ಎಳೆಯನು ಕೆಂಗಪ್ಪ ಎಳಗನಾ ತಗರ ಸಾಕಿ
ಎಳ್ಳು ಹೊಲದಲ್ಲಿ ಮಕಮನಸು-ಮಾಡಿಕೊಂಡು
ಹೋದನೆಲ್ಲಿನೂರ ದುರುಗಕೆ
ಎಲಿನೂರದಲ್ಲಿ ನೀರಿಲ್ಲ ನೆರಳಿಲ್ಲ
ಹಸುಮಗನೆ ಕೆಂಗಪ್ಪ ನೀನೆಂಗೆ ನೆಡದಿಯೊ

ಹಾಸಿಪ್ಪೇ ಮರದ ನೆರಳಾಗೆ ಕೆಂಗಪ್ಪ
ಹಸ್ ಅಂದು ಕುದುರೆಯ ಇಳಿದಾನೊ-ಕೆಂಗಪ್ಪ
ಅಲ್ಲಿ ಮಾಡ್ಯಾನೊ ಸುಕನಿದ್ರೆ

ಅಲ್ಲಿ ಕೆಂಗಪ್ಪಗೆ ಸುಕನಿದ್ರೆ ಆಗುವಾಗ
ಏಳು ಮಂದಿ ಸೂಳೇರು ನೀರಿಗ್ಹೋಗಿ-ಕೇಳ್ಯಾರಲ್ಲೊ
ಯಾವ ಸೀಮೆನಯ್ಯ ನೀನು

ಹಳ್ಳಿಕಾರನಲ್ಲ ಹಳ್ಳಿ ಗೌಡನಲ್ಲ
ಬದ್ರೆ ಚಿಕ್ಕಮ್ಮನ ಮಗ ಕಾಣೆ

ಬದ್ರೆ ಚಿಕ್ಕಮ್ಮನ ಮಗನಾದರೇನಾಯಿತು
ಹೋಗಾನ ನಡಿಯೊ ಅರಮನೆಗೆ

ಅರಮನೆಗೆ ಹೋಗಾಕೆ ಕುಲದಲ್ಲಿ ಬೇಡತಿಯಲ್ಲೆ
ನಂದಗೋಕುಲ ನಮದಲ್ಲೆ-ಬೇಡರ ಹುಡುಗಿ
ನಂದಗೋಕುಲ ನಮದಲ್ಲೆ

ನಂದ ಗೋಕುಲವೇ ನಮದಲ್ಲೆ ಹುಡುಗಿ
ಹಿಂದವರೆ ನಮ್ಮ ಹಿರಿಯೋರು-ಬೇಡರ ಹುಡುಗಿ
ನ್ಯಾಯವು ಬಂದಾವು ಕುಲದಲ್ಲಿ

ನ್ಯಾಯ ಬಂದರೆ ಮಾಯಮಾಡೋದು ಬಲ್ಲೆ
ಹೋಗಾನ ನಡಿಯೊ ಅರಮನಿಗೆ

ಅರಮನಿಗೆ ಹೋಗಾಕೆ ಕುಲದಲ್ಲಿ ಬೇಡತಿಯಲ್ಲೆ
ಕೃಷ್ಣ ಗೋಕುಲವೆ ನಮದಲ್ಲೆ

ಏಟ ಹೇಳಿದರೂ ಕೇಳನಲ್ಲೆ ಈ ಗೊಲ್ಲ
ಏನು ಮಾಡಲಿ ಇವನೀಗೆ

ನಾಗಳ ಹೂವ ಹಾಸ್ಯಾಳೊ ನಾಗಳ ಹೂವ ಹರಡ್ಯಾಳೊ
ಸಾಲ ದೀವಿಗೆ ಉರಿಸ್ಯಾಳೊ – ಬೇಡರ ಹುಡುಗಿ
ಸಾಲ ಮಂಚಕೆ ಕರೆದಾಳೊ

ಇಕ್ಕಳ ಹೂವ ಹಾಸ್ಯಾಳೊ ಇಕ್ಕಳ ಹೂವ ಹರಡ್ಯಾಳೊ
ಸುತ್ತ ದೀವಟಿಗೆ ಉರಿಸ್ಯಾಳೊ-ಬೇಡರ ಹುಡುಗಿ
ಪಟ್ಟೆಮಂಚಕೆ ಕರೆದಾಳೊ

ಮಂಚದಾ ಗೌಡ ಮಂಚಕೆ ಬರುವಾಗ
ಮಂಚದ ಮೇಲೆ ಎರಡು ಅರಗಿಣಿ-ಕೂತುಗಂಡು
ಮಂಚಕೆ ಕೆಂಗಪ್ಪ ಬರಬೇಡ-ಬೇಡರ ಹುಡುಗಿ
ಲಂಚದಿಂದ ತಲೆಯ ಹೊಡಿಸ್ಯಾಳೊ

ಸೂಳೆಯ ಹೋಗದಿರೊ ಸುಲಿವಲ್ಲ ಕೆಂಗಪ್ಪ
ಅರುವರ ಮನೆಯ ಗೌಡಿಯ – ಹೋಗಕಿಂತ
ಹಲ್ಲ ಮಕ್ಕಳಿಸಿ ಉಗಿಯಯ್ಯ

ಬೇಡತಿ ಸಂಗ ಬ್ಯಾಡ ಕಾಣೊ ಕೆಂಗಪ್ಪ
ಬೇಡತಿ ನಮ್ಮ ಬೆಡಗು ಅರಿಯಳು-ಸಭೆಯರ ಮುಂದೆ
ಬಾರೆಂದೇ ಸೆರಗ ಹಿಡದಾಳು

ಸೂಳೆಮನೆ ಮುಂದೆ ಸುಳಿದಿರೊ ಕೆಂಗಪ್ಪ
ಆನೆ ಕಟ್ಯಾಳೊ ನಿನ ಮೇಲೆ-ಅಡಿಕೆಯ
ಹೋಳ ಕಟ್ಯಾಳೊ ಸೆರಗೀಗೆ

ಅರು ಕಾಲೇಣಿ ಏರಿ ಹುವ್ವ ಕುಯ್ಯೋನೆ
ಯಾರ‍್ಯಾರಿಗೆ ಹುವ್ವ ಕುಯ್ಯುತಿರೊ-ಎಲೆನೂರ
ಹಾ ಬೇಡರ ಹುಡುಗಿಯ ತುರುಬಿಗೆ

ಆಚೆ ಕೇರಿಲ್ಲಿ ಸೋಜಿಗವೇನಮ್ಮ
ಚೂಜಿಯ ಮೇಲೆಗಳು ಬೀಸಿ-ಕೆಂಗಪ್ಪ
ಸೂಳಿಗೆ ಕಟ್ಟಿಸ್ಯಾನೊ ಅರಮನೆಯ

ಸೂಳಿಯ ಮನೆಗೆ ದಾಳಿಂಬೆ ಕದವೇಕೊ
ಜಂಬುಲೋಕದ ಅಗಣಿಯಾಕೊ-ಕೆಂಗಪ್ಪ
ಬಾಸೆ ಯಾಕೊ ನಿನ್ನ ಬಲಗೈಲಿ

ಕಟ್ಟೆ ಹಿಂದಲಕ ತೋಟ ಇಪ್ಪೆ ಹೂವಿನ ನಾತ
ಹೊಂದಿಕೊಂಡವನೆ ಬಿಡಿರಮ್ಮ
ಏರಿ ಹಿಂದಲ ತೋಟ ಹೀರೆ ಹೂವಿನ ನಾತ
ಸೇರಿಕೊಂಡವನೆ ಬಿಡರಮ್ಮ

ಬಿಡಿ ನಮ್ಮ ಈರನಾ ಬಿಡಿ ನಮ್ಮ ಸೂರನಾ
ಸೇರಕ್ಕಿ ಉಣ್ಣೊ ಚಲುವನ-ಕೆಂಗಪ್ಪನ
ಬಿಡಿರೇ ಬಳ್ಳಾರಿ ಬಸವೀರ

ವಪ್ಪಿ ಮಾಡಿಸಿದ ಪಟ್ಟೆಮಂಚದ ಮೇಲೆ
ನಿಸ್ತ್ರೇರ ಕೂಡಿ ಪಗಡೆಯ-ಚಂಡಾಡುವಾಗ
ಕತ್ತಿ ಮಸ್ತಾರೊ ಒಳಮಲ್ಲಿ

ಹೇಳಿ ಮಾಡಿಸ್ದ ಸಾಲಿ ಮಂಚದ ಮೇಲೆ
ನಾರಿಯ ಕೂಟೆ ಪಗಡೆಯ ಚಂಡಾಡುವಾಗ
ಚೂರಿ ಮಸ್ತಾರೊ ಒಳಮಲ್ಲಿ

ಸೂಳೆಗೆ ಹೋದೋನು ಸುಮ್ಮಗೆ ಬರಲಿಲ್ಲ
ಸೂಳೇರ ಅಣ್ಣದೀರ ಸುಣ್ಣಕಾಯಿ ಕದ್ದುಕೊಂಡು
ಕಲ್ಲುಬಾವಿಯ ಇಳಿದನೊ

ಕಲ್ಲುಬಾವಿಯ ಇಳಿದು ನೋಡುವಾಗ
ಸೂಳೇರಣ್ಣದೀರು ಬರುತಾರೆ ಕೆಂಗಪ್ಪ
ಕೆಟ್ಟೆನೆಂದು ಬಾಯ ಬಿಡುತಾನೆ

ಹುತ್ತದ ಮರೆಯ ಸುತ್ತಿದ್ದಂತ ಬೇಡ
ಸುತ್ತಿ ಬಂದು ಅಂಬಗೆ ಇರಿದಾನೊ

ಸುತ್ತಿ ಬಮದು ಅಂಬಾಗಿ ಇರಿದಾಗ-ಕೆಂಗಪ್ಪ
ಅಯ್ಯಯ್ಯೊ ಅಂದನು ಕೆಟ್ಟೆನೆಂದು

ಬಾಯ ಬಾಯ ಬಿಡುತಾನೆ-ಕೆಂಗಪ್ಪನ
ಹೊಟ್ಟೆಯ ಕಳ್ಳು ಸುರದಾವೊ

ಹೊಂಟಂತ ಕಳ್ಳ ಹೊಟ್ಟೆಗೆ ತುಂಬಿಕೊಂಡು
ಹಾಳ ನೂಲಿನೂರು ಮೇಗಲ ಏಣಿನಾಗೆ-ಬೇಡರು
ಕೆಂಗಪ್ಪನ ಮಡಿದರೊ-ಬೇಡರು
ಕೆಂಗಪ್ಪನ ಮಡಿದನನ್ನೊ ಸುದ್ದಿ
ತಾಯಿ ಚಿಕ್ಕಮ್ಮಗೆ ತಿಳಿಸ್ಯಾರೊ

ಆ ಹಳ್ಳ ಹತ್ಯಾಳೆ ಈ ಹಳ್ಳ ಇಳಿದಾಳೆ
ಎಲ್ಲಿ ಅವನೆ ನನ್ನ ಮಗನ-ಮಕ ತೋರಿ

ಮುದ್ದು ಗಂಬಳಿಯ ಹೊದ್ದುಕೊಂಡು
ನಿದ್ದೆ ಬಂದವನಂಗೆ ಮನಿಗವನೆ-ಕೆಂಗಪ್ಪ
ಮುದ್ದು ಮಗನೆ ಏಳೊ ದುರುತಕೆ

ಕರಿಯ ಕಂಬಳಿಯ ಕಾಲಿಗೆ ಹೊದ್ದುಕೊಂಡು
ಹಸುಮಗನಂತೆ ಮನಿಗ್ಯವನೆ-ಕೆಂಗಪ್ಪ
ಹಸುಮಗನೆ ಏಳೊ ದುರುತಕೆ

ಹಾಲಿನ ಹರಬಿಯ ಹೊತ್ತಾಳೆ ಚಿಕ್ಕಮ್ಮ
ಹಳ್ಳದ ಮುಂದೆ ಇಳಿಕ್ಯಾಳೆ-ಕೆಂಗಪ್ಪನ
ಸಾಲಿಯ ನೋಡಿ ಅಳುತಾಳೆ

ತುಪ್ಪದ ಹರಬಿಯ ಹೊತ್ತಾಳೆ ಚಿಕ್ಕಮ್ಮ
ಉಕ್ಕಡದ ಮುಂದೆ ಇಳಿಸ್ಯಾಳೆ-ಕೆಂಗಪ್ಪನ
ಎಕ್ಕಡವ ನೋಡಿ ಅಳುತಾಳೆ

ಹಳ್ಳಕೆ ಯಾಕ್ಹೋದೊ ಚೆಳ್ಳುಗರ ಕೆಂಗಪ್ಪ
ಹಳ್ಳದ ಮೇಲೆ ಮಳೆ ಮೋಡ-ನಿಮ್ಮವ್ವ
ಹಳ್ಳಕೆ ವಾಲಿ ವಾಲಿ ಅಳುತಾಳೆ

ಕಟ್ಟಿಗೆ ಯಾಕೋದೊ ಬಟ್ಟುಗಳ ಕೆಂಗಪ್ಪ
ಕಟ್ಟೆಯ ಮೇಲೆ ಮಳೆ ಮೋಡ-ನಿಮ್ಮವ್ವ
ಕಟ್ಟಿಗೆ ವಾಲಿ ವಾಲಿ ಅಳುತಾಳೆ

ಹಾಳ ನೂಲಿನೂರು ಮೇಗಲ ಏಣಿನಾಗ
ಕೆಂಗಪ್ಪ ಮಡಿದನನ್ನೊ ಸುದ್ದಿ
ತಾಯಿ ಚಿಕ್ಕಮ್ಮಗೆ ತಿಳಿಸ್ಯಾರೆ

ಯಾರು ನನ್ನ ಮಗನೀಗೆ ಇರಲಿಲ್ಲವ
ದೊಡ್ಡ ಮದುರೆ ಏಣಿನ ಮೇಲೆ ಮನಿಗಿದ್ಯಾ

ಈರನು ಮಡುತ್ತಾವಾ ಚೂರಿ ಪಲ್ಲಣಿಸ್ಯಾವೆ
ಈರ ಕೆಂಗ ಮಡುತ್ತಾವಾ ಬೇಡರು
ನೀರೆಂದು ಕುಡಿದರೈತವಾ

ಬಂಟನು ಮಡುತ್ತಾವ ಕತ್ತಿ ತಲ್ಲಣಿಸ್ಯಾವೆ
ಬಂಟ ಕೆಂಗಪ್ಪ ಮಡುತ್ತಾವ-ಬೇಡರು
ತುಪ್ಪಂದೆ ಕುಡಿದರು ರಕುತವ

ಜಾಣ ಕೆಂಗಪ್ಪ ಜಾರಿ ಬಿದ್ದಿತ್ತಾವ
ಜಾವಕೆ ತತ್ತೀನಿ ಕುದುರೆಯ-ನುಲಿಯನೂರ
ಕೋವೆಲ್ಲ ರಾಮರೈತವು

ನುಲಿಯನೂರು ಶೆಟ್ಟಿ ಕೆಂಗಪ್ಪ ಬಿದ್ದತ್ತಾವ
ವತ್ತಿಗೆ ತತ್ತೀನಿ ಕುದುರೆಯ-ನುಲಿಯನೂರ
ತಿಟ್ಟೆಲ್ಲ ರಾಮರೈತವು

ಸುತ್ತೋನು ಕೆಂಗಪ್ಪ ಸತ್ತನು ಅನ್ನದೀರಿ
ಸತ್ತೇಳು ದಿನಕೆ ಬರುತೀನಿ-ಬೇಡರ
ಹುಟ್ಟನೆಲ್ಲ ಉರಕೊಂಡು

ಹಾಲೊಲೆಯ ಮೇಲೆ ಬಾನ ಕೆಂಡದ ಮೇಲೆ
ಬಾಳೆಯ ಹಣ್ಣ ಮಡಲಿಗೆ-ಚಿಕ್ಕಮ್ಮ
ಬಾಲನ ಬೀದ್ಯಾಗೆ ಕರದಾಳೊ

ಈರ ಓಎನ್ನೊ ಈರಣ್ಣ ಓಎನ್ನೊ-ನನ್ನಪ್ಪ
ಈರಣ್ಣ ಓಯೆನ್ನೊ

ಅಕ್ಕಿ ಒಲೆಯ ಮೇಲೆ ತುಪ್ಪ ಕೆಂಡದ ಮೇಲೆ
ಕಿತ್ತಲಿ ಹಣ್ಣು ಮಡಲಿಗೆ-ಚಿಕ್ಕಮ್ಮ
ಪುತ್ರನ ಬೀದಿಗೆ ಕರೆದಾಳೊ

ಅಪ್ಪ ಓಎನ್ನೋ ಅಪ್ಪಾಜಿ ಓ ಎನ್ನೋ
ಕಟ್ಟಿಕೊಡಾಕೆ ಕರದಾಳೊ-ನಿಮ್ಮವ್ವ

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಬ್ಯಾಡ ಕಣೋ ಈರಣ್ಣ ಬ್ಯಾಡತಿಸಂಗ; ಕಂಬಾಳು ಸಿದ್ಧಗಂಗಯ್ಯ, ಮಾತಾಡುಮಲ್ಲಿಗೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೩, ಪು.ಸಂ. ೪೬-೪೯.

೨) ನಿಚ್ಚ ಮಾದಿಗರೆಣ್ಣೆ ಬಚ್ಚಣದಾ ಬೊಮ್ಮೆ; ಅಂದನೂರು ಶೋಭ, ಕೊಂಬೆ ರೆಂಬೆಲ್ಲ ಎಳಗಾಯಿ ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೮, ಪು.ಸಂ. ೨೫-೨೮.*      ಎಳೆಯನು ಕೆಂಗಪ್ಪ ಎಳೆಗನ ತಗರ ಸಾಕಿ; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೯೭, ಪು.ಸಂ. ೨೭೪-೨೭೮.