ಕೈಲಾಸಂ, ಶ್ರೀರಂಗರ ನಾಟಕಗಳಿಗೆ ಹೋಲಿಸಿದರೆ ಸಂಸರ ಕೃತಿಗಳು ಹೆಚ್ಚು ಪ್ರಯೋಗಗೊಂಡಿಲ್ಲವೆಂದೇ ಹೇಳಬೇಕು. ಅವರ ನಾಟಕಗಳು ಜನಪ್ರಿಯವಾಗದಿರಲು ಕಾರಣ, ಅವುಗಳ ದೀರ್ಘತೆ. ‘ಬಿರುದಂತೆಂಬರ ಗಂಡ’ ನಾಟಕವನ್ನು ಬಿಟ್ಟರೆ ಉಳಿದೆಲ್ಲವೂ ದೊಡ್ಡ ನಾಟಕಗಳು. ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ಒಂದೇ ದಿನದ ಪ್ರದಶ್ನದಲ್ಲಿ ಪ್ರಯೋಗಿಸುವುದು ಕಷ್ಟ ಸಾಧ್ಯ. ಈ ಹಿಂದೆಯೇ ಸೂಚಿಸಿದಂತೆ ನಾಟಕದ ಭಾಷೆಯೂ ಫ್ರೌಢವಾದುದು. ಹಿಂದಣ ಇತಿಹಾಸಕಾಲಕ್ಕೆ ಹೊಂದಿಕೆಯಾಗುವ ಪಾಂಡಿತ್ಯ ಪೂರ್ಣವಾದ ಭಾಷೆ ಮಾತುಗಳು ದೀರ್ಘವೂ ಸಂಕೀರ್ಣವೂ ಆಗಿದ್ದು, ನಟರು ತುಂಬ ಶಕ್ತಿ ಹಾಗೂ ಶ್ರಮಗಳಿಂದ ಅಭ್ಯಾಸ ಮಾಡಬೇಕಾಗುತ್ತದೆ. ಅರಮನೆ ಅಂತಃಪುರ, ಕೋಟೆ, ಉದ್ಯಾನ ಮುಂತಾದವುಗಳ ದೃಶ್ಯವಿರುವುದರಿಂದ ರಂಗಸ್ಥಳ ನಿರ್ಮಾಣಕ್ಕೆ, ಉಡಿಗೆ-ತೊಡಿಗೆಗಳಿಗೆ ಹೆಚ್ಚಿನ ಆರ್ಥಿಕ ಅನುಕೂಲತೆಗಳು ಬೇಕಾಗುತ್ತವೆ. ಆದರೆ ನಾಟಕಗಳ ವಸ್ತು ಮತ್ತು ಪಾತ್ರಗಳು ಗಟ್ಟಿಯಾಗಿರುವುದರಿಂದ ಆಧುನಿಕ ರಂಗತಂತ್ರಗಳನ್ನು ಬಳಸಿಕೊಂಡು ಸುದೀರ್ಘ ಸಂಭಾಷಣೆಗಳನ್ನು ಮೊಟಕುಗೊಳಿಸಿ, ಸಂಸರ ನಾಟಕ ಸಾಹಿತ್ಯವನ್ನು ಉಚಿತ ಪ್ರಯೋಗ ಸಾಹಿತ್ಯವನ್ನಾಗಿ ಮಾರ್ಪಡಿಸಿಕೊಂಡು ರಂಗಭೂಮಿಗೆ ತಂದಲ್ಲಿ, ಹೆಚ್ಚು ಪ್ರಸ್ತುತವೂ ಸಾರ್ವಕಾಲಿಕವೂ ಎನ್ನಿಸಿ ಯಶಸ್ಸನ್ನು ಪಡೆಯಬಹುದಾಗಿದೆ.