ಸಂಸರು ಪ್ರಸಿದ್ಧವಾಗಿರುವುದು ಐತಿಹಾಸಿಕನಾಟಕಗಳ ರಚನೆಯಿಂದ. ಅವರು ಕೇವಲ ಐತಿಹಾಸಿಕ ನಾಟಕಗಳನ್ನು ಬರೆದಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಅವರು ಸಾಮಾಜಿಕ ಅಥವಾ ಬೇರೆ ವಸ್ತುಗಳನ್ನುಳ್ಳ ನಾಟಕಗಳನ್ನು ಬರೆದಿರುವುದರ ಉಲ್ಲೇಖಗಳು ದೊರೆಯುತ್ತವೆ. ಸಂಸರು ಒಮ್ಮೆ ಧಾರವಾಡಕ್ಕೆ ಬಂದಾಗ ಪಂಡಿತ ತಾರಾನಾಥರ ‘ಪ್ರೇಮ’ ಪತ್ರಿಕೆಯ ವಿಶೇಷ ಸಂಚಿಕೆಯೊಂದಕ್ಕೆ (ಏಕಾಂಕ ನಾಟಕಗಳ ಸಂಪುಟಕ್ಕೆ) ‘ಅಸತಿ’ ಎಂಬ ನಾಟಕವನ್ನು ಕೇವಲ ಒಂದೇ ದಿನದಲ್ಲಿ ರಚಿಸಿಕೊಟ್ಟರೆಂದು ತಿಳಿದು ಬರುತ್ತದೆ. ಸಂಸರ ಕೃತಿಗಳ ಪಟ್ಟಿಯಲ್ಲಿ ‘ಲಾಲಿ’ ಮತ್ತು ‘ಮಮ್ಮಲ’ ಎಂಬ ಮತ್ತೆರಡು ಕೃತಿಗಳ ಉಲ್ಲೇಖವಿದ್ದು, ಸಂಸರು ಇವನ್ನು Not Historical ಎಂದು ಕರೆದಿದ್ದಾರೆ. ಮತ್ತು ಈ ನಾಟಕಗಳನ್ನು ಅವರು ಬಿ. ರ್ಶರೀನಿವಾಸ ಅಯ್ಯಂಗಾರರ ಬಳಿ ಕೊಟ್ಟಿರುವುದಾಗಿ ಉಲ್ಲೇಖಿಸಿದ್ದಾರೆ. ಆದರೆ ಇಂದು ಅವೂ ಕೂಡ ಉಪಲಬ್ಧವಿಲ್ಲ. ಅವು ದೊರೆತಿದ್ದರೆ ಸಂಸರ ಸಾಮಾಜಿಕ ನಾಟಕ ರಚನೆಯ ಸಾಮರ್ಥ್ಯದ ಅರಿವಾಗುತ್ತಿತ್ತು.

ಸಂಸರು ಬರೆದ ಆರು ಐತಿಹಾಸಿಕ ನಾಟಕಗಳಲ್ಲಿ ‘ಸುಗುಣ ಗಂಭೀರ’, ‘ವಿಗಡವಿಕ್ರಮರಾಯ’, ‘ಬಿರುದಂತೆಂಬರಗಂಡ’ ಇವು ಮೊದಲು ಪ್ರಕಟವಾಗಿದ್ದವು. ಇವನ್ನೆಲ್ಲ ಒಟ್ಟಿಗೆ ಸೇರಿಸಿ ಕರ್ನಾಟಕ ನಾಟಕ ಅಕಾಡೆಮಿಯವರು ‘ಸಂಸನಾಟಕಗಳು’ ಎಂಬ ಹೆಸರಿನಲ್ಲಿ ೧೯೮೮ರಲ್ಲಿ ಹೊರ ತಂದಿದ್ದಾರೆ. ಈ ಆರು ನಾಟಕಗಳನ್ನು ಜಿ.ಪಿ. ರಾಜರತ್ನಂ ‘ಸಂಸನಾಟಕ ಚಕ್ರ’ ಎಂದು ಅರ್ಥವತ್ತಾಗಿ ಕರೆದಿದ್ದಾರೆ. ಮೈಸೂರು ಅರಸು ಮನೆತನಕ್ಕೆ ಸಂಬಂಧಿಸಿರುವ ಈ ಆರು ನಾಟಕಗಳಲ್ಲಿ ಮೊದಲನೆಯ ಎರಡು ಅರಸರ ಬಿರುದಿಗೆ ಸಂಬಂಧಿಸಿದುವು. ಉಳಿದ ನಾಲ್ಕು ರಣಧೀರನಿಗೆ ಸಂಬಂಧಪಟ್ಟವುಗಳು. ಸಂಸರ ದೃಷ್ಟಿಯಲ್ಲಿ ರಣಧೀರ ಮೈಸೂರು ರಾಜ್ಯವನ್ನು ಕಾಪಾಡಿದವನು. ಶಕ್ತಿತ್ರಯಗಳಾದ ಪ್ರಭುಶಕ್ತಿ, ಮಂತ್ರ ಶಕ್ತಿ ಮತ್ತು ಉತ್ಸಾಹಶಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಾಟಕಗಳನ್ನು ರಚಿಸಲಾಗಿದೆ. ಪ್ರಜೆಗಳ ಹಿತ ಕಾಪಾಡುವ ಆದರ್ಶಪ್ರಭುವಾಗಿ ರಣಧೀರನನ್ನು ಕೇಂದ್ರವಾಗಿಟ್ಟುಕೊಂಡು ಸಂಸರು ಈ ನಾಟಕಗಳನ್ನು ರಚಿಸಿರುತ್ತಾರೆ.

ಸಂಸರು ತಮ್ಮ ಸಮಕಾಲೀನ ಸಾಮಾಜಿಕ ನಾಟಕಕಾರರಾದ ಕೈಲಾಸಂ, ಶ್ರೀರಂಗರನ್ನು ಅನುಸರಿಸದೇ ಬೇರೆ ಹಾದಿ ತುಳಿದರು. ಐತಿಹಾಸಿಕ ನಾಟಕಗಳನ್ನು ಬರೆದರು. ಇದಕ್ಕೆ ಅವರಿಗೆ ಆಗ ಯಾವ ಮಾದರಿಯೂ ಎದುರಿಗೆ ಇದ್ದಿರಲಿಲ್ಲ. ‘ಆನೆ ನಡೆದುದೆ ಮಾರ್ಗಂ’ ಎಂಬಂತೆ ಐತಿಹಾಸಿಕ ನಾಟಕಗಳಿಗೆ ತಮ್ಮದೇ ಆದ ಒಂದು ರೂಪವನ್ನು ಕೊಟ್ಟರು. ಚರಿತ್ರೆಯನ್ನು ಅದರ ಎಲ್ಲ ಮುಖಗಳಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದರು. ಅದ್ಭುತವಾದ ಸಾಮಾಜಿಕ ಪ್ರಜ್ಞೆಯನ್ನು ಪ್ರಕಟಪಡಿಸಿದರು. ಸಂಸರು, ಸಂಸ್ಕೃತ ಹಾಗೂ ಇಂಗ್ಲೀಷ್‌ಭಾಷೆಗಳ ನಾಟಿಕಗಳನ್ನು ಅಭ್ಯಸಿಸಿರಬಹುದಾದರೂ ಕನ್ನಡದಲ್ಲಿ ಅವನ್ನು ಯಥಾವತ್ತಾಗಿ ಅನುಸರಿಸಿಲ್ಲ. ಸೂತ್ರಧಾರನ ಪ್ರವೇಶ ಮಾಡಿಸಿದರೂ ಯಾವ ನಾಟಕದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಅವನನ್ನು ಬಳಸಿಕೊಂಡಿಲ್ಲ. ಸಂಸರ ಇನ್ನೊಂದು ವೈಶಿಷ್ಟ್ಯವೆಂದರೆ ನಾಟಕವನ್ನು ಅಂಕ ದೃಶ್ಯಗಳನ್ನಾಗಿ ವಿಂಗಡಿಸಿಕೊಳ್ಳದೇ ಬಿಡಿಬಿಡಿಯಾದ ಪ್ರವೇಶಗಳನ್ನು ಕಲ್ಪಿಸಿಕೊಂಡುದು. ಹೀಗೆ ತಾವೇ ಒಂದು ಮಾದರಿಯನ್ನು ಸೃಷ್ಟಿಸಿಕೊಂಡಿದ್ದರೂ ಐತಿಹಾಸಿಕ ವಸ್ತುವಿನ ಗಾಂಭೀರ್ಯಕೆಡಿಸದೇ ಕಲಾತ್ಮಕವಾಗಿ ಅವನ್ನು ನಾಟಕರೂಪದಲ್ಲಿ ನಿರೂಪಿಸಿದ ಶ್ರೇಯಸ್ಸು ಸಂಸರದ್ದು. ೧೯೨೦ ರ ಸುಮಾರಿಗೆ, ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟಿಸಿದ ಲೇಖನವೊಂದು ಸಂಸರ ಐತಿಹಾಸಿಕ ನಾಟಕಗಳಿಗೆ ಪ್ರೇರಣೆ ನೀಡಿರಬಹುದೆಂದು ಊಹಿಸಲಾಗಿದೆ.

ಇನ್ನು ಮುಂದೆ ಸಂಸರ ಉಪಲಬ್ಧ ಐತಿಹಾಸಿಕ ನಾಟಕಗಳನ್ನು ಕುರಿತು ಸಂಕ್ಷಿಪ್ತವಾಗಿ ವಿವೇಚಿಸಲಾಗಿದೆ.