ಕನ್ನಡದ ಅತ್ಯಂತ ಮಹತ್ವದ ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ತಮ್ಮ ಬದುಕು-ಬರಹಗಳ ಮೂಲಕ ಈ ದೇಶದ ಸಮಕಾಲೀನ ಸೃಜನಶೀಲತೆಯ ಉರ್ತ್ಕಷದ ನಿಜವಾದ ಪ್ರತಿನಿಧಿಯಂತಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿಧ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ ‘ಪರ್ವತಾರಣ್ಯ ಪ್ರಪಂಚ’ದಂತೆ ಬೆರಗು ಹುಟ್ಟಿಸುತ್ತವೆ. ನಿಜವಾಗಿ ನೋಡಿದರೆ ಕುವೆಂಪು ‘ಕಾಡಿನ ಕವಿ’. ‘ಕಾಡಿನ ಕೊಳಲಿದು ಕಾಡ ಕವಿಯು ನಾ ನಾಡಿನ ಜನರೊಲಿದಾಲಿಪುದು’ ಎಂಬ ಬಿನ್ನಹದೊಂದಿಗೆ, ೧೯೩೦ರಲ್ಲಿ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ ಈ ಕಾಡಿನ ಕವಿ ಆನಂತರ ನಾಡಿನ ಕವಿಯಾಗಿ, ಈ ನಾಡಿನ ಜನಮನವನ್ನು ಗೆದ್ದು ನೆಲೆನಿಂತ ಸಂಗತಿ ಈಗಾಗಲೇ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದೆ. ಆದರೆ ಕುವೆಂಪು ಮೂಲತಃ ‘ಕಾಡಿನ ಕವಿ’ ಅನ್ನುವುದೇ, ಅವರನ್ನು ಕನ್ನಡ ಸಾಹಿತ್ಯ ಸಂದರ್ಭದ ಇತರ ಬರಹಗಾರರಿಂದ ಬೇರ್ಪಡಿಸುವ ಮುಖ್ಯ ಲಕ್ಷಣವಾಗಿದೆ. ಕನ್ನಡದಲ್ಲಿ ನಿಸರ್ಗವನ್ನು ಒಲಿದ ಹಾಗೂ ಅದರ ಸೊಗಸನ್ನು ಕುರಿತು ಹಾಡಿದ ಹಲವು ಕವಿಗಳಿದ್ದಾರೆ, ಆದರೆ ಅವರಾರೂ ಬಹುಶಃ ಕುವೆಂಪು ಅವರಂತೆ ಇಂತಹ ಮಲೆನಾಡಿನ ದುರ್ಗಮ ಅರಣ್ಯ ಶ್ರೇಣಿಯ ದಟ್ಟವಾದ ಅನುಭವಗಳಲ್ಲಿ ಬೇರೂರಿ ಬೆಳೆದವರಲ್ಲ ಮತ್ತು ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗಿನ ಅರಣ್ಯಾನುಭವಗಳನ್ನು ಕುವೆಂಪು ಅವರಂತೆ ಗ್ರಹಿಸಿ ಅಭಿವ್ಯಕ್ತಿಸಿದವರಲ್ಲ. ಈ ಕಗ್ಗಾಡುಗಳ ರುದ್ರರಮಣೀಯ ಅದ್ಭುತ ಸೌಂದರ್ಯದ ಅನೇಕ  ಪರಿಗಳನ್ನೂ, ಋತುಋತುವಿಗೂ ಬದಲಾಗುವ ಅದರ ವರ್ಣ ವಿಲಾಸಗಳನ್ನೂ, ಬಯಲುನಾಡಿನವರೆಂದೂ ಕಾಣದ ಹಾಗೂ ಕೇಳಿದ ಮೃಗಯಾ ವಿನೋದ-ಸಾಹಸಗಳ ಕಥನವನ್ನೂ, ಈ ನಿಬಿಡಾರಣ್ಯದ ನಡುವಣ ಜನಜೀವನದ ವೈವಿಧ್ಯಗಳನ್ನೂ ಮೊಟ್ಟಮೊದಲಿಗೆ ತೆಗೆದು ತೋರಿದವರು ಕುವೆಂಪು  ಅವರೊಬ್ಬರೇ. ಅಷ್ಟೇ ಅಲ್ಲ, ಅವರ ಎಲ್ಲ ಕಥಾವಸ್ತುಗಳ ಮೂಲನೆಲೆ ಈ ಅರಣ್ಯವೇ. ಅವರ ಮಹಾಕಾವ್ಯ, ಕಾದಂಬರಿ, ನಾಟಕ, ಈ ಎಲ್ಲ ಪ್ರಕಾರಗಳಲ್ಲೂ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ-ಸರ್ವವ್ಯಾಪಿಯಾಗಿವೆ. ಅವರ ಬಹುತೇಕ ಎಲ್ಲ ಪಾತ್ರಗಳೂ ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ. ಇಷ್ಟರ ಮಟ್ಟಿಗೆ ಸಹ್ಯಾದ್ರಿಯ ಅರಣ್ಯಾನುಭವಗಳು ಎಂದೂ ಕನ್ನಡದಲ್ಲಿ ಈ ಪ್ರಮಾಣ ಹಾಗೂ ಸಾಚಾತನಗಳಲ್ಲಿ ಪ್ರಕಟವಾಗಿಲ್ಲ ಅನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಮತ್ತು ಈ ಮೂಲಕ ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನ ಪ್ರೀತಿಯ ವಿಸ್ತರಣೆ ಎಂದೇ ತಿಳಿಯಬೇಕಾಗಿದೆ. ಈ ನಿಸರ್ಗವನ್ನು ಕುರಿತ  ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ, ಅದನ್ನೂ ಮೀರಿದ ಒಂದು ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ. ನಿಸರ್ಗದಿಂದ ವ್ಯಕ್ತಿತ್ವಕ್ಕೆ ಒದಗುವ ತುಷ್ಟಿ-ಪುಷ್ಟಿಗಳು ವ್ಯಕ್ತಿತ್ವದ ಬೆಳವಣಿಗೆಗೆ ಎಷ್ಟು ಅಗತ್ಯ ಅನ್ನುವುದನ್ನು ಪರಿಸರ ನಾಶದ ತಲ್ಲಣದ ಇಂದಿನ ದಿನಗಳಲ್ಲಿ ನಾವು ಕ್ರಮೇಣ ಕಂಡುಕೊಳ್ಳುತ್ತಿದ್ದೇವೆ. ನಮ್ಮ ಸುತ್ತಣ ನಿಸರ್ಗವನ್ನು ಪ್ರೀತಿಸುವುದು, ನಮಗೆ ಕೇವಲ ಭೌತಿಕವಾದ ಅಗತ್ಯ ಮಾತ್ರವಲ್ಲ, ಒಂದು ಆಧ್ಯಾತ್ಮಿಕ ಅವಶ್ಯಕತೆಯೂ ಹೌದು-ಎನ್ನುವುದನ್ನು ಒಂದು ಮೌಲ್ಯದಂತೆ ಪ್ರತಿಪಾದಿಸುವ ಕುವೆಂಪು ಅವರ ನಿಲುವು ಎಷ್ಟು ಅರ್ಥಪೂರ್ಣವಾದುದೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇಂಥ ದಟ್ಟವಾದ ಅರಣ್ಯ ಪರಿಸರ, ಹಾಗೂ ನಾಗರಿಕ ಜಗತ್ತಿನಿಂದ ಬಹುಮಟ್ಟಿಗೆ ಪ್ರತ್ಯೇಕವೆಂಬಂತಹ ಪರಿಸರದ ಹಿಂದುಳಿದ ಸಾಮಾಜಿಕ ಸ್ತರದಿಂದ ಬಂದ ಕವಿ ಕುವೆಂಪು ಅನ್ನುವುದು, ಅವರನ್ನೂ, ಅವರ ಸಾಹಿತ್ಯವನ್ನೂ, ಅವರ ಸಮಕಾಲೀನರಿಂದ ಬೇರ್ಪಡಿಸುವ ಲಕ್ಷಣವಾಗಿದೆ. ಇನ್ನೂ ಬಿಡಿಸಿ ಹೇಳಬೇಕೆಂದರೆ ಬಹುಮಟ್ಟಿಗೆ ಅನರಕ್ಷತೆ, ಅಜ್ಞಾನ, ದಾರಿದ್ರ್ಯ, ಮೂಢನಂಬಿಕೆ ಇತ್ಯಾದಿಗಳಿಂದ ಇಡಿಕಿರಿದ ಜನಸಮುದಾಯದ, ಅದರಲ್ಲೂ ಶೂದ್ರವರ್ಗದಿಂದ ಬಂದ ಮೊಟ್ಟಮೊದಲ ಬರಹಗಾರರಾಗಿದ್ದಾರೆ ಕುವೆಂಪು ಅನ್ನುವುದು ಅವರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಹಲವು ಒಳನೋಟಗಳನ್ನು ಒದಗಿಸುತ್ತದೆ. ಇಂಥ ಅಪ್ರತಿಷ್ಠಿತ ಸಾಮಾಜಿಕ ಸ್ತರದಿಂದ ಬಂದ ಕಾರಣದಿಂದ ಅವರು ತಮ್ಮ ಸಮಕಾಲೀನರಾದ ಕೆಲವು ಹಿರಿಯ ಬರಹಗಾರರಂತೆ ಯಾವುದೇ ಮತ-ಧರ್ಮಗಳ ಸಿದ್ಧ ಸಂಪ್ರದಾಯಕ್ಕೆ ಸೇರಿದವರಲ್ಲ ಮತ್ತು ಸಿದ್ಧ  ಸಂಪ್ರದಾಯದ ಪೂರ್ವ ನಿಯಂತ್ರಣಗಳೂ ಉಪಾಧಿಗಳೂ ಇಲ್ಲದ ಒಂದು ಮುಕ್ತವೂ ಸ್ವತಂತ್ರವೂ ಆದ ಮನಃಸ್ಥಿತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಜತೆಗೆ ತಾವು ಯಾವ ಹಿಂದುಳಿದ ಸಾಮಾಜಿಕ ಸ್ತರದಿಂದ ಬಂದರೋ, ಆ ಸ್ತರದ ಮೇಲೆ, ಪ್ರತಿಷ್ಠಿತ ವರ್ಗದವರಿಂದ ನಡೆದ ಹಾಗೂ ನಡೆಯುತ್ತಿದ್ದ ಶೋಷಣೆಗಳೂ, ಹಲ್ಲೆಗಳೂ, ಅವಮಾನಗಳೂ ಆ ಸಮಾಜದ ಒಬ್ಬ  ವ್ಯಕ್ತಿಯಾಗಿ ತಮ್ಮ ಅನುಭವವೂ ಆದುದರಿಂದ, ಆ ಮೇಲು ವರ್ಗದವರ ನಡವಳಿಕೆಯನ್ನು ಪ್ರತಿಭಟಿಸುತ್ತ ಅವರ ಶೋಷಕ ತಂತ್ರಗಳನ್ನು ಬಯಲಿಗೆಳೆಯುತ್ತ ಈ ಶೋಷಣೆಯ ಪ್ರತಿನಿಧಿಯಾದ ‘ಪುರೋಹಿತ ಶಾಹಿ’ಯನ್ನು ಅತ್ಯಂತ ಸೂಕ್ಷ್ಮರಾಗಿ ವಿಶ್ಲೇಷಿಸುತ್ತ ಅವುಗಳೆಲ್ಲದರ ವಿರುದ್ಧವಾಗಿ ಜನಸಮುದಾಯವನ್ನು ಎಚ್ಚರಿಸುವ ವೈಚಾರಿಕತೆಯನ್ನು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿರುವುದು ಕುವೆಂಪು ಸಾಹಿತ್ಯದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಅವರ ಅನೇಕ ಸಾಮಾಜಿಕ ಕವಿತೆಗಳ ಹಾಗೂ ‘ಶೂದ್ರ ತಪಸ್ವಿ’ಯಂಥ ನಾಟಕಗಳು ಮತ್ತು ಕಾದಂಬರಿಗಳ ಹಲವು ಸಂದರ್ಭಗಳಲ್ಲಿ ಮತ್ತು ಇತರ ವೈಚಾರಿಕ ಬರಹಗಳಲ್ಲಿ ಈ ಅಂಶವನ್ನು ಗುರುತಿಸಬಹುದಾಗಿದೆ. ಈ ಒಂದು ಧೋರಣೆ ಅವರ ವಿಚಾರಗಳನ್ನು ಹಾಗೂ ಅವರ ಭಾಷೆಯನ್ನು ಅಲ್ಲಲ್ಲಿ ತೀರಾ ಪ್ರೌಢವೂ ಹಾಗೂ ಸವಾಲಿನ ರೂಪದ್ದೂ ಆಗುವಂತೆ ಮಾಡಿದೆ. ಕುವೆಂಪು ಅವರ ಕಾವ್ಯಭಾಷೆ ತೀರಾ ಪ್ರೌಢವೂ ಸಂಸ್ಕೃತಮಯವೂ ಆಗಿದೆ ಎಂದು ಆಕ್ಷೇಪಿಸುವವರು, ಅದು ಹಾಗೆ ರೂಪುಗೊಂಡದಕ್ಕೆ ಕಾರಣವಾದ ಸಾಂಸ್ಕೃತಿಕ ಸಂಗತಿಗಳನ್ನು ಮತ್ತು ಸಾಮಾಜಿಕ ಪರಿಸರವನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಂತೆ ತೋರುವುದಿಲ್ಲ. ಮೇಲಾಗಿ ಒಬ್ಬ ಕವಿಯ ಕಾವ್ಯದ ಭಾಷೆಯನ್ನು ಕುರಿತು ನಿಜವಾದ ಸಹೃದಯರು ಎತ್ತಬೇಕಾದ ಪ್ರಶ್ನೆಗಳೇ ಬೇರೆಯ ತೆರನಾಗಿರಬೇಕು. ಅಂದರೆ ಒಬ್ಬ ಕವಿ ತನ್ನ ಅಭಿವ್ಯಕ್ತಿಗಾಗಿ ರೂಪಿಸಿಕೊಳ್ಳುವ ಭಾಷೆ ಅವನ ವಸ್ತು ಹಾಗೂ ಉದ್ದೇಶಕ್ಕೆ ಅನುಗುಣವಾಗಿದೆಯೆ? ಅದು ಸಂವಹನಶೀಲವಾಗಿದೆಯೆ ಮತ್ತು ಒಂದು ಭಾಷಾ ಪರಂಪರೆಯಲ್ಲಿ ಅದರ ಎಲ್ಲ ಸಾಧ್ಯತೆಗಳನ್ನೂ ದುಡಿಸಿಕೊಳ್ಳುವುದರ ಮೂಲಕ ಒಂದು ಹೊಸ ಭಾಷೆಯನ್ನು ನಿರ್ಮಿಸಿದೆಯೆ? ಇವು ಕೇಳಬೇಕಾದ ಪ್ರಶ್ನೆಗಳು.

ತಾವು ಹುಟ್ಟಿಬಂದ ಮಲೆನಾಡಿನ ನಿಸರ್ಗದ ಚೆಲುವನ್ನು ಅದ್ಭುತವಾಗಿ ಚಿತ್ರಿಸಿದಂತೆಯೇ, ಅದರ ಒಡಲಿನ ಸಾಮಾಜಿಕ ಬದುಕನ್ನು, ಅದರ ದಟ್ಟ ವಿವರಗಳೊಡನೆ ಹಾಗೂ ಅದರ ಸಾಮಾಜಿಕ ಸ್ಥಿತ್ಯಂತರಗಳ ಜತೆಗೆ ದಾಖಲಿಸುತ್ತ ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಪಲ್ಲಟಗಳನ್ನೂ, ತಲ್ಲಣಗಳನ್ನೂ ಕುವೆಂಪು ಗ್ರಹಿಸಿದ ಕ್ರಮವು ಅನನ್ಯವಾಗಿದೆ. ಅದಕ್ಕಿಂತ ಮಿಗಿಲಾಗಿ ತಮ್ಮ ವರ್ಗದವರ ಬದುಕನ್ನು ಅದರ ಸಮಸ್ತ ವಿರೂಪಗಳ ಸಹಿತ ಅತ್ಯಂತ ವಸ್ತುನಿಷ್ಠವಾಗಿ, ಯಾವ ಹಿಂಜರಿಕೆಯೂ ಇಲ್ಲದೆ ಚಿತ್ರಿಸಿರುವ ರೀತಿಯು, ಒಬ್ಬ ಶ್ರೇಷ್ಠ ಕಲಾವಿದನಾಗಿರಬೇಕಾದ ಪ್ರಾಮಾಣಿಕತೆಯನ್ನೂ ದಿಟ್ಟತನವನ್ನೂ ಅಲಿಪ್ತತೆಯನ್ನೂ ಸೂಚಿಸುತ್ತದೆ.

ಹುಟ್ಟಿನಿಂದ ಶೂದ್ರರೂ,ಹಿಂದಿನ ಅಥವಾ ಇಂದಿನ, ಅಂತರಂಗದ ಅಥವಾ ಬಹಿರಂಗದ ಯಾವ ಸಾಂಪ್ರದಾಯಿಕ ಉಪಾಧಿಗಳಿಗೂ ಬದ್ಧವಾಗದ ಒಂದು ‘ನಿರಂಕುಶಮತಿ’ಯನ್ನು ಪ್ರತಿಪಾದಿಸಿದವರೂ ಆದ ಕುವೆಂಪು ಅವರು, ಆ ದೇಶದ ವರ್ಣ ವರ್ಗಗಳನ್ನು ಕುರಿತು ಅತ್ಯಂತ ದಿಟ್ಟತನದಿಂದ ಹಾಗೂ ಯಾವುದೇ ಒಡಂಬಡಿಕೆಗಳಿಲ್ಲದೆ ಪ್ರಶ್ನೆ ಮಾಡಿದಂತೆ, ಅವರ ಸಮಕಾಲೀನರಾದ ಇತರ ಪ್ರಮುಖ ಬರಹಗಾರರಿಗೆ ಆ ಪ್ರಮಾಣದಲ್ಲಿ ಸಾಧ್ಯವಾಗಲಿಲ್ಲ ಅನ್ನುವುದೇ ಕುವೆಂಪು ಅವರ ವಿಶೇಷತೆಗಳಲ್ಲಿ ಒಂದಾಗಿದೆ. ಹಾಗೆಂದರೆ ಅವರ ಸಮಕಾಲೀನ ಪ್ರಮುಖ ಬರಹಗಾರರು ತಮ್ಮಸೃಜನಶೀಲತೆಯ ಉತ್ಕಟ ಕ್ಷಣಗಳಲ್ಲಿ ಈ ಬಗೆಯ ಉಪಾಧಿಗಳನ್ನು ಮೀರುವಲ್ಲಿ ಹಾಗೂ ಸಮಸ್ಯೆಗಳನ್ನು ಎದುರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿಲ್ಲವೆಂದು ಈ ಮಾತಿನ ಅರ್ಥವಲ್ಲ.

ಆದರೆ ಜಾತಿಪದ್ಧತಿ, ವರ್ಣ ವ್ಯವಸ್ಥೆ ಮೂಢನಂಬಿಕೆಗಳು, ಸಾಂಸ್ಥಿಕ ಧರ್ಮದ ಪ್ರತಿನಿಧಿಗಳಾದ ದೇವಸ್ಥಾನಗಳು ಹಾಗೂ ಈ ಎಲ್ಲವನ್ನೂ ಬಂಡವಾಳವನ್ನಾಗಿ  ಮಾಡಿಕೊಂಡ ಪುರೊಹಿತಶಾಹೀ ಚಾತುರ್ಯಗಳು ಇತ್ಯಾದಿಗಳನ್ನು ನಿರ್ದಾಕ್ಷಿಣ್ಯವಾಗಿ ಹಾಗೂ ಉಗ್ರವಾಗಿ ಚಿಕಿತ್ಸೆಗೊಳಪಡಿಸಿದ ಕುವೆಂಪು ಅವರ ವೈಚಾರಿಕತೆಗೆ ಇರುವ ಬಂಡಾಯದ ಮನೋಧರ್ಮ, ಕ್ರಾಂತಿಕಾರಕ ಲಕ್ಷಣ ಬೇರೆ ಯಾರಲ್ಲಿಯೂ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕುವೆಂಪು ಮೂಲತಃ ಯಾವುದೇ ಸಿದ್ಧ ಸಂಪ್ರದಾಯಕ್ಕೆ ಸೇರದವರಾಗಿದ್ದರೂ, ಅವರು ಈ ದೇಶದ ಸಾಹಿತ್ಯಕ-ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ತಮ್ಮ ಅಧ್ಯಯನದ ಮೂಲಕ ಮೈಗೂಡಿಸಿಕೊಂಡು, ಅದನ್ನು ತಮ್ಮ ಕಾಲಧರ್ಮದ ಸಂದರ್ಭಧಲ್ಲಿ ಪುನರ್ ವ್ಯಾಖ್ಯಾನಿಸಿರುವ ಕ್ರಮವು ವಿಶೇಷ  ರೀತಿಯಾಗಿದೆ. ಸಾಹಿತ್ಯದ ದಿಕ್ಕಿನಿಂದ ನೋಡುವುದಾದರೆ, ಕುವೆಂಪು ಕನ್ನಡ ಸಾಹಿತ್ಯ ಪರಂಪರೆಯ ಮೂಲಕ ಕನ್ನಡದ ಅನೇಕ ಮಹತ್ವದ ಲೇಖಕರಂತೆ-ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದವರಲ್ಲ; ಅವರು ಇಂಗ್ಲಿಷ್ ಸಾಹಿತ್ಯ ಪರಂಪರೆಯ ದಿಕ್ಕಿನಿಂದ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದವರು. ಯಾಕೆಂದರೆ ಅವರು ಮೊದಲು ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಂಡದ್ದು ಕನ್ನಡದಿಂದ ಅಥವಾ ಕನ್ನಡದಲ್ಲಿ ಅಲ್ಲ, ಇಂಗ್ಲಿಷಿನಲ್ಲಿ ಅನ್ನುವುದು ಸ್ವಾರಸ್ಯದ ಸಂಗತಿಯಾಗಿದೆ! ಕುವೆಂಪು, ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಎಸ್.ಎಸ್.ಎಲ್.ಸಿ. ತರಗತಿಯ ವಿದ್ಯಾರ್ಥಿಯಾದ ಕಾಲಕ್ಕೆ ‘ದಿ ಬಿಗಿನರ‍್ಸ್ ಮ್ಯೂಸ್’ (The beginner’s Muse) ಎಂಬ ಹೆಸರಿನ ಕವನ ಸಂಕಲನವನ್ನು ಪ್ರಕಟಿಸಿ ಇಂಗ್ಲಿಷ್ ಭಾಷೆಯ ಕವಿ ಎಂದು ಹೆಸರು ಮಾಡಿದರು! ಅವರು ಮುಂದೆ ಕನ್ನಡದ ಕವಿಯಾದದ್ದು ಹಾಗೂ ಕನ್ನಡ ಕಾವ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು ಬೇರೊಂದು ಕತೆ.

ಈ ಸಂಗತಿಯ ಪ್ರಸ್ತಾಪದಿಂದ ನಿಷ್ಪನ್ನವಾಗುವ ಸಂಗತಿಯೆಂದರೆ, ಕುವೆಂಪು ಅವರು ಹುಟ್ಟಿ ಬೆಳೆದು ಬಂದಂಥ ಶೂದ್ರ ಸಮುದಾಯದ ಎಚ್ಚರಕ್ಕೆ ಈ ದೇಶಕ್ಕೆ ಬಂದ ವಸಾಹತುಶಾಹಿ ಸಂದರ್ಭ ಮತ್ತು ತತ್ಪರಿಣಾಮವಾದ ಇಂಗ್ಲಿಷ್ ಶಾಲೆಗಳು ಒದಗಿಸಿದ ಶಿಕ್ಷಣದ ಅವಕಾಶ ಬಹುಮುಖ್ಯವಾದ ಸಂಗತಿಯಾಗಿದೆ. ಅವರೇ ತಮ್ಮ ಆತ್ಮಕಥನವಾದ ‘ನೆನಪಿನ ದೋಣಿ’ಯಲ್ಲಿ ಹೇಳಿಕೊಂಡಿರುವಂತೆ (ಪುಟ ೧೬೯) “ಇಂಡಿಯಾ ದೇಶವನ್ನು ಗೆದ್ದು ಅದರ ರಾಜಕೀಯ ಅವ್ಯವಸ್ಥೆಗೆ ಒಂದು ಸುವ್ಯವಸ್ಥೆಯನ್ನು ತಂದುಕೊಟ್ಟು, ಬ್ರಾಹ್ಮಣಾದಿ ಉಚ್ಚವರ್ಣದವರಿಂದ ಸಾವಿರಾರು ವರ್ಷಗಳಿಂದ ತುಳಿಯಲ್ಪಟ್ಟು ಶೋಷಿಸಲ್ಪಟ್ಟು, ದಾಸ್ಯತ್ವನ್ನೇ ದೈವತ್ವವೆಂದೂ, ವಿಧಿಯೆಂದೂ ಒಪ್ಪಿಕೊಂಡು ಕಾಲಡಿಯ ಕಸವಾಗಿ ಬಿದ್ದಿದ್ದ ಶೂದ್ರಾದಿ ವರ್ಗದವರನ್ನು ತಲೆಯೆತ್ತುವಂತೆ ಪ್ರೇರಿಸಿದ್ದೂ ಇಂಗ್ಲಿಷೇ.”

ಕುವೆಂಪು ಮುಂದೆ ಕನ್ನಡದ ಮಹತ್ವದ ಸಾಹಿತಿಯಾಗಿ, ಶಿಕ್ಷಣವೇತ್ತರಾಗಿ, ಕನ್ನಡದ ಮಾಧ್ಯಮದ ಹೋರಾಟಗಾರರಾಗಿ, ಸ್ವಾತಂತ್ರ್ಯೋತ್ತರ ಭಾರತದ ಬದುಕಿನಲ್ಲಿ ಇಂಗ್ಲಿಷಿಗೆ ಯಾವ ಸ್ಥಾನವಿರಬೇಕು ಎಂಬುದನ್ನು ಕುರಿತು ತಾಳಿದ ನಿಲುವುಗಳನ್ನು ಬದಿಗಿರಿಸಿ ನೋಡಿದರೂ, ಈ ದೇಶದ ಅಪ್ರತಿಷ್ಠಿತ ಸಮುದಾಯದ ಬಿಡುಗಡೆಗೆ ಹಾಗೂ ಅಭ್ಯದಯಕ್ಕೆ ಇಂಗ್ಲಿಷ್ ಭಾಷೆ ಹಾಗೂ ಅದರ ಶಿಕ್ಷಣ ಒಂದು ದಾರಿಯಾಯಿತೆಂಬುದು ಚಾರಿತ್ರಿಕ ಸತ್ಯವಾಗಿದೆ. ಅಷ್ಟೇ ಅಲ್ಲ, ಕುವೆಂಪು ಅವರಿಗೆ ಆಧ್ಯಾತ್ಮ ಸಾಹಿತ್ಯ ಹಾಗೂ ಆ ಪರಂಪರೆಯ ಬಾಗಿಲು ತೆರೆದದ್ದೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾದ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಕೃತಿಗಳ ಅಧ್ಯಯನದಿಂದಲೇ. ಹೀಗೆ ಕುವೆಂಪು ಅವರಿಗೆ ಎಳೆಯಂದಿನಲ್ಲಿಯೇ ಪಶ್ಚಿಮದ ಮಹಾಸಾಹಿತ್ಯ ಕೃತಿಗಳೂ, ಭಾರತೀಯ ಆಧ್ಯಾತ್ಮಿಕ ಸಾಹಿತ್ಯ ಪರಂಪರೆಯೂ, ಅರವಿಂದ, ರಾಮಕೃಷ್ಣ, ವಿವೇಕಾನಂದ, ಗಾಂಧಿ, ಟ್ಯಾಗೋರ್-ಇತ್ಯಾದಿ ಮಹಾವಿಭೂತಿಗಳೂ ವ್ಯಕ್ತಿತ್ವದೊಳಗೆ ಪ್ರವೇಶಿಸಿದ್ದು ಇಂಗ್ಲಿಷಿನ ಮೂಲಕವೇ. ಆನಂತರ ಅವರು ಬಿ.ಎ. ತರಗತಿಗೆ  ಬಂದು ಕನ್ನಡವನ್ನು ತಮ್ಮ ಅಧ್ಯಯನದ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು, ಆ ಪರಂಪರೆಯನ್ನು ತಮ್ಮದನ್ನಾಗಿ ಮಾಡಿಕೊಂಡರು. ಈ ಎಲ್ಲ ಮಾತಿನ ಸಾರಾಂಶವೆಂದರೆ ಕುವೆಂಪು ಅವರು ತಮಗೆ ಆಗತ್ಯವಾದ ಸಾಹಿತ್ಯ ಪರಂಪರೆಯನ್ನು, ಈ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಅತ್ಯಂತ ಶ್ರಮದಿಂದ ಮೈಗೂಡಿಸಿಕೊಳ್ಳಬೇಕಾಯಿತು. ಈ ದೇಶದ ಮೇಲ್ ವರ್ಗದಿಂದ ಬಂದ ಸಾಹಿತಿಗಳು. ತಮ್ಮ ಪರಂಪರೆಯನ್ನು ಕರಗತ ಮಾಡಿಕೊಳ್ಳಲು ಶೂದ್ರವರ್ಗದಿಂದ ಬಂದ ಕುವೆಂಪು ಅವರಷ್ಟು ಕಷ್ಟಪಡಬೇಕಾಗಿರಲಿಲ್ಲ. ಆದರೂ ಸ್ವಯಂ ಶ್ರಮದಿಂದ ಹೀಗೆ ಈ ದೇಶದ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಮೈಗೂಡಿಸಿಕೊಂಡ ಕುವೆಂಪು, ಈ ಪರಂಪರೆಯನ್ನು ತಮ್ಮ ಸಾಹಿತ್ಯ ನಿರ್ಮಿತಿಯ ಸಂದರ್ಭದಲ್ಲಿ ಚಿಕಿತ್ಸೆಗೆ ಹಾಗೂ ಪುನರ್ ವ್ಯಾಖ್ಯಾನಕ್ಕೆ ಗುರಿಪಡಿಸಿರುವ ಕ್ರಮವು ವಿಶೇಷ ರೀತಿಯದಾಗಿದೆ. ಅವರ ‘ಶೂದ್ರ ತಪಸ್ವಿ’, ‘ಬೆರಳ್ಗೆ ಕೊರಳ್’,  ‘ಸ್ಮಶಾನ ಕುರುಕ್ಷೇತ್ರ’ ಹಾಗೂ ‘ರಾಮಾಯಣ ದರ್ಶನಂ’ಗಳಲ್ಲಿ ಪ್ರಾಚೀನ ಕಥಾವಸ್ತುಗಳನ್ನು ನಮ್ಮ ಕಾಲದ ಅಗತ್ಯಕ್ಕೆ ತಕ್ಕ ಹಾಗೆ ವ್ಯಾಖ್ಯಾನಿಸಿರುವ ಕ್ರಮವನ್ನು ಕಾಣಬಹುದು.ಈ ಪ್ರಯತ್ನಗಳು ಕನ್ನಡದಲ್ಲಿ ಮಾಡಿಕೊಂಡ ಹೊಸ, ಸಾಹಸಗಳಂತೆ ತೋರಬಹುದಾದರೂ, ಕುವೆಂಪು ಮಾಡಿಕೊಂಡ ಈ ಬದಲಾವಣೆಗಳು ಹಿಂದೂ ಸಂಸ್ಕೃತಿಯನ್ನು ಸಮಗ್ರವಾದ ಶೋಧನೆಗೆ ಹಾಗೂ ಚಿಕಿತ್ಸೆಗೆ ಗುರಿಪಡಿಸಲು ಸಾಧ್ಯವಾಗಿಲ್ಲವೆಂದೂ, ಪ್ರತಿ ಸಂಸ್ಕೃತಿಯ ನಿರ್ಮಾಣ ಮಾಡುವುದರಲ್ಲಿ ಸಫಲವಾಗಿಲ್ಲವೆಂದೂ, ಅವು ಮತ್ತೆ ಪ್ರಾಚೀನ ಭಾರತೀಯ ಮಹತ್ ಪರಂಪರೆಯನ್ನೇ ಸಮರ್ಥಿಸುವ ಕೇವಲ ಸುಧಾರಣಾವಾದಿ ನಿಲುವುಗಳಾಗಿಬಿಡುತ್ತವೆಂದೂ ಸಮಕಾಲೀನ ವಿಮರ್ಶೆ ತನ್ನ ಪ್ರತಿಕ್ರಿಯೆಗಳನ್ನು ಪ್ರಕಟಿಸಿದೆ.

ಕುವೆಂಪು ಸಾಹಿತ್ಯದ ಇನ್ನೊಂದು ಮುಖ್ಯ ಲಕ್ಷಣವೆಂದರೆ ಆಧ್ಯಾತ್ಮ. ಆಧ್ಯಾತ್ಮ ಎನ್ನುವುದು, ಮುಖ್ಯವಾಗಿ ಎಲ್ಲ ಜಾತಿ ಮತಗಳನ್ನು ನಿರಾಕರಿಸುತ್ತ ಪ್ರತಿಯೊಂದು ಜೀವವೂ ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನ ಪರಿಣಾಮಕ ಪಥದಲ್ಲಿ ಮುನ್ನಡೆದು ತನ್ನ ಸ್ವರೂಪವನ್ನು ಆವಿಷ್ಕಾರ ಮಾಡಿಕೊಳ್ಳುವ ಹಕ್ಕು ಸ್ವಾತಂತ್ರ್ಯ ಈ ಎರಡಕ್ಕೂ ಅಧಿಕಾರಿ-ಎನ್ನುವ ಶ್ರದ್ಧೆ. ಅದು ಒಂದು ರೀತಿಯಲ್ಲಿ ಎಲ್ಲದರ ಹಿಂದಿರುವ ಏಕತೆಯ ದರ್ಶನ. ಅದೊಂದು ರೀತಿಯ ಅದ್ವೆ ತ.ಇದು ಕೇವಲ ಶಂಕರಚಾರ್ಯರ ‘ಅದ್ವೆ ತ’ ಅಲ್ಲ; ‘ಈಶಾವಾಸ್ಯಮಿದಂ ಸರ್ವಂ’ ಎಂಬ ಉಪನಿಷತ್ತಿನ ಅದ್ವೆ ತ. ಯಾವ ಒಂದು ಮನಃಸ್ಥಿತಿ ಮೂಲತಃ ಜಡ ಮತ್ತು ಚೇತನ ಎಂಬ ತಾರತಮ್ಯವನ್ನು (ಕುವೆಂಪು ಅವರ ನಿಸರ್ಗ ಕವಿತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವ ಜಡ-ಚೇತನಗಳ ಚರ್ಚೆಯನ್ನು ಗಮನಿಸಬೇಕು) ಒಪ್ಪುವುದಿಲ್ಲವೋ ಅದು. ಸಾಮಾಜಿಕ ನೆಲೆಯ ತಾರತಮ್ಯಗಳನ್ನು ನಿರಾಕರಿಸುವುದು ಸಹಜವಾಗಿದೆ. ಹೀಗೆ ಕುವೆಂಪು ಪ್ರತಿಪಾದಿಸುವ ಈ ‘ಅದ್ವೆ ತ’ ಏಕಕಾಲಕ್ಕೆ ಆಧ್ಯಾತ್ಮಿಕವೂ ಹೌದು, ಸಾಮಾಜಿಕವೂ ಹೌದು. ಇದನ್ನು ‘ಹೊಸ ಪರಿಭಾಷೆ’ಯಲ್ಲಿ ಘೋಷಿಸಿದ ಗಾಂಧಿಯವರ ‘ಸರ್ವೋದಯ’ ಎಂಬ ಮಾತು ಕುವೆಂಪು ಅವರಿಗೆ ತುಂಬ ಪ್ರಿಯವಾದುದು. ಕುವೆಂಪು ಅವರಿಗೆ ‘ಸರ್ವೋದಯ’ ಎನ್ನುವುದು ಒಂದು ಯುಗಮಂತ್ರ. ಆದ ಕಾರಣವೇ ಸರ್ವೋದಯ ವಿರೋಧಿಯಾದ ಚಾತುರ್ವರ್ಣ, ಜಾತಿ, ಪದ್ಧತಿ, ದೇವಸ್ಥಾನಗಳು ಹಾಗೂ ಪುರೋಹಿತಶಾಹಿಯನ್ನು ವಿರೋಧಿಸುತ್ತ ಗಾಢವಾದ ಮಾನವೀಯ ಕಾಳಜಿಗಳನ್ನು ಪ್ರತಿಪಾದಿಸುವ ಕುವೆಂಪು ನಮಗೆ ಸಾಂಸ್ಕೃತಿಕವಾಗಿ ಅತ್ಯಂತ ಮುಖ್ಯವಾಗುತ್ತಾರೆ.

ಆಧುನಿಕ ವಿಜ್ಞಾನಕ್ಕೆ ಕುವೆಂಪು ತೋರುವ ಪ್ರತಿಕ್ರಿಯೆ ಅವರನ್ನು ಇತರ ಸಾಹಿತಿಗಳಿಂದ ಪ್ರತ್ಯೇಕಿಸುವ ಸಂಗತಿಯಾಗಿದೆ. ಖಗೋಳ ವಿಜ್ಞಾನ, ಭೌತವಿಜ್ಞಾನ, ಯೋಗ ವಿಜ್ಞಾನ, ಮನೋವಿಜ್ಞಾನಗಳು ಅವರ ಸಾಹಿತ್ಯವನ್ನೂ ವೈಚಾರಿಕತೆಯನ್ನೂ ರೂಪಿಸಿರುವ ಕ್ರಮವು ಒಂದು ಆಧ್ಯಯನದ ವಿಷಯವೇ ಆಗುತ್ತದೆ. ಹಾಗೆಯೆ ಜಾಗತಿಕವಾದ ಸಮಾಜವಾದಿ ನಿಲುವುಗಳಿಗೆ ಅವರು ಸ್ಪಂದಿಸಿರುವ ಹಾಗೂ ಪ್ರತಿಕ್ರಿಯಿಸಿರುವ ರೀತಿಗಳನ್ನು ಅವರ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹಾಗೆ ನೋಡಿದರೆ ಕುವೆಂಪು ಅವರ ಸಾಹಿತ್ಯವೆಲ್ಲವೂ ಒಂದರ್ಥದಲ್ಲಿ ಸ್ವಾತಂತ್ರ್ಯಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯಾಗಿ ಮತ್ತು ಸ್ವಾತಂತ್ರ್ಯೋತ್ತರ ಭಾರತದ ವಾಸ್ತವಗಳನ್ನು ಕುರಿತ ವಿಮರ್ಶೆಯಾಗಿ ತೋರುತ್ತದೆ. ಹಾಗೆಯೆ ಸಾಹಿತ್ಯ ನಿರ್ಮಿತಿಯ ನೆಲೆಯಲ್ಲಿ ಈ ದೇಶದ ಪರಂಪರೆಗೆ ಅವರು ತೋರಿದ ಸೃಜನಾತ್ಮಕ  ಪ್ರತಿಕ್ರಿಯೆಗಳು ಮತ್ತು ಜಾಗತಿಕ ಪ್ರಜ್ಞೆಯನ್ನು ಅವರು ಅರಗಿಸಿಕೊಂಡ ಕ್ರಮಗಳು ಮತ್ತು ಯುಗ ಪರಿವರ್ತನೆಯ ಸೂಕ್ಷ್ಮಗಳಿಗೆ ಸ್ಪಂದಿಸುತ್ತ, ಅವುಗಳನ್ನು ಗುರುತಿಸಿ ತಮ್ಮ ಬರಹದ ಮೂಲಕ ಅದಕ್ಕೆ ಹೊಂದುವಂತೆ ಜನಮನವನ್ನು ಸಜ್ಜುಗೊಳಿಸಿದ ಪ್ರಯತ್ನಗಳು ಕುವೆಂಪು ಅವರನ್ನು ಈ ಯುಗಮಾನದ ಮಹತ್ವದ ಲೇಖಕರನ್ನಾಗಿ ಮಾಡಿದೆ. ಈ ಹಿನ್ನೆಲೆಯಿಂದ ಹೇಳುವುದಾದರೆ ಈ ರಾಷ್ಟ್ರದ ಪರಂಪರೆಯನ್ನು ಹಾಗೂ ಚರಿತ್ರೆಯನ್ನು ಆರೋಗ್ಯಪೂರ್ಣವಾದ ಚರ್ಚೆಗೆ ಗುರಿಪಡಿಸುತ್ತ ತಮ್ಮ ಕಾಲಮಾನದ ಯುಗಧರ್ಮಕ್ಕೆ ತೀವ್ರವಾಗಿ ಸ್ಪಂದಿಸಿದವರಲ್ಲಿ ಕುವೆಂಪು ಅಗ್ರಗಣ್ಯರೆಂದು ಹೇಳಬೇಕು.

ಚದುರಿದ ಚಿಂತನೆಗಳು-೨೦೦೦