‘ಪಂಪನಿಂದ ಕುವೆಂಪುವಿನತನಕ’ ಎನ್ನುವುದು ಸಾವಿರ ವರ್ಷದ ಸಾಹಿತ್ಯದ ನೆನಕೆಯ ಸಂದರ್ಭದ ಒಂದು ನಾಣ್ಣುಡಿಯಾಗಿದೆ. ಇದು ಕೇವಲ ಚಮತ್ಕಾರದ ಮಾತಲ್ಲ ಎಂದು, ಈ ಮಾತನ್ನು ಯೋಚಿಸಿದಾಗೆಲ್ಲ ಅನ್ನಿಸತೊಡಗಿದೆ, ಯಾಕೆಂದರೆ ಪಂಪನಿಗೂ ಕುವೆಂಪುವಿಗೂ ಸಾಕಷ್ಟು ಸಾಮ್ಯಗಳಿವೆ:

ಹತ್ತನೆಯ ಶತಮಾನಕ್ಕೆ ಪಂಪ ಹೇಗೆ ಪ್ರತಿನಿಧಿಯಾಗಿದ್ದಾನೋ, ಹಾಗೆಯೆ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಪ್ರತಿನಿಧಿ ಕುವೆಂಪು.

ಪಂಪನಿಗಿದ್ದಂಥ ಆತ್ಮಪ್ರತ್ಯಯ ಮೂಲವಾದ ಧೀರ ವ್ಯಕ್ತಿತ್ವ ಕುವೆಂಪು ಅವರಿಗಿದೆ. ಪಂಪ ಆದಿಪುರಾಣ ಬರೆಯುವಾಗ ಹೇಳಿದ ಮಾತು ‘ಪೆರರೀವುದೇಂ, ಪೆರರಿಂದವಪ್ಪುದೇಂ’-ಎನ್ನುವುದಕ್ಕೆ ಸಂವಾದಿಯಾಗಿದೆ ‘ದಿವ್ಯ ನಿರ್ಲಕ್ಷ್ಯತೆಯ ವರಕವಿಯ ಪಂಥ’ ಎಂಬ ಕುವೆಂಪು ಅವರ ಮಾತು. ಪಂಪ ತನ್ನ ಮಿತ್ರನಾದ ಅರಿಕೇಸರಿಯ ಸ್ನೇಹದಿಂದ ಬದ್ಧನಾಗಿದ್ದೊಂದನ್ನು ಬಿಟ್ಟರೆ, ಉಳಿದಂತೆ ಅವನಿಗೆ, ರಾಜರನ್ನು ಕುರಿತು ತಿರಸ್ಕಾರವೇ ತುಂಬಿದೆ. ಪಂಪನಿಗೆ ಧರ್ಮಶ್ರದ್ಧೆಯ ನಿಲುವಿನಲ್ಲಿ ರಾಜಾಧಿರಾಜರ ಆಶ್ರಯ-ವೈಭವಗಳ ಬಗ್ಗೆ ಯಾವ ತಿರಸ್ಕಾರ ಕಾಣಿಸಿಕೊಂಡಿತೋ ಅದೇ ತಿರಸ್ಕಾರವನ್ನು ಕುವೆಂಪು ಅವರು ಸೌಂದರ್ಯ ಶ್ರದ್ಧೆಯ ನಿಲುವಿನಲ್ಲಿ ಪ್ರಕಟಿಸುತ್ತಾರೆ. ಒಂದು ಬೆಳಗು ಮಿರುಗುವ ಇಬ್ಬನಿಗಳನ್ನು ಕಂಡು-

ಇದರ ಮುಂದೆ ಅರಸನ ಸಿರಿಯೆ?
ಕಬ್ಬಿಗನ ಕಾಲ್ಗಳಡಿ ಚಕ್ರವರ್ತಿಯ ವಿಪುಲ ಸಂಪತ್ತು

ಎನ್ನುತ್ತಾರೆ, ಪಕ್ಷಿಕಾಶಿಯ ಕವಿತೆಯೊಂದರಲ್ಲಿ.

ಪಂಪ ನಿಸರ್ಗದ ಸೊಗಸನ್ನು ಅದರ ಅನೇಕ ವೈವಿಧ್ಯತೆಗಳೊಂದಿಗೆ ಅನುಭವಿಸಿ ವರ್ಣಿಸಿದಂತೆ, ಕುವೆಂಪು ಅವರು, ಪಂಪನಿಗೂ ಮಿಗಿಲಾದ ರೀತಿಯಲ್ಲಿ,ತಮ್ಮ ನಿಸರ್ಗ ಪ್ರೀತಿಯನ್ನು ಪ್ರಕಟಿಸಿಕೊಂಡಿದ್ದಾರೆ. ಪಂಪನಿಗಿದ್ದಂಥ ಗಾಢವಾದ ಜೀವನ ಶ್ರದ್ಧೆ ಕುವೆಂಪು ಅವರಲ್ಲಿದೆ.

ಪಂಪ, ತನ್ನ ಕಾವ್ಯಪ್ರಜ್ಞೆಯನ್ನು ‘ಲೌಕಿಕ’-‘ಆಗಮಿಕ’-ಎಂದು ಇಬ್ಬಾಗಿಸಿಕೊಂಡ. ಅದಕ್ಕೆ ಕಾರಣ ಒಂದೆಡೆ ತನ್ನ ಮಿತ್ರನಾದ, ದೊರೆಯಾದ ಅರಿಕೇಸರಿಯ ಮೇಲೆ ಇದ್ದ ಪ್ರೀತಿ; ಮತ್ತೊಂದೆಡೆ ಇದೆಲ್ಲಕ್ಕೂ ಮಿಗಿಲಾದ ತಾನು ಒಪ್ಪಿಕೊಂಡ ಜೈನಧರ್ಮದ ಬಗ್ಗೆ ಇದ್ದ ಶ್ರದ್ಧೆ. ಆದರೆ ಕುವೆಂಪು ಅವರ ಕಾವ್ಯಪ್ರಜ್ಞೆ ಕೂಡಾ ಇಬ್ಭಾಗವಾದಂತೆ ನಮಗೆ ತೋರುತ್ತದೆ ಅವರ ಕಾವ್ಯಗಳನ್ನೂ, ಕಾದಂಬರಿಗಳನ್ನೂ ಪಕ್ಕ ಪಕ್ಕದಲ್ಲಿರಿಸಿಕೊಂಡು ನೋಡಿದರೆ. ಅವರ ಕವಿತೆಗಳನ್ನು ನೋಡಿದರೆ, ಅವು ಕೇವಲ ನಿಸರ್ಗಾನುಭೂತಿಗೆ ಮೀಸಲಾಗಿ, ಅವರ ಕಾದಂಬರಿಗಳು ಅವರ ಸಾಮಾಜಿಕ ಪ್ರಜ್ಞೆಗೆ ಗಣಿಯಾಗಿ-ಇರುವುದನ್ನು ಕಂಡಾಗ, ಇವರು ‘ಬೆಳಗುವಿನಲ್ಲಿ-ಎಂದರೆ ಕಾವ್ಯಗಳಲ್ಲಿ- ನಿಸರ್ಗಮಂ, ಅಲ್ಲಿ, ಕಾದಂಬರಿಗಳಲ್ಲಿ-ಜನಜೀವನಮಂ’-ಎಂದು ಹೇಳುವಂತೆ ಭಾಸವಾಗುತ್ತದೆ.

ಶೈಲಿಯ ಗಾಂಭೀರ್ಯ, ವಿದ್ವತ್ತಿನ ಹಿನ್ನೆಲೆಯಲ್ಲಿ ಕೂಡಾ ಕುವೆಂಪು ಪಂಪನನ್ನು ನೆನಪಿಗೆ ತರುತ್ತಾರೆ.

ಪಂಪನನ್ನು ಬಿಟ್ಟರೆ ಕುವೆಂಪು ಅವರಲ್ಲಿ ನಮಗೆ ಹೋಲಿಕೆಗೆ ಕಾಣುವ ಇನ್ನಿಬ್ಬರು ಕವಿಗಳು ಪಶ್ಚಿಮದವರು. ಒಬ್ಬ ಮಿಲ್ಟನ್ ಮತ್ತೊಬ್ಬ ವರ್ಡ್ಸ್‌ವರ್ತ್. ಮಿಲ್ಟನ್‌ನ ‘ಪ್ಯಾರಡೈಸ್ ಲಾಸ್ಟ್’ ಅನ್ನು ಅದರ ‘ರೂಪಾಂಶ’ದಲ್ಲಿ ಭಾಷೆಯ ಬಳಕೆಯಲ್ಲಿ ನೆನಪಿಗೆ ತರುತ್ತದೆ ಅವರ ‘ರಾಮಾಯಣ ದರ್ಶನ’. ಮಿಲ್ಟನ್ ಮಹಾಕಾವ್ಯದಂತೆಯೇ, ಏಕ ಕವಿಕೃತವಾದ, ವಿದ್ವತ್‌ಪೂರ್ಣವಾದ, ಮಹಾಶೈಲಿಯ ಕೃತಿ ‘ರಾಮಾಯಣ ದರ್ಶನ’. ವರ್ಡ್ಸ್‌ವರ್ತ್‌ನ ನಿಸರ್ಗಪ್ರಿಯತೆ, ಏಕಾಂತತೆ, ವ್ಯಕ್ತಿನಿಷ್ಠತೆಗಳನ್ನು ನೆನಪಿಗೆ ತರುತ್ತವೆ ಕುವೆಂಪು ಅವರ ಅನೇಕ ಪ್ರಕೃತಿ ಗೀತೆಗಳು.

ಒಟ್ಟಿನಲ್ಲಿ ಕುವೆಂಪು ಅವರಲ್ಲಿ, ಪಂಪನಿಂದ ಇಂದಿನ ತನಕ ಹರಿದುಬಂದ ಕನ್ನಡ ಕಾವ್ಯ ಪರಂಪರೆಯ, ಅಧ್ಯಯನದಿಂದ ಮೈಗೂಡಿಸಿಕೊಂಡ ಪಾಶ್ಚಾತ್ಯ ಸಾಹಿತ್ಯ ಪರಂಪರೆಯ, ಹಾಗೂ ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯ-ಅಂಶಗಳನ್ನು ಅವರ ಕವಿವ್ಯಕ್ತಿತ್ವದ ಮೂಲದ್ರವ್ಯಗಳೆಂದು ಗುರುತಿಸಬಹುದು.

ಕುವೆಂಪು ಅವರು ಪಾಶ್ಚಾತ್ಯ ಸಾಹಿತ್ಯಕ್ಕೆ ಒಂದು ಸವಾಲು: ಅಲ್ಲಿನ ಸಮಸ್ತ ಕಾವ್ಯ ಪ್ರಕಾರ (form)ಗಳನ್ನು ಕನ್ನಡಕ್ಕೆ ತಂದವರು ಇವರು. ಆಧುನಿಕ ಸಾಹಿತಿಗಳಲ್ಲಿ ಇವರಷ್ಟು ವೈವಿಧ್ಯತೆಗಳನ್ನು, ವ್ಯಾಪಕತೆಯನ್ನು ಕನ್ನಡ ಸಾಹಿತ್ಯಕ್ಕೆ ತಂದುಕೊಟ್ಟವರೂ ಯಾರೂ ಇಲ್ಲ. ಆದುದರಿಂದ ಕುವೆಂಪು ಅವರ ಕೃತಿಗಳನ್ನು ಅಧ್ಯಯನ ಮಾಡದೆ ಹೋದರೆ ಯಾವ ನಿಷ್ಠಾವಂತ ಓದುಗನ ಸಾಹಿತ್ಯಾಭ್ಯಾಸವೂ ಅಪೂರ್ಣವಾಗುವುದು ಖಂಡಿತ.

ಕುವೆಂಪು ಅವರ ಭಾವಗೀತೆ, ನಾಟಕ, ಖಂಡಕಾವ್ಯ, ಮಹಾಕಾವ್ಯ, ಕಾದಂಬರಿ-ಎಲ್ಲದರಲ್ಲೂ ಎದ್ದು ಕಾಣುವ ಒಂದು ಅಂಶವೆಂದರೆ ಅವರ ಪ್ರಕೃತಿಪ್ರೇಮ. ಅವರು ಹುಟ್ಟಿ ಬೆಳೆದ ಮಲೆನಾಡು, ಅದರ ಪರ್ವತಾರಣ್ಯ ರಮ್ಯತೆ ಸರ್ವವ್ಯಾಪಕವಾಗಿ ಕಾಣಿಸಿಕೊಂಡಿದೆ ಅವರ ಕೃತಿಗಳಲ್ಲಿ. ಅವರ ಭಾವಗೀತೆಯಲ್ಲಿ ವ್ಯಕ್ತವಾಗುವ ವ್ಯಕ್ತಿನಿಷ್ಠ ನಿಸರ್ಗಪ್ರಿಯತೆ ಹಾಗೂ ಹಸಿವು, ರಾಮಾಯಣ ದರ್ಶನದ ಶ್ರೀರಾಮನಲ್ಲಿ, ಅವರ ನಾಟಕಗಳ ಪಾತ್ರಗಳಾದ ಬುದ್ಧ, ಶ್ರೀರಾಮ, ಏಕಲವ್ಯರಲ್ಲಿ ಅದೇ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಅವರ ಮುಖ್ಯಪಾತ್ರಗಳೆಲ್ಲ ಗಿರಿವನಪ್ರಿಯರೇ. ರಾಮಾಯಣ ದರ್ಶನದಲ್ಲಿ-

‘ಮಲೆಯ ನಾಡೆನಗೆ ತಾಯಿಮನೆ; ಕಾಡು ದೇವರ ಬೀಡು,
ಗಿರಿಯ ಮುಡಿ ಶಿವನ ಗುಡಿ, ಬನವೆಣ್ಣೆ
ಮೊದಲಿನಾ ಮನದನ್ನೆ’

ಎಂದು ತಮ್ಮ ನಿಸರ್ಗ ಪರವಾದ ಹಂಬಲವನ್ನು ತೋಡಿಕೊಂಡಿದ್ದಾರೆ. ‘ಹೋಗುವೆನು ನಾ ಮಲೆನಾಡಿಗೆ ನನ್ನ ಒಲುಮೆಯ ಗೂಡಿಗೆ’-ಎಂದು ‘ಪಕ್ಷಿಕಾಶಿ’ಯ ಕವಿತೆಯೊಂದರಲ್ಲಿ ಹಂಬಲಿಸುತ್ತಾರೆ. ಮಲೆನಾಡಿಗೆ ಹೋಗುವುದು ಯಾಕೆ, ಅಲ್ಲಿ ಏನಿದೆ ಎಂಬುದನ್ನು ಆ ಕವಿತೆ ತರ್ಕಬದ್ಧವಾಗಿ ಉಪನ್ಯಾಸಿಸುತ್ತದೆ. ಈ ನಿಸರ್ಗ ಪ್ರಿಯತೆ ಅಭ್ಯಾಸದಿಂದ ಕಲಿತದ್ದಲ್ಲ, ಅದೊಂದು ಭಗವತ್ ಕೃಪೆ. ‘ಗಿರಿವನ ಪ್ರೀತಿ ತಾಂ ದೈವ ಕೃಪೆದಲ್’-ಎನ್ನುತ್ತಾರೆ ರಾಮಾಯಣ ದರ್ಶನದ ವಿಶ್ವಾಮಿತ್ರ.

ಕುವೆಂಪು ಅವರ ಪ್ರಕೃತಿ ಸೌಂದರ‍್ಯಾನುಭವ ಅವರ ಅನೇಕ ಕವನ ಸಂಗ್ರಹಗಳಲ್ಲಿ ಪದರು ಪದರಾಗಿ ವ್ಯಕ್ತವಾಗಿದ್ದರೂ, ಅವರ ‘ಪಕ್ಷಿಕಾಶಿ’ ಕವನ ಸಂಗ್ರಹವನ್ನು ಅವರ ಪ್ರಾತಿನಿಧಿಕ ಕವನ ಸಂಗ್ರಹವೆಂದು ಭಾವಿಸಿ ಕೆಲವು ಮಾತುಗಳನ್ನು ಇಲ್ಲಿ ಹೇಳಲಾಗಿದೆ:

ಪಕ್ಷಿಕಾಶಿಯಲ್ಲಿ ಮುಂಜಾನೆ-ಸಂಜೆಗಳನ್ನು ಕುರಿತ ಕವಿಗಳೇ ಹೆಚ್ಚು. ಅದರಲ್ಲೂ ಸೂರ್ಯೋದಯವನ್ನು ಕುರಿತವು ಹತ್ತರಷ್ಟಿವೆ. ಬೇಂದ್ರೆಯವರನ್ನು ‘ಶ್ರಾವಣದ ಕವಿ’ ಎಂದಂತೆ, ಕುವೆಂಪು ಅವರನ್ನು ‘ಸೂರ್ಯೋದಯದ ಕವಿ’ ಅನ್ನಬಹುದೇನೋ. ಅವರ ಎಲ್ಲ ಕವನ ಸಂಗ್ರಹಗಳ ‘ಸೂರ್ಯೋದಯ’ವನ್ನು ಕುರಿತ ಕವನಗಳನ್ನು ಲೆಕ್ಕಹಾಕಿದರೂ ಈ ಮಾತಿಗೆ ಪುಷ್ಟಿ ದೊರೆಯುತ್ತದೆ. ಸೂರ್ಯೋದಯ ಸೂರ್ಯಾಸ್ತಮಾನದ ಸೊಗಸು, ಅಂದಂದಿನ ಋತುಮಾನಕ್ಕನುಸಾರವಾಗಿ ಎಷ್ಟೊಂದು ವೈವಿಧ್ಯಮಯವಾಗಿರುವುದೆಂಬ ಅಂಶವನ್ನು ಕುವೆಂಪು ಅವರಂತೆ ಮತ್ತಾರೂ ತೋರಿಸಿಕೊಟ್ಟಿಲ್ಲ.

‘ಪಕ್ಷಿಕಾಶಿ’ ಸಂಗ್ರಹದಲ್ಲಿ ‘ಬಾ ಫಾಲ್ಗುಣ ರವಿದರ್ಶನಕೆ’ ‘ದೇವರು ರುಜುಮಾಡಿದನು’ ‘ಗಗನ ಗುರು’ ‘ಚೋರೆ-ಬೋರೆ’ ‘ಲತಾನಟಿ’ ‘ಕವಿ ಶೈಲದಲ್ಲಿ ಸಂಧ್ಯೆ’ ಇಂಥ ಐದಾರು ಅತ್ಯುತ್ತಮ ಕವಿತೆಗಳಿವೆ.ಇನ್ನುಳಿದವು ಮುಖ್ಯವಾಗಿ ಅವರ ಸೌಂದರ್ಯಾನುಭವದ ವಾಚ್ಯಾಭಿವ್ಯಕ್ತಿಗಳೋ, ಉಪನ್ಯಾಸಗಳೋ, ತತ್ವದೃಷ್ಟಿಯ   ಸೂತ್ರಗಳೋ ಆಗಿವೆ.

‘ಪಕ್ಷಿಕಾಶಿ’ಯ ಕವಿತೆಗಳ ರಚನೆಯ ಮಾದರಿಗಳು (Patterns) ಸಾಮಾನ್ಯವಾಗಿ ಅವರ ಇನ್ನಿತರ ಸಂಗ್ರಹಗಳ ಪ್ರಕೃತಿ ಕವನದ ಮಾದರಿಗಳೂ ಆಗುತ್ತವೆಯೆಂದು ಕಾಣುತ್ತದೆ. ಮುಖ್ಯವಾಗಿ ಅವರ ಪ್ರಕೃತಿ ಕವನಗಳ ಮಾದರಿ ಇದು:

೧. ಕವಿ ೨. ಕವಿಕಾಣುವ ನಿಸರ್ಗದ ವಸ್ತು ೩. ಕವಿಗೂ ನಿಸರ್ಗಕ್ಕೂ ಏರ್ಪಡುವ ಸೌಂದರ‍್ಯಾನುಭವ. ೪. ಈ ಸೌಂದರ‍್ಯಾನುಭವದಿಂದ ನಿಷ್ಪನ್ನವಾಗುವ ಒಂದು ತತ್ವ ಅಥವ ಕವಿಯ ತಾತ್ವಿಕ ನಿಲವು.

ಈ ಕವಿತೆಗಳಲ್ಲಿ ಕಾಣುವ ಕವಿ, ಕವಿತೆಯ ಒಂದು ಅನಿವಾರ್ಯವಾದ ಭಾಗ. ‘ನಾನು’ ಅನ್ನುವುದೆ ಕವಿತೆಯ ಕೇಂದ್ರ. ಪಾಶ್ಚಾತ್ಯ ಭಾವಗೀತೆಯ ಸಿದ್ಧಾಂತದ ಪ್ರಕಾರ, ಕವಿಯೇ ಕಾವ್ಯದ ಕೇಂದ್ರ ಬಿಂದು. ಕುವೆಂಪು ಅವರ ನಿಲುವು, ಪಾಶ್ಚಾತ್ಯ ಭಾವಗೀತೆಯ ಸಿದ್ಧಾಂತಕ್ಕೆ ಸಂಪೂರ್ಣ ಅನುಸಾರವಾಗಿದೆ. ವ್ಯಕ್ತಿನಿಷ್ಠವಾದ, ವಯ್ಯಕ್ತಿಕಾನುಭವದ ಅಭಿವ್ಯಕ್ತಿಯಾಗಿವೆ ಕುವೆಂಪು ಅವರ ಒಂದೊಂದು ಕವಿತೆಯೂ.

‘ನಾನು, ನಾಯಿ, ಮೆಟ್ಟುಕೊಡೆ
ನಾಲ್ವರೆ ತಿರುಗಾಟಕೆ’
‘ಕ್ರೌಂಚ ಪಕ್ಷಿಯ ಪಂಕ್ತಿ ಗಗನದಲಿ ಹಾರುತಿದೆ ಎಂದರಿತು
ಜವದಿ ಬಾಗಿಲ ತೆರೆದು ಧುಮುಕಿದೆನು ಹೊರಗೆ’
‘ಬೆಟ್ಟದುದಿಯಲಿ ಗುಡಿಯ ಗೋಪುರಂ ನಿಂತಂತೆ
ನಿಂತೆನಾಂ ನೀರ‍್ಮನೆಯ ದಿಬ್ಬದಲ್ಲಿ ದೃಷ್ಟಿಯಿಂ ಸೃಷ್ಟಿಯಿಂ ತಬ್ಬಿ’
‘ಶರತ್ಕಾಲದ ಸೂರ್ಯೋದಯದಲಿ
ಸ್ವರ್ಗವು ಹೊಮ್ಮಿರೆ ಮರ್ತ್ಯ ಹೃದಯದಲಿ
ಹೊರ ಹೊರಟೆನು ನಾ ಸಂಚರಿಸಿ’
‘ಹೋಗುವೆನು ನಾ ಮಲೆನಾಡಿಗೆ’

ಇಲ್ಲೆಲ್ಲ ಕವಿಯ ‘ನಾನು’ ಕೇಂದ್ರವಾಗಿದೆ. ಕವಿತೆ ಮೂಲತಃ ಕವಿಯ ವ್ಯಕ್ತಿನಿಷ್ಠಾನುಭವದ ಅಭಿವ್ಯಕ್ತಿ. ಈ ವ್ಯಕ್ತಿ, ಈ ಕವಿತೆಗಳ ಪರಿಸರವನ್ನು ಗಮನಿಸಿದರೆ, ಏಕಾಂಗಿ, ಜನಸಂಗ ದೂರವಾದ ನಿಸರ್ಗದಲ್ಲಿ ಸಂಚಾರಿ. ‘ವ್ಯೋಮದ ರವಿ, ಭೂಮಿಯ ಕವಿ, ಪ್ರೇಕ್ಷಕರಿನ್ನೊಬ್ಬರ ಕಾಣೆ’ ಎಂಬಂತಹ ವಿವಿಕ್ತತೆ.

ಈ ‘ನಾನು’ ಕೇಂದ್ರವಾದ ಕವಿಗೆ, ನಿಸರ್ಗದಲ್ಲಿ ಯಾವ ರಮ್ಯತೆ ಕಂಡಿತೆಂಬುದು ಕವಿತೆಯ ಎರಡನೆಯ ಅಂಶ. ಹಾಗೆ ಕಂಡ ಸೊಗಸನ್ನು ವರ್ಣೋಜ್ವಲವಾಗಿ, ಖಚಿತವಾಗಿ, ಕೆತ್ತಿ ನಿಲ್ಲಿಸಿದಂತೆ ನಮ್ಮೆದುರು ಇಡುತ್ತಾರೆ ಕುವೆಂಪು. ನಿಸರ್ಗದ, ಬಣ್ಣ, ಚಲನೆ, ಕಂಪು, ವೈವಿಧ್ಯ ಎಲ್ಲವನ್ನೂ ಚಿತ್ರಸ್ಥವಾದಂತೆ, ನಿಲ್ಲಿಸುವ ವರ್ಣಶಿಲ್ಪಿ ಇವರ ಪ್ರತಿಭೆ.

ಹಚ್ಚನೆ-ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ
ರನ್ನದ ಕಿರು ಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ

ಈ ಅಪೂರ್ವ ಖಚಿತಾಕಾರ ಕುಸುರಿಗೆಲಸದ ವರ್ಣನೆ-ಇಂದ್ರಿಯ ಗೋಚರವಾದ ಅನುಭವಕ್ಕೆ ಕಲ್ಪನೆಯನ್ನು ತೊಡಿಸಿ ನಿಲ್ಲಿಸುತ್ತದೆ.

ಮೂರನೆಯದು, ಈ ನಿಸರ್ಗ ಸೌಂದರ್ಯಕ್ಕೆ ಮತ್ತು ‘ನಾನು’    ಎಂಬ ಈ ಕವಿ ಚೇತನಕ್ಕೆ ಉಂಟಾದ ಸಂಯೋಗಾನುಭವದ ಸ್ವರೂಪದ ವರ್ಣನೆ. ಬಹಿರಂಗದ ಸೌಂದರ್ಯ ಕವಿಯ ಅಂತರಂಗದಲ್ಲಿ ಮಾಡಿದ ಪರಿಣಾಮದ ಅಥವಾ ಸೌಂದರ‍್ಯಾನುಭವದ ವರ್ಣನೆ:

‘ಉರಿ ಕಿಡಿದೆನು ಹಿಮಮಣಿಯಂತೆ’
‘ಹಸುರ್ಗಟ್ಟಿತು ಕವಿಯಾತ್ಮಂ
ಹಸುರ್ನೆತ್ತರ್ ವೊಡಲಿನಲಿ’

‘ಕಣ್ ತುಳುಕಿತೆದೆ ನಲಿದುದು
ಅಸು ಹಿಗ್ಗಿತುಲ್ಲಸದಿ; ಮಿಂಚು ಹರಿದಂತೆ ನೆತ್ತರು ಚಿಮ್ಮಿ
ದೇಹದಲಿ ತೇಜಸ್ವಿಯಾದೆ ನಾಂ ಸೂರ್ಯನಂತೆ’

‘ಕಂಡೆ ಕೇಳ್ದೆ, ದಣಿವ ಮರೆತೆ
ಉಲ್ಲಾಸವ ತಾಳಿದೆ’
‘ನಮ್ಮ ಹಳ್ಳಿ ಗದ್ದೆ ತೋಟ,ಬೈಲು ಬೆಟ್ಟ ಬನದ ನೋಟ
ತೇಲಿ ಬಹವು ಮನದಲಿ’
‘ನೋಡುವೆನ್ನಾತ್ಮವೂ ದೃಶ್ಯದಲಿ ಲೀನತೆವೆತ್ತು
ಶೂನ್ಯ ಬೃಹದಾಕಾಶದಲಿ ಶೂನ್ಯದಂತಾಯ್ತು’
‘ಹೃದಯ ಪ್ರಪಾತಕ್ಕೆ ಧುಮುಕುತಿದೆ
ರಸದ ಧುನಿ’
‘ಧ್ಯಾನ ಪ್ರಲಯಿತ ಕವಿತಾನಾದನ್
ಬೈಗಿನ ಬಾನ್’

ಕವಿ, ನಿಸರ್ಗ ಸಾನಿಧ್ಯದಲ್ಲಿ ತನಗಾದ ಅನುಭವವನ್ನು ತಾನೇ ವರ್ಣಿಸುವ ರೀತಿ ಇದು. ಒಂದು ರೀತಿಯಲ್ಲಿ ಇದು ರಸಾನುಭೂತಿಯ ವರ್ಣನೆ. ಕವಿಗೆ ಏನಾಯಿತೆಂಬುದನ್ನು ಕವಿತೆಯೇ ಹೇಳುವ ಬದಲು, ಕವಿತೆಯೊಳಗಿನ ಕವಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿದೆಯೆ ಎನ್ನುವುದು ಇಲ್ಲಿ ಅನೇಕರು ಎತ್ತುವ ಒಂದು ಆಕ್ಷೇಪಣೆ. ಆದರೆ ಇದು ಕುವೆಂಪು ಅವರ ಕವಿತೆಯ ರಚನಾತಂತ್ರ ಕೂಡಾ ಎಂದು ಸಮಾಧಾನ ಹೇಳಬಹುದು.

ನಾಲ್ಕನೆಯದು ಮತ್ತು ಕವಿತೆಯ ಮುಕ್ತಾಯದ ಭಾಗ. ಈ ಸೌಂದರ‍್ಯಾನುಭವದಿಂದ ನಿಷ್ಪನ್ನವಾಗುವ ಒಂದು ತತ್ವ ಅಥವಾ ತತ್ವ ದೃಷ್ಟಿಯ ನಿರೂಪಣೆ. ಇದು ಸೂತ್ರರೂಪವಾಗಿದೆ ಅಥವಾ ಕೆಲವೆಡೆ ವಿವರಣಾತ್ಮಕವಾಗಿದೆ;

‘ತೆಗೆ ಜಡವೆಂಬುದೆ ಬರಿ ಸುಳ್ಳು’
‘ಚೈತನ್ಯವಲ್ಲದಿನ್ನಿಲ್ಲ ವಿಶ್ವದಲಿ’
‘ಶಿವ ಕಾಣದೆ ಕವಿ ಕುರುಡನೊ
ಶಿವ ಕಾವ್ಯದ ಕಣ್ಣೊ’
‘ಸಕಲಾರಾಧನ ಸಾಧನ ಬೋಧನದನುಭವ ರಸ ತಾನಹುದಿಲ್ಲಿ’
‘ಜೀವಿಸುವುದಕ್ಕಿಂತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ’,

ಇಂಥ ಸೂತ್ರಗಳಷ್ಟೇ ಅಲ್ಲ; ತಾವು ಕಂಡ ಚೆಲುವಿನ ಬಗೆಗೆ ಅದನ್ನು ಸವಿಯಬೇಕಾದ ಅವಶ್ಯಕತೆಯ ಬಗೆಗೆ,ಇದು ಆ ಪರಾಶಕ್ತಿಯ ಒಂದು ಅಭಿವ್ಯಕ್ತಿ ಎನ್ನುವ ಬಗೆಗೆ ಉಪನ್ಯಾಸವೂ ಆಗುತ್ತದೆ ಇವರ ಕವಿತೆ.

‘ಸುಂದರ ಮಹೇಶ್ವರನ ರಸಮಯ ಶರೀರವಿದು
ಈ ವಿಶ್ವ ರೂಪದಲಿ ನಮಗೆ ತೋರುತಿದೆ’
‘ಬಿಸಿಲದು ಬರಿ ಬಿಸಿಲಲ್ಲವೊ, ಸೂರ್ಯನ ಕೃಪೆ ಕಾಣೊ’
‘ಭುವನ ಕವಿವರನ ಕವನವೀ ಸೃಷ್ಟಿ’
‘ಕಣ್ದೆರೆದು ಪ್ರಕೃತಿ ಸೌಂದರ್ಯಮಂ ಭಾವನೋಜ್ವಲವಾಗಿ
ನೋಡದಿಹ ಬಾಳೊಂದು ಬಾಳಲ್ಲ’
‘ಸವಿಯದಿರೆ ನೋಡದಿರೆ, ಬದುಕಿಯೂ ನಾವು ಸತ್ತಂತೆ’
‘ಅದರೊಳೊಂದಾಗುವುದೆ ಪರಮ ರಸಿಕತೆ; ಅದಕೆ
ಮಿಗಿಲಹ ರಸಾನಂದ ಮತ್ತೆ ಬೇರೊಂದಿಲ್ಲ’

ಹೀಗೆ, ಈ ಉಪನ್ಯಾಸ ವಿಧಾನದಲ್ಲಿ ಕಣ್ಣೆದುರಿಗಿನ ನಿಸರ್ಗ ಸೌಂದರ್ಯದ ಕಡೆ ಬೆರಳಿಟ್ಟು ತೋರಿಸುವುದು, ಅದರ ಸೊಗಸನ್ನು ವರ್ಣಿಸುವುದು,ಈ ಸೊಗಸನ್ನು ಆರಾಧಿಸುವುದು, ಆಸ್ವಾದಿಸುವುದು ಇದೇ ಮಹಾತ್ಕಾರ್ಯ, ಬದುಕಿನ ಗುರಿ ಎಂದು ಘೋಷಿಸುವುದು. ಇದನ್ನು ಸವಿಯಲಾರದ ಅರಸಿಕರ ಬಗ್ಗೆ ಆಕ್ರೋಶ ತಾಳುವುದು-ಈ ಅಂಶಗಳು, ಕುವೆಂಪು ಅವರ ಕವಿತೆಗಳನ್ನು ಮಲೆನಾಡಿನ ಸೌಂದರ್ಯದ ಜಾಹೀರಾತುಗಳೆಂಬಂತೆ ಮಾಡಿಬಿಡುತ್ತವೆ! ಸೌಂದರ್ಯಾನುಭವ ಸಾಮರ್ಥ್ಯವೆನ್ನುವುದು ‘ದೈವ ಕೃಪೆದಲ್’ ಎಂದು ಒಂದೆಡೆ ಅವರೇ ಹೇಳಿದರೂ, ಈ ನಮ್ಮ ಸುತ್ತಣ ನಿಸರ್ಗದ ಸೊಗಸನ್ನು ಎಲ್ಲರೂ ಅನುಭವಿಸುವ ಮತ್ತು ಅದರಿಂದ ಬದುಕಿನ ಸಾರ್ಥಕತೆಯನ್ನು ಪಡೆಯುವ ಸಾಮರ್ಥ್ಯ ಎಲ್ಲರಿಗೂ ಲಭಿಸುವುದು ಯಾವಾಗ ಎಂಬ ತೀವ್ರವಾದ ಅನುಕಂಪ ಆಶಯಗಳು, ಇಂಥ ನಿಲುವಿನ ಹಿನ್ನೆಲೆಗಿವೆ ಎಂಬುದನ್ನು ಮರೆಯಬಾರದು.

ಕುವೆಂಪು ಅವರದು ಸೌಂದರ್ಯ ಧರ್ಮ. ದೇವಾಲಯ, ದೇವರು, ಪೂಜೆ, ಧರ್ಮ ಇತ್ಯಾದಿಗಳ ಬಗ್ಗೆ ಇರುವ ಸಾಂಪ್ರದಾಯಿಕ ಕಲ್ಪನೆಗಳನ್ನು ನಿರಾಕರಿಸಿ, ಅವುಗಳ ಸ್ಥಾನದಲ್ಲಿ ನಿಸರ್ಗ ಸೌಂದರ್ಯವನ್ನು ಸ್ಥಾಪಿಸುವ ಕುವೆಂಪು ಅವರ ಧೋರಣೆ ಒಂದು ರೀತಿಯಲ್ಲಿ ಕ್ರಾಂತಿಕಾರಕವಾದದ್ದೆನ್ನಬೇಕು. ಅವರ ಪ್ರಕಾರ ಭುವನವೇ ದೇವಾಲಯ, ಸೌಂದರ್ಯವೇ ದೇವರು, ಸೌಂದರ್ಯಾನುಭವವೇ ಆರಾಧನೆ. ಜಪ ತಪ ಪೂಜೆ ಪ್ರಾರ್ಥನೆಗಳಿಂದ ಏನೇನು ಲಭಿಸುವುದೆಂದು ಹಳೆಯ ಧರ್ಮ ಹೇಳುತ್ತಿತ್ತೋ ಅದೆಲ್ಲವೂ, ಈ ನಿಸರ್ಗ ಸೌಂದರ್ಯವನ್ನು ಕಣ್ತೆರೆದು ಆಸ್ವಾದಿಸಿ ಅನುಭವಿಸುವುದರಿಂದ ಲಭಿಸುತ್ತವೆ-ಎನ್ನುತ್ತಾರೆ ಕುವೆಂಪು. ಅಷ್ಟೇ ಅಲ್ಲ, ಪೂಜೆ-ಜಪ-ತಪಗಳಿಂದ, ದೊರಕುವುದೆಂದು ಹೇಳಲಾದ ಸ್ವರ್ಗ, ಸೌಂದರ‍್ಯಾರಾಧಕನಿಗೆ ಇಲ್ಲಿಯೇ ನಿಸರ್ಗ ಸೌಂದರ್ಯದಲ್ಲಿಯೇ ಮೂರ್ತೀಭವಿಸಿದೆ; ಆದರೆ ಅದನ್ನು ಕಾಣುವ ಕಣ್ಣು ನಮಗೆ ಇಲ್ಲ, ಎನ್ನುವ ಕಳಕಳಿ ಅವರ ಕವಿತೆಗಳಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತದೆ-

‘ಯಾವ ಗುಡಿ ಮಿಗಿಲು ಆ ಭುವನ ದೇವಾಲಯಕೆ?
ಮೇಣಾವ ವಿಗ್ರಹಂ ಮೀರಿರುವುದೀ ಚೈತ್ರ
ಪಂಚಮಿಯ….ದಿವ್ಯ ಸೂರ್ಯದೇವನಿಗೆ?’

‘ನಿನ್ನೆಯ ಸಂಜೆಯ ಮಳೆಯಲಿ ಮಿಂದು
ಕಳ ಕಳಿಸುವ ಹಸುರ್ಬಯಲಲಿ ಇಂದು
ಹೊಂಬಿಸಿಲಲಿ ಮಿರು ಮಿರುಗಿರೆ ಜಲಬಿಂದು
ಸತ್ತಳೊ ಊರ್ವಶಿ ಸ್ವರ್ಗದಲಿ!’

‘ಸ್ವರ್ಗವರಳುತಿದೆ ಆ ಮರದ ಮೈಸಿರಿಯಲ್ಲಿ,
ಊರ‍್ವಶಿ ತಿಲೋತ್ತಮೆಯರೆಲ್ಲ ನರ‍್ತಿಪರಿಲ್ಲಿ
ಆ ಮರದ ಕೆಂದಳಿರಿನಿಂದ್ರನಾಸ್ಥಾನದಲಿ’
‘………….ಮನೆಬಾಗಿಲಿಗೆ ನಾಕ ಒಲಿದು ಬರೆ
ನಾವ್ ಲೆಕ್ಕಿಸುವುದಿಲ್ಲ ಕಣ್ಣೆತ್ತಿ, ತರುವಾಯ
ಹುಡುಕುವೆವು ತೊಳತೊಳಲಿ ತೀರ್ಥಯಾತ್ರೆಗಳಲ್ಲಿ ಸುತ್ತಿ’

ಈ ಕೆಲವು ನಿದರ್ಶನಗಳು ಸಾಕು ಅವರ ಸೌಂದರ್ಯ ಧರ್ಮದ  ಸ್ವರೂಪವನ್ನು ಗುರುತಿಸಲು. ಈ ದೃಷ್ಟಿಯಿಂದ ಅವರ ‘ಪ್ರಕೃತಿ ಉಪಾಸನೆ’ ಎಂಬ ಕವಿತೆ (ಅದು ಕವಿತೆಗಾಗಿ ತೀರಾ ವಾಚ್ಯವಾಗಿದ್ದರೂ)ಯನ್ನು ನೋಡಬಹುದು.

ಪಕ್ಷಿಕಾಶಿಯ ಅನೇಕ ಕವಿತೆಗಳಲ್ಲಿ ಈ ಒಂದು ‘ಸೌಂದರ್ಯ ಧರ್ಮ’ ಮತ್ತೆ ಮತ್ತೆ ಪುನರಾವರ್ತಿತವಾಗಿದೆ. ‘ಚಿರಸೌಂದರ್ಯದ ಸಂಪದವಿದ್ದರೆ ಧರ್ಮಕೆ ಚ್ಯುತಿಯಿಲ್ಲ’ ಎಂಬ ಸಮಾಧಾನದಿಂದ ಹೊರಟರೆ, ನಿಸರ್ಗ ಸೌಂದರ‍್ಯಾನುಭವದಿಂದ  ‘ಸಕಲಾರಾಧನ ಸಾಧನ ಬೋಧನದನುಭವರಸ’ವನ್ನು ಪಡೆಯಬಹುದು ಎಂಬ ಶ್ರದ್ಧೆಯಲ್ಲಿ ಈ ಚಿಂತನೆ ನಿಲುಗಡೆಯನ್ನು ಪಡೆಯುತ್ತದೆ. ‘ಧರ್ಮ’ದಿಂದ ಏನೇನು ಆಧ್ಯಾತ್ಮಿಕ ಪ್ರಯೋಜನಗಳು ಲಭಿಸುತ್ತವೆಂದು ಪರಂಪರಾಗತವಾಗಿ ತಿಳಿಯಲಾಗಿತ್ತೋ, ಅವೆಲ್ಲವೂ ಸೌಂದರ‍್ಯದ ಆರಾಧಕನಿಗೂ ದೊರೆಯುತ್ತವೆ-ಎಂಬ ಮಾತು, ಪಾಶ್ಚಾತ್ಯ ‘ರೊಮ್ಯಾಂಟಿಸಿಸಂ’ಗೆ ಕುವೆಂಪು ಅವರು ಭಾರತೀಯ ಹಿನ್ನೆಲೆಯಲ್ಲಿ ಕೊಟ್ಟ ಹೊಸ ವ್ಯಾಖ್ಯಾನದಂತೆ ತೋರುತ್ತದೆ.

ಪಕ್ಷಿಕಾಶಿಯ ಐದಾರು ಕವಿತೆಗಳನ್ನು ಬಿಟ್ಟರೆ ಉಳಿದ ಬಹುತೇಕ ಕವನಗಳು ಹರಳುಗೊಂಡ ಭಾವಗೀತಗಳಾಗಿಲ್ಲ. ಅಲ್ಲದೆ ಒಂದು ಸಲ ವಾಸ್ತವವಾಗಿ ಆದ ಅನುಭವಗಳನ್ನೆ, ಅಂಥದೆ ಸಂದರ್ಭವನ್ನು ವಸ್ತುವನ್ನಾಗಿ ಉಳ್ಳ ಬೇರೆ ಬೇರೆಯ ಕವಿತೆಗಳಲ್ಲಿಯೂ ಪುನರಾವರ್ತಿಸಲಾಗಿದೆ. ಹೀಗಾಗಿ ಆ ‘ಬೇರೆ’ಯ ಕವಿತೆ, ಹಿಂದಿನ ಕವಿತೆಗಿಂತ ‘ಬೇರೆ’ಯಾದ ಅನುಭವವನ್ನೂ ಹೇಳುವುದಿಲ್ಲ. ಮತ್ತೊಂದು ಅಂಶವೆಂದರೆ ಇವರ ಕವಿತೆಗಳಲ್ಲಿ ಅನುಭವಗಳನ್ನು ಹರಳುಗೊಳಿಸುವ ಕ್ರಿಯೆಗಿಂತ, ವಿವರಿಸಿ ಹೇಳುವ ವಾಚ್ಯದ ಕಡೆಗೆ ಗಮನ ಹೆಚ್ಚಾಗಿದೆ. ಒಮ್ಮೊಮ್ಮೆ ತೀರಾ ಸೊಗಸಾದ ಪಂಕ್ತಿಗಳಿದ್ದು, ಅವುಗಳಿಗಾಗಿ ಇಡೀ ಕವಿತೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ,-ಹತ್ತಿಯ ಸೀರೆಯಲ್ಲಿರುವ ಜರತಾರಿ ಅಂಚಿನಿಂದಲೋ, ಚಿತ್ರದಿಂದಲೋ ಅದನ್ನು ಒಪ್ಪಿಕೊಳ್ಳುವಂತೆ. ಕುವೆಂಪು ಅವರ ಶೈಲಿ ಮೂಲತಹ ಕಥನ ಕಾವ್ಯಕ್ಕೆ ಹೇಳಿ ಮಾಡಿಸಿದ್ದೆ ಹೊರತು ಭಾವಗೀತೆಗಳಲ್ಲ. ಅವರ ಭಾವಗೀತೆಗಳು,-ಹರಳುಗೊಂಡವುಗಳಾಗದೆ, ವಿವರಣಾತ್ಮಕವೂ, ಕಥಾನಾತ್ಮಕವೂ  ಆಗಿರುವುದು ಇದರಿಂದಲೇ. ತಮ್ಮ ಕಥನಕಲೆಯನ್ನು ಪಳಗಿಸಿಕೊಳ್ಳುವ ಮಾಧ್ಯಮಗಳಾಗಿ ಅವರಿಗೆ ಭಾವಗೀತೆಗಳು ಒದಗಿ ಬಂದಿರುವುದರಿಂದ, ಕುವೆಂಪು ಅವರನ್ನು ‘ಭಾವಗೀತೆಯ ಕವಿ’ ಎನ್ನುವುದಕ್ಕಿಂತ ಕಥನಕವಿ (Narrative Poet) ಎಂದು ಕರೆಯುವುದು ಉಚಿತ. ನಮಗೆ ತೋರುವ ಮಟ್ಟಿಗೆ ಅವರ ಭಾವಗೀತೆಗಳೆಲ್ಲ ಅವರ ಮಹಾಕಾವ್ಯರಚನೆಗೆ ನಡೆದ ಪೂರ್ವಸಿದ್ಧತೆಗಳಂತೆ ತೋರುತ್ತದೆ. ಆದುದರಿಂದಲೆ ಕುವೆಂಪು ಅವರಲ್ಲಿ ಸಾರ್ಥಕವಾದ ಭಾವಗೀತೆಗಳು ವಿರಳ.

ನವೋದಯ-೧೯೭೬