ಮುಂಗಾರು ಮಳೆ ಹೂದು ತಮ್ಮಯ್ಯ ಹೊನ್ನಾರು ಕಟ್ಟಿ
ಊರ ಮೂರು ಬಳಸ ತಿರುಗ್ಯಾನೆ | ತಮ್ಮಯ್ಯ
ಮೂಡಲಾಗಿ ಆರ ತಿರುವ್ಯಾನೆ

ಹೊನ್ನಾರು ಕಟ್ಟಿ ಚಿನ್ನದ ನೊಗ ಹೂಡಿ
ಬನ್ನಿಯ ಮರವ ಬಲಕಿಟ್ಟು | ತಮ್ಮಯ್ಯ
ಅನ್ನ ಚೆಲ್ಯಾನೆ ಹೊಲಕೆಲ್ಲ

ಮೂಡಲಾಗಿ ಹುಯ್ಯೊ ಮುತ್ತಿನ ಸಾತಿ ಮಳೆಯ
ಹೆಗ್ಗಯ ಕೊಂತಿ ಹಡೆದವ್ವ
ಹೆಗ್ಗಯ ಕೊಂತಿ ಹಡೆದವ್ವನ ಊರ ಮುಂದೆ
ಜಗ್ಗಿಸಿ ಹುಯ್ಯೊ ಮಳೆರಾಯ

ಬಡಗಲ ಮಳೆ ಹೂದು ಬಾಗಿತು ಆರಂಬ
ತೆನೆ ಹೋಗಿ ತೆಂಕ ಒರಿಗಿದೊ | ತಮ್ಮಯ್ನ
ಮೆದಿ ಹೋಗಿ ಗಗನ ಧುಮುಕಿದೊ

ಊರ ಮುಂದಲ ಹೊಲಕೆ ಉದ್ದು ಬಿತ್ತೊ ತಮ್ಮಯ್ಯ
ಕಡಲೆ ಬಿತ್ತೊ ಕಡೆ ಕಡೆಗೆ

ಯಾರೂ ಬರದ್ಹಾದೀಲಿ ಧೀರ ಒಬ್ಬನೆ ಬಂದ
ಸಾರಂಗ ಬರದ ಮಿಕ ಬರದ | ಹಾದಿಲ್ಲಿ
ಧೀರ ನನ್ನವ್ವೆ ಮಗ ಬಂದ

ರಾಯ ರಾಯರ ಮನೆ ರಾಯದ್ಯಾವರ ಮನೆ
ರಾಜು ಕಂಕಣದ ಚಲುವರೆ | ನಿಮ್ಮರಮನೆಯ
ತೋರಿಸ್ತಮ್ಮಾಗೆ ಉಡುಗರೆ

ಶೆಟ್ಟಿಶೆಟ್ಟೋರ ಮನೆ ಸತ್ಯದ್ಯಾವರ ಮನೆ
ಪುಟ್ಟ ಕಂಕಣದ ಚಲುವರೆ | ನಿಮ್ಮರಮನೆಯ
ಕಟ್ಟಿಸ್ತಮ್ಮಾಗೆ ಕೈಲಾಸ