ಸಂಸರು ಕಟ್ಟುನಿಟ್ಟಾಗಿ ಯಾವ ಮಾದರಿಯನ್ನೂ ಅನುಸರಿಸದೇ ತಮಗೆ ಅನುಕೂಲವೆನ್ನಿಸುವ ರೀತಿಯಲ್ಲಿ ನಾಟಕಗಳನ್ನು ರಚಿಸಿದರು. ನಾಟಕಗಳಿಗಾಗಿ ಅವರು ಮೈಸೂರು ಅರಸರ ಚರಿತ್ರೆಯನ್ನು ಬಳಸಿಕೊಂಡರು. ಆಕರ ಸಾಮಗ್ರಿಗಳಿಗಗಿ ಎಲ್ಲ ಬಗೆಯ ಶೋಧ ನಡೆಸಿದ್ದನ್ನು ಈ ಹಿಂದೆಯೇ ವಿವರಿಸಲಾಗಿದೆ. ವಸ್ತುವಿನಂತೆಯೇ ಅವರು ಆ ಕಾಲದ ಭಾಷೆಗೂ ಅಷ್ಟೇ ಮಹತ್ವಕೊಟ್ಟರು. ದಾಖಲೆಗಳಲ್ಲಿ ಅಡಗಿರುವ ಭಾಷಾ ರೂಪಗಳನ್ನು ಪ್ರಯತ್ನಪಟ್ಟು ರೂಢಿಸಿಕೊಂಡರು. ನಿರೂಪಗಳಲ್ಲಿರುವ ಭಾಷಾವ್ಯತ್ಯಾಸಗಳನ್ನು ಬಹುಸೂಕ್ಷ್ಮವಾಗಿ ಗಮನಿಸಿ ಬಳಸಿಕೊಂಡಿದ್ದಾರೆ. ರಾಜಮಹಾರಾಜರ ಹಾಗೂ ಮೇಲ್ವರ್ಗದವರ ಭಾಷೆ , ಅವರ ಅಂತಸ್ಥಿಗೆ ತಕ್ಕಂತೆ ಪ್ರೌಢವಗಿ ಮೂಡಿಬಂದಿದ್ದರೆ, ಕಾವಲುಗಾರರು, ಹಳ್ಳಿಯವರು ಮುಂತಾದವರ ಭಾಷೆ ಸಹಜವಾಗಿ ಆಡುಮಾತಿನದಾಗಿದೆ; ದೇಸೀ ನುಡಿಗಟ್ಟುಗಳಿಂದ ಕೂಡಿದೆ. ಅತೀ ಚುರುಕಾದ ಸಂಭಾಷಣೆಗಳಲ್ಲಿ ವ್ಯಕ್ತಿಯ ಗುಣಸ್ವಭಾವಗಳು ಸ್ವಯಂ ವೇದ್ಯವಾಗುವಂತಿವೆ. ಭಾಷೆ ಕ್ರಿಯಾತ್ಮಕಗೊಳ್ಳುವ ವಿಶಿಷ್ಟ ಬಗೆಯನ್ನೂ ನಾವು ಸಂಸರಲ್ಲಿ ಕಾಣಬಹುದಾಗಿದೆ. ಭಾಷೆ, ಅನೇಕ ಸಾಮಾಜಿಕ ಅಂಶಗಳನ್ನು ಪ್ರತಿನಿಧಿಸುತ್ತದೆ ಎಂಬುದನ್ನೂ ಭಾಷೆಯಲ್ಲಿ ವರ್ಗಪ್ರಜ್ಞೆ ಯಾವಾಗಲೂ ಜಾಗೃತವಾಗಿರುತ್ತದೆಂಬುದನ್ನೂ ಸಂಸರ ನಾಟಕಗಳಿಂದಲೂ ಮನಗಾಣಬಹುದು. ಉದಾಹರಣೆಗೆ, ‘ಬೆಟ್ಟದಅರಸು’ ನಾಟಕದಲ್ಲಿ ಆನೆವಾಳಗ್ರಾಮದ ನಾಡಿಗ ಕಗ್ಗಯ್ಯ ಮಹಾರಾಜರನ್ನು ಭೆಟ್ಟಿಯಾಗಿ ತನ್ನ ಸಮಸ್ಯೆಯನ್ನು ನಿವೇದಿಸಿಕೊಳ್ಳಬೇಕು ಎಂದು ಅರಮನೆಗೆ ಬರುತ್ತಾನೆ. ಕಾವಲುಗಾರರು ಒಳಗೆ ಬಿಡದೇ ತೊಂದರೆ ಕೊಡುತ್ತಾರೆ. ಅವನ ಗಲಾಟೆ ಕೇಳಿ ದಳವಾಯಿ ಬೆಟ್ಟದ ಅರಸು ಅವನನ್ನು ಒಳಬಿಡಹೇಳಿ, ವಿಚಾರಿಸುತ್ತಾನೆ. ಆಗ,

ಕಗ್ಗಯ್ಯ: (ಕಯ್ಮುಗಿಯುತ್ತ, ಅದೃಢಸ್ವರದಿಂದ) ಶಿವ ನಿಮ್ಮ ಹೊಟ್ಟೆಯನ್ನು ನಿಮ್ಮ ಹೆಂಡತಿ ಮಕ್ಕಳ ಹೊಟ್ಟೆಯನ್ನು ತಣ್ಣಗಿಟ್ಟಿರಲಿ, ನನ್ನಪ್ಪ! ನೀವೇ ದೇವರು, ಮಾಸ್ವಾಮಿ!

ಬೆಟ್ಟದ ಅರಸು: ಏನಾಯ್ತು?

ಕಗ್ಗಯ್ಯ: ಹಹೌದು. ನೀವು ನಮ್ಮೂರನ್ನ, ಆನೆವಾಳನ್ನ ಬೆಟ್ಟದ ಶಿವನಿಗೆ ಆವೊತ್ತು, ಗರಣದಾಗ ಗುಡಿಯಕೊಡಗೆ ಕೊಟ್ಟಿದ್ದು ಮಾಸ್ವಾಮಿ.

ಬೆಟ್ಟದ ಅರಸು: ಆಳುವ ಮಹಾಸ್ವಾಮಿಯವರಿಗೆ ಪುಣ್ಯವಾಗಬೇಕೆಂದು ಮಹಾಸನ್ನಿಧಾನದ ಅಭಿಮತಿ ಪೂರ್ವಕವಾಗಿ ಆನೆವಾಳ ಗ್ರಾಮವನ್ನು ಹಾಗೆ ಧಾರೆಯೆರೆದು ಸಮರ್ಪಿಸಿ ದೇವದಾಯ ಮಾಡಿದೆವಹುದು.

ಕಗ್ಗಯ್ಯ: ಆ ವೊತ್ತಿನಿಂದ ನಮ್ಮೂರ ದೊಡ್ಡದೊಡ್ಡ ಬಂಡವಳದ ಬಲ್ಲಿದ ಕುಳಗಳೆಲ್ಲಾ ಶಿವನಗುಡಿಗೆ ವಾರದ ದಿವಸ ಒಂದುಕಾಳನ್ನೂ ಕೊಡರು ಮಾಸ್ವಾಮಿ; ಬಡವರಿಗೂ ಆ ನನ್ನ ಮಕ್ಕಳಿಗೂವೆ ಹೇಳಿಕೊಟ್ಟು ಕೊಡಲಿಯೀಸರು ಮಾಸ್ವಾಮಿ.

ಬೆಟ್ಟದ ಅರಸು: ಅದೇಕೆ?

ಕಗ್ಗಯ್ಯ: ನಾವು ಕೊಡದಿದ್ದರೆ ಶಿವ ಉಪಾವಾಸ ಬಿದ್ದು ಸತ್ತು ಹೋಗಲಿಕ್ಕಿಲ್ಲ. ಶಿವನಿಗೆ ಹಸಿವು ಬಾಯಾರಿಕೆ ಏನೂ ಇಲ್ಲ. ನಾವೇ ನಮ್ಮ ಹೊಟ್ಟೆ ತಣ್ಣಗಾಗುವ ಹಾಂಗೆ ಚೆಂದಾಗಿ ಹೊಟ್ಟೆ ತುಂಬ ಉಂಡರೆ ಶಿವನಿಗೆ ಹೊಟ್ಟೆ ತಣ್ಣಗಾಗಿ ಹೊಟ್ಟೆತುಂಬಿ ತೇಗು ಬಂದು ಸಂತೋಷವಾಗಿ ಶಿವ ನಮ್ಮನ್ನು ಹೊಗಳಿ ಹರಸುತ್ತಾನೆ, ಎನ್ನುತ್ತಾರೆ ಮಾಸ್ವಾಮಿ.

ಸಮಸ್ತರೂ: (ನಕ್ಕು ಬಿಡುವರು)……

ಈ ಮೇಲಿನ ಅವತರಣಿಕೆಯಲ್ಲಿ ಕಗ್ಗಯ್ಯನ ಮಾತಿನಲ್ಲಿ ಮಾಸ್ವಾಮಿ, ಗರಣ, ಕೊಡಗೆ, ಆವೊತ್ತು, ಕುಳ, ಮಕ್ಕಳಿಗೊವೆ, ಸಂತೋಷ, ಉಪಾಸ ಇತ್ಯಾದಿ ಗ್ರಾಮ್ಯಶಬ್ದಗಳಿದ್ದು ಅವನ ಮಾತಿನ ಶೈಲಿ ಒಟ್ಟಾರೆ ದೇಸಿಯಾಗಿದ್ದರೆ, ಬೆಟ್ಟದ ಅರಸುವಿನ ಮಾತುಗಳು ಇದಕ್ಕೆ ವ್ಯತಿರಿಕ್ತವಾಗಿದ್ದು, ಸಂಸ್ಕೃತ ಭೂಯಿಷ್ಯ ಶಿಷ್ಟ ಶೈಲಿಯನ್ನು ಹೋಲುತ್ತವೆ. ದಳವಾಯಿಯಾದ ಅವನು ತನ್ನ ಅಂತಸ್ಥಿಗೆ ತಕ್ಕಂತೆ ಫ್ರೌಢಭಾಷೆಯನ್ನೇ ಬಳಸುತ್ತಾನೆ. ಸಂಸರು ಈ ಭಾಷೆಯಲ್ಲಿ ವರ್ಗವ್ಯತ್ಯಾಸವನ್ನುಒ ನಾಟಕದುದ್ದಕ್ಕೂ ನಡೆಸಿಕೊಂಡು ಹೋಗಿದ್ದಾರೆ. ದೇಸೀ ಶೈಲಿಗೆ ಇನ್ನೊಂದು ಉದಾಹರಣೆಯನ್ನು ‘ಸುಗುಣಗಂಭೀರ’ ನಾಟಕದಂದ ಕೊಡಬಹುದು. ೧೦ನೆಯ ಪ್ರವೇಶದಲ್ಲಿ ಕೋಟೆಯ ದ್ವಾರವನ್ನು ಕಾವಲುಗಾರರು ಕಾಯುತ್ತಿರುವ ಸನ್ನಿವೇಶ. ಬೇಸರ ಕಳೆಯಲು ಅವರು ಕೋಟೆಯ ಬಾಗಿಲು ಹೊಸ್ತಿಲ ಮೇಲೆ ಕುಳಿತು ಮಾತನಾಡ ಬಯಸುತ್ತಾರೆ.

ಮೆಳ್ಳು: ಅಲ್ಲಿ ನೋಡು; ಕೋಟೆಯ ಬಾಗಿಲ ಹೊಸತಿಲ ಮೇಗೆ……

ಮಿನುಕ: ಹೌದುಕಣ, ಅಯ್ಯಪ್ಪಣ್ಣಾ! ಅಲ್ಲಿ ಕುಳ್ಳಿರವ ಬಾರ

ನಾಲ್ವರೂ: (ಹೋಗಿ ಕುಳಿತುಕೊಳ್ವರು)

ಬೋಡ: (ಕಾಲ್ಗಳನ್ನು ನೇವರಿಕೊಳ್ಳುತ್ತ ಅಗುಳಿಸಿ) ನಿದ್ದೆ ಬಂದರೆ ಮಾಡುವುದೇನಿರೆಲೊ? ನನಗೆ ತೂಂಕಡ ಬರುತ್ತದೆ.

ಮಿನುಕ: ನಿಮ್ಮಂಥ ಮುದುಕರ್ಗೆ ಕಾಲ್ನಿಂತರೆ, ಕಣ್ಗೆ ಮತ್ತು ಬರುತ್ತದೆ. ಅದಕೆ ಯಾರೇನ್‌ ಮಾಡಿಯಾರು?

ಬೋಡ: ಏನಿರಲೋ, ಹುಡುಗರು ಯಾರಾದರೂ ಒಂದು ಪದವನ್ನು ಹಾಡಿರೆಲೊ ಕೇಳುವ.

ಮಿನುಕ: (ಸಂತೋಷದಿಂದ) ಅಯ್ಯಪ್ಪಣ್ಣಾ! ದಿಟಕಣ, ಬೋಡಣ್ಣಾ! ಎಲೇ ಮೆಳ್ಳೆ, ಒಂದು ಪದವನ್ನು ಭಾಪಾಗಿ ಹೇಳ, ಕೇಳುವ (ಬೋಡನನ್ನು ಕುರಿತು) ನೀನದವ್ನ ಕೇಳಲಿಲ್ಲವಾ ಅಣ್ಣ! ಮೊನ್ನೆ ಮೆಳ್ಳೆ ಹಾಡುತ್ತಿದ್ದ; ಚಿಕ್ಕರಸರು ಆಗ ಹಿನ್ದೆಯೇ ನಿಂತಿದ್ದು ಕೇಳಿ, ಈ ನಮ್ಮ ಮೆಳ್ಳೆಯನ್ನು ಭಲರೇಗಿರಿಯೇರಿಸಿಬಿಟ್ಟರು! ಎಲ್ಲಿ ಮೆಳ್ಳೆ ಚೆನ್ದವಾಗಿ ಹೇಳಬೇಕು!

ಹೀಗೆ ಸಂಪೂರ್ಣವಾಗಿ ಸಹಜ ಆಡುಮಾತಿನಲ್ಲಿಯೇ ಇಡೀ ಸನ್ನಿವೇಶ ಹೆಣೆಯಲ್ಪಟ್ಟಿದೆ.

ಸಂಸರು ನಮ್ಮ ನಾಟಕಗಳಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಅದ್ಭುತವಾದುದು. ನಾಟಕೀಯತೆದೊಂದಿಗೆ ಸಂದರ್ಭದ ನಿರ್ವೀರ್ಯತೆಯ ಸಂಕೇತವಾಗಿಯೂ ಅವರು ಭಾಷೆಯನ್ನು ಬಳಸಿಕೊಂಡಿದ್ದಾರೆ. ‘ವಿಗಡ ವಿಕ್ರಮರಾಯ’ ನಾಟಕದಲ್ಲಿ ಮೊದಲ ಪ್ರವೇಶದಲ್ಲಿ ಇಮ್ಮಡಿರಾಜ ಒಡೆಯ, ಮತ್ತೆ ಪ್ರಭುಶಕ್ತಿಯನ್ನು ಕ್ರೋಢೀಕರಿಸಿಕೊಂಡು ಅಹಂಕಾರದಿಂದ ಬೀಗುತ್ತ ಸರ್ವಾಧಿಕಾರಿಯಂತೆ ವರ್ತಿಸುವ ವಿಕ್ರಮರಾಯನನ್ನು ರಾಜವೇಷ ತೊಟ್ಟು ಎದುರಿಸುವ ಸನ್ನಾಹ ಮಾಡುತ್ತಾನೆ. ದಳವಾಯಿ ವಿಕ್ರಮರಾಯನ ಹರ್ಮ್ಯಕ್ಕೆ ಬಂದು ರಾಜ್ಯದ ಲೆಕ್ಕ ಪತ್ರಗಳನ್ನು ಕೇಳುತ್ತಾನೆ. ವಿಕ್ರಮರಾಯ ಅರಸನಿಂದ ಇದನ್ನು ನಿರೀಕ್ಷಿಸಿರಲಿಲ್ಲ. ‘ನಮಗಿದು ಅರ್ಥವಾಗುತ್ತಿಲ್ಲ’ ಎನ್ನುತ್ತಾನೆ. ಆಗ,

ಮಹಾರಾಜ; ಏನು?

ವಿಕ್ರಮರಾಯ: ನಿನ್ನ ಇಂದಿನ ಈ ವೇಷವಿದು. ಆ ವೃದ್ಧ ರಂಗಜೋಯಿಸರೇನಾದರೂ ತಪ್ಪಿ, ಈ ವೊತ್ತು ಮಹಾನವಮಿಯ ಪಾಡ್ಯಮಿಯೆಂದು ನಿನಗೆ ಭ್ರಮೆಯನ್ನು ಹುಟ್ಟಿಸಿಟ್ಟರೋ?

ಮ: ಹುಂ

ವಿ: ಮತ್ತೆ. ಆ ವೊಡ್ಡೋಗಲದ ಉಡುಗೆ ತೊಡುಗೆಗಳು ಪಟ್ಟದ ಕತ್ತಿಯು, ಶಿಖಾಸರವು – ಮುದ್ರೆಯುಂಗರವೂ ಹೀಗೆ ಇಂದೇಕೆ? ಇವೆಲ್ಲವನ್ನೂ ಬೊಕ್ಕಸದಿಂದ ನಿನಗೆ ತೆಗೆದಿತ್ತವರಾರು? ನಮಗೆ ಅರ್ಥವಾಗಿಲ್ಲ.

ಮ: ದಳವಾಯಿ ಮಹಾಶಯರೆ, ನಮ್ಮಿದಿರಲ್ಲಿಯಾದರೂ ನಮಗೆ ಸಲ್ಲತಕ್ಕ ಗೌರವ ಮರ್ಯಾದೆಗಳನ್ನರಿತು ನೀನು ನಡೆದುಕೊಳ್ಳಬೇಕೆಂದು ನಾವಾಗಿ ನಿರವಿಸೋಣವೇ?

ವಿ: (ನಕ್ಕು) ಹಾಗೆಂದರೆ?

ಮ: (ತನ್ನದೆಯನ್ನು ಮುನ್ನೀಡಿ, ಮೊಗವೆತ್ತಿ, ಧರ್ಮದಿಂದ) ನನ್ನ ವಿಷಯವನ್ನು ಏಕವಚನದಲ್ಲಿ ಹೇಳಿಕೊಳ್ಳುತ್ತ ನಾವಾರೆಂಬುದನ್ನು ಮರೆಯದಿರು.

ವಿ: (ನೆಟ್ಟನೆ ಕುಳಿತು ಕೌತುಕದಿಂದ) ನೀವಾರು?

ಮ: ನಾವಾರು! (ಘರ್ರನೆ ಪಾರ್ಶ್ವಕ್ಕೆ ತಿರುಗಿ, ವಂದಿಮಗಧರತ್ತ ನೋಡುವನು)

ವಂದಿಮಾಗಧರು: (ಕಯ್ಯೆತ್ತಿ) ಜಯ ಜಯ ಮಹಾರಾಜ! ಜಯ ಜಯ ಮಹಾಸ್ವಾಮಿ!

ಸ್ವಸ್ತಿಶ್ರೀ ಮತ್ಸಶ್ಚಿಮರಂಗನಾಥ ಪಾದಾರವಿಂದ ಮಧುಕರಾಯಿತ ಚೆತ್ತ!
ಮತ್ತರಿರಿಪುಷಂಡ ಖಣ್ಡನೋದ್ದಂಡ ದೋರ್ಹಂಡ!
ಅರ್ಥಿಜನೇಪ್ಸಿ ತಾರ್ಥದಾನಶೌಂಡ!
ಅಂಗನಾಜನ ಕುಸುಮಕೋದಣ್ಡ ……………..

ಇತ್ಯಾದಿಯಾಗಿ ರಾಜನ ಬಿರುದು-ಬಾವಲಿಗಳನ್ನು ಹೊಗಳುತ್ತಾರೆ. ವಂದಿಮಾಗಧರಿಂದ ತಾನಾರೆಂಬುದನ್ನು ತಿಳಿಸುವ ಮಹಾರಾಜನ ದುಃಸ್ಥಿತಿ ಇಲ್ಲಿ ವಿಡಂಬನೆಗೆ, ಅಪಹಾಸ್ಯಕ್ಕೆ ಗುರಿಯಾದುದನ್ನು ಗಮನಿಸಬೇಕು.