ಕೋಲು ಮಲ್ಲಿಗೆ ಕೋಲೆ
ಕೋಲು ಸಂಪಿಗೆ ಕೋಲೆ || ಪ ||

ಮಳಿ ಹೋಯ್ತು ಅಂತ ಮಳಿರಾಯ್ನ ಬಯ್ಯದಿರೆ
ನೂರ್ಹೊನ್ನಿನ ಸರುಪನ | ಮೇಲ್ಹತ್ತಿಕೊಂಡು
ಸಾಲಕ್ಹೋಗ್ಯವನೆ ಮಳಿರಾಯ

ಮಳಿ ಇಲ್ಲವೆಂದು ಮಳಿರಾಯ್ನ ಬಯ್ಯದಿರೆ
ಸಾವಿರದ್ಹೊನ್ನಿನ ಸರಗಂಟೆ | ತಕ್ಕೊಂಡು
ಸಾಲಕ್ಹೋಗ್ಯವನೆ ಮಳಿರಾಯ

ನಕ್ಕರೆ ಬರನಲ್ಲೆ ಕಿಕ್ಕೇರಿ ಮಳಿರಾಯ
ಅಕ್ಕಯ್ಯ ನೀನ್ಹೋಗಿ ಕರತಾರೆ | ಬಾಳೆಯ
ತಿಟ್ಟಿನಲ್ಲವನೆ ಮಳಿರಾಯ

ಕರದರೆ ಕೈಸನ್ನೆ ಮಳಿರಾಯ
ತಂಗ್ಯಮ್ಮ ನೀನ್ಹೋಗಿ ಕರತಾರೆ | ಬಾಳೆಯ
ಗೊನಿಯ ಮೇಲವನೆ ಮಳಿರಾಯ

ಎಮ್ಮೆಯತೊರಕೆ ಕೆಮ್ಮುಗುಲು ಎದ್ದವೆ
ದಮ್ಮಯ್ಯ ಹುಯ್ಯೊ ಮಳಿರಾಯ | ಹೆರಗನ್ಹಳ್ಳಿ
ಮುಮ್ಮಾಳಿಗೆಲಿ ತಳುಗಯ್ಯ

ಎಮ್ಮೆಯತೊರಕೆ ಕೆಮ್ಮುಗುಲು ಎದ್ದವೆ
ಬಾಣಂತಿ ಕಪ್ಪ ಬಳದಂಗೆ | ಮಳಿರಾಯ
ಮೋಡದ ದೊರೆಯೆ ಕರುಣೀಸೊ

ಹಸುವಿನತೊರ ಸೊಸಿಮುಗುಲು ಎದ್ದವೆ
ಬಾಣಂತಿ ಕಪ್ಪ ಬಳದಂಗೆ | ಮಳಿರಾಯ
ಬೋರಾಡುತವನೆ ಮುಗುಲಲ್ಲಿ

ಅಪ್ಪನಿಲ್ಲದೆ ಸೊಪ್ಪಾದೊ ಈ ಭೂಮಿ
ಸಪ್ಪೆದುಂಟಾದೊ ದನಕರ | ದೇವೀಂದ್ರರಾಯ
ಅಪ್ಪ ರಾತಿರಿಕೆ ಕರುಣಾಗೊ

ಅಣ್ಣನಿಲ್ಲದೆ ಹಣ್ಣಾದೊ ಈ ಭೂಮಿ
ಅಣ್ಣೆ ಸೊಪ್ಪಾದೊ ದನಕರ | ದೇವೀಂದ್ರರಾಯ
ಅಣ್ಣ ರಾತಿರಿಕೆ ಕರುಣಾಗೊ

ಬಿತ್ತಿ ಬಂದ ತಮ್ಮಯ್ನ ಬಿತ್ತಿದ ಸುದ್ದಿಯ ಕೇಳಿ
ಬಿತ್ತಿ ಬಂದೆವ್ವೆ ಮಳಿಯಿಲ್ಲ | ನಿನ್ನ ಕೊರಳೊಳ್ಳ
ಮುತ್ತೀನಂಗವೆ ತೆನಿಜೋಳ

ಹರಗಿ ಬಂದ ಅಣ್ಣಯ್ನ ಹರಗಿದ ಸುದ್ದಿಯ ಕೇಳಿ
ಹರಗಿ ಬಂದೆವ್ವ ಮಳಿಯಿಲ್ಲ | ನಿನ್ನ ಕೊರಳೊಳ್ಳ
ಹವಳದಂಗವೆ ತೆನಿಜೋಳ

ಅಂಬಾರದಲಿ ತುಂಬ್ಯಾಡೊ ಮಳಿರಾಯ
ಗೊಂಬೆ ಹಚ್ಚುಡದ ದೊರಿಮಗನೆ | ನೀನಿಲ್ಲದೆ
ರಂಭೆ ಹಾಕಿದ ಪೈರು ಒಣಿಗ್ಹೋದೊ

ಆಕಾಸದಲಿ ಆತಾಡೊ ಮಳಿರಾಯ
ತೋಪನ್ಹಚ್ಚುಡುದ ದೊರಿಮಗನೆ | ನೀನಿಲ್ಲದೆ
ನಿಸ್ತ್ರೆ ಹಾಕಿದ ಪೈರು ಉರಿದ್ಹೋದೊ

ಗುಡುಗಿದ ಗುಡುಗಿದ ಗುಬ್ಬೀಲಿ ಮಿಂಚಿದ
ಹೆಬ್ಬೂರಿನ ಮ್ಯಾಲೆ ಮಳೆಬಿದ್ದೊ | ನಂಜನಗೂಡು
ತೇರಿನ ಮ್ಯಾಲೆ ಹನಿಬಿದ್ದೊ

ಕುಂಟೆಹುಣಸೇಲಿ ಕುಟ್ಯಾನೆ ಮಳಿರಾಯ
ಹತ್ತು ಸಾವಿರದ ಹಡಗಿನ | ಏರಿಯ ಮ್ಯಾಲೆ
ನಿಸ್ತ್ರೀರ ಸೆರಗ ನೆನಿಸ್ಯಾನೆ

ಸಾಲಹುಣಸೇಲಿ ಸಾರಿಸ್ಯಾನೆ ಮಳಿರಾಯ
ಆರು ಸಾವಿರದ ಹಡಗಿನ | ಏರಿಯ ಮ್ಯಾಲೆ
ನಾರೀರ ಸೆರಗ ನೆನಿಸ್ಯಾನೆ

ಒಂದು ಬಂಡೀಲಿ ಹೂವು ಒಂದು ಬಂಡೀಲಿ ಕಾಯಿ
ಮುಂದಲ ಬಂಡೀಲಿ ಮಳಿರಾಯ | ಕೂತುಗಂಡು
ಕಾಲ ನೀಡ್ಯವನೆ ಮುಗುಲಿಗೆ

ಆರು ಬಂಡೀಲಿ ಹೂವು ಆರು ಬಂಡೀಲಿ ಕಾಯಿ
ಮುಂದಲ ಬಂಡೀಲಿ ಮಳಿರಾಯ | ಕೂತುಗಂಡು
ಕತ್ತ ನೀಡ್ಯವನೆ ಮುಗುಲಿಗೆ

ಚಿಕ್ಕ ಚಿಕ್ಕ ಸೌತೆಕಾಯಿ ಚಿಕ್ಕ ಮೂಟೆ ಕಟ್ಟಿ
ಕಿಕ್ಕೇರಿ ಮ್ಯಾಲೆ ಬರುವೋನೆ | ದೇವೇಂದ್ರನ
ಕಿಕ್ಕೇರಿ ಸೂಳೆ ತಡದಾಳೆ

ದೊಡ್ಡ ದೊಡ್ಡ ಸೌತೆಕಾಯಿ ದೊಡ್ಡ ಮೂಟೆ ಕಟ್ಟಿ
ದೊಡ್ಡೇರಿ ಮ್ಯಾಲೆ ಬರುವೋನೆ | ದೇವೇಂದ್ರನ
ದೊಡ್ಡೇರಿ ಸೂಳೆ ತಡದಾಳೆ

ಮೂಡುಲಾಗಿ ಹುಯ್ಯೋ ಮುತ್ತಿನ ಸಾತಿ ಮಳೆ
ಹೆಗ್ಗಯ್ಯ ಕುಂತಿ ನನ್ನವ್ವೆ | ಊರಿಗೆ
ಜಗ್ಗಿಸಿ ಹುಯ್ಯೊ ಮಳಿರಾಯ

ಮಳೆರಾಯನ ಹೆಂಡತಿ ಮಕ್ಕಳೊಂದಿಗಿತ್ತಿ
ಮಳೆ ಬಂದರೆಲ್ಲಿ ತಳಿಗ್ಯಾಳೆ | ಹೆರಗನ್ಹಳ್ಳಿ
ಎಳಿಯ ಹೊಂಬಾಳೆ ಸುಳಿ ಒಳಗೆ

ಮಳಿರಾಯ ಹುಯ್ಯಾಲಿ ಕೆರಿರಾಯ ತುಂಬಲಿ
ಹನ್ನೆರಡು ಕೋಡಿ ಹರಿಯಾಲಿ | ಹೆರಗನ್ಹಳ್ಳಿ
ಸಣ್ಣಕ್ಕಿ ಬೈಲು ಬೆಳಿಯಾಲಿ