ಚಿಕೋಳು ಹಿರಿದಿಮ್ಮಿ ಸುವ್ವಲಾಲೆ |
ಏಳುಜನ ಅಣ್ಣದೀರು ಸುವ್ವಲಾಲೆ |

ಏಳುಜನ ಅಣ್ಣದೀರು | ಸು | ಬಾರೆಯ ಹೊಲತಾಕೆ | ಸು |
ಬೇಸಾಯ ಹೂಡ್ಯಾರೆ | ಸು | ಚಿಕ್ಕೊಳು ಹಿರಿದಿಮ್ಮಿ | ಸು |
ಏಳುಗೂಡಿನ ದನವ | ಸು | ಬಿಟ್ಟುಕೊಂಡು ಹೋಗುತಾಳೆ | ಸು |
ಹೊಗಂದು ಹೋದಾಳೊ | ಸು | ಜೋಳಾದ ಹೊಲತಾಕೆ | ಸು |
ಹೋದಳು ಹಿರಿದಿಮ್ಮವ್ವ | ಸು | ಏಳುಗೂಡಿನ ದನವ | ಸು |
ಬಿಟ್ಟುಕೊಂಡು ಮೇಸುತಾಳೆ | ಸು | ಬಿಟ್ಟುಕೊಂಡು ಮೇಸುವಾಗ | ಸು |
ಒಂದಾಲದ ಮರದಡಿಯ | ಸು | ನೆರಳಾಗೆ ಕೂತುಕೊಂಡು | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಹಂಗೇಯ ಮನಿಕಂಡಳು | ಸು |
ಹಂಗೇಯ ಮನಿಕಂಡು | ಸು | ಮೇಲಾಕೆ ನೋಡುತಾಳೆ | ಸು |
ಅವನಾರೊ ಪರದೇಶಿ | ಸು | ಪರದೇಶಿ ಕಂದಯ್ಯ | ಸು |
ಮರದ ಮೇಲೆ ಕುಂತವನೆ | ಸು | ಚಿಕ್ಕೊಳ್ ಹಿರಿದಿಮ್ಮವ್ವ | ಸು |
ನೀನಾರೊ ಪರದೇಶಿ | ಸು | ಅಂಗಂದು ಕೇಳುವಗ | ಸು |
ಏನುಮಾತು ಹೇಳುತಾನೆ | ಸು | ತಂದೆಯಿಲ್ಲ ನನಗೆ | ಸು |
ತಾಯಿಯಿಲ್ಲ ನನಗೆ | ಸು | ಪರದೇಶಿ ಕಂದಯ್ಯ | ಸು |
ಅಂಗಂದು ಇಳುದಾನು | ಸು | ಇಳುದಾನೆ ಅವನಿನ್ನ | ಸು |
ಆಲಾದ ಮರವನ್ನೆ | ಸು | ಮರೆಮಾಡಿ ನಿಂತುಕೊಂಡು | ಸು |
ಹೊದಿಯಾಕೆ ಬಟ್ಟಿಲ್ಲ | ಸು | ಉಣ್ಣಾಕೆ ಹಿಟ್ಟಿಲ್ಲ | ಸು |
ಚಿಕ್ಕೋಳು ಹಿರಿದಿಮ್ಮವ್ವ | ಸು | ಏನಂದು ಕೇಳುತಾಳೆ | ಸು |
ಹೊದೆಯಾಕೆ ಬಟ್ಟೆಕೊಡುವೆ | ಸು | ಉಣ್ಣಾಕೆ ಹಿಟ್ಟುಕೊಡುವೆ | ಸು |
ಪರದೇಶಿ ಕಂದಯ್ಯ | ಸು | ನಮ್ಮನೆಯಾಗೆ ಇದ್ದುಕೊಂಡು | ಸು |
ಏಳೂಗೂಡಿನ ದನವ | ಸು | ಕಾಯಿಕೊಂಡು ಇರುತೀಯ | ಸು |
ಉಣ್ಣಾಕೆ ಹಿಟ್‌ಕೊಟ್ಟರೆ | ಸು | ಹೊದಿಯಾಕೆ ಬಟ್ಟೆಕೊಟ್ರೆ | ಸು |
ನಿಮ್ಮ ಮನೆಯಲ್ಲಿ ಇರುತೀನಿ | ಸು | ದನವನೆ ಕಾಯುತೀನಿ | ಸು |
ಅಂಗಂದ ಮಾತಿಗೆ | ಸು | ಚಿಕ್ಕೋಳು ಹಿರಿದಿಮ್ಮಿ | ಸು |
ಜಾತೀಯು ಯಾವುದಪ್ಪ | ಸು | ಕುಲವು ಯಾವುದಪ್ಪ | ಸು |
ಎಂದೇಯೆ ಕೇಳುತಾಳೆ | ಸು | ಬೆಡಗು ಬೇಡರ‍್ಹುಡುಗ | ಸು |
ಕುಲವೆ ಬೊಮ್ಮೇಲಿಂಗ | ಸು | ಅಂಗಂದ ಮಾತಿಗೆ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಮನೆತಾಕೆ ಹೋಗುತೀನಿ | ಸು |
ದನಗಳ ಕಾಯಿಕೊಂಡು | ಸು | ಇರಪ್ಪ ನೀನೀಗ | ಸು |
ಅಂಗಂತ ಹೇಳಿಬಿಟ್ಟು | ಸು | ಹೊರಟಾಳು ಬೇಗದಿಂದ | ಸು |
ಬಾರೇಯ ಹೊಲತಾಕೆ | ಸು | ಹೋದಾಳ್ ಹಿರಿದಿಮ್ಮವ್ವ | ಸು |
ಬಾರೇಯ ಹೊಲತಾಕ್ಹೋಗಿ | ಸು | ಏಳುಜನ ಅಣ್ಣದೀರ‍್ಗೆ | ಸು |
ಏನುಮಾತು ಹೇಳುತಾನೆ | ಸು | ಏಳುಜನ ಅಣ್ಣಗಳಿರೆ | ಸು |
ಅಪ್ಪ ಪರದೇಶಿ ಕಂದಯ್ಯ | ಸು | ಪರದೇಶಿ ಕಂದಯ್ಗೆ | ಸು |
ಹಿಟ್ಟುಬಟ್ಟೆ ಕೊಟ್ಟರೆ | ಸು | ನಮ್ಮದನಗಳ ಕಾಯ್ವನಂತೆ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಬೇಡಕಾಣೆ ನೀನೀಗ | ಸು |
ನನಮಾತ ಕೇಳವ್ವ | ಸು | ಅಂಗಂದು ಹೇಳ್ಯಾರೆ | ಸು |
ಅಪ್ಪ ಪರದೇಶಿ ಕಂದಯ್ಯ | ಸು | ದನವಾನೆ ಕಾಯುತಾನೆ | ಸು |
ಹಿಟ್ಟುಬಟ್ಟೆ ಕೊಡಾನು | ಸು | ಅಂಗದ ಮಾತಿಗೆ | ಸು |
ನಿನ್ನಿಷ್ಟ ಕಾಣವ್ವ | ಸು | ಯಾವ ಜಾತಿ ತಾಯಿ | ಸು |
ಅಂದಿನ್ನ ಕೇಳ್ಯಾರೆ | ಸು | ಬೆಡಗು ಬೇಡರ ಹುಡುಗ | ಸು |
ಕುಲವೆ ಬೊಮ್ಮೇಲಿಂಗ | ಸು | ಅಂಗಂದ ಮಾತಿಗೆ | ಸು |
ಬೆಲ್ಲದಂಗೆ ಇದ್ದಾರು | ಸು | ಬೇಡರ ಸಂಗಬ್ಯಾಡ | ಸು |
ತುಪ್ಪದಂಗೆ ಇದ್ದಾರು | ಸು | ತುರಕಾರ ಸಂಗಬ್ಯಾಡ | ಸು |
ಹಾಲಿನಂಗೆ ಇದ್ದಾರು | ಸು | ಹಾರುವರ ಸಂಗಬ್ಯಾಡ | ಸು |
ಪರದೇಶಿ ಕಂದಯ್ಯ | ಸು | ನಮ್ಮನೇನ ಮಾಡುತಾನೆ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ನಿನ್ನಿಷ್ಟ ಕಾಣವ್ವ | ಸು |
ಹೋದಾಳು ಅರಮನೆಗೆ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ಪರದೇಶಿ ಕಂದಯ್ಗೆ | ಸು | ಬಟ್ಟೆಗಳ ತಕ್ಕೊಂಡು | ಸು |

ತಂದಕೊಟ್ ಹೋದಾಳು | ಸು | ಮನತಕ್ಕೆ ಹೋದಾಳು | ಸು |
ಏನುಮಾತನಾಡುತಾಳೆ | ಸು | ಏಳು ಜನ ಅತ್ಗೆದೀರು | ಸು |
ಮಜ್ಜನವಾದವು | ಸು | ಅಮ್ಮ – ಮಧ್ಯಾನ್ನವಾದವು | ಸು |
ಅಮ್ಮ-ಹಿಟ್ಟಾನೆ ಇಟ್ಟುಕೊಡಿ | ಸು | ಹೊತ್ತುಕೊಂಡು ಹೋಗುತೀನಿ | ಸು |
ಹಿಟ್ಟಾನೆ ಇಟ್ಟುಕೊಟ್ರೆ | ಸು | ತಾನೇಯೆ ಹೊತ್ತುಕೊಂಡು | ಸು |
ಹೊರಟಾಳ್ ಹಿರಿದಿಮ್ಮವ್ವ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ನಿಮ್ಮಣ್ಣದೀರು ಬಯ್ಯುತಾರೆ | ಸು | ನೀವೆಲ್ಲ ಇದ್ದಂಗೆ | ಸು |
ಅವಳಮ್ಯಾಲೆ ಹೊರಿಸಿದ್ದೀರ | ಸು | ಅಂಗಂದು ನಿಮ್ಮಣ್ಣದೀರು | ಸು |
ಬಯ್ಯುತಾರೆಕಾಣಮ್ಮ | ಸು | ಹೇಳ್ಯಾರೆ ಅವರೀಗ | ಸು |
ಅವಳಂಗೂವೆ ಹೊತ್ತುಕೊಂಡು | ಸು | ಹೊರಟಾಳೆ ಬಿರಬಿರನೆ | ಸು |
ಬಿರಬಿರನೆ ಬರುವಾಗ | ಸು | ಕಗ್ಗಲ್ಲ ಕಣವೇಲಿ | ಸು |
ಬಿಳಿಕಲ್ಲಬಾರೇಲಿ | ಸು | ಬೇಡರ ಬೊಮ್ಮೆಲಿಂಗ | ಸು |
ಅವನು-ದನಗಳ ಕಾಯುತಾನೆ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ಹಿಟ್‌ಹೊತ್ಕೊಂಡು ಬರುತಾಳೆ | ಸು | ಕಗ್ಗಲ್ಲ ಕಣಿವ್ಯಾಗೆ | ಸು |
ಒಬ್ಬಾಳೆ ಬರುವಾಗ | ಸು | ಬೇಡರ ಬೊಮ್ಮೈಲಿಂಗ | ಸು |
ಅವನು-ದಾರೀಯ ಕಾದಾನೆ | ಸು | ಒಬ್ಬಾಳೆ ಬರುತಾಳೆ | ಸು |
ಅಡ್ಡಬಳಸಿ ಬಂದು | ಸು | ಏನುಮಾತನಾಡುತಾನೆ | ಸು |
ಚಿಕ್ಕೋಳೆ ಹಿರಿದಿಮ್ಮವ್ವ | ಸು | ಸಿಕ್ಕಿದೇನೆ ದಕ್ಕಿದೇನೆ | ಸು |
ಮುತ್ತಿನ ಮುಂಜರಗ ಹಿಡಿದ | ಸು | ಚಿಕ್ಕೋಳೆ ಹಿರಿದಿಮ್ಮವ್ವ | ಸು |
ಸಿಕ್ಕಿದೇನೆ ದಕ್ಕಿದೇನೆ | ಸು | ಬೇಡರ ಬೊಮ್ಮೈಲಿಂಗ | ಸು |
ಸಿಕ್ಕಲಿಲ್ಲ ದಕ್ಕಲಿಲ್ಲ | ಸು | ಬಿಡಯ್ಯ ನನ್ನಸೆರಗ | ಸು |
ನಮ್ಮ-ಏಳುಜನ ಅಣ್ಣದೀರು | ಸು | ಏಳು ಏಟ ಹೊಡೆದಾರು | ಸು |
ತಲೆಯ ಚೆಂಡಾಡುತಾರೆ | ಸು | ಅಂಗಂದು ಹೊರಟಾಳು | ಸು |
ಅವಳು-ಸಿಕ್ಕಲಿಲ್ಲ ದಕ್ಕಲಿಲ್ಲ | ಸು | ಅವಳು-ಹೋಗುತಾಳೆ ಬಿರಬಿರನೆ | ಸು |
ಏಳುಜನ ಅಣ್ಣದೀರು | ಸು | ಬೇಸಾಯ್ನ ಹೊಡೆಯುವಾಗ | ಸು |
ಎಲ್ಲಕಿಂತ ಹಿರಿಯೋನು | ಸು | ತಲೆಯೆತ್ತಿ ನೋಡ್ಯಾನೆ | ಸು |
ಏನುಮಾತ ಹೇಳುತಾನೆ | ಸು | ಆರುಜನ ತಮ್ಮದೀರ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಹಿಟ್‌ಹೊತ್ಕೊಂಡ್ ಬರುತಾಳೆ | ಸು |
ಏಳುಜನ ಮುಂಡೇರು | ಸು | ಮನೆಯಾಗ್ ಏನುಮಾಡುತಾರೆ | ಸು |
ಹಿಟ್‌ಹೊತ್‌ಕೊಂಡ್ ಬರುತಾಳೆ | ಸು | ಯಾರಾನ ಹೋಗಿರೊ | ಸು |
ಹಿಟ್ಟೀನ ಕುಕ್ಕೇಯ | ಸು | ತಕ್ಕೊಂಡು ಬಂದಾರು | ಸು |
ಬೇಸಾಯ ನಿಲಿಸಾರೆ | ಸು | ಅವರು-ಊಟವ ಮಾಡುತಾರೆ | ಸು |
ಏಳುಜನ ಅಣ್ಣದೀರ‍್ಗೆ | ಸು | ಊಟಕೆ ನೀಡುತಾಳೆ | ಸು |
ಎಲ್ಲಕಿಂತ ಹಿರಿಯೋನು | ಸು | ಏನುಮಾತನಾಡುತಾನೆ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ತಲೆಯಾಕೆ ಕೆದರ‍್ಯಾವೆ | ಸು |
ತಲೆಯಾಕೆ ಕೆದರ‍್ಯಾದೆ | ಸು | ಮೊಕವ್ಯಾಕೆ ಬಾಡ್ಯಾದೆ | ಸು |
ಕಗ್ಗಲ್ಲ ಕಣಿವೇಲಿ | ಸು | ಒಬ್ಬಳೆ ಬರುತಿದ್ದೆ | ಸು |
ಒಬ್ಬಾಳೆ ಬರುವಾಗ | ಸು | ಕರಡೀಯ ಬಂದೀತು | ಸು |
ಓಡೋಡಿ ಬಂದೇನು | ಸು | ಕಗ್ಗಲ್ಲ ಕಣಿವೇಲಿ | ಸು |
ಓಡೋಡಿ ಬರುವಾಗ | ಸು | ಮುಳ್ಳಾನೆ ತಗಲೈತೆ | ಸು |
ಅಂಗಂದ ಮಾತಿಗೆ | ಸು | ಅವರು-ಸುಮ್ಮನೆ ಆದರು | ಸು |
ಎಲ್ಲಕಿಂತ ಹಿರಿಯೋನು | ಸು | ಏನುಮಾತ ಹೇಳುತಾನೆ | ಸು |
ಚಿಕ್ಕೋಳ್ ಹಿರಿದಿಮ್ಮವ್ನ | ಸು | ಊರ ಮಗ್ಗಲೀಗೆ | ಸು |
ಕಣವೇ ತಟಾದು ಬನ್ನಿ | ಸು | ಬಿಟ್ಟುಬನ್ನಿರೊ ನೀವು | ಸು |
ಅಣ್ಣನು ತಂಗಿಯು | ಸು | ಹೊರಟಾರೊ ಬೇಗದಿಂದ | ಸು |
ಬೇಡರ ಬೊಮ್ಮೇಲಿಂಗಗೆ | ಸು | ಊಟಕೆ ನೀಡುತಾಳೆ | ಸು |
ಊಟಕೆ ಇಟ್ಟಾಳು | ಸು | ಹೊರಟಾಳು ಬೇಗದಿಂದ | ಸು |
ಕಗ್ಗಲ್ಲ ತಟಾದು | ಸು | ಮುಂದಾಕೆ ಬಿಟ್ಟು ಬಿಟ್ಟು | ಸು |
ಅವರಣ್ಣ ಹಿಂದಿರುಗಿ ಬರುತಾನೆ | ಸು | ಅವಳರಮನೆಗೆ ಹೋದಾಳು | ಸು |
ಅರಮನೆಗೆ ಹೋದಾಳು | ಸು | ಹಿಟ್ಟೀನ ಕುಕ್ಕೇಯ | ಸು |
ಒಳೀಕೆ ಮಡಿಗ್ಯಾಳು | ಸು | ಹಿತ್ತಲಿಗೆ ಹೋದಾಳು | ಸು |
ಅವಳು ಒಳೀಕೆ ಬರಲಿಲ್ಲ | ಸು | ನುಗ್ಗೇಯ ಮರದಡಿ | ಸು |
ಮನಗವಳ್ ಹಿರಿದಿಮ್ಮವ್ವ | ಸು | ಏಳುಜನ ಅತ್ತಿಗೇರು | ಸು |
ಏನುಮಾತನಾಡುತಾರೆ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |

ಹಿತ್ತಲಿಗೆ ಹೋದಾಳು | ಸು | ಯಾತಕೊ ಬರಲಿಲ್ಲ | ಸು |
ಏಳುಜನ ಅತ್ತಿಗೇರು | ಸು | ಹೋಗಿನ್ನ ನೋಡುವರು | ಸು |
ನುಗ್ಗೇಯಮರದಡಿ | ಸು | ಒಬ್ಬಳೆ ಮನಗವಳೆ | ಸು |
ಚಿಕ್ಕೋಳು ಹಿರಿದಿಮ್ಮವ್ವ | ಸು | ಇಲ್ಯಾಕೆ ಮನಗಿದ್ದಿ | ಸು |
ಏಳುಜನ ಅತ್ತಿಗೇರು | ಸು | ಕೇಳ್ಯಾರೆ ಬೇಗದಿಂದ | ಸು |
ಚಿಕ್ಕೋಳು ಹಿರಿದಿಮ್ಮವ್ವ | ಸು | ಮೈಯ್ಯಾನೆ ನೆರೆದವಳೆ | ಸು |
ನಾನ್ಯಾಕೊ ಬರವೊಲ್ಲೆ | ಸು | ಅಂಗಂದ ಮಾತಿಗೆ | ಸು |
ಏಳುಜನ ಅತ್ತಿಗೇರು | ಸು | ಬಾಳ ಸಡಗರದಿಂದ | ಸು |
ಬಾಳ ಹೆಚ್ಚಳದಿಂದ | ಸು | ಅವರಣ್ಣದೀರ ಹತ್ತಿರಕ್ಕೆ | ಸು |
ಬಾರೇಯ ಹೊಲತಾಕೆ | ಸು | ಅವರಾಳಾನೆ ಕಳಿವ್ಯಾರೆ | ಸು |
ಏಳುಜನ ಅಣ್ಣದೀರು | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ಮೈಯ್ಯಾನೆ ನೆರೆದಾಳೆ | ಸು | ಅಂಗಂದು ಹೇಳುಹೊತ್ಗೆ | ಸು |
ಏಳುಜನ ಅಣ್ಣದೀರು | ಸು | ಬಾಳ ಸಡಗರದಿಂದ | ಸು |
ಬಾಳ ಹೆಚ್ಚಳದಿಂದ | ಸು | ಬೇಸಾಯ್ನ ಬಿಟ್ಟುಕೊಂಡು | ಸು |
ಬಂದಾರಂದರಮನೆಗೆ | ಸು | ಬಂದಾರು ಬೇಗದಿಂದ | ಸು |
ಎತ್ತುಗಳ ಕಟ್ಟಬಿಟ್ಟು | ಸು | ಏನುಮಾತನಾಡುತಾರೆ | ಸು |
ಏಳುಜನ ಅಣ್ಣದೀರು | ಸು | ಚಿಕ್ಕೋಳ್ ಹಿರಿದಿಮ್ಮವ್ಗೆ | ಸು |
ಗುಡ್ಲನ್ನೆ ಹಾಕಬೇಕು | ಸು | ಏಳುಜನ ಅಣ್ಣದೀರ‍್ಗೆ | ಸು |
ಒಬ್ಬಾಳೆ ತಂಗ್ಯಲ್ಲೊ | ಸು | ಬಾಳ ಅದ್ದೂರಿಯಾಗಿ | ಸು |
ಮಾಡಬೇಕು ನಾವೀಗ | ಸು | ಬಾಳ ಅದ್ದೂರಿಯಿಂದ | ಸು |
ಮಾಡುತಾರೆ ಅವರೀಗ | ಸು | ಗುಡಲನೆ ಹಾಕ್ಯಾರೆ | ಸು |
ಚಿಕ್ಕೋಳ್ ಹಿರಿದಿಮ್ಮವ್ವೆ | ಸು | ರಾತೂರೆ ಅವರೀಗ | ಸು |
ಕಾಯಿಕೊಂಡೆ ಮನಿಗವರೆ | ಸು | ಚಿಕ್ಕೋಳ್ ಹಿರಿದಿಮ್ಮವ್ನ | ಸು |
ಹಿಂಗೇಯೆ ಮಲಗಿದ್ರು | ಸು | ಬೇಡರ ಬೊಮ್ಮೇಲಿಂಗ | ಸು |
ಕೊಪರೀಯ ಎಸೆದಾನೆ | ಸು | ಚಿಕ್ಕೋಳು ಹಿರಿದಿಮ್ಮವ್ಗೆ | ಸು |
ಗುಡಲಾನೆ ಒಳಕೀಗ | ಸು | ಕೊಪರೀಯ ಎಸೆದಾನೆ | ಸು |
ಗುಡಲೀಗೆ ಎಸೆದಾನೆ | ಸು | ಅವಳಾಚೀಗೆ ಎಸೆದಾಳೆ | ಸು |
ಆಚೀಗೆ ಎಸೆವಾಗ | ಸು | ಬಳೆಯು ಲಳೀರಂದೊ | ಸು |
ಏಳುಜನ ಅಣ್ಣದೀರು | ಸು | ಏನಂದುಕೊಳುತಾರೆ | ಸು |
ಚಿಕ್ಕೋಳೆ ಹಿರಿದಿಮ್ಮವ್ವ | ಸು | ಬಳೆಯಾಕೆ ಲಳಿರಂದೊ | ಸು |
ಅಂದಿನ್ನು ಕೇಳ್ಯಾರೆ | ಸು | ಅಂದಿನ್ನು ಕೇಳುವಾಗ | ಸು |
ಏನಂದು ಹೇಳುತಾಳೆ | ಸು | ತುಪ್ಪದ ಜಿಡ್ಡಿಗೆ | ಸು |
ಇರುಬೇಯು ಮುತ್ತಿದೊ | ಸು | ಇರುಬೇಯ ಕೊಡಬಿದೆ | ಸು |
ಬೇಡರ ಬೊಮ್ಮೇಲಿಂಗ | ಸು | ಬೆಲ್ಲಾದ ಉಂಡೇಯ | ಸು |
ಗುಡಲೀಗೆ ಎಸುದಾನೆ | ಸು | ಅವಳ್ ಹಿಂದಾಕೆ ಎಸುದಾಳೆ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಗೆಜ್ಜ್ಯಾಕೆ ಗಲಿರಂದೊ | ಸು |
ಅಂಗಂದು ಕೇಳುವಾಗ | ಸು | ಏನೆಂದು ಹೇಳುತಾಳೆ | ಸು |
ಬೆಲ್ಲಾದ ಜಿಡ್ಡಿಗೆ | ಸು | ಗೊದ್ದಾವೆ ಮುತ್ತೀದೊ | ಸು |
ಗೊದ್ದಾವ ಕೊಡವೀದೆ | ಸು | ಗೆಜ್ಜೇಯಗಲಿರಂದೊ | ಸು |
ಅಂಗಂದ ಮಾತಿಗೆ | ಸು | ಅವರು-ಸುಮ್ಮನೆ ಆದಾರೆ | ಸು |
ಏಳುಜನ ಅಣದೀರು | ಸು | ಮಾವಾನ ಕರಿಸಿಕೊಂಡು | ಸು |
ಸೋಬಾನ ಗೊತ್ತುಮಾಡಿ | ಸು | ಹದಿನಾರು ದಿವಸಕ್ಕೆ | ಸು |
ಸೋಬ್ನಾನ ಮಾಡಿಕಳ್ಳಿ | ಸು | ನಾನು-ಸೋಬ್ನಾವ ಮಾಡಿಬಿಟ್ಟು | ಸು |
ಕಣ್ಣಾಗೆ ನೋಡಬೇಕು | ಸು | ಹದಿನಾರುದಿವಸಕ್ಕೆ | ಸು |
ಅವರು ಸೋಬ್ನಾವ ಮಾಡುತಾರೆ | ಸು | ಸೋಬ್ನಾವ ಮಾಡಿದರು
ಏನುಮಾತನಾಡುತಾರೆ | ಸು | ನೆಂಟರೆಲ್ಲರ ಕಳಿಸಿ | ಸು |
ತಿಂಗಳು ನಾವಿನ್ನು | ಸು | ಎಷ್ಟುದಿನಕೆ ಮಾಡಬೇಕು | ಸು |
ಒಂದು ತಿಂಗಳು ಕಳುವಲ್ಲ | ಸು | ಅಂಗಂದು ಅವರೀಗೆ | ಸು |
ಮಾತಾನೆ ಆಡಿಕೊಂಡ್ರು | ಸು | ತಿಂಗಳು ತುಂಬಿತು | ಸು |
ಚಿಕ್ಕೋಳು ಹಿರಿದಿಮ್ಮವ್ನ | ಸು | ಕಳಿಸೀಯೆ ಕೊಡಬೇಕು | ಸು |
ಬೇಕಾದ ಅಡಿಗೂಟ | ಸು | ಮಾಡ್ಯಾರೆ ಬೇಗದಿಂದ | ಸು |
ಚಿಕ್ಕೋಳ್ ಹಿರಿದಿಮ್ಮವ್ನ | ಸು | ತಲೆಯಾನೆ ಬಾಚ್ಯಾರು | ಸು |
ಅರಿಸಣ ಕುಂಕುಮವಿಟ್ಟು | ಸು | ಹೊಸಸೀರೆ ಹೊಸರವಕೆ | ಸು |
ಇಟ್ಯಾರುಬೇಗದಿಂದ | ಸು | ಏಳುಜನ ಅತ್ತಿಗೇರೆ | ಸು |
ಒಬ್ಬಾಳೆ ನಾದೂನಿ | ಸು | ಅವರು ಮಾತಾನೆ ಆಡಿಕೊಂಡು | ಸು |
ಮಡಿಲಕ್ಕಿ ಹೂದಾರು | ಸು | ಮಡಲಕ್ಕಿ ಹುಯ್ದಿನ್ನ | ಸು |
ಸಾಗುಗಳುವ್ಯಾರೀಗ | ಸು | ಏಳುಜನ ಅಣ್ಣದಿರಿಗೆ | ಸು |
ಕಾಲೀಗೆ ಬಿದ್ದಾಳೆ | ಸು | ಏಳುಜನ ಅತ್ತಿಗೇರ‍್ಗೆ | ಸು |
ಕಾಲೀಗೆ ಬಿದ್ದಾಳೆ | ಸು | ಚಿಕ್ಕೋಳ್ ಹಿರಿದಿಮ್ಮವ್ನ | ಸು |
ಕಳಿಸೀಯೆ ಕೊಟ್ಟಾರೆ | ಸು |

2

ಗಂಡsನು ಹೆಂಡsತಿ ಸುವ್ವಲಾಲೆ
ಅವರಿಬ್ಬರೆ ಹೊರಟಾರು ಸುವ್ವಲಾಲೆ

ಹೋಗಂದು ಹೋಗುವಾಗ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ಒಂದು ನಾಯಾನೆ ಸಾಕಿದ್ಲು | ಸು | ನಾಯೂವೆ ಹೊರಟೀತು | ಸು |
ನಾಯೂವೆ ಹೋಗುತಾದೆ | ಸು | ಬೇಡರ ಬೊಮ್ಮೆವಲಿಂಗ | ಸು |
ಬೆನ್ನಾಡಿ ಹೋಗುತಾನೆ | ಸು | ಅರೆದಾರೀಲಿ ಹೊರಟಾನೆ | ಸು |
ಬೆನ್ನಾಡಿ ಹೋಗುತಾನೆ | ಸು | ಎಷ್ಟಾನೆ ಹೇಳಿದರು | ಸು |
ಅವನು ಕೇಳೋದೆ ಇಲ್ಲವಲ್ಲ | ಸು | ನಾಯೂವೆ ಹೋಗುತದೆ | ಸು |
ಅವನೂವೆ ಹೋಗುತಾನೆ | ಸು | ಹೋಗೊಂದ ಹೋಗುತಾರೆ | ಸು |
ಆರಂದ ಅಡವೀಲಿ | ಸು | ಒಂದು ಬಾವಿಯ ತಾವು | ಸು |
ಕಲ್ಲು ಬಾವೀಯ ತಾವು | ಸು | ಬುತ್ತಿಯ ಉಣಲೆಂದು | ಸು |
ಅಂಗಂದು ಕುಳಿತಾರು | ಸು | ಕೈಕಾಲ ಮೊಕ ತೊಳೆದು | ಸು |
ಎಲಿಯಾಸಿ ಕೂತುಕೊಂಡು | ಸು | ಊಟಾವ ಮಾಡುವಾಗ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಬೇಡರ ಬೊಮ್ಮೇಲಿಂಗಗೆ | ಸು |
ಬುತ್ತಿಯ ನೀಡುತಾರೆ | ಸು | ಗಂಡಾಗು ಅವನೀಗು | ಸು |
ಚಿಕ್ಕೋಳು ಹಿರಿದಿಮ್ಮವ್ವ | ಸು | ಅವಳು ಬಿತ್ತೀಯ ನೀಡಿದಳು | ಸು |
ಅವಳು ಸುಮ್ಮನೆ ನಿಂತವಳೆ | ಸು | ಬೇಡರ ಬೊಮ್ಮೇಲಿಂಗ | ಸು |

ಚಂದ್ರಾಯ್ದ ತಕ್ಕೊಂಡು | ಸು | ಒಂದೇ ಏಟಿಗೆ ಹೊಡ್ದ | ಸು |
ಒಂದೇ ಏಟಿಗೆ ಕಡಿದ | ಸು | ಒಂದು ತುತ್ತು ಬಾಯಾಗೆ | ಸು |
ಒಂದು ತುತ್ತು ಕೈಯಾಗೆ | ಸು | ಎರಡೇಯ ತುಂಡೀಗೆ | ಸು |
ಕಡದೇಯೆ ಬುಟ್ಟನಲ್ಲೊ | ಸು | ಚಿಕ್ಕೋಳು ಹಿರಿದಿಮ್ಮವ್ವ | ಸು |
ಏನುಮಾತ ಹೇಳುತಾಳೆ | ಸು | ನೀನೇಯೆ ಗಂಡಕಾಣೊ | ಸು |
ನಾನೇಯೆ ಹೆಂಡ್ತಿ ಕಾಣೊ | ಸು | ಬೇಡರು ಬೊಮ್ಮೇಲಿಂಗ | ಸು |
ಬುತ್ತೀಯ ಉಣಬಾರೊ | ಸು | ಊಟಾಕೆ ನೀಡ್ಯಾಳೆ | ಸು |
ಊಟಾವ ಮಾಡುತಾನೆ | ಸು | ಚಂದ್ರಾಯ್ದ ತಕ್ಕೊಂಡು | ಸು |
ಬೇಡರ ಬೊಮ್ಮೇಲಿಂಗ್ನ | ಸು | ಅವಳು ಕಡಿದೇಯೆ ಬಿಟ್ಟಾಳು | ಸು |
ಗಂಡಾನ ಕಡಿದಾಗ | ಸು | ಹಿರಿದಿಮ್ಮಿ ಸಾಕಿದನಾಯಿ | ಸು |
ನೆತ್ತರದಲ್ಲೊದ್ದಾಡಿ | ಸು | ಮನೆತಾಕೆ ಓಡೋಯ್ತು | ಸು |
ಮನೆತಕ್ಕ ಓಡೋಗಿ | ಸು | ಏಳುಜನ ಅಣ್ಣದೀರ‍್ನು | ಸು |
ಗುಯ್ಯ ಗುಯ್ಯ ಅನ್ನುತಾದೆ | ಸು | ಸುತ್ತಬಳಸಿ ಬರುತಾದೆ | ಸು |
ಏಳುಜನ ಅಣ್ಣದೀರು | ಸು | ಏನು ಮಾತನಾಡುತಾರೆ | ಸು |
ಇದು ಯಾರ ನಾಯಿ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ಸಾಕೀದ ನಾಯೀಯು | ಸು | ನೋಡ್ಯಾರೊ ಅವರೀಗ | ಸು |
ಇದು ಏನು ಚೋಜಿಗವೊ | ಸು | ನಾಯಿ ನೆತ್ತರದಲ್ಲಿ | ಸು |
ಒದ್ದಾಡಿ ಬಂದೈತೆ | ಸು | ಏಳು ಜನ ಅಣ್ಣದೀರು | ಸು |
ಹುಡಿಕೊಂಡು ಬರುತಾರೆ | ಸು | ಚಿಕ್ಕೋಳ್ ಹಿರಿದಿಮ್ಮವ್ವ | ಸು |
ಗಂಡನ ತಲೆಯಾನೆ | ಸು | ಮಡಿಲಾಗೆ ಕಟ್ಟಿಕೊಂಡು | ಸು |
ಬೊಮ್ಮೆವಲಿಂಗನ ತಲೆಯ | ಸು | ಕಾಲಾಗೆ ಒದ್ದುಕೊಂಡು | ಸು |
ಅತ್ತಲಿಂದ ಬರುತಾಳೆ | ಸು | ಅವರು ಏಳುಜನ ಅಣ್ಣದೀರು | ಸು |
ಅವರು ಇತ್ತಲಿಂದ ಹೋಗುತಾರೆ | ಸು | ಅವರು ಏಳುಜನ ಅಣ್ಣದೀರು | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಹಿಂದಿರುಗಿ ಬರುತಾಳೆ | ಸು |
ಇದು ಏನು ಚೋಜಿಗವೊ | ಸು | ಅಂದಿನ್ನ ಬಂದಾರೊ | ಸು |
ಗಂಡಾನ ತಲೆಯನ್ನು | ಸು | ಮಡಿಲಾಗೆ ಕಟ್ಟಿಕೊಂಡು | ಸು |

ಬೊಮ್ಮೆವಲಿಂಗನ ತಲೆಯ | ಸು | ಕಾಲಾಗೆ ಒದ್ದೊಕೊಂಡು | ಸು |
ಬರುತಾಳೆ ಬೇಗದಿಂದ | ಸು | ಏಳುಜನ ಅಣ್ಣದೀರ‍್ಗು | ಸು |
ಏನುಮಾತ ಹೇಳುತಾಳೆ | ಸು | ಸಿರಿಗಂಧದ ಸೌದೇಯ | ಸು |
ತರಸೀರೊ ಬೇಗದಿಂದ | ಸು | ಕೆಂಡಕೊಂಡ ಆಗುತೀನಿ | ಸು |
ಭೂಮಿಮ್ಯಾಲ್ ಇರೋದಿಲ್ಲ | ಸು | ಏನುಮಾತ ಆಡುತೀಯ | ಸು |
ಏಳುಜನ ಅಣ್ಣದೀರು | ಸು | ನಾವು ಏಳು ತುತ್ತು ಅಂದರು | ಸು |
ನಿನ್ನ ಕತೆ ಆಯಿತವ್ವ | ಸು | ಏಳುಜನ ಅಣ್ಣದೀರು | ಸು |
ನೀನೊಬ್ಬ ತಮ್ಮ ಕಾಣೆ | ಸು | ಎಂಟುಜನ ಅಣ್ಣತಮ್ಮದೀರು | ಸು |
ಅನ್ನತೀವಿ ಕಾಣವ್ವ | ಸು | ಅಂಗಂದು ಅಣ್ಣದೀರು | ಸು |
ಹೇಳುತಾರೆ ಅವರೀಗ | ಸು | ಹೇಳುವಾಗ ಅವರಿನ್ನ | ಸು |
ಈ ಜಲ್ಮ ನಾನೀಗ | ಸು | ಧರಣಿಮ್ಯಾಲೆ ಮಡಗೂದಿಲ್ಲ | ಸು |
ಏಳುಗಾಡಿ ಸೌದೇಯ | ಸು | ತರಿಸ್ಯಾರೆ ಬೇಗದಿಂದ | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಕೆಂಡಕೊಂಡನಾಗುತಾಳೆ | ಸು |
ಗಂಡಾನ ತಲೆಯನ್ನು | ಸು | ತಲೆಕಡೆ ಮಡಿಕೊಂಡು | ಸು |
ಬೆಮ್ಮೆವಲಿಂಗನ ತಲೆಯ | ಸು | ಅವಳು ಕಾಲಕಡೆ ಮಡಿಕೊಂಡು | ಸು |
ಚಿಕ್ಕೋಳ್ ಹಿರಿದಿಮ್ಮವ್ವ | ಸು | ಕೆಂಡಕೊಂಡನಾದಾಳೆ | ಸು |*      ಚಿಕ್ಕೋಳು ಹಿರಿದಿಮ್ಮವ್ವ; ಪರಮಶಿವಯ್ಯ ಜೀ.ಶಂ. ಜಾನಪದ ಖಂಡ ಕಾವ್ಯಗಳು, ಶಾರದಾಮಂದಿರ, ಮೈಸೂರು-೧೯೬೮, ಪು.ಸಂ. : ೭೯-೮೭