ಏಳು ಕೊಳ್ಳದಾಗ ಇರುವ ಯಲ್ಲಮ್ಮನ ಜಾತ್ರಿ ನೋಡೂನು ಬಾ
ಜಾತ್ರಿ ನೋಡೂನ ಬಾ ಪರಸಿಯ ಕಳವೂನ ಬಾ      ಪಲ್ಲ

ನಂದಿಗಿ ಹೋಗೂನ ಬಾ
ಹಡ್ಲೀಗಿ ತುಂಬೂನ ಬಾ
ಹಡ್ಲೀಗಿ ತುಂಬಿ ಜೋಗೂಳ
ಹಾಕಿ ಮುಂದಕ ಸಾಗೂನು ಬಾ     ೧

ಮುಂದಕ ಹೋಗೂನು ಬಾ
ಮುಂದ ಮುನವಳ್ಳಿಗೆ ಹೋಗೂನು ಬಾ
ಮುನವಳ್ಳಿಗೆ ಹೋಗಿ ಜೋಗ್ಯಾರ
ಕರದು ಸೀರಿಯುಡಿಸಿ ಕುಣಿಯಾಕ ಹಚ್ಚೂನು ಬಾ      ೨

ತಿಳಿಯ ನೀರಿನ ಜೋಗುಳ ಬಾವಿ
ಅಲ್ಲಿರುವಳ ಸಿರಿ ಸತ್ಯಮ್ಮ ದೇವಿ
ಶೀಲದ ಭಗತರ ಪಾಲಿಸ ದೇವಿ
ಮೇಳವ ನೋಡಿ ಒಲಿಯವ್ವ ತಾಯಿ ೩

ಚಂಡಿ ಚಂಡಿಯ ಚಾಮುಂಡಿ ನಡಿಗಿ
ಗಂಡಸರುಡತಾರ ಹೆಣ್ಣಿನ ಉಡಿಗಿ
ಉಟಗೊಂಡು ಬರತಾರ ದೇವಿಯ ಗುಡಿಗಿ
ಕೊಡಹೊತ್ತು ಕುಣಿಯುವಂಥ ಜೋಗ್ಯಾರ್ ನೋಡೂನು ಬಾ    ೪

ಮುಂದಕ ಹೋಗುನು ಬಾ
ಕಳಸವ ನೋಡುನು ಬಾ
ಕಳಸವ ನೋಡಿ ನೋಡಿ
ಕಾಯ ಒಡೆದು ಕೈಮುಗಿಯೋಣ ಬಾ        ೫

ಅಂಗಡಿ ಅಂಗಡಿ ಸಾಲಬಾಜಾರ
ಬಗಿಬಗಿ ಸಾಮಾನ ಎಲಿ ವ್ಯಾಪಾರ
ನಾರಿ ಪುರುಷರ ಭಾರೀ ಶೃಂಗಾರಾಗಿ
ಬರುವಂಥ ಜಾತ್ರಿ ನೋಡೂನು ಬಾ ೬

ಸುತಿ ಚೌಡಿಕಿ ನಾದದೊಳಗ
ಸಂಪ ದೇವೀ ಭಜನದ ಪದಗಳ
ನೆನಪ ಹುಲಕುಂದ ಊರ ಭೀಮಸಿಂಗ
ಸಹಜದ ಜಾತ್ರಿ ನೋಡೂನ ಬಾ    ೭