ ಪ್ರಕಟವಾದಂಥ ಸುಪ್ತ ಶಕ್ತಿ- ಈ ಧೈರ್ಯ.

ಅಂತೆಯೇ ದ್ವೇಷ ಸಾಧನೆಯೇ, ಹಣದಾಸೆಯೇ ಅಥವಾ ಇಂತಹ ಯಾವುದೇ ತಾಮಸೀ ಧೈರ್ಯವೂ ಅಲ್ಲ. ಇವರ ಕೈಯಲ್ಲಿ ಯಾವ ಆಯುಧವೂ ಇರುತ್ತಿರಲಿಲ್ಲ ಇದ್ದರೂ ದೈಹಿಕವಾಗಿ ಅಬಲೆಯರಾದ ಅವರ ಮೇಲೆ ಅತ್ಯಾಚಾರವಾದಲ್ಲಿಅದು ತಮ್ಮ ಹತ್ಯೆಗೆಂದೇ ಹೊರತು ಇನ್ನೊಬ್ಬರ ಹತ್ಯೆಗಲ್ಲ. ಮೇಲಾಗಿ ಅಹಿಂಸಾ ತತ್ವವನ್ನೇ ಆಯುಧವಾಗಿ ಹಿಡಿದವರು. ಆದರೆ ಅವರು ಎದುರಿಸಬೇಕಾದದ್ದು-ಲಾಠಿ, ಬೂಟು, ಬೇಡಿ, ಎಲ್ಲಕ್ಕಿಂತ ಹೆಚ್ಚಾಗಿ ಕ್ರೂರ ಮನಸ್ಸನ್ನು ಸ್ವೇಚ್ಛೆಯಾಗಿ ಉಪಯೋಗಿಸುವ ಸ್ವಾತಂತ್ರ್ಯ ಹೊಂದಿದ ವ್ಯಕ್ತಿಗಳನ್ನು ಬಹುಶಃ ಇಂತಹ ವಾತಾವರಣ ವಿದ್ದಿದ್ದಲ್ಲಿ ಕಿತ್ತೂರು ಚೆನ್ನಮ್ಮನಂತಹ ಧೀರೆಯರೂ ಒಮ್ಮೆಯಾದರೂ ಹೆದರಿ ಹಿಂಜರಿಯುತ್ತಿದ್ದರೇನೋ, ಆದರೆ ಉತ್ತರ ಕನ್ನಡ ಜಿಲ್ಲೆಯ ಈ ಚೆನ್ನಮ್ಮರು ಇಂತಹ ವಾತಾವರಣದಲ್ಲೇ ತಮ್ಮ ಧೈರ್ಯ ಪ್ರದರ್ಶಿಸಿ ವಿಜಯಿಗಳಾಗಿದ್ದುದು ಸಾಮಾನ್ಯ ಸಂಗತಿಯಲ್ಲ.

ಈಶ ಸೇವೆಯನ್ನು ದೇಶ ಸೇವೆಯಲ್ಲೇ ಕಂಡು, ದೇಶ ಸೇವೆಯ ಹೊರತಾಗಿ ಯಾವ ಪ್ರತಿಫಲದಾಶೆಯೂ ಇಲ್ಲದೇ, ತಮ್ಮ ಪಾಲಿಗೆ ಬಂದ ಕರ್ಮವನ್ನು ಎಷ್ಟೇ ಕಷ್ಟ ಬಂದರೂ ಬಿಡದೇ ಮಾಡಿದಂಥ ಈ ಕರ್ಮಯೋಗಿಗಳ ಕುರಿತು ಚಿಂತನೆ ಮಾಡುವಂಥ ಅವಕಾಶ ಕಲ್ಪಿಸಿಕೊಟ್ಟ ಎಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತಾ, ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

* * *