ಸನ್ನಿವೇಶಗಳ ನಿರ್ಮಾಣದಲ್ಲಿಯೂ ಸಂಸರದ್ದು ಎತ್ತಿದ ಕೈ. ಕ್ರಿಯಾತ್ಮಕವಾದ ಭಾಷಾ ಸಾಮರ್ಥ್ಯದಿಂದಾಗಿಯೇ ಅವರ ನಾಟಕಗಳಲ್ಲಿ ನಾಟಕೀಯತೆ ಅಪೂರ್ವವಾದ ರೀತಿಯಲ್ಲಿ ಮೂಡಿಬಂದಿದೆ. ‘ಬೆಟ್ಟದರಸು’ ನಾಟಕದಲ್ಲಿ ಯುವರಾಜ ರಾಜ ಒಡೆಯ ಇನ್ನೂ ಬಾಲಕನಾಗಿದ್ದ ಸಂದರ್ಭ; ಸಿಂಹಾಸನವನ್ನು ನೋಡುತ್ತಲೇ ಅದನ್ನು ಹತ್ತಬೇಕೆಂಬ ಬಯಕೆ ಅವನಲ್ಲಿ ಮೂಡುತ್ತದೆ. ಯಾರೂ ಇಲ್ಲದ್ದನ್ನು ನೋಡಿ ಅದರ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಮುಂದಿನ ಮೆಟ್ಟಲುಗಳನ್ನು ಕಳಚಿ ಇಟ್ಟಿದ್ದರಿಂದ ಜಿಗಿದು ಹತ್ತಲು ಪ್ರಯತ್ನಿಸುತ್ತಾನೆ. ಎಷ್ಟು ಬಾರಿ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅವನ ಈ ಕಾರ್ಯವನ್ನು ತಾಯಿ ತಿಮ್ಮಾಜಮ್ಮಣ್ಣಿ ಅತ್ಯಂತ ಆಸೆಯಿಂದ ಮರೆಯಲ್ಲಿ ನಿಂತು ನೋಡುತ್ತಿರುತ್ತಾಳೆ. ಯುವರಾಜನಿಗೆ ಕೊನೆಗೂ ಸಿಂಹಾಸನವೇರಲು ಸಾಧ್ಯವಾಗುವುದಿಲ್ಲ ಯುವರಾಜನ ಪ್ರಯತ್ನ, ಮಹಾರಾಣಿಯ ಆಸೆ-ನಿರಾಸೆಗಳು ಈ ಭಾಗದಲ್ಲಿ ಬಹುಸುಂದರವಾಗಿ ಚಿತ್ರಿತವಾಗಿವೆ. ಮುಂದೆಯೂ ಕೂಡ ರಾಜೊಡೆಯ ತನ್ನ ಹಕ್ಕು-ಕರ್ತವ್ಯಗಳನ್ನು ಅರಿತು ಪ್ರಭುಶಕ್ತಿಯಿಂದ ವಿಕ್ರಮರಾಯನನ್ನು ಎದುರಿಸುವ ಹೊತ್ತಿಗೆ ತಡವಾಗಿರುತ್ತದೆ. ವಿಕ್ರಮರಾಯನ ಕುತಂತ್ರದಿಂದ ಅವನು ಮರಣವನ್ನಪ್ಪುವಂತಾಗುತ್ತದೆ. ಈ ಹಿನ್ನೆಲೆಯಲ್ಲಿಯೂ ಸಿಂಹಾಸನವನ್ನೇರಲು ಪ್ರಯತ್ನಿಸುವ ಸನ್ನಿವೇಶ ಸಾಕೇಂತಿಕವಾಗಿದೆ. ಇದರಂತೆ ‘ವಿಗಡ-ವಿಕ್ರಮರಾಯದಲ್ಲಿ ಚೆನ್ನ, ರಂಗರು ವಿಕ್ರಮರಾಯನನ್ನು ಕೊಲ್ಲುವ ಸನ್ನಿವೇಶ ಇಡೀ ನಾಟಕದಲ್ಲಿಯೇ ಅತ್ಯಂತ ನಾಟಕೀಯವಾದುದು ಮತ್ತು ತೀವ್ರಗತಿಯದು. ವಿಕ್ರಮರಾಯನನ್ನು ಕೊಲ್ಲಲು ಬಂದ ಚನ್ನ, ರಂಗರು ಮರೆಯಲ್ಲಿ ಕುಳಿತುಕೊಂಡು ಅಳಗರಾಜ ಹಾಗೂ ವಿಕ್ರಮರಾಯರ ಮಾತುಗಳನ್ನು ಕೇಳುತ್ತಿರುತ್ತಾರೆ. ಅವರ ಮಾತಿನಿಂದ ಚೆನ್ನ, ರಂಗರನ್ನು, ಹಿಡಿದು ಗುಪ್ತಗೃಹದಲ್ಲಿ ಚಿತ್ರಹಿಂಸೆಗೆ ಗುರಿಪಡಿಸಿ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ವಿಷಯ ತಿಳಿಯುತ್ತದೆ. ಇದು ಪ್ರಾಯಶಃ ಅವರ ಕ್ರೋಧವನ್ನು ಇಮ್ಮಡಿಗೊಳಿಸುತ್ತದೆ. ವಿಕ್ರಮರಾಯನು ಮೇಲೆ ಅವರು ಆಕ್ರಮಣ ಮಾಡಿದಾಗ ದೀವಟಿಗೆಯೂ ಆರಿ ಹೋಗಿರುತ್ತದೆ. ರಂಗನನ್ನು ವಿಕ್ರಮರಾಯನು ಕೆಳಕ್ಕೆ ಒತ್ತಿ ಕುತ್ತಿಗೆ ಹಿಚುಕುವುದರಲ್ಲಿರುತ್ತಾನೆ. ಕತ್ತಲಲ್ಲಿ ಸರಿಯಾಗಿ ಕಾಣಿಸದೇ ಚೆನ್ನ ‘ರಂಗ ನೀನ್‌ಕೆಳಗೊ ನೀನ್‌ಮೇಲೋ’ ಎಂದು ಕೇಳುತ್ತಾನೆ. ರಂಗ ಉಸಿರಿಲ್ಲದ ಅತ್ಯಂತ ಕ್ಷೀಣಸ್ವರದಿಂದ ‘ಕೆಳಗೇ! ಕೆಳಗೇ!’ ಎಂದು ಉತ್ತರಿಸುತ್ತಾನೆ. ಒಡನೆಯೇ ಚೆನ್ನ ಸ್ವೌಳೆಂದು ಖಡ್ಗಬೀಸಿ ವಿಕ್ರಮನ ತಲೆಯನ್ನು  ಕತ್ತರಿಸಿ ಹಾಕುತ್ತಾನೆ. ಈ ಮಹತ್ವದ ಘಟನೆ ನಿಮಿಷಾರ್ಧದಲ್ಲಿ ನಡೆದು ಹೋಗುತ್ತದೆ.

ಇದರಂತೆ ‘ಬಿರುದುತೆಂಬರ ಗಂಡ’ ದಲ್ಲಿ ಉಮ್ಮತ್ತೂರಿನ ಪಾಳೆಯಗಾತಿ ಮಾದೇವಮ್ಮಣ್ಣಿ ಖಡ್ಗದಿಂದ ಮಹಾರಾಜನ ಉಷ್ಣೀಷವನ್ನು ಹಾರಿಸುವ ಸನ್ನವೇಷದಲ್ಲಿಯೂ ನಾಟಕೀಯತೆ ಗರಿಷ್ಠ ಪ್ರಮಾಣದಲ್ಲಿ ಮೂಡಿಬಂದಿದೆ. ‘ಬೆಟ್ಟದಅರಸು’ ವಿನಲ್ಲಿ ತಿಮ್ಮಾಜಮ್ಮಣ್ಣಿ ಮತ್ತು ವಿಕ್ರಮರಾಯರ ನಡುವೆ ನಡೆದ ಚಕಮಕಿಯ ಮಾತುಕತೆಯಲ್ಲಿ ವಿಕ್ರಮರಾಯನ ವ್ಯಕ್ತಿತ್ವ ಸ್ಫುಟವಾಗಿ ಮೂಡಿಬಂದಿದೆ. ಕೊನೆಯಲ್ಲಿ ತಿಮ್ಮಾಜಮ್ಮಣ್ಣಿ ‘ಗಂಡುದಿಕ್ಕಿಲ್ಲದ ಅಬಲೆಯರಾದ ಹೆಂಗುಸುರೆಂದೇ ಈ ಕಿತವಕಿರಾತರ ಕಟ್ಟಧಟಿನ ಆಟಗಾರಿಕೆ?’ ಎಂದು ವಿಕ್ರಮರಾಯನನ್ನು ಪ್ರಶ್ನಿಸಿದಾಗ, ಅವನು ಬಿಲ್ಲುಂಬೆರಗಾಗಿ ಆಕೆಯನ್ನಾಪಾದ ಮಸ್ತಕವಾಗಿ ನೋಡಿ, ನೋಡಿ ‘ನೀವು ಹೆಂಗುಸೇನು?’ ಎಂದು ಕೇಳುತ್ತಾನೆ. ತಿಮ್ಮಾಜಮ್ಮಣ್ಣಿ ‘ಅಯ್ಯೋ!’ ಎಂದು ಉದ್ಘರಿಸಿ, ದಡದಡನೆ ಹೊರಟುಹೋಗುತ್ತಾಳೆ. ಅದೇ ರೀತಿ, ‘ಮಂತ್ರ ಶಕ್ತಿ’ಯಲ್ಲಿ ಮೊನೆಗಾರ, ದೊಡ್ಡಮ್ಮ ಇವರ ನಡುವಿನ ಸಂಭಾಷಣೆಯು ಸ್ವಾರಸ್ಯಕರವಾಗಿ ಮೂಡಿಬಂದಿದೆ. ಅಲ್ಲಿ ಶೃಂಗಾರಭಾವವು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.