ಸಂಸರ ನಾಟಕಗಳು ಮೇಲ್ನೋಟಕ್ಕೆ ತೀರ ಗಂಭೀರವಾದವೆಂದು ಅನ್ನಿಸಿದರೂ, ಕೆಲವೆಡೆಯಾದರೂ ಅವರು ಹಾಸ್ಯದ ಸನ್ನಿವೇಶವನ್ನೂ ಜೋಡಿಸಿ ನಾಟಕ ಹೃದ್ಯವಾಗುವಂತೆ ಮಾಡಿದ್ದಾರೆ. ‘ಸುಗುಣಗಂಭೀರ’ದಲ್ಲಿ ಸೂರಣ, ಯುವರಾಜ ಇವರ ನಡುವೆ ನಡೆಯುವ ಸಂಭಾಷಣೆಯಲ್ಲಿ ನವಿರಾದ ಹಾಸ್ಯವಿದೆ. ಅಲ್ಲಿ ಯುವರಾಜನ ಒಡನಾಡಿ ಸೂರಣ ಬೇಕೆಂತಲೇ ಆಶೀರ್ವಾದ ಮಾಡುವ ನೆಪದಿಂದ ‘ಹರಿ: ಓಂ’ ಎಂದು ಹೇಳಿ ಅಮರಸಿಂಹನ ನಾಮಲಿಂಗಾನುಶಾಸನದ ಪ್ರಥಮ ಶ್ಲೋಕವನ್ನು ರಾಗವಾಗಿ ಹೇಳುತ್ತಾನೆ. ಯುವರಾಜ ಬೆರಗಾಗಿ, ಅದು ಆರ್ಶೀವಚನವಲ್ಲವೆಂದು ಹೇಳಿದರೆ, ‘ಆದರೇನು? ಈಗಳಿನ ಕಾಲದ ಅನೇಕರು ಪುರೋಹಿತರು ಇದೇ ಶ್ಲೋಕಕ್ಕೆ ಉದಾತ್ತ, ಅನುದಾತ್ತ ಹೃಸ್ವ, ದೀರ್ಘ, ಪ್ಲುತಗಳನ್ನು ಮನಸ್ವೀ ಹಾಯ್ಕಿಕೊಂಡು ಪೂರ್ವಪರಗಳಿಗೆಲ್ಲ ಇದನ್ನು ಒಂದೇ ವಿಧವಾಗಿ ಪ್ರಯೋಗಿಸಬಹುದಂತೆ! ನಾನು ಮಾತ್ರ ಅದನ್ನು ರಾಜಾಶೀರ್ವಾದವನ್ನಾಗಿಸಬಾರದೋ’ ಎಂದು ಕೇಳುತ್ತಾನೆ.

ಯುವರಾಜ: ಅದರ ನ್ಯಾಯವು ನನಗೆ ತಿಳಿಯಲಿಲ್ಲ.

ಸೂರಣ: ತಿಳಿಯಲಿಲ್ಲವೇ? ಕೇಳು! ಎಷ್ಟೋ ಜನ ಆಧುನಿಕ ಪುರೋಹಿತರು ಮನ್ತ್ರಗಳ ಅರ್ಥ, ಸ್ವರಗಳ ಜ್ಞಾನವಿಲ್ಲದೆ ಏನನ್ನೋ ಗೊಣಗಿಬಿಟ್ಟು ಅವುದೇ ಕರ್ಮವನ್ನಾದರೂ ಅಯ್ತೆನಿಸುವರಷ್ಟೇ. ಅನ್ತಹ ವಿದ್ಯೆಯಲ್ಲಿಯೇ ಬೆಳೆದ ಅವರ ಮರಿಯಾದ ನನಗೂ ಅದೇ…

ಹೀಗೆ ಪುರೋಹಿತರನ್ನು ಸೂರಣ ಹಾಸ್ಯ ಮಾಡುವುದನ್ನು ಕಾಣುತ್ತೇವೆ. ಸೂರಣನ ತತ್ವಜ್ಞಾನ ಹೊಟ್ಟೆಗೆ ಸಂಬಂಧಿಸಿದುದು. ಒಂದು ಯಂತದಲ್ಲಿ ಯುವರಾಜ ‘ಏಕೆ ಎಂಬ ಪ್ರಶ್ನೆಗೆ ಉತ್ತರ ಕೊನೆಯಲ್ಲಿ ಬಂದು ನಿಲ್ಲುವುದು ಭಗವನ್ತನಲ್ಲಿ’ ಎಂದರೆ, ‘ಅಲ್ಲ, ಅದು ಹೊಟ್ಟೆಗೆ ಬಂದು ನಿಲ್ಲುತ್ತದೆ’ ಎನ್ನುತ್ತಾನೆ, ಸೂರಣ. ಪ್ರಶ್ನೆ ಪ್ರಾರಂಭವಾಗುತ್ತದೆ;

ಯು: (ಎಲ್ಲ ದೆಸೆಗಳಲ್ಲಿಯೂ ಆರಯ್ದು) ಅನ್ತರಿಕ್ಷವೇಕೆ?

ಸೂ: ವಾಯುಸಂಚಾರಕ್ಕೆ.

ಯು: ವಾಯು ಸಂಚಾರವೇತಕ್ಕೆ?

ಸೂ: ಮೋಡಗಳು ತೇಲ್ವುದಕ್ಕೋಸ್ಕರವಾಗಿ

ಯು: ಮುಗಿಲ್ಗಳೇಕೆ?

ಸೂ: ಮಳೆಗರೆಯುವುದಕ್ಕೆ. ಸರಿಯೊ?

ಯು: ಸರಿ, ಮಳೆಯೇತಕ್ಕೆ?

ಸೂ: ಮಳೆಯಿಂದ ನೀರು

ಯು: ನೀರೋ?

ಸೂ: ಕೆರೆ ಕುಣ್ಟೆ ನದಿ ಮೊದಲಾದವು ತುಂಬಲೆಂದು

ಯು: ಅವುಗಳೇತಕ್ಕೆ?

ಸೂ: ಕೆರೆ ಕುಣ್ಟೆನದಿ ಮೊದಲಾದವು ಗದ್ದೆಗಳಿಗೆ ನೀರೂಡುವುದಕ್ಕೆ. ಒಪ್ಪಿತೋ

ಯು: ಹು. ಗದ್ದೆಗಳೇತಕ್ಕೋಸ್ಕರವಾಗಿ?

ಸೂ: ಅಲ್ಲಿ ನೆಲ್ಲನ್ನು ಬೆಳೆಯುವರು. ತಪ್ಪಿಲ್ಲವಷ್ಟೆ?

ಯು: ಭತ್ತದಿಂದೇನು ಪ್ರಯೋಜನ?

ಸೂ: ಭತ್ತವನ್ನು ಕುಟ್ಟಿ, ಕೇರಿ, ಜಲಡೆ ಹಿಡಿದು, ತೊಳಸಿ ಅಕ್ಕಿ ಮಾಡಿಕೊಂಡು, ಅಚ್ಚುಕಟ್ಟಾಗಿ ಅಡುಗೆ ಮಾಡುವುದಕ್ಕೆ. ಸಮ್ಮತ ವೋ?

ಯು: ಅಡುಗೆಯೇಕೆ?

ಸೂ: (ಕಣ್ಣುಗಳನ್ನು ತಿರುಗಿಸಿ) ಅಡುಗೆಯೇಕೆ? ನಿನಗೆ ಮಂಗಳವಾಗಲಿ. ಯುವರಾಜನೆ! ಆಡುವುದು ಮೂಗಿನವರೆಗೆ ಊಟ ಮಾಡುವುದಕ್ಕೆ

ಯು: ಊಟ!

ಸೂ: (ಧೀರ್ಘನಿಶ್ವಾಸವನ್ನೂದಿ) ಶಿವ ಶಂಕರಾ ರಕ್ಷಿಸು! ಊಟವು ಹೊಟ್ಟೆ ತುಂಬುವುದಕ್ಕೆ

ಯು: ಹೊಟ್ಟೆಯೇತಕ್ಕೆ?

ಸೂ: ಹ್ರಾಂ. ಜಠರಾಯನಮಃ ಹ್ರೀಂ ಅನ್ನಂ ಸ್ವಾಹಾ.

ಯು: ಅನ್ನವೇಕೆ?

ಸೂ:  (ಬೇಗ ಬೇಗನೆ) ಹೊಟ್ಟೆಯು ಅನ್ನಕ್ಕೆ; ಅನ್ನವು ಹೊಟ್ಟೆಗೆ ಹೊಟ್ಟೆಯು ಅನ್ನಕ್ಕೆ; ಅನ್ನವು ಹೊಟ್ಟೆಗೆ…. ಹಾ…. ಆ…. ಆ….. ಆ… (ಹಾಡುವನು)

ಹೀಗೆ ಸೂರಣ ತನ್ನ ತತ್ವಜ್ಞಾನದಲ್ಲಿ ಈ ಹೊಟ್ಟೆಯ ತತ್ವವನ್ನು ‘ಕಿಂ ಪರಂಪರೆ’ ಎಂದು ಕರೆಯುತ್ತಾನೆ. ಮಾಟ, ಬೋಡ, ಮಿನುಕ ಇವರ ನಡುವ ನಡೆಯುವ ಸಂಭಾಷಣೆಯಲ್ಲಿಯೂ ಹಾಸ್ಯವಿಡಂಬನೆಗಳು ಕಂಡುಬರುತ್ತವೆ. ಇಂಥ ಸ್ವಾರಸ್ಯಕರವಾದ ಹಲವು ಸನ್ನಿವೇಶಗಳನ್ನು ಸಂಸರು ತಮ್ಮ ನಾಟಕಗಳಲ್ಲಿ ಅಳವಡಿಸಿರುತ್ತಾರೆ. ವೀರದಂತೆ ಶೃಂಗಾರರಸಕ್ಕೂ ಅಲ್ಲಲ್ಲಿ ಎಡೆ ದೊರೆತಿದೆ. ‘ಸುಗುಣ’ ಗಂಭೀರ ನಾಟಕದಲ್ಲಿ ಕರುಣಾರಸವು ಅಡಗಿರುವುದನ್ನು ಗಮನಸಿಬಹುದು.