‘ಐತಿಹಾಸಿಕ ವಸ್ತುವಿಗೆ ತಕ್ಕ ಘನತೆ ಮತ್ತು ಕಲಾತ್ಮಕತೆಯನ್ನು ಒದಗಿಸಿಕೊಟ್ಟ ಮೊದಲ ನಾಟಕಕಾರರೆಂದು ಸಂಸರನ್ನು ಸ್ಮರಸಿಬೇಕಾಗುತ್ತದೆ.’ ಎಂದು ಕೆ. ಮರುಳಸಿದ್ದಪ್ಪನವರು ಅಭಿಪ್ರಾಯಪಟ್ಟಿದ್ದಾಶರೆ. ಗೋವಿಂದ ಪೈಯವರು ‘ವಿಗಡವಿಕ್ರಮರಾಯ’ ದಲ್ಲಿಯ ಮಹಾರಾಜನ ಮರಣಸನ್ನಿವೇಶವನ್ನೂ ಆ ಸಂದರ್ಭದಲ್ಲಿ ಶೋಕಿಸದ ರಾಜಮಾತೆಯ ನಡವಳಿಕೆಯನ್ನು ಅಸಹಜವೆಂದು ಬಗೆದಿದ್ದಾರೆ. ಆದರೆ ಒಟ್ಟಾರೆ ನಾಟಕವನ್ನೂ, ಸಂಸರ ಪ್ರತಿಭೆಯನ್ನೂ ಮೆಚ್ಚಿಕೊಂಡಿದ್ದಾರೆ. ರಣಧೀರನನ್ನು ಆದರ್ಶರಾಜನನ್ನಾಗಿ ಚಿತ್ರಿಸುವ ಹವಣಿಕೆಯಲ್ಲಿ ಸಂಸರು ಕೆಲವು ಪಾತ್ರ ಹಾಗೂ ಸನ್ನಿವೇಶಗಳನ್ನು ಗೌಣಗೊಳಿಸಿದಂತಿದೆ. ‘ಬೆಟ್ಟದ ಅರಸು’ ವಿನಲ್ಲಿ ಬೆಟ್ಟದ ಅರಸುವಿನ ಪಾತ್ರಕ್ಕೆ ಇನ್ನಷ್ಟು ಲಕ್ಷ್ಯ ಕೊಟ್ಟಿದ್ದರೆ, ದುರಂತ ಚಿತ್ರಣ ಇನ್ನಷ್ಟು ಸ್ಫುತವಾಗಿ ಮೂಡಿಬರಲು ಸಾಧ್ಯವಿತ್ತು. ಅದರಂತೆ ‘ವಿಗಡವಿಕ್ರಮರಾಯ’ ದಲ್ಲಿ ಕೇಂದ್ರ ಪಾತ್ರವಾದ ವಿಕ್ರಮರಾಯನ ಪಾತ್ರ ಸ್ವರೂಪ ಕೇವಲ ಖಳನಾಯಕನದಾಗಿದೆ. ಇತರ ನಾಟಕಗಳಲ್ಲಿ ಪ್ರಸ್ತಾಪಿಸಿದ ಅವನಲ್ಲಿಯ ಕೆಲವು ಮಾನವೀಯ ಅಂಶಗಳನ್ನು ಈ ನಾಟಕದ ಅವನ ಪಾತ್ರದಲ್ಲಿಯೂ ತರುವ ಪ್ರಯತ್ನ ಮಾಡಿದ್ದರೆ, ಅದೊಂದು ದುರಂತ ಪಾತ್ರವಾಗಿ ಮೂಡಿಬರುವ ಸಾಧ್ಯತೆ ಇತ್ತು. ಸಂಸರ ಕೆಲವು ಪಾತ್ರಗಳು ವಿಪರೀತ ಮಾತನಾಡುತ್ತವೆ. ಪುಟಗಟ್ಟಲೆಯ ಮಾತುಗಳು ಅನವಶ್ಯವೆನಿಸುತ್ತವೆ. ಉದಾ: ‘ಮಂತ್ರಶಕ್ತಿ’ಯಲ್ಲಿ ದೊಡ್ಡಮ್ಮ ರಣಧೀರನ ಸೌಂದರ್ಯವನ್ನು ವರ್ಣಿಸುವಾಗ ಅದು, ಎಂಟು ಪುಟಗಳಷ್ಟು ದೀರ್ಘ ಹರಿದಿದೆ. ಇಷ್ಟು ಮಾತನಾಡುವ ತನಕ ಪ್ರೇಕ್ಷಕರನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂಬುದು ದೊಡ್ಡಸಮಸ್ಯೆ, ಭಾಷೆಯೂ, ಕೆಲವಡೆ ಕ್ಲಿಷ್ಟವಾಗಿದ್ದು, ಸಂವಹನಕ್ಕೆ ತೊಂದರೆಯನ್ನುಂಟು ಮಾಡುವಂತಿದೆ. ಸಂಸರು ಕಂಸಿನಲ್ಲಿ ನೀಡುವ ಪ್ರಯೋಗ ಸೂಚನೆಗಳು ಅಪಾರವಾಗಿದ್ದು, ಕೆಲವೊಮ್ಮೆ ಸಂಭಾಷಣೆಗಿಂತ ಅವುಗಳ ಪ್ರಮಾಣವೇ ಹೆಚ್ಚಾಯಿತೇನೋ ಅನ್ನಿಸುತ್ತದೆ. ಕೆ. ಮರುಳಸಿದ್ದಪ್ಪನವರು ಗುರುತಿಸಿರುವಂತೆ ಸಂಸರು ರಾಜ-ಮಹಾರಾಜರಿಂದ ಹಿಡಿದು ಕಾವಲುಗಾರರು, ಹಳ್ಳಿಯವರ ತನಕ ಪಾತ್ರಗಳನ್ನು ತಮ್ಮ ಕೃತಿಗಳಲ್ಲಿ ತಂದಿದ್ದರೂ ಮೇಲ್ವರ್ಗದ ಪಾತ್ರಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ, ನಿಜ. ಹೀಗೆ ಕೆಲವು ಕೊರತೆಗಳನ್ನು ಸಂಸರ ಕೃತಿಗಳಲ್ಲಿ ನಾವು ಗುರುತಿಸಬಹುದಾದರೂ ಅವುಗಳಿಂದ ನಾಟಕದ ಉಜ್ಚಲತೆಗೆ ಕುಂದು ಬಂದಿಲ್ಲ ಎಂಬುದನ್ನೂ ಗಮನಿಸಬೇಕು.