ಸಂಸರ ನಾಟಕಗಳ ವಸ್ತುವಿನ ಹರವು ವಿಸ್ತಾವಾದುದು. ಅದರಂತೆ ಪಾತ್ರ ಪ್ರಪಂಚವೂ ದೊಡ್ಡದು. ರಾಜ ಮಹಾರಾಜರಂತಹ ಪ್ರತಿಷ್ಠಿತ ಪಾತ್ರಗಳನ್ನಲ್ಲದೇ ಕಾವಲುಗಾರರು ವರ್ತಕರು, ಹಳ್ಳಿಯವರು, ಕಾಲಾಳುಗಳು, ವೇಶ್ಯೆಯರು ಹೀಗೆ ಸಾಮಾನ್ಯ ಜನರನ್ನು ಸಂಸರು ತಮ್ಮ ನಾಟಕಗಳಲ್ಲಿ ತಂದಿದ್ದಾರೆ. ಅವರಲ್ಲಿ ಘರ್ಷಣೆಗಳನ್ನು ಕಲಾತ್ಮಕವಾಗಿ ಹಿಡಿದಿಟ್ಟಿದ್ದಾರೆ. ರಣಧೀರ, ನಿರೀಶ ಮುಂತಾದ ಉದಾತ್ತರು, ಕರುವಿಯನ್ ವಿಕ್ರಮರಾಯ ಮುಂತಾದ ದುಷ್ಟರು ಹೀಗೆ ಕಪ್ಪು-ಬಿಳುಪಿನ ಪಾತ್ರಗಳನ್ನು ಸಂಸರು ಚಿತ್ರಿಸಿದ್ದರೂ ಕೆಲವಡೆ ಪಾತ್ರಗಳ ಅಂತರಂಗದ ಒಳತೋಟಿಯನ್ನು ಹಿಡಿದಿಡುವಲ್ಲಿ ಸಮರ್ಥರಾಗಿದ್ದಾರೆ. ಸಂಸರ ಸ್ತ್ರೀ ಪಾತ್ರಗಳೂ ಅಷ್ಟೇ ಮಹತ್ವದವಾಗಿದೆ. ತಿಮ್ಮಾಜುಮ್ಮಣಿ, ಮುದ್ದಾಜಮ್ಮಣ್ಣಿ, ಮಾದೇವಮ್ಮಣ್ಣಿ, ಅಂಬಿಕೆ ಮುಂತಾದವರು ರಾಜವಂಶದ ಸ್ತ್ರೀಯರಾದರೆ, ತೇಜಸ್ವಿನಿ, ಕಾಡಿಣಿ, ದೊಡ್ಡಮ್ಮ ಮುಂತಾದ ಸಾಮಾನ್ಯ ಸ್ತ್ರೀಯರೂ ಅಲ್ಲಿದ್ದಾರೆ. ಹೆಣ್ಣಿನ ಪ್ರೇಮ, ಛಲ ಹಾಗೂ ಸೇಡುಗಳನ್ನು ಸಂಸರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅಂಬಿಕೆ, ತೇಜಸ್ವಿನಿ ಇವರ ಮಾನಸಿಕ ದ್ವಂದಗಳೂ ಇಲ್ಲಿ ಅಷ್ಟೇ ಮುಖ್ಯದ್ದೆನಿಸಿವೆ. ಹೆಣ್ಣನ್ನು ರಾಜಕೀಯ ಚದುರಂಗದಲ್ಲಿ ಪ್ರಮುಖದಾಳವನ್ನಾಗಿ ಬಳಸಿಕೊಳ್ಳುವ ತಂತ್ರವನ್ನು ಆ ಕಾಲದಲ್ಲಿಯೇ ಸಂಸರು ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದಾರೆ. ಸಂಸರು ಚಿತ್ರಿಸಿದ ಸ್ತ್ರೀ ಪಾತ್ರಗಳು ಸಂಕಷ್ಟಗಳನ್ನು ಎದುರಿಸಿ ಗಟ್ಟಿಯಾಗುತ್ತಾ ಹೋಗುವ ಗಟ್ಟಿಮುಟ್ಟಾದ ಪಾತ್ರಗಳಾಗಿವೆ. ಸಂಸರ ಅನೇಕ ಪಾತ್ರಗಳು ಒಂದಕ್ಕಿಂತ ಹೆಚ್ಚು ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂಸರು ರಣಧೀರನನ್ನು ಆದರ್ಶ ರಾಜನನ್ನಾಗಿ ಚಿತ್ರಿಸುವ ಪ್ರಯತ್ಜ ಮಾಡಿದ್ದಾರೆ. ಅದಕ್ಕಾಗಿಯೇ ಅವನ ಉದಯ, ಉತ್ಕರ್ಷಗಳಿಗೆ ಹೆಚ್ಚಿನ ಗಮನ ನೀಡಿದ್ದಾರೆ. ರಣಧೀರನಿಗೆ ವ್ಯೆದೃಶವಾಗಿ ವಿಕ್ರಮರಾಯನ ಪಾತ್ರಬಂದಿದೆ. ಅದಕ್ಕಾಗಿ ಅವನನ್ನು ಖಳನಾಯಕನನ್ನಾಗಿ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ.